24 October 2011

ವಲಿ....(ಭಾಗ-7)

ಈ ರೀತಿ ಮತ ಪರಿವರ್ತಿತವಾದವರು ಮೆಕ್ಕಾ ಬಿಟ್ಟು ಅಬಿಸೀನಿಯಕ್ಕೆ ವಲಸೆಹೋದರು ಸಹ ಮಹಮದನಿಗೆ ಖುರೈಷಿಗಳ ಕಾಟ ತಪ್ಪಲಿಲ್ಲ.ದೊಡ್ಡಪ್ಪ ಅಬು ತಾಲೀಬನ ಸುರಕ್ಷೆ ಇದ್ದ ಕಾರಣದಿಂದ ಅದು ಹೇಗೊ ಅವನ ರಕ್ಷಣೆ ಚ್ಯುತಿಯಿಲ್ಲದಂತೆ ಸಾಗುತ್ತಿತ್ತು.ಇತ್ತ ಅವನ ಈ ರಕ್ಷಣಾ ಅಭಯದ ವಿರುದ್ಧವಾಗಿ ಅಬು ತಾಲೀಬನಿಗೆ ಖುರೈಷಿಗಳು ತಾಳಲಾರದಷ್ಟು ಒತ್ತಡಗಳನ್ನು ತರಲಾರಂಭಿಸಿದರು.ವಯೋವೃದ್ಧನಾಗಿದ್ದ ಅಬು ತಾಲಿಬ್ ನಿಜಕ್ಕೂ ಈಗ ಅಡಕತ್ತರಿಯಲ್ಲಿ ಸಿಕ್ಕು ಹಾಕಿಕೊಂಡಿದ್ದ.ತನ್ನ ಆಶ್ರಯದಲ್ಲಿದ್ದ ಮಹಮದನ ಕಾರಣಕ್ಕೆ ಅವನು ತನ್ನ ಸಮಾಜವನ್ನೆ ಎದುರು ಹಾಕಿಕೊಳ್ಳುವ ಪರಿಸ್ಥಿತಿ ಉದ್ಭವಿಸಿತ್ತು.ಖುರೈಷಿಗಳು ಮಹಮದನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಅವನ ಮೇಲೆ ಅಪಾರ ಒತ್ತಡ ತಂದಾಗ ಅದನ್ನು ತಾಳಲಾರದೆ ಮಹಮದನಿಗೆ ತಾನಿನ್ನು ಅವನ ರಕ್ಷಣೆಯ ಹೊಣೆ ಹೊರಲಾರೆನೆಂದು ಹೇಳಿ,ಅವನೆ ಸ್ವರಕ್ಷಣೆಗೆ ಕಾಳಜಿ ವಹಿಸಿಕೊಳ್ಳುವುದು ಸೂಕ್ತ ಎಂಬ ಸೂಚನೆ ನೀಡಿದನು.ಅದನ್ನು ಕೇಳಿದ್ದೆ ತಡ ಮಹಮದ್ ಅಪ್ರತಿಭನಾಗಿ ಕಣ್ಣೀರುಗೆರೆದನು.ಈ ಕಂಬನಿಯನ್ನು ಕಂಡು ಕರುಣಾಮಯಿಯಾದ ಅಬು ತಾಲೀಬನ ಅಂತಕರಣ ತುಂಬಿಬಂದು ಮರಳಿ ಅವನ ರಕ್ಷಣೆಯ ಹೊಣೆಹೊರಲು ಆತ ಕಟೀಬದ್ಧನಾದ.ಅವನ ಮೊದಲ ಮಾತುಗಳನ್ನು ಕೇಳಿ ನೊಂದಿದ್ದ ಮಹಮದ್ ವ್ಯಾಕುಲಗೊಂಡು ಮನೆಯಿಂದ ಹೊರಹೋಗಿದ್ದವನು ಲುಪ್ತ ಸಮಯಕ್ಕೆ ಮರಳಿ ಬಾರದಿರುವುದನ್ನು ಕಂಡು ಖುರೈಶಿಗಳಿಂದ ಆತನ ಪ್ರಾಣಕ್ಕೆ ಕುತ್ತು ಒದಗಿ ಬಂದಿರಬಹುದು ಎಂದು ಅಬು ತಾಲಿಬ್ ಗಾಬರಿಗೊಂಡ.ಅದೆ ಸಂಶಯದಲ್ಲಿ ಆಯುಧಪಾಣಿಯಾಗಿ ತನ್ನವರೊಂದಿಗೆ ಮಹಾಮದನನ್ನು ಹುಡುಕುತ್ತಾ ಹೊರಟಾಗ ಬೀದಿಯ ಕೊನೆಯಲ್ಲಿ ಅವನಿಗೆ ಮಹಮದ್ ಎದುರಾದ.ಕೂಡಲೆ ಅಲ್ಲಿಂದಲೆ ಅವನನ್ನು ಕರೆದುಕೊಂಡು ಕಾಬಾದತ್ತ ಸಾಗಿದ ಅಬು ತಾಲಿಬ್ ಅಲ್ಲಿ ನೆರೆದಿದ್ದ ಖುರೈಷಿಗಳನ್ನು ಉದ್ದೇಶಿಸಿ "ನೋಡಿ ಇಂದು ನಿಮ್ಮೆಲ್ಲರಿಂದ ಮಹಮದನಿಗೆ ಹಾನಿಯಾಗಿದ್ದಿರಬಹುದೆಂದು ಊಹಿಸಿದ್ದೆ.ಹಾಗೇನಾದರೂ ಆಗಿದ್ದೆ ಹೌದಾಗಿದ್ದಿದ್ದಲ್ಲಿ ನಿಮ್ಮಲ್ಲಿ ಒಬ್ಬರೂ ಇಲ್ಲಿ ಉಸಿರಿನೊಂದಿಗೆ ಉಳಿಯುತ್ತಿರಲಿಲ್ಲ ಅನ್ನೋದನ್ನ ನೆನಪಿನಲ್ಲಿಡಿ! ಇದು ಇಂದಿಗಷ್ಟೆ ಅಲ್ಲ ಎಂದೆಂದಿಗೂ ಸತ್ಯ !!" ಎಂದು ಆವೇಶದಿಂದ ನುಡಿದ.ಅವನ ಈ ಎಚ್ಚರಿಕೆಯ ನುಡಿಗೆ ಬೆರಗಾದ ಖುರೈಷಿಗಳು ತಮ್ಮ ಸೋಕ್ಕನ್ನೆಲ್ಲ ಕಷ್ಟದಿಂದ ತಡೆಹಿಡಿದುಕೊಂಡರು.



ಇತಿಹಾಸದ ಪುಟಗಳಲ್ಲಿ ಅವನ ಮತವನ್ನೊಪ್ಪದವರಿಂದ ಮಹಮದನ ಮೇಲೆ ನಿಂದನೆ,ಭರ್ತ್ಸನೆ ಮುಂತಾದವುಗಳೊಂದಿಗೆ ದೈಹಿಕ ಹಲ್ಲೆ ನಡೆದ ಬಗ್ಗೆ ನಮೂದಾಗಿದ್ದರೂ ಅದು ಹಿಂಸೆಯ ಪರಿಧಿ ದಾಟಿದ ಬಗ್ಗೆ ಸೂಚನೆ ಎಲ್ಲೂ ಸಿಗುವುದಿಲ್ಲ.ಹೆಚ್ಚೆಂದರೆ ಹೊಲಸು ಪದಾರ್ಥಗಳನ್ನು ಅವನ ಮೇಲೆ ಎಸೆಯುವುದರ ಮೂಲಕ ಅವರ ಅಸಹಿಷ್ಣುತೆ ಪ್ರಕಟವಾಗುತ್ತಿತ್ತು ಅಷ್ಟೆ.ಕ್ರಿಸ್ತಶಕ 615ರಲ್ಲಿ ಮಹಮದ್ ತನ್ನ ಮತ ಭೋದನೆಯನ್ನು ಆರಂಭಿಸಿದಾಗ ಮೊದಲು ಎದ್ಸುರಾಗಿದ್ದ ಅಡ್ಡಿ ಆತಂಕಗಳೆಲ್ಲ ಕ್ರಮೇಣ ಇನ್ನಿಲ್ಲವಾಗಲು ಅವನ ಮತಕ್ಕೆ ಮಾರುಹೋದ ಇಬ್ಬರು ಪ್ರಮುಖವಾಗಿ ಕಾರಣವಾದರು ಅವರೆ ಹಮ್ಜಾ ಮತ್ತು ಓಮರ್.ಈ ಹಮ್ಜಾ ಮಹಮದನ ಅಜ್ಜ ಅಬ್ದುಲ್ ಮುತಾಲಿಬ್ ತನ್ನ ಎಪ್ಪತ್ತನೆ ವಯಸ್ಸಿನಲ್ಲಿ ವಿವಾಹವಾಗಿ ಪಡೆದ ಮಗನಾಗಿದ್ದ.ಏಕಕಾಲದಲ್ಲಿ ಆತ ಮಹಮದನಿಗೆ ಮಲ ಸಹೋದರ (ತಾಯಿಯ ತಂಗಿಯ ಮಗ) ಹಾಗೂ ಚಿಕ್ಕಪ್ಪ (ತಂದೆಯ ದೊಡ್ಡಪ್ಪನ ಮಗ) ಎರಡೂ ಆಗುತ್ತಿದ್ದ! ಒಮ್ಮೆ ಅಸ್ ಸದಾಫ್ ಎಂಬ ಎತ್ತರದ ಸ್ಥಳದಲ್ಲಿ ಮಹಮದ್ ಕುಳಿತಿದ್ದಾಗ ಅಬು ಜಲಾಲ್ ಎಂಬ ಖುರೈಶಿಯೊಬ್ಬ ಅವನನ್ನು ಕಟುಮಾತುಗಳಿಂದ ನಿಂದಿಸಲಾರಂಭಿಸಿದ,ಮಹಮದ್ ಮಾತ್ರ ಅದನ್ನು ಕೇಳಿದರೂ ಕೇಳಿಸಿಕೊಳ್ಳದಂತೆ ಕಿವುಡನಂತೆ ನಿರ್ಲಕ್ಷಿಸಿಕೂತಿದ್ದ.ಆದರೆ ಅದನ್ನು ಗಮನಿಸಿದ ಒಬ್ಬ ಗುಲಾಮ ಸ್ತ್ರೀ ಮನೆಗೆ ಮರಳುವಾಗ ದಾರಿಯಾಲ್ಲಿ ಸಿಕ್ಕ ಹಮ್ಜಾನಿಗೆ ಈ ಘಟನೆಯನ್ನ ಹೇಳಿ ಪರಿತಾಪ ಪಟ್ಟಳು.ಮೂಲತಃ ಹಮ್ಜಾ ಒಳ್ಳೆಯ ಬಿಲ್ಲುಗಾರನಾಗಿದ್ದ.ಅಲ್ಲದೆ ಆಗಷ್ಟೆ ಆತ ಬೇಟೆಗೆ ಹೋಗಿದ್ದವ ಅಲ್ಲಿಂದ ಮನೆಗೆ ಮರಳಿಹೋಗುತ್ತಿದ್ದ.ಈ ಸಂಗತಿ ಕೇಳಿ ಕ್ಷುದ್ರನಾದ ಆತ ಕೂಡಲೆ ಇದ್ದ ಸ್ಥಿತಿಯಲ್ಲೆ ಕಾಬಾ ಬಳಿ ತೆರಳಿ ಅಲ್ಲಿ ಇತರ ಖುರೈಷಿಗಳೊಂದಿಗೆ ಹರಟೆ ನಿರತನಾಗಿದ್ದ ಅಬು ಜಹಾಲ್'ನನ್ನು ಕಂಡವನೆ ವರಸೆಯಲ್ಲಿ ತನ್ನ ಮಗನೂ ಮಲಸಹೋದರನು ಆದ ಮಹಮದನಿಗೆ ಆತ ಮಾಡಿದ ಅಪಮಾನವನ್ನು ನೆನೆಸಿಕೊಂಡು ಕೆಂಡಾಮಂಡಲನಾಗಿ ಅಲ್ಲಿಯೆ ಬಿಲ್ಲಿಗೆ ಹದೆಯೇರಿಸಿ ಬಾಣ ಹೂಡಿ ಆತನನ್ನು ಗಾಯಗೊಳಿಸಿ "ನೋಡು ನಾನೀಗ ಮಹಮದನ ಧರ್ಮವನ್ನು ಪಾಲಿಸುತ್ತೇನೆ! ನಿನಗೆ ಸಾಧ್ಯವಿದ್ದರೆ ತಡೆದುನೋಡು ನೋಡೋಣ!" ಎಂದು ಬಹಿರಂಗ ಪಂಥಾಹ್ವಾನ ನೀಡಿ ಸೆಡ್ಡುಹೊಡೆದು ನಿಂತ.ಹೀಗೆ ಅವನಿಗೆ ಗೊತ್ತಿಲ್ಲದೆ ಮಾನಸಿಕವಾಗಿ ಆತ ಮತಾಂತರಿತವಾಗಿದ್ದ!

ಇದು ಹಮ್ಜಾನ ಕಥೆಯಾದರೆ ಇನ್ನೊಬ್ಬ ಓಮರನ ಕಥೆ ತುಸು ವಿಭಿನ್ನವಾಗಿತ್ತು.ಒಮರ್ ಒಬ್ಬ ಸದೃಢ ಖುರೈಷಿ ಯುವಕನಾಗಿದ್ದ.ಶೀಘ್ರಕೋಪಿ,ಮುಂಗೋಪಿ ಎರಡೂ ಆಗಿದ್ದ ಅವನದ್ದು ವಿಪರೀತ ದುಡುಕಿನ ಸ್ವಭಾವವಾಗಿತ್ತು.ಆವೇಗ ಪರನಾಗಿದ್ದ ಆತ ಇತರ ಖುರೈಶಿಗಳಂತೆ ಮೊದಲಿಗೆ ಮಹಮದನ ಕಟ್ಟಾ ವಿರೋಧಿಯಾಗಿದ್ದು ಅವನನ್ನು ಕಂಡಲ್ಲಿ ನಿಂದಿಸುತ್ತಾ,ಅವನ ಅನುಯಾಯಿಗಳನ್ನು ಸಾಧ್ಯವಾದಷ್ಟು ಹಿಂಸಿಸುತ್ತಿದ್ದ.ಅಂತವನ ಸ್ವಂತ ಸಹೋದರಿ ಫಾತಿಮಾ ಹಾಗು ಆಕೆಯ ಪತಿ ಇಸ್ಲಾಮಿಗೆ ಗೌಪ್ಯವಾಗಿ ಮತಾಂತರಿತವಾಗಿದ್ದರು.ಈ ವಿಷಯ ಇನ್ನೂ ಓಮರನ ಕಿವಿಯನ್ನು ಇನ್ನೂ ಮುಟ್ಟಿರಲಿಲ್ಲ.ಹೀಗೆ ಒಮ್ಮೆ ನವ ಮತಾಂತರಿತವಾದವನೊಬ್ಬನನ್ನು ಆತ ಪೀಡಿಸುತ್ತಿರುವಾಗ ಅದನ್ನು ತಾಳಲಾರದೆ ನರಳಿದ ಆ ಮುಸ್ಲೀಂ ರೋಷದಿಂದ ಮಾತನಾಡುವಾಗ ಅವನ ಸಹೋದರಿಯ ಮತಾಂತರದ ಬಗ್ಗೆ ಸುಳಿವು ನೀಡಿದ!


ಇದನ್ನು ಕೇಳಿ ಆಕ್ರೋಶಿತನಾದ ಒಮರ್ ಆ ಕೂಡಲೆ ಸೋದರಿಯ ಮನೆಗೆ ಧಾವಿಸಿದ.ಅಲ್ಲಿ ಅವನಿಗೆ ಕಂಡದ್ದು ಕುಟುಂಬದ ಗುಲಾಮನೊಬ್ಬ ಒಂದು ತುಂಡು ಕಾಗದವನ್ನು ಹಿಡಿದು ಓದುತ್ತಿರುವ ದೃಶ್ಯ.ಓಮರನ ಉರಿಮುಖ ಕಂಡವನೆ ಅವನು ಒಳಹೊಕ್ಕು ಅದೆಲ್ಲೊ ಅವಿತುಕೊಂಡ.ಆದರೆ ಆ ಕೂಡಲೆ ಅವನ ನಡೆಯ ಹಿನ್ನೆಲೆ ಓಮರನಿಗೆ ಅರಿವಾಗಿತ್ತು.ಆ ಗುಲಾಮ ಮಹಮದನ ಉಪದೇಶದ ಸಾರವನ್ನು ಗುಟ್ಟಾಗಿ ಓದಿ ಪಠಿಸುತ್ತಿದ್ದ.ಒಳಬಂದ ಬಳಿಕ ಎದುರಿಗೆ ಕಂಡ ಫಾತಿಮಾಳ ಪತಿಯನ್ನು ಈ ಬಗ್ಗೆ ಪ್ರಶ್ನಿಸಿ ಅವನ ಮೇಲೆ ಓಮರ್ ಹಲ್ಲೆ ಎಸಗುವಾಗ ನಡುವೆ ಅಡ್ಡಿ ಬಂದ ಫಾತಿಮಾಳೂ ಅವನಿಂದ ಪೆಟ್ಟು ತಿನ್ನಬೇಕಾಯಿತು.ಮುಖದ ಮೇಲೆ ಬಲವಾಗಿ ಬಿದ್ದ ಪೆಟ್ಟಿನಿಂದ ಆಕೆಗೆ ರಕ್ತಸ್ರಾವವಾದಾಗ ಸಂಯಮ ಕಳೆದುಕೊಂಡ ಆಕೆ ಸಹೋದರನ ಮೇಲೆಯೆ ಎಗರಿಬಿದ್ದಳು."ಹೌದು! ನಾವು ಮತಾಂತರಗೊಂಡಿದ್ದೀವಿ.ನಾವು ದೇವರು ಹಾಗೂ ಅವನ ಪ್ರವಾದಿಯನ್ನ ನಂಬುತ್ತೇವೆ ನೀನು ಅದೇನೆ ಬೇಕಿದ್ದರೂ ಮಾಡಿಕೊಳ್ಳಬಹುದು" ಎಂದು ಚೀರಿಹೇಳಿ ಸ್ಮೃತಿ ತಪ್ಪಿಬಿದ್ದಳು.ಅವಳ ರಕ್ತಸಿಕ್ತ ಮುಖವನ್ನು ಕಂಡಾಗ ಒಮರ್ ಮೆತ್ತಗಾದ.ಅವಳ ಕೈಯಲ್ಲಿಯೆ ಭದ್ರವಾಗಿದ್ದ ಕಾಗದದ ತುಣುಕಿನಲ್ಲಿದ್ದ ಉಪದೇಶ ಸಾರವನ್ನು ತಾನೂ ಸಹ ಓದಿ ಪ್ರಭಾವಿತನಾದ.ಆ ಕೂಡಲೆ ಮಹಮದನನ್ನು ಕಾಣಲು ಆತ ಇಚ್ಚೆಪಟ್ಟು ಆತ ಉಳಿದಿದ್ದ ಅಲ್ ಅಕ್ರಮನ ಮನೆಗೆ ಸಾಗಿದ.ತನ್ನ ಮೇಲೆ ವಿಶ್ವಾಸವಿರಿಸಿ ಬಂದ ಓಮರನನ್ನು ಮಹಮದ್ ಬಹಳ ಆದರದಿಂದಲೆ ಇಸ್ಲಾಮಿಗೆ ಬರಮಾಡಿಕೊಂಡ.

ಈ ಇಬ್ಬರು ಪ್ರಭಾವಿಗಳ ಮತಾಂತರದಿಂದ ಮಹಮದನ ಆಶೋತ್ತರಗಳಿಗೆ ಮಹತ್ತರವಾದ ಬಲಬಂದೊದಗಿತು ಅನ್ನುತ್ತಾನೆ ಇತಿಹಾಸಕಾರ ಮ್ಯೂರ್.ಇಸ್ಲಾಮಿನ ಉನ್ನತಿಗಾಗಿ ಮುಂದೆ ಹೂಡಿದ ಅನೇಕ ಕಾಳಗಗಳಲ್ಲಿ ಹಮ್ಜಾ ಒಬ್ಬ ಅಪ್ರತಿಮ ವೀರನಾಗಿ ಕಂಗೊಳಿಸಿದರೆ ಒಮರ್ ಅಬುಬಕರನ ನಂತರ ಖಲೀಫನಾಗಿ ಮೆರೆದ.ಇವರಿಬ್ಬರಿಂದ ಮಹಮದನಿಗೆ ತನ್ನ ವಿಚಾರ ಮಂಡನೆಗೆ ವಿಚಿತ್ರ ಧೈರ್ಯ ಪ್ರಾಪ್ತಿಯಾಗಿತ್ತು.ಈ ಆನೆಬಲವನ್ನು ಹಿಂದಿಟ್ಟುಕೊಂಡೆ ಆತ ಇದೂವರೆಗೂ ಗುಪ್ತವಾಗಿಯಷ್ಟೆ ಮಾಡುತ್ತಿದ್ದ ತನ್ನ ಮತಪ್ರಚಾರವನ್ನು ಮರಳಿ ಬಹಿರಂಗವಾಗಿ ಕಾಬಾದ 'ಹುಬಾಬ್' ದೇವರ ಗುಡಿಯೆದುರಿಗೆ ಮಾಡಲು ಉಪಕ್ರಮಿಸಿದ.ಅಲ್ಲಿಯೆ ಆತನ ಪಠಣ-ಪ್ರವಚನ ಮತ್ತಿತರ ಪಾಠ ಪ್ರವಚನಗಳು ಆರಂಭವಾದವು.ಇದರಿಂದ ಇರುಸುಮುರುಸಿಗೆ ಒಳಗಾದ ಖುರೈಷಿಗಳು ತಮ್ಮವರನ್ನೆಲ್ಲ ಮತ್ತೆ ಸಂಘಟಿಸಿ ಇದನ್ನು ವಿರೋಧಿಸಲು ಆರಂಭಿಸಿದರು.ಅದರ ಒಂದು ನಿರ್ಬಂಧಕ ಕ್ರಮವಾಗಿ ಅವರೆಲ್ಲರೂ ಕೂಡಿ ಮಹಮದನ ಕುಟುಂಬವಾಗಿದ್ದ 'ಹಶೀಮ್' ಉಪ ಬುಡಕಟ್ಟಿಗೆ ಸಾಮಾಜಿಕ ಬಹಿಷ್ಕಾರ ಹೇರಿದರು.ಅವರ ಕುಟುಂಬದೊಂದಿಗೆ ಸಮಾಜದ ಇತರರ ವೈವಾಹಿಕ ಸಂಬಂಧಗಳು ಕೊನೆಯಾದವು.ಅವರೊಂದಿಗೆ ವ್ಯಾಪಾರ-ವ್ಯವಹಾರಗಳಿಗೂ ತಿಲಾಂಜಲಿ ಕೊಡಲಾಯಿತು,ಎಲ್ಲಾ ಸಾಮಾಜಿಕ ವ್ಯವಹಾರಗಳಿಂದಲೂ ಅವರನ್ನು ದೂರತಳ್ಳಲಾಯಿತು,ಈ ಬಹಿಷ್ಕಾರದಿಂದ ತತ್ತರಿಸಿದ ಹಶೀಮರು ಮೆಕ್ಕಾ ತೊರೆದು ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ಆಶ್ರಯ ಅರಸುವಂತಾಯಿತು.ಮಹಮದನ ಮೇಲಿದ್ದ ಅಭಿಮಾನಧ ಕಾರಣದಿಂದ ಆ ಕಷ್ಟದ ದಿನಗಳನ್ನು ಮಹಮದನ ಕುಟುಂಬದವರೆಲ್ಲ ಐಕ್ಯತೆಯಿಂದಲೆ ಹಲ್ಲುಕಚ್ಚಿ ಸಹಿಸಿಕಳೆದರು.ಆದರೆ ಅವರು ಜೀವನೋಪಾಯಕ್ಕೆ ಕಷ್ಟಬೀಳಬೇಕಾಯಿತು.ಹಸಿವಿನಿಂದ ಅವರು ನರಳುವುದನ್ನು ನೋಡಲಾಗದೆ ಕೆಲವು ಕರುಣಾಮಯಿಗಳಾದ ಖುರೈಷಿಗಳು ಗುಟ್ಟಾಗಿ ಹಿರಿಯರ ಕಣ್ಣುತಪ್ಪಿಸಿ ಅವರಿಗೆ ಆಹಾರ ಹಾಗೂ ಇನ್ನಿತರೆ ಜೀವನಾವಶ್ಯಕ ವಸ್ತುಗಳನ್ನ ಪೂರೈಸುವುದೂ ಆ ಕಾಲದಲ್ಲಿ ಅಲ್ಲಲ್ಲಿ ನಡೆಯಿತು.ವರ್ಷಕ್ಕೊಮ್ಮೆ ನಡೆಯುವ ಕಾಬಾ ಉತ್ಸವಗಳಲ್ಲಿ ಮಾತ್ರ ಅವರು ಮೆಕ್ಕಾ ಪ್ರವೇಶಿಸಿ ತಮ್ಮತಮ್ಮ ಮತಪ್ರಚಾರ ಕೈಗೊಳ್ಳಲು ಅಡ್ಡಿಯಿರಲಿಲ್ಲ.ಅಂತಹ ದಿನಗಳನ್ನು ಶಾಂತಿಯ ದಿನಗಳೆಂದು ಘೋಷಿಸಿದ್ದರಿಂದ ಮಹಮದ್ ನಿರಾತಂಕವಾಗಿ ತನ್ನ ಮತವನ್ನು ಮನಬಂದಂತೆ ಭೋದಿಸಲು ಯಾರೂ ತಕರಾರು ತೆಗೆಯುತ್ತಿರಲಿಲ್ಲ.


ಆದರೆ ಆತನ ಈ ಮತಪ್ರಚಾರದಿಂದ ಖುರೈಷಿಗಳೇನೂ ಪ್ರಭಾವಿತರಾಗಲಿಲ್ಲ.ಅವರ ನಾಯಕನಾದ ಅಬು ಲಹಾಬನಂತೂ ಬಹಿರಂಗವಾಗಿಯೆ ಮಹಮದನನ್ನು ಹೀಯ್ಯಾಳಿಸಲು ಹಿಂಜರೆಯುತ್ತಿರಲಿಲ್ಲ.'ಅವನನ್ನು ನಂಬಬೇಡಿ ಅವನೊಬ್ಬ ವಂಚಕ ಧರ್ಮಭ್ರಷ್ಟ!' ಎಂದು ಕೂಗಿ ಮಹಮದನಿಂದ ಉಳಿದೆಲ್ಲರನ್ನೂ ಆತ ದೂರವಿರಿಸುವುದರಲ್ಲಿ ಸಫಲನಾಗಿದ್ದ.ಹೀಗಾಗಿ ಮಹಮದ್ ನೊಂದು ಸಂಕಟಪಡುವಂತಾಯಿತು.ಇದೆ ಸಮಯದಲ್ಲಿ ಮಹಮದನಿಗೆ ಯಹೂದಿಗಳ ಸಂಪರ್ಕ ಏರ್ಪಟ್ಟು ಅವರ ವಿಚಾರಧಾರೆಗಳಿಂದ ಆತ ಬಹಳ ಪ್ರಭಾವಿತನಾಗುವಂತಾಯಿತು.ಇದು ಆ ಕಾಲದಲ್ಲಿ ಆತನಿಗೆ ದೊರೆತ ದೈವವಾಣಿಗಳಲ್ಲಿ ಅಡಗಿದ್ದ ಯಹೂದಿ ವಿಚಾರಧಾರೆಗಳಿಂದ ಸ್ಪಷ್ಟವಾಗುತ್ತದೆ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ದೇವರ ಪುನರುತ್ಥಾನ ಮುಂತಾದ ಉದಾಹರಣೆಗಳನ್ನವನು ಕೊಡುತ್ತಾನೆ.ಇವೆಲ್ಲ ಸೇರಿ ಸುಮಾರು ಇಪ್ಪತ್ತು ಸುರಾಗಳು ಆ ಕಾಲದಲ್ಲಿ ಹೊರಬಂದವು.ಈ ಸುರಾಗಳಲ್ಲಿ ಮಹಮದ್ ದೇವರು ವಿಶ್ವವನ್ನು ಕೇವಲ ಆಟವನ್ನಾಗಿ ಸೃಷ್ಟಿಸದೆ ಒಂದು ನಿರ್ದಿಷ್ಟ ಗುರಿ,ಧ್ಯೇಯ ಹಾಗೂ ಉದ್ದೇಶಗಳನ್ನೆ ಇಟ್ಟುಕೊಂಡು ಸೃಷ್ಟಿಸಿದ ಎಂದು ಆತ ಸಾಧಿಸಿದ. ಇವನ್ನು ಸುರಾ 72/28ರಲ್ಲಿ ಸ್ಪಷ್ಟವಾಗಿ ಕಾಣಬಹುದು.

ಪ್ರವಾದಿ ಮೋಸೆಸ್'ನಿಗೆ (ಇಸ್ಲಾಮಿನಲ್ಲಿ ಮೂಸಾ-ಎ-ಅಸಲ್ಲಂ) ದೇವರು ಕರುಣಿಸಿದ ದೈವವಾಣಿ ಹಾಗೂ ವಿಚಾರಧಾರೆಗಳೂ ಖುರಾನಿನ ಸುರಾಗಳಲ್ಲಿ ಕಾಣುತ್ತವೆ.ಮಹಮದ್ ಅವನ್ನು ಉದ್ದರಿಸುವಾಗ ತಾನು ಸಾರುತ್ತಿರುವ ಈ ವಿಚಾರಧಾರೆ ಈಗಾಗಲೆ ಇಂತಹ ಧರ್ಮಗ್ರಂಥಗಳಲ್ಲಿ ಮೂಡಿಬಂದಿದೆ ಎಂದು ಅವನ್ನು ಉದಾಹರಿಸಿ ಹೇಳುತ್ತಿದ್ದ.ಹಾಗೆ ಹಿಂದೆ ಬಂದ ಧರ್ಮಸಾರಗಳನ್ನೆ ಪುನಃ ಹೇಳಿ ಎಚ್ಚರಿಸಲು ತಾನು ಹುಟ್ಟಿಬಂದಿರುವುದಾಗಿಯೂ,ಅವುಗಳನ್ನೆಲ್ಲ ಅರೇಬಿಕ್ ಭಾಷೆಯಲ್ಲಿ ಪ್ರಚುರ ಪಡಿಸುವುದಷ್ಟೆ ತನ್ನ ಕರ್ತವ್ಯ ಎಂದು 4/160 ಹಾಗೂ 28/43ರಲ್ಲಿ ಘಂಟಾಘೋಷವಾಗಿ ಸಾರಿದ.ಇದರೊಂದಿಗೆ 2/256ರಲ್ಲಿ 'ಧರ್ಮದ ವಿಷಯಗಳಲ್ಲಿ ಯಾವುದೆ ಬಲಾತ್ಕಾರಗಳಿಲ್ಲ!' ಎಂದೂ ಸಾರಿದ.ಹಾಶಿಮ್ ಉಪ ಬುಡಕಟ್ಟಿನವರ ಮೇಲೆ ಹೇರಿದ್ದ ಬಹಿಷ್ಕಾರಕ್ಕೆ ಸ್ವತಃ ಖುರೈಷಿಗಳಲ್ಲೆ ಒಮ್ಮತವಿರಲಿಲ್ಲ.ಹೀಗಾಗಿ ಹಾಶೀಮರಿಗೆ ಅವರಲ್ಲೆ ಕೆಲವರಿಂದ ಗುಪ್ತವಾಗಿ ಸಹಕಾರಗಳು ಸಿಕ್ಕವು.ಅಷ್ಟರಲ್ಲಿ ಖುರೈಶಿಗಳಲ್ಲಿ ಒಬ್ಬ ನಾಯಕನೆನೆಸಿಕೊಂಡಿದ್ದ ಮಹಮದನ ದೊಡ್ಡಪ್ಪ ಅಬು ತಾಲಿಬ್ ಅವರೆಲ್ಲರೂ ಬಹಿಷ್ಕಾರದಿಂದ ಪಡುತ್ತಿರುವ ಬವಣೆಗಳನ್ನು ನೋಡಿ ಸಂತಾಪಗೊಂಡು ಒಂದು ದಿನ ತನ್ನ ಕೆಲವು ಸಂಗಡಿಗರೊಡನೆ ಕಾಬಾದತ್ತ ಹೆಜ್ಜೆಹಾಕಿದ.ಅಲ್ಲಿ ನೆರೆದಿದ್ದ ಇತರ ಖುರೈಶಿಗಳನ್ನ ಉದ್ದೇಶಿಸಿ "ನೀವು ಬರೆದು ದಾಖಲಿಸಿರುವ ಪತ್ರ ಆಗಲೆ ಗೆದ್ದಲು ತಿಂದು ಲಡ್ಡಾಗಿ ಹೋಗಿದೆ! ಅದರಿಂದ ಇನ್ನು ಮೂರುಕಾಸಿನ ಉಪಯೋಗವಿಲ್ಲ,ಇದರ ಮೇಲೆಯೂ ನೀವೆಲ್ಲ ಇಚ್ಚಿಸಿದರೆ ಅವನನ್ನೆ ನಿಮ್ಮ ಮುಂದೆ ತರುತ್ತೇನೆ.ನಿಮ್ಮ ಇಷ್ಟದ ಪ್ರಕಾರ ವಿಚಾರಿಸಿ ತೀರ್ಮಾನ ಕೈಗೊಳ್ಳಿ ಆದರೆ ಮೊದಲು ಈ ಬೋಳು ಬಹಿಷ್ಕಾರವನ್ನ ಮರುಮಾತಿಲ್ಲದೆ ಹಿಂತೆಗೆದುಕೊಳ್ಳಿ!" ಎಂದು ಅಬ್ಬರಿಸಿದ.ಈ ಆವೇಶದ ಮಾತುಗಳನ್ನು ಕೇಳಿದ ಅಲ್ಲಿನ ಪೂಜಾರಿ ಕಾಬಾದಲ್ಲಿನ ಸಂದೂಕದಲ್ಲಿ ಇರಿಸಿದ್ದ ಬಹಿಷ್ಕಾರ ಪತ್ರವನ್ನು ಹೊರತೆಗೆದು ನೋಡಿದಾಗ ಅದು ನಿಜಕ್ಕೂ ಲಡ್ಡಾಗಿ ಹುಳತಿಂದು ಹಾಳಾಗಿತ್ತು! ಇದನ್ನು ಕಂಡ ಖುರೈಷಿಗಳು ಗಾಬರಿಯಿಂದ ಕಂಗಾಲಾದರು.ಅವರ ಸೋಕ್ಕೆಲ್ಲ ಅಡಗಿಹೋಗಿ ಅವರಲ್ಲೆ ಹಿರಿಯರಾದವರು ಬಹಿಷ್ಕಾರ ರದ್ದುಪಡಿಸಿ ಹಾಶೀಮ್ ಕುಲಸ್ಥರನ್ನು ಮರಳಿ ಮೆಕ್ಕಾ ಪ್ರವೇಶಿಸಲು ಅನುವು ಮಾಡಿಕೊಟ್ಟರು.

ಹೀಗೆ ಬಹಿಷ್ಕಾರ ಮುಗಿದಮಾತ್ರಕ್ಕೆ ಮಹಮದನ ವಯಕ್ತಿಕ ಬವಣೆಗಳೇನೂ ಕೊನೆಯಾಗಲಿಲ್ಲ.ವಯೋವೃದ್ಧಳಾಗಿದ್ದ ಆತನ ಪತ್ನಿ ಖತೀಜಾ ಖಾಯಿಲೆಯಿಂದ ನರಳಿ ಕ್ರಿಸ್ತಶಕ 616ರ ಡಿಸೆಂಬರ್ ತಿಂಗಳಲ್ಲಿ ಕಣ್ಣು ಮುಚ್ಚಿದಳು.ಇದು ಮಹಮದನ ಪಾಲಿಗೆ ಅತ್ಯಂತ ನೋವಿನ ಸಂಗತಿಯಾಗಿತ್ತು.ಕಾಲುಶತಮಾನಗಳ ಕಾಲ ಆತನ ಪ್ರೀತಿಸುವ ಜೀವವಾಗಿ,ಹಿತೈಷಿಯಾಗಿ,ಬಾಳಗೆಳತಿಯಾಗಿ ಹಾಗೂ ಆತನಿಂದ ಮತಾಂತರ ಹೊಂದಿದ ಪ್ರಥಮ 'ಮುಸ್ಲೀಂ'ಮಳಾಗಿ ಆತನಿಗೆ ಒತ್ತಾಸೆ ನೀಡಿದ್ದ ಖತೀಜ ಮಹಮದನ ವಂಶೋದ್ಧಾರಕಳೂ ಆಗಿ ನಾಲ್ವರು ಹೆಣ್ಣುಮಕ್ಕಳ ತಾಯಿಯೂ ಆಗಿದ್ದು ತುಂಬು ಜೀವನ ಸವೆಸಿ ಕಣ್ಮುಚ್ಚಿದ್ದಳು.ಇದು ಆತನನ್ನು ಸಹಜವಾಗಿ ಕೆಂಗೆಡೆಸಿತು.

ಇದರ ಹಿಂದೆಯೆ ಗಾಯದ ಮೇಲೆ ಉಪ್ಪು ಸುರಿದಂತೆ ಆತನ ದೊಡ್ಡಪ್ಪ ಅಬು ತಾಲೀಬನೂ ಅದೆ ಕಾಲದಲ್ಲಿ ಕೊನೆಯುಸಿರು ಎಳೆದಿದುದರಿಂದಾಗಿ ಮಹಮದ್ ಸಂಕಟದಿಂದ ನರಳಬೇಕಾಯಿತು.ಮಹಮದನಿಗಾಗಿ ಸಂಪೂರ್ಣ ಖುರೈಷಿ ಕುಲದ ವೈರತ್ವವ್ವನ್ನೆ ಕಟ್ಟಿಕೊಳ್ಳಲು ಹೇಸದ ಅಬು ತಾಲೀಬ್ ವಯಕ್ತಿಕವಾಗಿ ಇಸ್ಲಾಮಿಗೆ ಮತಾಂತರವಾಗದಿದ್ದರೂ ಮಹಮದನ ಜೊತೆಗೆ ಬೆಸೆದು ಕೊಂಡಿದ್ದ ರಕ್ತ ಸಂಬಂಧದ ಕಟ್ಟಿಗೆ ಬೆಲೆಕೊಟ್ಟು ಆತನ ಸಮೀಪವರ್ತಿಯಾಗಿ ಮುತುವರ್ಜಿಯಿಂದ ಆತನ ಹಿತಬಯಸಿದ ನಿಸ್ಪ್ರಹ ಜೀವ ಅಬು ತಾಲೀಬನದು.ಹೆತ್ತವರನ್ನು ಬಾಲ್ಯದಲ್ಲೆ ಕಳೆದುಕೊಂಡಿದ್ದ ಮಹಾಮದನನ್ನು ಹೆತ್ತಮಗನಂತೆ ಸಲಹಿದ್ದ ಅಬು ತಾಲೀಬನನ್ನು ಮಹಮದ್ ಕಳೆದುಕೊಂಡು ಶಾಂತಿಯಿಂದ ಇರುವುದು ಅಸಾಧ್ಯವಾಗಿತ್ತು.ಅವನು ಇದನ್ನು ಭಾವಪೂರ್ಣವಾಗಿ ಪ್ರಕಟಿಸಿ ಶೋಕಿಸಿದ.ನಾಲ್ಕು ದಶಕಗಳ ಈ ಗಟ್ಟಿಬಾಂಧವ್ಯ ಹೀಗೆ ಅಬು ತಾಲೀಬನ ಸಾವಿನಲ್ಲಿ ಕೊನೆಯಾದುದರಿಂದ ಮಹಮದ್ ಮಾನಸಿಕವಾಗಿ ಕೆಂಗೆಟ್ಟ.

( ಇನ್ನೂ ಇದೆ....)

No comments: