06 November 2013

ಕನ್ನಡದ ಸಿರಿದೇವಿ ಬರದೇವಿಯಾಗದಿರಲಿ.......








ಹರಿದು ಹಂಚಿ ಹೋಗಿದ್ದ ಕನ್ನಡಿಗರು ಕರುನಾಡು ಎನ್ನುವ ದೊಡ್ಡಾಲ ಮರದ ಬಿಳಲುಗಳಾಗಿ ಮತ್ತೆ ಜೋತು ಬೀಳುವ ಹೊತ್ತಿಗೆ ವಾಸ್ತವದಲ್ಲಿ ಆದದ್ದು "ಕನ್ನಡ ಮಾತನಾಡುವ ಪ್ರದೇಶ"ಗಳ ಏಕೀಕರಣವ? ಇಲ್ಲಾ ಹಳೆ ಮೈಸೂರಿನ ಭಾಗವಾದ ಇನ್ನುಳಿದ ಎಲ್ಲಾ ಕನ್ನಡಿಗ ನೆಲಗಳ ಮೈಸೂರು ಸಂಸ್ಥಾನದ ಜೊತೆಗೆ ವಿಲೀನಿಕರಣವ? ಅನ್ನುವ ಗೊಂದಲ ಮಾತ್ರ ಇವತ್ತಿಗೂ ಜಾರಿಯಲ್ಲಿದೆ. ಅಂದಿನ ಮೈಸೂರು ಸಂಸ್ಥಾನದ ರಾಜಕಾರಣಿಗಳ ಸೊಕ್ಕಿನ ಸ್ವಾರ್ಥಿ ನಡವಳಿಕೆಗಳು ಈ ಬಗೆಯ ಗೊಂದಲ ಮೂಡಲಿಕ್ಕೆ ನೀರು - ಗೊಬ್ಬರ ಎರೆಯುವಂತಿದ್ದವು. ವಾಸ್ತವವಾಗಿ ಕರ್ನಾಟಕ ಏಕೀಕರಣದ ಬೀಜಮಂತ್ರ ಮೊದಲಿಗೆ ಹೊಮ್ಮಿ ಹೊರಟಿದ್ದೆ ಬಳ್ಳಾರಿ ಹಾಗೂ ಧಾರವಾಡಗಳಲ್ಲಿ. ಆಲೂರು ವೆಂಕಟರಾಯರ ಈ ಕನವರಿಕೆಗೆ ಅಂದಿನ ಯುವ ಹೋರಾಟಗಾರರಾದ ಪಾಟೀಲ ಪುಟ್ಟಪ್ಪ, ಡಿ ಎಸ್ ಕರ್ಕಿ ಮುಂತಾದವರ ಹಿಮ್ಮೇಳವೂ ಸಿಕ್ಕಿತು.


ಅದರೆ ಏಕೀಕರಣದ ಕನಸು ನನಸಾದ ಮೇಲೆ ಅದದ್ದಾದರೂ ಏನು? ಮೈಸೂರು ಸಂಸ್ಥಾನದ ರಾಜಧಾನಿ ಬೆಂಗಳೂರನ್ನ ವಾಸ್ತವ ಪ್ರಜ್ಞೆಯಿಲ್ಲದೆ ಹೊಸ ರಾಜ್ಯದ ರಾಜಧಾನಿಯನ್ನಾಗಿ ಅಯ್ಕೆ ಮಡಿಕೊಳ್ಳಲಾಯಿತು, ಬೊಂಬಾಯಿಯಿಂದ ಮರಳಿ ಸಿಕ್ಕ ಪ್ರಾಂತ್ಯಗಳು ಅನಗತ್ಯವಾಗಿ ಕಳೆದುಕೊಂಡಿದ್ದ ಅನೇಕ ಅಚ್ಚ ಕನ್ನಡದ ಪ್ರದೇಶಗಳನ್ನ ನ್ಯಾಯವಾದ ಪೂರ್ಣ ಹಕ್ಕು ಸಾಧಿಸದೆ ಉಢಾಫೆಯಿಂದ ಹೊಸತಾಗಿ ರೂಪಿತವಾದ ಬೊಂಬಾಯಿ ಪ್ರೆಸಿಡೆನ್ಸಿಗೆ ಬಿಟ್ಟು ಕೊಡಲಾಯಿತು, ಮದರಾಸು ಪ್ರಾಂತ್ಯದಿಂದ ಮರಳಿ ಸಿಕ್ಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಸರಗೋಡು ತಾಲೂಕನ್ನ ನುಂಗಿ ಹಾಕುವ ಮಲಯಾಳಿ ಪ್ರಭಾವಿಗಳ ಹುನ್ನಾರದ ಅರಿವಿದ್ದೂ ಅಲ್ಲಿನ ಸ್ಥಳಿಯ ಹೋರಾಟಕ್ಕೆ ಬಲ ತುಂಬದೆ ಆಮಾಯಕರಂತೆ ಕಣ್ಣುಮುಚ್ಚಿ ಕೂತುಕೊಳ್ಳಲಾಯಿತು,


ಬಳ್ಳಾರಿಯ ಮೇಲೆ ಆಂಧ್ರದ ಹಕ್ಕು ಸಾಧನೆಯನ್ನ ಆಲೂರು ವೆಂಕಟರಾಯರ, ಕೋ ಚೆನ್ನಬಸಪ್ಪನವರ ಸಹಿತ ಎಲ್ಲಾ ಹೋರಾಟಗಾರರು ಪ್ರಾಬಲವಾಗಿ ವಿರೋಧಿಸಿದಾಗ ಆಲೂರು ಮತ್ತು ರಾಯದುರ್ಗ ತಾಲೂಕುಗಳನ್ನ ಮಡ್ದರಂತೆ ತೆಲುಗರಿಗೆ ದಾನ ಮಾಡಿ ಬಳ್ಳಾರಿಯನ್ನ ಉಳಿಸಿಕೊಳ್ಳುವ ಖಾಜಿ ನ್ಯಾಯ ಮಾಡಲಾಯಿತು, ಅದು ಹೇಗೆ ನೋಡಿದರೂ ಮಡಕಸಿರ ನಮ್ಮದೆ ಆಗಬೇಕಿತ್ತು. ಆದರೆ ಅದನ್ನ ಸುಲಭವಾಗಿ ಆಂಧ್ರದ ತೆಕ್ಕೆಗೆ ಕೊಟ್ಟು ಪಾವಗಡವನ್ನ ಆತಂತ್ರ ಮಾಡಲಾಯಿತು, ಹೊಸೂರನ್ನ ತಮಿಳು ರಾಜಕಾರಣಿಗಳನ್ನ ಓಲೈಸಲು ಅನ್ಯಾಯವಾಗಿ ತಮಿಳರ ಮಡಿಲು ತುಂಬಿದರೆ, ಊಟಿ, ನೀಲಗಿರಿಯ ಬಡಗರನ್ನ ಶಾಸ್ತ್ರಕ್ಕೂ ಅವರನ್ನೊಂದು ಮಾತನ್ನೂ ಕೇಳದೆ ತಮಿಳರ ಕಪಿಮುಷ್ಟಿಗೆ ಸಿಲುಕಿಸಲಾಯಿತು. ಒಟ್ಟಿನಲ್ಲಿ ತಮ್ಮ ಹೈಕಮಾಂದ್ ಪುಂಗಿಗೆ ತಲೆಯಾಡಿಸುವ ನಿಷ್ಠೆಯ ಹಲ್ಲಿಲ್ಲದ ಹಾವುಗಳಂತೆ ತಮ್ಮೆಲ್ಲ ಹಕ್ಕನ್ನ ಇನ್ಯಾರ್ಯಾರಿಗೋ ಬಿಟ್ಟು ಕೊಟ್ಟು ಹಳೆ ಮೈಸೂರಿನ ರಾಜಕಾರಣಿಗಳು ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲಿ ಮಗ್ನರಾದದ್ದು ಮಾತ್ರ ಅಕ್ಷಮ್ಯ.


ನಾಡಿನ ಏಕೀಕರಣದ ಕುರಿತು ಹಳೆ ಮೈಸೂರಿನ ರಾಜಕಾರಣಿಗಳ ನಡುವಳಿಕೆ ಅದೇನೆ ಇರಲಿ ಇಲ್ಲಿನ ಪ್ರಜ್ಞಾವಂತರು ಹಾಗೂ ಚಿಂತಕರು ಈ ಕುರಿತು ವಿಪರೀತ ಉತ್ಸಾಹದಲ್ಲಿದ್ದರು. ಕನ್ನಡದ ಎರಡನೆ ರಾಷ್ಟ್ರಕವಿ ಕುವೆಂಪು ಅವರಂತೂ ನಾಡಿನ ಮುಂದಿನ ಹಿತದೃಷ್ಟಿಯನ್ನ ಗಮನದಲ್ಲಿರಿಸಿಕೊಂಡು ನಾಡಿನ ನಡು ಮಧ್ಯವಿರುವ ದಾವಣಗೆರೆಯನ್ನ ನೂತನ ರಾಜ್ಯದ ರಾಜಧಾನಿಯನ್ನಾಗಿಸಿಕೊಳ್ಳುವ ವಿವೇಕದ ಸಲಹೆಯನ್ನ ನೀಡಿದ್ದರು. ಆದರೆ ಸ್ಥಳಿಯ ರಾಜಕಾರಣಿಗಳು ಅದಕ್ಕೆ ಗಮನವನ್ನೆ ಕೊಡಲಿಲ್ಲ. ಸಾಹುಕಾರ್ ಚನ್ನಯ್ಯ, ಸಿದ್ಧವೀರಪ್ಪ, ದಾಸಪ್ಪ, ಸಿದ್ಧಯ್ಯ, ಎಸ್ ನಿಜಲಿಂಗಪ್ಪ, ಕಡಿದಾಳು ಮಂಜಪ್ಪ, ಕೊಪ್ಪದ ದ್ಯಾವೇಗೌಡ್ರು ಹೀಗೆ ಯಾರೊಬ್ಬರೂ ಇದನ್ನ ಪರಿಗಣಿಸದೆ ಒಳಗೊಳಗೆ ಬೆಂಗಳೂರನ್ನೆ ರಾಜಧಾನಿಯಾಗಿ ಅಭಿವೃದ್ಧಿ ಪಡಿಸುವಂತೆ ತಮ್ಮ ನಾಯಕ ಕೆಂಗಲ್ ಹನುಮಂತಯ್ಯನವರನ್ನ ಬೆಂಬಲಿಸಿದರು. ಅಲ್ಲಿಯವರೆಗೂ ರಾಜ್ಯ ಸಚಿವಾಲಯ ಇದ್ದುದ್ದು, ಮೈಸೂರು ಜವಾಬ್ದಾರಿ ಸರಕಾರದ ಶಾಸನ ಸಭೆ ಹಾಗೂ ಪ್ರಜಾ ಪ್ರತಿನಿಧಿ ಸಭೆಗಳು ನೆರೆಯುತ್ತಿದ್ದುದು ಇಂದು ರಾಜ್ಯ ಉಚ್ಛ ನ್ಯಾಯಾಲಯವಾಗಿರುವ ಕೆಂಪು ಬಣ್ಣದ ಅಠಾರ ಕಛೇರಿಯಲ್ಲಿ. ಸಚಿವಾಲಯದ ಜೊತೆ ಜೊತೆಗೆ ರಾಜ್ಯ ಆಡಳಿತಕ್ಕೆ ಸಂಬಂಧಿಸಿದ ಹದಿನೆಂಟು ವಿವಿಧ ಬಗೆಯ ಕಛೇರಿಗಳು ಅಲ್ಲಿಂದಲೆ ಕಾರ್ಯ ನಿರ್ವಹಿಸುತ್ತಿದ್ದುದ್ದರಿಂದ ಅದನ್ನ "ಅಠಾರ ಕಛೇರಿ" ಎಂದು ಕರೆಯಲಾಗುತ್ತಿತ್ತು. ಮೈಸೂರು ಸಾಂಸ್ಥಾನದ ಆಡಳಿತವರ್ಗಕ್ಕೆ ಅದು ಸಾಕಾಗುತ್ತಿದ್ದರೂ ಮುಂದೆ ಏಕೀಕರಣವನ್ನ ಗಮನದಲ್ಲಿರಿಸಿಕೊಂಡ ಸಂಸ್ಥಾನದ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು ಕಬ್ಬನ್ ಉದ್ಯಾನವನದ ಇನ್ನೊಂದು ಪಾರ್ಶ್ವದಲ್ಲಿ ಅಠಾರ ಕಛೇರಿಯ ಎದುರಿಗೆ ಇಂದಿನ ವಿಧಾನಸೌಧವನ್ನ ಕಟ್ಟಿಸಿದರು. ಅನಂತರ ಅಠಾರ ಕಛೇರಿಯನ್ನ ನ್ಯಾಯಾಂಗಕ್ಕೆ ಹಸ್ತಾಂತರಿಸಲಾಯಿತು. ಈ ಎರಡು ಕಟ್ಟಡಗಳ ನಡುವಿನ ಜಾಗದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥದ ಮಾದರಿಯಲ್ಲಿ ಡಾ ಆಂಬೇಡ್ಕರ್ ಬೀದಿಯನ್ನ ವಿನ್ಯಾಸಗೊಳಿಸಲಾಯಿತು.


೭೨೫ ಕಿಲೋಮೀಟರ್ ಅಂತರ ಬೆಂಗಳೂರಿನಿಂದ ಬೀದರಿಗಿದ್ದರೆ, ಅದೇ ಬೀದರಿನಿಂದ ದಾವಣಗೆರೆಗೆ ಕೇವಲ ೪೨೦ ಕಿಲೋಮೀಟರ್ ಅಂತರವಿದೆ. ೫೯೦ ಕಿಲೋಮೀಟರ್ ಅಂತರ ದಾವಣಗೆರೆಯಿಂದ ಬೆಳಗಾವಿಗಿದ್ದರೆ ಅದೆ ಬೆಳಗಾವಿಯಿಂದ ಬೆಂಗಳೂರನ್ನ ಮುಟ್ಟಲಿಕ್ಕೆ ೫೦೯ ಕಿಲೋಮೀಟರ್ ಮಾರ್ಗ ಕ್ರಮಿಸಬೇಕು. ೨೧೩ ಕಿಲೋಮೀಟರ್ ದೂರದಲ್ಲಿ ದಾವಣಗೆರೆ ಮಂಗಳೂರಿನಿಂದ ಇದ್ದರೆ ಅದೆ ಬೆಂಗಳೂರಿಗೆ ಮಂಗಳೂರು ೩೭೦ ಕಿಲೋಮೀಟರ್ ದೂರದಲ್ಲಿದೆ. ಬಿಜಾಪುರ ಬೆಂಗಳೂರಿನಿಂದ ೫೩೧ ಕಿಲೋಮೀಟರ್ ಅಂತರದಲ್ಲಿದ್ದರೆ ಅದೆ ದಾವಣಗೆರೆ ಬಿಜಾಪುರಕ್ಕೆ ಕೇವಲ ೨೭೧ ಕಿಲೋಮೀಟರ್'ಗಳ ಅಂತರದಲ್ಲಿದೆ. ಮಡಿಕೇರಿ ಬೆಂಗಳೂರಿಗೆ ೨೫೮ ಕಿಲೋಮೀಟರ್ ದೂರದಲ್ಲಿದ್ದರೆ ದಾವಣಗೆರೆ ೩೧೮ ಕಿಲೋಮೀಟರ್ ದೂರದಲ್ಲಿದೆ. ಕಾರವಾರ ಬೆಂಗಳೂರಿಗೆ ೫೩೭ ಕಿಲೊಮೀಟರ್ ದೂರದಲ್ಲಿದ್ದರೆ ಅದೆ ದಾವಣಗೆರೆ ಕೇವಲ ೧೯೬ ಕಿಲೋಮೀಟರ್ ದೂರದಲ್ಲಿದೆ. ಮೈಸೂರು ಬೆಂಗಳೂರಿನಿಂದ ೧೪೦ ಕಿಲೋಮೀಟರ್ ದೂರದಲ್ಲಿದ್ದಿದ್ದರೆ ದಾವಣಗೆರೆ ೩೧೯ ಕಿಲೋಮೀಟರ್ ದೂರದಲ್ಲಿದೆ ಆಷ್ಟೆ.




ಅದು ಹೇಗೆ ನೋಡಿದರೂ ದಾವಣಗೆರೆ ಬೆಂಗಳೂರಿಗಿಂತ ಪ್ರಸ್ತಾವಿತ ಏಕೀಕೃತ ಹೊಸ ರಾಜ್ಯಕ್ಕೆ ದಾವಣಗೆರೆ ಎಲ್ಲಾ ದೃಷ್ಟಿಯಿಂದಲೂ ಸೂಕ್ತವಾಗಿತ್ತು. ಸದ್ಯದ ರಾಜಧಾನಿ ಬೆಂಗಳೂರಿಗಿಂತ ದಾವಣಗೆರೆ ಹಳೆ ಮೈಸೂರು ಭಾಗದ ದಕ್ಷಿಣದ ಜಿಲ್ಲೆಗಳಿಗೆ ಹೆಚ್ಚೆಂದರೆ ಒಂದು ನೂರು ಕಿಲೋಮೀಟರ್'ಗಳಷ್ಟು ಬಳಸಾಗುತ್ತಿತ್ತೇ ಹೊರತು ಪ್ರಸ್ತಾವಿತ ಹೊಸ ರಾಜ್ಯದ ಉಳಿದೆಲ್ಲಾ ಭಾಗಗಳಿಗೆ ದಾವಣಗೆರೆ ಕೇಂದ್ರ ಸ್ಥಾನದಲ್ಲಿರುವುದರಿಂದ ಸಂಪರ್ಕದ ದೃಷ್ಟಿಯಿಂದ ಶ್ರೀಸಾಮನ್ಯನಿಗೆ ರಾಜ್ಯದ ರಾಜಧಾನಿ ಸುಲಭ ಲಭ್ಯವಾಗುತ್ತಿತ್ತು. ಆದರೆ ಕುವೆಂಪು ಹೇಳಿದ ವಿವೇಕಕ್ಕೆ ಈ ಅತಿ ಬುದ್ಧಿವಂತ ಸ್ವಾರ್ಥಿಗಳೆಲ್ಲ ಕಿವುಡಾಗಿದ್ದರು. ಜಾತಿ ಲೆಕ್ಖಾಚಾರದಲ್ಲಿ ಏಕೀಕೃತ ಕರ್ನಾಟಕದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಸಹಜವಾಗಿ ಒಕ್ಕಲಿಗ ಮತದಾರರಿಗಿಂತ ಹೆಚ್ಚಾಗುತ್ತಿದ್ದು ಎಲ್ಲಿ ತಮ್ಮ ಏಕಸಾಮ್ಯಕ್ಕೆ ಧಕ್ಕೆ ಒದಗುತ್ತದೋ ಎನ್ನುವ ಆತಂಕದಲ್ಲಿದ್ದ ಅವರೆಲ್ಲಾ ಒಂದೊಮ್ಮೆ ದಾವಣಗೆರೆ ರಾಜಧಾನಿ ಆದಲ್ಲಿ ಸಹಜವಾಗಿ ಲಿಂಗಾಯತರ ಕೈಮೇಲಾಗುತ್ತದೆ ಎನ್ನುವ ಸಲ್ಲದ ಆತಂಕಕ್ಕೆ ಒಳಗಾಗಿ ಈ ಸಮಯೋಚಿತ ಸಲಹೆಯನ್ನ ತಿರಸ್ಕರಿಸಿದ ಫಲವನ್ನ, ಇಂದು ನಾವು ಬೆಂಗಳೂರಿಗರು ಓತಪ್ರೋತವಾಗಿ ನಗರ ಬೆಳೆಯುತ್ತಿರುವ ಪರಿಯನ್ನ ಕಂಡು ಆಸಹಾಯಕವಾಗಿ ಕೂತು ಎರಡೂ ಕೈಗಳಿಂದ ಅದರ ಫಲವನ್ನ ಉಣ್ಣುತ್ತಿದ್ದೇವೆ.


ಈ ಸ್ವಾರ್ಥಿಗಳ ಹುನ್ನಾರವನ್ನ ಖಂಡಿಸಿ ಕುವೆಂಪು "ಅಖಂಡ ಕಾರ್ನಾಟಕಮಲ್ತೋ...." ಎನ್ನುವ ಕವನ ಬರೆದು ಅಂದಿನ ಮಂತ್ರಿ ಮಂಡಲದಿಂದ ಕಾನೂನು ಕ್ರಮ ಎದುರಿಸುವ ಬೆದರಿಕೆಗೆ ಗುರಿಯಾಗಿದ್ದರೆ. ತಮ್ಮ ಮನೆ ಮನಗಳನ್ನ ಸರಾಸಗಟಾಗಿ ಮಲಯಾಳಿಗಳಿಗೆ ಅಡವಿಡುವ ರಾಜಕಾರಣಿಗಳ ಹುನ್ನಾರದ ಸುಳಿವರಿತ ಕವಿ ಕಯ್ಯಾರ ಕಿಂಙ್ಞಣ್ಣ ರೈಗಳು ಕಾಸರಗೋಡಿನ ದುಸ್ಥಿಗೆ ಮರುಗಿ "ಬೆಂಕಿ ಬಿದ್ದಿದೆ ಮನೆಗೆ ಓಡಿ ಬನ್ನಿ" ಎನ್ನುವ ಕವನ ಬರೆದು ಅರಣ್ಯ ರೋಧನಗೈದರು. ಇವೆಲ್ಲಕ್ಕೂ ನಮ್ಮ ಹಳೆ ಮೈಸೂರಿನ ಪ್ರಭಾವಿ ಮುಖಂಡರು ತಮ್ಮ ಪಕ್ಷಬೇಧ ಮರೆತು ಕಿವುಡು ನಟಿಸಿದರೆ ಸಾಹಿತ್ಯ ಹಾಗೂ ಆಗಷ್ಟೆ ನೆಲೆ ಕಂಡುಕೊಳ್ಳುತ್ತಿದ್ದ ಕನ್ನಡ ಸಾಂಸ್ಕೃತಿಕ ಕ್ಷೇತ್ರಗಳು ಮಾತ್ರ ತಮ್ಮ ಬೆಂಬಲವನ್ನ ಸೂಚಿಸಿದವು. ಆದರೆ ಇದರಿಂದ ನಾಡಿನ ಉದ್ಧಾರಕ್ಕೆ ಅಷ್ಟೇನೂ ಉಪಯೋಗವಾಗಲಿಲ್ಲ. ಏಕೆಂದರೆ ನಾಡಿನ ಪುನರ್ವಿಂಗಡನೆ ಒಂದು ರಾಜಕೀಯ ಪ್ರಕ್ರಿಯೆ ಆಗಿದ್ದು ಸಾಹಿತ್ಯ ಹಾಗೂ ಸಂಸ್ಕೃತಿಯ ಪ್ರಭಾವ ಅಲ್ಲಿ ಗೌಣ.



ಫಜಲ್ ಆಲಿ ಆಯೋಗ ಹಾಗೂ ಮಹಾಜನ್ ಆಯೋಗಗಳ ಶಿಫಾರಸ್ಸಿನ ಹೊರತಾಗಿಯೂ ನೆಹರೂ ಛೇಲ ಪಣಿಕ್ಕಾರ್ ತನ್ನ ಪ್ರಭಾವ ಬಳಸಿ ಚಂದ್ರಗಿರಿ ಹೊಳೆಯಿಂದ ಉತ್ತರದ ಭಾಗದ ಕಾಸರಗೋಡು ತಾಲೂಕನ್ನ ಕರ್ನಾಟಕಕ್ಕೂ, ಅದರ ದಕ್ಷಿಣ ಭಾಗದ ಮೂರನೆ ಒಂದು ಭಾಗ ತಾಲೂಕನ್ನ ಕೇರಳಕ್ಕೂ ಹಂಚುವುದು ಎಂಬ ರಾಜಿ ಸೂತ್ರ ಆಗಿದ್ದ ಮೇಲೂ ಏಕಪಕ್ಷೀಯವಾಗಿ ಕಾಸರಗೋಡನ್ನ ಕೇರಳದ ಎಲ್ಲೆಯೊಳಗೆ ಸೇರಿಸುವ ಧ್ರಾಷ್ಟ್ಯ ಮೆರೆದು ಬಿಟ್ಟ. ಮಡಕಸಿರದಿಂದ ಸುತ್ತುವರೆದಿರುವ ಪಾವಗಡ ಮಡಕಸಿರ ಹಾದಿಯ ಹೊರತು ಕರುನಾಡಿನ ಜೊತೆಗೆ ಭೂಸಂಪರ್ಕ ಕಳೆದುಕೊಂಡು ದ್ವೀಪವಾಗುತ್ತಿತ್ತು. ಮಡಕಸಿರವೂ ಕನ್ನಡ ಬಹುಸಂಖ್ಯಾತರ ವಲಯವೆ ಆಗಿದ್ದು ಅದನ್ನ ಪಕ್ಕದ ಆಂಧ್ರರ ಪಾಲು ಮಾಡುವ ಅಗತ್ಯ ಇರಲೆ ಇಲ್ಲ. ಇಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಮೂಲಕ ಮಾತ್ರ ರಾಜ್ಯದ ಭೂಭಾಗದೊಂದಿಗೆ ನೂಲಿನಂತೆ ಬೆಸೆದುಕೊಂಡಿರುವ ಪಾವಗಡ ಮೊನ್ನಿನ ಅಖಂಡಾಂಧ್ರ ಪರ ಪ್ರತಿಭಟನೆಯ ಹೊತ್ತಿನಲ್ಲಿ ಅನುಭವಿಸಿದ ಕಷ್ಟ ನಷ್ಟಗಳಿಗೆ ಅಂದು ರಾಜ್ಯವನ್ನ ಬೇಕಾ ಬಿಟ್ಟಿ ರೂಪಿಸಿದ ದೂರದೃಷ್ಟಿಯಿದ್ದಿರದ ಸ್ವಾರ್ಥ ರಾಜಕಾರಣಿಗಳೆ ನೇರ ಹೊಣೆ.


ಇನ್ನು ಬೆಳಗಾವಿ ಸಹಿತ ಉತ್ತರಕನ್ನಡ ಜಿಲ್ಲೆಯಾದ್ಯಂತ ತಮ್ಮ ಹಕ್ಕು ಸಾಧಿಸುತ್ತಿದ್ದ ರಾಜ್ಯ ಪುನರ್ವಿಂಗಡನೆಯಿಂದ ಅತೃಪ್ತರಾದ ಮಹಾರಾಷ್ಟ್ರಿಗರ ಬಾಯಿ ಮುಚ್ಚಿಸಲು ಜತ್ತ, ಅಕ್ಕಲಕೋಟೆ, ಸೊಲ್ಲಾಪುರ, ಡಂಕಣಿಕೋಟೆ ಕೊಲ್ಲಾಪುರವನ್ನ ಫಜಲ್ ಅಲಿ ಆಯೋಗದ ಮೂಲಕ ಮಹಾರಾಷ್ಟ್ರಕ್ಕೆ ಬಿಟ್ಟುಕೊಟ್ಟಿದ್ದರು. ಐತಿಹಾಸಿಕವಾಗಿ ನೋಡುವುದಾದರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವುದು ಆತ್ತಲಾಗಿರಲಿ ಕೊಂಕಣ, ಮರಾಠವಾಡ ಹಾಗೂ ವಿದರ್ಭಸಹಿತ ಇಡಿ ಮಹಾರಾಷ್ಟ್ರವೆ ಕರ್ನಾಟಕಕ್ಕೆ ಸೇರಬೇಕು! ಆದರೂ ಅವರ ವರಾತ ನಿಲ್ಲದಿದ್ದಾಗ ಅವರದ್ದೆ ಸಲಹೆಯ ಮೇರೆಗೆ ಮರಾಠಿ ಮಾತೃಭಾಷೆಯ ನ್ಯಾಯಮೂರ್ತಿ ಮಹಾಜನ್ ಆಯೋಗವನ್ನ ಇದರ ಪುನರ್ ಪರಿಶೀಲನೆಗೆ ಒಪ್ಪಿಸಲಾಯಿತು. ಅದೇನೆ ಫಲಿತಾಂಶ ಬಂದರೂ ಮಹಾಜನ್ ಆಯೋಗದ ನಿರ್ಣಯವನ್ನ ಒಪ್ಪುವುದಾಗಿ ಪೂರ್ವ ಶರತ್ತಿದ್ದು ಅದಕ್ಕೆ ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರ ಮೂರೂ ವಿಧಾನ ಸಭೆಗಳು ಒಪ್ಪಿದ್ದವು.


ಆದರೆ ಸುದೀರ್ಘ ಪ್ರವಾಸದ ನಂತರ ತಮ್ಮ ಅಂತಿಮ ವರದಿಯಲ್ಲಿ ನ್ಯಾಯಮೂರ್ತಿ ಮಹಾಜನರು ಕರ್ನಾಟಕಕ್ಕೆ ಕೊಡಲಾಗಿದ್ದ ನಿಪ್ಪಾಣಿ ಹಾಗೂ ರಾಮದುರ್ಗ ತಾಲೂಕುಗಳನ್ನ ಸಂಪೂರ್ಣವಾಗಿ ಹಾಗೂ ಬೆಳಗಾವಿ ತಾಲೂಕಿನ ೩೮ ಗ್ರಾಮಗಳನ್ನ ಮಾತ್ರ ಆಂಶಿಕವಾಗಿಯೂ ಮಹಾರಾಷ್ಟ್ರಕ್ಕೆ ಕೊಟ್ಟು; ಕೊಲ್ಲಾಪುರ, ದಕ್ಷಿಣ ಸೊಲ್ಲಾಪುರ, ಜತ್ತ, ಡಂಕಣಿಕೋಟೆ, ಅಕ್ಕಲಕೋಟೆ, ಬೆಳಗಾವಿ ನಗರ ಹಾಗೂ ಸಂಪೂರ್ಣ ಉತ್ತರ ಕನ್ನಡ ಜಿಲ್ಲೆ  ನಿರ್ವಿವಾದವಾಗಿ ಕರ್ನಾಟಕಕ್ಕೆ ಸೇರಬೇಕು ಅಂದಾಗ ಮಾತ್ರ ಪರಿಸ್ಥಿತಿ ವಿಲೋಮವಾಯಿತು! ಯಾವುದೇ ಕಾರಣಕ್ಕೂ ಈ ವಾಸ್ತವಾಂಶ ಒಳಗೊಂಡಿದ್ದ ವರದಿಯನ್ನ ಒಪ್ಪಲಿಕ್ಕೆ ಮಹಾರಾಷ್ಟ್ರ ತಯಾರಿರಲಿಲ್ಲ! ಏಕಾಪಕ್ಷೀಯವಾಗಿ ಪೂರ್ವ ಷರತ್ತನ್ನ ಮುರಿದು ಮತ್ತೆ ತನ್ನ ಹಳೆಯ ಮೊಂಡುವಾದಕ್ಕೆ ಅದು ಮರಳಿದೆ. ಕರ್ನಾಟಕ ವಿಧಾನಸಭೆ ಮಾತ್ರ ಇದನ್ನ ಒಪ್ಪಿದೆ. ಇದೆ ವರದಿಯ ಪ್ರಕಾರ ಚಂದ್ರಗಿರಿ ಹೊಳೆಯ ಉತ್ತರ ಭಾಗದ ಮೂರನೆ ಎರಡು ಭಾಗ ವಿಸ್ತೀರ್ಣದ ಕಾಸರಗೋಡು ಸಹ ಕರ್ನಾಟಕದ ಆಸ್ತಿ. ಆದರೆ ಪೂರ್ತಿ ವರದಿ ಜಾರಿಯಾಗದೆ ಈ ಒಂದು ಅಂಶವನ್ನ ಜಾರಿಗೊಳಿಸೋದು ಅಸಾಧ್ಯವೆ ಅಗುಳಿದಿದೆ. ಈ ನೆಪವನ್ನ ಬಳಸಿಕೊಂಡ ಕೇರಳ ಸರಕಾರ ಅಲ್ಲಿ ಮಲಯಾಳಿ ಪಾರ್ಥೇನಿಯಂ ಹಬ್ಬಿಸಿ ಕನ್ನಡದ ಕಳೆ ನಿರ್ಮೂಲನೆಗೆ ಆಡಳಿತಾತ್ಮಕವಾಗಿಯೆ ನೀರು - ಗೊಬ್ಬರ ಸುರಿಯುತ್ತಿದ್ದಾರೆ. ಒಟ್ಟಿನಲ್ಲಿ ಬಳುವಳಿಯಾಗಿ ಸಿಕ್ಕಿದ ನೆಲಗಳ ಹಿತಾಸಕ್ತಿಗಳನ್ನ ಕಾಯ್ದುಕೊಳ್ಳುವುದರಲ್ಲಿ ಹಳೆ ಮೈಸೂರಿನ ರಾಜಕಾರಣಿಗಳು ಗಂಭೀರ ನಿಲುವನ್ನಂತೂ ತೆಳೆಯದಿರುವುದು ಇತಿಹಾಸದಲ್ಲಿ ದಾಖಲಾಗಿರುವ ಸತ್ಯಾಂಶ.


ಇಂದು ಮಾತೆತ್ತಿದರೆ ಮತ ರಾಜಕಾರಣಕ್ಕಾಗಿ "ಕಾಸರಗೋಡು ನಮ್ಮದು" ಎಂದು ಚುನಾವಣೆ ಕಾಲದಲ್ಲಿ ನಮ್ಮ ಸಮಯಸಾಧಕ ನಾಯಕರು ಊಳಿಟ್ಟ ಮಾತ್ರಕ್ಕೆ, ರಾಜಧಾನಿಯಿಂದ ಅಷ್ಟು ದೂರದ ಬೆಳಗಾವಿಯಲ್ಲಿ ಬಡ ತೆರಿಗೆದಾರರ ಶ್ರಮದ ಹಣ ಉಡಾಯಿಸಿ ಸುವರ್ಣ ಸೌಧ ಎನ್ನುವ ಖಾಲಿ ಗೋದಾಮನ್ನ ಕಟ್ಟಿ ಮೀಸೆ ತಿರುವಿದ ಕೂಡಲೆ, ವರ್ಷಕ್ಕೊಮ್ಮೆ ಕೆಲಸವಿಲ್ಲದೆ ದೇವಸ್ಥಾನದ ಜಾತ್ರೆಗಳಂತೆ ಮಾಡುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ "ಮಹಾಜನ್ ವರದಿ ಜಾರಿಯಾಗಲಿ" ಎನ್ನುವ ಮೂರು ಕಾಸಿಗೂ ಪ್ರಯೋಜನಕ್ಕೆ ಬಾರದ ಠರಾವುಗಳನ್ನ ಪಾಸು ಮಾಡಿಸಿಕೊಳ್ಳುವ ಉತ್ಸಾಹ ತೋರಿದ ತಕ್ಷಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂಬ ಗಂಜಿ ಕೇಂದ್ರ ತೆರೆದು ಅತೃಪ್ತ ರಾಜಕಾರಣಿಯೊಬ್ಬರಿಗೆ ಕಛೇರಿ - ಕಾಸು ಜೊತೆಗೆ ಗೂಟದ ಕಾರು ಕೊಟ್ಟ ಕೂಡಲೆ ಗಡಿನಾಡ ಬವಣೆಗಳು ತೀರುವುದಿಲ್ಲ. ಅಲ್ಲಿನ ಕನ್ನಡ ಶಾಲೆಗಳ ದುಸ್ಥಿತಿ ಸುಧಾರಿಸುವುದಿಲ್ಲ. ಭಾಷಾ ಅಲ್ಪಸಂಖ್ಯಾತರೆಂದು ಆವರಿರುವ ರಾಜ್ಯದಿಂದ ಗುರುತಿಸಲ್ಪಡುವ ಅವರೆಲ್ಲರ ಸಾಂವಿಧಾನಿಕ ಹಕ್ಕುಗಳು ಈಡೇರಿ ಅವರ ಪಾಲಿಗೆ ನ್ಯಾಯ ಸಿಗುವುದೂ ಇಲ್ಲ.


ಐತಿಹಾಸದಿಂದ ಪಾಠ ಕಲಿಯದವನಿಗೆ ಭವಿಷ್ಯದಲ್ಲಿಯೂ ಸ್ಥಿರ ನೆಲೆ ಸಿಗುವುದಿಲ್ಲ. ರಾಜಕಾರಣಿಗಳ ಬೊಗಳೆ ಮಾತುಗಳು ಒತ್ತಟ್ಟಿಗಿರಲಿ, ರಾಜಧಾನಿಯ ಅನ್ಯಭಾಷಿಗ ವ್ಯಾಪಾರಿಗಳಿಂದ ನಿತ್ಯ ವಸೂಲಿ ಮಾಡಿಕೊಂಡು ಬದುಕುವುದನ್ನೆ ಒಂದು ದಂಧೆ ಮಾಡಿಕೊಂಡಿರುವ ಪರಾವಲಂಬಿ ಜೀವಿಗಳಂತಹ "ಉಟ್ಟು ಖನ್ನಡಿಗ ಓರಾಟಗಾರ"ರ ದೊಂಬರಾಟಗಳನ್ನೆಲ್ಲ ಯಾವೊಬ್ಬ ಪ್ರಾಮಾಣಿಕ ಕನ್ನಡಿಗನೂ ಬೆಂಬಲಿಸದೆ "ನಿಮಗೆ ನಿಜಕ್ಕೂ ಭಾಷೆಯ ಬಗ್ಗೆ ಕಾಳಜಿಯಿದ್ದರೆ ರಾಜ್ಯದ ಗಡಿ ಭಾಗಗಳಿಗೆ ತಮ್ಮ ಚಳುವಳಿಗಳನ್ನ ವಿಸ್ತರಿಸಿ, ಅಲ್ಲಿ ಪ್ರತಿಭಟನೆಗಳನ್ನ ಹಮ್ಮಿಕೊಳ್ಳಿ" ಎಂದು ಉಗಿದಟ್ಟಿದರೆ ಮಾತ್ರ ಕನ್ನಡಮ್ಮ ಈ ಕಿರಾತಕರ ಕೈಯಿಂದ ಪಾರಾದಾಳು. ವಿವೇಕದ ನಡೆಗೆ ಇನ್ನೂ ಕಾಲ ಮಿಂಚಿಲ್ಲ. ಈಗಾಗಲೆ ತೀರ್ಥಹಳ್ಲಿ ತಾಲೂಕಿನ ಗಾಜನೂರಿನಲ್ಲಿ ಕಳೆದ ಶತಮಾನದ ಅರವತ್ತರ ದಶಕದಲ್ಲಿ ಕಟ್ಟಿರುವ ತುಂಗಾ ಅಣೆಕಟ್ಟಿಗೆ ಮೇಲ್ದಂಡೆಯನ್ನು ನಿರ್ಮಿಸಿ ಅದರ ಜಲ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಲಾಗಿದೆ. ಒಂದೊಮ್ಮೆ ದಾವಣಗೆರೆ ಹೊಸ ರಾಜಧಾನಿಯಾಗಿ ರೂಪಿತವಾದರೆ ಆ ಊರಿಗೆ ನೀರಿನ ಕೊರತೆ ಖಂಡಿತಾ ಕಾಡಲಾರದು. ಈಗಿನಂತೆ ನಿತ್ಯ ತಮಿಳುನಾಡಿನವರೊಂದಿಗೆ ಹೋರಾಡಿ ಕಾವೇರಿಯಮ್ಮನ ಕೃಪೆಗಾಗಿ ಪರದಾಡುವ ಅಗತ್ಯ ಆಗಿರಲಾರದು. ಆಡಳಿತದ ಅನುಕೂಲಕ್ಕೆ ಬೇಕಿದ್ದರೆ ಬೆಳಗಾವಿ, ಬೆಂಗಳೂರು, ಗುಲ್ಬರ್ಗಾ, ಮೈಸೂರು ಹಾಗೂ ಮಂಗಳೂರನ್ನ ದಾವಣಗೆರೆಗೆ ಸರಿಸಮವಾಗಿ ಅಭಿವೃದ್ಧಿ ಪಡಿಸಿದರೆ ಕನ್ನಡನಾಡು ಹೊನ್ನಿನ ನಾಡಾಗುವ ಪಯಣದ ಆರಂಭ ಸುಗಮವಾಗುತ್ತದೆ. ನಮ್ಮ ಆಳುವ ಅಯ್ಯ, ಅಣ್ನ, ಅಪ್ಪರ ಕೆಪ್ಪ ಕಿವಿಗೆ ಇದು ಬೀಳುತ್ತದ?


http://www.youtube.com/watch?v=zA8AXSMhEPk

No comments: