15 October 2011

ಮರಳುಗಾಡಿನ ಮರ್ಮರ...(ಭಾಗ -3)

ಈ ಕಾಬಾ ಗುಡಿಯ ಸ್ಥಾಪನೆ,ಆರಾಧನೆ ಅರೇಬಿಯಾದ ಪುರಾಣ ಕಥೆಗಳಲ್ಲಿ ಬರುವ ಯಹೂದಿ ಹಾಗು ಕ್ರೈಸ್ತರ ಪ್ರವಾದಿ ಅಬ್ರಾಹಂನಿಂದ ಆಯಿತು ಎಂದು ಮುಸ್ಲೀಮರು ನಂಬುತ್ತಾರೆ.ದೇವರು ಅಬ್ರಾಹಂನನ್ನು ಭೂಮಿಗೆ ಕಳುಹಿಸಿ "ದೇವರೊಬ್ಬನೆ ಹಾಗೂ ಅಬ್ರಾಹಂ ಆತನ ಪ್ರತಿನಿಧಿ" ಎಂದು ಸಾರಲು ಆದೇಶಿಸುತ್ತಾನೆ.ಈ ಅಬ್ರಾಹಂನಾದರೋ ಸ್ವತಹ ಪ್ರವಾದಿಯಾಗಿದ್ದರೂ ಕೇವಲ ಮೂರೆ ಬಾರಿ ತನ್ನ ಜೀವನದಲ್ಲಿ ಸುಳ್ಳುಹೇಳಿರುತ್ತಾನೆ.ಎರಡು ಬಾರಿ ದೇವರ ಸಲುವಾಗಿ "ನನಗೆ ಸೌಖ್ಯವಿಲ್ಲ" ಅಂತಲೂ,"ಇಗೋ! ಇದೆ ಆ ಬೃಹತ್ ವಿಗ್ರಹ ಎಸಗಿದೆ!" ಅಂತಲೂ ಹಾಗೂ ಮೂರನೆಬಾರಿ ತನ್ನ ಮಡದಿ ಸಾರಾಳ ದೆಸೆಯಿಂದ ಸುಳ್ಳು ಹೇಳುತ್ತಾನೆ.ಆ ಸುಳ್ಳಿನ ಕಥೆ ಹೀಗಿದೆ.ಅಲೆಮಾರಿಯಾಗಿದ್ದ ಅಬ್ರಾಹಂ ಹೀಗೆ ಸುತ್ತುತ್ತಾ ಪ್ರಜಾಪೀಡಕನಾಗಿದ್ದ ರಾಜನೊಬ್ಬನ ರಾಜ್ಯಕ್ಕೆ ಬಂದಾಗ ಆ ಕಟುಕ ರಾಜ ತನ್ನ ಹೆಂಡತಿಗಾಗಿ ಹಂಬಲಿಸಿಯಾನು ಎಂದರಿತು,ಹೆಂಡತಿಗೆ 'ತಾನು ಅವಳ ಅಣ್ಣನೆಂದು...ಪತಿಯಲ್ಲವೆಂದೂ!' ಹೇಳುವಂತೆ ತಿಳಿಸುತ್ತಾನೆ.ಅವನು ನೆನೆಸಿದಂತೆ ರಾಜದೂತರು ಅವಳನ್ನು ರಾಜನ ಸನ್ನಿಧಿಗೆ ಕೊಂಡೊಯ್ಯುತ್ತಾರೆ.ಅಲ್ಲಿ ಅವಳನ್ನು ಕಂಡು ಮೋಹಿಸುವ ರಾಜ ಅವಳ ಕೈ ಹಿಡಿಯಲು ಧಾವಿಸುತ್ತಾನೆ.ದುರದೃಷ್ಟವಶಾತ್ ಆ ಕೈ ಭದ್ರವಾಗಿ ಅಲ್ಲಿಯೆ ಅಂಟಿಕೊಂಡು ಬಿಡುತ್ತದೆ! ಹೆದರಿದ ರಾಜ "ದಯವಿಟ್ಟು ಕೈ ಬಿಡುಗಡೆಯಾಗುವಂತೆ ದೇವರನ್ನು ಬೇಡಿಕೊ"ಎಂದು ಯಾಚಿಸಲು ಆಕೆ ಬೇಡಿದಾಗ ಕೈ ಬಿಡುಗಡೆಯಾಗುತ್ತದೆ.ನಿಟ್ಟುಸಿರು ಬಿಡುವ ರಾಜ ಅವಳ ದೈವಿಶಕ್ತಿಗೆ ಹೆದರಿ ಅವಳಿಗೊಬ್ಬ ಗುಲಾಮ ಹೆಣ್ಣನ್ನು ಬಳುವಳಿಯಾಗಿ ಕೊಟ್ಟು ತನ್ನ ಆಸ್ಥಾನದಿಂದ ಹೊರಗಟ್ಟುತ್ತಾನೆ.ಇತ್ತ ಪತ್ನಿಯನ್ನ ರಾಜನ ಬಳಿ ಕಳುಹಿಸಿ ದೈವದ ಮೊರೆಹೋಗಿದ್ದ ಅಬ್ರಾಹಂ ಈ ಪರಿ ಆಕೆ ಮರಳಿ ಬಂದಾಗ ಸಂತೋಷಗೊಂಡು ಕೂಡಲೆ ಇರಾಕ್ ಹಾಗು ಸಿರಿಯಾದ ದಿಕ್ಕಿಗೆ ಪ್ರಯಾಣಿಸುತ್ತಾನೆ.

ಹೀಗೆ ಸಾಗುವಾಗ ಗುಲಾಮ ಹೆಣ್ಣು ಹಾಜರಾಳೊಂದಿಗೆ ಅಬ್ರಾಹಂ ನಡೆಸುವ ದೈಹಿಕ ಸಂಬಂಧದಿಂದ 'ಇಸ್ಮಾಯಿಲ್' ಎಂಬ ಬಾಲಕನ ತಂದೆಯಾಗುತ್ತಾನೆ.ಅದರಿಂದ ಸವತಿ ಮಾತ್ಸರ್ಯಕ್ಕೆ ತುತ್ತಾಗುವ ಸಾರಾಳ ಒತ್ತಡ ತಾಳಲಾರದೆ ತಾಯಿ-ಮಗ ಇಬ್ಬರನ್ನೂ ಮೆಕ್ಕಾಗೆ ತಂದು ಬಿಡುತ್ತಾನೆ.ಇತ್ತ ಮರಳಿ ಸಾರಾಳನ್ನ ಬಂದು ಸೇರುವ ಅಬ್ರಾಹಂ ಅವಳಿಂದ ಐಸಾಕ್ ಹಾಗೂ ಜಾಕೊಬ್ ಎಂಬ ಮಕ್ಕಳನ್ನ ಪಡೆಯುತ್ತಾನೆ.

ಅಬ್ರಾಹಂ ಮೆಕ್ಕಾದ ಎತ್ತರ ಪ್ರದೇಶವೊಂದರ ಮರದಡಿ ಹಾಜರ ಮತ್ತು ಇಸ್ಮಾಯಿಲ್ ಇಬ್ಬರನ್ನೂ ಬಿಟ್ಟು ಹೋದನಲ್ಲ,ಜನವಸತಿಯಾಗಲಿ-ಜಲವಸತಿಯಾಗಲಿ ಇಲ್ಲದ ಈ ಬರಡು ಭೂಮಿಯಲ್ಲಿ ಹೀಗೆ ತ್ಯಜಿಸಿ ಹೋಗುವವನನ್ನ ಹಜರಾ ಹಿಂಬಾಲಿಸಿ ಹೋಗುತ್ತಾಳೆ.'ನಮ್ಮನ್ನು ಅನಾಥರಾಗಿ ಈ ಅಪರಿಚಿತ ಸ್ಥಳದಲ್ಲಿ ಬಿಟ್ಟು ಎಲ್ಲಿ ಹೋಗುತ್ತೀಯ?' ಎಂದವಳು ಕೇಳಿದಾಗ ಅವನಿಂದ ಉತ್ತರ ಬರುವುದಿಲ್ಲ.ಆಕೆ ಪುನಃ 'ದೇವರ ಆದೇಶದಂತೆ ನೀನು ಈ ಕೆಲಸ ಮಾಡುತ್ತಿರುವುದಾ?" ಎಂದು ಮರುಪ್ರಶ್ನಿಸಿದಾಗ ಅಬ್ರಾಹಂ "ಹೌದು!" ಎಂದೆ ಉತ್ತರಿಸುತ್ತಾನೆ. 'ಯಾರ ಆಸರೆಯಲ್ಲಿ ನಾವಿರಬೇಕು?' ಎನ್ನುತ್ತಾಳವಳು....ಇವನ ಉತ್ತರ "ದೇವರು!"."ಹೀಗಿದ್ದರೆ ನಾನಿದನ್ನು ಸ್ವೀಕರಿಸುವೆ" ಎನ್ನುವ ಆಕೆ ಹಿಂದಿರುಗುತ್ತಾಳೆ.

ಹೀಗೆ ಹಜರಾ ಮರೆಯಾದ ನಂತರ ಅಬ್ರಾಹಂ ಈಗಿರುವ ಕಾಬಾದ ಕಡೆಗೆ ಮುಖಮಾಡಿ ದೇವರನ್ನು "ನನ್ನ ಹೆಂಡತಿ ಹಜರಾ ಹಾಗು ಮಗು ಇಸ್ಮಾಯಿಲ್'ನನ್ನು ಈ ಪವಿತ್ರ ಕಣಿವೆಯ ಬಳಿ ಬಿಟ್ಟಿದ್ದೇನೆ...ಅವರಿಗೆ ಸುಖ ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸುತ್ತಾನೆ.

ಇತ್ತ ಹಾಜರಾ ತನ್ನೊಂದಿಗೆ ಇದ್ದ ಚರ್ಮದ ಚೀಲದಲ್ಲಿದ್ದ ನೀರನ್ನೆಲ್ಲ ಕುಡಿದಾದ ನಂತರ ತನ್ನ ಮಗುವಿಗೆ ಹಾಲೂಡಿಸುತ್ತಾಳೆ,ಆದರೆ ಅವಳ ದಾಹ ಹೆಚ್ಚುತ್ತದೆ.ಕೂಸನ್ನು ಅಲ್ಲಿಯೆ ಬಿಟ್ಟು ನೀರಿಗಾಗಿ ಹುಡುಕುತ್ತ ಅಲೆದು ಹತ್ತಿರದ 'ಸಾಫಾ' ಗಿರಿಯನ್ನೇರುತ್ತಾಳೆ. ಶಿಖರದ ಮೇಲೇರಿ ದೂರದೂರದವರೆಗೆ ದಿಟ್ಟಿಸಿದರೂ ಜನವಸತಿ ಕಾಣದೆ ಹತಾಶಳಾಗುತ್ತ ಹತ್ತಿರದ ಇನ್ನೊಂದು ಗಿರಿ 'ಮಾರ್ವ'ವನ್ನೇರಿದಾಗ ಅವಳಿಗೊಂದು ಅಶರೀರವಾಣಿ ಕೇಳಿಸುತ್ತದೆ. "ಒಹ್! ನನಗೆ ನೀನು ಕೇಳಿಸುತ್ತಿದ್ದೀಯ! ನನಗೆ ಸಹಾಯಕವಾಗಲು ನಿನ್ನ ಬಳಿ ಏನಿದೆ?" ಎಂದಾಕೆ ದಿಗ್ಭ್ರಮೆಯಿಂದ ಕೇಳಲು ಅವಳಿಗೆ ಕಂಡದ್ದು ಒಬ್ಬ ಯಕ್ಷ.ಮೆಕ್ಕಾದ 'ಜುಮ್ ಜುಮ್' ಎಂಬಲ್ಲಿ ಆತ ತನ್ನ ಹಿಮ್ಮಡಿಯಿಂದ ನೆಲ ಅಗಿಯುತ್ತಿರುವಾಗ ಅಲ್ಲಿ ಜಲಧಾರೆ ಉಕ್ಕುತ್ತದೆ.ಆಗ ತಡ ಮಾಡದೆ ಆ ನೀರನ್ನೆಲ್ಲ ತನ್ನ ತೊಗಲಿನ ಚೀಲಕ್ಕೆ ತುಂಬಿಕೊಳ್ಳುವ ಆಕೆ ಅಲ್ಲಿಯೆ ತಂಗುತ್ತಾಳೆ.ಕಾಲಕ್ರಮೇಣ ನೀರು ಕಂಡ ಪಕ್ಷಿಗಳೂ,ಅದರ ಜಾಡು ಹಿಡಿದ ಬುಡಕಟ್ಟಿನವರೂ ಅಲ್ಲಿ ಬಂದು ತಂಗುತ್ತಾರೆ.ಹೀಗೆ ಹಾಜಿರಾ ನೆಮ್ಮದಿಯ ಬಾಳನ್ನು ಕಾಣುವಂತಾಗುತ್ತದೆ.ಕಾಲಾ ನಂತರ ಅವಳ ಮರಣವಾಗಿ,ವಯಸ್ಕನಾಗುವ ಅವಳ ಮಗನಿಗೆ ಅದೆ ಬುಡಕಟ್ಟಿನವರು ಹೆಣ್ಣುಕೊಟ್ಟು ಮದುವೆ ಮಾಡುತ್ತಾರೆ.ಹೀಗೆ ಅವನ ಸಂಸಾರ ಸಾಗುತ್ತಿರುವಾಗ ಅಬ್ರಾಹಂ ತಾನು ತೊರೆದು ಹೋದ ಕುಟುಂಬವನ್ನ ನೋಡಲು ಬರುತ್ತಾನೆ.ಆದರಾಗ ಇಸ್ಮಾಯಿಲ್ ಮನೆಯಲ್ಲಿರುವುದಿಲ್ಲ.ಅವನು ಅನ್ನ ಸಂಪಾದಿಸಲು ಹೊರಗೆ ಹೋಗಿದ್ದಾನೆನ್ನುವ ಹೆಂಡತಿಗೆ "ನಿನ್ನ ಗಂಡನಿಗೆ ನನ್ನ ವಿಜ್ಞಾಪನೆ ತಿಳಿಸು ಹಾಗೂ ಮನೆಯ ಹೊಸ್ತಿಲನ್ನ ಶೀಘ್ರ ಬದಲಿಸೋಕೆ ಹೇಳು!" ಎನ್ನುವ ಅಬ್ರಾಹಂ ಅಲ್ಲಿಂದ ನಿರ್ಗಮಿಸುತ್ತಾನೆ.ಯಾಥಾವತ್ ಮಾತುಗಳನ್ನ ಗಂಡ ಬಂದಾಗ ಆಕೆ ಅರುಹಿದಾಗ.ಒಡನೆಯೆ ಇಸ್ಮಾಯಿಲ್ " ಒಹ್! ಬಂದಿದ್ದವನು ನನ್ನ ತಂದೆ ಅವನು ನಿನ್ನನ್ನು ತ್ಯಜಿಸಲು ಹೇಳಿದ್ದಾನೆ! ಎಂದವನೆ ಆಕೆಗೆ ವಿಚ್ಚೇದನ ಕೊಟ್ಟು ಇನ್ನೊಬ್ಬಳನ್ನ ಕಟ್ಟಿಕೊಳ್ಳುತ್ತಾನೆ.ಆಕೆ ತವರಿಗೆ ಮರಳುತ್ತಾಳೆ.

ಪುನಃ ಸ್ವಲ್ಪ ಕಾಲದ ನಂತರ ಅಬ್ರಾಹಂ ಮಗನ ಮನೆಗೆ ಬರುತ್ತಾನೆ.ಆತನ ಹೊಸ ಹೆಂಡತಿಯನ್ನ ನೋಡಿ ಸಂಸಾರದ ಸ್ಥಿತಿಗತಿಯನ್ನ ವಿಚಾರಿಸಿದಾಗ ಆಕೆ "ನಾವು ಚೆನ್ನಾಗಿದ್ದೇವೆ" ಎಂದು ತಿಳಿಸುತ್ತಾಳೆ.ಸಂತುಷ್ಟನಾಗುವ ಅಬ್ರಾಹಂ "ಆತನಿಗೆ ನನ್ನ ವಿಜ್ಞಾಪನೆ ತಿಳಿಸು ಹಾಗೂ ಮನೆಯ ಹೊಸ್ತಿಲನ್ನ ಭದ್ರವಾಗಿರಿಸಿಕೊಳ್ಳಲು ತಿಳಿಸು" ಎಂದು ಹೇಳಿ ಮರೆಯಾಗುತ್ತಾನೆ.ಪತಿ ಮನೆಗೆ ಬಂದಾಗ ಅವಳು ಆತನಿಗಿದನ್ನ ತಿಳಿಸಿದಳು.ಆಗ ಇಸ್ಮಾಯಿಲ್ "ಬಂದವನು ನನ್ನ ತಂದೆ! ನಿನ್ನನ್ನ ತ್ಯಜಿಸದೆ ಇಟ್ಟುಕೊಳ್ಳಲು ನನಗೆ ಉಪದೇಶವಾಗಿದೆ" ಎಂದಂದ.ಮುಂದೊಮ್ಮೆ ಮರಳಿ ಅಬ್ರಾಹಂ ಮಗನನ್ನು ಹುಡುಕಿಕೊಂಡು ಬಂದಾಗ ಅವನಿಗೆ ಮಗನ ಸಹಾಯವೂ ಸೇರಿ ಮೊತ್ತ ಮೊದಲಿಗೆ 'ಕಾಬಾ'ದ ಗುಡಿ ಮೇಲೆದ್ದಿತು ಅನ್ನುವುದು ಐತಿಹ್ಯ.

(ಇನ್ನೂ ಇದೆ....)

No comments: