01 April 2013

ತುಳುಗಾದೆ-೫೯

"ನಮನ ಭೂತ ಏತು ಕುಂಬಾರುಡ್‍ಂದು ನಮಕ್ ಗೊತ್ತಿಜ್ಜಾ?"


{ ನಮ್ಮವರ, ನಮ್ಮ ಆಪ್ತರ, ನಮ್ಮ ಬಾಳ ಸಂಗಾತಿಗಳ ನಡೆಯನ್ನ ಕುರಿತು ಅದನ್ನ ಹಾಸ್ಯವಾಗಿ ಅನಾವರಣ ಮಾಡುತ್ತಾ ಅವರ ಪ್ರಸ್ತುತಿಯಲ್ಲಿಯೆ ಇನ್ನೊಬ್ಬರ ಎದುರಿನಲ್ಲಿ ಗೇಲಿ ಮಾಡಿಕೊಂಡು ಅವರನ್ನ ಚುಡಾಯಿಸುತ್ತಾ ಆಡುವ ತಮಾಷೆಯ ಮಾತಿದು. ಂತಹ ಬಹಿರಂಗದ ತಮಾಷೆಯ ಪ್ರಸಂಗಗಳು ಸಂಬಂಧದ ಸಡಿಲವಾಗುತ್ತಿರುವ ದಾರಗಳನ್ನ ಮತ್ತೆ ಬಿಗಿಯಾಗಿಸಿ ಒಬ್ಬರಲ್ಲೊಬ್ಬರು ಲೀನವಾಗುವಂತೆ ಮಾಡುವಲ್ಲಿ ಸಹಕಾರಿಯಾಗಿರುತ್ತದೆ. ಇಬ್ಬರು ಸ್ವತಂತ್ರ್ಯ ವ್ಯಕ್ತಿಗಳ ನಡುವಿನ ಸಲುಗೆ, ಪರಸ್ಪರರ ಮೇಲಿರುವ ಹಕ್ಕು ಸಾಧಿಸುವ ಗುಣದ ಗಾಢತೆಯನ್ನ ಈ ತರಹದ ಪರಸ್ಪರರ ಕಾಲೆಳೆತಗಳು ಆಗಾಗ ಖಚಿತ ಪಡಿಸುತ್ತವೆ.  


ತುಳುನಾಡು ಈ ಮೊದಲೆ ತಿಳಿಸಿದಂತೆ ಭೂತಾರಾಧನೆಯ ನೆಲ. ಇಲ್ಲಿ ವೈದಿಕ ದೇವರು-ದಿಂಡರಿಗಿಂತ ತುಳುನಾಡಿಗರ ಪಿತೃದೈವಗಳಾದ ಭೂತಗಳಿಗೆ ಭಕ್ತಿ ಹಾಗೂ ಸಮರ್ಪಣ ಭಾವದಲ್ಲಿ ಹೆಚ್ಚು ಆದ್ಯತೆಯಿದೆ. ಕೋಲ-ತಂಬಿಲ-ಮೆಚ್ಚಿ-ನಡಾವಳಿ-ಮಹಾನಡಾವಳಿ ಹೀಗೆ ಬಗೆಬಗೆಯಲ್ಲಿ ನಡೆಯುವ ಭೂತಾರಾಧನೆ ಅದು ಸಾರ್ವಜನಿಕ ಗೆರೋಡಿಗಳಲ್ಲಿ ಆಯೋಜಿತವಾಗಿದ್ದರೂ ಅಥವಾ ಗುತ್ತಿನ ಮನೆಯ ಚಾವಡಿಗಳಲ್ಲಿ ನಡೆಯಬೇಕಿದ್ದರೂ ಅದರಲ್ಲಿ ಪರವ-ಪಂಬದ-ನಲ್ಕೆಯವರು ಆದ್ಯತೆಯ ಮೇರೆಗೆ ಭಾಗಿಯಾಗದೆ, ಅವರು ಭೂತದ ಪಾತ್ರಿಗಳಾಗಿ  ಶೃಂಗರಿಸಿಕೊಂಡು ಭೂತವನ್ನ ತಮ್ಮ ಮೈಮೇಲೆ ಆವಾಹಿಸಿಕೊಂಡು ದೈವವಾಣಿಗಳನ್ನ ಅಭಯಗಳನ್ನ ನುಡಿಗಟ್ಟಿನ ಮೂಲಕ ಅಭಿವ್ಯಕ್ತಿಸದೆ ಹೋದಲ್ಲಿ ಅದು ಅಪೂರ್ಣ. ಅವರು ನಡುಗುತ್ತಾ ಭೂತಗಳ ಮಾಧ್ಯಮವಾಗುವುದು ಕ್ಷಣಕಾಲ ಸ್ಥಳದಲ್ಲಿ ಒಂದು ರೀತಿಯ ಅಲೌಖಿಕ ಕಳೆಯನ್ನ ಮೂಡಿಸುತ್ತದೆ. ಆದರೆ ಇಲ್ಲೊಂದು ಧರ್ಮ ಸೂಕ್ಷ್ಮವಿದೆ. ನಮ್ಮ ಮನೆಯ ಭೂತ, ಸಾಮಾನ್ಯವಾಗಿ ರಾಜನ್ ದೈವಗಳ ಪರಿವಾರದ ಭೂತಗಳು ಅಭಯ ನೀಡುವಾಗ 'ಏನನ್ನ ನುಡಿಯಬೇಕು' ಅನ್ನುವ ಪೂರ್ವ ನಿರ್ಧಾರವನ್ನ ಮೌಖಿಕವಾಗಿ ಗುತ್ತಿನ ಯಜಮಾನ ಗುತ್ತಿನಾರ್ ಭೂತ ಪಾತ್ರಧಾರಿಗಳಿಗೆ ಗತ್ತಿನಿಂದ ನೀಡಿ ಆದೇಶಿಸುವುದೂ ಇದೆ. ಆದರೆ ಇವೆಲ್ಲ ಕೇವಲ ಅನೌಪಚಾರಿಕವಾಗಿ ಕದ್ದುಮುಚ್ಚಿ ಮಾತ್ರ ನೀಡಬಲ್ಲಂತಹ ಅನಧಿಕೃತ ಆದೇಶಗಳು ಮಾತ್ರ ಆಗಿರುತ್ತವೆ ಹಾಗೆಲ್ಲಾ ತಾಕೀತು ಮಾಡಲು ಗುತ್ತಿನ ಯಜಮಾನನಿಗೆ ಅಧಿಕಾರವಿಲ್ಲ ಎನ್ನುವುದು ಸ್ಪಷ್ಟ.ದೈವ ಮಾಧ್ಯಮನಾಗಿ ತನಗೆ ಸಿಗುವ ಈ "ಅಪಾರ ಮರ್ಯಾದೆ" ಹಾಗೂ ಭಕ್ತಿ ಇವೆಲ್ಲ ಕ್ಷಣಿಕ ಸುಖ! ಹಾಗೂ ಭೂತದ ಆವೇಶ ತನ್ನ ಮೈಯಿಂದ ಇಳಿದ ನಂತರ ಅವರು ತನಗೆ ಧಣಿ, ಜಾತಿಯಿಂದ ಅಸ್ಪರ್ಶ್ಯನಾದ ತಾನು ಅವರ ಆಳು ಎನ್ನುವ ಸ್ಪಷ್ಟ ವಾಸ್ತವದ ಅರಿವಿರುವ ಯಾವೊಬ್ಬ ಭೂತದ ವೇಷಧಾರಿಯು ಧಣಿಗಳ ಅಪೇಕ್ಷೆಗೆ ವಿರುದ್ಧದ ದೈವ ತೀರ್ಪನ್ನ ತನ್ನ ನಾಲಗೆಯಿಂದ ಉದುರಿಸಿ ತನ್ನ ತಿನ್ನುವ ಅನ್ನಕ್ಕೆ ಕಲ್ಲು ಹಾಕಿಕೊಳ್ಳುವ ಧೈರ್ಯ ಮಾಡಲಾರ! ಆವೇಶದಲ್ಲಿ ಮಗ್ನನಾಗಿರುವಾಗ ರಾಶಿ ಹಾಕಿದ ಬೆಂಕಿಯ ಕೆಂಡದ ಮೇಲೆ ಹೊರಳಾಡಿ ತನ್ನ ಪ್ರಭಾವ ಪ್ರದರ್ಶಿಸುವ ಆ ಮೂಲಕ ನೆರೆದ ಭಕ್ತಾದಿಗಳ ಎದೆಯಲ್ಲಿ ಭಯ ಹುಟ್ಟಿಸುವಲ್ಲಿ ಸಫಲನಾಗುವ ಭೂತ ವೇಷಧಾರಿ ಅನಂತರ ಮಾತ್ರ ಸಕಲರ ತಿರಸ್ಕಾರಕ್ಕೆ ಸಿಲುಕುವುದು ಸಾಮಾನ್ಯ. ವೇಷ ಕಳಚಿದ ನಂತರದ ಲೌಕಿಕ ಬಾಳಿನಲ್ಲಿ ತನ್ನ ಮಿತಿಯ ಅರಿವು ಅವನಿಗಿರುವ ತನಕ ಹೆಚ್ಚಾಗಿ ಭೂವಿವಾದ ಹಾಗೂ ಆಸ್ತಿ ಹಂಚಿಕೆಗಳಲ್ಲಿ ಭೂಮಾಲಿಕರು ನಯವಾಗಿ ಬೆದರಿಕೆಯೊಡ್ಡಿ ಭೂತಗಳ ನುಡಿಗಳಲ್ಲಿ ತಮ್ಮ ಮನಧಾಭಿಲಾಷೆಗೆ ದೈವದ ಸಮ್ಮತಿಯ ಮುದ್ರೆಯನ್ನ ಸಾರ್ವಜನಿಕವಾಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರು. ಅಂತಹ "ನಿಗದಿತ ತೀರ್ಪಿನ ಪಂದ್ಯ"ಗಳನ್ನ ಈ ಬಗ್ಗೆ ಸುಳಿವಿರುವ ಕಿಡಿಗೇಡಿಗಳು "ನಮ್ಮ ಭೂತ ಎಷ್ಟು ನಡುಗುತ್ತದೆ ಅಂತ ನಮಗೆ ಗೊತ್ತಿಲ್ಲವ!" ಅಂತ ಆಡಿಕೊಂಡು ನಗುತ್ತಾರೆ. ಕನ್ನಡದಲ್ಲಿಯೂ "ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ವಾ" ಎನ್ನುವ ಗಾದೆ ಇದೆ ಅರ್ಥವನ್ನ ಸೂಸುತ್ತಲಿದೆ.}( ನಮನ ಭೂತ ಏತು ಕುಂಬಾರುಡ್‍ಂದು ನಮಕ್ ಗೊತ್ತಿಜ್ಜಾ? = ನಮ್ಮ ಭೂತ ಎಷ್ಟು ನಡುಗುತ್ತದೆ ಅಂತ ನಮಗೆ ಗೊತ್ತಿಲ್ವಾ? )

No comments: