15 September 2013

ನ್ಯಾಯ ಬೇಕಾದರೆ ಅತ್ಯಾಚಾರಗಳು ಇನ್ನು ಮುಂದೆ ರಾಜಧಾನಿಯಲ್ಲೆ ಘಟಿಸಲಿ...."ನಿರ್ಭಯಾ" ಅತ್ಯಾಚಾರಿಗಳಿಗೆ ಕೊಲೆಯ ಕಾರಣಕ್ಕೆ ವಿಧಿಸಿದ ಮರಣದಂಡನೆ ಪ್ರಕಟವಾಗಿದೆ. ನಿಧಾನ ಗತಿಗೆ ಕುಖ್ಯಾತವಾದ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೊಂದು ತ್ವರಿತ ಗತಿಯಲ್ಲಿ ಗತಿ ಕಂಡ ಖ್ಯಾತ ಪ್ರಕರಣ. ಆದರೆ ಕೇವಲ ಮರಣದಂಡನೆ ಇದಕ್ಕೆ ಚಿಕಿತ್ಸೆಯ?. ಸೊಂಕಿನ ಮೂಲವನ್ನ ಹಾಗೆಯೆ ಬಿಟ್ಟು ಹೀಗೆ ಅನಂತರದ ಚಿಕಿತ್ಸೆಯ, ಆರೈಕೆಯ ಚರ್ಚೆ ಮಾಡುವುದೆ ಮೂರ್ಖತನ.


ಸುಮ್ನೆ XXX ಅಂತ ಟೈಪಿಸಿದರೂ ಸಾಕು, ಬಿಳಿ ತೊಗಲಿನ ಸಾವಿರಾರು ಕಾಮ ವಿಕಾರದ ಸೈಟುಗಳು ಕ್ಷಣದಲ್ಲಿ ಪರದೆಯ ಮೇಲೆ ಪ್ರತ್ಯಕ್ಷವಾಗುವ ದಿನಗಳಿವು. ಇಲ್ಲಿ ಪ್ರದೇಶವಾರು ಕಲಾವಿದ(?)ರ ಆಯ್ಕೆಯೂ ಇದೆ! ವೈವಿಧ್ಯಮಯ ಕಾಮದಾಟದ ಕ್ರೀಡಾಪಟುಗಳು(?!) ಲಿಂಗ-ಭಾಷೆ-ವಯಸ್ಸಿನ ಬೇಧ ತೋರದೆ ಇಲ್ಲಿ ನಿರಂತರ ಪ್ರಣಯದಾಟದ ಕಂಡು ಕೇಳರಿಯದ ದೊಂಬರಾಟ ಆಡುವುದನ್ನ ಬೆಚ್ಚಗೆ ಬೆಡ್'ರೂಮಿನಲ್ಲಿಯೆ ಕೂತು ಕಾಮಾತುರರಾಗಿ ಕಾಣುವ ಸುವರ್ಣಾವಕಾಶವನ್ನ ನಮ್ಮ ಸರಕಾರಿ ನೀತಿಗಳೆ ನಮಗೆ ಒದಗಿಸಿಕೊಟ್ಟಿವೆ. ಇಷ್ಟೆಲ್ಲಾ ಅನುಕೂಲ ಇರುವಾಗ ಯುವ ಮನಸ್ಸೊಂದು ಆರಾಮಾಗಿ ವಿಕೃತ ಉಮೇಶ್ ರೆಡ್ಡಿಯಂತಾಗದೆ ವಿವೇಕಾನಂದರ ಅಪರಾವತಾರ ಆಗಲಿಕ್ಕೆ ಸಾಧ್ಯವ?


ಮೃಗೀಯ ಕಾಮದ ಎಲ್ಲಾ ಸಾಧ್ಯತೆಗಳನ್ನ ಕೇವಲ ಬೆರಳ ತುದಿಯಷ್ಟು ದೂರದಲ್ಲಿಟ್ಟುಕೊಂಡು "ಅವಳ ಗುಪ್ತಾಂಗಕ್ಕೆ ಅಯ್ಯಯ್ಯೋ ರಾಡ್ ಹಾಕಿ ತಿರುಗಿಸಿದ ಪಶು!" ಅಂತ ಲೊಚಗುಟ್ಟುವ ನಮ್ಮದು ಆಶಾಡಭೂತಿ ನಡುವಳಿಕೆ. ರಾಡ್ ಒಂದೆ ಅಲ್ಲ ಇನ್ನೂ ಊಹೆಗೂ ನಿಲುಕದ ಏನೆನನ್ನೋ ಹಾಕಿ ವಿಕೃತ ಕಾಮ ಪಾಠವನ್ನ ಕಲಿಸುವ ಇಂತಹ ಸೈಟುಗಳಲ್ಲಿ ಕದ್ದು "ನೋಡಿ ಕಲಿ"ತವರು ಅವಕಾಶ ಸಿಕ್ಕಾಗ ಅದನ್ನೆ ಪ್ರಯೋಗಾತ್ಮಕ(!)ವಾಗಿ "ಮಾಡಿ ನಲಿ"ವ ಸಾಹಸಕ್ಕಿಳಿದಾಗ ಮಾತ್ರ ನಮ್ಮಲ್ಲಿರುವ ಮಡಿವಂತ ಮಾನವ ಇದ್ದಕ್ಕಿದ್ದಂತೆ ಜೀವಂತನಾಗುತ್ತಾನೆ! 
ಮೊದಲು ರೋಗ ಮೂಲಕ್ಕೆ ಮದ್ದರೆಯುವ ಆಮೇಲೆ ಸಾಂಕ್ರಾಮಿಕವಾಗಿ ಅದು ಹರಡುವುದನ್ನ ನಿಯಂತ್ರಿಸಿದರಾಯಿತು. ಅದರ ಹೊರತು ಕೇವಲ ತೋರಿಕೆಗೆ ಲೊಚಗುಟ್ಟಿದರೆ ನಯಾ ಪೈಸೆಯ ಬದಲಾವಣೆ ಸಾಧಿಸಲಿಕ್ಕೆ ಸಾಧ್ಯವಾಗದು. ಮರಣ ದಂಡನೆ ಒಂದು ಪರಿಹಾರ ಅಂದುಕೊಳ್ಳೋದೆ ಪರಮ ಮೂರ್ಖತನ. ಖಂಡಿತವಾಗಿಯೂ ಆಶಾವಾದ ಇರಲಿ ಅಡ್ಡಿಯಿಲ್ಲ, ಆದರೆ ವಾಸ್ತವವಾದವನ್ನೂ ಇಷ್ಟು ಅರಿಯೋಣ. ಈಗ ನಿರ್ಭಯಾ ಪ್ರಕರಣದ ಕುರಿತು ಹೇಳುವುದಾದರೆ ಸೆಷನ್ಸ್ ನ್ಯಾಯಾಧೀಶರು ಅತ್ಯಪರೂಪದ ಪ್ರಕರಣವೆಂದು ಇದನ್ನ ಪರಿಗಣಿಸಿದ್ದರೂ "ಮರಣ ದಂಡನೆ"ಯನ್ನ ವಿಧಿಸಲು ಸೂಕ್ತ ಅವಕಾಶವಿರುವ ಹಾಗೆ ಸಂತ್ರಸ್ತೆ ಪ್ರಕರಣದ ಕೆಲವು ದಿನಗಳ ನಂತರ ಸತ್ತದ್ದು ಹಾಗೂ ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಆಪರಾಧ ಸಾಬೀತಾದಲ್ಲಿ ಸೆಕ್ಷನ್ ೩೦೨ ಆನ್ವಯಿಸಬಹುದಾಗಿದೆ ಅನ್ನುವುದನ್ನ ಪರಿಗಣಿಸಿದ್ದಾರೆ ಆನ್ನುವುದು ಮರೆಯಲಾಗದು. ಇದನ್ನ ಅವರ ಸುದೀರ್ಘ ತೀರ್ಪಿನ ಉಲ್ಲೇಖದಲ್ಲೂ ಕಾಣಬಹುದಾಗಿದೆ. ಅಂದರೆ ಕೊಲೆ ಯತ್ನ ಹಾಗೂ ಕೊಲೆಯಂತಹ ಹೀನ ಕೃತ್ಯಗಳಿಗೆ ಮರಣ ದಂಡನೆ ಈಗಾಗಲೆ ಇತ್ತು ಅಂತಾಯ್ತಲ್ಲ? ಪ್ರಕರಣದ ತ್ವರಿತ ವಿಚಾರಣೆಗೆ ಮಾತ್ರ  ಈ "ಅತ್ಯಪರೂಪದ ಪ್ರಕರಣ"ದ ಠಸ್ಸೆ ಸೀಮಿತವಾಗಿತ್ತು ಹೊರತು ಶಿಕ್ಷೆಗಲ್ಲ ಅನ್ನುವುದು ಸ್ಪಷ್ಟವಾದಂತಾಯಿತು. ಇದು ತೀರ್ಪಿನ ತಾಂತ್ರಿಕ ಅಂಶ.ಇನ್ನು ಅಸಲು ಅಶಾವಾದದ ವಿಷಯಕ್ಕೆ ಬರೋಣ. ಈ ಜ್ಯೇಷ್ಠ ಪ್ರಮಾಣದ ಶಿಕ್ಷೆ ಮೊದಲೆ ಇದೆ ಅನ್ನುವ ಅರಿವಿದ್ದರೂ ಸಹ ನಮ್ಮಲ್ಲಿ ಕೊಲೆ ಅಥವಾ ಕೊಲೆ ಯತ್ನದ ಅತ್ಯಾಚಾರಗಳು ಕಡಿಮೆಯಾಗಿದ್ದಾವ? ಇಲ್ಲವಲ್ಲ! ಮುಂದೆಯೂ ಹೀಗೆಯೆ. ಅಗುವ ಕೊಲೆಗಳು ಆಗುತ್ತಲೆ ಇರ್ತವೆ. ಪ್ರಚಾರ ಸಿಕ್ಕವಕ್ಕಷ್ಟೆ ನ್ಯಾಯದ ಬಾಗಿಲು ತೆರೆದಿರುತ್ತದೆಯೆ ಹೊರತು ಅಜ್ಞಾತ ಆಥವಾ ಪಟ್ಟಭದ್ರರ ಅಶೋತ್ತರಗಳಿಗೆ ಹಿತಾಸಕ್ತಿಗಳಿಗೆ ಬಲಿಯಾಗುವ ಅನೇಕ ಪ್ರಕರಣಗಳಿಗೆ ಸೂಕ್ತ ಪ್ರಚಾರ ಸಿಗದೆ ಅವು ಲಂಚ ಹಾಗೂ ಮಂಚದ ಮರೆಯಲ್ಲಿಯೆ ಮುಚ್ಚಿ ಹೋಗುತ್ತವೆ. 
ಉದಾಹರಣೆಗೆ ಹೊಸತಾಗಿ ಅತ್ಯಾಚಾರ ಪ್ರಕರಣಗಳಿಗೆ ಆನ್ವಯಿಸುವ ಕಾನೂನನ್ನ ಸಂಸತ್ತು ರೂಪಿಸಲು ನಿರ್ಧರಿಸುವ ಹೊತ್ತಿಗೆ ನಮ್ಮ ನೆರೆಯ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಹದಿ ಹರೆಯದ ವಿದ್ಯಾರ್ಥಿನಿ ಸೌಜನ್ಯಾ ಗೌಡಳ ಅತ್ಯಾಚಾರ ಸಹಿತ ಕೊಲೆಯಾಗಿದೆ. ದೆಹಲಿಯಲ್ಲಿ ರಾಡ್ ಹಾಕಿ ಮರ್ಮಾಂಗದಲ್ಲಿ ಸೌಟಿನಂತೆ ಆಡಿಸಿದ್ದರೆ ಇಲ್ಲಿ ವಿಕೃತ ಕಾಮುಕರು ಸೌಜನ್ಯಳ ಗುಪ್ತಾಂಗವನ್ನ ಸಿಗರೇಟಿನ ಕೆಂಡದಿಂದ ಸುಟ್ಟು ಹಿಂಸಿಸಿದ್ದರು.
 ಈಗ ಮಾಹಿತಿ ಹಕ್ಕಿನಲ್ಲಿ ಅದರ ವ್ಯಾಪ್ತಿ ಬರುವ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ "ಇಲ್ಲಾ! ನಮ್ಮ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಅಂತಹ ಯಾವುದೆ ಅತ್ಯಾಚಾರ ಅಥವಾ ಕೊಲೆ ಪ್ರಕರಣ ನಡೆದಿಲ್ಲ ಹಾಗೂ ಆ ಕುರಿತ ಯಾವುದೆ ದೂರು ದಾಖಲಾಗಿಯೆ ಇಲ್ಲ" ಎನ್ನುವ ಲಿಖಿತ ಉತ್ತರ ಅಲ್ಲಿನ ಠಾಣಾಧಿಕಾರಿಯಿಂದ ಬಂತು?! ನಾನು ಪ್ರಯತ್ನಿಸಿ ನೋಡಿದಾಗ ಬಂದ ಫಲಿತಾಂಶ ಇದು. ನೀವೊಮ್ಮೆ ಯತ್ನಿಸಿ ನೋಡಬಹುದು. ಇರುವ ಕಾನೂನನ್ನ ಹೀಗೆ ತಿರುಚುವ ರೊಕ್ಕಸ್ಥರು ಹಾಗೂ ದೇವರ ದಲ್ಲಾಳಿಗಳ ಗೆಟಪ್ಪಿನ ಪ್ರಭಾವಿಗಳು ಇರುವ ತನಕ ಯಾರಿಗೆ ತಾನೆ ಭಯ ಮೂಡುತ್ತೆ? ಯಾರಲ್ಲಿ ತಾನೆ ಭಯ ಉಳಿಯುತ್ತೆ? ಏನನ್ನದರೂ, ಯಾರನ್ನಾದರೂ ಖರೀದಿಸುವುದು ಸಾಧ್ಯವಾಗಿರುವಾಗ ಯಾತಕ್ಕೆ ತಾನೆ ಯಾರಾದರೂ ಕಾನೂನಿಗೆ ಹೆದರಿಯಾರು?


ಪ್ರಾಮಾಣಿಕವಾಗಿ ಹೇಲಬೇಕೆಂದರೆ ಈಗ ಆಗಬೇಕಿರುವುದು ಕಾನೂನಿನ ತ್ವರಿತ ಮಾರ್ಪಾಡಲ್ಲ, ಈಗಲೆ ಸುರಕ್ಷಿತ ಪರಿಣಾಮಕಾರಿ ಕಾನೂನುಗಳಿವೆ ನಮ್ಮ ಅಪರಾಧ ಹಾಗೂ ದಂಡ ಸಂಹಿತೆಯ ಹೊತ್ತಗೆಯಲ್ಲಿ. ಆದರೆ ಆಗುವ ಹೀನಾತಿಹೀನ ಬೀಭತ್ಸ ಅಪರಾಧಗಳಿಗೆ ಅವನ್ನ ಅನ್ವಯಿಸುವ ಶಿಸ್ತಿನ ವ್ಯವಸ್ಥೆಯೊಂದು ರೂಢಿಗೆ ಬರಬೇಕಷ್ಟೆ. ಅಲ್ಲದೆ ಮಾಡುವ ಹೊಸ ಮಾರ್ಪಾಡನ್ನೂ ತಿರುಚಲಾಗದು ಎನ್ನುವುದಕ್ಕೆ ಯಾವ ಖಾತ್ರಿಯಿದೆ ಹೇಳಿ?

No comments: