10 November 2013

ಕರುನಾಡ ಅಧುನಿಕ ಆಳರಸರು.









ಸಂಸದೀಯ ಪ್ರಜಾಪ್ರಭುತ್ವಕ್ಕೆ ಒಳಪಟ್ಟ ನಂತರ ಕರ್ನಾಟಕ ಇಲ್ಲಿಯವರೆಗೂ ಹದಿನಾಲ್ಕು ವಿಧಾನ ಮಂಡಲಗಳನ್ನೂ, ಇಪ್ಪತ್ತೆರಡು ಮುಖ್ಯಮಂತ್ರಿಗಳನ್ನೂ ಕಂಡಿದೆ. ಈ ಹದಿನಾಲ್ಕರಲ್ಲಿ ಮೊದಲನೆಯದು ನೇಮಕದ ಮೂಲಕ ಆಗಿದ್ದರೆ ಇನ್ನುಳಿದ ಹದಿಮೂರು ಮಂದಿ ಚುನಾವಣೆಗಳ ಮೂಲಕ ಆಯ್ಕೆಗೊಂಡಿದ್ದಾರೆ. ಇವರಲ್ಲಿ ನಾಲ್ಕು ಮಂದಿ ಎರಡೆರಡು ಬಾರಿ ಅಧಿಕಾರದ ಗದ್ದುಗೆಯನ್ನ ಏರಿದ್ದರೆ ಒಬ್ಬರು ಮೂರು ಸಾರಿ ಆಧಿಕಾರದ ಸೂತ್ರ ಹಿಡಿಯುವ ಅದೃಷ್ಟವಂತರಾಗಿದ್ದರು. ಪ್ರತಿಯೊಬ್ಬ ಮುಖ್ಯಮಂತ್ರಿಯ ಅಧಿಕಾರವಧಿಯಲ್ಲೂ ಕರುನಾಡು ವಿಭಿನ್ನ ನೆಲೆಯಲ್ಲಿ ಬೆಳೆದಿದೆ. ಒಬ್ಬೊಬ್ಬರ ಕಾಲಾವಧಿಯಲ್ಲೂ ವಿಭಿನ್ನ ಸವಾಲುಗಳು ನಾಡಿನ ಮುಂದಿದ್ದವು. ಅದರಲ್ಲಿ ಕೆಲವನ್ನ ತಮ್ಮ ಮಿತಿಯಲ್ಲಿ ಇವರಲ್ಲಿ ಕೆಲವರು ಸಮರ್ಥವಾಗಿ ನಿಭಾಯಿಸಿದರೆ ಇನ್ನು ಕೆಲವರು ತಮ್ಮ ಖಾಸಗಿ ಖಜಾನೆ ತುಂಬಿಸಿಕೊಳ್ಳುವ ಹಪಾಹಪಿ ಹಾಗೂ ಸಿಂಹಾಸನವನ್ನೇರಿದ ರೋಮಾಂಚನದಲ್ಲಿ ನಾಡಿನ ಹಿತಾಸಕ್ತಿಗೆ ಎಳ್ಳುನೀರು ಬಿಟ್ಟರು.


ಈ ಇಪ್ಪತ್ತೆರಡು ಮಂದಿಯಲ್ಲಿ ಕೆ ಚಂಗಲರಾಯರೆಡ್ಡಿ. ಕೆಂಗಲ್ ಹನುಮಂತಯ್ಯ, ಕಡಿದಾಳು ಮಂಜಪ್ಪ, ಎಸ್ ನಿಜಲಿಂಗಪ್ಪ, ಬಿ ಡಿ ಜತ್ತಿ, ಎಸ್ ಆರ್ ಕಂಠಿ, ವೀರೇಂದ್ರ ಪಾಟೀಲ್, ಡಿ ದೇವರಾಜ ಅರಸು, ಆರ್ ಗುಂಡೂರಾವ್, ಎಸ್ ಬಂಗಾರಪ್ಪ, ಮರ್ಪಾಡಿ ವೀರಪ್ಪ ಮೊಯ್ಲಿ, ಎಸ್ ಎಂ ಕೃಷ್ಣ, ಧರ್ಮಸಿಂಗ್, ಸಿದ್ಧರಾಮಯ್ಯ ಹೀಗೆ ಹದಿನಾಲ್ಕು ಮಂದಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿದ್ದರೆ, ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ, ಹೆಚ್ ಡಿ ದೇವೇಗೌಡ, ಜೆ ಹೆಚ್ ಪಟೇಲ್, ಹೆಚ್ ಡಿ ಕುಮಾರಸ್ವಾಮಿ ಜನತಾ ಪರಿವಾರದ ಶಾಸಕಾಂಗ ನಾಯಕರಾಗಿದ್ದರು. ಇವರಿಗೆ ಪೈಪೋಟಿ ಕೊಡುವಂತೆ ಕೇವಲ ಐದು ವರ್ಷದ ಕಾಲಾವಧಿಯಲ್ಲಿ ಭಾರತೀಯ ಜನತಾ ಪಕ್ಷ ಬಿ ಎಸ್ ಯಡಿಯೂರಪ್ಪ, ಡಿ ವಿ ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಹೀಗೆ ಮೂರು ಮೂರು ಮಂದಿಯನ್ನ ತಮ್ಮ ಶಾಸಕಾಂಗ ಪಕ್ಷದ ನಾಯಕರನ್ನಾಗಿಸಿಕೊಂಡು ದೊಡ್ಡಾಟ ನಡೆಸಿದರು.


ಜಾತಿಯ ದೃಷ್ಟಿಯಿಂದ ನೋಡುವುದಾದರೂ ಸಹ ಇಲ್ಲಿಯವರೆಗೆ ತಲಾ ಆರು ಒಕ್ಕಲಿಗ ಹಾಗೂ ಇತರ ಹಿಂದುಳಿದ ವರ್ಗಗಳ ಮುಖ್ಯಮಂತ್ರಿಗಳನ್ನ, ಎಂಟು ಲಿಂಗಯತ ಮುಖ್ಯಮಂತ್ರಿಗಳನ್ನ, ಇಬ್ಬರು ಬ್ರಾಹ್ಮಣ ಮುಖ್ಯಮಂತ್ರಿಗಳನ್ನ ಕರ್ನಾಟಕ ಕಂಡಿದೆ. ಅಖಂಡ ಕರ್ನಾಟಕದ ಎರಡು ಪ್ರಬಲ ಜಾತಿಗಳಾದ ಲಿಂಗಾಯತ ಹಾಗೂ ಒಕ್ಕಲಿಗ ಜಾತಿಯ ಮುಖಂಡರು ಈ ಐವತ್ತೆಂಟು ವರ್ಷದುದ್ದಕ್ಕೂ ಅಧಿಕಾರದ ಗದ್ದುಗೆಯನ್ನೇರಲಿಕ್ಕಾಗಿ ಪಕ್ಷಾತೀತವಾಗಿ ಮೇಲಾಟ ನಡೆಸಿರುವುದನ್ನ ಕಾಣಬಹುದು. ಬಹುಸಂಖ್ಯಾತ ಜಾತಿಯೊಂದರ ನಿವ್ವಳ ಬೆಂಬಲ ಪಡೆದ ನಾಯಕರು ಗದ್ದುಗೆಗೆ ಏರಿದ ಉದಾಹರಣೆಗಳಂತೆ, ಇನ್ನೊಂದು ಪ್ರಬಲ ಜಾತಿಯನ್ನ ಸರಾಸಗಟಾಗಿ ಎದುರು ಹಾಕಿಕೊಂಡ ನಾಯಕರು ಬರಿ ಚಡ್ಡಿಯಲ್ಲಿ ಬೆತ್ತಲಾಗಿ ಬೀದಿಯ ಪಾದಾಚಾರಿ ಮಾರ್ಗದ ಪಾಲಾದ ಉದಾಹರಣೆಗಳೂ ಸಾಕಷ್ಟಿವೆ.


ದೇಶಕ್ಕೆ ಸ್ವಾತಂತ್ರ ಬಂದ ಹೊಸತರಲ್ಲಿ ಇನ್ನೂ ಭಾರತ ಗಣರಾಜ್ಯವಾಗಿರಲಿಲ್ಲ. ಹೀಗಾಗಿ ಅಂದಿನ ಪ್ರಾಂತೀಯ ಸರಕಾರದ ಮುಖ್ಯಮಂತ್ರಿಗಳನ್ನ ಕೇಂದ್ರ ಸರಕಾರದ ಶಿಫಾರಸ್ಸುಗಳ ಅನುಸಾರ ಅಂದಿನ ಗವರ್ನರ್ ಜನರಲ್ ಅಂದರೆ ಗಣರಾಜ್ಯ ಘೋಷಣೆಯ ನಂತರದ ರಾಷ್ಟ್ರಪತಿಗಳೆ ನೇಮಿಸುತ್ತಿದ್ದರು. ಹೀಗೆ ನೆಹರು ಬಯಕೆಯಂತೆ ಅಂದಿನ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ದು ಕೊಂಡದ್ದು ಕೋಲಾರ ಜಿಲ್ಲೆ ಬಂಗಾರಪೇಟೆಯ ಕ್ಯಾಸಂಬಳ್ಳಿ ಮೂಲದವರಾದ ಕಟ್ಟಾ ಕಂಗ್ರೆಸ್ಸಿಗ ಚೆಂಗಲರಾಯರೆಡ್ಡಿಯವರನ್ನ. ಆರಂಭದಲ್ಲಿ "ಪ್ರಜಾ ಪಕ್ಷ"ದ ಮೂಲಕ ಶುರುವಾದ ಚಂಗಲರಾಯರೆಡ್ಡಿಯವರ ರಾಜಕೀಯ ಯಾತ್ರೆ ಅನಂತರ ಕಾಂಗ್ರೆಸ್ಸಿನಲ್ಲಿ ತಮ್ಮ ಪಕ್ಷವನ್ನ ವಿಲೀನವಾಗಿಸುವ ಮೂಲಕ ಪ್ರಕರವಾಯಿತು.


ಕೆ ಸಿ ರೆಡ್ಡಿ ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳಾಗಿ ನಾಲ್ಕು ವರ್ಷದ ನೂರಾ ಐವತ್ತೇಳು ದಿನ ಗದ್ದುಗೆಯಲ್ಲಿದ್ದರು. ಅದೆ ಅವಧಿಯಲ್ಲಿ ದೇಶದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಪದವಿಯಿಂದ ನಿರ್ಗಮಿಸಿದ ನಂತರ ಅವರು ಕ್ರಮವಾಗಿ ಒಂದು ಅವಧಿಗೆ ರಾಜ್ಯಸಭಾ ಹಾಗೂ ಕೋಲಾರದಿಂದ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಲೋಕಸಭಾ ಸದಸ್ಯತ್ವದ ಕೊನೆಯ ವರ್ಷ ಕೇಂದ್ರ ಸರಕಾರದ ವಾಣಿಜ್ಯ ಹಾಗೂ ಭಾರಿ ಕೈಗಾರಿಕೆಗಳ ಖಾತೆಯ ಸಚಿವರೂ ಆಗಿದ್ದರು. ಆನಂತರ ಅವರನ್ನ ರಾಷ್ಟ್ರಪತಿಗಳು ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿಯೂ ನೇಮಿಸಿದರು. ಮೈಸೂರಿನಲ್ಲಿ ಜವಾಬ್ದಾರಿ ಸರಕಾರದ ರಚನೆಗಾಗಿ ನಡೆದ "ಮೈಸೂರು ಚಲೋ" ಚಳುವಳಿ ಹಾಗೂ "ಶಿವಪುರ ಧ್ವಜ ಸತ್ಯಾಗ್ರಹ"ದ ಮುಂದಾಳತ್ವ ವಹಿಸಿದ್ದ ಕೆ ಚಂಗಲರಾಯರೆಡ್ಡಿಯವರಿಗೆ ಆ ಹೋರಾಟದ ಫಲವಾಗಿ ಅಧಿಕಾರದ ಗದ್ದುಗೆ ಸಮೀಪವಾಗಿತ್ತು. ಅವರು ತಮ್ಮ ಎಪ್ಪತ್ತಮೂರು ವರ್ಷಗಳ ಪ್ರಾಯದಲ್ಲಿ ೧೯೭೬ರ ಫೆಬ್ರವರಿ ೨೭ರಂದು ಈ ಜಗತ್ತಿನಿಂದಲೂ ತಣ್ಣಗೆ ನಿರ್ಗಮಿಸಿದರು.


೧೯೫೨ರಲ್ಲಿ ನೂತನ ಅಂಗೀಕೃತ ಸಂವಿಧಾನದ ಅನುಸಾರ ವಿಧಾನಸಭಾ ಚುನಾವಣೆಗಳು ದೇಶದಾದ್ಯಂತ ನಡೆದವು. ಯುವ ನೇತಾರ ಕೆಂಗಲ್ ಹನುಮಂತಯ್ಯನವರ ನೇತೃತ್ವದ ಕಾಂಗ್ರೆಸ್ ಮೈಸೂರು ರಾಜ್ಯದಲ್ಲಿ ಬಹುಮತ ಗಳಿಸಿ ಅಧಿಕಾರ ವಹಿಸಿಕೊಂಡಿತು, ಬಹುಮತದ ಅನುಸಾರ ಅವರನ್ನೆ ರಾಜ್ಯದ ಮುಖ್ಯಮಂತ್ರಿಗಳಾಗಿ ಶಾಸಕಾಂಗ ಪಕ್ಷ್ಜದ ಅಪೇಕ್ಷೆಯ ಮೇರೆಗೆ ಕಾಂಗ್ರೆಸ್ ಹೈಕಮಾಂಡ್ ನೇಮಿಸಿತು. ಹನುಮಂತಯ್ಯ ಮುಂದಿನ ಏಕೀಕರಣದ ಸುಳಿವರಿತಿದ್ದರು, ಹೀಗಾಗಿ ಹಾಗೊಮ್ಮೆ ಐಕ್ಯವಾಗುವ ಕರ್ನಾಟಕದ ರಾಜಧಾನಿ ಬೆಂಗಳೂರೆ ಆಗಿರಲಿ ಎಂದು ಆಶಿಸಿ ಬೆಂಗಳೂರಿನ ಪ್ರಗತಿಗೆ ಅವರು ಪ್ರಾಮುಖ್ಯತೆ ಕೊಟ್ಟರು. ಹಾಗೆ ವಿಧಾನಸೌಧ ಅವರ ಕನಸಿನ ಕೂಸಾಗಿ ರಾಜಧಾನಿಯಲ್ಲಿ ಎದ್ದು ನಿಂತಿತು. ಆದರೆ ಅವರ ದುರಾದೃಷ್ಟಕ್ಕೆ ಆ ಕಲ್ಲು ಕಟ್ಟಡದಲ್ಲಿ ಕುಳಿತು ಒಂದೆ ಒಂದು ನಿಮಿಷವೂ ರಾಜ್ಯವನ್ನಾಳುವ ಅವರ ಆಸೆ ಮಾತ್ರ ಕಡೆಗೂ ಕೈಗೂಡಲೇ ಇಲ್ಲ! ಪಕ್ಷದಲ್ಲಿ ಆವರ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಕ್ರಮೇಣ ಅಪಸ್ವರ ಏಳತೊಡಗಿತ್ತು. ಆಂತರಿಕವಾಗಿ ಭಿನ್ನಮತವನ್ನೆದುರಿಸುತ್ತಿದ್ದ ಮುಖ್ಯಮಂತ್ರಿಗಳ ಮೇಲೆ ನಿರ್ಮಾಣ ಹಂತದಲ್ಲಿದ್ದ ವಿಧಾನಸೌಧದ ಪರಿಶೀಲನೆಯ ವೇಳೆ ಕೂಲಿ ಕಾರ್ಮಿಕನೊಬ್ಬ ಹರಿತವಾದ ಚಾಕುವಿನಿಂದ ಹಲ್ಲೆ ನಡೆಸಿದ. ಅದರ ಕಾರಣ ಮಾತ್ರ ಇವತ್ತಿಗೂ ನಿಗೂಢ. ಅವರಿಗಿದ್ದ ಹೆಣ್ಣಿನ ಖಯಾಲಿಯೂ ಇದರ ಹಿಂದಿರಬಹುದು ಎನ್ನುವ ಗಾಳಿಮಾತು ಚಾಲ್ತಿಯಲ್ಲಿದೆ.



ಆದರೆ ಆ ದಾಳಿಯಲ್ಲಿ ಕೇವಲ ಸಣ್ಣಪುಟ್ಟ ಗಾಯಗಳಿಂದ ಪಾರಾದ ಹನುಮಂತಯ್ಯನವರು ಇದರಿಂದ ವಿಚಲಿತರಾದರು. ಇದನ್ನೆ ನೆಪ ಮಾಡಿಕೊಂಡ ಕಾಂಗ್ರೆಸ್ ಹೈಕಮಂಡ್ ಅವರನ್ನ ಕೇಂದ್ರ ರಾಜಕೀಯಕ್ಕೆ ಸೆಳೆದುಕೊಂಡು ತೀರ್ಥಹಳ್ಳಿಯ ಶಾಸಕರಾಗಿದ್ದ ಅಂದಿನ ಕಂದಾಯ ಸಚಿವ ಕಡಿದಾಳ್ ಮಂಜಪ್ಪನವರನ್ನ ರಾಜ್ಯದ ನೂತನ ಮುಖ್ಯಮಂತ್ರಿಯ ಆಯ್ಕೆಯ ತನಕದ ತತ್ಕಾಲಿಕ ಅನುಕೂಲಕ್ಕೊಬ್ಬ ಮುಖ್ಯಮಂತ್ರಿಯನ್ನಾಗಿ ನೇಮಿಸಿತು. ಕೆಂಗಲ್ ಹನುಮಂತಯ್ಯ ಅಲ್ಲಿಂದ ಮುಂದೆ ಸರಿ ಸುಮಾರು ಎರಡು ದಶಕಗಳ ಕಾಲ ರಾಷ್ಟ್ರ ರಾಜಕರಣದಲ್ಲಿ ಸಕ್ರಿಯರಾಗಿದ್ದು ಕೇಂದ್ರ ಸರಕಾರದಲ್ಲಿ ಕೈಗಾರಿಕೆ, ವಾಣಿಜ್ಯ ಹಾಗೂ ರೈಲ್ವೇ ಸಚಿವರಾಗಿ ಸೇವೆ ಸಲ್ಲಿಸಿದರು. ಕಾಂಗ್ರೆಸ್ ವಿಭಜನೆಯ ಕಾಲದಲ್ಲಿ ಅವರು ಇಂದಿರಾ ಕಾಂಗ್ರೆಸ್'ನ ಇಂಡಿಕೇಟ್ ಪರವಾಗಿ ಉಳಿದರು. ದೇಶದ ಸ್ವತಂತ್ರೋತ್ತರ ಕಾಲದ ಕರಿಚುಕ್ಕೆಯಾದ ಆಂತರಿಕ ತುರ್ತು ಪರಿಸ್ಥಿತಿಯ ನಂತರ ತೀವೃವಾಗಿ ಇಂದಿರಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಭುಗಿಲೆದ್ದ ಜನಾಭಿಪ್ರಾಯದ ದೆಸೆಯಿಂದ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾಗಿದ್ದ ಕೆಂಗಲ್ ೧೯೭೭ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ( ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ತಂದೆ.) ನ್ಯಾಯಮೂರ್ತಿ ಕೆ ಸದಾನಂದ ಹೆಗ್ಡೆಯವರ ವಿರುದ್ಧ ಹೀನಾಯವಾಗಿ ಪರಾಭವಗೊಂಡರು. ಗೆದ್ದ ಕೆ ಸದಾನಂದ ಹೆಗ್ಡೇರು ಲೋಕಸಭಾ ಅಧ್ಯಕ್ಷರಾದರು ಅನ್ನೋದು ಇಲ್ಲಿ ಗಮನಾರ್ಹ. ಆ ಚುನಾವಣೆಯಲ್ಲಿ ಇಂದಿನ ಭಾಜಪದ ಪೂರ್ವಾವತಾರ ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಕನ್ನಡದ ಪ್ರಸಿದ್ದ ಚಿಂತಕ - ಕವಿ ಗೋಪಾಲಕೃಷ್ಣ ಅಡಿಗರು ಸ್ಪರ್ಧಿಸಿದ್ದರು. ೧೯೮೦ರ ಡಿಸೆಂಬರ್ ೧ ರಂದು ಕೆಂಗಲ್ ಕೊನೆಯುಸಿರೆಳೆದರು. ಅವರ ಕನಸಿನ ಕಟ್ಟಡ ವಿಧಾನಸೌಧವನ್ನ ಅವರ ಉತ್ತರಾಧಿಕಾರಿ ಕಡಿದಾಳು ಮಂಜಪ್ಪರ ಅವಧಿಯಲ್ಲಿ ಉದ್ಘಾಟಿಸಲಾದರೆ ಅವರ ನಂತರದ ಸರಕಾರಗಳು ಆಲ್ಲಿಂದಲೆ ಆಡಳಿತ ನಡೆಸಿದವು. ಕೆಂಗಲ್ ಹನುಮಂತಯ್ಯ ಕಡೆಗೂ ಅಲ್ಲಿಂದ ಆಡಳಿತ ನಡೆಸಲಾಗದೆ ಹೋದದ್ದು ಮಾತ್ರ ಕರ್ನಾಟಕದ ಆಧುನಿಕ ಇತಿಹಾಸದ ಅತಿದೊಡ್ಡ ವ್ಯಂಗ್ಯ.



ವಾಸ್ತವದಲ್ಲಿ ಕಡಿದಾಳು ಮಂಜಪ್ಪ ಒಬ್ಬ ಒಳ್ಳೆಯ ಮುತ್ಸದ್ಧಿಯಾಗಿದ್ದು ಪ್ರಾಮಾಣಿಕತೆಯಲ್ಲಿ ಪ್ರಶ್ನಾತೀತರಾಗಿದ್ದರೂ ಜನ ಸಂಘಟನೆಯಲ್ಲಿ ಅಷ್ಟಾಗಿ ಮುಂದಿರಲಿಲ್ಲ. ಅಲ್ಲದೆ ಅದಾಗಲೆ ನಾಡಿನ ಏಕೀಕರಣದ ದಿನಾಂಕ ಘೋಷಣೆಯೂ ಆಗಿದ್ದು ಏಕೀಕೃತ ಮೈಸೂರಿನ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ಲಿಂಗಾಯತ ನಾಯಕರಾಗಿದ್ದ ಚಿತ್ರದುರ್ಗ ಜಿಲ್ಲೆಯ ಸಿದ್ಧವನಳ್ಳಿಯ ನಿಜಲಿಂಗಪ್ಪನವರು ಅಧಿಕಾರ ವಹಿಸಿಕೊಳ್ಳುವುದು ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸಿಯಾಗಿತ್ತು. ಹೀಗಾಗಿ ಹನುಮಂತಯ್ಯನವರಿಗೆ ಗೌರವಪೂರ್ವಕವಾಗಿ ರಾಜ್ಯ ರಾಜಕಾರಣದಿಂದ ನಿರ್ಗಮನ ಕೊಡಿಸಲು ಮಂಜಪ್ಪನವರನ್ನ ತತ್ಕಾಲಿಕ ನಾಯಕತ್ವ ವಹಿಸಿಕೊಳ್ಳುವಂತೆ ಮನ ಒಲಿಸಲಾಗಿತ್ತು. ವೃತ್ತಿಯಿಂದ ವಕೀಲರಾಅಗಿದ್ದ ಕಡಿದಾಳ್ ಮಂಜಪ್ಪನವರು ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟ ಮರುದಿನ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಒಂದು ಪ್ರಕರಣದಲ್ಲಿ ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸಲು ಬಾಡಿಗೆ ರಿಕ್ಷಾದಲ್ಲಿ ಉಚ್ಛ ನ್ಯಾಯಾಲಯದ ಆವರಣಕ್ಕೆ ಬಂದಿದ್ದರು. ವೃತ್ತ ಪತ್ರಿಕೆಗಳನ್ನ ಓದುವ ಹವ್ಯಾಸವಿದ್ದ ಅ ಅಟೋದ ಚಾಲಕ ನಾಡಿನ ಮಾಜಿ ಮುಖ್ಯಮಂತ್ರಿಗಳನ್ನ ಗುರುತಿಸಿ ಇಳಿಸುವಾಗ "ಏನು ಸ್ವಾಮಿ ನೀವು ಆಟೋದಲ್ಲಿ ಪ್ರಯಾಣಿಸೋದಾ?" ಎಂದು ಬೆರಗಾಗಿ ಪ್ರಶ್ನಿಸಿದನಂತೆ. ಅವನಿಗೆ ಸರಿಯಾದ ಚಿಲ್ಲರೆ ಸಹಿತ ತಕ್ಕ ದರ ಎಣಿಸಿ ಕೊಟ್ಟ ಮಾಜಿ ಮುಖ್ಯಮಂತ್ರಿಗಳು ನಸು ನಗುತ್ತಾ "ಇದು ನನ್ನ ಹೊಟ್ಟೆ ಪಾಡು ಮಾರಾಯ! ಅದು ಜವಾಬ್ದಾರಿಯಾಗಿತ್ತು ಅಷ್ಟೆ!" ಎಂದು ಉತ್ತರಿಸಿ  ನ್ಯಾಯಾಲಯದ ಅವರಣ ಹೊಕ್ಕರಂತೆ! ಇಂದು ನೆನ್ನೆಯವರೆಗೂ ಬೋರ್ಡಿಗಿಲ್ಲದ ಪುಟಗೋಸಿ ಶಾಸಕನೂ ವಿಧಾನಸೌಧ  ಹೊಕ್ಕ ಮರುದಿನ ಹೆಲಿಕಾಪ್ಟರ್ ಏರಿಯೇ ತೇಲುವ ಹಂತಕ್ಕೆ ಆಶ್ಚರ್ಯಕರವಾಗಿ ಏರುವುದನ್ನ ಹೋಲಿಸಿ ಯೋಚಿಸಿ.


ಇಂತಹ ಪ್ರಾಮಾಣಿಕನೊಬ್ಬ ಒಂದು ಕಾಲದಲ್ಲಿ ನಮ್ಮನ್ನ ಪ್ರತಿನಿಧಿಸಿದ್ದ ಎನ್ನುವುದು ತೀರ್ಥಹಳ್ಳಿ - ಹೊಸನಗರ ಹಾಗೂ ಶೃಂಗೇರಿ ತಾಲೂಕುಗಳನ್ನೊಳಗೊಂಡಿದ್ದ ವಿಶಾಲ ವಿಧಾನಸಭಾ ಕ್ಷೇತ್ರವಾಗಿದ್ದ ಕಡಿದಾಳು ಮಂಜಪ್ಪನವರ ತವರು ಕ್ಷೇತ್ರದ ಮಂದಿಗೆ ಅತೀವ ಹೆಮ್ಮೆ. ಇಲ್ಲಿನ ಮತದಾರರೆ ತೀವೃವಾಗಿ ವಿರೋಧಿಸಿದ ಭೂಸುಧಾರಣೆ ಕಾನೂನಿಗೆ ಆರಂಭಿಕ ಚಾಲನೆ ಕೊಟ್ಟ ಮಂಜಪ್ಪ ಅನೇಕ ಭೂರಹಿತ ಬಡವರ ಬಾಳಿನ ಆಶಾಕಿರಣವಾಗಿ ಗೋಚರಿಸಿದರೂ ಸಹ ಸ್ಥಳಿಯ ಬೆಂಬಲ ಕಳೆದುಕೊಳ್ಳುವಂತಾಯಿತು. ಅನಂತರದ ಚುನಾವಣೆಯಲ್ಲಿ ಮತ್ತೊಬ್ಬ ಪ್ರಾಮಾಣಿಕ ರಾಜಕಾರಣಿ ಪ್ರಜಾ ಸೋಷಿಯಲಿಶ್ಟ್ ಪಕ್ಷದ ಅಭ್ಯರ್ಥಿ ಶಾಂತಾವೇರಿ ಗೋಪಾಲಗೌಡರ ಎದುರು ವಿಧಾನಸಭಾ ಚುನಾವಣೆಯಲ್ಲಿ ಮಂಜಪ್ಪ ಸೋತರು. ತಾವು ನಂಬಿದ ತತ್ವ ಹಾಗೂ ಆದರ್ಶಗಳಿಗೆ ಕಟಿಬದ್ಧರಾದ ಮಂಜಪ್ಪ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.


ಅನಂತರ ಅವರಿಗೆ ರಾಜಕೀಯ ಪುನರ್ವಸತಿ ಕಲ್ಪಿಸಲಿಕ್ಕೆ ಅಂದಿನ ಕೇಂದ್ರ ಸರಕಾರ ರಾಜ್ಯಪಾಲರಾಗುವ ಅವಕಾಶವನ್ನವರಿಗೆ ಕಲ್ಪಿಸಿಕೊಟ್ಟರೂ ಸಹ ಮಂಜಪ್ಪ ಅದನ್ನ ನಯವಾಗಿ ನಿರಾಕರಿಸಿದರು. ಹೀಗಾಗಿ ಬಹಳ ಒತ್ತಾಯದ ನಂತರ ಅವರು ನಿಜಲಿಂಗಪ್ಪ ಹಾಗೂ ಬಿ ಡಿ ಜತ್ತಿಯವರ ಸರಕಾರದಲ್ಲಿ ಕಂದಾಯ ಸಚಿವರಾಗಿ ಮುಂದುವರೆಯಲು ಒಪ್ಪಿಕೊಂಡರು. ಮುಂದೆ ತುರ್ತು ಪರಿಸ್ಥಿತಿಯನ್ನ ವಿರೋಧಿಸಿ ಬಾಬು ಜಗಜೀವನರಾಂ ನೇತೃತ್ವದ "ಪ್ರಜಾಪ್ರಭುತ್ವಕ್ಕಾಗಿ ಕಾಂಗ್ರೆಸ್" ಸಂಘಟನೆಯ ರಾಜ್ಯ ನಾಯಕತ್ವವನ್ನ ಅವರು ವಹಿಸಿಕೊಂಡರು. ಬೆಂಗಳೂರು ನಗರದ ರಿಚ್ಮಂಡ್ ಟೌನನ್ನ ಹೊಸೂರು ರಸ್ತೆಗೆ ಬೆಸೆಯುವ ಲ್ಯಾಂಗ್'ಫೋರ್ಡ್ ರಸ್ತೆಯನ್ನ ಅವರ ಹೆಸರಿನಿಂದ ಮರು ನಾಮಕರಣ ಮಾಡಲಾಗಿದೆ. ಕಡಿದಾಳ ಮಂಜಪ್ಪನವರು ೧೯೯೨ರಲ್ಲಿ ಕೊನೆಯುಸಿರೆಳೆದರು. ಕೇವಲ ಎಪ್ಪತ್ತಮೂರು ದಿನಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿದಿದ್ದ ಈ ವಾಮನ ಮೂರ್ತಿ ಅಷ್ಟು ಕಿರು ಅಧಿಕಾರವಧಿಯಲ್ಲಿ ಮಾಡಿ ತೋರಿಸಿದ ಸಾಧನೆ ಮಾತ್ರ ಅಚ್ಚರಿ ಹುಟ್ಟಿಸುವಷ್ಟು ಅಪೂರ್ವ. ರಾಜ್ಯದ ಒಟ್ಟಾರೆ ಮುಖ್ಯಮಂತ್ರಿಗಳಲ್ಲಿ ಅತಿ ಕಡಿಮೆ ಅವಧಿಗೆ ಮುಖ್ಯಮಂತ್ರಿಗಳಾಗಿದ್ದ ದಾಖಲೆ ಇತ್ತೀಚೆಗೆ ಬೂಸಿಯ ತಮ್ಮ ಮೊದಲ ಅವಧಿಯಲ್ಲಿ ಕೇವಲ ಏಳು ದಿನಗಳವರೆಗೆ ಮುಖ್ಯಮಂತ್ರಿಗಳಾಗುವ ತನಕ ಕಡಿದಾಳು ಮಂಜಪ್ಪನವರ ಹೆಸರಿನಲ್ಲಿಯೇ ಇತ್ತು.


೧೯೫೬ರ ನವೆಂಬರ್ ಒಂದರಂದು ರಾಜ್ಯದ ಕಳೆದು ಹೋಗಿದ್ದ ಭಾಗಗಳೆಲ್ಲ ಮರಳಿ ಒಂದಾದವು. ಮೈಸೂರು ರಾಜ್ಯ ಎಂಬ ಹೆಸರಿನಡಿ ಈ ಹೊಸ ರಾಜ್ಯವನ್ನ ಕರೆಯಲಾಯಿತು. ನಿರೀಕ್ಷೆಯಂತೆ ಸಿದ್ಧವನಹಳ್ಳಿಯ ನಿಜಲಿಂಗಪ್ಪನವರು ಏಕೀಕೃತ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆಗೆಲ್ಲಾ ವಿಧಾನಸಭೆಯ ಅಧಿಕಾರವಧಿ ಈಗಿನಂತೆ ಐದು ವರ್ಷಗಳಾಗಿರದೆ ಆರು ವರ್ಷಗಳಿರುತ್ತಿದ್ದರಿಂದ ಮೊದಲ ವಿಧಾನಸಭೆಯ ಅವಧಿಯನ್ನೆ ಆಗ ಮುಂದುವರೆಸಲಾಗಿತ್ತು. ಹೀಗೆ ಮುಂದುವರೆದ ಸರಕಾರದ ನಾಯಕತ್ವ ಬದಲಾದರೂ ರಾಜಕೀಯ ಮೇಲಾಟಕ್ಕೇನೂ ಕೊರತೆಯಿರಲಿಲ್ಲ. ಜೊತೆಗೆ ಎರಡನೆ ವಿಧಾನಸಭಾ ಚುನಾವಣೆ ಎದುರಾಗುವ ಹೊತ್ತಿಗೆ ಉತ್ತರ ಕರ್ನಾಟಕದ ನಾಯಕ ಬಿ ಡಿ ಜತ್ತಿಯವರ ಬಣದ ಕೈ ಮೇಲಾಗಿತ್ತು. ಅಗಿನ ಕಾಂಗ್ರೆಸ್ ಪಕ್ಷದ ಚಿನ್ಹೆ ಈಗಿನಂತೆ "ಹಸ್ತ"ವಾಗಿರದೆ "ಆಲದ ಮರ" ಆಗಿತ್ತು. ಜಮಖಂಡಿ ಸಂಸ್ಥಾನದ ದಿವಾನರಾಗಿ ಅದಾಗಲೆ ಸೇವೆ ಸಲ್ಲಿಸಿದ್ದ ಬಸಪ್ಪ ದಾನಪ್ಪ ಜತ್ತಿಯವರು ಮುಖ್ಯಮಂತ್ರಿ ಗಾದಿಯ ಮೇಲೆ ತಮ್ಮ ಹಕ್ಕನ್ನು ಸಾಧಿಸಿದರು. ಹೀಗಾಗಿ ಕೇವಲ ಒಂದೂವರೆ ವರ್ಷದಲ್ಲಿ ನಿಜಲಿಂಗಪ್ಪನವರು ತತ್ಕಾಲಿಕವಾಗಿ ಪಕ್ಷದ ಆಂತರಿಕ ವ್ಯವಹಾರಗಳಲ್ಲಿ ವ್ಯಸ್ತರಾಗಿ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಕೊಂಡು ರಾಜ್ಯದಲ್ಲಿನ ಆಂತರಿಕ ಕಚ್ಚಾಟವನ್ನ ಪಾರಾಗಿ ಕೆಸರೆರಚಾಟದಿಂದ ತಪ್ಪಿಸಿಕೊಂಡರು.


ಬಸಪ್ಪ ದಾನಪ್ಪ ಜತ್ತಿಯವರಿಗೆ ಆಗಿನ ಕಾಲದಲ್ಲಿ ಪ್ರಬಲ ವರ್ಚಸ್ಸು ಇದ್ದ ಕಾರಣ ಅವರಿಗೆ ಮುಖ್ಯಮಂತ್ರಿಯ ಪಟ್ಟ ಕಟ್ಟುವುದು ಕಾಂಗ್ರೆಸ್ ಆಡಳಿತದ ಆಂತರಿಕ ಮಟ್ಟಿಗೆ ಅನಿವಾರ್ಯವೆ ಆಗಿತ್ತು. ಆವರ ಸುದೀರ್ಘ ರಾಜಕೀಯ ಅನುಭವ ಅವರ ಒತ್ತಾಸೆಗೆ ಬಂದಿತ್ತು. ಮೊದಲಿಗೆ ಜಮಖಂಡಿ ಸಂಸ್ಥಾನದ ದಿವಾನರಾಗಿದ್ದ ಜತ್ತಿಯವರು ೧೯೪೮ರಲ್ಲಿ ಅವರ ಕಿರು ಸಂಸ್ಥಾನ ಬೊಂಬಾಯಿ ಪ್ರಾಂತ್ಯದಲ್ಲಿ ಲೀನವಾದಾಗ ಆಗಿನ ಬೊಂಬಾಯಿಯ ಮುಖ್ಯಮಂತ್ರಿ ಬಿ ಜಿ ಖೇರ್'ರವರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕವಾದರು. ಅನಂತರ ಮುಂದೆ ೧೯೫೨ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಮಖಂಡಿಯನ್ನ ಪ್ರತಿನಿಧಿಸಿ ಬೊಂಬಾಯಿ ಸರಕಾರದಲ್ಲಿ ಕಾರ್ಮಿಕ ಹಾಗೂ ಆರೋಗ್ಯ ಸಚಿವರಾಗಿಯೂ ರಾಜ್ಯದ ಏಕೀಕರಣದವರೆಗೆ ಆರು ವರ್ಷದ ಒಂದು ಅವಧಿಯಲ್ಲಿ ಸೇವೆ ಸಲ್ಲಿಸಿದರು. ಆಂದಿನ ಬೊಂಬಾಯಿ ಪ್ರಾಂತ್ಯದ ವ್ಯಾಪ್ತಿ ಇಂದಿನ ಮಹರಾಷ್ಟ್ರ, ಗುಜರಾತ್ ಹಾಗೂ ಇಂದೋರ್ ಸಂಸ್ಥಾನವನ್ನೂ ಒಳಗೊಂಡಿತ್ತು. ಅನಂತರ ಎಸ್ ನಿಜಲಿಂಗಪ್ಪನವರ ಸರಕಾರ ಅವರನ್ನ "ಭೂ ಸುಧಾರಣಾ ಆಯೋಗ"ದ ಅಧ್ಯಕ್ಷರಾಗಿ ನೇಮಿಸಿತು. ಈ ಹಂತದಲ್ಲಿ ಅವರ ಹಾಗೂ ನಿಜಲಿಂಗಪ್ಪರ ಬಣಗಳ ನಡುವೆ ಆರಂಭವಾದ ತಿಕ್ಕಾಟ ಅವರನ್ನ ಮುಖ್ಯಮಂತ್ರಿ ಗಾದಿಗೆ ತಲುಪಿಸಿ ನಾಲ್ಕು ವರ್ಷ ಅಲ್ಲಿ ಅವರನ್ನ ಭದ್ರವಾಗಿಸಿತು!. ಆದರೆ ಪಕ್ಷದ ಆಂತರಿಕ ವಿಭಾಗದಲ್ಲಿ ತಮ್ಮ ಹಿಡಿತ ಬಿಗಿ ಮಾಡಿಕೊಂಡ ನಿಜಲಿಂಗಪ್ಪನವರು ಮರಳಿ ಮುಖ್ಯಮಂತ್ರಿಯಾಗಿ ಮೈಸೂರಿಗೆ ಬಂದರೆ ಬದಲಾದ ಪರಿಸ್ಥಿತಿಯಲ್ಲಿ ಅವರ ಮಂತ್ರಿಮಂಡಲದಲ್ಲಿ ಬಿ ಡಿ ಜತ್ತಿಯವರು ಆರಂಭದಲ್ಲಿ ಹಣಕಾಸು ಖಾತೆಯಂತಹ ಪ್ರಮುಖ ಖಾತೆಯನ್ನ ಪಡೆದರೆ ಅನಂತರ ಆಹಾರ ಮತ್ತು ನಾಗರೀಕ ಪೂರೈಕೆಯಂತಹ ಅಮುಖ್ಯ ಖಾತೆಗೆ ತಳ್ಳಲ್ಪಟ್ಟರು!



ಕಾಲಚಕ್ರ ವೇಗವಾಗಿ ಒಂದು ಸುತ್ತು ಸುತ್ತಿದ ಪರಿಣಾಮವಾಗಿ ಮೊದಲಿಗೆ ನಿಜಲಿಂಗಪ್ಪನವರಿಗೆ ಒದಗಿದ ಗತಿ ಇದೀಗ ಜತ್ತಿಯವರಿಗೂ ಒದಗಿ ಬಂದು ಅವರೀಗ ರಾಷ್ಟ್ರ ರಾಜಕಾರಣದತ್ತ ಮುಖ ಮಾಡ ಬೇಕಾಯಿತು! ಅವರನ್ನ ಕೇಂದ್ರ ಸರಕಾರ ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿಯ ಉಪ ರಾಜ್ಯಪಾಲರನ್ನಾಗಿ ನೇಮಿಸಿತು. ಅನಂತರ ಅಲ್ಲಿಂದ ಒರಿಸ್ಸಾದ ರಾಜ್ಯಪಾಲರಾಗಿ ಅವರಿಗೆ ಭಡ್ತಿಯನ್ನೂ ದಯಪಾಲಿಸಲಾಯಿತು. ಮುಂದೆ ಇಂದಿರಾಗಾಂಧಿ ಸರಕಾರ ಅವರನ್ನ ದೇಶದ ಉಪ ರಾಷ್ಟ್ರಪತಿಯನ್ನಾಗಿಯೂ ನೇಮಿಸಿತು. ಕರಾಳ ತುರ್ತು ಪರಿಸ್ಥಿತಿಯ ಕಾಲಕ್ಕೆ ಜತ್ತಿಯವರು ದೇಶದ ಉಪ ರಾಷ್ಟ್ರಪತಿಗಳಾಗಿದ್ದರು. ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದರ ಹಟಾತ್ ನಿಧನದ ನಂತರ ಸಂವಿಧಾನ ಬದ್ಧವಾಗಿ ಅವರು ಈ ದೇಶದ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದರು. ಆದರೆ ತಮ್ಮ ಖಡಕ್ ನಡುವಳಿಕೆಯಿಂದ ಮುಂದೆ ದೇಶದ ರಾಷ್ಟ್ರಪತಿಯಾಗುವ ಸದಾವಕಾಶವನ್ನ ಕೂದಲೆಳೆಯಿಂದ ತಪ್ಪಿಸಿಕೊಂಡರು!



ಅಲ್ಲಿಯವರೆಗೆ ಕೇಂದ್ರ ಸರಕಾರದ ಅಂಧಾದುಂಧಿಗೆ ಕೇವಲ ಠಸ್ಸೆ ಒತ್ತುವ "ಹೌದಪ್ಪ"ಗಳಾಗಿ ಎಲ್ಲಾ ಪ್ರಧಾನಿಗಳು ರಾಷ್ಟ್ರಪತಿಗಳನ್ನ ನಡೆಸಿಕೊಳ್ಲುತ್ತಿದ್ದವು. ಸೋಮನಾಥ ದೇವಾಲಯದ ಜೀರ್ಣೋದ್ಧಾರದ ಹೊರತು ಇನ್ಯಾವುದೆ ವಿಷಯದಲ್ಲಿ ಕೇಂದ್ರ ಹಾಗೂ ರಾಷ್ಟ್ರಪತಿಗಳು ಪರಸ್ಪರ ವಿರುದ್ಧ ನಿಲುವು ತೆಳೆದ ಉದಾಹರಣೆಗಳಿರಲಿಲ್ಲ. ಫಕ್ರುದ್ದೀನ ಅಲಿ ಅಹಮದರಂತೂ ಸ್ನಾನದ ಮನೆಯಿಂದ ಇನ್ನೂ ಸ್ನಾನದ ತೊಟ್ಟಿಯಲ್ಲಿ ಮಲಗಿದ್ದಂತೆಯೆ ಇಂದಿರಾರ ರಾಜಕೀಯ ಕಾರ್ಯದರ್ಶಿ ಹಕ್ಸರ್ ತಂದ ತುರ್ತು ಪರಿಸ್ಥಿತಿಯ ಶಿಫಾರಸ್ಸಿಗೆ ಕಣ್ಣು ಮುಚ್ಚಿ ಸಹಿ ಹಾಕಿ, ಮೊಹರು ಗುದ್ದಿ ಕಳಿಸಿದ್ದರು ಅನ್ನುವ ಜೋಕು ಕೂಡ ಚಾಲ್ತಿಯಲ್ಲಿದ್ದ ಸಮಯ ಅದು. ಅಂತದ್ದರಲ್ಲಿ ಪಕ್ಷದ ವಿಭಜನೆಯ ನಂತರ ತಮ್ಮ ವಿರುದ್ಧ ಇದ್ದ ಹಾಗೂ ವಿರೋಧ ಪಕ್ಷಗಳ ತೆಕ್ಕೆಯಲ್ಲಿದ್ದ ಒಂಬತ್ತು ರಾಜ್ಯ ವಿಧಾನಸಭೆಗಳನ್ನ ಒಮ್ಮೆಲೆ ವಿಸರ್ಜಿಸುವ ಶಿಫಾರಸ್ಸನ್ನ ಕೇಂದ್ರ ಸಚಿವ ಸಂಪುಟದ ಅಣತಿಯಂತೆ ಆಂದಿನ ಗೃಹ ಸಚಿವರಾದ ಚೌಧರಿ ಚರಣ್ ಸಿಂಗರು ಪ್ರಸ್ತಾಪ ಮಾಡಿದಾಗ; ಇಂದಿರಾರ ಎಂದಿನ ನಿರ್ಲಕ್ಷ್ಯದ ನಿರೀಕ್ಷೆಗೆ ಸಂಪೂರ್ಣ ವಿರುದ್ಧವಾಗಿ ಮುಲಾಜಿಲ್ಲದೆ ಸಹಿ ಹಾಕಲು ನಿರಾಕರಿಸಿ ಆದನ್ನ ಹಿಂದಿರುಗಿಸಿದ ಜತ್ತಿಯವರು ಇಂದಿರಾ ಗಾಂಧಿಯವರನ್ನ ಹೆದರದೆ ಎದುರು ಹಾಕಿಕೊಂಡರು. ತುರ್ತು ಪರಿಸ್ಥಿತಿ ಆಗಷ್ಟೆ ಮುಕ್ತಾಯಗೊಂಡು ಇಂದಿರೆಯ ಮುದ್ದಿನ ಮಗ ಸಂಜಯ್ ಪುಂಡಾಟದಲ್ಲಿ ಚುನಾವಣೆಗಳು ನಡೆಯಲಿಕ್ಕಿದ್ದ ದಿನಗಳವು. ತಮ್ಮ ಈ ನಡುವಳಿಕೆಯಿಂದ ಕೇಂದ್ರಕ್ಕೆ ಅಘಾತ ತಂದರೂ ಸಹ ಮುಂದೆ ಸಂವಿಧಾನದ ನಿರ್ದೇಶನದಂತೆ ಆದರ ಮರು ಪ್ರಸ್ತಾಪವನ್ನ ಒಪ್ಪಿಕೊಳ್ಳಲೇ ಬೇಕಾಯಿತು. ಆದರೂ ಅವರ ರಾಜಕೀಯ ಜೀವನ ಅಲ್ಲಿಗೆ ಮುಕ್ತಾಯವಾದಂತಾಯಿತು. ಸುಮಾರು ಮೂವತ್ತು ವರ್ಷಗಳ ತಮ್ಮ ರಾಜಕೀಯ ಅಜ್ಞಾತ ವಾಸದ ನಂತರ ಜತ್ತಿಯವರು ೨೦೦೨ರ ಜೂನ್ ೭ರಂದು ಕೊನೆಯುಸಿರೆಳೆದರು.


ಮುಖ್ಯಮಂತ್ರಿಯಾಗಿ ಪದವಿ ಬಿಟ್ಟಿಳಿದ ಜತ್ತಿಯವರಿಂದ ಆಧಿಕಾರವನ್ನ ನಿಜಲಿಂಗಪ್ಪರಿಗೆ ವರ್ಗಾಯಿಸುವ ಅವಧಿಯಲ್ಲಿ ಎಸ್ ಆರ್ ಕಂಠಿಯವರನ್ನ ತತ್ಕಾಲಿಕವಾಗಿ ಮುಖ್ಯಮಂತ್ರಿ ಪದವಿಗೆ ಏರಿಸಲಾಯಿತು. ಅದು ರಾಜ್ಯದ ಮೂರನೆ ವಿಧಾನಸಭೆಯ ಆರಂಭದ ದಿನಗಳಾಗಿದ್ದು ಕೇವಲ ಆರಂಭದ ೯೮ ದಿನಗಳು ಕಂಠಿಯವರು ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಹೆಚ್ಚಿನ ವಿವಾದಗಳಿಗೆ ಅವರು ಈ ಕಿರು ಅವಧಿಯಲ್ಲಿ ಎಡೆ ಮಾಡಿಕೊಡಲಿಲ್ಲ. ಮುಖ್ಯಮಂತ್ರಿಗಳಾಗುವ ಮುನ್ನ ಅವರು ರಾಜ್ಯದ ಎರಡನೆ ವಿಧಾನಸಭೆಯ ವಿಧಾನ ಸಭಾದ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಆನಂತರವೂ ಅವರು ನಿಜಲಿಂಗಪ್ಪನವರ ಸರಕಾರದಲ್ಲಿ ಶಿಕ್ಷಣ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. ಅವರ ಅವಧಿಯಲ್ಲಿಯೆ ಮೈಸೂರು ವಿಶ್ವವಿದ್ಯಾಲಯವನ್ನ ವಿಭಜಿಸಿ ಬೆಂಗಳೂರು ವಿಶ್ವವಿದ್ಯಾಲಯವನ್ನ ಸ್ಥಾಪಿಸಲಾಗಿತ್ತು. ಕಿತ್ತೂರು ರಾಣಿ ಚೆನ್ನಮ್ಮ ಸೈನಿಕ ಶಾಲೆಯ ಸ್ಥಾಪನೆಯೂ ಅವರ ಕಾಲದ ಸಾಧನೆಗಳಲ್ಲಿ ಒಂದು. ಬಾಗಲಕೋಟೆ ಮೂಲದವರಾಗಿದ್ದ ಕಂಠಿಯವರು ಪಂಚ ನದಿಗಳ ಜಿಲ್ಲೆಯಾದ ಅವಿಭಜಿತ ಬಿಜಾಪುರದಲ್ಲಿ ಕೃಷ್ಣೆಗೆ ಅಡ್ಡಲಾಗಿ ಅಲಮಟ್ಟಿ ಅಣೆಕಟ್ಟು ನಿರ್ಮಿಸಲು ಕೇಂದ್ರದ ಮನ ಒಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


ಕಂಠಿಯವರ ನಂತರ ಮತ್ತೆ ನಿಜಲಿಂಗಪ್ಪನವರಿಗೆ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕವಾಯಿತು. ಒಂದು ಕಡೆ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಇನ್ನೊಂದೆಡೆ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ದೋಣಿಯ ಮೇಲೆ ಸಿದ್ಧವನಹಳ್ಳಿ ನಿಜಲಿಂಗಪ್ಪನವರ ರಾಜಕೀಯ ಯಾನ ಮತ್ತೆ ಮುಂದುವರೆಯಿತು. ಈ ಬಾರಿ ಬರೋಬ್ಬರಿ ಆರು ವರ್ಷಕ್ಕೆ ಕೇವಲ ಹದಿನೆಂಟು ದಿನಗಳ ಕಡಿಮೆ ಆವಧಿಗೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ ಮೈಸೂರು ರಾಜ್ಯದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಖ್ಯಾತಿ ಪಡೆದರೆ; ಕರ್ನಾಟಕದ ಮಟ್ಟಿಗೆ ಎರಡನೆಯ ಅತಿ ದೀರ್ಘಾವಧಿಯ ಮುಖ್ಯ ಮಂತ್ರಿಗಳೆನ್ನುವ ಹೆಚ್ಚುಗಾರಿಕೆಗೆ ಪಾತ್ರವಾದರು. ಆದರೆ ಆವರ ಎರಡನೆ ಆವಧಿಯ ಕೊನೆಯ ದಿನಗಳು ಅವರಿಗೆ ರಾಜಕೀಯವಾಗಿ ಯಾತನಾದಾಯಕವಾಗಿದ್ದವು.

ಆ ಕಾಲಕ್ಕೆ ಆವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಖಿಲ ಭಾರತ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಆ ಹುದ್ದೆಯಲ್ಲಿ ಎರಡೆರಡು ಕಂಗ್ರೆಸ್ ಅಧಿವೇಶನಗಳನ್ನೂ ಅವರು ನಡೆಸಿದ್ದರು. ಪಕ್ಷದ ಅಧ್ಯಕ್ಷರು, ಕಾಮರಾಜ ನಾಡಾರ್ ಸಹಿತ ಬಹುತೇಕ ಪಕ್ಷದ ಹಿರಿಯರೆಲ್ಲರೊಂದಿಗೂ ಇಂದಿರಾಗಾಂಧಿ ವಿರೋಧವನ್ನ ಕಟ್ಟಿಕೊಂಡಿದ್ದರು. ೧೯೬೮ರ ಬೆಂಗಳೂರಿನ ಲಾಲ್'ಬಾಗ್ ಗಾಜಿನ ಮನೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಇಂದಿರಾರನ್ನೆ ಪಕ್ಷದಿಂದ ಅಶಿಸ್ತಿನ ಕಾರಣಕ್ಕೆ ಉಚ್ಛಾಟಿಸಿ ಪಕ್ಷದ ಅಧ್ಯಕ್ಷ ನಿಜಲಿಂಗಪ್ಪ ಆದೇಶ ಹೊರಡಿಸಿದ ಪರಿಣಾಮ ಪಕ್ಷದಲ್ಲಿ ಒಡಕುಂಟಾಗಿ ಪಕ್ಷ ಶಾಶ್ವತವಾಗಿ ಇಬ್ಬಾಗವಾಯಿತು. ಇಂದಿರಾ ಹೊರತು ಕಾರ್ಯಕಾರಣಿಯಲ್ಲಿದ್ದ ಹಿರಿಯರೆಲ್ಲ ಸಂಸ್ಥಾ ಕಾಂಗ್ರೆಸ್ ರಚಿಸಿಕೊಂಡರೂ ಮೂಲ ಪಕ್ಷದ ಬೆಂಬಲಿಗರೆಲ್ಲ ಇಂದಿರಾ ನಿಷ್ಠರಾಗಿ ಉಳಿದರು. ಅಂದಿನಿಂದ ಅವರ ಚಿನ್ಹೆ " ಆಕಳು-ಕರು" ಅಯಿತು. ಇಂದಿರಾ ಎಂಬ ಆಕಳಿನ ಕಳ್ಳ ಕರು ಸಂಜಯನ ದರ್ಬಾರಿನ ಅಧಿಕೃತ ಅಧ್ಯಾಯ ಹೀಗೆ ಆರಂಭವಾಗಿ; ಅಲ್ಲಿಗೆ ಕಾಂಗ್ರೆಸ್ ಎನ್ನುವುದು ನೆಹರೂ ಕುಟುಂಬದ ಜಹಗೀರಿನಂತಾಗಿ ಹೋಗಿ ಸಂಸ್ಥಾ ಕಾಂಗ್ರೆಸ್ ಕ್ರಮೇಣ ಸಮಾನ ಮನಸ್ಕರನ್ನ ಒಗ್ಗೂಡಿಸಿ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಮತದಾರರಿಗೆ ಗೋಚರಿಸಿದ ಜನತಾ ಪರಿವಾರ ಅನಂತರ ಜನತಾದಳವಾದದ್ದು ಈಗ ಇತಿಹಾಸ.



ಅಸಲಿಗೆ ಈ ಒಡಕಿಗೆ ಕಾರಣವಾದದ್ದು ಇಂದಿರಾಗಾಂಧಿಯ ಏಕಪಕ್ಷೀಯ ಹಿಟ್ಲರ್'ಶಾಹಿ ಆಡಳಿತ ಹಾಗೂ ಪಕ್ಷದ ಅಧಿಕೃತ ಅಭ್ಯರ್ಥಿ ನೀಲಂ ಸಂಜೀವರೆಡ್ಡಿಯವರ ಪರಾಭವಕ್ಕೆ ಕಾರಣವಾದ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಿದ್ದ ವಿ ವಿ ಗಿರಿಯವರ ಪರ ಆಕೆ ಹೊರಡಿಸಿದ್ದ "ಆತ್ಮ ಸಾಕ್ಷಿಗೆ ಅನುಗುಣವಾಗಿ ಮತ" ಚಲಾಯಿಸುವ ಅಪ್ಪಣೆ. ಇದರಿಂದ ಪಕ್ಷದ ಅಧ್ಯಕ್ಷ ನಿಜಲಿಂಗಪ್ಪ ಸಹಿತ ಇತರ ಹಿರಿಯ ನಾಯಕರಿಗಾದ ಮುಖಭಂಗ. ಒಟ್ಟಿನಲ್ಲಿ ಬಹುಮತ ಕಳೆದುಕೊಂಡ ನಿಜಲಿಂಗಪ್ಪ ತಮ್ಮ ಪಟ್ಟ ಬಿಟ್ಟು ಕೆಳಗಿಳಿಯುವುದು ಅನಿವಾರ್ಯವಾಯಿತು. ಏಕೆಂದರೆ ಪಕ್ಷದ ಮೇಲೆ ಇಂದಿರಾ ಕಪಿಮುಷ್ಠಿ ಮೊದಲಿಗಿಂತ ಈಗ ಬಿಗಿಯಾಗಿತ್ತು. ಎಲ್ಲಾ ಬೆನ್ನೆಲುಬಿಲ್ಲದ ನಾಲಾಯಕ್ ನಾಯಕರು ಆಕೆಯ ಪಾಳಯ ಸೇರಿಯಾಗಿತ್ತು!


ಕುಚೋದ್ಯವೆಂದರೆ ಇವರ ಶಿಷ್ಯೋತ್ತಮರಾಗಿದ್ದು ಸಿಂಡಿಕೇಟಿನ ಸದಸ್ಯರಿಂದ "ಲವ - ಕುಶ"ರೆಂದೆ ಕರೆಸಿಕೊಳ್ಳುತ್ತಿದ್ದ ವೀರೇಂದ್ರ ಪಾಟೀಲ್ ಹಾಗೂ ರಾಮಕೃಷ್ಣ ಹೆಗಡೆಯವರಲ್ಲಿ ಲವ ಇಂದಿರಾ ಪಾಳಯಕ್ಕೆ ಹನುಮಂತನಂತೆ ಹಾರಿ ಅಲ್ಲಿ ಮುಂದಿನ ಮೂರು ವರ್ಷಗಳ ಕಾಲಕ್ಕೆ ಗದ್ದುಗೆಯೇರುವ ಅದೃಷ್ಟಶಾಲಿಯಾಗಿ ಬಿಟ್ಟ! ಅಲ್ಲಿಗೆ ನಿಜಲಿಂಗಪ್ಪನವರ ಶಕೆ ರಾಜ್ಯ ರಾಜಕಾರಣದಲ್ಲಿ ಮುಗಿದು ಮುಂದೆ ಅವರು ಜನತಾ ಪರಿವಾರದ ಮಾರ್ಗದರ್ಶಕರಾಗಿ ಮಾತ್ರ ಉಳಿದರು. ಅವಿಭಜಿತ ಕಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಏ ಹ್ಯೂಂ ಆಗಿದ್ದರೆ ಕೊನೆಯ ಅಧ್ಯಕ್ಷ ನಮ್ಮ ಎಸ್ ನಿಜಲಿಂಗಪ್ಪನವರೆ ಆಗಿದ್ದರು. ಅವರ ನಿರ್ಗಮನದೊಂದಿಗೆ ಕಾಂಗ್ರೆಸ್ಸಿನ ಶವ ಪೆಟ್ಟಿಗೆಗೆ ಕೊನೆ ಮೊಳೆ ಬಿದ್ದು ಅದು ಸಂಪೂರ್ಣ ದಿವಾಳಿಯಾಯಿತು. ಕಾಂಗ್ರೆಸ್ಸಿನ ಘನತೆ ಶಾಶ್ವತವಾಗಿ ಮಣ್ಣು ಪಾಲಾಯಿತು.


ಟಿಬೆಟಿಯನ್ ನಿರಾಶ್ರಿತರಿಗಂತೂ ಎಸ್ ನಿಜಲಿಂಗಪ್ಪ ಪ್ರಾತಃ ಸ್ಮರಣೀಯರು. ಚೀನಿಯರ ದುರಾಕ್ರಮಣದಿಂದ ದಿಕ್ಕೆಟ್ಟು ಭಾರತಕ್ಕೆ ಓಡಿ ಬಂದಿದ್ದ ಟಿಬೇಟಿಯನ್ನರಿಗೆ ಅತ್ಯಧಿಕ ಭೂಮಿಯನ್ನ ದಯಪಾಲಿಸಿ ತಮ್ಮ ವಸತಿ ಕ್ಯಾಂಪ್'ಗಳನ್ನ ಸ್ಥಾಪಿಸಿಕೊಳ್ಲಲು ಒತ್ತಾಸೆಯಾದದ್ದೆ ಮುಖ್ಯಮಂತ್ರಿ ನಿಜಲಿಂಗಪ್ಪನವರು. ಅವರ ಕೃಪೆಯಿಂದ ಬೈಲುಕುಪ್ಪೆ, ಮುಂಡಗೋಡ ಹಾಗೂ ಕೊಳ್ಳೆಗಾಲದಲ್ಲಿ ಟಿಬೇಟಿಯನ್ನರು ನೆಮ್ಮದಿಯ ಬದುಕನ್ನ ಕಟ್ಟಿಕೊಳ್ಳುವಂತಾಯಿತು. ತಮ್ಮ ಅಧಿಕಾರವಧಿಯ ನಂತರ ಅಜ್ಞಾತರಂತೆ ಚಿತ್ರದುರ್ಗದಲ್ಲಿಯೆ ಬಾಳಿದ ಎಸ್ ನಿಜಲಿಂಗಪ್ಪನವರು ೨೦೦೦ದ ಅಗೋಸ್ತು ೮ರಂದು ಕೊನೆಯುಸಿರೆಳೆದರು. ವೀರೆಂದ್ರ ಪಾಟೀಲರು ಮೈಸೂರು ರಾಜ್ಯದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿದ್ದರೂ ಅವರ ಎರಡನೆ ಅವಧಿ ಕರ್ನಾಟಕ ರಾಜ್ಯದಲ್ಲಿ ನಡೆದಿದ್ದರಿಂದ ಅವರ ಬಗ್ಗೆ ಮುಂದಿನ ಕಂತಿನಲ್ಲಿ ತಿಳಿದಿದ್ದನ್ನ ಹೇಳುವೆ.


ನಿಜಲಿಂಗಪ್ಪನವರ ನಿರ್ಗಮನದೊಂದಿಗೆ ಮೈಸೂರು ರಾಜ್ಯದ ಮುಖ್ಯಮಂತ್ರಿಗಳ ಕಥೆ ಕೊನೆಯಾಯಿತು. ಆ ಕಾಲದಲ್ಲಿ ಬಂಡಾಯ, ಭಿನ್ನಾಭಿಪ್ರಾಯ ಚಾಲ್ತಿಯಲ್ಲಿದ್ದರೂ ಈಗಿನಷ್ಟು ಹೇಸಿಗೆ ಹುಟ್ಟಿಸುವ ಹಾಸ್ಯಾಸ್ಪದ ಸಂಗತಿ ಅದಾಗಿರಲಿಲ್ಲ. ರಾಜಕೀಯಕ್ಕೆ ಒಂದು ಘನತೆ ಇತ್ತು. ಕಂಡ ಕಂಡಲ್ಲಿ - ಹಾದಿ ಬೀದಿ ರಂಪ ಆಗುತ್ತಿದ್ದುದು ಅಪರೂಪ. ಭ್ರಷ್ಟಾಚಾರ ಈಗಿನಷ್ಟು ಭೀಕರ ಭೂತವಾಗಿರಲಿಲ್ಲ. ಸಾರ್ವಜನಿಕ ಕಾಮಗಾರಿಗಳಲ್ಲಿ ಕದಿಯುವಾಗ ರಾಜಕಾರಣಿಗಳು ಅಂಜುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜಘಾತುಕ ಶಕ್ತಿಗಳು ಅಧಿಕಾರ ಕೇಂದ್ರದ ಸುತ್ತ ಸುತ್ತುವ ಗ್ರಹಗಳಾಗಿರಲಿಲ್ಲ ಹಾಗೂ ಗೂಂಡಾಗಳನ್ನ ಜನಪ್ರತಿನಿಧಿಗಳಾಗಿಸುವ ಸಂಪ್ರದಾಯವನ್ನ ಪಕ್ಷಗಳು ಇನ್ನೂ ಆರಂಭಿಸಿರಲಿಲ್ಲ. ಇನ್ನೂ ಶೈಶವಾವಸ್ಥೆಯಲ್ಲಿದ್ದ ಕರುನಾಡಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅನೇಕ ಜನೋಪಕಾರಿ ಯೋಜನೆಗಳು ರೂಪಿಸಲ್ಪಟ್ಟವು. ಶ್ರೀಸಾಮಾನ್ಯರ ನಿತ್ಯ ಬಳಕೆಯ ವಸ್ತುಗಳ ಬೆಲೆ ಹಿಡಿತದಲ್ಲಿತ್ತು. ಸರಕಾರದ ಕಠಿಣ ಕ್ರಮಗಳಿಗೆ ಪುಂಡ ಪೋಕರಿಗಳು ಸ್ವಲ್ಪವಾದರೂ ಅಂಜುತ್ತಿದ್ದರು. ಈಗ ಪರಿಸ್ಥಿತಿ ಪೂರ್ಣ ವಿಭಿನ್ನವಾಗಿದೆ. ಮೈಸೂರು ರಾಜ್ಯ ಕರ್ನಾಟಕವಾಗುತ್ತಲೆ ಈ ಎಲ್ಲಾ ನಾಟಕಗಳು ಆರಂಭವಾದವು. ಮುಂದೆ ಅವುಗಳನ್ನ ಖಂಡಿತಾ ಕೊರೆಯುತ್ತೇನೆ.

No comments: