06 June 2014

ನಗು ಮೊಗದ ಗೌಡರು ಕನ್ನಡಿಗರ ಮೊಗದಲ್ಲೂ ನೆಮ್ಮದಿಯ ನಗು ಹೊಮ್ಮಿಸಲಿ.






ಸ್ವತಂತ್ರ್ಯ ಭಾರತದ ಇಲ್ಲಿಯವರೆಗಿನ ಕೇಂದ್ರ ಸರಕಾರದಲ್ಲಿ ಈವರೆಗೆ ೪೨ ಮಂದಿ ರೈಲ್ವೇ ಸಚಿವರು ಆಗಿ ಹೋಗಿದ್ದಾರೆ. ಇದರಲ್ಲಿ ಸಿಂಹಪಾಲು ಕನ್ನಡಿಗರದ್ದೆ ಅನ್ನೋದು ನಮಗೆಲ್ಲ ಅತಿ ಹೆಮ್ಮೆಯ ವಿಚಾರ. ಆದರೆ ಇದರಿಂದ ಕರ್ನಾಟಕಕ್ಕೆ ಬಂದ ಭಾಗ್ಯವೇನು? ಎಂದು ತುಸು ಚಿಂತಿಸಿದಾಗ ಮಾತ್ರ ಈ ಉತ್ಸಾಹದ ಬೆಲೂನನ್ನ ಉಬ್ಬಿಸಿ ಕೂತ ನಮಗೆ ಸೂಜಿ ಚುಚ್ಚಿದ ಅನುಭವವಾಗುತ್ತದೆ! ಹೀಗಿದೆ ರೈಲ್ವೇ ಸಚಿವಾಲಯದ ಮೇಲೆ ಹಿಡಿತ ಸಾಧಿಸಿದ್ದ ಕರುನಾಡಿನ ಎಂಟು ಸಚಿವರ ನಾಡಿನ ಸೇವೆಯ ಸಾಧನೆ ವಿವರ, ಇದರೊಂದಿಗೆ ಕರುನಾಡಿನ ಮೂಲದ ಇನ್ನೊಬ್ಬ ಬಿಹಾರಿ ಸಂಸದರನ್ನೂ ಸೇರಿಸಿಕೊಂಡರೆ ಇಲ್ಲಿಯವರೆಗೂ ಒಟ್ಟು ಒಂಬತ್ತು ಮಂದಿ ಕನ್ನಡಿಗರು ರೈಲ್ವೆ ಸಚಿವರಾಗಿ ಮೆರೆದಿದ್ದಾರೆ. ಜೊತೆಗೆ ಇಬ್ಬರು ರಾಜ್ಯ ಖಾತೆ ದರ್ಜೆಯ ಸಹಾಯಕ ರೈಲ್ವೆ ಸಚಿವರೂ ಆಗಿದ್ದರು. ಆದರೆ ಈ ಒಂದು ಡಝನ್ನಿಗೆ ಒಂದು ಕಡಿಮೆ ಇರುವ ಈ ಸಚಿವರ ದಂಡಿನಿಂದ ನಾಡಿನ ಪಾರ್ಶ್ವವಾಯು ಪೀಡಿತ ರೈಲ್ವೆ ಪ್ರಗತಿಯಲ್ಲಿ ಸುಧಾರಣೆ ಕಂಡದ್ದು ಮಾತ್ರ ಅಷ್ಟಕ್ಕಷ್ಟೆ.

ಈ ಒಂಬತ್ತು ಮಂದಿಯಲ್ಲಿ ಎರಡು ಬಾರಿ ರೈಲ್ವೆ ಸಚಿವರಾಗಿದ್ದ ಟಿ ಎ ಪೈ, ದಕ್ಷಿಣ ಕನ್ನಡದ ಬಗಲಿನ ಕೊಡವ ಸಿ ಎಂ ಪುಣಚ, ಹುಟ್ಟಾ ಮಂಗಳೂರಿಗ ಜಾರ್ಜ್ ಫೆರ್ನಾಂಡಿಸ್ ಹಾಗೂ ಸದ್ಯದ ರೈಲ್ವೆ ಸಚಿವ ಡಿ ವಿ ಸದಾನಂದಗೌಡರು ತುಳುನಾಡಿನವರೆ ಆಗಿರೋದು ಒಂದು ಅಪರೂಪದ ಸಂಗತಿ. ಆದರೆ ಕರುನಾಡ ಕರಾವಳಿಯ ಮೂರು ಜಿಲ್ಲೆಗಳು ಮಾತ್ರ ರೈಲ್ವೆ ವ್ಯವಸ್ಥೆಯ ವಿಚಾರದಲ್ಲಿ ಇದ್ದಲ್ಲೇ ಇದೆ! ಆರಕ್ಕೆ ಏರೋದು ಅತ್ತಲಾಗಿರಲಿ,ಇದ್ದ ಮೀಟರ್ ಗೇಜ್ ಹಳಿಗಳನ್ನೂ ಕಿತ್ತೆಸೆದು ಮಂಗಳೂರು - ಬೆಂಗಳೂರು ನಡುವಿನ ಬ್ರಾಡ್'ಗೇಜಿಗೆ ಬದಲಿಸುವ ನೆಪದಲ್ಲಿ ಒಂದೂ ಮುಕ್ಕಾಲು ದಶಕಗಳ ಕಾಲ ಬೆಂಗಳೂರಿಗೆ ನೇರ ರೈಲ್ವೆ ಸಂಪರ್ಕವೇ ಇಲ್ಲದಂತೆ ಮಾಡಿ ಮೂರಕ್ಕಿಂತ ಕೆಳಕ್ಕಿಳಿಸಿ ತುಳುವರನ್ನ ಇವರೆಲ್ಲಾ ಉಪಕರಿಸಿದ್ದರು!

ತೊಂಬತ್ತರ ದಶಕಾರಂಭದಲ್ಲಿ ಮುಂಬೈ ಕೊಂಕಣ ರೈಲ್ವೆಯ ಮೂಲಕ ಮಂಗಳೂರಿನವರೆಗೆ ಬೆಸೆಯಿತು ಅಂತಾದಾಗ ತುಳುವರು ಅಲ್ಪತೃಪ್ತಿ ಪಟ್ಟು ಬೀಗಿದ್ದರೂ, ಕ್ರಮೇಣ ಮುಂಬೈನಿಂದ ಮಂಗಳೂರು ಮುಖಿಯಾಗಿದ್ದ ನೇತ್ರಾವತಿ ಎಕ್ಸ್'ಪ್ರೆಸ್, ಮತ್ಸ್ಯಗಂಧ ಎಕ್ಸ್'ಪ್ರೆಸ್, ದಾದರ್ - ಮಂಗಳೂರು ಎಕ್ಸ್'ಪ್ರೆಸ್ ಎಲ್ಲವೂ ಹಂತಹಂತವಾಗಿ ತಿರುವನಂತಪುರದವರೆಗೆ ವಿಸ್ತರಣೆ ಆಗಿ ಬೋಳು ಬೆಪ್ಪರಾದ ತುಳುವರ ಕೈಗೆ ಎಂದಿನಂತೆ ಮಲಯಾಳಿ ಲಾಬಿಗೆ ಮಣಿದ ಕೇಂದ್ರ ಸರಕಾರ ಚಿಪ್ಪು ಕೊಟ್ಟಿತು. ನೆನ್ನೆ ಮೊನ್ನೆಯವರೆಗೂ ಕರುನಾಡ ಕರಾವಳಿಯ ಉದ್ದ ವಿಸ್ತರಿಸಬೇಕಿದ್ದ ರೈಲುಗಳ ಮಾರ್ಗಗಳನ್ನೆಲ್ಲ ಅತಿ ಜಾಣ ಮಲಯಾಳಿಗಳು ಹಾಡು ಹಗಲೇ ಲಪಟಾಯಿಸುತ್ತಿದ್ದರೂ ನಮ್ಮ ಮಂತ್ರಿ ವೇಷದ ಕಂತ್ರಿಗಳು ಮಾತ್ರ ಹೇತ್ಲಾಂಡಿ ಹ್ಯಾಪರಂತೆ ಕೈ ಚೆಲ್ಲಿ ಕೂತರು.

ಈ ಸಾರಿ ಬೆಂಗಳೂರು ಉತ್ತರವನ್ನ ಪ್ರತಿನಿಧಿಸುತ್ತಿದ್ದರೂ ಸಹ ಡಿ ವಿ ಸದಾನಂದಗೌಡರು ತಮ್ಮ ತವರು ಹಾಗೂ ತಮ್ಮನ್ನ ಇತ್ತೀಚಿನವರೆಗೂ ತಕರಾರಿಲ್ಲದೆ ಸಂಸತ್ತಿಗೆ ಗೆಲ್ಲಿಸಿ ಕಳಿಸಿದ ಕರಾವಳಿಗರ ಋಣ ತೀರಿಸುವ ಬಗ್ಗೆ ಪ್ರಾಮಾಣಿಕವಾಗಿ ಆಲೋಚಿಸಬೇಕಿದೆ. ಹೊಸತಾಗಿ ಇವರು ಯೋಜನೆಗಳನ್ನೇನೂ ಘೋಷಿಸಬೇಕಿಲ್ಲ. ಸದ್ಯ ಘೋಷಣೆಯಾಗಿರುವ ಪಾಲ್ಘಾಟ್ ವಿಭಾಗದಿಂದ ವಿಭಜಿಸಿ ಮಂಗಳೂರು ಪ್ರತ್ಯೇಕ ವಿಭಾಗ ಸ್ಥಾಪನೆ, ದಕ್ಷಿಣ ವಿಭಾಗದಿಂದ ನೈಋತ್ಯ ರಲ್ವೆ ವಲಯಕ್ಕೆ ಮಂಗಳೂರು ವಿಭಾಗದ ವಲಯ ಬದಲಾವಣೆ, ರೈಲುಗಳ ಸಂಖೆಯಲ್ಲಿ ಹೆಚ್ಚಳ, ಸ್ವಚ್ಛತೆಗೆ ಆದ್ಯತೆ ಹಾಗೂ ಮುಖ್ಯವಾಗಿ ಒತ್ತಾಯ ಪೂರ್ವಕವಾಗಿ ಕರುನಾಡ ಕರಾವಳಿಯ ಸಂಪರ್ಕದ ರೈಲುಗಳನ್ನ ಇನ್ಯಾರದ್ದೋ ಮನೆ ಉದ್ಧರಿಸಲು ವಿಸ್ತರಿಸದಿದ್ದರೆ ಸಾಕೇ ಸಾಕು. ಸಾದ್ಯವಾದರೆ ಆದ್ಯತೆ ಮೇಲೆ ಉಡುಪಿಯಿಂದ ಮಣಿಪಾಲ-ಹಿರಿಯಡ್ಕ-ಕಾರ್ಕಳ-ಮೂಡುಬಿದಿರೆ-ಬಿ ಸಿ ರಸ್ತೆ-ಮಂಗಳೂರು-ಪಡುಬಿದಿರೆ-ಮುಲ್ಕಿ-ಕಾಪು ಮಾರ್ಗವಾಗಿ ವರ್ತುಲ ಮೆಟ್ರೋ ರೈಲು ಯೋಜನೆಯನ್ನ ಕೈಗೊಳ್ಳಬಹುದು. ಕೊಚ್ಚಿನ್ - ಎರ್ನಾಕುಲಂ - ತಿರುವನಂತಪುರ ಮಾರ್ಗದಲ್ಲಿ ಇದು ಇಂದು ಸಾಕಾರವಾಗಿದೆ. ಅಲ್ಲಿ ಇದು ಸಾಧ್ಯವಾಗಬಹುದಾದರೆ ಅಲ್ಲಿನಷ್ಟೆ ವಿಸ್ತಾರ ಹಾಗೂ ಜನ ಸಂಖ್ಯೆ ಹೊಂದಿರುವ ಕರುನಾಡ ಕರಾವಳಿಗೂ ಈ ಸೌಲಭ್ಯ ಕಲ್ಪಿಸಿಕೊಡುವುದರಲ್ಲಿ ತಪ್ಪೇನೂ ಇಲ್ಲ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ಇರುವ ಸಾಮಾನ್ಯ ರೈಲ್ವೆ ಮಾರ್ಗದಲ್ಲಿಯೇ ವರ್ತುಲ ರೈಲುಗಳನ್ನ ಜನ ಸಾಮಾನ್ಯರ ಹಿತಾನುಕೂಲಕ್ಕೆ ಓಡಿಸಬಹುದು. ಬಹುತೇಕ ದುಡಿಯುವ ವರ್ಗದ ಬಡವರೆ ವಾಸಿಸುವ ಡಿ ವಿ ಸದಾನಂದಗೌಡರು ಪ್ರತಿನಿಧಿಸುವ ಬೆಂಗಳೂರು ಉತ್ತರ ಕ್ಷೇತ್ರದ ವಲಸಿಗ ಕೂಲಿಗಳಿಗೆ ಇದರಿಂದ ಅಪಾರ ಲಾಭವಾಗುವುದಂತೂ ಖಂಡಿತ. ಇದಕ್ಕಾಗಿ ಯಾವುದೇ ಭೂಮಿಯನ್ನ ಹೊಸತಾಗಿ ವಶ ಪಡಿಸಿಕೊಳ್ಲಬೇಕಾಗಿಲ್ಲ. ಕೆಲವೆ ಲಕ್ಷಗಳನ್ನ ವ್ಯಯಿಸಿ ನಗರದೊಳಗೆ ವ್ಯಾಪಿಸಿರುವ ರೈಲ್ವೇ ಜಾಲ ಸಾಗುವ ಬಡಾವಣೆಗಳಲ್ಲಿ ಒಂದೊಂದು ಏರುಗಟ್ಟೆಗಳನ್ನ ನಿರ್ಮಿಸಿದರೆ ಸಾಕೇ ಸಾಕು. ರೈಲ್ವೇ ಸಚಿವರು ಈ ಬಗ್ಗೆ ಯೋಚಿಸಲಿ. ರಾಜ್ಯ ಸರಕಾರವೂ ಈ ಬಗ್ಗೆ ವಿಶಾಲ ಮನಸ್ಸಿನ ಸಹಕಾರ ನೀಡಲಿ.

ಇನ್ನು ಮರೀಚಿಕೆಯೆ ಆಗಿರುವ ರೈಲುಬಂಡಿಗಳ ಸ್ವಚ್ಛತೆ. ಎರಡನೆ ದರ್ಜೆಯ ಕಾಯ್ದಿರಿಸಿದ ಬೋಗಿಗಳಂತೂ ಬೆವರು, ಅಲ್ಲಿ ಮಲಗಿ ಎದ್ದು ಬರುವವರ ಮೈ ಮುಖದ ಜಿಡ್ಡಿನಿಂದ ಹೇಸುಗೆಟ್ಟು ನಾರುತ್ತವೆ. ರೈಲ್ವೆಯಲ್ಲಿ ಹೊರಗುತ್ತಿಗೆಯ ಪ್ರಸ್ತಾಪ ಈ ಸರಕಾರಕ್ಕೆ ಇದ್ದಂತಿದೆ. ಅದನ್ನ ಬಂಡಿಗಳ ಸ್ವಚ್ಛತೆಯ ಹೊರಗುತ್ತಿಗೆಯನ್ನ ಖಾಸಗಿಯವರಿಗೆ ವಹಿಸಿ ಕೊಟ್ಟು ಕೆಲವು ಖಡ್ಡಾಯದ ಮಾನದಂಡಗಳನ್ನ ಅವರ ಮೇಲೆ ಹೇರಿದರೆ ಈ ಕೊಳಚೆ ಬೋಗಿಗಳ ಒತ್ತಾಯದ ಶಿಕ್ಷೆ ರೂಪದ ಪಯಣದಿಂದ ಪಯಣಿಗರನ್ನ ಪಾರು ಮಾಡಿ ರೈಲ್ವೆ ಪಯಣವನ್ನೂ ಆಹ್ಲಾದ ಅನುಭವವಾಗಿಸಲಿಕ್ಕೆ ಖಂಡಿತಾ ಸಾಧ್ಯವಿದೆ. ನಗು ಮೊಗದ ಡಿ ವಿ ಸದಾನಂದಗೌಡರು ಕೇವಲ ನಗುವಿನಿಂದಲೇ ನಮ್ಮೆಲ್ಲರ ಹೊಟ್ಟೆ ತುಂಬಿಸದೆ ಕಟಿಬದ್ಧರಾಗಿ ಕರುನಾಡ ಹಿತ ಕಾಯಲಿ. ಮೊದಲಿನಿಂದಲೂ ಪರಿಚಿತರಾದ ಅವರಿಗೆ ಚುನಾವಣೆಯ ಗೆಲುವಿನ ನಂತರ ಹಾಗೂ ಇಲಾಖೆಯ ಅಧಿಕಾರ ಗ್ರಹಣದ ನಂತರವೂ ನಾನು ಒಬ್ಬ ಕನ್ನಡಿಗನಾಗಿ ಅಭಿನಂದನೆಯ ಶುಭ ಸಂದೇಶಗಳೊಂದಿಗೆ ಅರುಹಿದ್ದೂ ಸಹ ಇದನ್ನೆ.

No comments: