21 April 2009

ಅಕಾಲದ ಮಳೆಗೆ ನಾಲ್ಕು ಸಾಲು...

ಸಂಜೆ ಸುರಿವ ಮಳೆಗೆ....

ಅದನು ಹೊತ್ತ ಮುಗಿಲಿಗೆ/

ತೊಯ್ದ ಧರೆಯ ಕದ್ದು ನೋಡೋ ತವಕದ,

ಹಸಿದ ಕಂಗಳ ನೇಸರನದೆ ಕುಮ್ಮಕ್ಕು//

ಉತ್ಕಟ ಒಲವಿನಾಟದಲ್ಲಿ,

ಬಾನ ಕೊರಳಿನ ಸರ ಕಳಚಿ/

ಉದುರಿದ ಬಿಡಿ ಮುತ್ತ ರಾಶಿ,

ರಾತ್ರೆ ಬಿರುಮಳೆಗೆ ಸುರಿದ ಹನಿಗಳು//

ದುಃಖ ಒತ್ತರಿಸಿಬಂದು ಬಿಕ್ಕುವ ನಭ/

ಸುರಿಸಿದ ಕಂಬನಿಗಳೆಲ್ಲ...

ಧರೆಯು ಬತ್ತಲಾಗಿರುವಲೆಲ್ಲ,

ಸಂತಸದ ಮೊಳಕೆಯೊಡೆಸಿದೆ//

ಘಮ್ಮೆನ್ನುವ ನೆಲದ ಮೈ ಗಂಧಕ್ಕೆ/

ಮನ ಸೋತ ಮುಗಿಲಿನದೆ ಸಂಚು...

ಹುಚ್ಚು ಹನಿವ ಈ ಮಳೆ//

ಕಾಯಿಸಿ ಸತಾಯಿಸಿ,

ಇನ್ನು ತಡೆಯಲಾಗದೆಂದಾಗ ತುಸು ತೋಯಿಸಿ/

ಬಳಲಿ ಶರಣಾಗುವಂತೆ....

ಬಲವಂತಕ್ಕಿಳಿಯುವ ಮುಗಿಲಿನದೆ ಹಿತವಾದ ಪಿತೂರಿ,

ಬಿತ್ತು ಮಳೆ ಹನಿಯಾಗಿ ನೆಲದೆಡೆಗೆ ಜಾರಿ//

No comments: