23 September 2012

ಗಿಣ್ಣು ಎಂಬ ತ್ರಿಶಂಕು ಸ್ವರ್ಗ....

ನನ್ನ ಮನಸಿನಲ್ಲಿ ಆದಿತ್ಯವಾರ ಹಾಗೂ ಶನಿವಾರಗಳೆಂದರೆ ಶಾಲೆಗೆ ಮಣ್ಣು ಹೊರುತ್ತಿದ್ದ ಬಾಲ್ಯದ ದಿನಗಳಲ್ಲಿ ವಿಪರೀತ ಪ್ರೀತ್ಯಾದರ ಇರುತ್ತಿದ್ದವು. ಆಗೆಲ್ಲ ನಮಗೆ ವಾರಕ್ಕೆ ಐದು ದಿನ ಪೂರ್ತಿ ಶಾಲೆಯಿದ್ದರೆ ಶನಿವಾರ ಬೆಳಗಿನ ತರಗತಿ ಮಾತ್ರ ನಡೆಯುತ್ತಿತ್ತು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಯೆ ಹತ್ತಕ್ಕೆ ಶುರುವಾಗಿ ಐದಕ್ಕೆ ಬಿಡುತ್ತಿದ್ದ ತರಗತಿಗಳು ಶನಿವಾರ ಮಾತ್ರ ಬೆಳಗ್ಯೆ ಎಂಟೂ ಕಾಲಿಗೆ ಶುರುವಾಗಿ ಹನ್ನೊಂದೂ ಕಾಲಿಗೆ ಶಾಲೆ ಬಿಡುತ್ತಿತ್ತು. ಮುಂದಿನ ಒಂದುವರೆ ದಿನ ಕೇವಲ ನಮ್ಮದು. ವಾರಪೂರ್ತಿ ಬೆವರು- ಮಣ್ಣು ಹಿಡಿದು ನಾತ ಹೊಡೆಯುತ್ತಿದ್ದ ಸಮವಸ್ತ್ರದಲ್ಲಿ ನರಳುತ್ತಿದ್ದ ನಮ್ಮೆಲ್ಲರಿಗೆ ಶನಿವಾರದ ಬಣ್ಣದ ಬಟ್ಟೆಗಳ ದಿನವೆಂದರೆ ಲವಲವಿಕೆಯ ದಿನ. ನಾವೆಲ್ಲರೂ ಹನ್ನೊಂದೂವರೆಗೆ ಶಾಲೆ ಬಿಟ್ಟು ಹೊರಡುತ್ತಿರುವಂತೆ ಮನಸಿನಲ್ಲಿ ಮುಂದಿನ ಒಂದೂವರೆದಿನಗಳ ಅವಧಿಗೆ ವಿವಿಧ ಪಂಚವಾರ್ಷಿಕ ಯೋಜನೆಗಳನ್ನ ಹಾಕಿಕೊಂಡೆ ಹೆಜ್ಜೆಯಿಡುತ್ತಿದ್ದೆವು ಅಥವಾ ಮನೆಗಳತ್ತ ದೌಡಾಯಿಸುತ್ತಿದ್ದೆವು. ವಾರವಿಡಿ ನಮ್ರತೆಯನ್ನ ನಟಿಸುತ್ತಲಾದರೂ ಮನೆಯ ಕೆಲಸ ಕಾರ್ಯಗಳಲ್ಲಿ ವಿಧೇಯನಾಗಿರುತ್ತಿದ್ದ ನನ್ನ "ಮಾರ್ಜಾಲ ಸನ್ಯಾಸ"ಕ್ಕೆ ನಿಜವಾಗಿಯೂ ಮನ ಕರಗಿಯೋ ಏನೋ ಮನೆಮಂದಿಯೆಲ್ಲಾ ಆ ಒಂದೂವರೆ ದಿನದ ಮಟ್ಟಿಗೆ ನನ್ನ ಮೇಲೆ ಅಲ್ಪ ಸ್ವಲ್ಪ ಉದಾರ ಮನಸನ್ನ ತೋರುತ್ತಿದ್ದರು. ಆದರೆ ನನ್ನ ಅಸಲಿಯತ್ತಿನ ವಾಸನೆ ಹಿಡಿದಿರುತ್ತಿದ್ದ ಕಿರಿಯ ಚಿಕ್ಕಮ್ಮನಿಂದ ಇವೆಲ್ಲದಕ್ಕೂ ವಿವಿಧ ಆಕ್ಷೇಪಣೆಗಳ "ವಿಟೋ" ವೊಂದು ಸದಾ ಅವಳ ಅನುಮಾನದ ಬತ್ತಳಿಕೆಯಿಂದ "ಅಕ್ಷಯ ಅಂಬು"ವಿನಂತೆ ಬಂದು ಅಮ್ಮನ ಮುಂದೆ ಬೀಳುತ್ತಿದ್ದರೂ ಅಮ್ಮ ಅವನ್ನೆಲ್ಲ ಅವತ್ತಿನ ಮಟ್ಟಿಗೆ ( ಕೇವಲ ಅವತ್ತಿನ ಮಟ್ಟಿಗೆ ಮಾತ್ರ! ) ಗಂಭೀರವಾಗಿ ಪರಿಗಣಿಸದೆ ಸ್ವಲ್ಪ ಸೊಕ್ಕಲು ವಾರಾಂತ್ಯದಲ್ಲಿ ನನಗೆ ಬಿಡುವು ಕೊಡುತ್ತಿದ್ದರು. ಈ ಬಿಡುಗಡೆಯ ಭಾಗ್ಯದ ರುಚಿ ಕಂಡವ "ಪ್ರತಿದಿನವೂ ಶನಿವಾರ, ಭಾನುವಾರಗಳೆ ಆಗಿರಲಿ ದೇವಾ" ಅಂತ ನಿತ್ಯದ ಭಜನೆಯಲ್ಲಿ ಮನಸಾರೆ ಬೇಡಿಕೊಳ್ಳುತ್ತಿದ್ದೆ.


"ಭಕ್ತ ಪ್ರಹ್ಲಾದ"ದಲ್ಲಿ ಎಳೆಯ ಭಕ್ತನ ಮೊರೆಯನ್ನಾಲಿಸಿ ಕಂಭದಿಂದ ಸಿಡಿದೆದ್ದು ಹೊರಬಂದ ಪ್ರಭು ಎಂದಾದರೊಮ್ಮೆ ಹಾಗೆ ನನ್ನ ಮುಂದೆಯೂ ಪ್ರತ್ಯಕ್ಷನಾಗಿ ನನ್ನ ಈ ಬೇಡಿಕೆಗೂ "ತಥಾಸ್ತು" ಎನ್ನುತ್ತಾನೆ ಎನ್ನುವ ಗಾಢ ನಂಬಿಕೆ ಬಾಲ್ಯದುದ್ದಕ್ಕೂ ನನಗಿತ್ತು. ಅಂತಹ ಶುಭ ಸಂಧರ್ಭದಲ್ಲಿ ಅವನಿಗೆ ಚಾಡಿ ಹೇಳಿಕೊಟ್ಟು ಹಿರಣ್ಯಕಾಶುಪುವಿನಂತಹ ನನ್ನ ಕಿರಿ ಚಿಕ್ಕಮ್ಮನಿಗೂ ಒಂದು ತಕ್ಕ ಪಾಠ ಕಲಿಸಲೇ ಬೇಕು ಅಂತ ಮನಸೊಳಗೆ ತೀರ್ಮಾನಿಸಿಕೊಂಡಿದ್ದೆ. ಇರಲಿ, ಆ ಸಂದರ್ಭ ಇನ್ನೂ ಬದುಕಿನಲ್ಲಿ ಕೂಡಿ ಬಂದಿಲ್ಲ!


ಆದರೆ ಈ ಬಿಡುವಿಗೂ ಅನೇಕ "ಪೂರ್ವ ಷರತ್ತುಗಳು ಅನ್ವಯ"ವಾಗುತ್ತಿದ್ದವು. ಮೊದಲನೆಯದಾಗಿ ಅಂದು ಬೇಗ ಉಂಡು ಅಮ್ಮನ ಜೊತೆ ಕುಶಾವತಿಯ ಸರಕಾರಿ ಫಾರ್ಮಿಗೋ, ಇಲ್ಲವೆ ಶಟ್ಟರ ಗದ್ದೆಯ ನಾಡ್ತಿ ಹೊಳೆಯಂಚಿಗೋ, ಅದೂ ಅಲ್ಲದಿದ್ದರೆ ಪುರಸಭೆಯ ಹಿಂದಿದ್ದ ಸಾಬರ ಹಳೆ ಸ್ಮಶಾನಕ್ಕೋ ಹೋಗ ಬೇಕಾಗುತ್ತಿತ್ತು. ಅಲ್ಲೆಲ್ಲ ಸಮೃದ್ಧವಾಗಿ ಬೆಳೆದಿರುತ್ತಿದ್ದ ಕಡ್ಡಿಕಡ್ಡಿಯಂತಹ ಹಸಿ ಹುಲ್ಲುಗಳನ್ನ ಅಮ್ಮ ತನ್ನ ಕೈಗತ್ತಿಯಿಂದ ಕೂಯ್ದೂ ಕುಯ್ದೂ ಕಟ್ಟು ಕಟ್ಟಿ ಸಿದ್ಧ ಮಾಡುತ್ತಿದ್ದರು. ನಾನು ಹಾಗೂ ಅಮ್ಮ ಸೇರಿ ಅದನ್ನ ಮನೆಗೆ ಸಾಗಿಸುತ್ತಿದ್ದೆವು. ನನ್ನ ಗಾತ್ರಕ್ಕೆ ತಕ್ಕ ಸಾಮರ್ಥ್ಯದ ಚಿಕ್ಕ ಕಟ್ಟು ನನ್ನ ತಲೆಯೇರುತ್ತಿದ್ದರೆ, ದೊಡ್ಡ ಕಟ್ಟನ್ನ ಅಮ್ಮ ಹೊರುತ್ತಿದ್ದರು. ಹೀಗೆ ಹತ್ತಾರು ಬಾರಿ ಅಲ್ಲಿಗೂ ಮನೆಗೂ ಓಡಾಡಿ ಹುಲ್ಲು ಹೊತ್ತು ಹಾಕಿ ನಮ್ಮ ಮನೆಯ ನಾಲ್ಕು ಕಾಲಿನ ನೆಂಟರ ವಾರದ ಹಸಿ ಹುಲ್ಲಿನ ಹಂಬಲಕ್ಕೆ ಒಂದು ದಾರಿ ಮಾಡುವಾಗ ಹೊತ್ತು ಯಾರ ಅನುಮತಿಗೂ ಕಾಯದೆ ಜಾರಿ ಮೂರರ ಸಮೀಪ ಬಂದು ಮುಟ್ಟಿರುತ್ತಿತ್ತು. ನಡುನಡುವೆ ಮುಖದ ಅಂಚಿನಿಂದ ಧಾರಾಕಾರವಾಗಿ ಸುರಿಯುವ ಬೆವರನ್ನ ತಲೆಗೆ ಸಿಂಬಿ ಸುತ್ತಿ ಕೊಂಡಿದ್ದ ಬೈರಾಸಿನಿಂದ ಆಗಾಗ ಒರೆಸಿಕೊಳ್ಳುತ್ತಲೇ ಆದಷ್ಟು ಶೀಘ್ರ ಈ ಕೆಲಸದ ಹೊರೆಯನ್ನ ಕೊಟ್ಟಿಗೆಯವರೆಗೂ ಸಾಗಿಸುವ ಕೆಲಸವನ್ನ ಓಡೋಡುತ್ತಲೇ ಮಾಡಿ ಪೂರೈಸುತ್ತಿದ್ದೆ.


ಇದು ಮುಗಿದ ಮೇಲೆ ಸದರಿ ಹುಲ್ಲನ್ನೆಲ್ಲ ಅಟ್ಟಕ್ಕೆ ಸಾಗಿಸುವ ಕೆಲಸ ಬಾಕಿ ಉಳಿಯುತ್ತಿತ್ತು. ಉತ್ತಮ ಮೋಪಿನ ಮರದಿಂದ ಮಾಡಿದ್ದ ನಮ್ಮ ಕೊಟ್ಟಿಗೆಯ ಸಣ್ಣಟ್ಟ ಮತ್ತೆ ಕೇವಲ ಬಿದಿರ ದಬ್ಬೆ ಹಾಸಿದ್ದ ದೊಡ್ಡಟ್ಟ ಎರಡೂ ನಮ್ಮ ಕೊಟ್ಟಿಗೆಯಲ್ಲಿತ್ತು. ದೊಡ್ಡಟ್ಟದಲ್ಲಿ ಈ ವಾರದ ಖರ್ಚಿನ ಹಸಿ ಹುಲ್ಲುಗಳನ್ನೆಲ್ಲ ಶೇಖರಿಸಿ ಇಡಬೇಕಾಗಿತ್ತು, ನಾನೆ ಏಣಿ ಏರಿ, ಅಟ್ಟ ಹಟ್ಟಿ ಅಮ್ಮ ಕೆಳಗಿನಿಂದ ಕೊಡುವ ಹುಲ್ಲಿನ ಹೊರೆಗಳನ್ನೆಲ್ಲ ಅಟ್ಟದಲ್ಲಿ ಒತ್ತಿ ಒತ್ತಿ ಕೂಡಿಡಬೇಕಿತ್ತು. ಮಳೆಗಾಲದ ಹಿಂಚು ಮುಂಚಿನ ದಿನಗಳಲ್ಲಿ ಮಾತ್ರ ಸಿಗುತ್ತಿದ್ದ ಈ ಹಸಿ ಹುಲ್ಲಿನ ಹೊರೆಯನ್ನ ನಾವು ಹೊತ್ತು ತಂದಾಗ ನಮ್ಮ ಕೊಟ್ಟಿಗೆಯ ದನಗಳ ಕಣ್ಣುಗಳು ಆಸೆಯಿಂದ ಹೊಳೆಯುತ್ತಿದ್ದುದು, ಅವುಗಳ ಬಾಯಿ ಅಯಾಚಿತವಾಗಿ ಜೊಲ್ಲು ಸುರಿಸುತ್ತಿದ್ದುದು ಎಲ್ಲಾ ಮತ್ತೆ ನೆನಪಾಗುತ್ತಿದೆ. ನಾವು ಕಟ್ಟಿ ಹಾಕಿಯೇ ಸಾಕುತ್ತಿದ್ದ ಪಾಪದ ಆ ಮೂಕ ಜೀವಗಳ ಕನಿಷ್ಠ ಬಯಕೆಗಳನ್ನಾದರೂ ತೀರಿಸಿದ ತೃಪ್ತಿ ಆಗೆಲ್ಲಾ ಮನಸಿನಲ್ಲಿ ಮೂಡಿ ಒಂಥರಾ ಖುಷಿ ಮನಮಾಡುತ್ತಿತ್ತು. ನಮ್ಮ ಮನೆಯಲ್ಲಿ ಸುಮಾರು ದನಗಳಿದ್ದರೂ ಎಮ್ಮೆ ಮಾತ್ರ ಇದ್ದದ್ದು ಒಂದೆ. ಅದೂ ಕೂಡ "ಲೋನೆಮ್ಮೆ"!. ಲೋನೆಮ್ಮೆ ಅಂದರೆ ಬ್ಯಾಂಕಿನಲ್ಲಿ ಸಾಲ ಮಾಡಿ ಖರೀದಿಸಿದ್ದು. ಸದರಿ ಸಾಲ ಕೊಟ್ಟ ಬ್ಯಾಂಕಿನವರು ಗುರುತಿಗಾಗಿ ಅದರ ಕಿವಿ  ಚುಚ್ಚಿಸಿ ಬೆಂಡೋಲೆಯಂತಹ ಒಂದು ಬ್ಯಾಂಕಿನ ಮುದ್ರೆಯಿರುವ ಗುರುತಿನ ಹಿತ್ತಾಳೆ ಬಿಲ್ಲೆಯೊಂದನ್ನ ಎಮ್ಮೆಯ ಎಡ ಗಿವಿಗೆ ಹಾಕಿದ್ದರು. ಸಾಮಾನ್ಯವಾಗಿ ಎಲ್ಲಾ ಸಾಲ ಪಡೆದು ಖರೀದಿಸಿದ ಎಮ್ಮೆಗಳಿಗೆ ಇಂತಹ "ಬ್ಯಾಂಕ್ ಬೆಂಡೋಲೆ" ಸಾಲದ ಕೊನೆಯ ಪೈಸ ಸಂದಾಯವಾಗುವವರೆಗೂ ಖಾಯಂ ಆಗಿ ರಾರಾಜಿಸುತ್ತಿತ್ತು. ಅವಳಿಗೊಬ್ಬ ಮುದ್ದಾದ ಗಂಡು ಕರು ಕುಮಾರನೂ ಇದ್ದ. ಮೇಲ್'ಬಸ್ಟ್ಯಾಂಡಿನ ಬಳಿಯಿರುವ ಎರಡು ಎಮ್ಮೆ ದೊಡ್ಡಿಗಳಲ್ಲೊಂದರಿಂದ ಆಮ್ಮ ಇನ್ನೂ ಹಸುಗೂಸಾಗಿದ್ದ ಮರಿಕೋಣನನ್ನು ತೋಳಲ್ಲಿ ಎತ್ತಿ ಕೊಂಡು ಬಂದಿದ್ದರೆ, ತನ್ನ ಕಂದನನ್ನೆ ಕಕ್ಕುಲಾತಿಯಿಂದ ದಿಟ್ಟಿಸುತ್ತಾ ಅವನ ಮೈಯನ್ನ ಅವಕಾಶವಾದಾಗಾಲೆಲ್ಲ ರಸ್ತೆಯುದ್ದಕ್ಕೂ ಚೂರುಪಾರು ನೆಕ್ಕುತ್ತಾ ಅವನಮ್ಮ ನನ್ನಮ್ಮನ ಹಿಂದೆ ಹಿಂದೆಯೆ ಸನ್ಮೋಹಿನಿಗೆ ಒಳಗಾದವಳಂತೆ ಕಾತರದ ಹೆಜ್ಜೆ ಹಾಕುತ್ತಾ ನಮ್ಮ ಮನೆಯ ಹಿಂಬಾಗಿಲ ದಣಪೆ ದಾಟಿ ನಮ್ಮ ಕುಟುಂಬದ ಖಾಯಂ ಸದಸ್ಯಳಾಗಿ ಸೇರಿ ಹೋಗಿದ್ದಳು.


ಮೊದಲಿಗೆ ಅಲ್ಲಿ ಅದಾಗಲೇ ಹಕ್ಕು ಸಾಧಿಸಿದ್ದ ದನಗಳ ಮಂದೆ ಈ ಹೊಸಬಳನ್ನ ತಿವಿಯುವಂತೆ ದಿಟ್ಟಿಸಿದ್ದು ಹೌದಾದರೂ ಕ್ರಮೇಣ ಅವಳ ಇರುವನ್ನೂ ಸಹಜವಾಗಿ ಒಪ್ಪಿಕೊಂಡು ಅವಳನ್ನೂ ಸಮಾನ ದೃಷ್ಟಿಯಿಂದ ಕಾಣತೊಡಗಿದರು. ಆ ದಿನ ನನಗಿನ್ನೂ ಚನ್ನಾಗಿ ನೆನಪಿದೆ. ಮಿರಿಮಿರಿ ಮಿಂಚುತ್ತಿದ್ದ ಮೈಯಿನ ಎಮ್ಮೆಯಮ್ಮ- ಇನ್ನೂ ರೋಮಾವೃತ್ತ ಮೈಯ ಬೆದರಿದ ಕಣ್ಣುಗಳ ತನ್ನ ಪುಟ್ಟ ಕೋಣ ಕುಮಾರನೊಂದಿಗೆ ನಮ್ಮ ಮನೆಯನ್ನ ಹೊಕ್ಕ ಆ ದಿನ ನನ್ನ ನೆನಪಿನ ಭಿತ್ತಿಯಿಂದ ಮಾಸಿಲ್ಲ . ಅವನಿಗೂ ನಮ್ಮ ಮನೆಯಲ್ಲಿ ಅವನ ಪ್ರಾಯದ ಇನ್ನಿತರ ತುಂಟ ಕಾರುಗಳಿಗೆ ಸಿಗುತ್ತಿದ್ದ ಸಕಲ ಸೌಭಾಗ್ಯಗಳೂ ಲಭ್ಯವಾದವು. ರಾತ್ರಿ ಅವನನ್ನ ಚನ್ನಾಗಿ ಹೊದಿಸಿ ಅವನಿಗಾಗಿಯೇ ಮಾಡಿದ್ದ ಹೊಸಾ ಗೋಣಿ ತಾಟಿನ ಹಾಸಿಗೆ ಮೇಲೆ ನಮ್ಮ ಅಡುಗೆ ಮನೆಯೊಳಗೆ ಮಲಗಿಸಿಕೊಳ್ಳಲಾಗಿತ್ತು. ಉತ್ಸಾಹ ಹೆಚ್ಚಾಗಿದ್ದ ನನಗೋ ಒಬ್ಬ ಹೊಸ ತಮ್ಮ ಸಿಕ್ಕಿದ್ದ ಖುಷಿಯಿತ್ತು. ನಮ್ಮೆಲ್ಲರ ಅತಿ ಮುಚ್ಚಟೆಯನ್ನ ಅರಿತುಕೊಂಡ ಆತ ಒಂದೆರಡು ದಿನದಲ್ಲಿಯೆ ಮೈಚಳಿಯನ್ನೆಲ್ಲ ಬಿಟ್ಟು ತನ್ನ ಮಗು ಸಹಜ ವರ್ತನೆಗಳಿಂದ ನಮ್ಮನ್ನೆಲ್ಲ ರಂಜಿಸಿದ. ಬರುಬರುತ್ತಾ ನಮ್ಮೆಲ್ಲರ ಮೇಲೂ "ರೌಡಿ ರಾಥೋಡ "ನಂತೆ ಹಕ್ಕು ಸಾಧಿಸತೊಡಗಿದ. ನಾವೇನಾದರೂ ತಿನ್ನುವುದನ್ನ, ತಿನ್ನುವ ವಸ್ತುವೇನಾದರೂ ನಮ್ಮ ಕೈಯಲ್ಲಿದ್ದದ್ದನ್ನ ನೋಡಿದರೆ ಅದನ್ನ ತನಗೆ ಕೊಡುವ ತನಕ ಹಟ ಮಾಡುತ್ತಿದ್ದ. ಹಾರಿ ಕಿತ್ತು ಕೊಳ್ಳಲು ವಿಫಲ ಯತ್ನಕ್ಕಿಳಿಯುತ್ತಿದ್ದ. ಹಟ್ಟಿಗೆ ಹೋದವರನ್ನೆಲ್ಲ ಹಸಿ ಹುಲ್ಲು ಕೊಡುವಂತೆ ಪೀಡಿಸುತ್ತಿದ್ದ. ಬೆಳ್ಳಂಬೆಳಗ್ಯೆ ಇನ್ನುಳಿದ ಕರುಗಳಿಗಿಂತ ಮೊದಲೆ ಅಮ್ಮ ತನಗೆ ಹಬೆಯಾಡುವ ರುಚಿರುಚಿಯಾದ ತೌಡು ಬೆರೆಸಿದ ಅಕ್ಕಚ್ಚು ಕೊಡದಿದ್ದರೆ ಇತರರೊಂದಿಗೆ ಗುದ್ದಾಟಕ್ಕಿಳಿಯುತ್ತಿದ್ದ . ಒಟ್ಟಿನಲ್ಲಿ ನಮ್ಮ ಮನೆಯಲ್ಲಿ ಅವನ ಪಾರಮ್ಯದ ಮುಂದೆ ನಾವೆ ಪರದೇಶಿಗಳಾಗಿ ಹೋದೆವು!


 ಉಳಿದಂತೆ ನಮ್ಮ ಕೊಟ್ಟಿಗೆಯಲ್ಲಿದ್ದ ದನಗಳ ಗ್ಯಾಂಗಿಗೆ ತಲೆಮಾರುಗಳ ಹಿನ್ನೆಲೆಯಿದೆ. ನಮ್ಮ ಮನೆಯ ಪಶು ಸಂಪತ್ತನ್ನ ಹೆಚ್ಚಿಸಿದ ಹಿರಿಮೆ ಲಕ್ಷ್ಮಿಗೆ ಸಲ್ಲಬೇಕು. ಮದುವೆಯಾಗಿದ್ದ ಹೊಸತರಲ್ಲಿ ಕೊಪ್ಪ ಚಿಕ್ಕಪ್ಪನ ಡ್ರೈವಿಂಗ್ ಗುರುಗಳಾಗಿದ್ದ ಬಾಳೆಬೈಲಿನ ಶೀನಪ್ಪ ಶೆಟ್ಟರ ಮನೆಯಿಂದ ಇನ್ನೂ ಮೈನೆರೆದಿರದ ಲಕ್ಷ್ಮಿಯನ್ನ ನನ್ನ ತಾಯಿಯ ತಾಯಿ ಮನೆಗೆ ತಂದಿದ್ದರಂತೆ. ಶೆಟ್ಟರ ಮನೆಯಾಕೆ ಮೀನಾಕ್ಷಿಯಮ್ಮ ನಮ್ಮೆಲ್ಲರ ಪಾಲಿಗೆ ಪ್ರೀತಿಯ "ಅಜ್ಜಿ"ಯಾಗಿ ಉಳಿದು ಹೋಗಿದ್ದರು. ಮನೆಗೆ ಯಾರಾದರೂ ನೆಂಟರು ಬಂದ ಪಕ್ಷದಲ್ಲಿ ಅವರನ್ನ ಸಿದ್ಧೇಶ್ವರ ಗುಡ್ಡಕ್ಕೆ ಕರೆದೊಯ್ಯುವುದು ಆಗೆಲ್ಲ ನಮ್ಮಲ್ಲಿ ಒಂದು ಸಂಪ್ರದಾಯವೆ ಆಗಿತ್ತು. ಹೋಗುವಾಗ- ಬರುವಾಗ ನಾವು ಗುಡ್ಡದ ಅಂಚಿಗೆ ಇದ್ದ ಮೀನಾಕ್ಷಿ ಅಜ್ಜಿಯ ಮನೆಗೆ ಎಡತಾಕುತ್ತಿದ್ದೆವು. ಗುಡ್ಡಕ್ಕೆ ಹೋಗುವಾಗ ನಮಗೆ ಅವರು ಅವರ ಹಿತ್ತಲ ಗದ್ದೆಯಲ್ಲೇ ಬೆಳೆದಿದ್ದ ಬಾಳೆಹಣ್ಣು- ಪೇರಳ ಹಾಗೂ ನೇರಳೆ ಹಣ್ಣು ದಾರಿ ಖರ್ಚಿಗೆ ಕಟ್ಟಿ ಕೊಟ್ಟು ಅಲ್ಲಿದ್ದ ಸಿದ್ಧೇಶ್ವರನಿಗೆ ಮಾಡಿಸಲು ಹಣ್ಣು ಕಾಯನ್ನೂ ಕಟ್ಟಿ ಕೊಡುತ್ತಿದ್ದರು. ಮತ್ತೆ ಮರಳಿ ಕತ್ತಲಾಗುವಾಗ ಅಲ್ಲಿಂದ ಮನೆಗೆ ಹಿಂದಿರುಗುವಾಗ ಅವರ ಮನೆಯಲ್ಲಿ ನಮಗೆಲ್ಲರಿಗೂ ಚನ್ನಾಗಿ ಕಾಯಿ- ಸಕ್ಕರೆ- ಹಸಿ ಮೆಣಸು ಬೆರೆಸಿದ ಅವಲಕ್ಕಿ ಜೊತೆಗೆ ಕಾಫಿಯ ಸಮಾರಾಧನೆ ಮಾಡಿಸುತ್ತಿದ್ದರು. ಅವನ್ನೆಲ್ಲ ತಯಾರು ಮಾಡಿಟ್ಟುಕೊಂಡು ನಮ್ಮ ದಾರಿಯನ್ನೆ ಕಾಯುತ್ತಾ ಅವರ ಮನೆಯ ಉದ್ದನೆಯ ಗೇಟಿನ ಹತ್ತಿರ ಕಣ್ಣು ಕಿರುದುಗೊಳಿಸಿಕೊಂಡು ಕೈಯನ್ನ ದೃಷ್ಟಿ ನಿಖರವಾಗಿಸಿಕೊಳ್ಳಲು ನೆರೆ ಬಂದಿದ್ದ ತನ್ನ ಹುಬ್ಬಿನ ಮೇಲೆ ಅಡ್ಡ ಹಿಡಿದು ನಿಂತ ಮೀನಾಕ್ಷಿ ಅಜ್ಜಿ ಮತ್ತೆಮತ್ತೆ ನೆನಪಾಗುತ್ತಾರೆ. ಅವರ ಅವಲಕ್ಕಿಯ ರುಚಿ ಬಿಸಬಿಸ ಹೆಜ್ಜೆ ಹಾಕಿ ಗುಡ್ಡ ಇಳಿದು ಅವರ ಮನೆ ಮುಟ್ಟುವಂತೆ ಕಾಲುಗಳಿಗೆ ಪುಸಲಾಯಿಸುತ್ತಿದ್ದ ದಿನಗಳ ಸವಿ ಇನ್ನೂ ಮನದ ಮೂಲೆಯಲ್ಲಿರುವ ನೆನಪಿನ ಪೆಟ್ಟಿಗೆಯಲ್ಲಿ ಭದ್ರವಾಗಿದೆ.ಅವರಲ್ಲಿಂದ ನಮ್ಮ ಮನೆಗೆ ಬರುವಾಗ ಈ ಲಕ್ಷ್ಮಿ ಎಳೆಗರು. ಮಲೆನಾಡು ಗಿಡ್ಡ ತಳಿಗೆ ಸೇರಿದ ಮಣ್ಣಿನ ಬಣ್ಣದ ಕುಳ್ಳನೆಯ ಲಕ್ಷ್ಮಿ ನಮ್ಮ ಕೊಟ್ಟಿಗೆ ತುಂಬಿದ್ದ ಎಲ್ಲಾ ಸಂತಾನಗಳಿಗೂ ರಾಜಮಾತೆ. ಈ ಹಿರಿಯಜ್ಜಿಯ ಕಣ್ಣ ಆರೈಕೆಯಲ್ಲಿಯೇ ಅವಳ ಮಕ್ಕಳ, ಮೊಮ್ಮಕ್ಕಳ ಅಷ್ಟೆ ಏಕೆ ಮರಿ ಮಕ್ಕಳ ಹೆರಿಗೆಯಾಗಿ ಅವರೆಲ್ಲರ ಸಂಸಾರ ಬೆಳೆದಿದೆ. ಈ ಲಕ್ಷ್ಮಿ ನಾನು ಸರಿಯಾಗಿ ಕಣ್ಣು ಬಿಡುವ ಹೊತ್ತಿಗೆಲ್ಲ ಅಜ್ಜಿಯಾಗಿದ್ದಳು. ನನ್ನ ತಾಯಿಯ ತಾಯಿ ಸತ್ತು ಮನೆಗೆ ನನ್ನ 'ಅಮ್ಮ'ನ ಪ್ರವೇಶ ಆದ ನಂತರ ಲಕ್ಷ್ಮಿ ಅಮ್ಮನ ಆಪ್ತ ವಲಯಕ್ಕೆ ಸೇರಿ ಹೋಗಿದ್ದಳು. ಪುಟ್ಟ ದೇಹಾಕೃತಿಯ ಲಕ್ಷ್ಮಿಯದ್ದು ಪರಮ ಸಾಧು ಸ್ವಭಾವ. ಅವಳ ಮಕ್ಕಳು ಮೊಮ್ಮಕ್ಕಳೊಂದಿಗೆ ನಾನೂ ಎಷ್ಟೋ ಸಲ ಅಮ್ಮ ಹಾಲು ಕರೆದಾದ ಮೇಲೆ ಅವಳ ಮೊಲೆಗೆ ಬಾಲ್ಯದಲ್ಲಿ ಬಾಯಿ ಹಾಕಿ ಹಾಲು ಹೀರಿದ್ದೇನೆ. ಅವಳಿಗೆ ತನ್ನವರು- ಪರರು ಎಂಬ ಭೇದ ಭಾವವಿಲ್ಲ. ಎಲ್ಲಾ ಮಕ್ಕಳೂ ತನ್ನ ಮಕ್ಕಳೆ ಎನ್ನುವಂತೆ ನಮ್ಮ ಇಂತಹ ಬೇಕು ಬೇಡಗಳನ್ನ ತನಗೆ ಅದೆಷ್ಟೇ ಹಿಂಸೆಯಾದರೂ ತಡಕೊಂಡು ಪೂರೈಸಿದ್ದಾಳೆ ಅವಳು. ಮೊದಲ ಹೆರಿಗೆಯಲ್ಲಿ ತ್ರಾಸವಾಗಿ ಕರು ಸತ್ತು ಹುಟ್ಟಿದ ನಂತರ ಅಮ್ಮ ಅವಳಿಗೆ ಕೃತಕ ಗರ್ಭಧಾರಣೆಯನ್ನ ಮಾಡಿಸುತ್ತಿದ್ದರು .ಪ್ರತಿ ಬಾರಿ ಕೊಟ್ಟಿಗೆಯ ಸುಂದರಿಯರಲ್ಲಿ ಯಾರಾದರು ಬೆದೆಗೆ ಬಂದಾಗಲೂ ನಮ್ಮ ಮನೆಯಿಂದ ಮೂರು ಬೀದಿ ದೂರವಿದ್ದ ವಾಸಣ್ಣನಿಗೆ ಕರೆ ಹೋಗುತ್ತಿತ್ತು. ಈ ದೂತನಾಗುವ ಹೊಣೆ ನನ್ನದೆ ಆಗಿರುತ್ತಿದ್ದರಿಂದ ನನಗೆ ಈ ಪಂಚಾಯ್ತಿಯೆಲ್ಲ ತುಂಬಾ ಚನ್ನಾಗಿ ಗೊತ್ತು. ವಾಸಣ್ಣ ನಮ್ಮೂರಿನ ಜಾನುವಾರು ಆಸ್ಪತ್ರೆಯ ಕಾಂಪೌಂಡರ್ , ಆದರೆ ನಮ್ಮ ಕೊಟ್ಟಿಗೆಯ ಮೂಲ ನಿವಾಸಿಗಳ ಪಾಲಿಗೆ ಸಾಕ್ಷಾತ್ ಅವರೇ ಡಾಕ್ಟರ್. ಅವರು ಅಲ್ಲಿಗೆ ಬಂದರೆಂದರೆ ಅಲ್ಲಿನ ಘಟವಾಣಿಯರ ಸದ್ದೆಲ್ಲ ಕ್ಷಣದಲ್ಲಿ ಅಡಗಿ "ಎಲ್ಲಿ ಈ ಸಾರಿ ನನಗೆ ದಬ್ಬಣದಂತಹ ಸೂಜಿ ಚುಚ್ಚಿ ಇಂಜೆಕ್ಷನ್ ಕೊಡುತ್ತಾರೋ!" ಎನ್ನುವ ಕಲ್ಪನೆಯಲ್ಲಿಯೆ ಹೆದರಿದ ಅವರೆಲ್ಲರ ಹಿಡಿತ ಮೀರಿ ಸಗಣಿ ಉಚ್ಚೆ ಹೊರಬಂದು ದೊಪದೊಪ ಕೆಳಗುರುಳುತ್ತಿತ್ತು. ಉದ್ದನೆಯ ಗಾಜಿನ ಕೊಳವೆಗಳನ್ನ ಜೋಪಾನವಾಗಿರಿಸಿದ್ದ ಪಿವಿಎಸ್ ಪೈಪಿನಂತಹ ಕೊಳವೆ ಡಬ್ಬವನ್ನು ವಾಸಣ್ಣ ತರುತ್ತಿದ್ದರು. ಮತ್ತೊಂದು ಕೈಪರ್ಸಿಗಿಂತ ದೊಡ್ಡದಾದ ಚರ್ಮದ ಚೀಲವೂ ತಪ್ಪದೆ ಅವರ ಕಂಕುಳ ಸಂಧಿಯಲ್ಲಿ ರಾರಾಜಿಸುತ್ತಿರುತ್ತಿತ್ತು.. ಅವರ ಕೊಳವೆ ಡಬ್ಬಿಯಿಂದ ತೆಗೆದ ಉದ್ದನೆಯ ಗಾಜಿನ ತೆಳೂ ನಳಿಕೆಯೊಂದನ್ನ ದನದ ಪುಕುಳಿಯಲ್ಲಿ ತೂರಿಸಿ ಅವರು ಬೆದೆಗೆ ಬಂದ ಸುಂದರಿಯರಿಗೆಲ್ಲ ಅದೇನೂ ಒಂದು "ಚಿಕಿತ್ಸೆ" ಮಾಡುತ್ತಿದ್ದರು!


 ಅವರು ಹಾಗೆ ಮಾಡುವಾಗ ವರ ಕೈ ಮೊಣ ಗಂಟಿನವರೆಗೂ ಒಳ ತೂರಿ ಹೊರಬರುತ್ತಿದ್ದರಿಂದ ಅಲ್ಲಿಯವರೆಗೂ ಸಗಣಿ ಮಯವಾಗಿರುತ್ತಿತ್ತು. ನಾನು ಅನಂತರ ಕೈತೊಳಕೊಳ್ಳಲಿಕ್ಕೆ ಸೋಪು ಕೊಟ್ಟು ಚೋಬಿನಿಂದ ನೀರೆರೆಯುತ್ತಿದ್ದೆ. ಅವರ ಈ ಚಿಕಿತ್ಸೆ ಫಲಿಸಿ ಕೆಲವೆ ತಿಂಗಳಲ್ಲಿ ನನಗೊಬ್ಬ ತಮ್ಮನೋ- ತಂಗಿಯೋ ಒಂದು ಶುಭಗಳಿಗೆಯಲ್ಲಿ ಅವರಮ್ಮನ ಮಾಸಿನಿಂದ ಕಳಚಿಕೊಂಡು ದೊಪ್ಪನೆ ಧರೆಗುರುಳುತ್ತಿದ್ದರು. ನನಗೆ ಮತ್ತೊಂದು ವಾರ ತಿನ್ನಲಿಕ್ಕೆ ಸಮೃದ್ಧ ಗಿಣ್ಣು ಸಿಗುತ್ತಿತ್ತು! ಈ ಗಿಣ್ಣುವಿನ ಆಸೆಗೆ ವಾಸಣ್ಣನಿಗೆ ಕರೆ ಕಳಿಸುವ ದೂತನ ಕೆಲಸವನ್ನ ಅತಿ ಉತ್ಸಾಹದಿಂದ ಮಾಡುತ್ತಿದ್ದೆ. ಈ ಉತ್ಸಾಹದ ಭರದಲ್ಲಿ ಆಗಾಗ ಹೊತ್ತಲ್ಲದ ಹೊತ್ತಿನಲ್ಲಿ "ವಾಸಣ್ಣನನ್ನ ಕರ್ಕೊಂಡು ಬರಲ? ಅವ್ರು ಬಂದು ತುಂಬಾ ದಿನ ಆಯ್ತಲ್ಲ!" ಅಂತ ಅಮ್ಮನ ಹತ್ತಿರ ಕೇಳಿ ಮನೆಮಂದಿಯಿಂದೆಲ್ಲ ಧರ್ಮಕ್ಕೆ ಸಿಕ್ಕಾಪಟ್ಟೆ ಉಗಿಸಿಕೊಳ್ಳುತ್ತಿದ್ದೆ. ನನ್ನ ಗಿಣ್ಣದ ಆಸೆಗೆ ಮೂಲವಾಗಿದ್ದ ವಾಸಣ್ಣನ ಆಗಮನದ ಕಾತರ ಅವರ್ಯಾರಿಗೂ ಅರ್ಥವೆ ಆಗದಿದ್ದುದು ಮಾತ್ರ ನನ್ನಲ್ಲಿ ಖೇದ ಹುಟ್ಟಿಸುತ್ತಿತ್ತು?!


No comments: