21 October 2011

ವಲಿ....(ಭಾಗ-5)

ಮಹಮದನ ನೂತನ ಧರ್ಮದ ವಿರುದ್ಧ ನಡೆದ ಅನೇಕ ಆರಂಭಿಕ ದ್ವೇಶಪೂರಿತ ಹೋರಾಟಗಳು ಇತಿಹಾಸಕಾರರಿಂದ ದಾಖಲಿಸಲ್ಪಟ್ಟಿವೆ.ಅವುಗಳಲ್ಲಿ ಪ್ರಸಿದ್ಧಿ ಪಡೆದ ಕಥೆಯೊಂದು ಹೀಗಿದೆ....'ಮುಸಬ್ ಇಬ್ನ ಒಮೈರ್' ಎಂಬ ಪ್ರಸಿದ್ಧ ಖುರೈಷಿ ಬುಡಕಟ್ಟಿನ ಯುವವ್ಯಕ್ತಿಯೊಬ್ಬ ಅಲ್ ಅಕ್ರಮನ ಮನೆಯಲ್ಲಿ ನಡೆಯುತ್ತಿದ್ದ ಮಹಮದನ ಮತಭೋದನೆಯಿಂದ ಪ್ರಭಾವಿತನಾಗಿ ಅವನ ಧರ್ಮಕ್ಕೆ ಮತಾಂತರಗೊಂಡ.ಅವನ ಈ ಉದ್ಧಟ ನಡುವಳಿಕೆಯಿಂದ ಕುಪಿತಗೊಂಡ ಅವನ ಹತ್ತಿರದ ಸಂಬಂಧಿಕರು ಅವನ ವಿರುದ್ಧ ಬಹಿಷ್ಕಾರ ಹಾಕಿದರು,ಅದರಲ್ಲೂ ಈ ಬಗ್ಗೆ ವಿಪರೀತ ನೊಂದುಕೊಂಡ ಆತನ ತಾಯಿ ತನ್ನ ನಿಲುವಿಗೆ ವಿರುದ್ಧವಾಗಿ ಮಗ ಮತಾಂತರಗೊಂಡದ್ದರಿಂದ ಮಗ ಹಾಗೂ ಮಹಮದನ ಮೇಲೆ ಕೆರಳಿ ಕೆಂಡವಾದಳು.ಅವಳ ಈ ಕೋಪ ಮಗನನ್ನು ಗೃಹಬಂಧನದಲ್ಲಿರುವ ಮೂಲಕ ಪರ್ಯಾವಸನಗೊಂಡಿತು.ಆದ್ರೆ ಆತ ಅದು ಹೇಗೊ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಅಬಿಸೀನಿಯಕ್ಕೆ ಓಡಿಹೋದ.ಅಲ್ಲಿಂದ ಕೆಲಕಾಲದ ಬಳಿಕ ಆತ ಮೆಕ್ಕಾಗೆ ಹಿಂದಿರುಗಿದಾಗ ಆತನ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ತೀರಾ ಶೋಚನೀಯವಾಗಿತ್ತು.ಆದರೆ ಮಗನ ಬಗ್ಗೆ ಕಠಿಣ ನಿಲುವು ತೆಳೆದಿದ್ದ ತಾಯಿ ಆತನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ,ಹೀಗಾಗಿ ವಿಧಿಯಿಲ್ಲದೆ ಆತ ಕ್ಯಾರವಾನ್ ಒಂದರ ಹಿಂದೆ ಅಲೆಮಾರಿಯಾಗಿ ಎತ್ತಲೊ ಹೋಗಬೇಕಾಯಿತು.ಇದಾಗಿ ಎರಡುವರ್ಷಗಳ ನಂತರ ಆತ ಮರಳಿ ಮೆಕ್ಕಾಕ್ಕೆ ಬಂದ.ಆಗಲೂ ಅವನ ಪರಿಸ್ಥಿತಿ ಹೆಚ್ಚು ಸುಧಾರಿಸಿರಲಿಲ್ಲ.ಈ ಸಾರಿ ಆತನ ಕಡೆಗೆ ಕೊಂಚ ಮೃದುವಾಗಿದ್ದ ಆತನ ತಾಯಿ ಹಳೆಯ ಮಮತೆಯಿಂದ "ಈಗಲೂ ನೀನು ಸ್ವ-ಮತ ಭ್ರಷ್ಟನಾಗಿದ್ದೀಯ?" ಎಂದು ಪ್ರಶ್ನಿಸಿದಳು.ಆತ "ನಾನು ಸತ್ಯಧರ್ಮವಾದ ಇಸ್ಲಾಮನ್ನು ಹಾಗೂ ಪ್ರವಾದಿಯನ್ನು ಹಿಂಬಾಲಿಸುತ್ತಿದ್ದೇನೆ!" ಎಂದು ಉತ್ತರಿಸಿದ."ಬಾಳಿನ ಉದ್ದಕ್ಕೂ ಹೀಗೆಯೆ ಶೋಚನೀಯ ಸ್ಥಿತಿಯಲ್ಲೆ ಕಾಲ ಹಾಕಬೇಕೆನ್ನುವುದೆ ನಿನ್ನ ಅಂತಿಮ ನಿರ್ಧಾರವ?" ಎಂದಾಕೆ ಮರಳಿ ಪ್ರಶ್ನಿಸಿದಳು.ತನ್ನನ್ನು ಈಕೆ ಮತ್ತೆ ಗೃಹ ಬಂಧನಕ್ಕೆ ಒಳಪಡಿಸಬಹುದು ಎಂಬ ಆತಂಕಕ್ಕೆ ಒಳಗಾದ ಆತ "ಏನು ಒಬ್ಬ ಶ್ರದ್ಧಾವಂತ ಮುಸ್ಲೀಮನನ್ನು ಧರ್ಮ ತ್ಯಜಿಸಲು ನೀನು ಆಮಿಷ ಒಡ್ಡುತ್ತಿದ್ದೀಯ! ಹಾಗೊಂದು ವೇಳೆ ನನ್ನನ್ನು ಇಚ್ಛೆಗೆ ವಿರುದ್ಧವಾಗಿ ಬಂಧನಕ್ಕೆ ಒಳಪಡಿಸಿದೆಯಾದಲ್ಲಿ ನಾನು ನಿನ್ನನ್ನು ಕೊಲ್ಲಲೂ ಹೇಸುವುದಿಲ್ಲ?!" ಎಂದು ಆವೇಶದಿಂದ ಕೂಗಿದ.ತಾಯಿಯೂ ಕನಲಿ "ತೊಲಗು! ಹಾಗಿದ್ದಲ್ಲಿ ಕ್ಷಣ ಮಾತ್ರವೂ ನನ್ನೆದುರು ನಿಲ್ಲಬೇಡ!!" ಎಂದು ಕೂಗಿದಳು.ಆತ ದುಃಖತಪ್ತನಾಗಿ " ಅಮ್ಮಾ,ನಿನಗೆ ಕರುಣಾಮೃತವಾದ ಉಪದೇಶ ನೀಡುತ್ತೇನೆ ಕೇಳು.ದೇವರೊಬ್ಬನೇ ಮಹಮದ್ ಆತನ ಸೇವಕ ಹಾಗೂ ಪ್ರವಾದಿ ಎನ್ನುವುದನ್ನ ನುಡಿದು ನರಕದಿಂದ ಪಾರಾಗು" ಎಂದು ನುಡಿದಾಗ ಆಕೆಗೆ ಕೋಪ ಕಟ್ಟೆಯೊಡೆದು " ನಿನ್ನ ಸೈತಾನಧರ್ಮಕ್ಕೆ ಸೇರುವ ಬೆಪ್ಪಳಾಗಲಾರೆ! ತೊಲಗು ಇಲ್ಲಿಂದ, ಇಂದಿಗೆ ನೀ ನನ್ನ ಪಾಲಿಗೆ ಸತ್ತೆ" ಎಂದು ಚೀರಿದಳು.


ಮಹಮದ್ ಆರಂಭದಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದ ಸಮಾಜದ ಕೆಳವರ್ಗದ ಮಂದಿಯನ್ನ ತನ್ನ ಪ್ರಭಾವಲಯದೊಳಗೆ ಮೆಕ್ಕಾದ ಸುತ್ತಮುತ್ತ ಸೆಳೆದುಕೊಳ್ಳುವ ಪ್ರಯತ್ನಮಾಡಿದ.ಅನಂತರ ಖುರೈಶಿಗಳಲ್ಲಿ ಪ್ರತಿಷ್ಠಿತವಾದವರತ್ತ ತನ್ನ ಮೋಹಜಾಲ ಬೀಸಲು ಆರಂಭಿಸಿದ.ಹೀಗೊಮ್ಮೆ ಖುರೈಶಿಗಳಲ್ಲೇ ಉನ್ನತ ವರ್ಗದವನಾಗಿದ್ದ ಅಲ್ ವಾಲಿಬನೊಡನೆ ಧಾರ್ಮಿಕ ಚರ್ಚೆಯಲ್ಲಿ ತೊಡಗಿಕೊಂಡಿದ್ದಾಗ ಅಬ್ದುಲ್ಲಾ ಇಬ್ನ ಉಮ್ಜ್ ಮಕ್ತೂಮ್ ಎಂಬ ಅಂಧ ವ್ಯಕ್ತಿಯೊಬ್ಬ ನಡುವೆ ಬಾಯಿಹಾಕಿ ತನಗೂ ಖುರಾನನ್ನು ತಿಳಿಹೇಳಬೇಕೆಂದು ಕೋರಿದ.ಆದರೆ ಆ ಕ್ಷಣ ಕೋಪಕ್ಕೆ ತುತ್ತಾದ ಮಹಮದ್ ಅವನ್ನು ಕಡೆಗಣಿಸಿ ಗಡುಸಾಗಿ ಮಾರುತ್ತರವನ್ನಿತ್ತ.ಆದರೆ ಕೆಲಹೊತ್ತಿನ ನಂತರ ತನ್ನ ಈ ಹೀನ ನಡುವಳಿಕೆಗೆ ಸ್ವತಃ ನಾಚಿಕೆಪಟ್ಟುಕೊಂಡು 'ಯಾವ ದೇವರು ಒಬ್ಬ ಕುರುಡನನ್ನು ಸೃಷ್ಠಿಸಿದ್ದಾನೊ ಅವನನ್ನು ನಾನು ಕಡೆಗಣಿಸಿದ್ದು ತಪ್ಪು,ತೋರಿಕೆಯ ಸಿರಿವಂತನ ಎದುರು ಅವನನ್ನು ಅನಾದರಿಸಬಾರದಿತ್ತು ಎಂದು ಗೋಳಾಡಿದಾಗ ಸಂತೈಸುವ ದೈವವಾಣಿ ಅವನಿಂದಲೆ ಹೊರಬಂತು.ಹಾಗೆ ಹೊರ ಹೊಮ್ಮಿದ್ದೆ ಸುರಾ 80/1-11 ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ಈ ಘಟನೆಯ ಮುಖಾಂತರ ದೀನ ದಲಿತರ ಬಗ್ಗೆ ಉದಾತ್ತ ಭಾವನೆಯೊಂದು ಮಹಮದನ ಹೃದಯವನ್ನು ಹೊಕ್ಕು ಪ್ರಕಾಶಿಸಿತು ಎನ್ನಬಹುದು.

ಇದೆ ಸಮಯದಲ್ಲಿ ಆತನ ಮತಪ್ರಚಾರದ ದಿಕ್ಕು ಅರಬೇತರರಾದ ಗ್ರೀಕ್ ಸಮುದಾಯಕ್ಕೆ ಸೇರಿದ ಕ್ರೈಸ್ತರ ಕಡೆಗೆ ತಿರುಗಿತು.ಗುಲಾಮನಾಗಿ ಅರಬ್ಬಿ ಬೆದಾವಿನ್ ಬುಡಕಟ್ಟಿಗೆ ಮಾರಲ್ಪಟ್ಟಿದ್ದ ಸಿನಾನನ ಮಗ ಸಾಹೇಬ್ ಎಂಬ ಗ್ರೀಕನೊಬ್ಬ ಈ ಹೊತ್ತಿಗೆ ಇಸ್ಲಾಂ ಸ್ವೀಕರಿಸಿದ.ಮೆಕ್ಕಾದ ಪ್ರಮುಖ ವ್ಯಕ್ತಿಯಾಗಿದ್ದ ಇಬ್ನ ಜುಡಾನನ ಗುಲಾಮನಾಗಿದ್ದ ಅಪ್ಪಟ ಬಿಳಿಯ ಜನಾಂಗದ ಇವನಿಂದ ಕ್ರೈಸ್ತಧರ್ಮದ ಹಲವು ಒಳಮರ್ಮಗಳನ್ನು ಮಹಮದ್ ಅರಿತು ಬಳಸಿಕೊಳ್ಳಲು ಸಾಧ್ಯವಾಯಿತು,ಅದನ್ನೆ ಸುರಾ 4/164-183ರಲ್ಲಿ ಕಾಣಬಹುದು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ಕುರಾನಿನಲ್ಲಿ ಒಟ್ಟು ಇಪ್ಪತೈದು ಪ್ರವಾದಿಗಳ ಹೆಸರು ಪ್ರಸ್ತಾಪವಾಗಿದೆ.ಅವರಲ್ಲಿ ಮಹಮದ್,ನೂರ್.ಇಬ್ರಾಹಿಮ್,ಜೀಸಸ್ ಹಾಗೂ ಮೂಸಾ ಈ ಐವರಿಗೆ ಪ್ರಬಲ ಆತ್ಮಸ್ಥೈರ್ಯವಿರುತ್ತದೆ ಎನ್ನಲಾಗಿದೆ.

ದಿನಕಳೆದಂತೆ ಹೊಸತಾಗಿ ಮತಾಂತರಿತವಾಗಿದ್ದ ದೀನ,ದಲಿತ ಹಾಗೂ ಗುಲಾಮರ ಮೇಲೆ ಧರ್ಮನಿಷ್ಠ ಖುರೈಷಿಗಳ ಕೆಂಗಣ್ಣು ಬಿಟ್ಟು.ಅವರನ್ನು ಹಿಡಿದು ದೈಹಿಕವಾಗಿ ಹಿಂಸಿಸುವುದು,ಸೆರೆಮನೆಗೆ ತಳ್ಳುವುದು,ಹನಿನೀರನ್ನೂ ಕೊಡದೆ ಸುಡುಬಿಸಿಲಿನಲ್ಲಿ ನಿಲ್ಲಿಸಿ ವಿಧಿಯಿಲ್ಲದೆ ಮರಳಿ ಮಾತೃಧರ್ಮಕ್ಕೆ ಬರುವಂತೆ ಮಾಡುವುದು ಹೀಗೆ ಅನೇಕ ಕುಟಿಲೋಪಾಯಗಳನ್ನು ಅವರು ಹೂಡತೊಡಗಿದರು.ಈ ಬಗೆಯ ಹಿಂಸೆ ಅನುಭವಿಸಿದವರಲ್ಲಿ ಒಬ್ಬನಾಗಿದ್ದ ಬಿಲಾಲ್ ಎಂಬ ಗುಲಾಮ ಮಾತ್ರ ಸುತಾರಾಂ ಅದಕ್ಕೆ ಒಪ್ಪದೆ 'ಅಹಾದ್ ಅಹಾದ್' ಅಂದರೆ ಅರಬ್ಬಿಯಲ್ಲಿ 'ದೇವರೊಬ್ಬನೆ...ಒಬ್ಬನೇ ದೇವರು' ಎಂದು ಕಷ್ಟದಲ್ಲಿದ್ದರೂ ಜಪಿಸಹತ್ತಿದ.ಅವನ ಬಾಯಿಯಿಂದ ಹೊರಬರುತ್ತಿದ್ದ ಈ ಶಬ್ದಗಳನ್ನು ಆಲಿಸಿದ ಅದೆ ದಾರಿಯಲ್ಲಿ ಸಾಗುತ್ತಿದ್ದ ಅಬು ಬಕರ್ ಈ ಶೋಷಣೆಗೆ ಮನನೊಂದು ಕರುಣೆಯಿಂದ ಅವನ ಒತ್ತೆಹಣ ಪಾವತಿಸಿ ಅವನನ್ನು ಗುಲಾಮಗಿರಿಯಿಂದ ಬಿಡಿಸಿದ.

ಇತ್ತ ಮಹಮದನ ಮತಾನುಯಾಯಿಗಳ ಪರಿಸ್ಥಿತಿ ಹೀಗೆ ಹದಗೆಡುತ್ತಿದ್ದರೆ ಅತ್ತ ಮಹಮದ್ ಮಾತ್ರ ಕ್ಷೇಮದಿಂದಿದ್ದ.ಅವನ ದೊಡ್ಡಪ್ಪ ಅಬು ತಾಲಿಬನ ರಕ್ಷಣೆಯಲ್ಲಿ ಅವನನ್ನು ಮುಟ್ಟುವ ಧೈರ್ಯ ಯಾವ ಖುರೈಶಿಗಳಿಗೂ ಹುಟ್ಟಿರಲಿಲ್ಲ.ಅಬು ತಾಲಿಬ್ ವಯಕ್ತಿಕವಾಗಿ ಇಸ್ಲಾಮಿಗೆ ಮತಾಂತರಿತನಾಗಿರದಿದ್ದರೂ ಮಹಮದನ ಪ್ರಭಾವಕ್ಕೆ ಒಳಗಾಗಿದ್ದಂತೂ ಸತ್ಯ.ಅಲ್ಲದೆ ಅನಾಥನಾಗಿದ್ದ ಮಹಮದನ ಮೇಲೆ ಆತನಿಗೆ ಪ್ರೀತಿ ವಾತ್ಸಲ್ಯ ಅಪಾರವಾಗಿದ್ದ ಕಾರಣ ಆತನ ರಕ್ಷಣೆ ತನ್ನ ಹೊಣೆಗಾರಿಕೆ ಎಂಬಂತೆ ಆತ ವರ್ತಿಸುತ್ತಿದ್ದ.ಅದೆ ರೀತಿ ಪ್ರತಿಷ್ಠಿತ ಖುರೈಶಿವರ್ಗಗಳ ಭರ್ತ್ಸನೆಗಳಿಂದ ಅಬು ಬಕರ್ ಮಹಮದನನ್ನು ಪಾರುಮಾಡುತ್ತಿದ್ದ.ಒಂದು ಕುಟುಂಬ ಮತಾಂತರಿತವಾದರೆ ಇಷ್ಟವೋ-ನಷ್ಟವೋ ಅವರ ಸಂಬಂಧಿ ಕುಟುಂಬಸ್ತರು ಒಲ್ಲದ ಮನಸ್ಸಿನಿಂದಲಾದರೂ ನೆರವು ಸಹಕಾರಗಳನ್ನು ಜಾರಿಯಲ್ಲಿ ಇಟ್ಟುಕೊಂಡೆ ಇರುತ್ತಿದ್ದರು.ಆದರೆ ಒಂದಿಡಿ ಬುಡಕಟ್ಟಿಗೆ ಬುಡಕಟ್ಟೆ ಮತಾಂತರವಾದರೆ ಮಾತ್ರ ಅದರ ವಿರೋಧಿ ಬುಡಕಟ್ಟಿನವರಿಂದ ಹಲ್ಲೆಗೆ ಒಳಗಾಗುವ ಸಂದರ್ಭಗಳೆ ಹೆಚ್ಚಾಗಿದ್ದವು.ಹೀಗಾಗಿ ಸ್ವತಃ ತಾನು ಸುರಕ್ಷಿತನಾಗಿದ್ದರೂ ತನ್ನನ್ನು ನಂಬಿ ಬಂದವರ ಸುರಕ್ಷತೆಯ ಬಗ್ಗೆ ಸಹಜವಾಗಿ ಮಹಮದ್ ಆತಂಕಿತನಾಗಿದ್ದ.ಹೀಗಾಗಿ ಅವರಲ್ಲಿ ಆನೇಕರಿಗೆ ಸುರಕ್ಷತೆಯ ದೃಷ್ಟಿಯಿಂದ ಪ್ರಾಣವುಳಿಸಿಕೊಳ್ಳಲು ಅಬಿಸೀನಿಯಾಕ್ಕೆ ವಲಸೆ ಹೋಗುವ ಸಲಹೆ ನೀಡಿದ.ಆಗಿನ ಕಾಲದ ಅಬಿಸೀನಿಯದಲ್ಲಿ ಧಾರ್ಮಿಕ ಸಹಿಷ್ಣುತೆ ನೆಲೆಸಿದ್ದುದೆ ಅದಕ್ಕೆ ಕಾರಣ.ಅಲ್ಲದೆ ಅಲ್ಲಿಗೆ ವಲಸೆ ಹೋಗುವುದು ಸಾಮಾನು ಸರಂಜಾಮುಗಳ ಸಾಗಣೆಯ ದೃಷ್ಟಿಯಿಂದ ಸುಲಭದ್ದಾಗಿತ್ತು.ಹೀಗೆ ಆತನ ಆದೇಶದಂತೆ ಆರಂಭದಲ್ಲಿ ಮಹಮದನ ಸ್ವಂತ ಪುತ್ರಿ ರೋಕೈಯಾ ಹಾಗೂ ಆಕೆಯ ಪತಿ ಒತ್ಥಮಾನನೂ ಸೇರಿದಂತೆ ಹನ್ನೊಂದು ಮಂದಿ ವಲಸೆಹೋದರು.ಇದೆ ಮೊತ್ತ ಮೊದಲ 'ಹಿಜ್ರಾ' ಎಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ.

ಈ ವಲಸೆ ಆರಂಭವಾದ ಮೊದಲ ನಾಲ್ಕು ವರ್ಷಗಳಲ್ಲಿ ಮಹಮದನಿಗೆ ಕುರಾನ್ ಸಂದೇಶಗಳು ಸುಮಾರು ಇಪ್ಪತ್ತು ಸುರಾಗಳ ಮೂಲಕ ಹೊರಬಂದವು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ಈ ಎಲ್ಲಾ ಸುರಾಗಳಲ್ಲಿ ಮಹಮದ್ 'ಸ್ವರ್ಗ-ನರಕಗಳ ಸ್ಥಿತಿಗತಿಗಳು,ಪುನರುತ್ಥಾನ (ಇಸ್ಲಾಮಿನಲ್ಲಿ ಪುನರ್ ಜನ್ಮದ ಕಲ್ಪನೆ ಇಲ್ಲ ಅನ್ನುವುದನ್ನು ಗಮನಿಸಿ),ಅಂತಿಮ ತೀರ್ಪಿನ ದಿನ,ಧರ್ಮಬದ್ಧರು-ನೀಚರು,ಯಕ್ಷ-ಬೇತಾಳ-ಪಿಶಾಚಿಗಳು ಮಹಮದನ ಉದ್ದೇಶಕ್ಕೆ ಅನುಗುಣವಾಗಿ ಚಾಕಚಾಕ್ಯತೆಯಿಂದ ನುಡಿಯುವ ಚಿತ್ರಣದ ವಿವರಣೆ ತುಂಬಿದೆಅನ್ನುತ್ತಾನೆ' ಇತಿಹಾಸಕಾರ ಮ್ಯೂರ್.

(ಇನ್ನೂ ಇದೆ...)

No comments: