20 April 2013

ತುಳುಗಾದೆ-೬೦









"ನುಪ್ಪುಗ್ ಗತಿ ಇಜ್ಯಂದೆ ನಟ್ಟುನಾಯೆಗ್ ಮೀಸೆ ತಿಕ್ಯರೆ ಒರಿಯೆಗೆ!"


{ ಇದು ಅಲ್ಪನ ಅಹಂಕಾರಕ್ಕೆ ಚುಚ್ಚು ಮಾತಾಗಿ ಬಳಸುವ ವ್ಯಂಗ್ಯದ ಗಾದೆ ಮಾತು. ತನ್ನ ಮಿತಿ ಮೀರಿ ಮೆರೆಯುವ, ಆದ್ಯತೆ ಮೀರಿ ಸೊಕ್ಕಿನಲ್ಲಿ ದುಂದು ವೆಚ್ಚಕ್ಕೆಳಸುವ ಮಂದಿಯನ್ನ ಹೀಯ್ಯಾಳಿಸಲು ತುಳುವರು ಈ ಗಾದೆಯ ಉಪಮೆಯನ್ನ ಧಾರಾಳವಾಗಿ ಬಳಸಿ ನಿವಾಳಿಸುತ್ತಾರೆ. ಯಾವಾಗಲೂ ಊರಿನ ಪಂಚಾಯ್ತಿ ಮಾಡುತ್ತಾ ಕಂಡವರ ವಿಷಯದಲ್ಲಿ ಮೂಗು ತೂರಿಸುತ್ತಾ ತನ್ನ ಅಮೂಲ್ಯ ತೀರ್ಪನ್ನ ಯಾರೂ ಸಹ ಕೇಳದಿದ್ದರೂ ಬಿಟ್ಟಿಯಾಗಿ ಕೊಡುತ್ತಾ ವ್ಯರ್ಥ ದಿನದುದ್ದ ಕಾಲ ಹಾಕುವ ಪೂಟು ಲಾಯರಿಗಳಂತಹ ಮಂದಿಯನ್ನ ಇನ್ನಿತರ ಎಡೆಗಳಂತೆ ಗ್ರಾಮೀಣ ತುಳುನಾಡಿನಲ್ಲೂ ಕಾಣಬಹುದು. ಇಂತಹ ಕೆಲಸಕ್ಕೆ ಬಾರದ ಸಮಾಜ "ಶೇವಕ"ರ ಬಾಲವಾಗಿ ಬಹಳ ಸಾರಿ ತೈನಾತಿಯೊಬ್ಬ ಇದ್ದೆ ಇರುತ್ತಾನೆ! ತನಗೆ ತಿನ್ನಲು ಗತಿಯಿಲ್ಲದೆ ಊರವರನ್ನ ಯಾಮಾರಿಸಿಕೊಂಡು ನಾಲ್ಕು ಕಾಸು ಹೊಂಚುವ ಇಂತಹ ಮೈಗಳ್ಳರು ಆ ಆಳಿನ ಸಂಬಳವನ್ನ ಅದೆಲ್ಲಿಂದ ತಂದು ಕೊಡುತ್ತಾರೆ ಅನ್ನುವ ವಿಸ್ಮಯಕ್ಕೆ ಉತ್ತರ ಸಿಗುವುದೆ ಇಲ್ಲ.


ಒಬ್ಬನಿಗೆ ಅನ್ನಕ್ಕೆ ಗತಿಯಿರಲಿಲ್ಲವಂತೆ. ನಿತ್ಯ ಬೆಳಗಾದರೆ ಸಾಕು ಅನ್ನದ ತಹತಹಿಕೆಯಲ್ಲಿ ಮನೆಮನೆ ಸುತ್ತುವ ಭಿಕ್ಷಾ ಪಾತ್ರೆಯನ್ನ ಮುಂದೊಡ್ಡಿ ಬೇಡುವ ಅನಿವಾರ್ಯತೆ ಅವನಿಗೆ ಇತ್ತಂತೆ. ಹೀಗಿದ್ದರೂ ಅವನಲ್ಲೂ ಒಂದು ಶೋಕಿಯಿತ್ತು! ಉದ್ದ ಮೀಸೆ ಬಿಟ್ಟಿದ್ದ ಅವನು ಅದರ ದೇಖಾರೇಕಿಗೆ ಆಳೊಬ್ಬನನ್ನ ನೇಮಿಸಿಕೊಂಡಿದ್ದನಂತೆ. ನಿತ್ಯ ತನ್ನ ಅನ್ನದ ಆಲೋಚನೆ ಮಾಡಬೇಕಿದ್ದರೂ ಬೆಳಗಾಗುತ್ತಲೆ ಆ ಗತಿಯಿಲ್ಲದವನ ಭರ್ಜರಿ ಮೀಸೆಗೆ ಆ ಆಳು ಬೆಳಗಾಗುತ್ತಲೆ ಎಣ್ಣೆ ತಿಕ್ಕಿ ಒಪ್ಪವಾಗಿ ಅದನ್ನ ಬಾಚಿ ಕೂದಲುಗಳನ್ನ ನವಿರಾಗಿರುವಂತೆ ನೋಡಿಕೊಳ್ಳುತ್ತಿದ್ದನಂತೆ. ತನ್ನ ಗಂಜಿಗೆ ಗತಿಯಿಲ್ಲದ ಆ ಭಿಕಾರಿ ಆಳಿಗೆ ಅದೆಲ್ಲಿಂದ ಸಂಬಳ ಕೊಡುತ್ತಿದ್ದನೋ ಅಂತ ಊರೆಲ್ಲ ಆಶ್ಚರ್ಯ ಪಡುತ್ತಿತ್ತಂತೆ!


ಯಾವಾಗಲೂ ನಮ್ಮ ಮಿತಿಯಲ್ಲಿಯೆ ಕಾಲು ಚಾಚಬೇಕು. ನಮ್ಮ ಆದ್ಯತೆಗಳು ವಸ್ತುನಿಷ್ಠವಾಗಿದ್ದಷ್ಟೂ ನಾವು ಗೆಲ್ಲುತ್ತಿರುತ್ತೇವೆ. ಮೂಲಭೂತ ಅಗತ್ಯಗಳನ್ನ ಪೂರೈಸಿ ಕೊಂಡ ನಂತರವಷ್ಟೆ ನಮ್ಮ ಶೋಕಿಗಳೆಡೆಗೆ ಗಮನ ನೀಡುವುದು ಕ್ರಮವಾಗಬೇಕು. ತಿನ್ನುವ ಅನ್ನಕ್ಕೆ ಗತಿಯಿಲ್ಲದಾಗ ವೈಭವದ ಅಮಲಿಗೆ ಏರುವುದು ನಮ್ಮನ್ನ ಇನ್ನಷ್ಟು ಅಧಃಪತನಕ್ಕಷ್ಟೆ ಒಯ್ದು ನೂಕಬಲ್ಲದು. ಹೀಗಾಗಿ ನಾವು ಸದಾ ಅಲ್ಪತನದ ಐಶ್ವರ್ಯ ಮೆರೆಯ ಕೂಡದು ಅನ್ನುವ ತಾತ್ಪರ್ಯ ಈ ಗಾದೆಯದ್ದು.}



( ನುಪ್ಪುಗ್ ಗತಿ ಇಜ್ಯಂದೆ ನಟ್ಟುನಾಯೆಗ್ ಮೀಸೆ ತಿಕ್ಯರೆ ಒರಿಯೆಗೆ! = ಅನ್ನಕ್ಕೆ ಗತಿಯಿಲ್ಲದೆ ಬೇಡುವವನಿಗೆ ಮೀಸೆ ತಿಕ್ಕಲಿಕ್ಕೆ ಒಬ್ಬನಂತೆ!. )

No comments: