19 June 2014

ದೂರದಲ್ಲೆಲ್ಲೋ ನೆಲದೆದೆ ಒದ್ದೆಯಾದ ಕಥೆ.......




ಗೊತ್ತಿಲ್ಲದೆ ಇಟ್ಟಿದ್ದ ಹೆಜ್ಜೆಯೊಂದು
ಈಗ ಗೊತ್ತಿದ್ದರೂ ಹಿಂತೆಗೆದುಕೊಳ್ಳಲಾಗದಷ್ಟು ಆಳಕ್ಕೆ ಹೂತು ಹೋಗಿರುವಾಗ....
ಮತ್ತೆ ಎಲ್ಲ ಮರೆತು ಮೊದಲಿನಂತಾಗುತ್ತೇನೆ
ಎನ್ನುವುದೆಲ್ಲ ಬರಿ ಆತ್ಮವಂಚನೆ ಅಷ್ಟೆ,
ಸತ್ಯವನ್ನ ಹೇಳಲಿಕ್ಕೆ ಬೇಕಿರೋದು ಧೈರ್ಯವಲ್ಲ
ವಂಚನಾ ರಹಿತ ಪ್ರಾಮಾಣಿಕ ಒಳಮನ ಮಾತ್ರ./
ಕ್ಷಣ ಚಿತ್ತ ಮರು ಕ್ಷಣ ಪಿತ್ಥ
ಗೊಂದಲದ ಮನಸ್ಥಿತಿ ನನ್ನದಾಗಿರಲು
ಚೂರು ಪಾರು ನೀನೂ ಸಹ ಕಾರಣ......
ಸೋಲಿಸಿ ಹೋದ ಹಳೆಯ ದಿನಗಳು
ಹೊಸತೇನನ್ನೂ ಗೆಲ್ಲಲಾಗದಷ್ಟು
ಮನವನ್ನು ಬಲಹೀನಗಳಿಸಿ ಹೋಗಿವೆ.//


ಮೃದು ಮಾತುಗಳಲ್ಲಿ ಮುಳುಗಿಸಿದ
ನವಿರು ಭಾವಗಳನ್ನ ಲೇಪಿಸಿದ ಕನಸೊಂದು....
ನಿತ್ಯ ನಿದಿರೆಯ ಹಾದಿ ಬದಿ
ನೆನಪಿನ ಬುತ್ತಿ ಹಿಡಿದು ಕಾಯುತ್ತಾ ನಿಂತಿರುತ್ತದೆ,
ಸೂತಕದ ಮನೆಗಾದರೂ ಶುದ್ಧಿ ಎಂಬ ಒಂದು ಕೊನೆಯಿರುತ್ತೆ
ಆದರೆ ಸೋತ ಮನಕ್ಕಾವ ಆಸರೆಯೂ ಇಲ್ಲ./
ಮೋಡ ಕವಿದ ಬಾನನ್ನೆ ಆಸೆಗಣ್ಣಿಂದ ನಿತ್ಯ ದಿಟ್ಟಿಸಿ
ನೆಲ ನಿರಾಸೆಯ ಕತ್ತಲನ್ನ
ಮೌನವಾಗಿ ಹೊದ್ದು ಸುಮ್ಮನಾಗುತ್ತದೆ....
ನಾನಾಗಿರದ ನಾನು
ಬೇರಿಲ್ಲದೆ ಸಸಿ ಎಂದಾದರೂ ಬಾಳೀತೇನು?
ಖುಷಿಯೊಂದು ಕಲ್ಪಿತ ಭ್ರಮೆ,
ಎಂದೆಂದಿಗೂ ಅದಾಗದು ಎಂಬ ಅರಿವಿದ್ದರೂ
ಸಮಯದ ಹುಚ್ಚು ಕುದುರೆಯನ್ನ ಮೂಗುದಾರ ಹಿಡಿದೆಳೆದು ನಿಲ್ಲಿಸಿ....
ಬಲವಂತವಾಗಿಯಾದರೂ ಮತ್ತೆ ಹಿಂದೋಡಿಸುವ
ನನ್ನ ಸ್ವಪ್ನ ಇನ್ನೂ ಜೀವಂತವಾಗಿ ಉಸಿರಾಡುತ್ತಿದೆ.//


ಗಾಳಿಯ ಧಾರೆಗಳನ್ನೆ ಬಿಗಿದು ಅಂಗೈಯಲ್ಲಿ ಒಟ್ಟಾಗಿ ಹಿಡಿದು
ಸುಲಭವಾಗಿ ಮೇಲೇರುತ್ತೇನೆ ನಿತ್ಯ ಕನಸಲ್ಲಿ....
ನಿಜ ವಾಸ್ತವದ ಅರಿವು ಹಸಿದ ಹೆಬ್ಬಾವಿನಂತೆ
ಸುತ್ತಿಕೊಂಡು ಎಚ್ಚರಿಸುತ್ತದೆ ಮತ್ತೆ ನನಸಲ್ಲಿ,
ಗಟ್ಟಿ ಗುಂಡಿಗೆ ಇದ್ದರೂ ಕಠಿಣ ಮುಂದಿನ ಪಯಣದ
ಹೊಂಡ ದಿಣ್ಣೆಗಳ ದಾರಿಗಳನ್ನ ನೆನೆದು ಅಧೀರನಾಗುತ್ತೇನೆ ಕೆಲವೊಮ್ಮೆ....
ಆದರೂ ನಂಬಿದ ಬಾಳಿಗೆ ಅಪ್ರಾಮಾಣಿಕನಾಗಿ
ಸೊಗಸಾದ ಮತ್ತೊಂದು ಹೆದ್ದಾರಿ ಹುಡುಕಿಕೊಳ್ಳಲು ಮಾತ್ರ ಕೊನೆಯವರೆಗೂ ಒಲ್ಲೆ./
ಸಲುಗೆಯೆಲ್ಲ ಹಗಲಿರುಳ ಅತಿ ಸುಲಿಗೆಯಾದ ಹೊತ್ತಲ್ಲೂ
ಮೌನ ಮನದಲ್ಲಿ ಹುಟ್ಟುವ ಮೊದಲೆ ಸತ್ತ ಮಾರ್ದವ ಮಾತುಗಳೆಲ್ಲ
ಮತ್ತಷ್ಟು ನಿಶ್ಯಬ್ಧದಾಳಕ್ಕೆ ಜಾರಿದವು....
ನುಚ್ಚು ನೂರಾದ ಕನಸಿನಲ್ಲಿಯೂ ನೆನೆಪುಗಳ ನೂರಾರು ಚೂರುಗಳಿರುತ್ತವೆ
ನಿಶ್ಚಲ ಜಲದಂತೆ ನೆಲೆ ನಿಂತ ಊರಿನಲ್ಲಿಯೂ
ಅಲೆಮಾರಿಗಳಂತೆ ಅಂದು ಅಲೆದ ನೂರು ಮರೆಯಲಾಗದ ಊರುಗಳಿರುತ್ತವೆ,
ದಾಸನಾಗಿಸಿದ ಮೋಹಕ ಮೌನರಾಗದಂತೆ ಒಲವು
ಕೇಳದಿದ್ದರೂ ಕಾಡುತ್ತಿದೆ....
ಅರಳದಿದ್ದರೂ ಮನ ಒಳಗೊಳಗೆ ಅದರ ನೆನಪಿನಲ್ಲೆ ಬಾಡುತ್ತದೆ.//


ನಿದ್ರೆಯ ತೆಕ್ಕೆಗೆ ಜಾರಿದ ಕನಸಿನ ಕನ್ಯೆ
ಮನಸೊಳಗೆ ನಾಚಿ ನೀರಾದಳು....
ಸವೆದ ದಾರಿಯ ಜಾಡಿನ ಹಾದಿಯುದ್ದ
ನೆನಪುಗಳ ಹೆಜ್ಜೆ ಗುರುತುಗಳು ಮೂಡಿವೆ
ಸವೆದ ನೆನ್ನೆಯ ಸವಿ ಕ್ಷಣಗಳು ಇಂದೇನು ನಾಳೆಯೂ ಕಾಡಲಿಕ್ಕಿವೆ,
ಕತ್ತಲ ಮೊಗ್ಗು ಮುಳುಗಿದ ಬಾನಿನಂಚಿನಲ್ಲಿಯೇ
ಮತ್ತೆ ಹಗಲ ಹೂವರಳಿ ನಿರೀಕ್ಷೆಯ ಸೌಗಂಧವನ್ನು ಮರಳಿ ಹೊಮ್ಮಿಸುತ್ತಿದೆ....
ಬಾರದ ನಿದಿರೆಗೆ ಪೂಸಿ ಹೊಡೆದು
ನಿತ್ಯ ದಣಿವ ಕನಸುಗಳನ್ನ ಕಂಡರೆ ನನಗದೇನೋ ಮರುಕ./
ದೂರದಲ್ಲೆಲ್ಲೋ ನೆಲದೆದೆ ಒದ್ದೆಯಾದ ಕಥೆಯನ್ನ
ಆರ್ದ್ರವಾಗಿ ನಿತ್ಯ ಹೇಳುವ ಗಾಳಿಯ ಅಲೆಗಳ ಆಳದಲ್ಲಿ
ಇಲ್ಲಿಗೂ ಅವು ಆಗಮಿಸಬೇಕಿತ್ತು ಎನ್ನುವ ಆಳದ ಆಪೇಕ್ಷೆ ಇದ್ದಂತಿದೆ....
ಕನಸ ಕಾಣದ ಲೋಕಕ್ಕೆ ಕರೆದೊಯ್ಯುವ
ಇರುಳಿನ ಅತಿ ಅಮೂಲ್ಯ ಕ್ಷಣಗಳೆ
ಅಲ್ಲಿಯೇ ಶಾಶ್ವತ ಉಳಿಯುವ ಆಸೆ ನನಗೂ ಇದೆ,
ಎದೆಗೊರಗಿ ಗುಂಡಿಗೆಯ ಮಿಡಿತವನ್ನಾಲಿಸಿ
ಕಣ್ಣ ಮೂಲಕ ಮಧುರ ಭಾವಗಳನ್ನ
ಮನದ ಖಾಲಿ ಮಹಲಿಗೆ ದಾಟಿಸಿದ ನೆನಪುಗಳು ಅಮೂಲ್ಯ ಸಿರಿ ಯಾವತ್ತಿಗೂ.//

No comments: