24 June 2014

ಎರಡಾಗಿ ನೀನೊಡೆದ ಬಾಳನ್ನ .......




ಋತುಮಾನದ ಬದಲಾವಣೆಯಲ್ಲಿ ಮಗ್ನವಾಗಿ ಹೋದ ಮನ
ಮಳೆಯ ನಿರಂತರ ಧಾರೆಗೆ ತೋಯಲು ಕಾತರಿಸಿ ಕಾದು ಕೂತಿದೆ.....
ನಮ್ಮ ನಾಳೆ ನಮ್ಮ ಇಂದಿನಂತೆಯೆ ಇರುತ್ತೆ
ಇಂದಿನ ನಮ್ಮ ಆಲೋಚನೆಗಳು ನಮ್ಮ ನಾಳೆಯ ಭವಿಷ್ಯವನ್ನು ಹೊತ್ತು ತರುತ್ತೆ,
ಗಾಳಿಯ ಸೋಕುವ ಸ್ಪರ್ಶದಂತೆ
ನೀರಿನ ಅಲೆಯ ಆಪ್ತತೆಯಂತೆ....
ಕುರುಡ ನಾನು ನನ್ನೊಳಗಿನ ನಿನ್ನನ್ನ ನಿತ್ಯ ಕಾಣಬಲ್ಲೆ./
ಸುತ್ತಲೂ ಸಾವಿರ ಸಂಗತಿಗಳು ಸರಾಗವಾಗಿ ಸರಿದು ಸಾಗುತ್ತಲಿದ್ದರೂ
ನಿನ್ನ ಕನವರಿಕೆಯಲ್ಲಿಯೇ ಸದಾ ಮುಳುಗಿರುವ ಮನಸು
ಒಂದು ಬಗೆಯ ಅನ್ಯಮನಸ್ಕತೆಯಿಂದಲೆ ಅದರಲ್ಲಿ ಪಾಲ್ಗೊಳ್ಳುತ್ತದೆ....
ಹರಿಸಿದಲ್ಲಿ ಹರಿವ ನೀರಾಗಿದ್ದರೇನೆ ಚೆನ್ನ
ಕೂಡಿಟ್ಟರೆ ಖಂಡಿತಾ ಚಿಂತೆ ಕಾಡದಿರದು,
ಹರಿಯ ಬಿಟ್ಟರೆ ಮುಖದಲ್ಲಿ
ಚಿಂತೆಯ ಗೆರೆಯೂ ಸಹ ಮೂಡದು....
ಅನಿರೀಕ್ಷಿತಗಳ ಪ್ರವಾಹ ಬಾಳು
ಕೊಚ್ಚಿ ಹೋಗುವ ಹುಲು ಹುಲ್ಲುಗರಿ ನಾನು
ಆಯ್ಕೆಗಳು ಅಷ್ಟಾಗಿ ನನಗಿಲ್ಲವೇ ಇಲ್ಲ.//


ಕಳೆದು ಹೋಗುವಂತಿದ್ದರೆ ಸಂತೆಯಲ್ಲಿ
ಕೊಚ್ಚಿಕೊಂಡು ಸಾಗುವಂತಿದ್ದರೆ ನೆರೆಯಲ್ಲಿ....
ದುಸ್ತರ ಬಾಳನ್ನ ಇನ್ನಷ್ಟು ಭರಿಸುವುದಕ್ಕಿಂತ
ಅದೇನೆ ಸರಿಯಾದ ಆಯ್ಕೆ,
ಸರಿದ ನೂರು ಸಂಕಟದ ಸಾಲುಗಳ
ಕೊನೆಯದೊಂದು ಪದ ಮತ್ತೆ ಬಳಿ ಬಾಗಿ
ನೆಮ್ಮದಿಯ ನೆತ್ತಿಯ ಪುನಃ ಚುಂಬಿಸದಿರಲಿ./
ಹತ್ತರಲ್ಲಿ ಹನ್ನೊಂದಿರಬಹುದು ನಾ ನಿನ್ನ ಪಾಲಿಗೆ
ಆದರೆ ನನ್ನೆದೆಯ ಪಿಸುದನಿಯನೆಲ್ಲ
ಮೀಸಲಿಟ್ಟು ಬಿಟ್ಟೆ ನಾ ನಿನ್ನೆಲ್ಲ ನಾಳೆಗೆ.....
ಪಿಸು ಮಾತಿನ ತುಸು ಕನಸುಗಳಲ್ಲಿ
ಕೆಲವಾದರೂ ನಸು ನನಸಾಗಲಿ
ಕೊನೆಯ ಉಸುರಿನ ಕೊಸರಳಿಯುವ ಮೊದಲು,
ನೆನ್ನೆ ಬಿದ್ದು ತಣಿಸಿದ ಮಳೆಗೆ
ಇವತ್ತು ಮಾತ್ರ ನೆಲದ ಮೇಲೆ ಕಿಂಚಿತ್ತೂ ಕರುಣೆಯಿಲ್ಲ....
ಕಳೆದ ಕ್ಷಣಗಳ ಸವಿನುಡಿಗಳ ಭ್ರಮೆಯಲ್ಲಿಯೇ ಉಳಿದವರಿಗೆ
ನಾಳಿನ ವಾಸ್ತವದ ಭೀಕರತೆಗಳ ಅರಿವಿರೋದಿಲ್ಲ.//



ನಿದಿರೆ ಬಾರದ ರಾತ್ರಿಗಳು
ನೆಮ್ಮದಿ ತಾರದ ಹಗಲುಗಳಿರಲು.....
ಖುಷಿಯ ಹನಿಗೆ ಬಾಯಾರಿದವ
ನಿರೀಕ್ಷೆಯ ಬಿಸಿಲ ಹಾದಿಯುದ್ದ ಹೆಜ್ಜೆ ಹಾಕಲೇ ಬೇಕಲ್ಲ,
ವಿಶಾಲ ಜಗದ ನಿಬಿಡ ಹುಚ್ಚರ ಸಂತೆಯಲ್ಲಿ ನಾನೂ ಒಬ್ಬ
ಬೆಳಕ ಹಾದಿ ಹಲವಿದ್ದರೂ ತಬ್ಬಲು ಕಾತರಿಸುತ್ತೇನೆ
ನಿತ್ಯ ಮಾಸಲು ನೆರಳ ಮಬ್ಬ./
ಗರಿ ಬೀಸಿ ಕರೆದ ಗಂಡು ನವಿಲ
ಮೋಹಕ ಮೋಡಿಗೆ ಮರುಳಾದ ಹೆಣ್ಣು....
ತನ್ನೆಲ್ಲ ಬಿಂಕವನ್ನೂ ಬಿಟ್ಟು
ದಾಸಾನುದಾಸಿಯಾಗಿ ಹೋಯಿತು,
ಕೊರಳ ತೆರೆದು ಕೇವಲ ಇಂಪ ಸುರಿದ
ಪುಂಡು ಕೋಗಿಲೆಯ ಹಸಿಹಸಿ ಸುಳ್ಳುಗಳಿಗೂ....
ಸೊಕ್ಕಿನ ಕೋಕಿಲ ತಲೆದೂಗುತ್ತಾ
ತನ್ಮಯವಾಗಿ ಮೋಡಿಗೆ ಒಳಗಾಯಿತು.//


ತಂಪು ಹೊತ್ತಲಿ ಬೆಚ್ಚಗೆ ತುಡಿಯಿತ್ತಾ
ನೋವಿನ ಮದ್ಯದ ಸೀಸೆಯ ತಳಕ್ಕಂಟಿದ ನಾಲ್ಕು ಹನಿಗಳನ್ನೆ
ಮತ್ತೆ ಮರುಕಳಿಸಿ ಕುಡಿಯುತ್ತಾ.....
ಎಂದಿನಂತೆ ಅನಾಥ ಭಾವ ಹೊತ್ತ
ಎದೆಭಾರದೊಂದಿಗೆ ಕುಳಿತಿದ್ದೇನೆ,
ಎರಡಾಗಿ ನೀನೊಡೆದ ಬಾಳನ್ನ
ಒಂದಾಗಿಯೇ ಬಿಗಿದು ಕಾದುಕೊಂಡು ಬಂದಿರುವ ನನಗೆ
ಕೊನೆಯವರೆಗೂ ಅದನ್ನ ಸುರಕ್ಷಿತವಾಗಿ ಕಾಪಾಡಿ....
ಇನ್ನೊಂದು ದಡ ಮುಟ್ಟಿಸುವುದು ಕಷ್ಟವೇನಲ್ಲ./
ಮದ್ದಿಲ್ಲದ ಹುಚ್ಚಿಗೆ ಒಳಗಾಗಿ
ಬಾರದ ನಿನ್ನ ಹಾದಿಯನ್ನೆ ಎಡೆಬಿಡದೆ ಕಾದೆ....
ನಟ್ಟಿರುಳಲೂ ನಿದಿರೆ ತಾರದ ಅದರ ಸಂಚಿಗೆ
ಸುಖಾಸುಮ್ಮನೆ ಬಯಸಿ ಬಯಸಿ ಬಲಿಯಾಗಿಹೋದೆ,
ಸ್ವಪ್ನದ ದಿಂಬಿನಲ್ಲಿ ತಲೆ ಇಟ್ಟು
ಕನಸ ಮಂದರಿ ಹೊದ್ದು ನಿತ್ಯ ಮಲಗುವ ಭಾಗ್ಯವೊಂದು
ಕೊನೆಯವರೆಗೂ ಇದ್ದರೆ ಸಾಕೇ ಸಾಕು.....
ಗೋಳಿನ ಸಹೋದರ ಸಂಬಂಧಿ ಬಾಳನ್ನ
ಹೇಗಾದರೂ ಸವೆಸಬಹುದು.//

No comments: