19 September 2012

ನನ್ನೊಲವಿನ ಪಾರಿಜಾತ.....


( ಒಂದು ಹೂ ಕಥೆ.)


ಈ ದೇಹಕ್ಕೆ ಮೂವತ್ತು ತುಂಬಿ ಮೂವತ್ತೊಂದಕ್ಕೆ ಬಿದ್ದು ಇಪ್ಪತ್ತು ದಿನವಾಗಿ ಹೋಗಿದೆ. ೧೯೮೨ರ ಆಗಷ್ಟ್ ೨೬ರಿಂದ ಇಲ್ಲಿಯವರೆಗೆ ಕಳೆದಿರುವ ಹತ್ತು ಸಾವಿರದ ಒಂಬೈನೂರ ಎಪ್ಪತ್ತು ದಿನಗಳಲ್ಲಿ ಅತಿಹೆಚ್ಚು ದಿನಗಳನ್ನು ನಾನು ಬೆಂಗಳೂರಿನಲ್ಲೇ ಕೆಳೆದಿದ್ದೇನೆ. ೧೯೯೯ರ ಈ ಊರಿಗೆ ಸೇರಿ ಹೋಗಿದ್ದು, ಬರಿಗೈಯಲ್ಲಿ ಏನೇನೂ ಇಲ್ಲದೆ ಅನ್ನ -ವಿದ್ಯೆ ಅರಸಿ ಇಲ್ಲಿಗೆ ಬಂದ ನನ್ನ ಬಗ್ಗೆ ನಿರೀಕ್ಷೆಗೂ ಮೀರಿ ಈ ಊರು ಉದಾರವಾಗಿದೆ. ಹಾಗೆ ನೋಡಿದರೆ ಇದೆ ಈಗ ನನ್ನೂರು, ನಾನೀಗ ಹದಿನಾರಾಣೆ ಬೆಂಗಳೂರಿಗ ಎನ್ನುವ ಹೆಮ್ಮೆ ನನಗಿದೆ. ಬಹುಷಃ ನನ್ನ ಕೊನೆಯುಸಿರಿರುವವರೆಗೂ ನಾನಿಲ್ಲಿಯೇ ಇದ್ದೇನು. "ಬೆಂಗಳೂರು ನನ್ನ ಮೊದಲ ಮನೆ: ಕೊಲಂಬೊ ಎರಡನೆಯದು" ಎಂದು ನಾನು ಆಗಾಗ ಹೇಳುವುದಿದೆ. ಬೆಂಗಳೂರಿನಷ್ಟೇ ನನ್ನ ಬೆಳವಣಿಗೆಗಳಿಗೆ ಪೋಷಕವಾಗಿ ನೀರೆರೆದ ಕೊಲೊಂಬೋ ಕೂಡ ನನ್ನ ಮನಸಿಗೆ ಆಪ್ತ. ಕೊಲಂಬೊ ಕಥನ ಮತ್ತೊಮ್ಮೆ ಹೇಳುತ್ತೇನೆ. ಸದ್ಯದಲ್ಲೆ ಅಲ್ಲೊಂದು ಮನೆ ಸ್ವಂತಕ್ಕೆ ಕೊಳ್ಳಲಿದ್ದೇನೆ ಅನ್ನೋದು ಬಹಿರಂಗ ಗುಟ್ಟು!

ನನ್ನ ಬದುಕಿನ ಆರಂಭದ ಹತ್ತು ವರ್ಷಗಳನ್ನ ತೀರ್ಥಹಳ್ಳಿಯಲ್ಲಿ ಕಳೆಯಬೇಕಾಯ್ತು. ಅಲ್ಲಿನ ಸೊಪ್ಪುಗುಡ್ಡೆಯ ನಾಲ್ಕನೇ ತಿರುವಿನಲ್ಲಿದ್ದ ೪೦*೬೦ರ ಜಾಗದೊಳಗೆ ಇಷ್ಟು ಸುದೀರ್ಘ ಸಮಯ ಕಳೆಯುವ ಅನಿವಾರ್ಯತೆಯೂ ನನಗಿತ್ತು. ನನ್ನ ಹೆತ್ತಮ್ಮನ ತವರಾದ ಅಲ್ಲಿಯೇ ನಾನು ಹುಟ್ಟಿದ್ದು. ೧೯೮೦ರಲ್ಲಿ ನನ್ನ ಹೆತ್ತವರ ಮದುವೆ ತೀರ್ಥಹಳ್ಳಿಯ ಸರಕಾರಿ ನೌಕರರಭವನದಲ್ಲಿ ಆಯಿತು. ನೋಡಲು ಸದೃಢ ಕಾಯನೂ ಸುರಸುಂದರಾಂಗನೂ ಆಗಿದ್ದ ನಮ್ಮಪ್ಪನಿಗೆ ವಿದ್ಯೆ ನಾಸ್ತಿ. ಅವರ ಅಪ್ಪ ಅವರಿನ್ನೂ ಚಿಕ್ಕವರಾಗಿರುವಾಗಲೇ ಹಾವು ಕಚ್ಚಿ ಸತ್ತು ಹೋಗಿದ್ದು ನನ್ನಪ್ಪನೂ ಸೇರಿದಂತೆ ಮೂರು ಗಂಡು ಮಕ್ಕಳು ಹಾಗು ಕಡೆಯದೊಂದು ಹೆಣ್ಣು ಅಮ್ಮ ಸಂಜೀವಮ್ಮನ ಪೋಷಣೆಯಲ್ಲಿ ಬೆಳೆದವು. ಆದರೆ ಗಂಡು ದಿಕ್ಕಿಲ್ಲದ ಮನೆಯಲ್ಲಿ ಅರಸನ ಅಂಕೆಯಿಲ್ಲದೆ ಬೆಳೆದ ಮನೆಯ ಹಿರಿಮಗ ನಮ್ಮಪ್ಪ ನಾಲ್ಕನೇ ಕ್ಲಾಸಿಗೂ ಸರಿಯಾಗಿ ಮಣ್ಣು ಹೊರದೆ ಪೋಲಿ ಅಲೆದುಕೊಂಡು ಇನ್ನೂ ಹನ್ನೆರಡು ವರ್ಷ ಮೀರುವ ಮೊದಲೇ ಬೀಡಿಯ ಚಟಕ್ಕೆ ಬಿದ್ದು, ಹದಿನೈದಾಗುವಾಗ ಕುಡಿತವನ್ನೂ ಕಲಿತು ಕೆಲಸ ಅರಸಿ ಮಾಯಾನಗರಿ ಬೊಂಬಾಯಿಗೆ ಹೋಗಿದ್ದರು. ಮದುವೆಗೆ ಐದು ವರ್ಷ ಮೊದಲೇ ಬೊಂಬಾಯಿ ಸೇರಿದ್ದ ಅವರು ತಮ್ಮ ಪುಷ್ಟಕಾಯದ ದೆಸೆಯಿಂದ ಮೊದಲು ನೈಟ್ ಕ್ಲಬ್ ಒಂದರಲ್ಲಿ ಬೌನ್ಸರ್ ಆಗಿದ್ದರು. ಆದರೆ ಆ ಕೆಲಸ ಮನಸಿಗೆ ಹಿಡಿಸದೆ ಹೋಟೆಲೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿ ಒಳ್ಳೆಯ ಪಾಕಪ್ರವೀಣರಾದರು. ಅವರಿಗೆ ಸಂಪೂರ್ಣ ಒಲಿದಿದ್ದ ಕಲೆ-ವಿದ್ಯೆ ಎಂದರೆ ಬಹುಷಃ ಅದೊಂದೆ.


ಇತ್ತ ನನ್ನ ಹೆತ್ತಮ್ಮನೂ ಆಗತಾನೆ ಎಸ್ ಎಸ್ ಎಲ್ ಸಿ ಯಲ್ಲಿ ಡುಮ್ಕಿ ಹೊಡೆದು ತ್ರಿವೇಣಿ, ಎಂ ಕೆ ಇಂದಿರಾ, ಸಾಯಿಸುತೆ, ಹೆಚ್ ಜಿ ರಾಧಾದೇವಿ ಮುಂತಾದವರ ವಿಶ್ವವಿದ್ಯಾಲಯಕ್ಕೆ ತಾಜಾ ಅರ್ಜಿ ಹಾಕಿಕೊಂಡು ಕಾದಂಬರಿ ಗೀಳಿಗೆ ಬಿದ್ದಿದ್ದರು. ಮನೆಗೆ ಹಿರಿ ಮಗಳು ಬೇರೆ ; ವಿಪರೀತ ಹಟಮಾರಿ ಸ್ವಭಾವ. ಹೀಗಿದ್ದರೂ ನನ್ನಜ್ಜನ ಪ್ರೀತಿಯ ಮಗಳು. ಇಂತಿದ್ದ ಅಹಲ್ಯ ಎಂಬ ಯೋಗ್ಯ ಕನ್ಯೆಯನ್ನು ಆ ಕಾಲದಲ್ಲಿ ಸಾಧನೆ ಅಂದು ಬಗೆಯುತ್ತಿದ್ದ ಮುಂಬೈ ಸೇರಿದ್ದಾನೆ ಎಂಬ ಏಕೈಕ ಅರ್ಹತೆಯ ಮನ್ಮಥರೂಪಿ ವರಮಹಾಶಯ ಮಂಜುನಾಥ ೧೯೮೦ರಲ್ಲಿ ಪಾಣಿಗ್ರಹಣ ಮಾಡಿಕೊಂಡ. ಮದುವೆ ಮಾಡಿಕೊಂಡಷ್ಟೇ ಬೇಗ ಹೆಂಡತಿಯನ್ನು ತವರಲ್ಲೇ ಬಿಟ್ಟು ಬೊಂಬಾಯಿ ಸೇರಿಯೂಕೊಂಡ. ಆದರೆ ಅಮ್ಮನ ( ಅಜ್ಜಿಯನ್ನು ನಾನು ಅಮ್ಮ ಎನ್ನುತ್ತೇನೆ) ಮುತುವರ್ಜಿಯಿಂದ ಮಗಳು ಗಂಡನ ಬಳಿ ಬೊಂಬಾಯಿ ತಲುಪಿಕೊಂಡಳು. ಇವಳಿಗೂ ಬೊಂಬಾಯಿಯಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಯೋಜನೆಗಳಿದ್ದವೇನೋ : ಆದರೆ ದುರಾದೃಷ್ಟವಶಾತ್ 'ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು' ಎನ್ನುವಂತೆ ಮೈ ಮರೆತ ಕ್ಷಣವೊಂದರಲ್ಲಿ ಅವರ ಮುಂದಿನ ಎಲ್ಲ ಬೊಂಬಾಯಿ ಕೇಂದ್ರಿತ ಕನಸುಗಳಿಗೆ ಸರಾಗವಾಗಿ ಕೊಳ್ಳಿಯಿಡುವಂತೆ ನಾನು ಮೂಡಿದೆ! ಸರಕಾರೀ ಸಂತಾನ ನಿಯಂತ್ರಣ ಯೋಜನೆಗಳ ಬಗ್ಗೆ ಅವರಿಬ್ಬರಿಗೂ ( ವಿಶೇಷವಾಗಿ ನನ್ನ ಹೆತ್ತಮ್ಮನಿಗೆ!) ಮಾಹಿತಿಯ ಕೊರತೆ ಇತ್ತೇನೋ, ಇಲ್ಲದಿದ್ದಲ್ಲಿ ಖಂಡಿತ ನನ್ನಂತ ಅನಪೇಕ್ಷಿತ ತಪ್ಪು ಘಟಿಸುವ ಸಾಧ್ಯತೆ ಇರುತ್ತಿರಲಿಲ್ಲ.ಪ್ರಪಂಚದಲ್ಲಿ ಇನ್ನೊಬ್ಬ ಮೂರ್ಖ ಆಗಲಾದರೂ ಕಡಿಮೆಯಾಗಿರುತ್ತಿದ್ದ ಅನ್ನಿಸುತ್ತೆ.


ಬಸುರಿ ಹೆಂಡತಿಯನ್ನು ಹೆರಿಗೆಗಾಗಿ ತವರಿಗೆ ಸಾಗ ಹಾಕಿದ ಪತಿ ಮಹಾಶಯ ಮಗುವಿನ ಮುಖನೋಡಲು ಅವಸರಾವಸರವಾಗಿ ಓಡೋಡಿ ಬಂದ. ಪಾಪ, ಕೇವಲ ಐದೂವರೆ ವರ್ಷದಷ್ಟು ತಡವಾಗಿ! ಅಲ್ಲಿಯವರೆಗೂ ನನ್ನ ಪುಟ್ಟ ಪ್ರಪಂಚದಲ್ಲಿ ಅಪ್ಪನೆಂಬ ಪ್ರಾಣಿಯ ಕಲ್ಪನೆಯೂ ಇರಲಿಲ್ಲ. ಶಿಶುವಿಹಾರದಲ್ಲಿ ಗೆಳೆಯರ ಅಪ್ಪಂದಿರನ್ನ ಕಾಣುತ್ತಿದ್ದೆನಾದರೂ ಈ 'ಅಪ್ಪ' ಎಂಬ ವ್ಯಕ್ತಿ ಕೇವಲ ಅಪ್ಶನಲ್(?) ಎಂಬ ಅಭಿಪ್ರಾಯ ನನ್ನದಾಗಿದ್ದ ದಿನಗಳವು. ಅಲ್ಲದೆ ನನ್ನ ಹೆತ್ತಮ್ಮನೂ ಸೇರಿದಂತೆ ಚಿಕ್ಕಮಂದಿರು-ಮಾವಂದಿರು ಎಲ್ಲ ಅಜ್ಜನನ್ನು ಅಪ್ಪ ಎಂದು ಕರೆಯುವಾಗ ಕೂಡು ಕುಟುಂಬದ ಮಗು ಸುಲಭವಾಗಿ ಹಿರಿಯರನ್ನು ಕಂಡು ಅನುಕರಿಸುವುದನ್ನು ಕಲಿಯುವ ಹಾಗೆ ನಾನೂ ಅಜ್ಜನನ್ನೇ ಮೊದಮೊದಲು ಅಪ್ಪ ಎಂದು ಕರೆಯುತ್ತಿದ್ದೆ. ಆದರೆ ೨೫ಕ್ಕೆ ಸರಿ ಸುಮಾರು ೨೪ರ ಸಮೀಪವೇ ಎಲ್ಲ ವಿಷಯಗಳಲ್ಲೂ ಗಳಿಸಿರುತ್ತಿದ್ದ ನನ್ನ ಮಾರ್ಕ್ಸ್ ಕಾರ್ಡಿನಲ್ಲಿ (ನಾನು ಓದಿದ್ದು ಒಂದು ಸ್ವದೇಶಿ ಖಾಸಗಿ ಶಾಲೆಯಲ್ಲಿ, ಹಾಗೂ ಇಲ್ಲಿ ಶಿಶುವಿಹಾರಕ್ಕೂ ಪರೀಕ್ಷೆಗಳಿರುತ್ತಿದ್ದವು!) ತಂದೆಯ ಹೆಸರಿರುವ ಕಡೆ ನಾರಾಯಣ ಹೆಗಡೆ (ನನ್ನಜ್ಜ) ಎಂದಿರುವ ಬದಲು ಮಂಜುನಾಥ ಹೆಗಡೆ ( ನನ್ನಪ್ಪ) ಎಂಬ ಹೆಸರಿರುವುದನ್ನು ಕಂಡು ವಿಪರೀತ ಗೊಂದಲವಾಗುತ್ತಿತ್ತು.


ಹೀಗೆ ತನ್ನ ಕನಸಿನ ವೈವಾಹಿಕ ಬದುಕು ಹಳಿತಪ್ಪಿದ ಸಿಟ್ಟಿಗೆ ನನ್ನ ತಪ್ಪಲ್ಲದ ಸಣ್ಣತಪ್ಪುಗಳಿಗೂ ಕ್ರೂರವಾಗಿ ಶಿಕ್ಷೆ ಕೊಡುತ್ತಿದ್ದ ನನ್ನ ಹೆತ್ತಮ್ಮನಿಂದ ಬಹುತೇಕ ದೂರವಿರೋದೆ ನನಗಿಷ್ಟವಾಗುತ್ತಿತ್ತು. ಹೀಗಾಗಿ ಅಮ್ಮನಿಗೆ ಹೆಚ್ಚು ಅಂಟಿ ಬೆಳೆದೆ. ಉಳಿದಂತೆ ನಾನು ಅಂತರ್ಮುಖಿಯಾಗಿಯೇ ಬೆಳೆದೆ ; ಆ ವಯಸ್ಸಿಗೆ ಮೀರಿದ ಏಕಾಂತಪ್ರಿಯತೆಯನ್ನು ರೂಢಿಸಿಕೊಂಡೆ. ಮೊಂಡುತನಕ್ಕೆ ಆಗಾಗ ಮನೆ- ಶಾಲೆಗಳಲ್ಲಿ ಸಿಕ್ಕಾಪಟ್ಟೆ ಪೆಟ್ಟು ಬಿದ್ದಷ್ಟೂ ಹೆಚ್ಚು ಹಟಮಾರಿಯಾದೆ. ಆಗೆಲ್ಲ ನನ್ನ ಆತ್ಮ ಸಂಗಾತಿಗಳಾಗಿದ್ದು ಕೊಟ್ಟಿಗೆಯಲ್ಲಿದ್ದ ಕರುಗಳು ಹಾಗು ಮನೆಯ ಆವರಣದಲ್ಲಿದ್ದ ನಾಲ್ಕು ಮರಗಳು!


ನಮ್ಮ ಮನೆಯೆದುರು ಅಂಗಳದಲ್ಲಿ ಒಂದು ಮೂಲೆಯಲ್ಲಿ ಪಾರಿಜಾತ, ಇನ್ನೊಂದು ಮೂಲೆಯಲ್ಲಿ ರತ್ನಗಂಧಿ ಮರಗಳಿದ್ದವು. ಹಿಂದಿನ ಆವರಣದಲ್ಲಿ ಒಂದು ಪಪ್ಪಾಯಿ ಮರ ಇನ್ನೊಂದು ತೆಂಗಿನ ಮರಗಳಿದ್ದವು. ಈ ತೆಂಗಿನಮರದ ಬಗ್ಗೆ ನನಗೆ ವಿಶೇಷ ಮಮತೆ. ನಾನು ಹುಟ್ಟಿದ ಖುಷಿಗಾಗಿ ನನ್ನಜ್ಜ ಅದೇ ದಿನ ತಂದು ನೆಟ್ಟ ಸಸಿಯಂತೆ ಅದು. ಅವರು ಹಾಗೆ ಹೇಳುವಾಗ ನನಗದು ಹುಟ್ಟಿದವನನ್ನು ಕಂಡಂತೆ ಅನ್ನಿಸುತ್ತಿತ್ತು. ನನ್ನಷ್ಟೇ ವಯಸ್ಸಾಗಿದೆ ಅದಕ್ಕೆ. ಆದರೆ ಹದಿನೈದು ವರ್ಷ ತುಂಬುವ ತನಕವೂ ಕಾಯಿ ಬಿಡದೆ ನನ್ನ ಹೊರತು ಉಳಿದೆಲ್ಲರಿಂದಲೂ "ಛಿ ಥೂ" ಎಂದು ಉಗಿಸಿಕೊಂಡು ; ಒಂದು ಹಂತದಲ್ಲಿ ಬರಡು ಮರ ಎಂಬ ಆರೋಪ ಹೊತ್ತು, ನನ್ನ ಕವಡೆ ಕಾಸಿನ ಬೆಲೆಯಿಲ್ಲದ ವಿರೋಧವನ್ನೂ ಲೆಕ್ಖಿಸದೆ ಕೊಡಲಿಗೆ ಆಹುತಿಯಾಗಲಿದ್ದುದು ಅವಾಗಷ್ಟೆ ಹಿಂಗಾರ ಕುಡಿಯೊಡೆದು ಕಡೆ ಕ್ಷಣದಲ್ಲಿ ಆಶ್ಚರ್ಯಕರವಾಗಿ ಜೀವ ಉಳಿಸಿಕೊಂಡಿತ್ತು. ಈಗ ಆಮರ ನಿಜಾರ್ಥದಲ್ಲಿ "ಕಲ್ಪವೃಕ್ಷ"ವಾಗಿ ಭರಪೂರ ಫಲ ನೀಡುತ್ತಿದ್ದು ಅಂದು ಅದನ್ನ ತೆಗಳುತ್ತಿದ್ದ ಸ್ವಾರ್ಥಿಗಳಿಂದಲೇ ಇಂದು ಮೆಚ್ಚುಗೆ ಗಿಟ್ಟಿಸುತ್ತ ಅವರ ಜೇಬನ್ನೂ ತುಂಬುತ್ತಿದೆ! ಅದನ್ನು ಬಿಟ್ಟರೆ ನನಗೆ ತೀರ ಇಷ್ಟವಾಗುತ್ತಿದ್ದುದು ಪಾರಿಜಾತದ ಮರ. ಇವತ್ತಿಗೂ ಅಷ್ಟೊಂದು ಸೊಗಸಾದ ಹೂವನ್ನ ನಾನು ಕಂಡಿಲ್ಲ. ನನಗಿಷ್ಟವಾದ ಹೂವ್ಯಾವುದು ಎಂಬ ಪ್ರಶ್ನೆಗೆ ಗುಮಾನಿಯೆ ಇಲ್ಲದೆ ಪಾರಿಜಾತ ಅನ್ನುತ್ತೇನೆ. ಅದರ ಪರಿಮಳದಲ್ಲೊಂದು ಮೋಹಕತೆಯಿದೆ.

ಈ ಪಾರಿಜಾತ ಭೂಮಿಗೆ ಹೇಗೆ ಬಂತು ಎನ್ನುವ ಬಗ್ಗೆ ಒಂದು ಸ್ವಾರಸ್ಯಕರವಾದ ಪೌರಾಣಿಕ ಕಥೆಯಿದೆ. ಆದರೆ ಭಾಗವತದಲ್ಲೂ ಇಲ್ಲವೇ ಮಹಾಭಾರತದಲ್ಲೂ ಕೃಷ್ಣ ತನ್ನ ಜೀವಮಾನದಲ್ಲಿ ಸ್ವರ್ಗಕ್ಕೆ ಹೋದ ಪ್ರಸ್ತಾಪ ಎಲ್ಲೂ ಬಾರದ ಕಾರಣ ಇದೊಂದು ದಂತ ಕಥೆಯಿರಬೇಕು ಅನ್ನಿಸುತ್ತೆ. ಶ್ರೀಕೃಷ್ಣನೊಮ್ಮೆ ಇಂದ್ರನ ಅಮರಾವತಿಗೆ ಹೋಗಿ ದೇವತೆಗಳ ಆದರಾತಿಥ್ಯವನ್ನು ಪಡೆದಿದ್ದನಂತೆ. ದೇವಲೋಕದ ಕಾಮಧೇನು (ದನ), ಕಲ್ಪವೃಕ್ಷ (ತೆಂಗಿನ ಮರ), ಐರಾವತ (ಬಿಳಿಯಾನೆ) ಯಂತೆ ಪಾರಿಜಾತವೂ ದೇವಪುಷ್ಪವಾಗಿತ್ತಂತೆ (ಅಂದರೆ ಇಂದ್ರನ ರಾಣಿ ಶಚಿಗೂ...ಅವನ ಸೂಳೆಯರಾದ ರಂಭೆ,ಮೇನಕೆ,ತಿಲೋತ್ತಮೆ,ಊರ್ವಶಿ,ಘ್ರತಾಚಿ ಮುಂತಾದವರಿಗಷ್ಟೇ ಸೀಮಿತವಾಗಿದ್ದ ಹೂವದು). ಅದೊಮ್ಮೆ ಅರಳಿದರೆ ಬಾಡುವ ಮಾತೆ ಇರಲಿಲ್ಲವಂತೆ. ಶ್ರೀಕೃಷ್ಣ ಮರಳಿ ಮನೆಗೆ ಹೊರಡುವಾಗ ಪತ್ನಿ ರುಕ್ಮಿಣಿ ಆಸೆಯಿಂದ ಹೇಳಿ ಕಳಿಸಿದ್ದನ್ನು ನೆನಪಿಸಿಕೊಂಡು ಅವಳಿಗಾಗಿ ಇಂದ್ರನಿಂದ ಕೇಳಿ ಪಡೆದ ನಾಲ್ಕಾರು ಪಾರಿಜಾತದ ಹೂಗಳನ್ನು ತನ್ನ ಉತ್ತರೀಯದ ಅಂಚಿಗೆ ಕಟ್ಟಿಕೊಂಡು ಮರಳಿ ಬಂದನಂತೆ.


ಬಂದವ ರುಕ್ಮಿಣಿಗೆ ಹೂವು ಮುಟ್ಟಿಸಿ ಸತ್ಯಭಾಮೆಯ ಬಿಡಾರಕ್ಕೆ ಬಂದ.ಅಲ್ಲಿ ಅವನ ಉತ್ತರೀಯಕ್ಕೆ ಅಂಟಿದ್ದ ಪಾರಿಜಾತದ ಸೌಗಂಧಕ್ಕೆ ಮರುಳಾದ ಅವಳು ಅವಳಿಗಾಗಿಯೇ ಇವನು ತಂದಿದ್ದ ಸೌಗಂಧಿಕ ಪುಷ್ಪ, ಕಾಮಧೇನುವಿನ ಹಾಲು ಇವನ್ನೆಲ್ಲ ಎಡಗೈಯಲ್ಲೂ ಮುಟ್ಟದೆ ಏನೋ ವಿಶೇಷವಾದದ್ದನ್ನ ನನಗೆ ತಾರದೆ ವಂಚಿಸಿದ್ದಿ ಎಂದು ಸವತಿ ಮಾತ್ಸರ್ಯದಿಂದ ರಂಪ ಮಾಡಿದಳಂತೆ! ಅಷ್ಟೇ ಅಲ್ಲದೆ ಅದೊಂದು ಹೂವೆಂದು ತಿಳಿದೊಡನೆ ನನಗದರ ಮರವೇ ಬೇಕೆಂದು ಹಠಮಾಡಿದಳಂತೆ?! ಇದರಿಂದ ರೋಸತ್ತ ಶ್ರೀಕೃಷ್ಣ ಪರಮಾತ್ಮ ಮರಳಿ ಸ್ವರ್ಗಕ್ಕೆ ಹೋಗಿ ಇಂದ್ರನಿಗೆ ವಿಷಯ ಅರುಹಿ ಹೂವಿನ ಗಿಡದ ಕೊಂಬೆಯೊಂದನ್ನ ತಂದು ಭಾಮೆಗೆ ಕೊಟ್ಟ ನಂತರವೆ ಅವಳ ಕೋಪ ಶಮನ ಆಯಿತಂತೆ. ಇಷ್ಟೆಲ್ಲಾ ರಣರಂಪಕ್ಕೆ ಕಾರಣವಾದ ಪಾರಿಜಾತಕ್ಕೆ ಇನ್ನು ಮೇಲೆ ಅರಳಿದಷ್ಟೇ ವೇಗವಾಗಿ ಬಾಡಿಯೂ ಹೋಗು, ನಿನ್ನ ಮೈ ಮೇಲೆ ಧಾರಾಳವಾಗಿ ಹುಳು-ಹುಪ್ಪಡಿಗಳು ಮನೆ ಮಾಡಲಿ ಎಂಬ ಘೋರ ಶಾಪ ಕೊಟ್ಟನಂತೆ ಕೃಷ್ಣ!.ಇದ್ಯಾವ ಸೀಮೆ ನ್ಯಾಯ ಸ್ವಾಮಿ? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ! ಅಲ್ಲ ಸತ್ಯಭಾಮೆಯ ಮುಂದೆ ಕುನ್ನಿಯಂತೆ ಬಾಲಮುದುರಿ ಕೊಂಡಿದ್ದ ಹೆಂಡತಿ ಗುಲಾಮ ಕೃಷ್ಣ [ಇವ ಜಗತ್ ರಕ್ಷಕ ಬೇರೆಯಂತೆ,ಥೂ ಅದ್ಬೇರೆ ಕೇಡು ಆ ಕರಿ ಮುಖಕ್ಕೆ!] ಏನೂ ತಪ್ಪರಿಯದ ಪಾಪದ ಪಾರಿಜಾತಕ್ಕೆ ಭೀಕರ ಶಾಪ ಕೊಟ್ಟೆಬಿಟ್ಟ . ಹೀಗೆ ನೆಲ ಸೇರಿದ ಶಾಪಗ್ರಸ್ತ ಪಾರಿಜಾತಕ್ಕೆ ಮರಳಿ ದೇವಲೋಖದ ಪ್ರವೇಶ ಸಿಗಲಿಲ್ಲವಂತೆ. ಇಂದೂ ಕೂಡ ಅದಿರುವ ಮನೆಯಲ್ಲಿ ಗಂಡ-ಹೆಂಡಿರಲ್ಲಿ ಜಗಳವಾಗಿಯೇ ತೀರುತ್ತದೆ ಎನ್ನುವುದು ಪ್ರತೀತಿ.


ರತ್ನಗಂಧಿ, ಅಬ್ಬಲಿಗೆ, ಕಾಕಡ- ಮಂಗಳೂರು- ಕಸ್ತೂರಿ ಮಲ್ಲಿಗೆಗಳು, ಚಂಡು ಹೂ, ನಂದಬಟ್ಟಲು, ಕೆಂಪು-ಕೆನೆ ಬಣ್ಣದ ಗುಲಾಬಿ, ಸೇವಂತಿಗೆ, ಸೂರ್ಯಕಾಂತಿ, ಅರಿಶಿನದ ಹೂ ( ಹೆಸರು ಮಾತ್ರ ಅರಿಶಿನ ;ಹೂ ಬಿಳಿಯದೆ), ಕಬಾಳೆ ಹೂ, ಕೆಂಪು-ಗುಲಾಲಿ ತುಂಬೆ ಹೂ, ನೆಲ ಗುಲಾಬಿ, ಕೆಂಪು- ಹಳದಿ- ಬಿಳಿ- ಕೆನೆವರ್ಣದ ದಾಸವಾಳದ ಹೂ ಹೀಗೆ ಅಸಂಖ್ಯ ಹೂ ಗಿಡಗಳು ನಮ್ಮ ಮನೆಯ ಸುತ್ತ ಮಾಡಿದ್ದ ಪಾತಿಯಲ್ಲಿ ಬೇಲಿಗುಂಟ ಮೈತುಂಬ ಹೂ ಹೊಮ್ಮಿಸಿ ಕಣ್ಣಿಗೆ ಹಿತವಾಗುತ್ತಿದ್ದರೂ ಅದೆಲ್ಲಕ್ಕಿಂತ ಎತ್ತರದಲ್ಲಿ ಮರದಲ್ಲರಳಿ ನೆಲ ಮುಟ್ಟುತ್ತಿದ್ದ ಪಾರಿಜಾತದಷ್ಟು ಇನ್ಯಾವುದೇ ಹೂವು ನನಗೆ ಮೋಡಿ ಮಾಡಿರಲಿಲ್ಲ. ಈ ಸುಮಾ ಸುಂದರಿ ಪಾರಿಜಾತದ್ದು ಅಲ್ಪಾಯುಷ್ಯ ಅನ್ನೋದನ್ನ ನೋಡಿ ಎಸ್ಟೋ ಸಲ ಬೇಜಾರು ಮಾಡಿಕೊಂಡಿದ್ದೀನಿ.

ಸಂಜೆ ಹೊತ್ತು ಕಂತುವಾಗ ಮುತ್ತು ಪೋಣಿಸಿದಂತೆ ಕಾಣುವ ದುಂಡು ಮೊಗ್ಗುಗಳು ನಸು ಮುಂಜಾನೆಯಲ್ಲಿ ಅಂದವಾಗಿ ಅರಳಿ ಏಳೆಂಟು ಗಂಟೆಯ ಹೊತ್ತಿಗೆಲ್ಲ ಉದುರಿ ನೆಲಮುಟ್ಟುತ್ತಿದ್ದವು. ನಸುಕಿನಲ್ಲಿ ಸೋಮಾರಿ ಸಿದ್ಧನಂತೆ ತಡವಾಗಿ ಹಾಸಿಗೆ ಬಿಟ್ಟೆದ್ದವ ಇತ್ತ ಸಂಸ್ಕೃತ ವಾರ್ತೆಯ ಕೊನೆಯ ಸಾಲು "...ಇತಿ ವಾರ್ತಾಹ" ಕೇಳಿಬರುತ್ತಿದ್ದ ಹಾಗೆ ಓಡಿಹೋದರೆ ಹೂವುಂಟು, ಇಲ್ಲದಿದ್ದರೆ ಅರ್ಧ ಅಂಗಳದಲ್ಲಿ- ಇನ್ನರ್ಧ ರಸ್ತೆಯಲ್ಲಿ ಬೀಳುತ್ತಿದ್ದ ಅವು ಒಂದೊ ಓಡಾಡುವವರ ಕಾಲ್ತುಳಿತಕ್ಕೆ ಸಿಕ್ಕು ಇಲ್ಲವೆ ಮೇಲೇರುವ ಸೂರ್ಯನ ಧಗೆಗೋ ಮುರುಟಿ ಮಣ್ಣು ಪಾಲಾಗುತ್ತಿದ್ದವು. ಬೆಳಗಾತ ಎದ್ದ ಕೂಡಲೇ ಮನೆಯ ಅಂಗಳ ಗುಡಿಸಿ ಸಾರಿಸಿ ನಮ್ಮ ಕಲ್ಲು ದಣಪೆಯ ಮುಂದೆ ಅಂದವಾಗಿ ಅಮ್ಮನೋ- ಚಿಕ್ಕಂಮಂದಿರೋ ಇಟ್ಟಿರುತ್ತಿದ್ದ ರಂಗೋಲಿಯ ಅಂಕುಡೊಂಕು ಸಾಲುಗಳ ಮೇಲೆ ಉದುರಿದ ಪಾರಿಜಾತಗಳನ್ನೆಲ್ಲ ಆರಿಸಿ ತಂದು ತಲೆ ಕೆಳಗಾಗಿ ತೊಟ್ಟು ಮೇಲಾಗಿ ಜೋಡಿಸಿಟ್ಟು ಅಂದ ನೋಡುವುದು ನನ್ನ ಅತ್ಯಂತ ಪ್ರಿಯವಾದ ಹವ್ಯಾಸ. ಬಿಳಿ ಪಕಳೆಗಳ ಹಿಂದಿನ ಕೇಸರಿ ತೊಟ್ಟು ಪಾರಿಜಾತಕ್ಕೆ ವಿಶೇಷ ವರ್ಣವೈಭವವನ್ನ ಕೊಟ್ಟಂತೆ ಅನ್ನಿಸುತ್ತಿತ್ತು. ಈ ಹೂವನ್ನು ದಾರದಲ್ಲಿ ಕಟ್ಟಲಾಗದಷ್ಟು ಸೂಕ್ಷ್ಮವಾಗಿ ಅದಿರುತ್ತಿದ್ದರಿಂದ ಸೂಜಿಗೆ ದಾರ ಪೋಣಿಸಿ ಅದನ್ನು ಹೆಣೆದು ದೇವರ ಪಟಕ್ಕೆ ಮಾಲೆಯಾಗಿ ಹಾಕುತ್ತಿದ್ದುದು ನೆನಪಾಗುತ್ತದೆ.

ಪಾರಿಜಾತದ ಶಾಪದ ಕಥೆ ಅಲ್ಲಿಗೆ ಮುಗಿಯಲಿಲ್ಲ. ಇತ್ತ ಗಿಡ ತಂದು ಸತ್ಯಭಾಮೆಗೆ ಕೊಟ್ಟ ಕೃಷ್ಣ ಅದನ್ನು ನೆಡುವಾಗ ಮತ್ತೆ ತನ್ನ ಕುತಂತ್ರ ಮೆರೆದ. ನೆಟ್ಟದ್ದು ಭಾಮೆಯ ಅಂಗಳದಲ್ಲಾದರೂ ಅದು ಬೆಳೆದು ಬಾಗಿದ್ದು ರುಕ್ಮಿಣಿಯ ಅಂಗಳದತ್ತ! ಹೂವೆಲ್ಲ ಅಲ್ಲಿಯೇ ಉದುರುತ್ತಿತ್ತು. ಅಲ್ಲಿಗೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಆ ಕರಿಯ. ನಿತ್ಯ ಹೂ ಸಿಕ್ಕು ರುಕ್ಮಿಣಿಯೂ ಸುಖಿ! ತನ್ನಂಗಳದಲ್ಲೇ ಪೂರ ಮರ ಹೊಂದಿ ಮತ್ಸರ ಸಾಧಿಸಿಕೊಂಡ ಭಾಮೆ ಪರಮಸುಖಿ!!

ಒಮ್ಮೆ ನವರಾತ್ರಿಯ ಸಮಯ ಶಾಲೆಯಲ್ಲಿ ಸರಸ್ವತಿ ಪೂಜೆಗಾಗಿ ಎಲ್ಲ ಮಕ್ಕಳಿಗೂ ಹೂ ತರಲು ಹೇಳಿದ್ದರು. ನನ್ನ ಸಹಪಾಟಿಗಳೆಲ್ಲ ತಮ್ಮ ಮನೆಯಲ್ಲಿ ಅರಳಿದ್ದೋ- ಇಲ್ಲ ಉಳ್ಳವರ ಅಪ್ಪಂದಿರು ಹೂವಂಗಡಿಯಲ್ಲಿ ಕೊಡಿಸಿದ್ದೋ ಅಂತೂ ಭಾರಿ ಚಂದದ ಹೂಗಳನ್ನೆ ಕೊಂಡೊಯ್ದು ಹೊಗಳಿಸಿಕೊಂಡಿದ್ದರೆ, ಅಷ್ಟೇ ಅಸ್ಥೆಯಿಂದ ನಾನೂ ಆರಿಸಿ ಕೊಂಡೊಯ್ದಿದ್ದ ಪಾರಿಜಾತದ ಹೂ ಶಾಲೆ ತಲುಪುವಾಗಲೆ ಅರೆ ಬಾಡಿದ್ದು ನಾನು ಎಲ್ಲರಿಂದ ಅಪ ಹಾಸ್ಯಕ್ಕೀಡಾಗಿದ್ದೆ. ಹೈಸ್ಕೂಲಿನ ಕೊನೆಯ ದಿನಗಳಲ್ಲಿ ಆಗಷ್ಟೇ ನಾನು ಹೊಸ ಹೊಸತಾಗಿ ಪರಿಚಯದ ಹುಡುಗಿಯೊಬ್ಬಳ ಒಲವಲ್ಲಿ ಬಿದ್ದಿದ್ದೆ.ಈ ಹಾಳು ಒಲವಾಗಿದ್ದು ನನ್ನ ಬಾಳಲ್ಲಿ ಒಂದೇ ಒಂದು ಸಾರಿ, ಇಂದಿಗೂ ಅವಳನ್ನೇ ಪ್ರೀತಿಸುತ್ತಿದ್ದೇನೆ ಅವಳೀಗ ಮದುವೆಯಾಗಿ ಸಾನ್ ಫ್ರಾನ್ಸಿಸ್ಕೊದಲ್ಲಿದ್ದಾಳೆ ?!.


ಒಂಬತ್ತನೇ ತರಗತಿಯ ಕೊನೆಯ ಪರೀಕ್ಷೆಯ ದಿನಗಳವು. ಪರೀಕ್ಷೆಯ ಹಾಲಿನಲ್ಲಿ ಬೆಂಚಿಗೆ ಇಬ್ಬರಂತೆ ಒಬ್ಬ ಒಂಬತ್ತನೆಯ ತರಗತಿಯ ಹಾಗು ಇನ್ನೊಬ್ಬ ಎಂಟನೆಯ ತರಗತಿಯವರನ್ನ ಕ್ರಮವಾಗಿ ಕೂರಿಸುತ್ತಿದ್ದರು. ನನ್ನ ಅದೃಷ್ಟಕ್ಕೆ ಎಂಟನೆ ತರಗತಿಯಲ್ಲಿನ ಅವಳ ಕ್ರಮಸಂಖ್ಯೆಯೂ ಒಂಬತ್ತರಲ್ಲಿದ್ದ ನನ್ನ ಕ್ರಮಸಂಖ್ಯೆಯೂ ಒಂದೇ ಬೆಂಚಿನಲ್ಲಿ ಬಿದ್ದಿತ್ತು! ಕನಿಷ್ಠ ಆರು ದಿನಗಳ ಮಟ್ಟಿಗಾದರೂ ನನಗೆ ಲಾಟರಿ ಹೊಡೆದಿತ್ತು!! ಆ ಖುಷಿಗೆ ತೀರ ಬಾಲಿಶವಾಗಿ ವರ್ತಿಸಿ ಬೇಕೂಫನೂ ಆಗಿದ್ದೆ. ಪರೀಕ್ಷೆಯ ಕೊನೆಯ ದಿನದ ಹಿಂದಿನ ಸಂಜೆ ಅವಳಿಗಾಗಿ ವಿಶೇಷವಾಗಿ ಪಾರಿಜಾತದ ದುಂಡು ಮೊಗ್ಗುಗಳನ್ನೆಲ್ಲ ಜೋಪಾನವಾಗಿ ಬಿಡಿಸಿ ನನ್ನ ಕರವಸ್ತ್ರದಲ್ಲಿ ಜತನದಿಂದ ಕಟ್ಟಿ ಮನೆಯ ಮಾಡಿನ ಮೇಲೆ ಇಬ್ಬನಿಗೆ ಇಟ್ಟಿದ್ದೆ. ಅರಳಿದ ಮೇಲೆ ಅದು ಬಾಡಿ ಹೋದೀತು ಎಂಬ ಅರಿವಿದ್ದುದರಿಂದ ವಹಿಸಿದ್ದು ಈ ಮುತುವರ್ಜಿ. ಇಷ್ಟೆಲ್ಲಾ ಮುಂಜಾಗರೂಕತೆ ವಹಿಸಿದ್ದರೂ ಶಾಲೆಗೆ ಹೋಗುವಾಗ ( ಅಂದು ಮಧ್ಯಾಹ್ನ ಪರೀಕ್ಷೆ ಇತ್ತು.) ಯಥಾಪ್ರಕಾರ ಮೊಗ್ಗು ಕೂಡ ಬಾಡಿ ಹೋಗಿ ಕೊಡಲು ಕೀಳರಿಮೆ ಕಾಡಿ ಮನಸ್ಸಾಗಲೇ ಇಲ್ಲ. ಅಷ್ಟು ಆಸೆಯಿಂದ ಕೊಡುವ ಅಂದು ಕೊಂಡಿದ್ದ ನನ್ನ ಮನಸೂ ಕೂಡ ಆ ದಿನ ಥೇಟ್ ಪಾರಿಜಾತದಂತೆ ಮುದುಡಿ ಮುರುಟಿ ಹೋಗಿತ್ತು. ಅವಳಿಗೆ ಕಡೆಗೂ ಹೂ ಕೊಡಲಾಗಲಿಲ್ಲ ಎಂಬ ಸಂಕಟ ಇಂದಿಗೂ ನನ್ನ ಭಾದಿಸುತ್ತಿದೆ.

No comments: