30 September 2013

ಸಂಕೋಚದ ಮುದ್ದೆ ಮನ, ಜೊತೆಗಿಷ್ಟು ಮುನಿಸೂ ಇದೆ ನಿನ್ನ ನಿರ್ಲಕ್ಷ್ಯದ ಮೇಲೆ.....




ಕ್ಷಣ ಕರಗಿ ಘಳಿಗೆ ಜರುಗಿ ದಿನ ಉರುಳಿ
ವಾರ ಬರಿದಾಗಿ ಪಕ್ಷ ಪಲ್ಲಟವಾಗಿ....
ಮಾಸ ಮೌನವಾಗಿ ಋತು ಮುಳುಗಿ ಸಂವತ್ಸರ ಸರಿದು ಹೋದರೂನೂ
ನಾನಿನ್ನೂ ನೀ ಬಿಟ್ಟು ಹೋದಲ್ಲೇ ಸ್ತಬ್ಧ,
ಅರಿವಿದೆ ನನಗೆ ಕಳೆದು ಹೋದ ಕ್ಷಣಗಳು ಮತ್ತೆಂದೂ ಮರಳಿ ಸಿಗಲಾರವು
ಅಂತೆಯೆ ಕಳೆದು ಹೋದ ಜನಗಳೂ ಸಹ.......
ಆದರೇನು ಮಾಡಲಿ?
ಶುರುವಾದಲ್ಲೆ ಮರಳಿ ಕೊನೆಯಾಗುವ ಕನಸಿನ ವೃತ್ತದೊಳಗೆ
ಬದುಕಿನ ನನ್ನ ನಿರೀಕ್ಷೆಗಳೆಲ್ಲ ಸದಾ ಬಂಧಿ/
ತನ್ಮಯವಾಗಿ ಬಿಡಿಸಿದ ಚಂದದ ಚಿತ್ರದ ಮೇಲೆ
ಮಸಿ ಚೆಲ್ಲಿ ಮೌನವಾದಂತೆ ನೀನು ಹೊರಟು ಹೋದರೂ....
ನಾ ಮಾತ್ರ ಕರಿಯನ್ನ ಇನ್ನೂ ತೊಳೆದುಕೊಳ್ಲದೆ
ಅಲ್ಲೆ ನಿಂತು ತಿರುಗಿ ಬಾರದ ನಿನ್ನ ಹಾದಿಯನ್ನೆ ಕನವರಿಸಿ ಕಾಯುತ್ತಾ ಕಲ್ಲಾಗಿದ್ದೇನೆ,
ಜಗತ್ತೆಲ್ಲ ತೂಕಡಿಸುವ ಹೊತ್ತಲಿ
ನನ್ನ ಕುರುಡು ಕನಸುಗಳು ಮಾತ್ರ ನಿದ್ರೆಯಲ್ಲಿ ತಡೆಯಿಲ್ಲದೆ
ನಡೆಯುತ್ತವೆ ನಿನ್ನ ನೆನಪಿನ ಮತ್ತಲಿ.//



ತೂಕಡಿಸುವ ಸ್ವಪ್ನಗಳನ್ನೆಲ್ಲ ತಟ್ಟಿ
ನೆಮ್ಮದಿಯ ತೊಟ್ಟಿಲನ್ನ ಮೆಲುವಾಗಿ ತೂಗಿ ತೂಗಿ.....
ಮಲಗಿಸುವ ಮೌನದ ಕಣ್ಣಲ್ಲಿ ನೋವಿನದ್ದೋ - ನಲಿವಿನದ್ದೋ
ಕೇವಲ ನಾಲ್ಕೇ ನಾಲ್ಕು ಕಂಬನಿಯ ಹನಿಗಳಿವೆ,
ಹಡೆದ ಕನಸ ಕೂಸುಗಳೆಲ್ಲ
ಬಾಲಗ್ರಹ ಪೀಡೆಗೊಳಗಾಗಿ ಅಕಾಲಿಕ ಮೃತ್ಯುಗೀಡಾದರೆ....
ಮಾತೃ ಮನಸು ಘಾಸಿಗೊಂಡು ಹುಚ್ಚಾಗದಿದ್ದೀತೆ?/
ಪಡೆದದ್ದು ಪ್ರಾರ್ಥಿಸಿದ್ದಲ್ಲ
ಪ್ರಾರ್ಥನೆ ಎಂದೂ ಫಲಿಸಲೆ ಇಲ್ಲ.....
ಪಾಪಿ ಮನಕ್ಕೆ ಮೌನವೊಂದೆ
ಸಾಂತ್ವಾನ ಹೇಳುವ ಅನುಗಾಲದ ಸಂಗಾತಿ,
ಆಗಾಗ ಸೋಮಾರಿತನ ಅಮರಿಕೊಳ್ಳುವ ಮನಸಿಗೆ
ಸುಮ್ಮನೆ ಹೊದ್ದು ಮಲಗುವ ಆಸೆ.....
ಯಾಕೋ ಜಡತನ ಆವರಿಸಿ ಕಾಡುತ್ತಿದೆ
ಸಾಲದ್ದಕ್ಕೆ ಕಾಡುವ ನಿನ್ನ ನೆನಪು.//


ಸಶೇಷವಾದ ಬರಹಕ್ಕೆ ಮುಂದಿನ ಕಂತಿನ ನಿರೀಕ್ಷೆಯಿರುತ್ತದೆ
ಅರ್ಧದಲ್ಲಿಯೇ ಮುರುಟಿದ ಕನಸಿಗೂ ಸಹ
ಕೊರೆಯಿಲ್ಲದೆ ಕೊನೆಗಾಣುವ ಕನಸಿರುತ್ತದೆ!.....
ಅತ್ತರೂ ಹಗುರಾಗದ ಮನ
ಸತ್ತರೂ ಜೊತೆ ಬಿಡದ ಮೌನ,
ಬಾಳು ಒಂಥರಾ ಶೋಕಕಥೆಯೊಂದರ
ಯಾವುದೋ ನಡು ಅಧ್ಯಾಯದ ಹರಿದ ಪುಟದಂತಾಗಿ ಹೋಗಿದೆ./
ಕಲಬೆರಕೆಯಿಲ್ಲದ ಕನಸುಗಳ ಸರದಾರ ನಾನು
ಸಾಮ್ರಾಜ್ಯ ಅದೆಂದೋ ಆಗಿದೆ ದಿವಾಳಿ....
ಆದರೂ ಸೂರೆ ಹೋದ ಕೋಟೆಯನ್ನ ಇನ್ನೂ ಕಾಯುತ್ತಲೇ ಇದ್ದೇನೆ
ಸತ್ತ ಸ್ವಪ್ನವೂ ಮುಂದೊಮ್ಮೆ ಸಾಕಾರವಾದೀತು ಸ್ವಲ್ಪ ತಾಳಿ,
ಕನಸಿನ ಹಾದಿಯಲ್ಲಿ ಒಂದೊಮ್ಮೆ ಸುಂಕದ ಕಟ್ಟೆಯನ್ನಿರಿಸಿದ್ದಿದ್ದರೆ
ನಾನದೆಂದೋ ನಿಸ್ಸಂಶಯವಾಗಿ ದಿವಾಳಿಯಾಗುತ್ತಿದ್ದೆ....
ಆ ದಟ್ಟ ದಾರಿದ್ರ್ಯದಲ್ಲೂ ಮತ್ತೆ
ಸ್ವಪ್ನ ಸೌಧ ನಿರ್ಮಿಸುವ ತಿರುಕನ ಕನಸನ್ನ ಮತ್ತೆ ಮತ್ತೆ ಕನವರಿಸುತ್ತಿದ್ದೆ.//



ಕಾತರದ ಮುಂಜಾವು
ಬೇಸರದ ಮುಸ್ಸಂಜೆ.....
ಬದುಕೆಂದರೆ ಕೇವಲ ಇಷ್ಟೆ
ನಡುವಿನ ತಾದ್ಯಾತ್ಮದ ತನ್ಮಯ ಮೌನದ
ಹಿಡಿದಿಟ್ಟ ಕೆಲವೆ ಕೆಲವು ಅಮೂಲ್ಯ ಕ್ಷಣಗಳು.
ಜರುಗುವ ಕಾಲದ ಚಕ್ರದಡಿ ಸಿಕ್ಕಿ ಬಿದ್ದ
ಅಮಾಯಕ ಮಿಕ ನಾನು....
ನಿರ್ಲಿಪ್ತವಾಗಿ ಉರುಳುವ ಸಮಯದ ಗಾಲಿಗೆ ಕಿಂಚಿತ್ತೂ ದಯೆಯಿಲ್ಲ
ನನಗೋ ಸಿಕ್ಕಿ ನರಳಬೇಕಿದ್ದರೂ ಅದೇಕೋ ಸಾವಿನ ನೋವೆ ಅರಿವಾಗುತ್ತಿಲ್ಲ/
ಹಾಡು ಹಗಲಲ್ಲೆ ಬರಿಗಣ್ಣಿಗೆ ಸುಲಭವಾಗಿ ಕಾಣದ ಕನಸನ್ನ
ಕಡು ಕತ್ತಲ ಇರುಳಲ್ಲಿ ಹುಡುಕುವ ಮನಸು ಮರುಳಲ್ಲದೆ ಇನ್ನೇನು?.....
ನಿನ್ನ ನೋವನೆಲ್ಲ ನಾನೆ ಪಡೆದು
ನಲಿವುಗಳನ್ನಷ್ಟೆ ಎದೆ ಜರಡಿಯಲ್ಲಿ ಸೋಸಿ ಕೊಡುವ ನನ್ನ ಕನಸಿಗೆ
ಈ ಬಾಳಿನಲ್ಲಿ ಪೂರ್ಣ ವಿರಾಮ ಎನ್ನುವುದೇ ಇಲ್ಲ,
ನೆನಪಿನ ನೂಪುರದ ಸದ್ದು
ನವಿರು ನವಿರಾಗಿ ಅನುರಣಿಸುತಿರುವ ತನಕ
ಬಾಳ ಮೌನ ಯಾನ ಸಹನೀಯ.//

No comments: