ಜಾತಿ ಪದ್ಧತಿಯ ಉಸುಬಿನಲ್ಲಿ ಕಂಠಮಟ್ಟದವರೆಗೆ ಚಿಂತಾಜನಕವಾಗಿ ಸಿಕ್ಕಿ ನರಳಾಡುತ್ತಿದ್ದ ಹದಿನೆಂಟನೆ ಶತಮಾನದ ಕೇರಳದಲ್ಲಿ ಸಾಮಾಜಿಕ ಬದಲಾವಣೆಗಾಗಿ ಶ್ರಮಿಸಿದ ಕೇರಳದ ಧಾರ್ಮಿಕ ಕ್ರಾಂತಿಯ ಹರಿಕಾರ ಮೂರ್ತೆ ಕುಲದ ಶ್ರೀನಾರಾಯಣ ಗುರುಗಳು ಸ್ಥಾಪಿಸಿರುವ ಕೆಲವು ದೇವಸ್ಥಾನಗಳ ಹೊರತು ಬಾಕಿ ಇನ್ನೆಲ್ಲಾ ರಾಜಾಳ್ವಿಕೆ ಕಾಲದಿಂದ ಊರ್ಜಿತದಲ್ಲಿರುವ ಪುರಾತನ ದೇವಸ್ಥಾನಗಳಲ್ಲಿ ಇಂದಿಗೂ ಶಿವಳ್ಳಿ ಬ್ರಾಹ್ಮಣರದ್ದೆ ಪಾರುಪತ್ಯ. ಕೊಚ್ಚಿ ದೈವಸ್ವಂ ಬೋರ್ಡು ಹಾಗೂ ತ್ರಾವಂಕೂರು ದೈವಸ್ವಂ ಬೋರ್ಡುಗಳ ಸ್ಠಾಪನೆಯಾದ ನಂತರ ಸ್ಥಳಿಯ ಮಲಯಾಳಿಗಳು ಈ ದೇವಸ್ಥಾನಗಳ ಆಡಳಿತದ ಪಾರುಪತ್ಯದಲ್ಲಿ ಮೂಗು ತೂರಿಸುವಂತಾಗಿದ್ದರೂ ಸಹ ಇನ್ನೂ ಪೋಟ್ಟಿಗಳೆಂದು ಕರೆಯಲಾಗುವ ಶಿವಳ್ಳಿ ಬ್ರಾಹ್ಮಣ ಪುರೋಹಿತರ ಪ್ರಭಾವಲಯ ಯಾವ ಪುಣ್ಯಕ್ಷೇತ್ರಗಳಲ್ಲೂ ಇನಿತೂ ತಗ್ಗಿಲ್ಲ.
ಕಾಲಾಂತರದಲ್ಲಿ ಈ ಶಿವಳ್ಳಿ ಪಂಗಡದವರ ನಾಲ್ಕಾರು ತಲೆಮಾರುಗಳು ಅಲ್ಲಿಯೆ ಶಾಶ್ವತವಾಗಿ ನೆಲೆಯಾಗಿರುವ ಕಾರಣ ಅವರೆಲ್ಲರ ತುಳುನಾಡಿನಲ್ಲಿದ್ದ ತಮ್ಮ ಮೂಲದ ನೆಂಟಸ್ತಿಕೆ - ಬೇರಿನ ಬಂಧಾನುಬಂಧ ಕಡಿದು ಹೋಗಿದೆ. ಆರೇಳು ತಲೆಮಾರಿನಿಂದ ಅಲ್ಲಿಯೆ ನೆಲೆ ನಿಂತಿರುವ ಕಾರಣ ಸಹಜವಾಗಿ ಅವರ ಈಗಿನ ಪೀಳಿಗೆಯವರಿಗೆ ತುಳುನಾಡು ಹಾಗೂ ಅಲ್ಲಿನ ಮೂಲಬೇರು ಚೂರುಪಾರು ನೆನಪಿನಲ್ಲಿರುವ ಅಂಶಗಳು ಮಾತ್ರ. ಆದರೆ ಇಂದಿಗೂ ಸಾಮಾಜಿಕ ಬದುಕಿನಲ್ಲಿ ಮಲಯಾಳಂನ ಗಾಢ ಪ್ರಭಾವದ ಮಧ್ಯೆಯೂ ಮಾತೃಭಾಷೆ ತುಳು ಅವರ ಮನೆಭಾಷೆಯಾಗಿ ಉಳಿದೆ ಇದೆ. ಮನೆಯಲ್ಲಿನ ಸಂಸ್ಕೃತಿ ತುಳುನಾಡಿನ ಪದ್ಧತಿಗಳನ್ನಷ್ಟೆ ಆಧರಿಸಿರುತ್ತದೆ.
*****
ಉಡುಗೆ ತೊಡುಗೆಯಲ್ಲೂ ಸಹ ತುಳು ಪ್ರಭಾವ ಇಲ್ಲಿ ದಟ್ಟವಾಗಿದೆ. ಲಿಂಗಾತೀತವಾಗಿ ಮುಂಡು ಸುತ್ತಿಕೊಳ್ಳುವ ಇಲ್ಲಿ ತುಳುನಾಡ ಶೆಟ್ಟಿಗಾರರ ನೇಯ್ಗೆಯ ಉಡುಪಿ ಸೀರೆ ಶ್ರೇಷ್ಠ ಎಂಬ ಭಾವನೆಯಿದೆ. ಉಡುಪಿ ಸುತ್ತಮುತ್ತಲಿನ ಹೆಜಮಾಡಿˌ ಕಾಪುˌ ಮುಲ್ಕಿˌ ಪಡುಬಿದ್ರಿಗಳ ಈ ಮಗ್ಗದ ಸೀರೆಗಳಿಗೆ ಇಂದಿಗೂ ಬಲು ಆದರ ಕೇರಳದಲ್ಲಿದೆ. ಗಂಡಸರು ಹೆಂಗಸರೆನ್ನದೆ ಮುಂಡು ಉಟ್ಟು ಸೊಂಟದಿಂದ ಮೇಲೆ ಬರಿಮೈಯಲ್ಲಿರುವ ಸಂಸ್ಕೃತಿಯ ಕೇರಳದಲ್ಲಿ ಹೆಂಗಸರ ಎದೆ ಮುಚ್ಚುವ ಸೀರೆಯುಡುವ ಪದ್ಧತಿ ಶ್ರೇಷ್ಠವನ್ನಿಸಿದ್ದು ಸಹಜ. ಕೇರಳದ ಕವಿಪುಂಗವರು ಈಗಲೂ ತಮ್ಮ ಕಥೆ ಕವಿತೆ ಕಾವ್ಯಗಳಲ್ಲಿ ನಾಯಕನಿಂದ ತನ್ನ ನಾಯಕಿಗೆ "ತುಳುನಾಡನ್ ಪೂಂಪಟ್ಟು"ವನ್ನೆ ಉಡುಗೊರೆ ಕೊಡಿಸುತ್ತಾರೆ! ಅಷ್ಟು ಅಮೂಲ್ಯ ಅನ್ನುವ ಮಾನ್ಯತೆ ತುಳುನಾಡಿನ ಮಗ್ಗಗಳು ನೇಯ್ದ ಸೀರೆಗೆ ಕೇರಳದ ಜನಮಾನಸದಲ್ಲಿದೆ ಅನ್ನೋದಕ್ಕೆ ಇದೆ ನೇರ ಸಾಕ್ಷಿ.
ಇನ್ನು ಹೊರದೇಶದಿಂದ ಬರುತ್ತಿದ್ದ ಅರಬ್ಬ ಮುಸಲ್ಮಾನ ವ್ಯಾಪಾರಿಗಳ ಪ್ರಭಾವದಿಂದ ಮಲಬಾರಿನಿಂದ ಪ್ರಾರಂಭವಾಗಿ ಕ್ರೈಸ್ತ ದಟ್ಟಣೆ ಹೆಚ್ಚಿರುವ ಕೊಚ್ಚಿ ಸಂಸ್ಥಾನ ವಲಯಕ್ಕೂ ಹರಡಿ ಕಡೆಗೆ ಹಿಂದೂ ಪ್ರಾಬಲ್ಯದ ತಿರುವಾಂಕೂರು ಸಂಸ್ಥಾನದಲ್ಲೂ ಕಾಲಾಂತರದಲ್ಲಿ ಸಾರ್ವತ್ರಿಕವಾಗಿರುವ ಗೋಮಾಂಸ ಭಕ್ಷಣೆಯ ಆಹಾರ ಪದ್ಧತಿಯ ಕಾರಣ ಪ್ರತಿ ನೂರರಲ್ಲಿ ತೊಂಬತ್ತೈದು ಹೊಟೆಲ್ಲಿನ ಮೆನುವಿನಲ್ಲಿ ಧರ್ಮಾತೀತವಾಗಿ ಗೋ ಮಾಂಸದ ಖಾದ್ಯ ವೈವಿಧ್ಯಗಳು ಲಭ್ಯವಿರುತ್ತವೆ. ಅಂತಹ ವಾತಾವರಣದಲ್ಲಿ ಸಂಪೂರ್ಣ ಸಸ್ಯಾಹಾರಿ ಅಥವಾ ಗೋ ಮಾಂಸ ಭಕ್ಷಣೆ ಒಲ್ಲದವರಿಗೆ ಒದಗಿ ಬರೋದು ಸಮಸ್ತ ಕೇರಳದಾದ್ಯಂತ ಆವರಿಸಿಕೊಂಡಿರುವ "ಉಡುಪ್ಪಿ ಹೊಟ್ಟೆಲ್"ಗಳು ಮಾತ್ರ! ಉಡುಪಿಯನ್ನ ಜನ್ಮದಲ್ಲಿ ಕಂಡಿರದ ಮಲಯಾಳಿಯೂ ಸಹ ತಾನು ಆರಂಭಿಸುವ ಸಸ್ಯಾಹಾರಿ ಫಲಹಾರ ಮಂದಿರಕ್ಕೆ ಉಡುಪ್ಪಿ ಹೊಟ್ಟೆಲು ಎನ್ನುವ ಬೋರ್ಡನ್ನ ತಲೆ ಕೆಡಿಸಿಕೊಳ್ಳದೆ ಹಾಕಿಕೊಳ್ಳುತ್ತಾನೆ! ಮಲಯಾಳಿಗಳ ಪ್ರಕಾರ ಸಸ್ಯಾಹಾರಕ್ಕೆ ಪರ್ಯಾಯ ಪದ ಈ "ಉಡುಪ್ಪಿ".
ಇದಿಷ್ಚೆ ಅಲ್ಲˌ ವರ್ಷದಲ್ಲಿ ಮೂರು ಸಾರಿ ಉಳಿದೆಲ್ಲ ರಾಜ್ಯದವರೂ ಮಾಲೆಧಾರಿಗಳಾಗಿ ಶಬರಿಮಲೆಗೆ ಇರುಮುಡಿ ಕಟ್ಟಿಕೊಂಡು ಹೋಗುವ ಪದ್ಧತಿ ಜನಪ್ರಿಯವಾಗಿದ್ದರೆˌ ಕೇರಳದ ಸರಾಸರಿ ಮಲಯಾಳಿ ಇದಕ್ಕೆ ತದ್ವಿರುದ್ಧ. ಇಂದಿನ ಕೇರಳದ ದಕ್ಷಿಣದ ತುತ್ತತುದಿಯ ಹಳ್ಳಿ ವೆಳ್ಳದರˌ ಪಾರಶಾಲಾಗಳಿಂದಷ್ಟೆ ಅಲ್ಲ ಅಂದಿನ ಕೇರಳದ ಭಾಗಗಳೆ ಆಗಿದ್ದ ಕನ್ಯಾಕುಮಾರಿ ಜಿಲ್ಲೆಯ ಪಶ್ಚಿಮದಂಚಿನ ಮಾರ್ತಾಂಡಂ ಮಾತ್ರವಲ್ಲ ಪೂರ್ವದಂಚಿನ ಶಚೀದ್ರಂವರೆಗೂ ಅಂದಿಗೂ ಇಂದಿಗೂ ಎಂದಿಗೂ ತೀರ್ಥಯಾತ್ರೆ ಎಂದರೆ ಅದು ಕರ್ನಾಟಕದ ಮೂಕಾಂಬಿಕೆಯ ಸನ್ನಿಧಿ ಕೊಲ್ಲೂರುˌ ಅಲ್ಲಿನ ಕೊಡಚಾದ್ರಿಯ ಸರ್ವಜ್ಞ ಪೀಠ ಹಾಗೂ ಶೃಂಗೇರಿಯ ಶಾರದಾ ಪೀಠ. ಎಳೆ ಮಕ್ಕಳ ಅನ್ನ ಪ್ರಾಶನವಿರಲಿˌ ಮುಂಡನವಿರಲಿˌ ಅಕ್ಷರಾಭ್ಯಾಸದ ಆರಂಭವಾಗಿರಲಿ ಈ ಎರಡರಲ್ಲೊಂದು ಕ್ಷೇತ್ರಗಳಲ್ಲಿ ಆದರೆ ಅದು ಶ್ರೇಷ್ಠತೆಯ ಲಕ್ಷಣ ಎನ್ನುವ ಭಾವನೆ ಮಲೆಯಾಳಿಗಳ ಮನದಲ್ಲಿ ತಲೆತಲಾಂತರದಿಂದ ಅಚ್ಚೊತ್ತಿದೆ. ಮತೀಯವಾದ ಮಾನಸಿಕ ವ್ಯಾಧಿಯಾಗಿ ಪರಿವರ್ತಿತವಾಗಿಲ್ಲದ ಇತ್ತೀಚಿನ ಕೆಲವು ದಶಕಗಳ ಹಿಂದೆಯೂ ಸಹ ಕೇವಲ ಹಿಂದೂ ಮಲಯಾಳಿಗಳಷ್ಟೆ ಅಲ್ಲದೆ ಮುಸಲ್ಮಾನ ಹಾಗೂ ಕ್ರೈಸ್ತ ಮಲಯಾಳಿಗಳೂ ಈ ಆರಂಭಿಕ ಶಿಶು ಸಂಸ್ಕಾರಗಳನ್ನ ಇಲ್ಲಿಗೆ ಬಂದು ಪಾಲಿಸಿಕೊಂಡು ಹೋಗುತ್ತಿದ್ದ ದಾಖಲೆಗಳಿವೆ.
ಮಾಟ ಮಂತ್ರ ತಂತ್ರಶಾಸ್ತ್ರಕ್ಕೆ ಮಾತ್ರ ಒಂದು ಕಾಲದಲ್ಲಿ ಪ್ರಾಮುಖ್ಯತೆಯಿದ್ದ ಇದೆ ಕೇರಳದಲ್ಲಿ ಕಾಲಾಂತರದಲ್ಲಿ ಸ್ಥಾಪನೆಯಾಗಿರುವ ತೃಶೂರಿನ ವಡಕ್ಕುನಾಥನ ಸನ್ನಿಧಿಯೆ ಇರಲಿˌ ಹರಿಪಾದಿನ ಮನ್ನಾರಶಾಲಾದ ನಾಗರಾಜ ದೇವಸ್ಥಾನವೆ ಆಗಿರಲಿˌ ತಳಿಪರಂಬದ ರಾಜರಾಜೇಶ್ವರ ಕ್ಷೇತ್ರವೆ ಇದ್ದಿರಲಿˌ ಕೊಡಂಗಲ್ಲೂರಿನ ಭಗವತಿ ಕ್ಷೇತ್ರದ ಕಥೆಯಾಗಿರಲಿ ಅಥವಾ ಜಗತ್ತಿನ ಸಿರಿವಂತ ದೇವಸ್ಥಾನ ತಿರುವನಂತಪುರದ ಅನಂತಪದ್ಮನಾಭಸ್ವಾಮಿಯೆ ಆಗಿರಲಿ ಅವೆಲ್ಲ ದೇವಸ್ಥಾನದ ಮೂಲಕ್ಷೇತ್ರಗಳು ತುಳುನಾಡಿನಲ್ಲಿವೆ. ಅಲ್ಲಿಂದ ಬಂದ ಭಗವಂತ ಇಲ್ಲಿನ ದೊಡ್ಡ ದೊಡ್ಡ ಸುಪ್ರಸಿದ್ಧ ದೇವಸ್ಥಾನಗಳಲ್ಲಿ ಒಲಿದು ನಿಂತು ನೆಲೆಸಿದ್ದಾನೆ ಎನ್ನುವ ನಂಬಿಕೆ ಮಲಯಾಳಿಗಳಲ್ಲಿದೆ.
ಕೇವಲ ಬೆರಳೆಣಿಕೆಯ ರಾಜಧಾನಿ - ಗರೀಬ ರಥದಂತಹ ಮೇಲುದರ್ಜೆಯ ಬಂಡಿಗಳ ಹೊರತು ತಿರುವನಂತಪುರಂನಿಂದ ಆರಂಭವಾಗಿ ಎರಣಾಕುಳಂˌ ಕೊಲ್ಲಂˌ ಕೊಟ್ಟಾಯಂˌ ಶೊರನೂರುˌ ಪಾಲ್ಘಾಟುಗಳಿಂದ ಮಂಗಳಾಪುರಂ ದಿಕ್ಕಾಗಿ ಉತ್ತರದ ಊರುಗಳತ್ತ ಸಾಗುವ ರೈಲುಗಳೆಲ್ಲ ಹೀಗೆ ತೀರ್ಥಯಾತ್ರೆಗೆ ಬಂದು ಹೋಗುವ ಮಲಯಾಳಿಗಳ ಅನುಕೂಲಗೋಸ್ಕರ "ಮುಕಾಂಬಿಕ ರಸ್ತೆ" ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆ ನೀಡುತ್ತವೆ. ಇಡುಕ್ಕಿ - ಪಟ್ಟಣಂತಿಟ್ಟದಿಂದ ಹಿಡಿದು ವಯನಾಡಿನ ಕೆಳಪೇಟೆ - ಕಣ್ಣೂರಿನಂತಹ ಜಿಲ್ಲಾ ತಾಲೂಕು ಕೇಂದ್ರಗಳೆಲ್ಲವಿಂದ ಕೇರಳ ರಾಜ್ಯ ರಸ್ತೆ ಸಾರಿಗೆಯ ಬಸ್ಸುಗಳು ನಿತ್ಯದ ಸಾರಿಗೆ ಸಂಪರ್ಕವನ್ನ ಕೊಲ್ಲೂರಿಗೆ ಕಲ್ಪಿಸುತ್ತವೆ. ಈ ಮಟ್ಟಿಗೆ ಕೇರಳದ ಮೇಲೆ ತುಳುನಾಡು ತನ್ನ "ಮೃದು ಸಾಂಸ್ಕೃತಿಕ ಪ್ರಭಾವ"ವನ್ನ ಇವತ್ತಿಗೂ ದಟ್ಟವಾಗಿಯೆ ಉಳಿಸಿಕೊಂಡಿದೆ. ಕೇರಳದಲ್ಲಿ ಚಿಗುರೊಡೆದಿರುವ ಯಾವ ರಾಜಕೀಯ ಪ್ರೇರಿತ ಕಮ್ಯುನಿಸ್ಟ್ ಕ್ರಾಂತಿಗೂ ಈ ನೆಲದ ವಾಸ್ತವವನ್ನ ಬದಲಿಸಲು ಸಾಧ್ಯವಾಗಿಲ್ಲ. "ದೇವರ ಸ್ವಂತ ನಾಡು" ತನ್ನ ದೇವರನ್ನ ತುಳುನಾಡಿನಲ್ಲಿ ಅರಸುವುದು ತಮಾಷೆಯಾದರೂ ಸತ್ಯ.
*****
ತುಳುನಾಡಿನ ಸಂಸ್ಕೃತಿ ಹಾಗೂ ಆಹಾರ ಪದ್ಧತಿಯನ್ನ ಕೇರಳದ ಜನ ಮಾನಸದಲ್ಲಿ ವಿಸ್ತರಿಸಿರುವ ವಿಷಯದಲ್ಲಿ ಗೋವನ್ನರ ಪಾಲು ಸಹ ಅಪಾರವಾಗಿದೆ. ಐದು ಶತಮಾನಗಳ ಹಿಂದೆ ತಮ್ಮ ತಾಯ್ನೆಲವನ್ನ ಆಕ್ರಮಿಸಿ ಕಡೆಗೆ ತಮಗೇನೆ ಪೀಡೆಯಾಗಿ ಪರಿಣಮಿಸದ್ದ ಪೋರ್ತುಗೀಝರ ಮತಾಂತರ ಪ್ರೇರಿತ ವಿಧ ವಿಧದ ಕಿರುಕುಳಗಳಿಂದ ಬೇಸತ್ತು ಉಟ್ಟ ಬಟ್ಟೆಯಲ್ಲೆ ದೇಶಭ್ರಷ್ಟರಾಗಿ ಅನಿವಾರ್ಯವಾಗಿ ದಕ್ಷಿಣದ ದಿಕ್ಕಿನತ್ತ ನೆಮ್ಮದಿಯ ಬದುಕಿನ ಹುಡುಕಾಟದಲ್ಲಿ ದೇಶಾಂತರ ಹೊರಟಿದ್ದ ಸಾರಸ್ವತ ಸಹಿತರಾದ ಹಿಂದೂ ಕೊಂಕಣಿಗರು ತಿರುವನಂತಪುರದವರೆಗೂ ಹೋಗಿ ನೆಲೆ ನಿಂತಿದ್ದಾರೆ.
( ಇನ್ನೂ ಇದೆ.)
https://youtu.be/V_2c8hJyqV0
No comments:
Post a Comment