09 September 2013

ಬೇಡದ ಕಾಲದಲ್ಲಿ ಬಾರಿಸಿದ ಒಡಕು "ಡುಂಢಿ"ಮದ ಹಳಸಲು ಕಥೆ......





"ಗಣಪತಿ ಹಬ್ಬ" ಒಂದು ರೀತಿಯಲ್ಲಿ ಹಳೆಯ ನೆನಪುಗಳನ್ನ ಮರುಕಳಿಸುವ ಸಂಭ್ರಮದ ಆಚರಣೆ. ಈಗಷ್ಟೆ ಓದಿ ಮುಗಿಸಿದ ವಿವಾದದ ರಾಡಿ ಎಬ್ಬಿಸಿರುವ ಇತ್ತೀಚಿನ ಕನ್ನಡ "ಕಾದಂಬರಿ" 'ಡುಂಢಿ'ಯನ್ನ ಕುರಿತು ನನ್ನ ವಯಕ್ತಿಕ ಅಭಿಪ್ರಾಯಗಳನ್ನ ಬರೆಯುವುದು ನನ್ನ ಆಯ್ಕೆಯ ವಿಚಾರ ಖಂಡಿತ ಆಗಿರಲಿಲ್ಲ. ಆದರೆ ಒಟ್ಟಾರೆ ಸ್ಥೂಲವಾಗಿ ಕಳೆದ ಒಂದು ತಿಂಗಳ ಅವಧಿಯಲ್ಲಿ "ಡುಂಢಿ" ಎಬ್ಬಿಸಿದ ನನ್ನ ಪ್ರಕಾರ ಅನಗತ್ಯವೆ ಆಗಿದ್ದ ನಕಾರಾತ್ಮಕ ಪ್ರಚಾರದ ಅಲೆಯ ಕುರಿತು ಕೆಲವು ಮಾತುಗಳು ನನ್ನೊಳಗೆ ಹುಟ್ಟಿವೆ. ಇಲ್ಲಿ ವಿವಾದದ ಅಂಶವನ್ನ ಮೂರು ಬಗೆಯಲ್ಲಿ ಕಾಣುವ ಪ್ರಯತ್ನ ಮಾಡುತ್ತೇನೆ.


ಮೊದಲನೆಯದಾಗಿ ಆಸ್ತಿಕರ ನಂಬಿಕೆಗೆ ಬಿದ್ದ ಕೊಡಲಿ ಪೆಟ್ಟು. ಎರಡನೆಯದಾಗಿ "ಡುಂಢಿ"ಮದ ಹಿನ್ನೆಲೆಯಲ್ಲಿ ತಮ್ಮ ಎಂದಿನ ಡಿಂಡಿಮ ಬಾರಿಸಿ ಬಾಯಿ ಹರಿದುಕೊಳ್ಳುತ್ತಿರುವ ತಥಾಕಥಿತ "ಜ್ಞಾನ" ಪಂಡಿತರ ಬುಡಬುಡಿಕೆ. ಕೊನೆಯದಾಗಿ ಕಾದಂಬರಿಯ ಪ್ರಸ್ತುತತೆ ಹಾಗೂ ಅದರಲ್ಲಿ ಹುದುಗಿರುವ "ಸಂಶೋಧನೆ"ಯ ಅಗಾಧತೆ ಹಾಗೂ ಪ್ರಾಮಾಣಿಕತೆ. ಹೀಗೆ ಪ್ರತ್ಯೇಕವಾಗಿ ಇಡಿ ಪ್ರಕರಣವನ್ನ ನೋಡುವ ಪ್ರಯತ್ನ ನನ್ನದು.


ಗಣಪತಿಯ ಕಲ್ಪನೆ ವೇದ ಕಾಲದ್ದಾದರೂ ಅದರ ಅನಂತರದ ಮಹಾಭಾರತದ ಕಾಲದಿಂದ ಆರಂಭಿಸೋಣ. ಸದ್ಯ ಲಭ್ಯವಿರುವ  ಪಾಂಡವರ ದಿಗ್ವಿಜಯದ ಆವೃತ್ತಿಯ ಲಿಪಿಕಾರ ಗಣಪತಿಯೆ ಎನ್ನುವುದು ಜನಪ್ರಿಯ ನಂಬಿಕೆ ತಾನೆ? ವೇದವ್ಯಾಸರು ಸಂಪಾದಿಸಿ ಹೇಳಿದ ಕೃತಿಯನ್ನ ಒಪ್ಪಗೊಳಿಸಿ ಲಿಖಿತ ರೂಪಕ್ಕೆ ತರಲು ಒಪ್ಪಿಕೊಂಡ ಗಣಪ "ಎಲ್ಲೂ ನಡುವೆ ಕಥೆಯನ್ನ ನಿಲ್ಲಿಸುವಂತಿಲ್ಲ!" ಎನ್ನುವ ಪೂರ್ವ ಶರತ್ತನ್ನ ವ್ಯಾಸರಿಗೆ ವಿಧಿಸಿದನಂತೆ. ಅದಕ್ಕೊಪ್ಪಿದ ವ್ಯಾಸರು "ಆದರೆ ನೀನು ನಾನು ಹೇಳಿದ ಪ್ರತಿ ಪದವನ್ನೂ ಅರ್ಥ ಮಾಡಿಕೊಂಡೆ ಬರೆಯತಕ್ಕದ್ದು!" ಎನ್ನುವ ಪ್ರತಿ ಶರತ್ತನ್ನ ವಿಧಿಸಿದರಂತೆ. ಈತನೂ ಒಪ್ಪಿಗೆ ಸೂಚಿಸಿದ. ಆದರೆ ಬರವಣಿಗೆ ಎಡೆಬಿಡದೆ ಸಾಗುತ್ತಿದ್ದಾಗ ನಡುವೆ ಕೈಯಲ್ಲಿದ್ದ ಲೇಖನಿ ಮುರಿದು ಹೋಗಿ ಬರವಣಿಗೆ ನಿಂತು ಹೋಗುವ ಸಂದರ್ಭ ಸೃಷ್ಟಿಯಾಯಿತಂತೆ. ಆದರೆ ಈ ಬಗ್ಗೆ ಒಂಚೂರೂ ತಲೆ ಕೆಡಿಸಿಕೊಳ್ಳದ ಗಣಪ ತನ್ನ ಒಂದು ದಂತವನ್ನೆ ಮರು ಆಲೋಚಿಸದೆ ಮುರಿದು ಅದರಲ್ಲೆ ಅರ್ಧಕ್ಕೆ ನಿಂತಿದ್ದ ಬರವಣಿಗೆಯನ್ನ ನಿರಾತಂಕವಾಗಿ ಮುಂದುವರೆಸಿದನಂತೆ!


ಹೀಗೊಂದು ಕಥೆ ಚಾಲ್ತಿಯಲ್ಲಿದೆ. ಇದರ ಕಾರಣಕ್ಕಾಗಿಯೆ ಆತ ಏಕದಂತನಾದ ಎನ್ನುವ ಮಾತಿದೆ. ಆದರೆ ಈ ವಾದವನ್ನ ಪೋಷಿಸುವವರೆ ತನ್ನನ್ನ ಅಣಗಿಸಿದ ಚಂದ್ರನ ಮೇಲೆ ಕೊರಂಬಾಗಿ ಎಸೆಯಲಿಕ್ಕೆ ಹೀಗೆ ಹಲ್ಲು ಮುರಿದು ಕೊಂಡ ಮುಂಗೋಪಿಯಾಗಿಯೂ ಅವನನ್ನ ಚಿತ್ರಿಸುತ್ತಾರೆ! ಇಂತಹ ವಿರೋಧಾಭಾಸಗಳಿಗೆ ನಮ್ಮ ಬಹುಸಂಖ್ಯಾತರ ನಂಬಿಕೆಯ ಶಾಸ್ತ್ರ, ಪುರಾಣಗಳಲ್ಲಿ ಧಾರಾಳ ಉದಾಹರಣೆಗಳನ್ನ ಕೊಡಬಹುದು. ಇದರ ಅತಿ ವ್ಯಂಗ್ಯದ ಪರಾಕೇಷ್ಠೆಯೆಂದರೆ ನಾವು ಭಾರತೀಯ ಇತಿಹಾಸದ ಭಾಗವಾಗಿ ಪರಿಗಣಿಸುವ "ಮಹಾಭಾರತ"ವನ್ನ ಸ್ವತಃ ಗಣಪತಿಯ ಕೈಯಲ್ಲಿಯೆ ನಮ್ಮ ನಂಬಿಕೆ ಬರೆಸಿದರೂ ಇಡಿ ಮಹಾಭಾರತದ ಅಂತರ್ಯದಲ್ಲಿ ಒಬ್ಬ ದೈವವಾಗಿ ಮೊದಲೊಂದಿಪನಾಗಿ ಎಲ್ಲೂ ಗಣಪತಿಯ ಪ್ರಸ್ತಾಪವೆ ಇಲ್ಲ! ಇನ್ನು ಪುರಾಣದ ಕೊನೆಯ ಕೊಂಡಿಯಾಗಿ ಪರಿಗಣಿಸಬಹುದಾದ "ರಾಮಾಯಣ"ದಲ್ಲೂ ಗಣಪ ಸಕಾರಣವಿಲ್ಲದೆ ನಾಪತ್ತೆ! ಭೂತಗನ್ನಡಿ ಹಾಕಿ ಹುಡುಕಿದರೂ ಆತನ ನೆರಳು ಸಹ ಇವೆರಡು ಭಾರತೀಯ ಮಹಾಕಾವ್ಯಗಳಲ್ಲಿ ಗೋಚರಿಸದು.


ವೇದದಲ್ಲಿರುವ ಗಣಪನ ಪ್ರಸ್ತಾಪವೂ  "ಗಣಾನಾಂ ತ್ವಾ, ಗಣಪತಿಂ ವಹಾಮಹೇ" ತರಹದ ಕೆಲವು ಬ್ರಹ್ಮಣಸ್ಪತಿಯ ಋಕ್ಕುಗಳಲ್ಲಿ ಮಾತ್ರ ಇದೆ. ಇದು ಇಂದಿನ ಸೊಂಡಿಲು ಹೊತ್ತ ಆನೆಮುಖದವನ ಪ್ರಸ್ತಾಪ ಖಂಡಿತಾ ಅಲ್ಲ. ಅಂದರೆ ವೇದಕಾಲದಲ್ಲಿ ವಿಘ್ನೇಶ್ವರ ಇರಲೂ ಇಲ್ಲ, ಹೀಗಾಗಿ ಪ್ರಥಮ ಪೂಜೆ ಅವನಿಗೆ ಮೀಸಲು ಎನ್ನುವ ಆಚರಣೆಯೂ ಇದ್ದಿರಲು ಸಾಧ್ಯವೆ ಇಲ್ಲ. ಇದೇನಿದ್ದರೂ ಅನಂತರದ ಪುರಾಣಗಳ ಸೃಜನಶೀಲ ಸೃಷ್ಟಿ. ಮೈ ಕೊಳೆಯಿಂದ ತಾಯಿಯೊಬ್ಬಳು ಮಗುವನ್ನೆ ಹುಟ್ಟಿಸುತ್ತಾಳೆ ಎನ್ನುವುದು ತರ್ಕಬದ್ಧವಲ್ಲ. ಆದರೆ ಕನ್ಯಾ ಮಾತೆಗೆ ಹುಟ್ಟಿದವ ಎನ್ನುವ ನಂಬಿಕೆಯ ಉದ್ಭವ ಮೂರ್ತಿ ಏಸುವನ್ನೆ ಅನಂತರದ ದಿನಗಳಲ್ಲಿ ಹುಟ್ಟಿಸಿದ ಮಂದಿಗೆ ಅದಕ್ಕೂ ಮೊದಲೆ ಗಣಪನನ್ನೂ ಪಾರ್ವತಿಯ ಬೆವರಿನಿಂದ ಹುಟ್ಟಿಸಲಿಕ್ಕೆ ಅಷ್ಟು ಕಷ್ಟವಾಗಿರಲಿಕ್ಕಿಲ್ಲ! ಆದರೆ ರಾಮಾಯಣ ಮಹಾಭಾರತದ ಹೊತ್ತಿಗೆ ಗಣಪತಿಯ ಕಲ್ಪನೆ ಚಾಲ್ತಿಗೇನೋ ಬಂದಿತ್ತು. ಆದರೆ ಈ ಎರಡು ಪೌರಾಣಿಕ ಕಾವ್ಯಗಳಿಂದ ಗಣಪ ತಲೆ ತಪ್ಪಿಸಿಕೊಂಡು ಹೋಗಿರುವುದಕ್ಕೆ ಸಕಾರಣವಾದರೂ ಇರಬೇಕಲ್ಲ? ಆದರೆ ಅದಿಲ್ಲ!



ಇದರ ಬಗ್ಗೆಯೆ ಯಾರದರೂ ಸಂಶೋಧಿಸಿ ಬರೆದೆರೆಂದರೆ ಆಸ್ತಿಕರ ಕಣ್ನಿಗೆ ಖಾರದ ಪುಡಿಯ ರಂಗು ತನ್ನಿಂದ ತಾನೆ ಬರುತ್ತದೆ! ಇನ್ನು ಹಾಗೊಂದು ಚಿಕಿತ್ಸಕ ದೃಷ್ಟಿಯಿಂದ ನೋಡಿದ ಕಣ್ಣುಗಳಿಗೆ ಅವರು ಅದೆ ಖಾರದ ಪುಡಿಯನ್ನ ಎರಚಲು ಹಿಂದುಮುಂದು ಯೋಚಿಸುವುದೇ ಇಲ್ಲ. ಇದು ಏನನ್ನ ಸೂಚಿಸುತ್ತದೆ? ತಾವು ಬೋಳೆ ಕಥೆ ಹೊಡೆದು ಅದನ್ನೆ ನಿಜವೆಂದು ನಂಬುತ್ತಾರೆ ಹಾಗೂ ಇನ್ನುಳಿದವರಿಗೂ ಅದನ್ನ ನಂಬಿಸುವ ಹಟಕ್ಕಿಳಿಯುತ್ತಾರೆ. ಆದರೆ ಅದು ಸಫಲವಾಗದ ವಾಸನೆ ಹೊಡೆದ ಕೂಡಲೆ ಅಸಹನೆಯಿಂದ ಜಗಳ ಕಾಯ ತೊಡಗುತ್ತಾರೆ. ಸಾಲದ್ದಕ್ಕೆ ಅದೆಷ್ಟೆ ಕೆಳ ಮಟ್ಟಕ್ಕೆ ಇಳಿದಾದರೂ ಸರಿ ತಮ್ಮ ಸ್ಥಾಪಿತ ನಂಬಿಕೆಗಳನ್ನ ಉಳಿಸಿಕೊಳ್ಳಲಿಕ್ಕೆ ಅದನ್ನ ಪ್ರಶ್ನಿಸಿದವರನ್ನ ಹಣಿಯಲು ಶತ ಪ್ರಯತ್ನ ನಡೆಸುತ್ತಾರೆ. ದುರಾದೃಷ್ಟವಶಾತ್ ಅಂತಹ ಹೀನ ಪ್ರಯತ್ನಗಳು ಬಹುಪಾಲು ಯಶಸ್ವಿಯಾಗಿ ತಮ್ಮ ಗುರಿ ಸಾಧಿಸಿಕೊಳ್ಳುತ್ತವೆ. ಆ ಮೂಲಕ ಅದಕ್ಕೆ ಬಲಿಪಶುವಾದವನಲ್ಲಿ ಅವಮಾನದ ಕಿಚ್ಚು ಹೊತ್ತಿಸುತ್ತದೆ. ಆತ ನಿರಂತರ ಘರ್ಷಣೆಗೆ ತೋಳು ಮಡಚಿಕೊಳ್ಳುತ್ತಾನೆ. ಕಾದಾಟ ಇನ್ನೂ ಹೀನ ಮಟ್ಟಕ್ಕೆ ಮುಟ್ಟುತ್ತದೆ. ಮತ್ತು ಇದಕ್ಕೊಂದು ಕೊನೆಮೊದಲಿಲ್ಲದಂತಾಗುತ್ತದೆ.


ಮೇಲಿನ ಕಥೆಗೆ ಮತ್ತೆ ಮರಳುವ. ಇಂತಹ ಎರಡೆರಡು ಅಥವಾ ಇನ್ನೂ ಹೆಚ್ಚು ಆವೃತ್ತಿಯಿರುವ ಕಥೆಗಳು ಚಾಲ್ತಿಯುವ ಅನೇಕ ನಿದರ್ಶನಗಳು ನಾವು ನಂಬಿರುವ ಹಿಂದೂ ಧರ್ಮದಲ್ಲಿ ಅಡಿಗಡಿಗೆ ಸಿಗುತ್ತದೆ. ತರ್ಕಕ್ಕೆ ಎಟುಕದ "ದೈವ ಲೀಲೆ"ಗಳಿಗಂತೂ ಬರವೇ ಇಲ್ಲ ಬಿಡಿ! ಹೀಗಿರೋವಾಗ ಇದಮಿತ್ಥಂ ಎಂದು ಹೇಳಲು ಯಾವ ಸಮರ್ಥನೆಯಿದೆ? ದೈವವೆ ಇರಲಿ, ದೈವದಾರಾಧನೆಯ ಆಚರಣೆಗಳೆ ಇರಲಿ ಅದು ವ್ಯಕ್ತಿಯಿಂದ ವ್ಯಕ್ತಿಗೆ, ಸಮುದಾಯದಿಂದ ಸಮುದಾಯಕ್ಕೆ ವ್ಯತರಿಕ್ತವಾದರೆ ತಪ್ಪೇನು? ಒಬ್ಬರು ಹಾಡಿ ಹೊಗಳುವ ದೈವಗಳನ್ನ ಇನ್ಯಾರೋ ಹೀನಾಮಾನ ಬೈಯ್ದೆ ಆರಾಧಿಸುವ ನಿಂದಾಸ್ತುತಿಯ ಮೂಲಕ ಅರ್ಚಿಸಿ-ಆರಾಧಿಸಿದರೆ ಅದು ಅಪರಾಧವಾಗುವುದಾದರೂ ಹೇಗೆ? ಅದನ್ನ ಸತರ್ಕದಿಂದ ಎದುರಿಸುವ ತಾಖತ್ತು, ವಿಷಯ ಸಂಪತ್ತು ಇಲ್ಲದ ಪಕ್ಷದಲ್ಲಿ ಮಾತ್ರ ಟಿವಿ ಸ್ಟುಡಿಯೋದಲ್ಲಿ ಕೂತು ಅಂಗಿ- ಗಂಟಲು- ಪುಸ್ತಕ ಎಲ್ಲವನ್ನೂ ಹರಿದು ಕೊಳ್ಳುವ ಉಮೇದಿ ಹುಟ್ಟುತ್ತದೆ. ಇನ್ನು ಮುದ್ರಣ ಮಾಧ್ಯಮಗಳಲ್ಲಿ "ಉದಯ"ದ ಹೊತ್ತಲ್ಲೆ ವಿವಾದಿತ ಕೃತಿಯದ್ದು ಎನ್ನುವ ಪರದೆಯೆಳೆದು ಅದರಲ್ಲಿ ಇಲ್ಲದ ಸುಳ್ಳಿನ "ವಾಣಿ"ಗಳನ್ನ ಪುಂಖಾನುಪುಂಖವಾಗಿ ಬರೆದು ಪ್ರಸರಿಸಿ "ವಿಜಯ"ದ ಹೀನ ಕುಟಿಲ ನಗೆ ಬೀರಲು ಸಾಧ್ಯವಾಗುತ್ತದೆ. ಆದರೆ ಈ ಮೂಲಕ ಸಮಾಜದ ಸ್ವಾಸ್ಥ್ಯ ಇನ್ನಷ್ಟು ಹದಗೆಡುತ್ತದೆಯೆ ಹೊರತು ಆದ ಗಾಯ ಮಾಯುವುದಿಲ್ಲವಲ್ಲ.


ಈ ಡುಂಢಿಯಲ್ಲಿ ಬಂದ ಅಪಸವ್ಯಗಳಿಗಿಂತ ಹೆಚ್ಚಿಗೆ ಅಶ್ಲೀಲತೆ ನಮ್ಮ ವೇದಗಳಲ್ಲಿಯೆ ಇದೆ, ಆದರೆ ಒಂದು ಭಾಷೆಯಾಗಿ ಸಂಸ್ಕೃತದ ಜ್ಞಾನ ಹೀನರ ಸಂಖ್ಯೆ ವಿಪರೀತವಾಗಿರುವ ನಮ್ಮ ಆಸ್ತಿಕ ಜಗತ್ತಿನಲ್ಲಿ ಅದರ ಅರಿವಿಲ್ಲ ಅಷ್ಟೆ. ಸಾಲದ್ದಕ್ಕೆ ಅವೆ ನಿಂದಾಸ್ತುತಿಗಳನ್ನ ಸರಾಗವಾಗಿ ನಿತ್ಯ ನಮ್ಮ ದೇವಸ್ಥಾನ ಹಾಗೂ ಮನೆಗಳಲ್ಲಿ ಲಯಬದ್ಧವಾಗಿ ಹಾಡಿಕೊಂಡು ಅದೆ ದೇವರನ್ನ ಸೊಂಟದ ಕೆಳಗಿನ ಮಾತುಗಳಿಂದಲೆ ಷೋಡಶೋಪಚರಿಸುತ್ತೇವೆ! ಉದಾಹರಣೆಗೆ "ಕೃಷ್ಣ ಯಜುರ್ವೇದಿ"ಗಳಿಗೆ  "ಶ್ರೀರುದ್ರಪ್ರಶ್ನಃ"ದಲ್ಲಿ ಬರುವ "ತಸ್ಮರಣಾಂ ಪತಯೇ ನಮಃ" ಎನ್ನುವ ಸಾಲಿನ ಅಸಲು ಅರ್ಥ ತಿಳಿದಿದಿಯೆ?  "ಕುಲಾಲೇಭ್ಯೋ ಕರ್ಮಾರೇಭ್ಯಶ್ಚವೋ ನಮಃ" ಎಂದರೇನು ಸ್ವಾಮಿ? "ಕಳ್ಳರ, ಪುಂಡರ ನಾಯಕ ಶಿಖಾಮಣಿಗೆ ದೊಡ್ಡ ನಮಸ್ಕಾರ" ಅಂತ ತಾನೆ? " ಕುಂಬಾರ, ಕಮ್ಮಾರರ ಕುಲದವನಿಗೆ ನಮಿಸುತ್ತೇವೆ" ಅಂತ ತಾನೆ ಅದರರ್ಥ. ವಸ್ತುಸ್ಥಿತಿ ಹೀಗಿರುವಾಗ ತಾವೂ ಅರಿಯದೆ ತಮ್ಮ ನಂಬಿಕೆಯ ಹೊತ್ತಿಗೆಗಳಲ್ಲಿಯೆ ಹುದುಗಿರುವ ಸಾಧಾರಗಳಿಗೂ ಕಿಮ್ಮತ್ತು ಕೊಡದ ಇವರದೆಂತಾ ಧರ್ಮ ಶ್ರದ್ಧೆ? "ನಾಸದೀಯ ಸೂಕ್ತ"ದ ಸಾಲೊಂದು ಇಲ್ಲಿ ಪ್ರಸ್ತುತ. "ಅಸ್ಯಾಧ್ಯಕ್ಷಃ ಪರಮವ್ಯೋಮನ್ ತ್ಸೋ ಅಂಗ ವೇದ, ಯದಿ ವಾ ನ ವೇದ!" ಅನ್ನುವುದಷ್ಟೆ ಇದಕ್ಕೆ ತೋರಬಹುದಾದ ಅನುಕಂಪ. ಅಂದರೆ "ಮೇಲಿನಿಂದ ಎಲ್ಲವನ್ನೂ ಕಾಣುತ್ತಿರುವ 'ಅವನಿಗೆ' ಇದೆಲ್ಲದರ ಅರಿವಿರಬಹುದು, ಅಥವಾ ಅವನಿಗೂ ಇದ್ಯಾವುದೂ ಗೊತ್ತಿಲ್ಲ!". ಅವನ ಪರಿಸ್ಥಿತಿಯೆ ಹೀಗಿರೋವಾಗ ಇದನ್ನರಿಯುವ ಆಸಕ್ತಿಯೆ ಇಲ್ಲದ ಅವನ ಅಂಧ ಅನುಯಾಯಿಗಳಣ್ಣ ದೂರಿ ಪ್ರಯೋಜನವಿಲ್ಲ ಬಿಡಿ.


ಹೌದು ಸ್ಥಾಪಿತ ನಂಬಿಕೆಗಳನ್ನ ಒಂದೆ ಏಟಿಗೆ ಬಲಿಕೊಡಲು ಸಾಧ್ಯವಿಲ್ಲ. ಹಾಗಂತ ತಾವು ತೋಳು ಮಡಚಿಕೊಳ್ಳುವುದರಲ್ಲಿ ಅರ್ಥವೂ ಇಲ್ಲ.  ತರ್ಕವನ್ನ ತರ್ಕದಿಂದಲೆ ಗೆಲ್ಲಬೇಕು. ಹಾಗೊಂದು ವೇಳೆ ಶಿಥಿಲವಾಗುವಂತಿದ್ದರೆ ಚಾರ್ವಾಕನಿಂದ ಹಿಡಿದು ಭಗವತಿಶರಣ ಉಪಾಧ್ಯಾಯ, ಇರಾವತಿ ಕರ್ವೆ, ಡಿ ಡಿ ಕೊಸಾಂಬಿ, ಎಸ್ ಆರ್ ಶರ್ಮಾ, ರೋಮಿಲಾ ಥಾಪರ್, ಎಸ್ ಎಲ್ ಭೈರಪ್ಪ, ದೇವಿಪ್ರಸಾದ್ ಚಟ್ಟೋಪಧ್ಯಾಯ ಮುಂತಾದವರ ಆಯ್ದ ಬರಹ ಅಥವಾ ಕೃತಿಗಳು ಇದಾಗಲೆ "ಹಿಂದೂ ಧರ್ಮ"ದ
ಚಟ್ಟ ಕಟ್ಟಿ ಅಗಿರುತ್ತಿತ್ತು. ಹಾಗೆಲ್ಲಾ ಮುರಿದು ಬೀಳಲು ಇದರ ಬೇರು ಅಷ್ಟು ಸಡಿಲವೂ ಅಲ್ಲ, ಬಿಳಲುಗಳು ಸೀಮಿತವೂ ಅಲ್ಲವಲ್ಲ. ಈ ವಿವೇಕ ಬೀದಿಗಿಳಿದು ಬೊಬ್ಬೆ ಹೊಡೆಯುವ ಮಡ್ದ ತಲೆಗಳಿಗೆ ಅರ್ಥವಾಗಬೇಕಷ್ಟೆ.


ಇನ್ನು ಈ ವಿವಾದ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿ ಕೊಳ್ಳಲು ಹೊರಟ ನಮ್ಮ ಮೂರು ಮತ್ತೊಬ್ಬ ಬುಡ್ಢಿಜೀವಿಗಳ ವರಾತದ ಬಗ್ಗೆ. "ಡುಂಢಿ" ಕೃತಿಯ ಮೇಲಿನ ತತ್ಕಾಲಿಕ ನಿಷೇಧವನ್ನ ಸ್ವತಃ ರಾಜ್ಯ ಸರಕಾರವೆ ಹೇರಿದೆ ಎನ್ನುವ ಹುಸಿ ವಾದವನ್ನ ಹುಟ್ಟಿಸಿದ ಈ ಮಂದಿ ಮುಖ್ಯಮಂತ್ರಿ ಸಿದ್ಧುವಿಗೆ "ನಿಮ್ಮ ಅವಧಿಯಲ್ಲಿ ಹೀಗಾಗುವುದಾ? ಶೇಮ್ ಶೇಮ್!" ಎನ್ನುವ ರೀತಿಯಲ್ಲಿ ಮಾಧ್ಯಮಗಳ ಮೂಲಕ ಛೀಮಾರಿ ಹಾಕಿದರು. ಈ ನಯವಂಚಕರ ನಾಟಕದಲ್ಲಿ ಕಾದಂಬರಿಗೆ ನಿಷೇಧ ಹೇರಿದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಹಿನ್ನೆಲೆಯಲ್ಲಿ ರಾಜ್ಯ ಉಚ್ಛ ನ್ಯಾಯಾಲಯವೆ ಹೊರತು ಸರಕಾರವಲ್ಲ ಎನ್ನುವ ನಿಜ ಈ ಬುದ್ಧಿಜೀವಿಗಳ ಬೃಹನ್ನಾಟಕಕ್ಕೆ ಬೆದರಿ ಮರೆಯಾಗಿ ಬಚಾವಾಯ್ತು! ಇನ್ನು ಹಿಂದೂ ಸಂಘಟನೆಯ ವ್ಯಕ್ತಿಯೊಬ್ಬರ ದೂರನ್ನಾಧರಿಸಿ ಕಲಾಸಿಪಾಳ್ಯದ ಪೊಲೀಸರು ಸಾಮಾಜಿಕ ಸಮರಸ್ಯವನ್ನ ಕದಡುವ ಹಾಗೂ ಸ್ವಸ್ಥ ಸಮಾಜದ ನೆಮ್ಮದಿಯನ್ನ ಬಿಗಡಾಯಿಸಲು ಪ್ರಚೋದಿಸುವ ಕೃತ್ಯದ ಆಧಾರದಲ್ಲಿ ಕೃತಿಕಾರ ಯೋಗೇಶ್ ಮಾಸ್ಟರ್ ಬಂಧನ ನಡೆಸಿದಾಗ ಮಾತ್ರ ಈ ಎಲ್ಲಾ ನಾಟಕ ಕ್ಲೈಮಾಕ್ಸ್ ಹಂತಕ್ಕೆ ಹೋಗಿ ಮುಟ್ಟಿತು. ನೇರವಾಗಿ ಮುಖ್ಯಮಂತ್ರಿಗಳನ್ನ ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡ ಜ್ಞಾನಪೀಠಿಯೊಬ್ಬರು ಸ್ವತಃ ಡಯಾಲಿಸಿಸ್'ನಲ್ಲಿದ್ದರೂ ಅಂದು ಮಾತ್ರ ಬಹುಸಂಖ್ಯಾತರ ಗೂಂಡಾಗಿರಿ(?)ಯ ಬಗ್ಗೆ ದೂರವಾಣಿಯಲ್ಲಿಯೆ ತಡೆಯಿಲ್ಲದೆ ಅನಂತವಾಗಿ ಮೂತ್ರಿಸಿದರು!


ಇನ್ನೊಬ್ಬ ನಿಸ್ಸೀಮ ನಟ ಪುಂಗ ಜ್ಞಾನಪೀಠಿಯೊಬ್ಬರಂತೂ ಮತಿಗೆಟ್ಟವರಂತೆ "ಬೇಕಾದ್ದದ್ದನ್ನು ಬರೆಯುವುದು ಕೃತಿಕಾರನ ವಯಕ್ತಿಕ ಸ್ವಾತಂತ್ರ್ಯ, ಬರಹವೆ ತನ್ನನ್ನು ತಾನು ಬರೆಸಿಕೊಳ್ಳುತ್ತದೆಯೆ ಹೊರತು ಇಲ್ಲಿ ಕೃತಿಕಾರನ ಪಾತ್ರ ಏನೂ ಇಲ್ಲ!" ಎನ್ನುವ ಬುರುಡೆಯನ್ನ ತಮ್ಮ ಎಂದಿನ ಬೋಳಾ ಶಂಕರನ ಮುಖಾರವಿಂದದಿಂದ ಉದುರಿಸಿಯೆ ಬಿಟ್ಟರು. "ಅಲ್ಲಾ ಸ್ವಾಮಿ ತಾನು ಏನನ್ನ ಮಾತನಾಡುತ್ತಿದ್ದೇನೆ ಎನ್ನುವ ಅರಿವಿಲ್ಲದ, ಎಲ್ಲಿ ಹೇಗೆ ವರ್ತಿಸುತ್ತಿದ್ದೇವೆ ಅನ್ನುವ ಖಬರಿಲ್ಲದ ಮಂದಿಯನ್ನ ನಾವು ಮತಿವಿಕಲರು ಎನ್ನುವುದಾದರೆ, ಹುಚ್ಚಾಪಟ್ಟೆ ಅದೇನನ್ನ ಬರೆಯುತ್ತಿದ್ದೇನೆ ಎನ್ನುವ ಅರಿವಿಟ್ಟುಕೊಳ್ಳದೆ ಪೆನ್ನು ಕಾಗದ ಎರಡು ಇದೆ ಅನ್ನುವ ಏಕೈಕ ಘನಂಧಾರಿ ಕಾರಣಕ್ಕೆ ಬೇಕಾಬಿಟ್ಟಿ ಬರೆಯುವ ಭಂಡರನ್ನೂ ಹಾಗೆಯೆ ಪರಿಗಣಿಸಬೇಕಲ್ಲ? ನೀವು ಹೇಳುವುದು ನೋಡಿದರೆ 'ಇಲ್ಲಾ ನೀವೆಲ್ಲಾ ತಪ್ಪಾಗಿ ಭಾವಿಸಿದ್ದೀರಿ ನಾಯಿ ತನ್ನ ಬಾಲವನ್ನ ಎಂದೂ ಆಡಿಸಲ್ಲ! ಬಾಲವೆ ನಾಯಿಯನ್ನ ಆಡಿಸುತ್ತದೆ' ಎನ್ನುವ ಪ್ಯಾಲಿ ಹೇಳಿಕೆ ಇದ್ದಂತಿದೆಯಲ್ಲ? ನಿತ್ಯ ನೀವು ಹೊಟ್ಟೆಗೆ ಅನ್ನವನ್ನೆ ತಿನ್ನುತ್ತೀರಲ್ಲ? ತಿನ್ನುವ ಅನ್ನ ಬಾಯಿಯ ಮೂಲಕವೆ ಹೊಟ್ಟೆ ಮುಟ್ಟುತ್ತದೆ ತಾನೆ?" ಎಂದು ಕ್ಯಾಕರಿಸಿ ಯಾರೂ ಅವರ ಹರಳೆಣ್ಣೆ ಮುಖಕ್ಕೆ ಉಗಿಯಲಿಲ್ಲ.


ಹಿಂದೂ ಮೂಲಭೂತವಾದ, ನೈತಿಕ ಪೊಲೀಸ್'ಗಿರಿ ಮುಂತಾದವನ್ನ ಆಗಾಗ ಪ್ರಶ್ನಿಸಿ ಮಾತನಾಡುವ ಹವ್ಯಾಸವಿರುವ ಕೆಲವು ಸುದ್ಧಿಜೀವಿಗಳು ಕೂಡ ಇಲ್ಲಿದ್ದಾರೆ. ಮೇಲಿನ ಬುದ್ದಿಜೀವಿಗಳ ಆಸ್ಥಾನ ವಿದೂಷಕರಿವರು. ಕಳೆದ ವರ್ಷ ತಲೆತಿರುಕ ನಿರ್ದೇಶಕನೊಬ್ಬ ಇಂಗ್ಲೀಷ್ ಭಾಷೆಯಲ್ಲಿ ಇಸ್ಲಾಂನ ಪ್ರವಾದಿ ಮಹಮದ್'ರನ್ನ ಬಹುಪಾಲು ಕೀಳಾಗಿ ಚಿತ್ರಿಸಿ ನಿರ್ದೇಶಿಸಿದ್ದ ಚಿತ್ರ "ಇನ್ನೋಸೆನ್ಸ್ ಆಫ್ ಮುಸ್ಲಿಂಸ್" ಚಿತ್ರ ತೆರೆ ಕಂಡಾಗ ಭಾರತವೂ ಸೇರಿ ಜಗತ್ತಿನಾದ್ಯಂತ ಅದರ ವಿರುದ್ಧ ಪ್ರತಿಭಟನೆಯ ಧ್ವನಿ ಎದ್ದಿತ್ತು. ಮತ್ತದು ವ್ಯಥಾ ಹಿಂಸಾಚಾರಕ್ಕೂ ತಿರುಗಿತ್ತು. ಆ ಚಿತ್ರವನ್ನ ನೋಡಿರುವುದು ಅತ್ತಲಾಗಿರಲಿ ಸರಿಯಾಗಿ ಅದರ ಹೆಸರನ್ನ ಉಚ್ಛರಿಸಲೂ ಆಗದ ಮೀಸೆ ಮೊಳೆತವರೆಲ್ಲ ಬೀದಿಗಿಳಿದು ಪ್ರತಿಭಟಿಸುವಾಗ ರಾಷ್ಟ್ರೀಯ ಸ್ಮಾರಕಕ್ಕೆ ಒದ್ದು ಅಪಮಾನಿಸಿದರು. ಬೆಂಕಿ ಹಚ್ಚಿ ಪುಡಿಗಟ್ಟಿ ಅನೇಕ ರಾಷ್ಟ್ರೀಯ ಸಾರ್ವಜನಿಕ ಆಸ್ತಿಗಳನ್ನ ಕ್ಷಣ ಮಾತ್ರದಲ್ಲಿ ಹಾಳುಗೆಡವಿದರು. ಪರಿಸ್ಥಿತಿ ಹೀಗೆಲ್ಲಾ ವಿಕೋಪಕ್ಕೆ ಹೋದರೂ ಈ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ( ಅಂದರೆ ಮುಸ್ಲೀಮರ ಅಂತ ಓದಿಕೊಳ್ಳಿ.) ಧಾರ್ಮಿಕ ಹಕ್ಕುಗಳ ವಿಚಾರದಲ್ಲಿ ಸ್ವಯಂ ಸ್ಪೂರ್ತಿಯಿಂದ ವಕಾಲತ್ತು ವಹಿಸಿಕೊಂಡು ಬರುವ ಯಾವೊಬ್ಬ ಜ್ಞಾನಪೀಠಿ ಬುದ್ಧಿಜೀವಿಯೂ ಈ ಬಗ್ಗೆ ತುಟಿ ಎರಡು ಮಾಡಲೆ ಇಲ್ಲ. ಅದೆ ಸ್ಥಾನದಲ್ಲಿ ಹಿಂದೂ ಗಲಭೆಕೋರರಿದ್ದರೆ ಅವರ ಪ್ರತಿಕ್ರಿಯೆಗಳು ಹೇಗಿರುತ್ತಿದ್ದವು ಅನ್ನೋದು ನಿಮ್ಮ ಊಹೆಗೆ ಬಿಟ್ಟಿದ್ದು.


"ಸಿನೆಮಾ ಸಹ ಸೃಜನಶೀಲ ಮಾಧ್ಯಮ, ಅದೂ ನಿರ್ದೇಶಕನ ಹಿಡಿತದಲ್ಲಿರಲ್ಲ! ತನ್ನಿಂದ ತಾನೆ ಅವನಿಂದ ಅದು ತನ್ನನ್ನು ನಿರ್ದೇಶಿಸಿಕೊಂಡು ಹೋಗುತ್ತದೆ?!" ಎಂದು ಅಂದು ನೀವೇಕೆ ಹೇಳಲಿಲ್ಲ ಸ್ವಾಮಿ? ಅಂತ ಅವರನ್ನ ಅಪ್ಪಿತಪ್ಪಿಯೂ ಕೇಳಲಿಕ್ಕೆ ಮಾತ್ರ ಹೋದೀರ ಹುಷಾರ್. ಅದೇ ಕ್ಷಣದಲ್ಲಿ ನಿಂತ ನಿಲುವಿನಲ್ಲಿಯೆ ನೀವು ಅದ್ಯಾರೆ ಆಗಿದ್ದರೂ ಸಹ ಅವರು ನಿಮಗೊಂದು "ರಡಿಮೇಡ್ ಚಡ್ಡಿ"ಯನ್ನ ಉಚಿತವಾಗಿ ದಯಪಾಲಿಸಿ ಶಾಶ್ವತವಾಗಿ ನಿಮ್ಮ ವಸ್ತ್ರ ಸಂಹಿತೆಯನ್ನೆ ಬದಲಿಸಿ ಬಿಡುತ್ತಾರೆ! ಮತ್ತು ನಿಮಗೆ ಚೂರೂ ಅರ್ಥವಾಗದ ತಲೆಬುಡಗಳಿಲ್ಲದ ತರ್ಕಗಳನ್ನ ದೊಡ್ಡ ಗಂಟಲಲ್ಲಿ ಮಂಡಿಸುತ್ತಾ ನಿಮ್ಮ ಕ್ಷೀಣ ಧ್ವನಿಯನ್ನ ಆ ಕೂಗು ಚಪ್ಪಡಿಯಡಿ ನಿರ್ದಯವಾಗಿ ಹೂತು ಮುಚ್ಚಿಯೂ ಬಿಡುತ್ತಾರೆ!


ಸೌಹಾರ್ದತೆ-ಸಮರಸ್ಯತೆ ಇವೆರಡು ಕೊಡು-ಕೊಳ್ಳುವಿಕೆಯ ವ್ಯವಹಾರಗಳು, ನೀವು ಬಹುಸಂಖ್ಯಾತರಿಂದ ಸಂಯಮವನ್ನ ನಿರೀಕ್ಷಿಸುವುದು ತಪ್ಪಲ್ಲ, ಆದರೆ ಅದೆ ನಿರೀಕ್ಷೆಯನ್ನ ಗೂಂಡಾ ವರ್ತನೆಗಿಳಿವ ಅಲ್ಪಸಂಖ್ಯಾತರಿಗೂ ಅಲ್ಪಸ್ವಲ್ಪವಾದರೂ ಬೋಧಿಸಿ  ಎಂದು ಆಗ ಇವರ ನಮ್ರ ಸಚಿವರಾದ ಸುದ್ದಿ ಜೀವಿಗಳೂ ಕಿವಿಮಾತು ಹೇಳುವುದಿಲ್ಲ. ಒಟ್ಟಿನಲ್ಲಿ ಇವರ ವ್ಯವಹಾರಗಳೇನಿದ್ದರೂ "ಹೌದು ಸಮರಸ್ಯ ಪರಸ್ಪರರ ಕೊಡು-ಕೊಳ್ಳುವಿಕೆಯ ವ್ಯವಹಾರಗಳು. ಬಹುಸಂಖ್ಯಾತ ಹಿಂದೂಗಳು ಅದನ್ನ ಯಾವಗಲೂ ಕೊಡಲಿ ಅಲ್ಪಸಂಖ್ಯಾತ ಮುಸ್ಲೀಮರು ಕೊನೆಯವರೆಗೂ ಕೊಳ್ಳುತ್ತಲೆ ಇರಲಿ!" ಎನ್ನುವ ದೇಶಾವರಿ ಮಟ್ಟದ್ದು. ಲಾಭವಿಲ್ಲದ ಕಡೆ ಇವರು ಪುಕ್ಕಟೆ ಪುಂಗಿಯೂದರು! ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ಕೊಟ್ಟಲ್ಲಿ ಹುಟ್ಟುವ ಲಾಭದ ಮಾತು ಅತ್ತಲಾಗಿರಲಿ, ಕಲ್ಲೇಟು ಉಚಿತವಾದೀತು ಎನ್ನುವ ಲೌಕಿಕದ ಅರಿವು ಅವರಿಗಿದ್ದೇ ಇದೆ.


ಇನ್ನು ಕೃತಿಯನ್ನ ಸಂಪೂರ್ಣ ಓದಿದರೂ ಸಹ ನನಗಿದರಲ್ಲಿ ವಿಮರ್ಶಿಸುವ ಮಟ್ಟಿಗಿನ ಅಂಶಗಳಿದಾವೆ ಅಂತ ಅನ್ನಿಸುತ್ತಿಲ್ಲ. ಸ್ವತಃ ಅದರ ಲೇಖಕರೆ ಹೇಳಿಕೊಂಡಂತೆ ಇದೊಂದು ಕಾದಂಬರಿಯಷ್ಟೆ ಸಂಶೋಧನಾ ಕೃತಿಯೇನಲ್ಲ. ಹೀಗಾಗಿ ನಮ್ಮ ನಂಬಿಕೆಯ ಗಣಪನನ್ನ ಹೊರತು ಪಡಿಸಿ ಓದಿದಾಗ ಇದು ಒಂದು ವಿಶೇಷ ಕೃತಿ ಅಂತೇನೂ ನನಗನ್ನಿಸಿಲ್ಲ.ಆದರೂ ಹಿಡಿಸಿದ ಒಂದು ಅಂಶವೆಂದರೆ ಇದೇ ರೀತಿ ಕನ್ನಡದಲ್ಲಿ ಈ ಮೊದಲೆ ಬಂದಿದ್ದ ಸರಿ ಸುಮಾರು ಸಮಾನ ಕಾಲಘಟ್ಟದ ಚಿತ್ರಣದ ಶಂಕರ ಮೊಕಾಶಿ ಪುಣೇಕರರ "ಅವಧೇಶ್ವರಿ", ನಾರಾಯಣಾಚಾರ್ಯರ "ಅಗಸ್ತ್ಯ", ಎಸ್ ಎಲ್ ಭೈರಪ್ಪರ "ಪರ್ವ" ಹಾಗೂ ಅದಕ್ಕಿಂತ ಚೂರು ಮುಂದಿನ ಕಾಲದ "ಸಾರ್ಥ", ಇರಾವತಿ ಕರ್ವೆಯವರ "ಯುಗಾಂತ", ದೇವುಡುರವರ "ಮಹಾ ಬ್ರಾಹ್ಮಣ" ಹಾಗೂ "ಮಹಾ ಕ್ಷತ್ರಿಯ" ಮುಂತಾದವುಗಳು ಕಥಾನಕಗಳಲ್ಲಿ ಶ್ರೇಣೀಕೃತ ವ್ಯವಸ್ಥೆಯ ತಲೆಯಿಂದ ದಿಟ್ಟಿಸಿದ್ದರೆ ಇಲ್ಲಿ ಬುಡದಿಂದ ದಿಟ್ಟಿಸುವ ಪ್ರಯತ್ನ ಮಾಡಲಾಗಿದೆ. ಕನ್ನಡಕ್ಕೆ ಇದು ಕೊಂಚ ಹೊಸತು.


ಆದರೂ ಅತಿ ಕಾಮಿ ಪಾತ್ರಗಳು, ಅಶ್ಲೀಲತೆಯ ಎಲ್ಲೆ ದಾಟುವ ವಿವರಣೆಗಳು, ಆಗಿನ ಕಾಲಘಟ್ಟದಲ್ಲಿ ಸಮ್ಮತವಾಗಿದ್ದಿರ ಬಹುದಾಗಿದ್ದರೂ ಸದ್ಯದ ದೇಶ-ಕಾಲ-ಮಾನಕ್ಕೆ ಹೊಂದದ ರಕ್ತ ಸಂಬಂಧಿಗಳ ನಡುವಿನ ಲೈಂಗಿಕ ವಾಂಛೆಯ  ವೈಭವೀಕರಣ ಕೃತಿಕಾರನ ಒಳಮನಸಿನ ವಿಕೃತಿಗೆ ನಿಸ್ಸಂಶಯವಾಗಿ ಕನ್ನಡಿ ಹಿಡಿಯುತ್ತವೆ. ಯೋಗೇಶ್ ಮಾಸ್ಟರ್'ರಿಗೆ ಒಂದು ಅತೃಪ್ತ ಮನಸಿದೆ ಅದು ಸದಾ ಮೇಲು ಜಾತಿ ಹಾಗೂ ಕೆಳಜಾತಿಯವರ ನಡುವಿನ ಸಮರಸ್ಯವನ್ನ ಅಂತರಾಳದಲ್ಲಿ ಸಹಿಸುವುದಿಲ್ಲ ಅನ್ನುವುದು ಇಡಿ ಕೃತಿಯಲ್ಲಿ ಸ್ಪಷ್ಟವಾಗುತ್ತಾ ಹೋಗುತ್ತದೆ. ಅಂತರ್ಜಾಲದ ಕೃಪೆಯಿಂದ ನೋಡಲು ಸಿಕ್ಕ ಅವರ ಬಹುತೇಕ "ಆತ್ಮರತಿ"ಯನ್ನ ಬಿಂಬಿಸುತ್ತಿದ್ದ ಭಾವಚಿತ್ರಗಳನ್ನ ನೋಡಿದ ಮೇಲೆ ಈ ಅನುಮಾನ ಇನ್ನಷ್ಟು ಗಟ್ಟಿಯಾಗಿದೆ. ಹೀಗಾಗಿ ಕೃತಿ ಹಾಗೂ ಕೃತಿಕಾರನ ಬಗ್ಗೆ ವ್ಯಥಾ ಬರೆದು ನನ್ನ ಶಕ್ತಿ ಹಾಗೂ ಸಮಯವನ್ನ ಖಂಡಿತ ಕ್ಷಯ ಮಾಡಿಕೊಳ್ಳಲಾರೆ.



ನಾವು ಒಂದು ಆದರ್ಶದ ಕಲ್ಪನೆಯ ಸಮಾಜದಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಆಸ್ತಿಕ ಮನಸುಗಳೂ ಇವೆ. ಅವರಿಗೆ ಖಂಡಿತ ಅವರ ನಂಬುಗೆಗೆ ಹೊರತಾದ ಇಂತಹ ಕೊಡಲಿ ಪೆಟ್ಟುಗಳು ಸಹಜವಾಗಿ ಅಘಾತ ಹುಟ್ಟಿಸುತ್ತವೆ. ಇದನ್ನ ನಾವು ಗೌರವಿಸೋಣ. ಆಲ್ಲದೆ ನೆನ್ನೆಯ ಅನುಭವದಿಂದ ತಪ್ಪಾಗಿ ಕಂಡದ್ದನ್ನ ಇಂದು ಆಚರಣೆಯಲ್ಲಿ ಸರಿಪಡಿಸಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಹೀಗಿದ್ದರೂ ನಾವು ಹಳೆಯ ಅನಾಗರೀಕತೆಯನ್ನೆ ಹಾಡಿ ಹೊಗಳುತ್ತೇವೆ ಅಂದರೆ ಮುಂದಿನ ಜನಾಂಗಕ್ಕೆ ಒಂದು ಸರಳ ಆದರ್ಶದ ನಿದರ್ಶನಗಳು ಇಲ್ಲದೆ ಎಲ್ಲರೂ ಮಾನಸಿಕವಾಗಿ ಸಂಸ್ಕಾರ ಹೀನರಾಗಿ ದಿವಾಳಿಯೆದ್ದಾರು. "ಅರ್ಬುತನೆಂಬ ಹುಬ್ಬುಲಿ ಪುಣ್ಯಕೋಟಿಯೆಂಬ ದನದ ಜೊತೆ ಕನ್ನಡದಲ್ಲಿ ಮಾತನಾಡಿತು!" ಎನ್ನುವುದನ್ನ ಮಗುವೊಂದು ನಂಬಿದರೆ ಅದರಲ್ಲಿ ತಪ್ಪೇನಿಲ್ಲ. ಆ ಮೂಲಕ ಅದರ ಮನಸಿನಲ್ಲೂ ಕ್ಷಮೆ ಹಾಗೂ ಔದಾರ್ಯದ ಬೀಜ ಮೊಳಕೆಯೊಡೆಯುತ್ತದೆ. ಅದೇ ಮಗು ಬೆಳೆದು ದೊಡ್ಡದಾದ ಮೇಲೆ ಬೇಕಾದರೆ "ಹೌದಲ್ಲಾ! ಹಸಿದ ಹುಲಿಯೊಂದು ಮಾಂಸ ತಿನ್ನದೆ ಹುಲ್ಲು ತಿನ್ನಲಿಕ್ಕೆ ಆಗುತ್ತದಾ? ಅದರಲ್ಲೂ ನಿಸರ್ಗ ಸಹಜವಾದ ಹಸಿವಿಗೆ ಅನ್ನ ಹುಡುಕಿಕೊಳ್ಳದೆ, ತಾನು ಮಾಡದ ತಪ್ಪಿಗೆ ಬಂಡೆಯನ್ನೇರಿ ಆತ್ಮಹತ್ಯೆ ಮಾಡಿಕೊಳ್ಳುವ ಮಡೆಯನಾಗುವುದಾದರೂ ಹೇಗೆ?" ಎನ್ನುವ ತರ್ಕ ಬುದ್ಧಿಯನ್ನ ಬೆಳೆಸಿಕೊಳ್ಳಲಿ. ಆದರೆ ಅದನ್ನ ಅದರ ತಲೆಯಲ್ಲಿ ಇದೀಗಲೆ ತುರುಕಿ ಮುಂಬರುವ ಜನಾಂಗವನ್ನೂ ನಮ್ಮ ಸಣ್ಣ ಬುದ್ಧಿಯ ಬಲಿಪಶುಗಳನ್ನಾಗಿ ಮಾಡಿ ಅವರಲ್ಲಿ ಜೀವನ ಬದ್ಧತೆಯನ್ನ ಹಾಳುಗೆಡಹುವ ಮನೆಹಾಳು ಬುದ್ಧಿ ನಮಗೇಕೆ?

No comments: