ಮುಗಿಯದ ಕಥೆಯೊಂದರ ಆರಂಭ - ೨.
( ದಡ ಕಾಣದ ದೋಣಿಯ ಕೊನೆಯಿರದ ಕುರುಡು ಪಯಣ.)
ಈಶ್ವರಯ್ಯನ ಪರಿಸ್ಥಿತಿ ಕಳೆದ ಆರು ದಶಕಗಳಳಿಂದೀಚೆ ಬಹಳಷ್ಟು ಏರುಪೇರುಗಳ ಸಹಿತ ಒಂದು ನಿರೀಕ್ಷಿತ ಮಟ್ಟವನ್ನೀಗ ಬಂದು ಮುಟ್ಟಿ ನಿಂತಿದೆ. ವಾಸ್ತವದಲ್ಲಿˌ ಅವರದ್ದು ಒಂಥರಾ ಅಯೋಮಯವಾದ ಬದುಕು. ಅವರಿಗೆ ಅರಿವು ಮೂಡುವ ಮೊದಲೆ ಹಳ್ಳಿಯಲ್ಲಿದ್ದ ಪಿತ್ರಾರ್ಜಿತ ಜಮೀನನ್ನ ಹೊಟೆಲ್ ಮಾಡುವ ಹುಚ್ಚಿನ ಅಪ್ಪ ಕೆನರಾ ಬ್ಯಾಂಕಿನಲ್ಲಿ ಪಡೆದ ಸಾಲಕ್ಕೆ ಅಡವಿಟ್ಟುˌ ಅವರ ವ್ಯವಹಾರ ಗಿಟ್ಟದೆ ನಷ್ಟವಾಗಿ ಜಮೀನು ಏಲಂ ಆಗಿರದಿದ್ಡರೆˌ ಈಶ್ವರಯ್ಯ ಬಹಳ ಹಿಂದೆಯೆ "ಮಣ್ಣಿನ ಮಗ"ನಾಗಿ ಕಲಿತ ಕಾಲೇಜು ವಿದ್ಯೆಗೆ ಶರಣು ಹೊಡೆದು ಮರಳಿ ಮಣ್ಣಿಗೆ ಸೇರಿ ಹೋಗುತ್ತಿದ್ದರು.
ಇತ್ತ ಸ್ವಂತದ ಜಾಗವೂ ಇಲ್ಲದ - ಅತ್ತ ಸೂಕ್ತ ಬಂಡವಾಳದ ಮೂಲಧನವೂ ಇಲ್ಲದ ಈಶ್ವರಯ್ಯನೊಳಗಿದ್ದದ್ದಾಗ ಕೇವಲ ಆರಂಭಿಕ ಉತ್ಸಾಹದ ಆವೇಶ ಮಾತ್ರ. ಯಾವುದೆ ಒಂದು ಕನಸಿನ ಯೋಜನೆಯನ್ನ ಸಾಕಾರ ಮಾಡಿಕೊಳ್ಳಬೇಕೆಂದಿದ್ದರೆ ಒಂದಾ ಮನೆಯ ಹಿರಿಯರು ಒತ್ತಾಸೆ ಕೊಟ್ಟು ಬಂಡವಾಳಕ್ಕೆ ವ್ಯವಸ್ಥೆ ಮಾಡಬೇಕು. ಅದರ ಮೂಲವಿಲ್ಲದಿದ್ದಾಗˌ ತಾನೆ ದುಡಿದು ಕೂಡಿಟ್ಟು ಬಂಡವಾಳ ಹೊಂದಿಸಿಕೊಳ್ಳಬೇಕು. ಅದೂ ಇಲ್ಲದಿದ್ದರೆˌ ಇಲ್ಲಾ ಎಲ್ಲಿಂದಾದರೂ ಸಾಲ ಮಾಡಿಯಾದರೂ ವ್ಯವಹಾರ ಶುರು ಮಾಡಬೇಕು. ಅಪ್ಪ ಸಂಪಾದಿಸಿಟ್ಟ ಬಂಡವಾಳದ ಬೆಂಬಲವಿಲ್ಲದ ಈಶ್ವರಯ್ಯ ಇದರಲ್ಲಿ ಎರಡನೆ ಆಯ್ಕೆಗೆ ಮೊರೆ ಹೋಗುವವರಿದ್ದರು. ಆದರೆ ತಾನೊಂದು ಬಗೆದರೆ ವಿಧಿ ಇನ್ನೇನನ್ನೋ ಹೇರಿತು ಎಂಬಂತೆ ಆ ನಡುವೆ ಏನೇನೋ ನಡೆದು ಹೋಗಿ ಸ್ಥಿರತೆ ಕಾಣುವ ಸಮಯದಲ್ಲಿ ಸಮಾಧಿ ಕಟ್ಟಲು ತನ್ನ ಕೈಯಿಂದಲೆ ಹೊಂಡ ತೋಡಿ ತಾನೆ ಹೋಗಿ ಅದರೊಳಗೆ ಹಾರಿದಂತೆ ಆಗಿ ಹೋಯ್ತು ಅವರ ಬದುಕಲ್ಲಿ.
ಸ್ವಂತ ದುಡಿಮೆಯಲ್ಲಿ ಅಂತದ್ದೊಂದನ್ನ ಮಾಡಲು ಲೆಕ್ಖಾಚಾರ ಹಾಕಿ ವ್ಯವಹಾರಕ್ಕೆ ಕೈ ಹಾಕುವ ಹೊತ್ತಿಗೆˌ ಬಂಡವಾಳಕ್ಕಾಗಿ ಸೇರಿಸಿಟ್ಟಿದ್ದ ಹಣವನ್ನ ಇನ್ಯಾರದೋ ಅಗತ್ಯಕ್ಕಂತ ಮನ ಕರಗಿ ತತ್ಕಾಲಿಕವಾಗಿ ಸಾಲ ಕೊಟ್ಟರೆˌ ಅದೂ ಮರು ವಸೂಲಾಗದೆ ಕೆಂಗೆಟ್ಟು ಕೂತರು. ಪಡೆದವ ಹಣವನ್ನೂ ಕೊಡದೆ ಸಂಬಂಧಗಳನ್ನೂ ಉಪೇಕ್ಷಿಸಿ ಕೂತ. ಆದರೂ ಹಿಡಿದ ಕೆಲಸ ಅರ್ಧದಲ್ಲಿ ಬಿಡಲೊಲ್ಲದೆˌ ಭಂಡ ಧೈರ್ಯ ಮಾಡಿ ಖಾಸಗಿಯವರಲ್ಲಿ ದುಡಿಯುತ್ತಿದ್ದ ಸಂಸ್ಥೆಯ ಸಂಬಳ ನಂಬಿ ಬೃಹತ್ ಸಾಲ ಮಾಡಿ ಭೋಗ್ಯಕ್ಕೆ ಪಡೆದ ಜಮೀನೊಂದರಲ್ಲಿ ಅದೆ ಕನಸ ಕೃಷಿ ಕೈಗೊಳ್ಳಲು ಉದ್ದೇಶಿಸಿದರೂ. ಬಂಡವಾಳ ಸಾಲದೆ ಹೋಗಿ ಹಾಕಿದ ದುಡ್ಡೂ ಗಿಟ್ಟದೆ ಮೋಸವಾಯ್ತು. ಹೀಗೆ ವ್ಯವಹಾರದಲ್ಲಿ ಕೈ ಸುಟ್ಟುಕೊಂಡ ಈಶ್ವರಯ್ಯನಿಗೆˌ ತಾನಾಗಿ ಬಂದು ಕೇಳಿದವರಿಗೆ ಧಾರಾಳವಾಗಿ ಕೊಡುವ ಶಕ್ತಿ ಬಂದಷ್ಟೆ ವೇಗದಲ್ಲಿ ಕಳೆದು ಹೋಗಿˌ ಅವರೆ ಅವರಿವರ ಮುಂದೆ ಕೈಯೊಡ್ಡುವ ದೈನೇಸಿ ಸ್ಥಿತಿಗೆ ಪರಿಸ್ಥಿತಿ ತಂದೊಡ್ಡಿತು. ಅದೊಂದು ಅವಮಾನದ ಕೆಟ್ಟ ಕಾಲ. ತೀರ ಸಣ್ಣ ಮೊತ್ತಗಳ ಸಾಲವಾಗಿದ್ದರೂ - ಅವರ ಹದಗೆಟ್ಟ ಆರ್ಥಿಕ ಪರಿಸ್ಥಿತಿಯ ಅಂದಾಜಿದ್ದರೂˌ ಸಹಜವಾಗಿ ಅಪನಂಬಿಕೆಯಲ್ಲಿ ಸಾಲ ಕೊಟ್ಟವರು ತೀರಿಕೆಯ ಅವಧಿ ಮೀರಿ ಹೋದದ್ದಕ್ಕೆˌ ಅವರವರದೆ ಧಾಟಿಯಲ್ಲಿ ಏರಿ ಬರುವಾಗ ಹೇಗೆ ಪ್ರತಿಕ್ರಿಯಿಸಬೇಕು ಅನ್ನುವ ಗೊಂದಲ ಕ್ಲೇಶಗೊಂಡ ಮನಸಿನಲ್ಲಿ ಕಾಡುತ್ತಿದ್ದರೂˌ ಸಂಯಮ ವಹಿಸಿಯೆ ಬಂದದ್ದನ್ನೆಲ್ಲ ಎದುರಿಸಿ ನಿಂತರು. ನಗರದ ಸಂಸ್ಥೆಯೊಂದರ ಜೀತ ಅನ್ನುವಂತಿದ್ದ ನಿಶ್ಚಿತ ಸಂಬಳದ ಕೆಲಸವನ್ನ ಬಿಡುವಂತಿರಲಿಲ್ಲ. ನಿಗದಿತ ಅವಧಿಗೆ ಕೆಲಸ ಬಿಡದ ಮುಚ್ಚಳಿಕೆ ಬರೆದುಕೊಟ್ಟ ಆ ಉದ್ಯೋಗದ ತಿಂಗಳ ಸಂಬಳದ ಬಹುಪಾಲು ಮಾಡಿರುವ ಖಾಸಗಿ ಸಂಸ್ಥೆಯ ಸಾಲ ತೀರಿಕೆಗೆ ಸರಿಯಾಗುತ್ತಿತ್ತು.
ಯಾರ ಬದುಕಲ್ಲಿ ಏನೆ ಏರುಪೇರಾಗಲಿ. ಕಾಲದ ಓಡುವ ಬಂಡಿಯೇನೂ ಎಂದೂ-ಎಲ್ಲೂ ನಿಲ್ಲದಲ್ಲ? ಆ ಅಜ್ಞಾತ ವಾಸದ ಮುಕ್ಕಾಲು ದಶಕ ಬಹುತೇಕ ಕಳೆವ ಹೊತ್ತಿಗೆˌ ಮಾಡಿದ್ದ ಬೃಹತ್ ಸಾಲ ಬಡ್ಡಿ ಸಹಿತ ತೀರಿಕೆಯಾಗಿˌ ಅದರ ನಡುನಡುವೆ ಬಂಧು ಮಿತ್ರರ ಹತ್ತಿರ ಮಾಡಿದ್ದ ಕಿರು ಸಾಲಗಳೆಲ್ಲ ಸಂಪೂರ್ಣ ತೀರುವ ಹೊತ್ತಿಗೆ ಅವರ ದೇಹಕ್ಕೆ ನಲವತ್ತೆರಡಾಗಿ ನಲವತ್ತ ಮೂರು ಕಾಲಿಟ್ಟಿತ್ತು. ಬಹುತೇಕ ಭ್ರಮನಿರಸನಗೊಂಡ ಸ್ಥಿತಿಯಲ್ಲಿದ್ದ ಈಶ್ವರಯ್ಯ ತಮ್ಮ ಖಾಸಗಿ ಇಷ್ಟ-ನಷ್ಟಗಳ ಬಗ್ಗೆ ಚಿಂತಿಸಿ ವ್ಯಥಿಸಲಾಗದ ಹಂತಕ್ಕೆ ಬಂದಿದ್ದರು. ತಾನೊಬ್ಬನೆ ಒಂಟಿಯಾಗಿ ಬಾಳುವ ಬಾಳಿನ ದುರ್ಭರತೆ ಅವರನ್ನ ಕಾಡಿದರೂ ಸಹˌ ಮದುವೆಯಾಗಿ ಜೊತೆಯೊಂದನ್ನ ಹೊಂದುವ ಉಮೇದು ಅವರಲ್ಲಿ ಉಳಿದಿರಲಿಲ್ಲ.
ಆದರೆˌ ಅವರೊಳಗಿದ್ದ ಪಿತೃತ್ವದ ಮಮತೆ ತನ್ನದು ಎಂದು ಎದೆಗಪ್ಪಿಕೊಳ್ಳಬಹುದಾದ ಜೀವವೊಂದಿದ್ದರೆ? ಎಂದು ಮಿಡುಕಾಡಲಾರಂಭಿಸಿತು. ತನ್ನ ಸಮಪ್ರಾಯದವರು ಒತ್ತಟ್ಟಿಗಿರಲಿ - ತನಗಿಂತ ವಯಸ್ಸಿನಲ್ಲಿ ಕಿರಿಯರೆ ಈ ವಿಚಾರದಲ್ಲಿ ತನ್ನನ್ನ ಮೀರಿ ಒಂದೆರಡು ಹೆಜ್ಜೆ ಮುಂದೆ ಹೋಗಿರೋದು ಕಾಣುವಾಗಲೆಲ್ಲˌ ಒಳಗೊಳಗೆ ಅವರ ಮನ ಒಂಥರಾ ತಪ್ಪಿತಸ್ಥ ಭಾವನೆಯಿಂದ ಮುದುಡಿ ಹೋಗುತ್ತಿತ್ತು. ನಾಯಿ ಸಾಕಿ ನೋಡಿದರು. ಬೆಕ್ಕನ್ನೂ ಜೊತೆಗಿರಿಸಿಕೊಂಡು ಜತನ ಮಾಡಿದರು. ಒಂದೆರಡು ಪಾರಿವಾಳಗಳನ್ನ - ಸಾಲದ್ದಕ್ಕೆ ಬಹುಮಹಡಿಯ ಈ ಕಟ್ಟಡದಲ್ಲೆ ಬಾತುಕೋಳಿ - ಮೊಲಗಳನ್ನೂ ಸಹ ಸಾಕಿ ಈ ಒಂಟಿತನದಿಂದ ಕೆಂಗೆಟ್ಟಿದ್ದ ಮನಸನ್ನ ಸಂತೈಸಿಕೊಳ್ಳುವ ಜೊತೆ ಕಂಡುಕೊಳ್ಳುವ ವಿಫಲ ಪ್ರಯತ್ನ ಮಾಡಿ ದಾರುಣವಾಗಿ ಸೋತ ಈಶ್ವರಯ್ಯನಿಗೆˌ ತನ್ನದೆಂದು ಹೇಳಿಕೊಳ್ಳುವ ಮಗುವನ್ನ ಮಾಡಿಕೊಳ್ಳೋದೊಂದೆ ತನ್ನ ಮಾನಸಿಕ ಕ್ಲೇಶದ ಪರಿಹಾರಕ್ಕಿರುವ ಏಕೈಕ ಶಾಶ್ವತ ಪರಿಹಾರವನ್ನೋದು ಖಚಿತವಾಯ್ತು.
ಕಾಲವಿನ್ನೂ ಮಿಂಚಿ ಹೋಗಿರಲಿಲ್ಲˌ ಮದುವೆಗೆ ಧೈರ್ಯ ಮಾಡದ ಈಶ್ವರಯ್ಯನ ಮನಸ್ಸು ಮಗುವನ್ನಾಗಿಸಿಕೊಳ್ಳಲು ಸರ್ವ ಸನ್ನದ್ಧವಾಯಿತು. ಒಂದು ಸಾರಿ ಆರ್ಥಿಕ ಸ್ಥಿರತೆ ಬದುಕನ್ನ ಸ್ವಸ್ಥವಾಗಿಸಿದ ಹಾಗೆˌ ಈಶ್ವರಯ್ಯ ಈ ನಿಟ್ಟಿನಲ್ಲಿ ಗಂಭೀರವಾದ ಹೆಜ್ಜೆಯನ್ನಿಟ್ಟರು. ಆದರೆ ವಾಸ್ತವ ಜಗತ್ತಿನ ಪರಿಸ್ಥಿತಿ ಅವರಿಗೆ - ಅವರ ಕನಸುಗಳಿಗೆ ಪೂರಕವಾಗಿರಲಿಲ್ಲ. ದೇಶದ ಪೋಷಕತ್ವದ ಕಾನೂನುಗಳನುಸಾರ ಮದುವೆಯಾದವನಾಗಿರಲಿ ಅಥವ ಅವಿವಾಹಿತನೆ ಆಗಿರಲಿ ಒಂಟಿ ಪುರುಷನನ್ನ "ಸಿಂಗಲ್ ಪೇರೆಂಟ್" ಆಗಿಸುವಂತಿರಲಿಲ್ಲ. ಕಾನೂನಿನ ನಿಯಮಾವಳಿಗನುಸಾರ ಅಂತಹ ಒಂಟಿ ಗಂಡು ಅದೆಷ್ಟೇ ಮನಸ್ಸಿದ್ದರೂ - ಆರ್ಥಿಕ ಬಲವಿದ್ದರೂ ತನ್ನದೆ ಜೈವಿಕ ಶಿಶುಗಳನ್ನ ಯಾವುದೆ ಬಗೆಯಲ್ಲಿ ಹೊಂದುವುದನ್ನಾಗಲಿ ಅಥವಾ ಅಸಹಾಯಕ ಅನಾಥ ಮಕ್ಕಳನ್ನ ಸರಕಾರಿ ದತ್ತು ಪ್ರಕ್ರಿಯೆಗಳನ್ನ ಅನುಸರಿಸಿಯೆ ದತ್ತು ಪಡೆಯುದನ್ನಾಗಲಿ ಸ್ಪಷ್ಟವಾಗಿ ನಿರ್ಬಂಧಿಸುತ್ತಿತ್ತು.
ತಮಾಷೆಯ ಸಂಗತಿಯೇನೆಂದರೆˌ ಈ ವಿಷಯದಲ್ಲಿ ಇದೆ ಎಡಬಿಡಂಗಿ ಕಾನೂನುಗಳು "ಒಂಟಿ ಪೋಷಕ"ಳಾಗಲು ಮದುವೆಯಾಗದ/ಮಕ್ಕಳಿಲ್ಲದ/ವಿಧವೆಯಾದ ಹೆಣ್ಣು ಜೀವಗಳಿಗೆ ಪೂರಕವಾಗಿದ್ದವಷ್ಟೆ ಅಲ್ಲˌ ಅವರಿಗೆ ಇಷ್ಟ ಪಟ್ಟಾಗ ಮಕ್ಕಳನ್ನ ಯಾವುದೆ ನೈಸರ್ಗಿಕ/ಕೃತಕ/ದತ್ತು ಮೂಲಕ ಪಡೆದುಕೊಳ್ಳಲು ಪ್ರೋತ್ಸಾಹಿಸುವಂತಿದ್ದವು! ಹಾಗಂತˌ ಪುಸ್ತಕದಲ್ಲಿ ಬರೆದಿಟ್ಟುವ ಕಾನೂನನ್ನ ದೇಶದ ಪ್ರಜೆಗಳೆಲ್ಲ ಶಿರಬಾಗಿ ಒಪ್ಪಿಕೊಂಡು ಅನುಸರಿಸಿ ಮುನ್ನಡೆಯುತ್ತಿದ್ದರೆಂದು ಇದರರ್ಥವಲ್ಲ! ಹಣ ಹಾಗೂ ಪ್ರಭಾವ ಇದ್ದವರು ಯಾವ ಹಿಂಜರಿಕೆಯೂ ಇಲ್ಲದೆ ಇದನ್ನ ಸ್ಪಷ್ಟವಾಗಿ ಉಲ್ಲಂಘಿಸಿ ತಮಗೆ ಬೇಕಾದಂತೆ ಮಕ್ಕಳನ್ನ ಮಾಡಿಕೊಂಡ ಅಸಂಖ್ಯ ಉದಾಹರಣೆಗಳು ಈಶ್ವರಯ್ಯನ ಕಣ್ಣ ಮುಂದೆಯೆ ಧಾರಾಳವಾಗಿದ್ದವು. ಹೀಗಾಗಿ ಈಶ್ವರಯ್ಯ ಸಹ ಹೀಗೆಯೆ ತನ್ನ ವಯಕ್ತಿಕ ಬದುಕಿನ ಮೇಲೆ ಒತ್ತಾಯದ ಸವಾರಿ ಮಾಡುವ "ಕಾನೂನು ಭಂಗ" ಚಳುವಳಿಯನ್ನ ವಯಕ್ತಿಕ ಸ್ತರದಲ್ಲಿ ಮಾಡಲು ಗಟ್ಚಿ ಮನಸ್ಸು ಮಾಡಿ ಈ ವಿಷಯಕ್ಕೆ ಶ್ರೀಕಾರ ಹಾಕಿದರು. ಕಾನೂನು ಅನ್ನೋದೊಂದು ಕತ್ತೆ! ಅಸಹಾಯಕರಿಗೆ ಒದೆಯುವುದರ ಹೊರತು ಮತ್ತೀನೇನನ್ನೂ ಅದು ಮಾಡಲಾರದು ಅನ್ನುವ ಸ್ಪಷ್ಟತೆ ಅವರಿಗಿತ್ತು. ಅನೈತಿಕ ಸಂಬಂಧಗಳಿಂದ - ಕಾಮದ ವ್ಯಾಪಾರದಿಂದ ದಿನ ನಿತ್ಯ ಹುಟ್ಟುವ ದಿಕ್ಕು-ದೆಸೆಯಿಲ್ಲದ ಲಕ್ಷಾಂತರ ಮಕ್ಕಳಿಗೆ ಈ ಗೊಡ್ಡು ಕಾನೂನನ್ನ ನಂಬಿಕೊಂಡೇನೂ ಬದುಕನ್ನ ನಮ್ಮ ನಿಸರ್ಗ ಕಟ್ಟಿ ಕೊಡುತ್ತಿಲ್ಲ. ಹಾಗೆ ಕಾನೂನನ್ನೆ ನಂಬಿಕೊಂಡಿದ್ದರೆˌ ಕೊಳಕು ಕೊಳಚೆಯ ರಾಶಿಗಳಲ್ಲೆಲ್ಲ ಹಸಿಗೂಸುಗಳನ್ನ ಪ್ಯಾಸ್ಟಿಕ್ ಚೀಲಗಳಲ್ಲಿ ಕಸದಂತೆ ಯಾರೂ ಎಸೆದು ಹೋಗುತ್ತಿರಲಿಲ್ಲ. ಅನಾಥ ಮಕ್ಕಳೆನ್ನುವ ನತದೃಷ್ಟರ ಪೀಳಿಗೆಯೆ ಈ ನೆಲದ ಮೇಲೆ ಹುಟ್ಟುತ್ತಿರಲಿಲ್ಲ ಎಂದವರಿಗೆ ಮನವರಿಕೆಯಾಗಿತ್ತು. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಹಳಸಲು ಹರಳೆಣ್ಣೆ ಅನ್ನುವಂತಿದ್ದ ಈ ಕಣ್ಣಿಗೆ ರಾಚುವ ಲಿಂಗ ತಾರತಮ್ಯದ ಕಬೋದಿ ಕಾನೂನು ಈಶ್ವರಯ್ಯನಂತವರೊಳಗೆ ರೇಜಿಗೆ ಎಬ್ಬಿಸುತ್ತಿತ್ತು. ಅದ್ಯಾವ ವಿತಂಡವಾದದ ಕುತರ್ಕವನ್ನಾಧರಿಸಿ ಈ ಅರುಳು ಮರುಳಿನ ನಿಯಮಾವಳಿ ರೂಪಿಸಲಾಗಿದೆ ಅನ್ನೋದು ಅವರಿಗಿನ್ನೂ ಸ್ಪಷ್ಟವಾಗಿರಲಿಲ್ಲ. "ಕುಪಿತ್ರೋ ಭವತಿ" ಅಂತ ಕುಟುಕಿ ಹೇಳುತ್ತಿದ್ದ ಈ ಕಾನೂನಿನ ಕಗ್ಗˌ ಅದೆ "ಅತಃ ಕುಮಾತ್ರೋ ಅಸ್ತಿ" ಅನ್ನೋದನ್ನ ಮಾತ್ರ ಒಪ್ಪಿಕೊಳ್ಳಲು ಸುತರಾಂ ತಯ್ಯಾರಿರಲಿಲ್ಲ.
******
ಸಾಮಾನ್ಯವಾಗಿ ಕೈಫೋನಿನಲ್ಲಿ ಬೇಡಿಕೆಯಿಟ್ಟ ಹತ್ತು ಹದಿನೈದು ನಿಮಿಷಗಳ ಒಳಗೆಲ್ಲೆ ನಿಗದಿ ಪಡಿಸಿಟ್ಟ ಸ್ಥಳದ ಕೋ-ಆರ್ಡಿನೇಶನ್ ಕೊಟ್ಟ ಕಡೆˌ ನೀಟಾಗಿ ಪೊಟ್ಟಣ ಕಟ್ಟಿದ ಸಾಮಾನುಗಳ ಚೀಲವನ್ನ ಹೊತ್ತ "ಡ್ರೋಣ್"ಆಚಾರ್ಯರು ಬಂದು ಬಾನಲ್ಲೆ ಸ್ಥಿರವಾಗಿ ನಿಂತು ತಮ್ಮ ಆಗಮನದ ಸೂಚನೆಯನ್ನ ಕೈಫೋನಿನ ಮೂಲಕ ಕೊಡುತ್ತಿದ್ದರು. ಟರೇಸಿನ ಮೇಲಿರುವ ತನ್ನ ಕೈತೋಟದ ವಿಳಾಸ ಸಾಮಾನ್ಯವಾಗಿ ಸ್ಥಳದ ಗುರುತಾಗಿ ಈಶ್ವರಯ್ಯ ಕೊಡುತ್ತಿದ್ದದು. ಹೊರಗಡೆ ಚಳಿ ಚೂರು ಹೆಚ್ಚೆ ಕೊರೆಯುತಿದ್ದುದ್ದರಿಂದ ಉಟ್ಟ ಪಂಚೆಯ ಮೇಲೆ ಒಂದು ಟೀ ಶರ್ಟನ್ನ ಹಾಕಿಕೊಂಡು ಅದರ ಮೇಲೊಂದು ಕಾಶ್ಮೀರಿ ಉಣ್ಣೆಯ ಸ್ವೆಟ್ಟರ್ ಧರಿಸಿದ್ದ ಈಶ್ವರಯ್ಯ ಅದರ ಮೇಲೆ ಮತ್ತೊಂದು ಚರ್ಮದ ಜರ್ಕಿನ್ ಏರಿಸಿಕೊಂಡು ಚಹಾದ ಬಟ್ಟಲನ್ನ ಸಿಂಕಿನಲ್ಲಿರಿಸಿˌ ಮುಂಬಾಗಿಲನ್ನ ಮುಚ್ಟುವಂತೆ ಬಲವಾಗಿ ಎಳೆದುಕೊಂಡು ಮೆಟ್ಟಿಲುಗಳನ್ನೇರುತ್ತಾ ಮೇಲಿನ ಮಹಡಿಯತ್ತ ಸಾಗ ತೊಡಗಿದರು.
ಸಾಮಾನ್ಯವಾಗಿˌ ಮೇಲಿಂದ ಕೆಳಗಿಳಿಯುವಾಗಲಾಗಲಿ ಅಥವಾ ತಾನಿರುವ ಮಹಡಿಯಿಂದ ಮುಂದಿನ ಅಂತಸ್ತಿನಲ್ಲಿದ್ದ ಟರೇಸಿಗೆ ಏರುವಾಗಲಾಗಲಿ ಈಶ್ವರಯ್ಯ ಲಭ್ಯವಿದ್ದರೂ ಸಹˌ ಎಂದೂ ಲಿಫ್ಟನ್ನ ಬಳಸುವ ಅಭ್ಯಾಸವನ್ನಿಟ್ಟು ಕೊಂಡಿರಲಿಲ್ಲ. ತೀರ ಇತ್ತೀಚೆಗೆ ವಯೋಸಹಜವಾಗಿ ಸವೆಯುತ್ತಿರುವ ಮಂಡಿಚಿಪ್ಪಿನ ಮೇಲೆ ಹೀಗೆ ಏರಿಳಿಯುವಾಗಲಷ್ಟು ಅಧಿಕ ಒತ್ತಡ ಬಿದ್ದು ಚೂರೆ ಚೂರು ನೋವಿನ ಚಳುಕು ಏಳುತ್ತಿದ್ದುದು ನಿಜವಾದರೂˌ ತಾನೆ ಮೆಟ್ಟಿಲ ಬದಿಗೆ ಮುದ್ದಾಂ ಹೇಳಿ ಅಳವಡಿಸಿದ್ದ ಕೈಯಾಸರೆಯ ರೇಲಿಂಗ್ ಹಿಡಿದು ತುಸು ನಿಧಾನವಾಗಿಯಾದರೂ ಸರಿ ಸುಖದ ಯಂತ್ರಕ್ಕೆ ಶರಣಾಗದೆˌ ಸಶ್ರಮದಿಂದಲೆ ಮೇಲೇರಿ ಇಳಿಯುವ ಅಭ್ಯಾಸಕ್ಕವರು ಪಕ್ಕಾಗಿದ್ದರು. ಈಗ ವಾಸವಿರುವ ಏಳು ಮಹಡಿಗಳ ಕಟ್ಟಡದಲ್ಲಿನ ಪ್ರತಿ ಅಂತಸ್ತಿನಲ್ಲೂ ಎದುರು ಬದುರಾಗಿರುವ ತಲಾ ಸಾವಿರದಿನ್ನೂರು ಚದರಡಿಗಳ ಎರಡೆರಡು ಮಲಗುವ ಮನೆಗಳ ಎಂಟೆಂಟು ಮನೆಗಳಿವೆ. ತನ್ನ ದುಡಿಮೆಯ ಬಂಡಿ ಹಳಿಯೇರಿ ಕೈ ತುಂಬಾ ಸಂಪಾದನೆಯಾಗಲಾರಂಭಿಸಿದ ಮೇಲೆˌ ಸೀಮಿತ ಖರ್ಚು - ಒಂದಷ್ಟು ದಾನ-ಧರ್ಮ ಮಾಡಿದ ನಂತರದˌ ಉಳಿತಾಯದತ್ತ ಚಿತ್ತ ಹರಿಸಿದ್ದ ಈಶ್ವರಯ್ಯ ತನ್ನ ಬಹುತೇಕ ಲಾಭಾಂಶಗಳನ್ನ ಭೂಮಿ-ಬಂಗಾರ ಹಾಗೂ ಇಂತಹ ಆಸ್ತಿಗಳ ಮೇಲೆ ಮಾತ್ರ ವಿಕ್ರಯಿಸಿ ಸೊತ್ತು ಸಂಗ್ರಹಿಸಲಾರಂಭಿಸಿದ್ದರು.
ಈ ವ್ಯಾಪಾರಿ ಪ್ರಕ್ರಿಯೆಯಲ್ಲಿ ಈ ಕಟ್ಟಡವೊಂದರಲ್ಲೆ ಮೂವತ್ತನಾಲ್ಕು ಮನೆಗಳನ್ನ ಕಳೆದ ಮೂರು ದಶಕಗಳ ಅವಧಿಯಲ್ಲಿ ಅದರಲ್ಲಿ ವಾಸವಿದ್ದವರು ನಾನಾ ಕಾರಣಗಳಿಂದ ಮಾರಿ ಹೊರಡುವಾಗ ಕೊಂಡಿಟ್ಟುಕೊಂಡಿದ್ದರು. ಅವುಗಳಲ್ಲಿ ತನ್ನ ಮನೆಯೊಳಗಿನ ಕೃಷಿ ಚಟುವಟಿಕೆಗೆ ಎರಡು ಮನೆಗಳನ್ನ ಉಪಯೋಗಿಸಿ ಕೊಳ್ಳುತ್ತಿದ್ದರೆˌ ಇನ್ನೊಂದನ್ನ ಯಾರಾದರೂ ಆಪ್ತೇಷ್ಟರು ಬಯಸಿ ಬಂದರೆ ಅವರಿಗೆ ಇಷ್ಟವಿದ್ದಷ್ಟು ಕಾಲ ತಂಗಿ ವಾಸ ಮಾಡಲು ಸುಸಜ್ಜಿತ ಅತಿಥಿಗೃಹದಂತೆ ಉಳಿಸಿಕೊಂಡರು. ಇನ್ನೆರಡು ಅಂತಹ ಚಿಕ್ಕ ಮನೆಗಳ ನಡುವಿನ ಗೋಡೆ ಒಡೆದು ಅದನ್ನ ಒಂದಾಗಿಸಿಕೊಂಡ ವಿಶಾಲವಾದ ಮನೆಯಲ್ಲಿ ಸ್ವತಃ ವಾಸವಿದ್ದರು. ಉಳಿದಂತೆ ತನ್ನ ಹೆಸರಿನಲ್ಲಿದ್ದ ಅಷ್ಟೂ ಮೂವತ್ತು ಮನೆಗಳನ್ನ ಬಾಡಿಗೆಗೆ ಬಿಟ್ಟಿದ್ದರು. ಇದೊಂದು ಬಾಬ್ತಿನಿಂದಲೆ ದೊಡ್ಡ ಮೊತ್ತದ ಹಣವೊಂದು ನಿಗದಿತ ಠೇವಣಿ ಮೇಲಿನ ಬಡ್ಡಿಯಂತೆ ಪ್ರತಿ ತಿಂಗಳು ಸಹ ಇವರ ಖಾತೆ ಸೇರುತ್ತಿತ್ತು. ಇಡಿ ಕಟ್ಟಡದಲ್ಲಿ ಕೇವಲ ಇಪ್ಪತ್ತೆರಡು ಮನೆಗಳಷ್ಟೆ ಇನ್ನಿತರರ ಮಾಲಕತ್ವದಲ್ಲಿದ್ದ ಕಾರಣ ಒಂಥರಾ ಅನಧಿಕೃತವಾಗಿ ಇಡಿ ಕಟ್ಟಡವೆ ಇವರ ಏಕಾಧಿಪತ್ಯದ ಯಜಮಾನಿಕೆಗೆ ಒಳಪಟ್ಟಂತಿತ್ತು. ಇದೆ ಕಾರಣದಿಂದˌ ಸಹಜವಾಗಿಯೇನೋ ಅನ್ನುವಂತೆ ಅಲ್ಲಿನ ನಿವಾಸಿ ಸಂಘದ ಅಜೀವ ಅಧ್ಯಕ್ಷರಾಗಿಯೂ ಈಶ್ವರಯ್ಯ ಬಹುಕಾಲದಿಂದ ವಿರಾಜಮಾನರಾಗಿದ್ದರು.
ದಿನಸಿ ಹೊತ್ತು ತಂದಿದ್ದ "ಡ್ರೋಣಾ"ಚಾರ್ಯರು ಕೈ ತೋಟದ ಮುಚ್ಚಿಗೆಯಿಂದ ಚೂರು ಮೇಲಕ್ಕೆ ಸ್ಥಿರವಾಗಿ ಗಾಳಿಯಲ್ಲೆ ನಿಂತು ಇವರ ಆಗಮನವನ್ನ ನಿರೀಕ್ಷಿಸುತ್ತಿದ್ದರು. ಹೋಗಿˌ ಕೈಫೋನಿನ ಪರದೆಯ ಮೇಲೆ ಬೇಡಿಕೆಯಿಟ್ಟು ಪಾವತಿ ಮಾಡಿದ್ದಾಗ ಬಂದಿದ್ದ ಓಟಿಪಿ ನಮೂದಿಸಿದ ತಕ್ಷಣ ಕೆಳಗಿಳಿದು ಬಂದು ದಿನಸಿಯ ಚೀಲಕ್ಕೆ ಬೀಗದಂತೆ ಬಿಗಿದಿದ್ದ ತನ್ನ ಕಪಿಮುಷ್ಠಿಯ ಹಿಡಿತ ಸಡಿಲಿಸಿ "ಥ್ಯಾಂಕ್ಯೂ ಸಾರ್ˌ ಮೇ ಐ ಟೇಕ್ ಲೀವ್ ನೌ" ಎಂದು ಯಾಂತ್ರಿಕವಾಗಿ ಅಭಿವಂದಿಸಿ ತನ್ನ ಮರುದಾರಿ ಹಿಡಿದು ಹೊಂಜಿನ ಪರದೆಯ ನಡುವೆ ಎಂದಿನಂತೆ ಮರೆಯಾಗಿ ಹೋದರು.
ಈಗೀಗ ಸಾಮಾಜಿಕವಾಗಿ ಮನುಷ್ಯನ ಸಹಾಯಕ್ಕೆ ಮನುಷ್ಯರೆ ಬರಬೇಕೆಂಬ ನಿಯಮಾವಳಿಗಳಾಗಲಿ - ನಡಾವಳಿಗಳಾಗಲಿ ಇದ್ದಿರಲಿಲ್ಲ. ಬದುಕಿನ ದೈನಂದಿನ ಚಟುವಟಿಕೆಗಳಲ್ಲೆಲ್ಲ ನಿಖರವಾದ ನಿರ್ದೇಶನಗಳನ್ನ ಪಡೆದ ವಿವಿಧ ಬಗೆಯ ಯಂತ್ರೋಪಕರಣಗಳೆ ಮಾಡಿ ಮುಗಿಸುತ್ತಿದ್ದವು. ಸೇವಾ ವಲಯವಂತೂ ವಿಪರೀತವಾಗಿ ಯಂತ್ರೋಪಕರಣಗಳ ಮೇಲೆ ಅವಲಂಬನೆಯನ್ನ ಹೆಚ್ಚಿಸಿಕೊಂಡಿದ್ದವು. ಮನೆಗೆಲಸಗಳನ್ನ ಸಮರ್ಪಕವಾಗಿ ಮಾಡಿ ಮುಗಿಸಲು ಸಹ ಯಂತ್ರಮಾನವರು ತಮ್ಮ ಕಾರ್ಯಕ್ಷಮತೆ ಹಾಗೂ ಸಾಮರ್ಥ್ಯದನುಸಾರ ವಿವಿಧ ಶ್ರೇಣಿಯ ಬೆಲೆಯಲ್ಲಿ ಸ್ವಂತಕ್ಕೆ ಅಥವಾ ಬಾಡಿಗೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತಿದ್ದರು. ಆನ್ಲೈನಿನಲ್ಲಿ ಖರೀದಿಸುವ ಮನುಷ್ಯ ಪ್ರತಿರೂಪಿ ಯಂತ್ರಮಾನವ/ಮಾನವಿಯರು ಎಸೆಂಬಲ್ ಆದ ನಂತರ ನೇರ ಕಾರ್ಖಾನೆಯಿಂದ ಸಾರ್ವಜನಿಕ ಪಾಡ್ ಅಥವಾ ಮೆಟ್ರೋ ಹಿಡಿದು ತನ್ನನ್ನ ಖರೀದಿಸಿದ ಮಾಲಿಕರ ಮನೆ ಬಾಗಿಲಿಗೆ ತಾವಾಗಿಯೆ ನಡೆದು ಬಂದು ಅಲ್ಲಾಉದ್ದೀನನ ಮಾಯಾದೀಪದ ಅದ್ಭುತ ಭೂತದಂತೆ "ಜೀ ಹಜೂ಼ರ್" ಭಂಗಿಯಲ್ಲಿ ತಮ್ಮ ಕೈಯಾರ ಕರೆಘಂಟೆ ಒತ್ತಿ ವಿಧೇಯರಾಗಿ ನಿಲ್ಲುತ್ತಿದ್ದರು! ಒಂದು ಸಲ ಪ್ರೀ ಪ್ರೋಗ್ರಾಂಮಿಂಗ್ ಮಾಡಿ ಅದರ ನಿಯಂತ್ರಣವನ್ನ ಕೈ ಫೋನಿನಲ್ಲಿ ತಂತ್ರಾಂಶವೊಂದರ ಮೂಲಕ ಸಮನ್ವಯ ಸಾಧಿಸಿ ಇಟ್ಟುಕೊಂಡರೆ ಸಾಕು. ಮುಂದಿನದೆಲ್ಲ ಬೆರಳ ಇಷಾರೆಯಲ್ಲೆ ಸಾಕಾರವಾಗುವಷ್ಟು ಬದುಕು ಏಕಕಾಲದಲ್ಲಿ ನಿಸ್ಸಾರವೂ - ಸರಳವೂ ಆಗಿತ್ತು. ಇದರಿಂದ ಬರಿ ಅನುಕೂಲಗಳಷ್ಟೆ ಆಗುತ್ತಿದ್ದವು ಅಂತೇನೂ ಇದರರ್ಥವಲ್ಲ. ಊಹಿಸಲು ಸಹ ಆಗದ ಅನಾನುಕೂಲತೆಗಳೂ ಕೂಡ ಆಗಾಗ ಧುತ್ತನೆ ಎದುರಾಗಿ ಅವನ್ನ ಸಹಾಯಕ್ಕಂತ ಇಟ್ಟುಕೊಂಡವರನ್ನ ಕೆಂಗೆಡಿಸುವುದಿತ್ತು.
*********
ಬದಲಾದ ಕಾಲಮಾನದಲ್ಲಿ ತಂತ್ರಜ್ಞಾನದ ಮಧ್ಯಸ್ಥಿಕೆಯಿಲ್ಲದೆ ದೈನಂದಿನ ವ್ಯವಹಾರಗಳು ಒಂದಿಂಚು ಸಹ ಮುಂದೆ ಸರಿಯಲಾರದಷ್ಟು ಮನುಷ್ಯನ ಜೀವನ ಶೈಲಿ ಬದಲಾಗಿದೆ. ಈ ಶತಮಾನದ ಆರಂಭದ ಐದು ವರ್ಷಗಳು ವಿಪರೀತ ವೇಗವಾಗಿ ನಾಗರೀಕತೆಯ ನಡೆಯ ಬದಲಾವಣೆಗೆ ಮುನ್ನುಡಿ ಬರೆದಿತ್ತು. ಅದರ ನಂತರದ ಒಂದೂವರೆ ದಶಕ ಅದೆ ಬದಲಾವಣೆಯ ಮೋಡಿಗೆ ಒಳಗಾಗಿ ಓಲಾಡುತ್ತಲೆ ಕಳೆದಿತ್ತು. ಜನ ಮರುಳೋ - ಜಾತ್ರೆ ಮರುಳೋ ಎನ್ನುವಂತೆ ಸಾಮಾಜಿಕ ಮಾಧ್ಯಮಗಳ ಹಲ್ಲಂಡೆ "ಆರಂಭದಲ್ಲಿ ಅಗಸ ಆಗಸದೆತ್ತರ ಎತ್ತಿ ಎತ್ತಿ ಒಗೆಯುತ್ತಿದ್ದಂತೆ." ಬಹಳ ಅಬ್ಬರದಲ್ಲಿತ್ತು. ಯಾವುದೆ ಅಭಿವೃದ್ಧಿಯ ಗಡಿರೇಖೆ ಮಹಾನಗರ-ನಗರ-ಪಟ್ಟಣದ ಮಾರ್ಗವಾಗಿ ಗ್ರಾಮದತ್ತ ಹೊರಳುವಂತೆ ಈ "ಸೋ ಕಾಲ್ಡ್ ಕ್ರಿಂಜ಼್" ಸಾಮಾಜಿಕ ಮಾಧ್ಯಮಗಳ "ಹೈಪ್ಡ್ ಕ್ರೇಜ಼್" ಸಹ ಅದೆ ಅನುಕ್ರಮಣಿಕೆಯಲ್ಲಿ ಕಾಲನುಕಾಲಕ್ಕೆ ಒಂದೊಂದು ಸಾಮಾಜಿಕತೆಗಳಲ್ಲಿ ತನ್ನ ಪ್ರಭಾವ ಹಾಗೂ ಬಳಕೆಯ ತೀವೃತೆಯನ್ನ ಪ್ರಖರವಾಗಿ ತೋರುತ್ತಾˌ ಕಡೆಗೊಮ್ಮೆ ಹೊಸ ಆಟಿಕೆ ಸಿಕ್ಕ ಮಗುವಂತೆ ಬಳಸಲಷ್ಟು ಡೇಟಾ ಇದ್ದ ಕೈಫೋನೊಂದಿದ್ದಿದ್ದರೆ ಸಾಕೆ ಸಾಕಾಗಿದ್ದˌ ಸಕಲರೂ ಉಪಯೋಗಿಸಿ ಸಾಕಾಗಿ ಸದ್ಯ ಮೂಲೆ ಸೇರಿ ಹೋಗಿತ್ತು. ಈಗಿನ ಸಾಮಾಜಿಕ ಮಾಧ್ಯಮಗಳ ಪ್ರಭಾವ ಮೊದಲಿನಷ್ಟಿಲ್ಲ. ಕಾಲಾತೀತವಾಗಿ ಜನ ಅದರ ಬಳಕೆಯನ್ನ ಸೀಮಿತಗೊಳಿಸಿಕೊಂಡಿರೋದು ಸ್ಪಷ್ಟ.
ಸರಿಸುಮಾರು ಆರು ದಶಕಗಳ ಹಿಂದೆ ಮಹಾಮಾರಿಯಾಗಿ ಒಕ್ಕರಿಸಿ ಇಡಿ ಮಾನವ ಕುಲವನ್ನೆ ಎರಡೆರಡು ಸಲ ಕೊಂಚ ಹೆದರಿಸಿ ಕಾಡಿದ್ದ ಜಾಗತಿಕ ಕಾಯಿಲೆಯೊಂದರ ಹೊರತುˌ ಅಂತಹ ಹೇಳಿಕೊಳ್ಳುವಂತಹ ನಾಟಕೀಯ ಪಲ್ಲಟಗಳೇನೂ ಈ ಅರ್ಧ ಶತಮಾನದವಧಿಯಲ್ಲಿ ಘಟಿಸಿಲ್ಲ. ನಿರೀಕ್ಷೆಯಂತೆ ಉಳ್ಳವರ ದೇಶಗಳ ಮೂರನೆ ಜಾಗತಿಕ ಸಮರ ಅಭಿವೃದ್ಧಿಗೆ ತಹತಹಿಸುತ್ತಿದ್ದ ಬಡನಾಡುಗಳ ನೆಲದಲ್ಲಿ ನಡೆದದ್ದು ಬಿಟ್ಟರೆ. ಈ ಪ್ರಕ್ರಿಯೆಯಲ್ಲಿ ಪ್ರಪಂಚದ ನಕ್ಷೆಯಲ್ಲಿ ರಾಜಕೀಯ ಗಡಿಗಳು ಸ್ಥೂಲವಾಗಿ ಬದಲಾಗಿವೆ - ಹೊಸತಾದ ಒಂದಷ್ಟು ಸ್ವತಂತ್ರ ರಾಷ್ಟ್ರಗಳು ಉದ್ಭವಿಸಿವೆ ಹಾಗೂ ವಿಶ್ವ ನಾಯಕತ್ವದ ದಿಕ್ಕು-ದೆಸೆ ಬದಲಾಗಿದೆ. ಮೊದಲಿದ್ದವರಿಗಿಂತ ಕಡಿಮೆ ದುರಾಸೆಯ - ಒಡೆದಾಳುವ ಕುತಂತ್ರದ ಕೈಂಕರ್ಯವನ್ನ ಬಹುತೇಕ ಕೈಬಿಟ್ಟಿರುವ ಹೊಸ ತಳಿ ಜಗತ್ತಿನ ಪ್ರತಿಯೊಂದು ನಾಡಿನ ಚುಕ್ಕಾಣಿ ಹಿಡಿದು ಕೂತಿರೋದೊಂದು ಆಶಾದಾಯಕ ಬೆಳವಣಿಗೆ. ಅಪರಾ ತಪರಾ ಅಭಿವೃದ್ಧಿಯ ಗಡಿರೇಖೆ ಮೊದಲಿನಂತೆ ಮಹಾನಗರದ ಸ್ತರದಿಂದ ಆರಂಭವಾಗುವ ಕ್ರಮ ಶಾಶ್ವತವಾಗಿ ಕೊನೆಯಾಗಿˌ ಪ್ರತಿಯೊಂದು ಜಾಗತಿಕ ಪಲ್ಲಟಗಳೂ ಸಹ ಒಂದೆ ಸಮಯಕ್ಕೆ ಪ್ರಪಂಚದ ಮೂಲೆ ಮೂಲೆಗೂ ತಲುಪುವ ಹಾಗಿನ ಸ್ಥಿತಿ ಏರ್ಪಟ್ಟಿದೆ.
ಜಗತ್ತಿನ ಒಟ್ಟು ಜನಸಂಖ್ಯೆಯ ಮೂರನೆ ಒಂದು ಭಾಗ ಈಗಲೂ ಏಷಿಯಾದ ಚೀನಾ ಹಾಗೂ ಭಾರತದಲ್ಲೆ ಸಾಂದ್ರವಾಗಿದ್ದರೂ ಸಹˌ ಜಾಗತಿಕ ಜನಸಂಖ್ಯೆಯಲ್ಲಿನ ತೀವೃ ಕುಸಿತದ ಬಿಸಿ ಈ ಎರಡು ದೇಶಗಳಿಗೂ ಮುಟ್ಟಿದೆ. ಭಾರತವೀಗ ಒಂದಲ್ಲ ಎರಡು. ಉತ್ತರ ಹಾಗೂ ದಕ್ಷಿಣ ಭಾರತಗಳು ಪ್ರತ್ಯೇಕ ರಾಜಕೀಯ ಅಸ್ತಿತ್ವದ ಒಂದೆ ಗಣರಾಜ್ಯದ ಎರಡು ಭಾಗಗಳಾಗಿ ವಿಭಜಿತವಾಗಿದೆ. ಐದು ದಶಕಗಳಿಗೂ ಹಿಂದಿನ ಮಹಾರಾಷ್ಟ್ರ- ಒರಿಸ್ಸಾ - ಆಂಧ್ರಪ್ರದೇಶ - ಕರ್ಣಾಟಕ - ತಮಿಳುನಾಡು - ಗೋವಾ - ಕೇರಳಗಳು ಪ್ರತ್ಯೇಕವಾಗಿ ಸ್ಥಾಪಿಸಿಕೊಂಡಿರುವ ಸ್ವತಂತ್ರ ದಕ್ಷಿಣ ಭಾರತಕ್ಕೆ ಜಾಗತಿಕ ತಾಪಮಾನದ ಏರಿಕೆಯಿಂದ ತನ್ನ ತೀರಪ್ರದೇಶಗಳನ್ನೆಲ್ಲ ಸಾಗರಕ್ಕೆ ಈಗಾಗಲೆ ಆಹುತಿ ಕೊಟ್ಟಿರುವ ಶ್ರೀಲಂಕಾ ಹಾಗೂ ಅಲ್ಲೊಂದು ಇಲ್ಲೊಂದು ದ್ವೀಪ ಸಮುಚ್ಛಯಗಳ ಪಳಯುಳಕೆಗಳ ಹೊರತು ತನ್ನ ಅಸ್ತಿತ್ವವನ್ನೆ ಬಹುಪಾಲು ಕಳೆದುಕೊಂಡಿರುವ ಮಾಲ್ಡೀವ್ಸ್ ಸಹ ರಾಜ್ಯಗಳ ಸ್ವರೂಪದಲ್ಲಿ ಶಾಮೀಲಾಗಿ ಒಂದು ಘಟಕವಾಗಿದ್ದರೆˌ ರಕ್ತಸಿಕ್ತ ಹೋರಾಟ ನಡೆಸಿ ಬೇರೆಯಾಗಿದ್ದ ಹಿಂದಿನ ಪಾಕಿಸ್ತಾನದ ಭಾಗವಾಗಿದ್ದ ಸಿಂಧ್ ಪ್ರಾಂತ್ಯ ಹಾಗೂ ನಿರಂತರ ಪ್ರವಾಹ - ಭೂಕಂಪಗಳಿಂದ ಕೆಂಗೆಟ್ಟು ಪಾಪರ್ ಆಗಿದ್ದ ನೇಪಾಳವನ್ನ ಒಳಗೊಂಡಂತೆ ಉತ್ತರ ಭಾರತದ ಘಟಕ ಅಸ್ತಿತ್ವಕ್ಕೆ ಬಂದಿದೆ. ವಾಣಿಜ್ಯ ವ್ಯವಹಾರಗಳಲ್ಲಿ ಪರಸ್ಪರ ಸಮನ್ವಯತೆ ಸಾಧಿಸುವ ದೃಷ್ಟಿಯಿಂದ ಈ ಎರಡೂ ಘಟಕಗಳು ಜಾಗತಿಕವಾಗಿ ಒಂದೆ ಗಣರಾಜ್ಯವಾಗಿ ಗುರುತಿಸಿಕೊಂಡಿದ್ದರೂˌ ಅವುಗಳ ಅಭಿವೃದ್ಧಿಯ ನಡುಗೆಯ ಪಥ ಮಾತ್ರ ವಿಭಿನ್ನವಾಗಿವೆ. ಎರಡೂ ಘಟಕಗಳಿಗೆ ಹೋಗಿ ಕಿರು ಅವಧಿಗೆ ಉದ್ಯೋಗದ ಅಥವಾ ವಯಕ್ತಿಕ ಕಾರಣಗಳಿಂದ ಹೋಗಿದ್ದು ಬರಲು ಪರಸ್ಪರ ಘಟಕಗಳ ನಾಗರೀಕರಿಗೆ ಯಾವುದೆ ಪಾಸ್ಪೋರ್ಟ್ ಹಾಗೂ ವೀಸಾದ ಅಗತ್ಯವಿಲ್ಲವಾದರೂˌ ವ್ಯವಹಾರ ವಿಸ್ತರಣೆ ಅಥವಾ ಸ್ಥಳಾಂತರದಂತಹ ಉದ್ದೇಶವಿರುವವರಿಗೆ ಇನ್ನರ್ ಲೈನ್ ಪರ್ಮಿಟ್ ಹೊಂದಿದ್ದ "ಲೋಕಲ್ ರೆಸಿಡೆಂಟ್ ವೀಸಾ" ಪಾಲಿಸಿ ಅನ್ನುವ ಸ್ಥಳಿಯಾಡಳಿತಗಳು ಕೊಡುವ ವಾಸದ ಪರ್ಮಿಟ್ಟಿನಂತಹ ರೀಜನಲ್ ವೀಸಾವನ್ನ ಕಡ್ಡಾಯ ಮಾಡಲಾಗಿದೆ. ಈ ವೀಸಾ ನಿಯಮಾವಳಿಯಲ್ಲಿನ ಗಮನೀಯ ಅಂಶವೆಂದರೆ ಇದರಲ್ಲಿ ಒಂದು ಘಟಕದ ನಾಗರೀಕರು ಇನ್ನೊಂದು ಘಟಕದ ನಾಗರೀಕತೆಯನ್ನ ಪಡೆಯಲು ಅವಕಾಶವಿಲ್ಲ. ಏಕೈಕ ಪೌರತ್ವದ ಹಿಂದಿನ ಕಾನೂನು ಇನ್ನೂ ಕಡ್ಡಾಯವಾಗಿ ಪಾಲನೆಯಾಗುತ್ತಿತ್ತು. ಒಂದಾ ವೀಸಾ ವಿಸ್ತರಣೆ ಮಾಡಿಕೊಂಡು ಮತ್ತೊಂದು ನಿಗದಿತ ಅವಧಿಗೆ ಮತ್ತೊಂದು ಭಾರತದಲ್ಲಿ ಮುಂದುವರೆಯಬಹುದು ಅಥವಾ ನಿಗದಿತ ಅವಧಿ ಮುಗಿದ ನಂತರ ತಮ್ಮ ನಾಡಿಗೆ ಹಿಂದಿರುಗಬಹುದು ಅನ್ನುವ ಆಯ್ಕೆ ಅವನ್ನ ಹೊಂದಿದವರಿಗಿರುತ್ತದೆ. ಹಿಂದೆಂದೋ ಆಗಲೆ ಬೇಕಿದ್ದ ಈ ಬದಲಾವಣೆ ಸದ್ಯಕ್ಕೆ ಈ ತಲೆಮಾರಿನಲ್ಲಾದರೂ ಸಾಧ್ಯವಾಗಿದ್ದಕ್ಕೆ ಈಶ್ವರಯ್ಯರಿಗೆ ತೃಪ್ತಿಯಿತ್ತು.
ಏರುತ್ತಿದ್ದ ಜನಸಂಖ್ಯೆಯ ಗುಮ್ಮವನ್ನ ತೋರಿಸಿ ಈ ದೇಶವನ್ನ ಆದಷ್ಟು ದೋಚಲು ಆಗಿನ ಆಳುವ ಮಂದಿ ಮಾಡಿ ಬಿಸಾಕಿದ್ದ ಅಭಿವೃದ್ಧಿ ನೆಪದ ಅನೇಕ ಬದಲಾವಣೆಗಳು ಇಂದು ತೀವೃವಾಗಿ ಕುಸಿಯುತ್ತಿರೋ ಜನಸಂಖ್ಯೆಯಿಂದಾಗಿ ನಿರುಪಯುಕ್ತವಾಗಿದ್ದುˌ ಒಂದು ಬಗೆಯಲ್ಲಿ ಸಾಮಾಜಿಕ ಹೊರೆಯಾಗಿ ಪರಿಣಮಿಸಿತ್ತು. ಐವತ್ತು ವರ್ಷಗಳ ಹಿಂದೆ ಸುಮಾರು ನೂರೈವತ್ತು ಕೋಟಿಯವರೆಗೂ ಏರಿದ್ದ ಭಾರತೀಯರ ಜನಸಂಖ್ಯೆ ತನ್ನ ಉತ್ತುಂಗ ಮುಟ್ಟಿˌ ಅನಂತರ ನಾನಾ ಕಾರಣಗಳಿಂದ ಅರ್ಧಕ್ಕೂ ಹೆಚ್ಚು ಕುಸಿತ ಕಂಡು ಸರಿಸುಮಾರು ಎಪ್ಪತ್ತು ಕೋಟಿಗೆ ಇದೀಗ ಸ್ಥಿರವಾಗಿದ್ದರೂˌ ಈಗಲೂ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ಪಟ್ಟದಲ್ಲೆ ಎರಡೂ ಭಾರತಗಳು ಮುಂದುವರೆದಿದ್ದವು. ವಾಡಿಕೆಯಂತೆ ಗಣರಾಜ್ಯದ ಉತ್ತರ ಭಾರತದ ಘಟಕದ್ದೆ ಈ ವಿಷಯದಲ್ಲಿ ಪಾರಮ್ಯ ಸಹಜವಾಗಿ ಇತ್ತು. ಕುಸಿದಿರೋ ಜನಸಂಖ್ಯೆ ಮತ್ತೆ ಅದರಿಂದಾಚೆ ಮೇಲೇರುವ ಯಾವ ಸೂಚನೆಯೂ ಇರಲಿಲ್ಲ.
ಇತ್ತ ಭಾರತದ ವಾಸ್ತವ ಇದಾಗಿದ್ದರೆ. ಅತ್ತ ಚೀನಾದ ಜನಸಂಖ್ಯೆ ಸಹ ವಿಪರೀತವಾಗಿ ಕುಸಿದು ಕೇವಲ ಮೂವತ್ತು ಕೋಟಿಗೆ ಕೊನೆಗೂ ನಿಂತು ಏದುಸಿರು ಬಿಡುತ್ತಿತ್ತು. ಟಿಬೆಟ್ ಹಾಗೂ ಕ್ಸಿನ್ಕ್ಸಿಯಾಂಗ್ ಈಗ ಪ್ರತ್ಯೇಕ ದೇಶಗಳಾಗಿದ್ದವು. ಭೂತಾನ್ ಟಿಬೆಟ್ ಒಕ್ಕೂಟದ ಸದಸ್ಯನಾಗಿತ್ತು. ಜಾಗತಿಕವಾಗಿ ಅಮೇರಿಕಾದ ದಾದಾಗಿರಿ ಅದು ಐದು ಭಾಗಗಳಾಗಿ ವಿಭಜನೆಯಾಗಿರುವ ಕಾರಣ ಬಹುತೇಕ ಕೊನೆಗೊಂಡಿತ್ತು. ಹಿಂದೆ ಒಂದಾಗಿದ್ದಾಗ ಸುಮಾರು ನಲವತ್ತು ಕೋಟಿಯ ಆಸುಪಾಸಿನಲ್ಲಿದ್ದ ಈ ಐದೂ ಹೊಸ ದೇಶಗಳ ಜನಸಂಖ್ಯೆ ಈಗ ಒಟ್ಟಾರೆ ಲೆಕ್ಖ ಹಾಕಿದರೆ ಐದು ಕೋಟಿಯನ್ನ ಕೂಡ ಮೀರುತ್ತಿರಲಿಲ್ಲ. ಒಟ್ಟಿನಲ್ಲಿ ಜಗತ್ತಿನ ಯಾವ ಮೂಲೆಯಲ್ಲಾದರೂ ಸರಿ ಆಗಿರುವ ಅಪರಾ-ತಪರಾ ಅಭಿವೃದ್ಧಿಯ ಅಸ್ಥಿಪಂಜರಗಳನ್ನ ಮೂಸಿ ನೋಡುವವರಿಲ್ಲದೆ ಅವುಗಳಲ್ಲಿ ಬಹುಪಾಲು ಪಾಳು ಬೀಳುತ್ತಿದ್ದರೆˌ ಇನ್ನುಳಿದವುಗಳ ನಿರ್ವಹಣಾ ವೆಚ್ಚವೆ ಅವುಗಳಿಂದ ಹುಟ್ಟುವ ಆದಾಯಗಳಿಂದ ಹತ್ತಾರು ಪಟ್ಟು ಹೆಚ್ಚಾಗಿ ಜಾಗತಿಕ ಆರ್ಥಿಕತೆಗೆ ಅವು ಬಿಳಿಯಾನೆಗಳಂತೆ ಹೊರೆಯಾಗಿ ಪರಿಣಮಿಸಲಾರಂಭಿಸಿದ್ದವು.
ಐದು ದಶಕಗಳ ಹಿಂದಿನ ಪ್ರಾಕೃತಿಕ ಮಾನದಂಡವನ್ನ ಅನುಸರಿಸಿ ಹೇಳೋದಾದರೆˌ ಈ ಭೂಮಿ ಇಂತಹ ವೈರುಧ್ಯಗಳಿಂದ ಮತ್ತೆ ನಳನಳಿಸಿ ಚಿಗುರಿ ಮುಗುಳ್ನಗಬೇಕಿತ್ತು. ಆದರೆ ದುರಾಸೆಯ ಮನುಷ್ಯರು ನಾಲ್ಕು ದಶಕದ ಹಿಂದೆ ಎಸಗಿದ ಒಂದೆ ಒಂದು ದುಷ್ಟ ನಡೆಯ ದೆಸೆಯಿಂದ ಜಾಗತಿಕ ವಾತಾವರಣ ಮೊದಲಿಗಿಂತ ಕೆಟ್ಟು ಕೆರ ಹಿಡಿದ್ದದ್ದಷ್ಟೆ ಅಲ್ಲˌ ಇನ್ನೂ ಭಯಾನಕತೆಯ ಕೂಪದತ್ತ ನಿಧಾನವಾಗಿ ತೆವಳಲಾರಂಭಿಸಿತ್ತು. ಎಲ್ಲರೂ ಊಹಿಸಿದ್ದಂತೆ ಜಾಗತಿಕ ಪುಂಡ ದೇಶ ಪಾಕಿಸ್ತಾನದ ಆಡಳಿತದ ಚುಕ್ಕಾಣಿ ಧಾರ್ಮಿಕ ಮತಾಂಧರ ಕೈಸೇರಿˌ ಅವಸರಗೇಡಿತನ ತೋರಿದ ಅವರ ಮಡೆಯ ಧರ್ಮಾಂಧ ನಾಯಕ ಶಿಖಾಮಣಿಯೊಬ್ಬ ಎಲ್ಲರೂ ಊಹಿಸಿದ್ದಂತೆ ಅವರ ಊಹಾತ್ಮಕ ಅಜನ್ಮ ವೈರಿ ಭಾರತದ ಮೇಲೆ ಏರಿ ಬರುವ ಮುನ್ನವೆ ತನ್ನಲ್ಲಿದ್ದ ಬಲವಾದ ಕ್ಷಿಪಣಿಯನ್ನ ಬಳಸಿ ಪ್ರಬಲ ಅಮೇರಿಕಾದ ಪೂರ್ವ ತೀರದ ನ್ಯೂಯಾರ್ಕ್ ನಗರದತ್ತ ಗುರಿಯಿಟ್ಟು ಅಣುಬಾಂಬ್ ಉದುರಿಸಿ ಬಿಟ್ಟ. ತಕ್ಷಣಕ್ಕೆ ಹೌಹಾರಿದ ಅಮೇರಿಕನ್ನರು ಪ್ರತಿರೋಧ ತೋರಲು ಆರಂಭಿಸುವ ಮುನ್ನವೆˌ ಅವರ ಅಸಹಾಯಕತೆಯ ದುರ್ಲಾಭ ಪಡೆಯಲು ಹೊಂಚು ಹಾಕುತ್ತಿದ್ದ ಉತ್ತರ ಕೊರಿಯಾದ ತಲೆಕೆಟ್ಟ ಸರ್ವಾಧಿಕಾರಿ ಒಂದರ ಹಿಂದೊಂದರಂತೆ ಪಶ್ಚಿಮ ಕರಾವಳಿಯ ಲಾಸ್ ಎಂಜಲೀಸ್ ಹಾಗೂ ಒಳನಾಡಿನ ಟೆಕ್ಸಸ್ ಮೇಲೆ ತನ್ನ ಪ್ರಬಲ ಕ್ಷಿಪಣಿಯ ತಲೆಗೆ ಕಟ್ಟಿದ್ದ ಅಣುಬಾಂಬುಗಳನ್ನ ಉದುರಿಸಿ ಜಗತ್ತಿನ ಸರ್ವನಾಶಕ್ಕೆ ತಿದಿಯೊತ್ತಿದ.
ಏಕಕಾಲದಲ್ಲಿ ಎರಡೆರಡು ದಿಕ್ಕಿನಿಂದ ಬಂದೆರಗಿದ ವಿನಾಶದ ನಡುವೆಯೂ ಸಾವರಿಸಿಕೊಂಡ ಅಮೇರಿಕನ್ನರು ಅದೆ ತೀವೃತೆಯಲ್ಲಿ ಅಣುಬಾಂಬಿನಿಂದಲೆ ಮಾರುತ್ತರಿಸುವ ಗೋಜಿಗೆ ಹೋಗದೆˌ ತಮ್ಮಲ್ಲಿ ತಯಾರಾಗಿದ್ದ ಅದಕ್ಕಿಂತ ಪ್ರಬಲವಾಗಿದ್ದ ಸರ್ವನಾಶಕ ಶಸ್ತ್ರಾತ್ತ್ರಗಳನ್ನ ಮೊದಲ ಬಾರಿಗೆ ಪ್ರಯೋಗಾತ್ಮಕವಾಗಿಯೇನೋ ಅನ್ನುವಂತೆ ಇವೆರಡೆ ದೇಶಗಳ ಮೇಲೆ ನಿರ್ದಯೆಯಿಂದ ಪ್ರಯೋಗಿಸಿ ಆ ಎರಡೂ ದೇಶಗಳನ್ನ ತಹಬಂಧಿಗೆ ತಂದರು. ಭಾರತವೂ ಸೇರಿ ಜಗತ್ತಿನ ಉಳಿದೆಲ್ಲಾ ದೇಶಗಳು ಈ ನಿಟ್ಟಿನಲ್ಲಿ ಕೈ ಜೋಡಿಸಿ ಇಷ್ಟವಿಲ್ಲದಿದ್ದರೂ ಅಮೇರಿಕಾದ ಪರವಾಗಿ ಯುದ್ಧಾಂಗಣಕ್ಕೆ ಅಮೇರಿಕಾದ ಪರವಾಗಿ ಎರಗಲೆ ಬೇಕಾಯ್ತು. ಜಗತ್ತಿನ ಪುಟಗಳಿಂದ ಪಾಕಿಸ್ತಾನ ಹಾಗೂ ಉತ್ತರ ಕೊರಿಯಾಗಳೆಂಬ ದೇಶಗಳ ಅಸ್ತಿತ್ವವೆ ಒರೆಸಿ ಹೋಗಿ - ಯುದ್ಧೋತ್ತರ ಅಮೇರಿಕಾ ಐದು ಭಾಗಗಳಾಗಿ ವಿಭಜಿತವಾಗಿ ಜಗತ್ತಿನ ನಕ್ಷೆಯ ಜೊತೆಗೆ ಜಾಗತಿಕ ಶಕ್ತಿಕೇಂದ್ರಗಳ ವ್ಯಾಖ್ಯೆ ಸಹ ಈ ಮೂಲಕ ಬದಲಾಯಿತು. ಪಾಕಿಸ್ತಾನ ಹಾಗೂ ಉತ್ತರ ಕೊರಿಯವನ್ನ ಜಾಗತಿಕ ಭೂಪಟದಿಂದ ಅಳಿಸಿ ಹಾಕಿದ ಅಮೇರಿಕಾˌ ಇಂದಿಗೂ ಈ ಅಣುದಾಳಿಯ ತೀವೃತೆಯಿಂದ ಚೇತರಿಸಿಕೊಳ್ಳುತ್ತಾ ಸಿರಿವಂತ ದೇಶಗಳ ಪಟ್ಟಿಯಿಂದ ಏಕಾಏಕಿ ಕುಸಿದು ಈಗ ಭಾರತಕ್ಕಿಂತಲೂ ಹಿಂದುಳಿದು ಆಫ್ರಿಕಾದ ಸೋಮಾಲಿಯಾ ಹಾಗೂ ಲಿಬಿಯಾದಂತಹ ದೇಶಗಳ ಸಾಲಿಗೆ ಸೇರಿ ಹೋಯ್ತು. ನೇರವಾಗಿ ತಾನು ಧಾಳಿ ಮಾಡಿರದಿದ್ದರೂˌ ಉತ್ತರ ಕೊರಿಯಾ ಹಾಗೂ ಪಾಕಿಸ್ತಾನಗಳಂತಹ ಪ್ರಾಕ್ಸಿಗಳನ್ನ ಸಾಕಿ ಛೂ ಬಿಟ್ಟ ಸಂಚಿಗೆ ಹೊಣೆ ಮಾಡಿ ಚೀನಾವನ್ನೂ ಸಹ ಆಕ್ರಮಿಸಿದ ಪಾಶ್ಚಿಮಾತ್ಯ ಸೈನಿಕ ಶಕ್ತಿಗಳು ಅದನ್ನ ನಾಲ್ಕು ಭಾಗಗಳನ್ನಾಗಿ ಒಡೆದ ನಂತರವೆ ಈ ಯುದ್ಧ ಅಧಿಕೃತವಾಗಿ ಇಂದಿಗೆ ಎರಡು ದಶಕಗಳ ನಂತರ ನಿಂತದ್ದು. ಪಾಕಿಸ್ತಾನದಲ್ಲಿದ್ದ ಹಿಂದಿನ ಪಂಜಾಬ್ ಪ್ರಾಂತ್ಯವನ್ನಾಗಲಿ - ಉತ್ತರ ಕೊರಿಯವನ್ನಾಗಲಿ ಇನ್ನು ಹತ್ತಿಪ್ಪತ್ತು ಸಾವಿರ ವರ್ಷ ವಿಕಿರಣ ಸಹಿತವಾದ ನಾನಾ ಕಾರಣಗಳಿಂದ ಮನುಷ್ಯನಿರಲಿ ಯಾವುದೆ ಜೈವಿಕ ಕ್ರಿಯೆಗಳ ವಿಕಸನಕ್ಕಾಗಲಿ - ವಾಸಕ್ಕಾಗಲಿ ಅಯೋಗ್ಯವೆಂದು ವಿಶ್ವಸಂಸ್ಥೆ ಘೋಷಿಸಿಯೆ ಮೂರು ದಶಕದ ಮೇಲಾಯಿತು.
******
ಈ ಎಲ್ಲಾ ಅನಾಹುತಗಳಿಗೆ ಮೂಕ ಸಾಕ್ಷಿಯಾಗಿ ಉಳಿದುಕೊಂಡಿದ್ದ ಕೆಲವೆ ಕೆಲವು ಹಿರಿತಲೆಗಳಲ್ಲಿ ಈಗ ಈಶ್ವರಯ್ಯ ಸಹ ಒಬ್ಬರು. ಅಣುಬಾಂಬು ಬಿದ್ದಿದ್ದು ಸಾವಿರಾರು ಕಿಲೋಮೀಟರ್ ದೂರದ ಅಮೇರಿಕಾದ ನೆಲದ ಮೇಲಾಗಿದ್ದರೂˌ ಸರ್ವನಾಶಕ ಬಾಂಬುಗಳನ್ನ ಅಮೇರಿಕಾ ಉದುರಿಸಿದ್ದು ಭಾರತದ ಎರಡೂ ಪಕ್ಕದ ದೇಶಗಳ ಮೇಲೆನೆ ಅಂತಿದ್ದರೂˌ ಅದರ ಪಶ್ಚಾತ್ ಪರಿಣಾಮದ ಅಪಾಯಗಳು ಬೀಸುವ ಗಾಳಿ - ಹರಿಯುವ ನೀರಿನ ಮೂಲಕ ಸರ್ವವ್ಯಾಪಿಯಾಗಿದ್ದವು. ತಿನ್ನಲು ತತ್ವಾರವಾಗುವಂತೆ ಮುಂದಿನ ದಿನಮಾನಗಳಲ್ಲಿ ಎಲ್ಲೆಲ್ಲೂ ಬಿದ್ದ ಬರ ಹಾಗೂ ಹೊತ್ತು-ಗೊತ್ತು ಇಲ್ಲದಂತೆ ವಿಷದ ಮೋಡ ಬಾನಲ್ಲಿ ಕಟ್ಟಿ ದಢೀರನೆ ಸುರಿದು ಹೋಗುತ್ತಿದ್ದ ಕುಂಭದ್ರೋಣ ಆಸಿಡ್ ಮಳೆಯ ದೆಸೆಯಿಂದ ಕೃಷಿ ಯೋಗ್ಯ ಭೂಮಿಯ ಕೊರತೆ ಹೆಚ್ಚುತ್ತಲೆ ಹೋಯ್ತು. ಅಲ್ಪ-ಸ್ವಲ್ಪ ಕೃಷಿ ಭೂಮಿ ಹೊಂದಿದ್ದು ಅದರಲ್ಲಿ ಆಹಾರದ ಬೆಳೆ - ಧಾನ್ಯ ಬೆಳೆವ ರೈತರ ನಸೀಬೆ ಈ ಹಂತದಲ್ಲಿ ಬದಲಾಯಿಸಿ ಹೋಯ್ತು. ಅನ್ನದ ಬೆಲೆ ಚಿನ್ನದ ಬೆಲೆಗೆ ಪೈಪೋಟಿ ಕೊಡುವಂತೆ ಏರ ತೊಡಗಿತು. ಕಾಳಸಂತೆಯಲ್ಲಿ ಹೊಟ್ಟೆ ತುಂಬಿಸಲು ಅಗತ್ಯವಾದ ವಿಷಮುಕ್ತ ಆಹಾರ ಪದಾರ್ಥಗಳನ್ನ ಮಾರುತ್ತಿದ್ದವರಿಗಂತೂ ಈ ವಿಪರೀತ ಕಾಲ ಸುಗ್ಗಿಯಾಗಿ ಪರಿಣಮಿಸಿತು.
ಆದರೆ ಇದಕ್ಕಿದ್ದ ಒಂದೆ ಒಂದು ನಿರ್ಬಂಧವೆಂದರೆˌ ಯಾವುದೆ ಬೆಳೆಯನ್ನಾಗಲಿ ಸ್ವಸ್ಥ ಆರೋಗ್ಯದ ದೃಷ್ಟಿಯಿಂದ ಸೇವಿಸಬೇಕಿದ್ದರೆ ಆದಷ್ಟು ಅದನ್ನ ಮುಚ್ಚಿಗೆಯಿರುವ ಹಸಿರು ಮನೆಗಳೊಳಗೆ ಬೆಳೆಸಬೇಕಿತ್ತು. ಹೊರಗಿನ ಕಲುಷಿತ ಗಾಳಿ - ಕ್ರಮೇಣ ವಿಶ್ವದಾದ್ಯಂತ ಹರಡಿದ ಭೀಕರ ಅಣುದಾಳಿಯ ಹೊಂಜು ದಾಟಿ ಬರುತ್ತಲೆ ವಿಕಿರಣವನ್ನ ಹೊತ್ತು ತಂದು ಸುರಿಯುತ್ತಿದ್ದ ನೇರ ಸೂರ್ಯನ ಬಿಸಿಲು ಹಾಗೂ ಸುಳಿವನ್ನೆ ಕೊಡದೆ ಮೋಡ ಕಟ್ಟಿ ಕಪ್ಪಾಗಿ ವಿಕಿರಣದ ವಿಷ ಹೊತ್ತು ಸುರಿಯುತ್ತಿದ್ದ ಆಸಿಡ್ ಮಳೆಯ ನೇರ ಸಂಪರ್ಕ ಕಡಿಮೆಯಾದಷ್ಟೂ ಬೆಳೆಗಳಾಗಲಿ - ಸಾಕಿ ತಿನ್ನುವ ಪ್ರಾಣಿಗಳಾಗಲಿ - ಮೀನುಗಳಾಗಲಿ ಆರೋಗ್ಯಕ್ಕೆ ಪೂರಕವಾಗುತ್ತಿದ್ದವು. ಉಳಿದಂತೆ ತೆರೆದ ಜಾಗದಲ್ಲಿ ಬೆಳೆದ ಬೆಳೆಯನ್ನಾಗಲಿ - ಮಾಂಸವನ್ನಾಗಲಿ ತಿಂದು ರೋಗಗ್ರಸ್ಥವಾಗಿ ಕ್ರಮೇಣ ನರಳಿ ನರಳಿ ಇಂಚಿಂಚಾಗಿ ಸಾಯುವುದಕ್ಕಿಂತˌ ಏನನ್ನೂ ತಿನ್ನದೆ ಉಪವಾಸವಿದ್ದು ಜೀವ ತ್ಯಜಿಸುವುದೆ ಹೆಚ್ಚು ಸುಖಕರ ಅನ್ನುವ ಪರಿಸ್ಥಿತಿ ಉದ್ಭವಿಸಿತ್ತು. ಹೊರಗಡೆ ಸುತ್ತಾಡುವಾಗ ಬಂದೆರಗುವ ವಿವಿಧ ಬಗೆಯ ವಿಕಿರಣದ ಧಾಳಿಯಿಂದ ಪಾರಾಗಲು ಬಳಸಬೇಕಿದ್ದ ಮುಚ್ಚಿಗೆಯ ವಸ್ತ್ರಗಳ ಮಾರಾಟವೂ ವೃದ್ಧಿಸಿತ್ತು.
ಇದೆಲ್ಲ ಆಗುವ ಮೊದಲೆ ತನ್ನ ದುಡಿಮೆಯನ್ನ ನೆಲದ ಮೇಲೆ ಸುರಿದುˌ ಪೇಟೆಯಲ್ಲಿ ಮನೆಗಳನ್ನ ಖರೀದಿಸುವ ಮುನ್ನವೆ ಗ್ರಾಮೀಣ ಭಾಗಗಳಲ್ಲಿ ಆದಷ್ಟು ನಿಲುಕುವಷ್ಟು ದರದ ಕೃಷಿಭೂಮಿ ಖರೀದಿಸಿಟ್ಟುˌ ಅಲ್ಲಿ ಅದೆಷ್ಟೆ ಕಷ್ಟವಾದರೂ ಗೊಬ್ಬರವಾಗಿಯಾಗಲಿˌ ಕೀಟನಾಶಕವಾಗಿಯಾಗಲಿ ಅಥವಾ ಸಂರಕ್ಷಕವಾಗಿಯಾಗಲಿ ಯಾವುದೆ ರಾಸಾಯನಿಕಗಳನ್ನ ಬಳಸಲೆ ಬಾರದು ಎಂದು ದೃಢ ನಿರ್ಧಾರ ಮಾಡಿˌ ಕೃಷಿ-ಹೈನುತ್ಪಾದನೆ-ಮಾಂಸೋತ್ಪಾದನೆ ಆರಂಭಿಸಿದ್ದ ಈಶ್ವರಯ್ಯನವರ ರೊಟ್ಟಿ ತುಪ್ಪದ ಬಾಂಢದಲ್ಲಿ ಬಿದ್ದದ್ದಷ್ಟೆ ಅಲ್ಲˌ ಇಂತಹ ಲೋಕಕಂಟಕದ ಹೊತ್ತಲ್ಲಿ ಮುಳುಮುಳುಗೇಳತೊಡಗಿತು.
( ಇನ್ನೂ ಇದೆ.)
No comments:
Post a Comment