27 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೮.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೮.👊


"ಊಂಚೀ ಘಟಾಕೇ ಛಾಯೋಂ ಕೇ ತಲೇ ಛಿಪ್ ಜಿಏಂ
ಧುಂಧಲೀ ಫಿ಼ಜಾ ಮೈ ಖುಛ್ ಕೋಏ ಖುಛ್ ಪಾಏˌ
ಸಾಂಸೋ ಕೇ ಲಯ್ ಮೈ ಕೋಈ ಐಸಾ ಧುನ್ ಗಾಏ./
ದೇದೇ ಜೋ ದಿಲ್ ಕೋ ದಿಲ್ ಕೀ ಪನಾಹೇಂˌ
ಆಜಾ ಚಲ್ ದೇ ಕಹೀಂ ದೂರ್.//"

ಇವನ ನೆಚ್ಚಿನ ಉದ್ಘೋಷಕ ಯುನೂಸ್ ಖಾನ್ ಉತ್ತರ ಪ್ರದೇಶದ ಬಾರಾಬಂಕಿಯ ಮೂಲೆಯೊಂದರಿಂದ ಪತ್ರ ಬರೆದಿದ್ದ ಅದ್ಯಾರೋ ಅಭಿಮಾನಿಗಾಗಿ "ಹೌಸ್ ನಂಬರ್ ೪೪"ರ ಲತಕ್ಕನ ಧ್ವನಿಯಲ್ಲಿದ್ದ ಹಾಡೊಂದನ್ನ ಹಾಕಿದರು. ಸಾಹಿರ್ ಸರಳವಾದ ರಚನೆ - ಎಸ್ ಡಿ ಬರ್ಮನ್ ಸಂಗೀತ ಅನ್ನೋ ನೆನಪು ಇವನಿಗಾಯಿತು. ಮನದ ವೀಣೆಯ ತಂತಿ ಮೀಟುವಂತಹ ಹಾಡಿದು. ಜೊತೆಜೊತೆಗೆ ಗುನುಗದೆ ಇದನ್ನವ ಕೇಳಿದ್ದೇ ಇಲ್ಲ ಬಹುಶಃ.

ಮುಖಕ್ಕಿಷ್ಟು ನೀರು ಚೋಪಿಕೊಂಡು ಬಂದು ಪರದೆ ಸರಿಸಿ ಕಿಟಕಿಯ ಬಾಗಿಲು ತೆರೆದ ಹಿತವಾದ ತಂಗಾಳಿ ಕೋಣೆಯೊಳಗೆ ತೂರಿಕೊಳ್ಳಲು ಹವಣಿಸಿತು. ಅದರ ಬೆನ್ನೇರಿ ಒಳಗೆ ಬೆಳಗ್ಗಿನಿಂದ ಮಡುಗಟ್ಟಿದ್ದ ವಾಸನೆಗಳಷ್ಟು ತೊಳೆದು ಹೋದಂತಾಯಿತು. ಮನೆಗಂಟಿದ ವಾಸನೆಗಳನ್ನ ತೆಗೆಯಲು ಬೀಸುವ ಗಾಳಿಗೆ ಸಾಧ್ಯˌ ಮನಕ್ಕಂಟಿದ ವಾಸನೆಗಳಿಂದ ಮುಕ್ತಿ ಕೊಡಿಸಲು ಅದಿನ್ಯಾವ ಗಾಳಿಯಲೆಗೂ ಸಾಧ್ಯವಿಲ್ಲವಲ್ಲ!. 


ಒಮ್ಮೆಯಂಟಿದ ಮೇಲೆ ಸಂಬಂಧಗಳ ವಾಸನೆ ತೊಳೆದು ಹೋಗೋದಿಲ್ಲ. ಹಾಗೊಮ್ಮೆ ಅದು ಕಾಲದ ಮಾರುತ ಪ್ರವಾಹಕ್ಕಂಜಿ ಅಳಿಸಿಹೋಯಿತು ಅಂದಿಟ್ಟುಕೊಳ್ಳಿˌ ಆಗ ಆ "ಸಂಬಂಧ"ವೆ ದೊಡ್ಡ ಸುಳ್ಳು ಅನ್ನುವ ಖಾತ್ರಿ ಮನಸಿಗಾಗುತ್ತೆ. ಅದರರ್ಥ ಇಷ್ಟೆ. ಮೇಲ್ನೋಟಕ್ಕೆ ತೋರಿಕೆಯಾಗಿದ್ಧ ಅಂತಹ ಯಾವ ಸಂಬಂಧಗಳೂ ಸಹ ವಾಸ್ತವದಲ್ಲಿ ಮನಸಿನಾಳದಿಂದ ಹುಟ್ಟಿರಲೇ ಇಲ್ಲ. ಹೀಗಾಗಿಯೆ ಅನಿರೀಕ್ಷಿತ ಗರ್ಭಪಾತವಾಗಿ ಅಂತಹ ಸುಳ್ಳು ಸಂಬಂಧಗಳ ಭ್ರೂಣ ಸತ್ತು ಜಾರಿ ಹೋದರೂ ಮನಸಿಗೆ ಬಾಧೆ ತಟ್ಟುವುದಿಲ್ಲ. ತನ್ನ ವಾಸನೆಯನ್ನದು ಮನದ ಕೋಣೆಯೊಳಗೆ ಉಳಿಸಿ ಹೋಗಿರುವುದಿಲ್ಲ.


ಸುಭಾಶ ಕೊಟ್ಟ ಬುತ್ತಿಗಂಟಿನ ನೆನಪಾಗಿ ಬಟ್ಟೆ ಚೀಲದಿಂದ ಅದನ್ನ ಹೊರಗೆ ತೆಗೆದು ಬುತ್ತಿ ಬಿಚ್ಚಿದ. ಮೇಲಿನ ಅರೆಯಲ್ಲಿ ನಿರೀಕ್ಷೆಯಂತೆ ಹರಕೆ ಕೋಳಿಯ ಸಾರಿತ್ತು. ಎರಡನೆಯದರಲ್ಲಿ ಚೂರು ಉಪ್ಪಿನಕಾಯಿಯ ಜೊತೆಗೆ ನಾಲ್ಕಾರು ಪುಂಡಿಗಳಿದ್ದವು. ಕೊನೆಯದರಲ್ಲಿ ಹೆಸರುಬೇಳೆ ಪಾಯಸವಿತ್ತು. ತಿನ್ನುವ ಮೂಡ್ ಇರಲಿಲ್ಲವಾದರೂˌ ವಾತಾವರಣದ ಸೆಕೆಗೆ ಅವೆಲ್ಲ ಬೆಳಗ್ಯೆವರೆಗೂ ಇಟ್ಟರೆ ಅವೆಲ್ಲ ಹಾಗೆಯೆ ಹಳಸಿ ಹೋಗುವ ಸಂಭವವಿತ್ತು. ಆಮೇಲೆ ತಿನ್ನಲಾಗದ ಸ್ಥಿತಿಗವು ಮುಟ್ಠುತ್ತಿದ್ದುದು ಖಾತ್ರಿ.


ಹಿಂದೆ ಅನೇಕ ಸಲ ಅನ್ನಕ್ಕಾಗಿ ಪರದಾಡಿದ ದಿನಗಳೂ ಅವನ ಬಾಳಿನಲ್ಲಿತ್ತು. ಹೀಗಾಗಿ ಅವನ್ನ ಚೆಲ್ಲುವ ಜಾಯಮಾನವಂತೂ ಅವನದಾಗಿರಲಿಲ್ಲ. ಅಷ್ಟಲ್ಲದೆ ಅಪರಿಚಿತನಾದ ತನಗೆ ಆದರದಿಂದ ಕಳಿಸಿಕೊಟ್ಟಿರುವ ಬಡವರ ಮನೆಯ ಪ್ರೀತಿಯ ಕೂಳಿದು ಬೇರೆ. ಉಣ್ಣದೆ ಎಸೆದರದು ಅನ್ನಕ್ಕೆ ಮಾಡುವ ಅವಮಾನ. ಹೀಗಾಗಿ ತಿಂದು ಮುಗಿಸಲು ಕೂತ. ಸಾಮಾನ್ಯವಾಗಿ ಕೋಳಿ ಅವನ ಆಯ್ಕೆಯ ಆಹಾರವಲ್ಲ. ಅವನದನ್ನ ತಿನ್ನುತ್ತಲೂ ಇರಲಿಲ್ಲ. ಇಲ್ಲಿ ಅದನ್ನ ಹಂಚಿಕೊಂಡು ತಿನ್ನಲು ಇನ್ಯಾರೂ ಇಲ್ಲದ ಅನಿವಾರ್ಯತೆ "ಒಂದು ಸಾರಿ ತಿಂದರೆ ಜಾತಿಯೇನೂ ಕೆಡಲ್ಲ ಬಿಡು" ಅನ್ನುವ ಉಢಾಫೆಯಿಂದ ಉಣ್ಣಲನುವಾದ. 

ನಿಜವಾಗಿಯೂ ಸಾರು ಪುಂಡಿ ಸೊಗಸಾಗಿತ್ತು. ಅದಕ್ಕೆ ಹೇಳೋದು ಬಹುಶಃ ಗಂಡಸರು ಮಾಡುವ ಅಡುಗೆ ವಿಜ್ಞಾನˌ ಹೆಂಗಸರ ಅಡುಗೆ ಕಲೆ ಅಂತ ತನಗೆ ತಾನೆ ಅಂದುಕೊಳ್ಳುತ್ತಾ ತಿಂದು ಮುಗಿಸಿದ. ಬೆಳಗ್ಯೆ ಮಾಡಿದ್ದಿರಬಹುದಾಗಿದ್ದ ಪಾಯಸ ಚೂರೆ ಚೂರು ಅಡ್ಡವಾಸನೆಗೆ ತಿರುಗಲಾರಂಭಿಸಿದ್ದರೂ ರುಚಿಗೇನೂ ಕೊರತೆಯಿರಲಿಲ್ಲ. ತಿಂದ ಬುತ್ತಿಯನ್ನ ಸಿಂಕಿನಲ್ಲಿ ತೊಳೆದು ಮೇಜಿನ ಮೇಲೆ ಬೋರಲಿಟ್ಚ. ಮಧ್ಯಾಹ್ನ ತಿಂದದ್ದು ಹಿಂದಿನಿಂದ ಹೊರಬರಲು ಹವಣಿಸುತ್ತಿತ್ತು. ಕಮೋಡಿನ ಮೇಲೆ ಕೂತು ಅದಕ್ಕೊಂದು ಮುಕ್ತಿ ಕಾಣಿಸಿದಾಗ ಅಬ್ಬಬ್ಬಾ ಅನಿಸಿತು. 

"ಝೂಲಾ ಧನಕ್ ಕಾ ಧೀರೇ ಧೀರೇ ಹಮ್ ಝೂಲೇ.
ಅಂಬರ್ ಥೋ ಕ್ಯಾ ಹೈಂ
ತಾರೋಂ ಕೇ ಭೀ ಲಬ್ ಛೂಲೇಂ./
ಮಸ್ತೀ ಮೈ ಝೂಲೇ ಔರ್ ಸಭೀ ಗ಼ಮ್ ಭೂಲೇಂˌ
ದೇಖೇ ನಾ ಪೀಛೇ ಮುಢ್ ಕೇ ನಿಗಾಹೇಂ.
ಆಜಾ ಚಲ್ ದೇ ಕಹೀಂ ದೂರ್.//"

ಹಳೆಯ ಅನೇಕ ನೆನಪಿನ ಪುಟಗಳನ್ನ ಹಾಡಿನ ಲಯ ಮತ್ತೆ ತೆರೆಸಿತು. ಕತ್ತಲೆಯ ಮೌನˌ ಅನಿವಾರ್ಯದ ಏಕಾಂತˌ ಭರಿಸಲಾಗದ ಒಂಟಿತನ ಮನಸಿನಲ್ಲಿ ಮಡುಗಟ್ಟಿದ ಮಾತುಗಳನ್ನ ಅಕ್ಷರ ರೂಪದಲ್ಲಿ ಬರೆದು ಹಗುರಾಗದಿದ್ದರೆ ನಿದ್ರೆ ಮರೀಚಿಕೆಯಾದೀತು ಎಂಬ ಹೆದರಿಕೆ ಹುಟ್ಟಿಸಿತು. ಅನಿಯಮಿತ ದಿನಚರಿ ತೆಗೆದು ತನ್ನನ್ನೀಗ ಮರೆತು ತಾನು ಮಾತ್ರ ಸುಖವಾಗಿರುವ ಆ ದೂರದ ಜೀವಕ್ಕೆ ಆ ಕ್ಷಣದಲ್ಲಿ ಹೇಳ ಬಯಸುವ ಮಾತುಗಳನ್ನೆಲ್ಲಾ ಬರೆದಿಡಲಾರಂಭಿಸಿದ.


ಭಾವನೆಗಳೆಲ್ಲ ಕಟ್ಟೆಯೊಡೆದು ನುಗ್ಗುವ ಪ್ರವಾಹದಂತೆ ಹರಿದು ಬಂದವು. ಕೊನೆಯ ಎರಡು ಸಾಲುಗಳನ್ನ ಬರೆಯವಾಗ ಮಾತ್ರ ಹಿಡಿತ ಮೀರಿ ಕಣ್ಣು ಮಂಜಾದಂತಾಗಿ ಮುಂದಿನ ಬರವಣಿಗೆ ಅಸಾಧ್ಯವಾಯ್ತು. ಕಂಬನಿ ಕಟ್ಟಿದ ಕಣ್ಗಳಲ್ಲಿ ಬರೆದ ಭಾವನಾತ್ಮಕ ಸಾಲುಗಳೆಲ್ಲ ಕಲಸಿಹೋದಂತೆನಿಸಿ ಸುಮ್ಮನೆ ಅದನ್ನ ಮುಚ್ಚಿಟ್ಟು ಅರೆಕ್ಷಣ ಬಿಕ್ಕಳಿಸಿ ಅತ್ತು ಮನವನ್ನ ಹಗೂರ ಮಾಡಿಕೊಳ್ಳಲು ಪ್ರಯತ್ನಿಸಿದ. ಸಂತೈಸಲು ತನಗೆ ತಾನೆ ಆಸರೆ ಹೊರತುˌ ಇನ್ಯಾರೂ ತನಗಿಲ್ಲ ಅನ್ನುವ ವಾಸ್ತವ ಬಡಿದೆಬ್ಬಿಸಿತು. ನೊಂದ ಮನದ ಏಕತಾನದ ಗಮನವನ್ನ ಬೇರೆಡೆ ಸರಿಸಲು ಕೈಫೋನಿನ ರೇಡಿಯೋದಲ್ಲಿ ಮತ್ತೊಂದ್ಯಾವುದೋ ಸ್ಟೇಷನ್ ತಿರುಗಿಸಿದ. ಅಲ್ಲೂ ಲತಕ್ಕ ಆರ್ದ್ರ ಧ್ವನಿಯಲ್ಲಿ ಅದೆ ಗೀತೆಯನ್ನ ಗುನುಗುತ್ತಿರೋದು ಕೇಳಿ ಬೆರಳುಗಳನ್ನ ಮುಂದೋಡಿಸದೆ ನಿಂತ.

"ಫೆಹಲೀ ಹುಈ ಹೈಂ ಸಪ್ನೋಂ ಕೀ ರಾಹೇಂ.
ಆಜಾ ಚಲದೇ ಕಹೀಂ ದೂರ್.
ವಹೀಂ ಮೇರೀ ಮಂಜಿ಼ಲ್.
ವಹೀಂ ತೇರೀ ರಾಹೇಂ.
ಆಜಾ ಚಲದೇ ಕಹೀಂ ದೂರ್."

ದೂರದಲ್ಲಿ ಯಾವುದೋ ಅರಿಯದೊಂದೂರಿಗೆ ಹೊರಡಲಿದ್ದ ರೈಲು ತಾನಿನ್ನು ಏದುಸಿರು ಬಿಟ್ಟು ಓಡುವ ಸೂಚನೆ ಕೊಡಲು ದೀರ್ಘವಾದ ಸೀಟಿ ಊದಿದ್ದು ಕ್ಷೀಣವಾಗಿ ಕೇಳಿ ಬಂತು. ಭಾವದ ಕೊಳವನ್ನ ಕಲುಕಿದ ಆಲೋಚನೆಗಳಿಂದ ಆಯಾಸವಾಗಿದ್ದ ಮನಸಿನೊಂದಿಗೆ ದೀಪವಾರಿಸಿ ಹಾಸಿಗೆಯ ಮೇಲೊರಗಿದ. ಭಾವನೆಗಳು ಬಳಲಿಸಿದ ಮನಸಿಗೆ ನಿದ್ರೆಯ ಔಷಧ ಅತ್ಯವಶ್ಯವಾಗಿ ಬೇಕಿತ್ತು. ದಿಂಬನ್ನ ತಬ್ಬಿ ಮಲಗಿದ್ದಷ್ಟೆ ಗೊತ್ತುˌ ಪುಣ್ಯಕ್ಕೆ ನಿದ್ರೆಗೂ ಅಂದು ಅವನ ಮನಸಿನ ಮನೆಯ ವಿಳಾಸ ಅತಿ ಸುಲಭವಾಗಿ ಸಿಕ್ಕಿತೆನ್ನಬಹುದು.


*****

ಕೋಣೆಯ ಕಿಟಕಿಯಿಂದ ಅನತಿ ದೂರದಲ್ಲಿದ್ದ ಆಲದ ಮರದಲ್ಲಿ ಮನೆ ಮಾಡಿಕೊಂಡಿದ್ದ ಹಿರಿ ಮರಿ ಕಿರಿ ಹಕ್ಕಿಗಳ ಚಿಲಿಪಿಲಿ ಹೊರಗಡೆಯಿಂದ ಕಿರಿಕಿರಿಯಾಗುವಷ್ಟು ಜೋರಾಗಿ ಕೇಳ ತೊಡಗಿದಾಗ ಬೆಳಗಾದ ಸೂಚನೆ ಆಗಷ್ಟೆ ಮೆಲ್ಲನೆ ಎಚ್ಚರವಾದವನಿಗೆ ಸಿಕ್ಕಿತು. ನಿತ್ಯದಂತೆ ಅಲ್ಲಿನಿಂದ ಬೇಕಲದ ಕಡಲತೀರದ ತನಕ ನಡೆದೆ ಹೋಗಿˌ ಮರಳಿ ಬರುವಾಗ ಬಸ್ಸು ಹಿಡಿಯಲು ನಿರ್ಧರಿಸಿದವ ಎದ್ದು ಹಲ್ಲುಜ್ಜಿ ನಿತ್ಯಕರ್ಮಗಳನ್ನ ಮುಗಿಸಿ ಟ್ರಾಕ್ ಸೂಟನ್ನ ಧರಿಸಿ ನಾಯರನ ಚಹಾ ಹೀರಲು ಕೆಳಗಿನ ಕ್ಯಾಂಟೀನಿನತ್ತ ಹೆಜ್ಜೆ ಹಾಕಿದ. 


ಟೇಪ್ ರಿಕಾರ್ಡರಿನಲ್ಲಿ ಏಸುದಾಸ್ˌ ಶ್ರೀಕುಮಾರ್ˌ ಉಣ್ಣಿ ಮೆನೋನ್ ಸರದಿಯಂತೆ "ಚೊಟ್ಟನಿಕ್ಕಾರ ಅಮ್ಮೆ"ಯನ್ನು ಪರಿಪರಿಯಾಗಿ ಸ್ತುತಿಸಿ ಕವಿ ಪೂವಾಂಚಲ್ ಖಾದರ್ ಬರೆದಿರುವ ಭಕ್ತಿಗೀತೆಗಳನ್ನ ಸುಶ್ರಾವ್ಯವಾಗಿ ಹಾಡುತ್ತಿದ್ದರು. 

"ಮಧುರಂ ಕೊರಚ್ಚಿ ಕೇಟ್ಟೋ?ˌ 
ಚೋದಿಕ್ಯಾನ್ ನಾಯರೆˌ 
ವಳರೆ ಶರ್ಕರಂ ಪೋಡಾನ್ ಪಾಡಿಲ್ಲಿಯಾ" 

ಅನ್ನುವ ಅನುಪಲ್ಲವಿಯನ್ನ ತಾನೂ ಅದೆ ಭಕ್ತಿಗೀತೆಗಳ ಧಾಟಿಯ ರಾಗದಲ್ಲಿ ಹಾಡಿ ನಾಯರನ ಮುಖದಲ್ಲಿ ಕುಚೋದ್ಯದ ನಗುವನ್ನೆಬ್ಬಿಸಿದ. ಪದೆ ಪದೆ ಹೇಳದಿದ್ದರೆ ನಾಯರನ ಬರಿ ಸಕ್ಕರೆ ಸುರಿದ "ಸ್ಟ್ರಾಂಗ್ ಚಾಯ" ಕುಡಿಯುವ ಕರ್ಮ ಎದುರಾಗುವುದು ಮಾತ್ರ ಖಾತ್ರಿಯಿತ್ತು.

ಶ್ರಮಜೀವಿ ನಾಯರ ದೂರದ ನಡು ಕೇರಳದಲ್ಲಿದ್ದ ತನ್ನ ಕುಟುಂಬದ ಪೋಷಣೆಗೆ ಕಷ್ಟ ಪಡುತ್ತಿದ್ದ.


( ಇನ್ನೂ ಇದೆ.)



https://youtu.be/J-Yrsi4Svlg

No comments: