16 November 2013

ಕೂಊಊಊಊ ಬಲೀಂದ್ರಾ ಕೂಊಊಊಊ........................








ಕಾರ್ತಿಕ ಮಾಸಕ್ಕಿರುವ ವಿಚಿತ್ರ ಆಪ್ತತೆ ನನಗೆ ಇನ್ನುಳಿದ ಹನ್ನೊಂದು ಮಾಸಗಳೊಂದಿಗಿಲ್ಲ. ದೀಪಾವಳಿಯ ಖುಷಿಯೊಂದಿಗೆ ಬೆಸೆದಿರುವ ಬಾಲ್ಯದ ಕಾರ್ತಿಕದ ನೆನಪುಗಳು ಅಗಾಗ ಮುದ ಉಕ್ಕಿಸುವಂತೆ ನೆನಪಾಗುತ್ತವೆ. ನಾವು ಮಲೆನಾಡಿನಲ್ಲಿ ವಾಸಿಸುತ್ತಿದ್ದರೂ ಕರಾವಳಿಯ ಮೂಲವನ್ನ ಮುಚ್ಚಿಡಲಾಗದಷ್ಟು ಢಾಳವಾಗಿ ನಮ್ಮ ನಡೆ, ನುಡಿ ಹಾಗೂ ಆಹಾರ ಪದ್ಧತಿಯಲ್ಲಿ ತುಳುನಾಡಿನ ಸಂಸ್ಕಾರವನ್ನ ಅಳವಡಿಸಿಕೊಂಡಿದ್ದುದು ಎದ್ದು ಕಾಣುತ್ತಿತ್ತು. ತೀರ್ಥಹಳ್ಳಿಯಲ್ಲಿ ಒಂದು ರೀತಿಯಲ್ಲಿ ಬದುಕುತ್ತಿದ್ದ ನಾವು ಮೂಲದ ಊರನ್ನೆ ಅಲ್ಲಿಯೂ ಉಸಿರಾಡುತ್ತಿದ್ದೆವು ಅನ್ನಿಸುತ್ತೆ.


ಕೆಳಗೆ ಕರಾವಳಿಯಲ್ಲಿ ಬಲಿಯೇಂದ್ರನ ನೆನಪಿನ ದೀಪಾವಳಿ ನಮ್ಮದು, ಘಟ್ಟದವರ ದೀಪಾವಳಿಯಲ್ಲಿ ಬಲೀಂದ್ರ ಬರುವುದು ಕಾರ್ತಿಕ ಮಾಸದ ಪಾಡ್ಯದ ಒಂದೇ ಒಂದು ದಿನ ಮಾತ್ರ! ಸೌತೆ ಗಟ್ಟಿ, ಉದ್ದಿನದೋಸೆ, ಚಟ್ಟಂಬಡೆ, ಕಡಲೆ ಬೇಳೆ ಪಾಯಸದ ದೀಪಾವಳಿ ನಮ್ಮದು. ಚಪ್ಪೆರೊಟ್ಟಿ, ಶಾವಿಗೆ ಪಾಯಸ, ಹೋಳಿಗೆಯೂಟದ ದೀಪಾವಳಿ ಇಲ್ಲಿಯವರದು. ಕಾರ್ತಿಕದುದ್ದ ದಿನ ಸಂಜೆ ಗದ್ದೆ, ಹಟ್ಟಿ, ಮನೆಯಂಗಳ ಹಾಗೂ ತೋಟದ ದರೆಯ ಅಂಚಿಗೆಲ್ಲ ಅಡಿಕೆ ದಬ್ಬೆಯಿಂದ ಮಾಡಿದ ದೊಂದಿ ಹಚ್ಚಿ ಊರಿಗೆಲ್ಲ ಕೇಳುವಂತೆ ಮುಸ್ಸಂಜೆ ಹೊತ್ತಿನಲ್ಲಿ ಜೋರಾಗಿ "ಕೂ" ಹಾಕಿ ಬಲೀಂದ್ರನನ್ನು ಕೂಗಿ ಕರೆದು ಆಚರಿಸುವ ದೀಪಾವಳಿ ನಮ್ಮದು, ಒಂದು ದೊಡ್ಡ ಕಾಲ್ದೀಪವನ್ನ ಜನಪದ ಹಾಡುಗಳ ಕಂಠಸ್ಥರ ತಂಡ ಮನೆ ಮನೆಗೆ ರಾತ್ರಿ ಹೊತ್ತಿನಲ್ಲಿ ಹೊತ್ತೊಯ್ದು ಸರದಿಯಂತೆ "ಅಂಟಿಗೆ ಪಿಂಟಿಗೆ" ಪದ ಹಾಡಿ ತಮ್ಮ ದೊಂದಿಯ ಸೊಡರೊಂದನ್ನ ಆ ಮನೆಗೆ ಕೊಟ್ಟು ಬದಲಿಗೆ ಕಾಣಿಕೆ ವಸೂಲಿ ಮಾಡಿ ಆಚರಿಸುವ ದೀಪಾವಳಿ ಈ ಘಟ್ಟದವರದ್ದು. ಒಟ್ಟಿನಲ್ಲಿ ಅತ್ಯಲ್ಪ ದೂರದಲ್ಲಿದ್ದರೂ ಎರಡು ವಿಭಿನ್ನ ನೆಲೆಯ ದೀಪಾವಳಿ ಆಚರಣೆ ಮಲೆನಾಡು ಹಾಗೂ ಕರಾವಳಿಯದ್ದು. ಈ ಎರಡೂ ತರದ ಸಾಂಸ್ಕೃತಿಕ ಭಿನ್ನತೆಯ ಹಬ್ಬದಾಚರಣೆಗಳ ಪರಿಚಯ ಹಾಗೂ ಅನುಭವ ನನಗೆ ಬಾಲ್ಯದಲ್ಲಾಗಿತ್ತು. ನಮ್ಮ ಮನೆಯವರ ಪಾಲಿಗೆ ಕಾರ್ಕಳ-ಉಡುಪಿ-ಮಂಗಳೂರು-ಮೂಡುಬಿದಿರೆ ಅಸುಪಾಸಿನ ಕರಾವಳಿ ಹೆತ್ತ ತಾಯಿ ದೇವಕಿಯಾದರೆ, ತೀರ್ಥಹಳ್ಳಿ-ಸಾಗರ-ಕೊಪ್ಪ-ಶೃಂಗೇರಿ ಸೀಮೆಯ ಮಲೆನಾಡು ಮುದ್ದಿನಿಂದ ಸಾಕಿದ ಸಾಕುತಾಯಿ ಯಶೋದೆಯಂತಿತ್ತು.


ಕಾರ್ತಿಕದ ಉದ್ದಕ್ಕೂ ನನಗೆ ಸುತ್ತಲಿಕ್ಕೆ ಅವಕಾಶ ಸಿಗುತ್ತಿದ್ದುದು ಹಾಗೂ ಅದಕ್ಕೆ ಅನುಮತಿ ಮಂಜೂರಾಗುತ್ತಿದ್ದುದು ಕೇವಲ ಎರಡು ಕಡೆಗೆ ತಲೆ ಹಾಕಲಿಕ್ಕೆ ಮಾತ್ರ. ಒಂದು ಅಮ್ಮನ ತವರು ಮನೆ ಸಾಗಿನಬೆಟ್ಟಿಗೆ, ಇನ್ನೊಂದು ತೀರ್ಥಹಳ್ಳಿಗೆ ಹತ್ತು ಮೈಲು ದೂರದಲ್ಲಿ ತುಂಗಾನದಿಯ ತೀರದಲ್ಲಿಯೆ ಇದ್ದ ನಮ್ಮಲ್ಲಿ ಓದಲಿಕ್ಕಿದ್ದ ದಬ್ಬಣಗದ್ದೆಯ ಪ್ರಭಾಕರಣ್ಣನ ಹಳ್ಳಿ ಮನೆಗೆ. ಬಲಿಯೇಂದ್ರ ಪೂಜೆ, ನೊಗ ನೇಗಿಲಿನ ಪೂಜೆಯ ಸಂಭ್ರಮ ಕಾಣಲಿಕ್ಕೆ ಜೊತೆಗೆ ಕೊಣಾಜೆ ಕಲ್ಲಿಗೂ ಹೋಗುವ ಅವಕಾಶ ಸಾಗಿನಬೆಟ್ಟಿನಲ್ಲಿ ಸಿಗುತ್ತಿತ್ತು. ಮಲೆನಾಡಿನ ಒಕ್ಕಲಿಗರ ಮನೆಯ ದೀವಳಿಗೆ ಆಚರಣೆ, ಅಂಟಿಗೆ ಪಿಂಟಿಗೆಯ ಸವಿ, ತೋಟ ಸುತ್ತಿ ಹೊಳೆಯಲ್ಲಿ ಆಡುವ ಅವಕಾಶ ದಬ್ಬಣಗದ್ದೆಯಲ್ಲಿ ಅನುಭವಿಸಲಿಕ್ಕೆ ಸಿಗುತ್ತಿತ್ತು. ಹೀಗಾಗಿ ಸರದಿಯ ಮೇಲೆ ಆ ತಿಂಗಳಿನಲ್ಲಿ ಬರುವ ಮೊಹರಂ ಹಾಗೂ ಮಕ್ಕಳ ದಿನಾಚರಣೆಯ ರಜೆಗಳನ್ನೆಲ್ಲ ಜಿಪುಣನಂತೆ ಕಷ್ಟದಲ್ಲಿ ಹೊಂದಿಸಿಕೊಂಡು ಹಟ ಮಾಡಿ, ಮನೆಯಲ್ಲಿ ಒಪ್ಪದೆ ಅದೆಷ್ಟೆ ಪೆಟ್ಟು ಕೊಟ್ಟರೂ ನನ್ನ ದೊಂಡೆಯ ವಾಲಗದ ಸದ್ದನ್ನ ಒಂದಿಷ್ಟೂ ಕುಗ್ಗಿಸದೆ ಒಂದು ರೀತಿಯಲ್ಲಿ ಪ್ರತಿಭಟನಾಸ್ತ್ರವನ್ನ ಪ್ರಯೋಗಿಸಿಯೇ ಈ ಎರಡೂ ಸ್ಥಳಗಳಿಗೆ ಅದೆಷ್ಟೆ ಕಷ್ಟವಾದರೂ ವರ್ಷವೂ ಹೋಗಿಯೇ ತೀರುತ್ತಿದ್ದೆ. ನನ್ನದೂ ಒಂಥರಾ ಉಗ್ರಗಾಮಿ ಸ್ವರೂಪದ ಸತ್ಯಾಗ್ರಹವೆ! ಈ "ಸಾಗಿನಬೆಟ್ಟು ಚಲೋ" ಹಾಗೂ "ದಬ್ಬಣಗದ್ದೆ ಚಲೋ" ಚಳುವಳಿಗಳನ್ನ ಹತ್ತಿಕ್ಕಲು ಮನೆಯ ಹಿರಿಯರು ಬ್ರಿಟಿಷರ ಲಾಠಿಗಳ ಬದಲಿಗೆ ಎದುರು ಮನೆ ಪದ್ದಯ್ಯನ ಮನೆ ಬೇಲಿ ಬದಿಯ ಲಕ್ಕಿ ಬೆತ್ತದ ಕೆಲಸಕ್ಕೆ ಬಾರದ ಪ್ರಯೋಗ ಮಾಡಿ ಕಡೆಗೆ ಕೈಸೋತು ಸುಮ್ಮನಾಗುತ್ತಿದ್ದರು ಅನ್ನೋದಷ್ಟೆ "ದಂಡಿ ಯಾತ್ರೆ"ಗೂ ನನ್ನ "ದಂಡವಾಗದ ಹಳ್ಳಿ ಯಾತ್ರೆಗಳಿಗೂ" ಇರುತ್ತಿದ್ದ ಸಣ್ಣಪುಟ್ಟ ವ್ಯತ್ಯಾಸ!



ದೀಪಾವಳಿ ಮೇಲ್ನೋಟಕ್ಕೆ ಮೂರುದಿನದ ಆಚರಣೆಯಾದರೂ, ಕಡೆಯ ಕಾರ್ತಿಕ ವಾರದಲ್ಲಿ ಶುರುವಾಗುವ ತುಳಸಿ ಪೂಜೆಯ ಲೆಕ್ಖವನ್ನೂ ಹಿಡಿದರೆ ಸರಿ ಸುಮಾರು ಇಪ್ಪತ್ತು ದಿನ ಹಬ್ಬ ಊರಲ್ಲಿ ಇದ್ದೆ ಇರುತ್ತಿತ್ತು. ಸಾಲದ್ದಕ್ಕೆ ತಿಂಗಳಿಡಿ ದೀಪವಿಡುವ ಸಂಪ್ರದಾಯವೂ ಸೇರಿ ಕಾರ್ತಿಕದ ಕತ್ತಲನ್ನ ನಿತ್ಯವೂ ಕಾದು ಕೂರುವಂತಾಗುತ್ತಿತ್ತು. ಚಳಿ ಮೆಲ್ಲಗೆ ಮೊಗ್ಗೊಡೆದು ಹೂವಾಗುವ ಹೊತ್ತದು, ಆ ತಿಂಗಳಲ್ಲಿ ದಿನಕ್ಕೆ ಆಯಸ್ಸು ಕಡಿಮೆ. ಸಂಜೆ ಐದೂವರೆಗೆಲ್ಲ ಕತ್ತಲು ಕಾಡಿಗೆ ತೀಡಿದಂತೆ ಸುತ್ತಲೂ ಆವರಿಸಿಕೊಂಡು ಬಿಟ್ಟರೆ ಇನ್ನು ಬೆಳಗ್ಯೆ ಏಳರ ತನಕವೂ ಜಪ್ಪಯ್ಯಾ ಅಂದರೂ ತೊಲಗುತ್ತಿರಲಿಲ್ಲ. ಬೆಳಗ್ಯೆ ಮನೆಯ ಹಿಂದಿನ ಅಂಗಳದಲ್ಲಿನ ಬಟ್ಟೆ ಹರಗುವ ತಂತಿಗಳ ಮೇಲೆಲ್ಲ ಮುತ್ತು ಪೋಣಿಸಿದಂತೆ ಇಬ್ಬನಿ ಹನಿಗಳು ಕಟ್ಟಿಕೊಂಡಿರುತ್ತಿದ್ದವು. ಎಳೆಯ ಬಿಸಿಲು ಅವುಗಳನ್ನ ಸ್ಪರ್ಷಿಸುತ್ತಿದ್ದ ಹಾಗೆಯೆ ನಾಚಿದವಂತೆ ಆವು ಕಾಮನಬಿಲ್ಲಿನ ಬಣ್ಣಗಳನ್ನೆಲ್ಲ ಹೊಳೆಹೊಳೆಸುತ್ತಾ ಕರಗಿ ಕಣ್ಮರೆಯಾಗುತ್ತಿದ್ದವು. ಊರಿಗೆ ಹೋದಾಗ ನಸು ಮುಂಜಾನೆಯ ಹೊತ್ತಿಗೆಲ್ಲ ಅಲ್ಲಿ ಸಣ್ಣ ಮಳೆ ಬಂದಂತೆ ಗದ್ದೆ ಬದುವಿನ ಹುಲ್ಲುಗಳೆಲ್ಲ ನೆನೆದಿರುತ್ತಿದ್ದವು. ಬೆಳಗಿನ "ಚಾ"ವನ್ನ ಗದ್ದೆ ಹೂಡುವವರಿಗೆ ಅವರಿದ್ದಲ್ಲಿಯೆ ಕೊಡಲಿಕ್ಕೆ ಸಾಗಿನಬೆಟ್ಟಿಗೆ ಹೋದಾಗಲೆಲ್ಲ ಚಿಕ್ಕಮ್ಮ ಕಳಿಸುವುದಿತ್ತು. ಆಗೆಲ್ಲಾ ಹಬೆಯಾಡುವ ಚಹಾದ ಕೆಟಲ್ ಹಿಡಿದು ಗದ್ದೆಯಂಚಿನಲ್ಲಿ ನಡೆಯುವಾಗ ಈ ಇಬ್ಬನಿ ಪಸೆ ಹವಾಯಿ ಚಪ್ಪಲಿಯೊಳಗೆ ಸೇರಿ ಸವೆದು ಸವೆದು ನಯವಾದ ನನ್ನ ಚಪ್ಪಲಿಯೊಳಗಿನ ಪಾದ ಜಾರುತ್ತಿತ್ತು.


ಮುಟ್ಟಾಳೆಯ ಟೊಪ್ಪಿ ಹಾಕಿಕೊಳ್ಳದೆ ಹೊರಗೆ ಹೋಗಿ ಇಬ್ಬನಿಯಲ್ಲಿ ನೆನೆದು ಬಂದರೆ ನೆತ್ತಿಯ ಕೂದಲೆಲ್ಲ ಒದ್ದೆಯಾಗಿ ಮನೆಯ ದೊಡ್ದವರಿಂದ ಬೆಳಗ್ಯೆ ಬೆಳಗ್ಯೆಯೆ ಪುಕ್ಸಟ್ಟೆ ಉಗಿಸಿಕೊಳ್ಳಬೇಕಾಗುತ್ತಿತ್ತು! ಬೆಳಗ್ಯೆ ತೋಡಿನ ಬದಿಗೆ ಹೋಗಿ ಚಡ್ಡಿ ಜಾರಿಸಿ ಕೂತು ಕನಸು ಕಾಣುತ್ತಾ ವಿಸರ್ಜನಾನಂದದಲ್ಲಿ ಆಕಾಶ ನೋಡುತ್ತಿದ್ದರೆ ಜುಳುಜುಳು ಹರಿಯುತ್ತಿದ್ದ ತೋಡಿನ ನೀರಿನ ಮೇಲೆ ಹೊಗೆಯಂತೆ ನೆಲದ ಕಾವು ಏರುತ್ತಿದ್ದು; ಅದ್ಯಾವುದೋ ಬಿಂದುವಿನಲ್ಲಿ ಆದು ನೆಲವನ್ನ ಚುಂಬಿಸುತ್ತಿದ್ದ ಇಬ್ಬನಿಯ ಜೊತೆ ಬೆರೆಯುವುದನ್ನ ಕಾಣಲಿಕ್ಕೆ ಸಿಗುತ್ತಿತ್ತು. ಕೆಲವು ಸಾರಿಯಂತೂ ಹತ್ತು ಅಡಿ ದೂರದವರೆಗೂ ಬರುತ್ತಿದ್ದವರ್ಯಾರೂ ಕಣ್ಣಿಗೆ ಗೋಚರಿಸುತ್ತಲೆ ಇರಲಿಲ್ಲ. ಬಾಯಿ ಬಿಟ್ಟರೆ ನಮ್ಮ ಬಾಯಿಯಿಂದಲೂ ಬೆಚ್ಚನೆ ಹಬೆ ಹೊಗೆಯಂತೆ ಹೊರಹೊಮ್ಮುತ್ತಿತ್ತು. ಬೀಡಿ ಸೇಯುವಂತೆ ಗೇರು ಬೀಜ ಮರದ ಎಲೆಯನ್ನ ಹಲ್ಲುಜ್ಜುವ ಮುನ್ನ ಸುರುಳಿ ಸುತ್ತಿ ಹೊಗೆ ಬಿಡುವ ಆಟ ಆಡಿ ಆಮ್ಮನಿಂದ ತಲೆಗೆ ಮೊಟಕಿಸಿಕೊಳ್ಳುತ್ತಿದ್ದೆ.


ನಮ್ಮ ತೀರ್ಥಹಳ್ಳಿ ಮನೆಯ ಗೋಪೂಜೆಯ ನಂತರ ನಮ್ಮ ಸವಾರಿ ಸಾಗಿನಬೆಟ್ಟಿನತ್ತ ಹೊರಡುತ್ತಿತ್ತು. ವಾಸ್ತವವಾಗಿ ಅಮ್ಮ ಒಬ್ಬರೆ ತವರಿನತ್ತ ಮುಖ ಮಾಡುತ್ತಿದ್ದರಾದರೂ ನಾನು ಅವರ ಬೆಂಬಿಡದ ಬಾಲವಾಗಿದ್ದ ಕಾಲ ಅದಾಗಿದ್ದು. ಒಂದು ವೇಳೆ ಬಿಟ್ಟು ಹೋಡರೆ ಆಕಾಶ ಭೂಮಿ ಒಂದು ಮಾಡುವಂತೆ ಅರ್ಭಟ ಮಾಡಿ ಆತ್ತು ಕರೆದು ಎಲ್ಲರಿಗೂ ಕಿರಿಕಿರಿ ಹುಟ್ಟಿಸುತ್ತಿದ್ದ ನನ್ನನ್ನೂ ಅನಿವಾರ್ಯವಾಗಿ ಜೊತೆಗೆ ಕರೆದೊಯ್ಯದೆ ಅವರಿಗೆ ಬೇರೆ ವಿಧಿಯೇ ಇರುತ್ತಿರಲಿಲ್ಲ. ನಾಯಿಯ ಹಿಂದಿನ ಬಾಲದ ಹಾಗೆ ನಾನೂ ಸಹ ಅಮ್ಮನ ಜೊತೆ ಅವರ ತವರಿಗೆ ಲಗ್ಗೆ ಇಡುತ್ತಿದ್ದೆ. ಸಾಗಿನಬೆಟ್ಟು ಮನೆ ಅವಿಭಕ್ತ ಕುಟುಂಬದ ಸೊತ್ತು. ಅಮ್ಮನ ಹಿಂದೆ ಮುಂದೆ ಹುಟ್ಟಿದವರು ಒಟ್ಟು ಹದಿನಾಲ್ಕು ಮಂದಿ. ಅಮ್ಮನ ಅಮ್ಮ ಹಣ್ಣುಹಣ್ಣು ಮುದುಕಿ ಅವ್ವ ಇನ್ನೂ ಜೀವಂತವಾಗಿದ್ದರು. ಆಕಾಲದಲ್ಲಿ ಅವರ ಹಿರಿಯಕ್ಕ ಮತ್ತು ಒಬ್ಬ ಅಣ್ಣ ತೀರಿ ಹೋಗಿದ್ದರು. ಇನ್ನುಳಿದವರಲ್ಲಿ ವಿಧವೆಯಾಗಿದ್ದ ತಂಗಿ ರತ್ನ ಚಿಕ್ಕಮ್ಮ ಮಾತ್ರ ಅಲ್ಲಿದ್ದು ಉಳಿದಂತೆ ಎರಡನೆ ಹಾಗೂ ಮೂರನೆ ಅಣ್ಣಂದಿರನ್ನ ಬಿಟ್ಟು ಬಾಕಿ ಎಲ್ಲರೂ ಬೊಂಬಾಯಿನಲ್ಲಿದ್ದರು. ಎರಡನೆ ಅಣ್ಣ ಮಂಗಳೂರಿನಲ್ಲಿದ್ದರೆ ಮೂರನೆ ಅಣ್ಣ ಅಲ್ಲೆ ಸಮೀಪದ ಹೌದಾಲಿನಲ್ಲಿ ಅಂಗಡಿಯಿಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದರು. ಒಟ್ಟಿನಲ್ಲಿ ಮನೆಯಲ್ಲಿ ಸದಾ ಹತ್ತಿಪ್ಪತ್ತು ಮಂದಿ ಗಿಜಿಗುಡುತ್ತಲೆ ಇರುತ್ತಿದ್ದ ಆಲ್ಲಿ ಸಮಾರಾಧನೆಯಂತೆ ನಿತ್ಯದ ಮೂರು ಹೊತ್ತಿನ ಅಡುಗೆ ಆಗುತ್ತಿತ್ತು.


ಮನೆಯ ಅಂಗಳ ಇಳಿದರೆ ಮೆಟ್ಟಿಲುಗಳಿವೆ. ಅವುಗಳ ಮೊದಲ ಪಂಕ್ತಿಯಿಂದಾಚೆಗೆ ಬೆಟ್ಟುಗದ್ದೆಗಳು ಹಾಗೂ ಪಂಪ್'ಹೌಸ್, ಇನ್ನೊಂದು ಪಂಕ್ತಿ ಇಳಿದರೆ ಎಡಕ್ಕೊಂದು ದೊಡ್ಡ ಕೆರೆ, ಎದುರಿಗೆ ತುಂಬಿ ಹರಿವ ಪಲ್ಗುಣಿಯ ತೋಡಿನ ತೊರೆ. ಆದರಾಚೆಗೆ ವಿಶಾಲ ಗದ್ದೆ ಬಯಲು ಆದರ ಮತ್ತೊಂದಂಚಿಗೆ ಕಲ್ಲಿನ ಪಾದೆ. ಅದರಾಚೆಗೆ ಮನೆಯ ಮರಗಳಿರುವ ದರ್ಖಾಸು, ಅದನ್ನೂ ದಾಟಿ ಮುಂದುವರೆದರೆ ದೊಡ್ಡದೊಂದು ಊರೊಟ್ಟಿನ ಗರೋಡಿಯ ಭೂತಸ್ಥಾನ ಹಾಗೂ ಅದರಂಚಿಗೆ ಮೂಡುಬಿದಿರೆಯನ್ನ ಶಿರ್ತಾಡಿಯಾಗಿ ನಾರಾವಿಯೊಂದಿಗೆ ಬೆಸೆಯುವ ಸರಕಾರಿ ರಾಜರಸ್ತೆ. ತೀರ್ಥಹಳ್ಳಿಯ ೪೦*೬೦ ಜಾಗದಲ್ಲಿ ಉಸಿರುಕಟ್ಟಿದವನಂತೆ ಆಡುತ್ತಿದ್ದ ನನ್ನ ಮಂಗ ಮನಸಿಗೆ ಸೊಕ್ಕಲು ಇಷ್ಟು ವೈವಿಧ್ಯತೆಗಳಿರುವ, ಎದ್ದು ಬಿದ್ದು ಆಡಿ ಮೈ ಮಣ್ಣು ಮಾಡಿಕೊಳ್ಳಲಿಕ್ಕೆ ಅಪಾರ ಅವಕಾಶಗಳಿರುವ ಸಾಗಿನಬೆಟ್ಟು ಇಷ್ಟವಾಗಲಿಕ್ಕೆ ಇವಕ್ಕಿಂತಾ ವಿಶೇಷ ಕಾರಣಗಳೇನೂ ಬೇಕಿರಲಿಲ್ಲ. ಸಾಲದ್ದಕ್ಕೆ ಇಲ್ಲಿನ ಹಟ್ಟಿ ತುಂಬ ದನಗಳ ಜಾತ್ರೆ! ಹೂಡುವ ಮೂರು ಜೊತೆ ರಕ್ಕಸ ಗಾತ್ರದ ಕೋಣಗಳ ಜೊತೆಗೆ ಕಂಬಳಕ್ಕಾಗಿಯೆ ಬೆಳೆಸಿ ಕೊಬ್ಬಿಸಿಡಲಾಗಿರುವ ಎರಡು ಬೀಜ ಒಡೆಯದ ಸೈಂಧವ ಗಾತ್ರದ ಕೊಣಗಳ ಜೋಡಿಗಳು ಬೇರೆ ಪಕ್ಕದ ಹಟ್ಟಿಯಲ್ಲಿ ಭುಸುಗುಡುತ್ತಿರುವಾಗ. ಸದಾ ನೀರು ಹರಿವ ತೋಡಿನ ನೀರು ಕಡಿಮೆ ಇರುವ ತೋಡಿನ ಅಂಚಿನಲ್ಲಿ ಹಾಗೂ ಕೆರೆಯಲ್ಲಿ ಈಜುವ ಪುಕ್ಕಟೆ ಅವಕಾಶ ಸಿಗುವಾಗ ಇಲ್ಲಿಗೆ ಬರುವ ಅವಕಾಶವನ್ನ ತಪ್ಪಿಸಿಕೊಳ್ಳುವ ಮೂರ್ಖನಾಗುವುದೆಲ್ಲದರೂ ಉಂಟೆ! ಹೀಗಾಗಿ ಆಮ್ಮ ಅಲ್ಲಿಗೆ ಹೋಗುವುದನ್ನೆ ಸದಾ ಬೇಟೆಗೆ ಕುಳಿತ ಹುಲಿಯಂತೆ ಹೊಂಚು ಹಾಕಿ ಕಾಯುತ್ತಿದ್ದೆ. ಇದಕ್ಕೆಲ್ಲ ಬೋನಸ್ಸಿನಂತೆ ಕಡೆಗೊಂದು "ಕೊಣಾಜೆ ಕಲ್ಲಿ"ನ ಅಹೋರಾತ್ರಿ ಯಾತ್ರೆಯೂ ನಮ್ಮ ಈ ಕಿರು ಪ್ರವಾಸದ ಅವಿಭಾಜ್ಯ ಅಂಗವಾಗಿರುತ್ತಿತ್ತು.


ವ್ಯವಸಾಯ ಮಾಡುವ ಮನೆಯಾದ್ದರಿಂದ ನಮಗೆ ಎಂಟು ಖಾಯಂ ಒಕ್ಕಲುಗಳೂ ಇದ್ದರು. ನಮ್ಮ ಜಾಗದ ಅಂಚಿನಲ್ಲಿಯೆ ಅವರೆಲ್ಲರ ಬಿಡಾರಗಳಿರುತ್ತಿದ್ದವು. ಅವರೆಲ್ಲರೂ ಸಹ ಈ ತುಡರ್'ದ ಪರ್ಬ ( ಸೊಡರಿನ ಹಬ್ಬ)ವನ್ನ ನಮ್ಮನ್ನೊಡಗೂಡಿ ಆಚರಿಸುವುದು ವಾಡಿಕೆ. ನಮ್ಮ ನೊಗ ನೇಗಿಲುಗಳಿಗೆಲ್ಲ ಪೂಜೆ ಮಾಡಿ ಅವಕ್ಕೂ ಅಗೆಲು ಅಂದರೆ ನೈವೇದ್ಯಕ್ಕಾಗಿ ಮಾಡಿದ ಎಲ್ಲ ಭಕ್ಷ್ಯಗಳನ್ನ ಬಡಿಸುವ ಪದ್ಧತಿ ಇತ್ತು. ಸಂಜೆ ಚಿಕ್ಕಮ್ಮನ ಕಿರಿಮಗ ಕೇಶವ ಅಡಿಕೆ ದಬ್ಬೆಗಳನ್ನ ಒಂದೆ ಅಳತೆಗೆ ಬರುವಂತೆ ಎರಡೂ ಮೂರು ಅಡಿಗಳಿರುವಂತೆ ಸೀಳಿ ಅದರ ಒಂದು ತುದಿಗೆ ಬಿಳಿ ಪಾಣಿಪಂಚೆಯನ್ನ ಹರಿದು ಮಾಡಿದ ಬತ್ತಿಯನ್ನ ಸುತ್ತಿ ಆವುಗಳನ್ನೆಲ್ಲ ಎಳ್ಳೆಣ್ಣೆಯಲ್ಲಿ ಆದ್ದಿ ಸರಿಯಾದ ದೊಂದಿ ತಯ್ಯಾರು ಮಾಡಿಡುತ್ತಿದ್ದ. ಸಂಜೆ ಕತ್ತಲು ಕವಿಯುತ್ತಿದ್ದಂತೆ ಬೆನ್ನಿಗೆ ಬತ್ತಳಿಕೆಯಂತೆ ಅಂತಹ ದೊಂದಿಗಳ ಕಟ್ಟನ್ನ ಕಟ್ಟಿಕೊಂಡ ಅವನ ಸವಾರಿ ಜಮೀನಿನ ಉದ್ದಗಲಕ್ಕೆ ಹೊರಡುತ್ತಿತ್ತು.


ಬೇರೆ ಹೊತ್ತಿನಲ್ಲಿ ಆವನ ದಬ್ಬಾಳಿಕೆಗಳನ್ನೆಲ್ಲ ಒಂದು ಚೂರೂ ಕೇರು ಮಾಡದೆ ವಿರೋಧಿಸುತ್ತಿದ್ದ ನಾನು ಆಗ ಮಾತ್ರ ಆವನ ವಿಧೇಯ ಶಿಷ್ಯನಂತೆ ಆವನು ಹೇಳಿದ್ದನೆಲ್ಲ ಚಾಚೂ ತಪ್ಪದೆ ಪಾಲಿಸುತ್ತಾ ಕಾಲಕ್ಕೆ ತಕ್ಕ ಕೋಲಕಟ್ಟುವವನಂತೆ ಅವನ ಬೆನ್ನು ಹಿಡಿಯುತ್ತಿದ್ದೆ. ನನ್ನ ಈ ಮಾರ್ಜಾಲ ಸನ್ಯಾಸದ ಅರಿವಿದ್ದ ಅವನು ಸಾಕಷ್ಟು ಸತಾಯಿಸಿಯೆ ನನ್ನನ್ನು ಜೊತೆಗೆ ದಿಬ್ಬಣ ಕರೆದುಕೊಂಡು ಹೋಗಲು ಕಡೆಗೆ ಒಪ್ಪುತ್ತಿದ್ದ. ಮೊದಲಿಗೆ ಮನೆ ಹಿತ್ತಲಿನ ಹಟ್ಟಿಯಲ್ಲಿ ದೊಂದಿ ಹಚ್ಚಿ ಅಲ್ಲಿನ ಗೋ ವೃಂದ ಹಾಗೂ ಮಹಿಷ ಮಲ್ಲರಿಗೆ ಬೆಳಕನ್ನ ತೋರಿಸಿದ ನಂತರ ಗದ್ದೆಯಂಚಿನಲ್ಲೆಲ್ಲ ಒಂದೊಂದು ದೊಂದಿ ಹಚ್ಚಿ ಅವನ್ನ ಗದ್ದೆಯ ಕೆಸರಿನ ನೆಲದಲ್ಲಿ ಊರಿ ನಾವು ಮುಂದುವರೆಯುತ್ತಿದ್ದೆವು. ಹೀಗೆ ಜಾಗದ ಉದ್ದಗಲಕ್ಕೂ ನಮ್ಮ ದೊಂದಿಗಳನ್ನ ಊರಿ ಮುಗಿಸುವ ಹೊತ್ತಿಗೆ ಮನೆಯ ಜಗಲಿಯಂಚಿನಲ್ಲಿ ಹಾಗೂ ತುಳಸಿಕಟ್ಟೆಯ ಉದ್ದಗಲಕ್ಕೂ ಮನೆಯ ಹುಡುಗಿಯರೆಲ್ಲ ಆಮ್ಮನ ಅಣತಿಯಂತೆ ಸಾಲು ಮಣ್ಣಿನ ಹಣತೆ ಹಚ್ಚಿಡುತ್ತಿದ್ದರು. ಆಗೆಲ್ಲ ಕರಾವಳಿಯ ಮನೆಗಳ ಜಗಲಿಗಳಿಗೆ ಹೊರ ಗೋಡೆಗಳೆ ಇರುತ್ತಿರಲಿಲ್ಲ. ಈ ಬಾಗಿಲು ಕಿಟಕಿಗಳೆಲ್ಲ ಇತ್ತೀಚಿನ ಅಪನಂಬಿಕೆಯ ಕಾಲದ ಬಳುವಳಿಗಳು ಅಷ್ಟೆ. ನಮ್ಮ ಜಗಲಿಯಂಚಿನಲ್ಲಿ ಒಂದರ ಪಕ್ಕ ಒಂದಿರಿಸಿದ ಸಾಲು ದೀಪಗಳ ಸೊಬಗು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅಡಿಕೆಯ ಮರದಿಂದಲೆ ಸಾಂಕೇತಿಕವಾಗಿ ಒಂದು ಪೂಕರೆ ಕಂಬ ಮಾಡಿಡಲಾಗಿರುತ್ತಿದ್ದು ಅದರ ಸುತ್ತ ಮರದ ಸ್ಟ್ಯಾಂಡ್ ಮೇಲೆ ಮತ್ತಷ್ಟು ಹಣತೆಗಳು ಉರಿಯುತ್ತಿದ್ದವು. ಇದೆಲ್ಲ ಅದ ನಂತರ ಬಲಿಯೇಂದ್ರನನ್ನ ಕರೆಯುವ ಕೆಳಗಿನ ಪಾಡ್ದನವನ್ನ ಅಮ್ಮ ರಾಗವಾಗಿ ಹಾಡುತ್ತಿದ್ದರು. ಅವರಷ್ಟು ಪಾಡ್ದನ ಬಾಯಿಪಾಠವಾಗಿರದ ನಾವೂ ಸಹ ಅರೆಬರೆಯಾಗಿ ಅದನ್ನ ಹಾಡಿ ಧ್ವನಿಗೂಡಿಸುತ್ತಿದ್ದೆವು.


ತುಳುವಿನಲ್ಲಿರುವ ಆ ಪಾಡ್ದಾನ ಹೀಗಿದೆ:


"ಕರ್ಗಲ್ ಕಾಯ್ ಆವನಗ ಬೋರ್ಕಲ್ ಪೂ ಪೋನಗ
ಜಾಲ್ ಪಾದೆ ಆವನಗ ಗೊಡ್ಡೆರ್ಮೆ ಗೋಣೆ ಆನಗ
ಎರು ದಡ್ಡೆ ಆವನಗ ತುಂಬೆ ದಡದಿಡ್ ಕೂಟ ಆನಗ
ನೆಕ್ಕಿದಡಿಟ್ ಆಟ ಆನಗ ದಂಬೆಲಿಗ್ ಪಾಂಪು ಪಾಡುನಗ
ಅಲೆಟ್ ಬೊಲ್ ನೆಯ್ಯಿ ಮುರ್ಕುನಗ ಗುರುಗುಂಜಿದ ಕಲೆ ಮಾಜಿನಗ
ಕಲ್ಲುದ ಕೋರಿ ಕಿಲೆಪ್ಪುನಗ ದಂಟೆದಜ್ಜಿ ಮದುಮಲ್ ಆನಗ
ಮಂಜೆಲ್'ದ ಪಕ್ಕಿ ಮೈ ಪಾಡುನಗ ಕೊಟ್ರುಂಜೆ ಕೊಡಿ ಏರುನಗ
ನಂದಿಗೋಣ ಮುಕ್ಕುರುದ್ ಲಕ್ಕುನಗ ಬಲ್ಲಮಲೆ ಸುಲ್ಲಮಲೆ ಒಂಜಾವನಗ


ಮೂಜಿ ದಿನತ ಉಚ್ಛಯ ಮೂಜಿ ದಿನತ ಬಲಿ
ಕಂಡ ಕಂಡೊಡು ತುಡರ್ ತೂಯರೆ ಆ ದಿನತ ಬಲಿ ಕಣಯರೆ
ಆಟಿದ ಅಮಾಸೆಗ್ ಸೋಣದ ಸಂಕ್ರಾಂತಿಗ್ ಬೊಂತೆಲ್ದ ಕೊಡಿ ಪೊರ್ಬೊಗ್


ಈ ಊರುದ ಬಲಿ ಆ ಊರುದ ಪೊಲಿ ದೆತೊಂದು ಪೋಲ ಬಲೇಂದ್ರಾ
ಅರಕ್ಕುದ ಒಟ್ಟೆ ಓಡುಡು ಮಯಣದ ಮೋಟು ಜಲ್ಲೊಡು
ಪೊಟ್ಟು ಗಟ್ಟಿ ಪುಡಿ ಬಜಿಲ್ ಬಲಿ ಗೆತೊಣೆರೆ
ಕೊಟ್ಟೊಗು ಗೊಂಡೆ ಪೂ ಕಟ್ಟುದ್ ಬಲ ಬಲೀಂದ್ರಾ
ಆ ಊರುದ ಬಲಿ ಕೊಣಲ ಈ ಊರುದ ಪೊಲಿ ಕೊಣಲ
ಕೂ ಬಲೀಂದ್ರಾ ಕೂಊಊಊಊಊಊಊಊಊ.....

ಅಂದರೆ

ಕರಿ ಬೆಣಚುಕಲ್ಲು ಹಸಿ ಕಾಯಿಯಾಗುವಾಗ ಬಿಳಿ ಬೆಣಚುಕಲ್ಲು ಆರಳಿದ ಹೂವಾಗುವಾಗ
ಅಂಗಳ ಕಲ್ಲ ಬಂಡೆ ಅಗುವಾಗ ಗೊಡ್ಡೆಮ್ಮೆ ಕೋಣನಾಗುವಾಗ
ಕೋಣ ಗರ್ಭ ಧರಿಸುವ ಎಮ್ಮೆಯಾದಾಗ ತುಂಬೆ ಸಸಿಯಡಿ ಕೂಟ ಸೇರುವಾಗ
ನೆಕ್ಕಿ ಗಿಡದಡಿ ಯಕ್ಷಗಾನ ಆಗುವಾಗ ಒಣಗಿದ ಗದ್ದೆಯ ಬಿರುಕುಗಳಿಗೆ ಕಾಲು ಸಂಕ ಹಾಕುವಾಗ
ಮಜ್ಜಿಗೆಯಲ್ಲಿ ಬೆಣ್ಣೆ ಮುಳುಗಿ ಹೋಗುವಾಗ ಗುಲಗಂಜಿಯ ಕಲೆ ಮಾಯವಾಗುವಾಗ
ಕಲ್ಲಿನ ಕೋಳಿ ಕೂಗುವಾಗ ಕೋಲು ಹಿಡಿದ ಬೆನ್ನು ಬಾಗಿದ ಮುದುಕಿ ಮದುಮಗಳಾಗುವಾಗ
ಹಳದಿ ಹಕ್ಕಿ ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವಾಗ ಮರಕುಟುಕ ಮರದ ತುದಿಯನ್ನೇರಿ ಅಲ್ಲಿ ಕುಟುಕುವಾಗ
ಶಿವನ ಮುಂದಿನ ಕಲ್ಲಿನ ನಂದಿ ಹೂಂಕರಿಸಿ ಮೇಲೆದ್ದೇಳುವಾಗ
ದೂರದೂರದಲ್ಲಿರುವ ಬಲ್ಲಮಲೆ ಬೆಟ್ಟ ಹಾಗೂ ಸುಲ್ಲಮಲೆ ಬೆಟ್ಟ ಪರಸ್ಪರ ಕೂಡಿ ಒಂದಾಗುವಾಗ


ಮೂರು ದಿನದ ಆಚರಣೆ ಮೂರು ದಿನದ ಬಲಿ
ಗದ್ದೆ ಗದ್ದೆಯಲ್ಲಿನ ಹಬ್ಬ ನೋಡಲಿಕ್ಕೆ ಆ ದಿನದ ಎಡೆ ಕೊಡು ಹೋಗಲಿಕ್ಕೆ
ಆಟಿ ತಿಂಗಳ ಅಮವಾಸ್ಯೆಗೆ ಸೋಣ ತಿಂಗಳ ಸಂಕ್ರಾಂತಿಗೆ ಬೊಂತೆಲ್ ತಿಂಗಳಿನ ದೀಪಾವಳಿ ಹಬ್ಬಕ್ಕೆ



ಆ ಊರಿನ ಐಶ್ವರ್ಯ ಈ ಊರಿನ ಎಡೆ ಕಂಡು ಹೋಗು ಬಲಿಯೇಂದ್ರ
ಅರಗಿನ ತೂತು ತೆಪ್ಪದಲ್ಲಿ ಮೇಣದ ಮೊಂಡು ಹುಟ್ಟು ಹಾಕುತ್ತಾ
ಹಾಳಾಗಿ ಹಳಸಿದ ಕಡುಬು ಹಾಗೂ ಪುಡಿ ಹುಡಿಯಾದ ಅವಲಕ್ಕಿಯ ಪನಿವಾರ
ಕೊಂಡು ಹೋಗಲಿಕ್ಕೆ ಕಿರೀಟಕ್ಕೆ ಚಂಡೂ ಹೂ ಕಟ್ಟಿಕೊಂಡು ಬಾ ಬಲಿಯೇಂದ್ರ.
ಆ ಊರಿನ ಐಶ್ವರ್ಯ ಈ ಊರಿನ ಎಡೆ ಕಂಡು ಹೋಗು ಬಲಿಯೇಂದ್ರ
ಕೂ ಬಲಿಯೇಂದ್ರ ಕೂ ಬಲೀಂದ್ರಾ ಕೂಊಊಊಊಊಊಊಊಊ.....


ಇದನ್ನ ಪ್ರತಿಯೊಬ್ಬ ತುಳುವನೂ ಜಾತಿ-ವರ್ಗ-ಪಂಥ-ಪ್ರಾಯದ ಭೇದವಿಲ್ಲದೆ ಅರ್ಥವರಿಯದಿದ್ದರೂ ಶ್ರದ್ಧಾ ಭಕ್ತಿಯಿಂದ ಕಿರುಚಿ ಬಲಿಯೇಂದ್ರನನ್ನು ಕರೆದು ಮತ್ತೆ ಪನಿವಾರ ತಿಂದು ಹಬ್ಬದ ಸವಿ ಹೆಚ್ಚಿಸಿಕೊಳ್ಳುತ್ತಾರೆ. ಅಂತೆಯೆ ನಾವೂ ಸಹ ಯಾರೋ ನಮ್ಮ ತಲೆಮಾರುಗಳ ಹಿಂದಿನ ಅಜ್ಜ ಹಾಕಿದ ಅಚರಣೆಯ ಅಲದ ಮರಕ್ಕೆ ಪ್ರತಿ ದೀಪಾವಳಿಯಲ್ಲಿಯೂ ನೇಣು ಹಾಕಿಕೊಳ್ಳುತ್ತಿದ್ದೆವು.


ನಾವು ಘಟ್ಟದ ಕೆಳಗಿನವರು ಅಂದರೆ ಗೋಕರ್ಣದಿಂದ ಸುಚೀಂದ್ರಂವರೆಗಿನ ಪರಶುರಾಮ ಸೃಷ್ಟಿಯ ದೇವರ ಸ್ವಂತ ನಾಡಿನವರಾದ ತುಳುವರು ಹಾಗೂ ಮಲಯಾಳಿಗಳು ದಾನಶೂರ ಬಲಿ ಚಕ್ರವರ್ತಿಯ ಪ್ರೀತಿಯ ಪ್ರಜೆಗಳಂತೆ. ಯಶಸ್ವಿಯಾಗಿ ಒಂದು ನೂರು ಯಾಗ ಮಾಡಿದವರು ಮೂರು ಲೋಕಗಳ ಪರಮೋಚ್ಛ "ಇಂದ್ರ" ಪದವಿ ಏರ ಬಹುದಾಗಿದ್ದ ಕಾಲದಲ್ಲಿ ಆತ ಸ್ವ ಸಾಮರ್ಥ್ಯದಿಂದ ಪರ ಪೀಡಕನಾಗದೆ ೯೯ ಯಾಗಗಳನ್ನ ಯಶಸ್ವಿಯಾಗಿ ಮಾಡಿ ಮುಗಿಸಿ ನೂರನೆಯದಕ್ಕೆ ಸಂಕಲ್ಪ ಮಾಡಿದನಂತೆ. ಆಗ ಬೆಚ್ಚಿಬಿದ್ದ ಆಗಿನ ಇಂದ್ರ ಹಾಗೂ ಅವನ ಛೇಲಾಗಳಾದ ದೇವರ ಪಡೆ ವಿಷ್ಣುವಿನಲ್ಲಿ ತಮ್ಮ ಸಂಭಾವ್ಯ ಪದಚ್ಯುತಿಯನ್ನ ತಪ್ಪಿಸಲು ಮೊರೆಯಿಟ್ಟರಂತೆ. ದೇವತೆಗಳ ಪಕ್ಷಪಾತಿ ವಿಷ್ಣು ಕುಬ್ಜ ಬಾಲವಟು ವಾಮನಾವತಾರಿಯಾಗಿ ಬಲಿ ಚಕ್ರವರ್ತಿಯ ಯಜ್ಞ ಶಾಲೆಗೆ ಕಾಲಿಟ್ಟನಂತೆ. ಎಳೆ ಬ್ರಾಹ್ಮಣನ ಆಗಮನದಿಂದ ಸ್ವಭಾವತಃ ಧಾರಾಳಿಯಾದ ಬಲಿ ಆತನಿಗೆ ದಾನ ಕೊಡಲಿಕ್ಕೆ ಉದ್ಯುಕ್ಥನಾದ.


ಆದರೆ ಈ ವಟು ಬೇಡಿದ್ದು ಕೇವಲ ಮೂರು ಹೆಜ್ಜೆ ನೆಲ! ಇದರ ಹಿಂದಿನ ಕುತಂತ್ರವನ್ನ ಗ್ರಹಿಸಿದ ದಾನವ ಕುಲಗುರು ಶುಕ್ರಾಚಾರ್ಯರು ಬಲಿಯನ್ನ ಆವಸರಿಸಿ ಭಿಕಾರಿಯಾಅಗದಂತೆ ತಡೆದರು. ಆದರೆ ಅದಾಗಲೆ ದಾನಕ್ಕೆ ಭಾಷೆ ಕೊಟ್ಟಿದ್ದ ಬಲಿ ಅವರ ಮಾತನ್ನ ಹಗುರವಾಗಿ ಪರಿಗಣಿಸಿದ. ಇದರಿಂದ ನೊಂದ ಶುಕ್ರಾಚಾರ್ಯರು ತಮ್ಮ ಯೋಗ ಬಲ ಪ್ರಯೋಗಿಸಿ ಸೂಕ್ಷ್ಮ ರೂಪದಿಂದ ಬಲಿಯ ಕಮಂಡಲದಿಂದ ದಾನೋದಕ ಬೀಳದಂತೆ ಅಡ್ಡಲಾಗಿ ಕೂತರು. ಇದನ್ನರಿತ ವಾಮನಾವತಾರಿ ವಿಷ್ಣು ನಿರ್ದಯನಾಗಿ ತನ್ನಲ್ಲಿದ್ದ ದರ್ಬೆಯಿಂದ ಆ "ಕಸ"ವನ್ನ ಚುಚ್ಚಿ ಸರಿಸಿದ! ಆಗ ಶುಕ್ರಾಚಾರ್ಯರ ಎಡಗಣ್ನು ಒಡೆದು ಹೋಯಿತು. ಕಣ್ಣು ಹೋದರೂ ಆಗುವ ಅನಾಹುತ ತಡೆಯಲಾರದೆ ಹೋದೆನಲ್ಲ ಎಂದು ಪರಿತಪಿಸಿದ ಶುಕ್ರಾಚಾರ್ಯರಿಗೆ ಅಂದಿನಿಂದ ದೇವತೆಗಳಿಂದ "ಒಕ್ಕಣ್ಣ ಶುಕ್ರಾಚಾರಿ" ಎನ್ನುವ ಅಡ್ಡ ಹೆಸರು ಸಿಕ್ಕಿತು. ಇಂದಿಗೂ ಯಾರನ್ನಾದರೂ ಮಳ್ಳೆಗಣ್ಣಿನ ಸಮಸ್ಯೆ ಇದ್ದಲ್ಲಿ ಗೇಲಿ ಮಾಡುವಾಗ ಈ ಉಪಮೆಯನ್ನ ಉಪಯೋಗಿಸುವ ಕುಹಕವನ್ನ ನಾವು ಗಮನಿಸಬಹುದು.


ಈಗ ಬಲಿಯನ್ನ ವಾಮನ ಬಲಿ ಹಾಕಿದ ಕಥೆಗೆ ವಾಪಾಸು ಬರೋಣ. ಒಮ್ಮೆ ದಾನೋದಕ ಗಿಂಡಿಯಿಂದ ಕೈಯ ಮೇಲೆ ಬಿದ್ದು ಕೊಟ್ಟ ಮಾತು ಅಧಿಕೃತವಾಗಿ ಪಕ್ಕಾ ಆದಾಗ ವಾಮನಮೂರ್ತಿ ತ್ರಿವಿಕ್ರಮನಾಗಿ ಅಸಾಧ್ಯ ಗಾತ್ರಕ್ಕೆ ಬೆಳೆದು ತನ್ನ ಪಾದದಲ್ಲಿ ಎರಡೆ ಎರಡು ಹೆಜ್ಜೆಗೆ ಭೂಮಿ ಮತ್ತು ಆಕಾಶವನ್ನ ಅಳೆದು ಬಿಟ್ಟನಂತೆ, ಕೊಟ್ಟ ಮಾತಿಗೆ ತಪ್ಪದ ಬಲಿ ಮೂರನೆ ಹೆಜ್ಜೆಗೆ ತನ್ನದಾಗಿ ಉಳಿದಿದ್ದ ತಲೆಯೊಂದನ್ನೆ ಬಾಗಿಸಿದಾಗ ಅದರ ಮೇಲೆ ಪಾದ ಊರಿದ ವಾಮನ ಬಲಿಯನ್ನ ಶಾಶ್ವತವಾಗಿ ಪಾತಾಳಕ್ಕೆ ತಳ್ಳಿದನಂತೆ. ಪಾತಾಳಕ್ಕೆ ಜಾರುತ್ತಾ ಬಲಿ ಉಸುರಿದ ಕೊನೆಯಾಸೆಯೂ ವರ್ಷಕ್ಕೊಂದಾವರ್ತಿ ತನ್ನ ಪ್ರೀತಿಯ ಪ್ರಜೆಗಳನ್ನ ಕಾಣಬೇಕು ಅನ್ನೋದು ಮಾತ್ರ. ಅವನ ನಿಸ್ಪ್ರಹ ಪ್ರಜಾ ಪ್ರೀತಿಗೆ ಮರುಳಾದ ವಿಷ್ಣು ಅದಕ್ಕೆ ಅನುಮತಿಸಿ ಜೊತೆಜೊತೆಗೆ ತಾನೆ ಸದಾ ಕಾಲಕ್ಕೂ ಅವನ ದ್ವಾರಪಾಲಕನಾಗುವ ಅಭಯ ನೀಡಿದನಂತೆ! ಅಂತೂ ತನ್ನ ಪ್ರಜೆಗಳಿಂದ ದೂರಾದ ಬಲಿ ಚಕ್ರವರ್ತಿ ಕೇರಳದಲ್ಲಿ ತನ್ನ ಮಲಯಾಳಿ ಪ್ರಜೆಗಳನ್ನ ಸೋಣ(ಶ್ರಾವಣ)ದ ಸಂಕ್ರಾಂತಿಯ ಹೊತ್ತಿಗೆ ಓಣಂ ನೆಪದಲ್ಲಿಯೂ, ತುಳುನಾಡಿನ ತುಳುವ ಪ್ರಜೆಗಳನ್ನ ಬೊಂತೆಲ್(ಕಾರ್ತಿಕ)ನ ತುಡರ್ ಪರ್ಬ ಅರ್ಥಾತ್ ದೀಪಾವಳಿಯಲ್ಲಿಯೂ ಬಂದು ಇಲ್ಲಿನ ಸಮೃದ್ಧಿಯನ್ನ ಕಂಡು ಕಣ್ತುಂಬಿಸಿಕೊಂಡು ತನ್ನ ಪ್ರಜೆಗಳು ಸುಖವಾಗಿದ್ದಾರೆ ಎಂದುಕೊಂಡು ಸಂತೃಪ್ತನಾಗಿ ಮತ್ತೆ ಮರಳಿ ಪಾತಾಳ ಸೇರಿಕೊಳ್ಳುತ್ತಾನಂತೆ.



ಹಾಗೆ ನೋಡಿದರೆ ಬಾಲ್ಯದಲ್ಲಿ ಮೇಲಿನ ಕಥೆ ಗೊತ್ತಿದ್ದರೂ ಅದನ್ನ ತರ್ಕಕ್ಕೆ ಒಡ್ದಿ ಎಂದೂ ನಾನು ಯೋಚಿಸಿದ್ದೆ ಇಲ್ಲ. ಈಗ ಈ ಪಾಡ್ದನವನ್ನ ಕನ್ನಡಕ್ಕೆ ಅನುವಾದಿಸುವಾಗ ಈ ಪಾಡ್ದನದ ಆಶಯ ಹಾಗೂ ಬಲಿಯ ನಿಸ್ಪ್ರಹತೆ ಅರಿವಾಗಿ ಖೇದವಾಯಿತು. ಪಾಪದ ಬಲಿ ಚಕ್ರವರ್ತಿ ಮಾಡಿದ ತಪ್ಪಾದರೂ ಏನು? ಅವನೇನು ಪ್ರಜಾ ಪೀಡಕನಾಗಿ "ಇಂದ್ರ" ಪದವಿಗೆ ಲಗ್ಗೆ ಹಾಕಲಿಲ್ಲ. ಪುರಾಣಗಳೆ ವಿಧಿಸಿದ್ದ ನಿಯಮವನ್ನ ಶಿಸ್ತಾಗಿ ಅನುಸರಿಸಿ ಅತ ಇಂದ್ರ ಪದವಿಗೆ ಏರಲಿದ್ದ ಹೊರತು ಸ್ವರ್ಗ ಲೋಕದ ಸೂಳೆಯರಾದ ರಂಭೆ. ಊರ್ವಶಿ, ತಿಲೋತ್ತಮೆ ಹಾಗೂ ಮೇನಕೆಯರ ಕ್ಯಾಬರೆ ನೋಡುತ್ತಾ, ಬೇರೆ ಮಾಡಲಿಕ್ಕಿನ್ನೇನೂ ಕೆಲಸವಿಲ್ಲದೆ ಸದಾ ಮದಿರೆ ಕುಡಿದು ಟೈಟಾಗಿ ಓಲಾಡುತ್ತಾ ಇನ್ಯಾರನ್ನೋ ಕುತಂತ್ರದಿಂದ ಕೆಳಗಿಳಿಸಿಯೆ ಮೆರೆದ ಇಂದ್ರ ಹಾಗೂ ಅವನ ಪಟಾಲಂನಂತಲ್ಲ ಬಲಿ ಚಕ್ರವರ್ತಿ. ಅಷ್ಟಾಗಿ ಪಕ್ಷಪಾತಿಯಾಗಿ ಆವನ ಕಥೆ ಮುಗಿಸಿದ ವಾಮನ ರೂಪಿ ವಿಷ್ಣು ಅಲ್ಲಿಗೆನೆ ತೃಪ್ತನಾಗದೆ ಕೇಳದಿದ್ದರೂ ಅವನ ದ್ವಾರಪಾಲಕನಾಗುವ ಒತ್ತಡದ ವರ ಬೇರೆ ಒತ್ತಾಯವಾಗಿಯೇ ಕರುಣಿಸಿದ! ಅಂದರೆ ಅವನ ಮುಂದಿನ ಎಲ್ಲಾ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟ. ಇನ್ನು ಅವನ ಕಡೆಯ ಆಸೆ ಈಡೇರಿಸಿದ ವಿಷ್ಣುವಿನ ಕಟ್ಟಾ ಅನುಯಾಯಿಗಳಾದ ಪಂಡಿತೋತ್ತಮರು ರಚಿಸಿದ ಬಲಿಯನ್ನ ಆವನ ಕೊನೆಯ ಆಸೆಯಂತೆ ಅವನದ್ದೆ ರಾಜ್ಯಕ್ಕೆ ಮರಳಿ ಆಹ್ವಾನಿಸುವ ಪಾಡ್ದನವಾದರೂ ಯಾವ ಧಾಟಿಯಲ್ಲಿದೆ? ಕುಶಾಲಿನ ಸಭ್ಯತೆ ಮೇರೆ ಮೀರಿದ ಅದು ಗೇಲಿಯ ಮಟ್ಟದಲ್ಲಿರುವುದು ಮಾತ್ರವಲ್ಲದೆ ಬಲಿ ಅತ್ತಲಾಗಿರಲಿ ಆತ್ಮಾಭಿಮಾನವಿರುವ ಆತನ ಯಾವೊಬ್ಬ ಭಿಕ್ಷುಕ ಪ್ರಜೆಯೂ ಅಂತಹ ಅದ್ವಾನದ ಆಹ್ವಾನವನ್ನ ಒಪ್ಪಿಕೊಂಡು ಬೇಕಿದ್ದರೆ ಹುಟ್ಟಿದ ಮನೆಯೆ ಅಗಿರಲಿ ಮರಳಿ ಎಂದಿಗೂ ಮತ್ತಲ್ಲಿಗೆ ಬರಲಾರ. ಇದೊಂತರ "ಕರೆದ ಹಾಗೂ ಇರಬೇಕು, ಅದರೆ ಆತ ಇತ್ತ ತಪ್ಪಿಯೂ ತಲೆ ಹಾಕಿ ಮಲಗಬಾರದು!" ಅನ್ನುವ ಕುತಂತ್ರ.


ಅದೇನೆ ಇದ್ದರೂ ಅಂದಿನ ದೀಪಾವಳಿಯ ಹಿತದ ನೆನಪಿನಲ್ಲಿಯೇ ಕಳೆದ ಎಂಟು ವರ್ಷಗಳಿಂದ ಕಾರ್ತಿಕ ಮಾಸದ ಅಷ್ಟೂ ದಿನ ಮನೆಯಂಗಳದಲ್ಲಿ ತಪ್ಪದೆ ಮಣ್ಣಿನ ಹಣತೆ ದೀಪ ಉರಿಸುತ್ತೇನೆ. ಅಮ್ಮನ ಅಮ್ಮ ಅವ್ವ ಹೇಳಿದ ನಮ್ಮ ಪ್ರೀತಿಯ ಕಥಾ ನಾಯಕ ಬಲಿಯನ್ನ ನಾನಂತೂ ಅಷ್ಟೆ ನಿರ್ಮಲ ಮನಸಿನಿಂದ ನನ್ನ ಮನೆಗೆ ಪ್ರತಿ ವರ್ಷ ಆಹ್ವಾನಿಸುತ್ತಲೇ ಇದ್ದೇನೆ. ಆವನಿಗೆ ನನ್ನಂತಹ ಅಭಿಮಾನಿಗಳ ಸಂಖ್ಯೆ ವಿಪರೀತವಾಗಿರಲಿಕ್ಕ್ರೆ ಸಾಕು!  ಹೀಗಾಗಿ ನನ್ನ #೪೪, "ಅನ್ನಪೂರ್ಣ" ೫ನೆ ಮುಖ್ಯರಸ್ತೆಯ ವಿಳಾಸವನ್ನ ಹುಡುಕಿಕೊಂಡು ಬರಲಿಕ್ಕೆ ಆತನಿಗೆ ಇನ್ನೂ ಪುರುಸೊತ್ತಾಗಿರಲಿಕ್ಕಿಲ್ಲ. ಆದರೆ ನನ್ನ ತಾಳ್ಮೆಯ ಸ್ಟಾಕು ಮಾತ್ರ ಇನ್ನೂ ಮುಗಿದಿಲ್ಲ. ನಾನಂತೂ ನಿರಂತರ ಆಶಾವಾದಿ. ಒಂದಲ್ಲಾ ಒಂದು ದಿನ ಅವ್ವನ ಕಣಿಯಂತೆ ನಮ್ಮ ಅಂಗಳದಲ್ಲಿ ದೀಪದ ಗುರುತು ಕಂಡು ಅವ ಬಂದೇ ಬಂದಾನು, ಹಾಗೆ ಬಂದಾಗ ಕತ್ತಲಲ್ಲಿ ಅವನು ಹಾದಿ ತಪ್ಪಿ ಎಡವ ಬಾರದಲ್ಲ ಅದಕ್ಕೆ ನಿರೀಕ್ಷೆಯ ಹಣತೆಯನ್ನ ಹಚ್ಚಿ ಕಾರ್ತಿಕದುದ್ದ ಪ್ರತಿ ದಿವಸ ಸಂಜೆಯೂ ಇಡುತ್ತಲೇ ಇರುತ್ತೇನೆ ನನ್ನ ಕೈಲಾಗುವವರೆಗೂ. ತುಳಸಿ ಪೂಜೆಯ ಸವಿಯೂ ಮನಸಿನಾಳದಲ್ಲಿದೆ ಅದನ್ನ ಮುಂದೊಮ್ಮೆ ಬರೆಯಲಿಕ್ಕೆನೇ ಬೇಕು. ಸದ್ಯ ಇಷ್ಟು ಕೊರೆತ ಓದಿದವರಿಗೆ ಧಾರಾಳ ಸಾಕು!

No comments: