26 September 2013

ಇನ್ನು ಮುಂದೆ ಇದು ಅಧಿಕೃತ.......

ಈ ಬಾರಿ ವಿಧಾನಸಭೆ ಚುನಾವಣೆ ನಡೆದಿದ್ದಾಗ ನಾನು "ನಿರಾಕರಣೆಯ ಮತ"ವನ್ನ ಚಲಾಯಿಸಿದ್ದೆ. ನಾನು ವಾಸಿಸುವ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾ ಪ್ರತಿನಿಧಿಗಳಾಗಲು ಬಯಸಿ ಉಮೇದುವಾರರಾಗಿದ್ದವರಲ್ಲಿ ಯಾರೊಬ್ಬರೂ ಅಪ್ಪಂತವರು ಅಂತ ನನಗೆ ಅನ್ನಿಸಿರಲೆ ಇಲ್ಲ.


"ಕೈ"ಪಕ್ಷ ಉದ್ಯಮಿಯೊಬ್ಬರನ್ನ ಕಣಕ್ಕಿಳಿಸಿತ್ತು. ಆತ ಹೋಲಿಕೆಯಲ್ಲಿ ಇನ್ನೆಲ್ಲರಿಗಿಂತ ಸಭ್ಯರಾಗಿದ್ದರೂ ನನ್ನ ಮತ ದೇಶ ದೋಚುವ ದುರುಳರ ಪಕ್ಷದ ಪಾಲಾಗಿಸಲು ನನಗೆ ಮನಸಾಗಲಿಲ್ಲ. "ಹೂ" ಪಕ್ಷದವರು ಸೀಮೆ ಎಣ್ಣೆ ಮುಖದ ಪಕ್ಷಾಂತರಿಯೊಬ್ಬನನ್ನ ಇನ್ಯಾರೂ ಗತಿಯಿಲ್ಲದೆ ಕಣಕ್ಕಿಳಿಸಿದ್ದರು, ಅವರ ದಶಾವತಾರಗಳನ್ನ ಕಳೆದ ಐದು ವರ್ಷಗಳಲ್ಲಿ ಕಂಡು ರೋಸಿ ಹೋಗಿದ್ದವ ಖಂಡಿತಾ ಆ ಅಯೋಗ್ಯರಿಗೆ ನನ್ನ ಮತವನ್ನ "ದಾನ" ಮಾಡುವ ಮನಸ್ಥಿತಿಯಲ್ಲೂ ಇರಲಿಲ್ಲ. ಇನ್ನು ಹೆಸರಿಗೂ ಇಲ್ಲದ ಹೆಂಗಸೊಬ್ಬಳನ್ನ "ತೆನೆ ಹೊರೆಸಿ" ನಿಲ್ಲಿಸಿದ ಪಕ್ಷದವರನ್ನ ಕುರಿತು, ಕಂಡಕಂಡವರಿಗೆಲ್ಲ "ಫ್ಯಾನ್" ಗಾಳಿ ಬೀಸಿ ಮತ ಬೇಡುತ್ತಿದ್ದ "ಗಣಿಕಳ್ಳ"ರ ಅಕ್ರಮ ಸಂತಾನಗಳ ಬಗ್ಗೆ ಹಾಗೂ ರಾಜ್ಯದ ಜನತೆಯ ನಡುನೆತ್ತಿಗೆ ಈಡು "ಕಾಯಿ" ಒಡೆಯುವ ಹುನ್ನಾರದಲ್ಲಿದ್ದ ಹರಾಮರ ಬಗ್ಗೆ ಆದಷ್ಟು ಕಡಿಮೆ ಮಾತನಾಡುವುದೆ ಒಳ್ಳೆಯದು.


ಹೀಗಾಗಿ ನಾನು ನಿಯಮ 49 O ರ ಪ್ರಕಾರ ಇದ್ದ ನಿರಾಕರಣೆಯ ಮತವನ್ನ ಚಲಾಯಿಸಿದ್ದೆ. ಅಂದರೆ ನನ್ನ ಹಾಗೆ ಸರತಿಯ ಸಾಲಿನಲ್ಲಿ ನಿಂತು, ಮತದಾರನ ಗುರುತಿನ ಚೀಟಿ ತೋರಿಸಿ ಮತ ಪೆಟ್ಟಿಗೆಯ ಬಳಿ ಹೋಗದೆ ಇವರೆಲ್ಲರನ್ನೂ ತಿರಸ್ಕರಿಸಿ, ಅದನ್ನಲ್ಲೆ ಘೋಷಿಸಿ ಬೆರಳಂಚಿಗೆ ಶಾಯಿ ಹಚ್ಚಿಸಿಕೊಂಡು ಬರುವವರ ಸಂಖ್ಯೆ ಗೆದ್ದ ಅಭ್ಯರ್ಥಿ ಪಡೆದ ಒಟ್ಟು ಮತಗಳಿಗಿಂತ ಹೆಚ್ಚಾಗಿದ್ದ ಪಕ್ಷದಲ್ಲಿ ಆ ಕ್ಷೇತ್ರದಲ್ಲಿ ಮರುಮತದಾನ ನಡೆಯಬೇಕಿತ್ತು! ಈ ಅವಕಾಶ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೇ ಜಾರಿಯಲ್ಲಿದ್ದರೂ ಯಾವೊಬ್ಬ ರಾಜಕೀಯ ಪಕ್ಷಗಳೂ ಈ ಕುರಿತು ಮತದಾರರಿಗೆ ಅರಿವು ಮೂಡಿಸುವುದಿಲ್ಲ. ರಾಜಕೀಯ ಪಕ್ಷಗಳು ಅತ್ತಲಾಗಿರಲಿ "ಚುನಾವಣಾ ಆಯೋಗ"ದಂತಹ ಸ್ವಾಯುತ್ತ ಸಂಸ್ಥೆಗಳಿಗೇನಾಗಿದೆ ರೋಗ? ಈ ಅರಿವನ್ನ ಹೆಚ್ಚಿಸುವಲ್ಲಿ ಆ ಸಾಂವಿಧಾನಿಕ ಸಂಸ್ಥೆಯದ್ದೂ ಕಡು ಮೌನ.


ನಾನು ಹೋಗಿದ್ದ ಮತಗಟ್ಟೆಯ ಉಸ್ತುವಾರಿ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಅಥವಾ ಅರಿವು ಇದ್ದಿರಲಿಲ್ಲ ಎಂದರೆ ಊಹಿಸಿ ಅಧ್ವಾನವನ್ನ. ನನ್ನ ಮತಗಟ್ಟೆಯಲ್ಲಿ ಹೀಗೆ ನಿರಾಕರಿಸಿದ್ದವ ನಾನೊಬ್ಬನೆ ಅನ್ನುವುದು ಸಂಜೆ ಖಚಿತ ಪಡಿಸಿಕೊಂಡೆ. ಬಹುಷಃ ಇಡಿ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಾನೊಬ್ಬನೆ ಹೀಗೆ "ನೇರದಾರಿ" ಹಿಡಿದಿದ್ದೆ.

ಇವತ್ತು ದೇಶದ ಸರ್ವೋಚ್ಛ ನ್ಯಾಯಾಲಯ ವಕೀಲ ಸಂಜಯ್ ಪಾರೇಖ್ ಅನ್ನುವವರು ಈ ಸಂಬಂಧ ಸಲ್ಲಿಸಿದ್ದ "ಸಾರ್ವಜನಿಕ ಹಿತಾಸಕ್ತಿಯ ಅರ್ಜಿ"ಯೊಂದನ್ನ ವಿಚಾರಣೆಗೆ ಎತ್ತಿಕೊಂಡು ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಅಧಿಕೃತವಾಗಿ "ನಿರಾಕರಣೆಯ ಮತ"ಗಳಿಗೂ ಮತ ಯಂತ್ರದಲ್ಲಿ ಸ್ಥಾನ ಕಲ್ಪಿಸಲು ಆದೇಶ ಹೊರಡಿಸಿದೆ. ಅಂದರೆ ಈವರೆಗೆ ಬಹಿರಂಗವಾಗಿ ಘೋಷಿಸುತ್ತಿದ್ದ ಬದಲು ಇನ್ನುಮುಂದೆ ಸಕಾರಾತ್ಮಕವಾಗಿ ಗುಪ್ತ ಮತದಾನದಂತೆಯೆ ಗುಪ್ತ ನಿರಾಕರಣೆಯನ್ನ ಮಾಡಬಹುದು. ಇನ್ನು ಮುಂದೆ ನಾವು ನೀವೆಲ್ಲರೂ ಯಾವೊಬ್ಬ ಅಭ್ಯರ್ಥಿಯೂ ಸೂಕ್ತರಲ್ಲ ನಮ್ಮನ್ನ ಪ್ರತಿನಿಧಿಸಲು ಎಂದೆನ್ನಿಸಿದರೆ ಅದನ್ನ ನಿರಾಕರಣೆಯ ಮತದ ಗುಂಡಿಯನ್ನ ಒತ್ತುವುದರ ಮೂಲಕ ದಾಖಲಿಸಬಹುದು. ಇದೊಂದು ಮೈಗಲ್ಲಿನಂತಹ ಐತಿಹಾಸಿಕ ತೀರ್ಪು. ಕಡೆಗೂ ನನಗನ್ನಿಸಿದ್ದು ದೇಶದ ನ್ಯಾಯಾಂಗ ವ್ಯವಸ್ಥೆಯ ಅಧಿಕೃತ ಸಮ್ಮತಿ ಗಿಟ್ಟಿಸಿದೆ. 

No comments: