ಕನಸುಗಳ ತೋಟದ ಮಾಲಿ ನಾನು,
ಅರಳಿದ ಹೂಗಳನ್ನ ಕೀಳುವ ಅಧಿಕಾರವಿಲ್ಲ....
ಇನ್ಯಾರ ಕಣ್ಣೂ ಅದರ ಮೇಲೆ ನಾನಿರುವಾಗ ಬೀಳುವಂತಿಲ್ಲ,
ನನಸಿನ ಲೋಕದ ಹಮಾಲಿಯೂ ಆಗಿಲ್ಲವೇನು?/
ಸಂಕಷ್ಟಗಳ ಮೂಟೆಯನ್ನ ನಿತ್ಯ ಹೊತ್ತೇ ಇದ್ದರೂ
ಬಾಗಿದ ಬೆನ್ನಿನಡಿಯಲ್ಲಿಯೆ ಕಿರು ನಗುವುದು ರೂಢಿಯಾಗಿದೆ
ಎಲ್ಲರ ಬದುಕಿನ ನೀತಿಯೂ ಇಷ್ಟೆ.....
ಇದಕ್ಕೆ ಹೊರತಲ್ಲ ನಾನೂನು//
ಈ ಭರವಸೆ ನಾಳಿನ ನಿರೀಕ್ಷೆಗಳಿವೆಲ್ಲ
ನಮಗೆ ನಾವೆ ನಿತ್ಯ ಕೊಟ್ಟುಕೊಳ್ಳುವ ನಿರಂತರ ಜಾಮೀನು,
ಕಹಿ ಮಾತ್ರೆ ಹೌದು ಜೀವನ
ಅದಕ್ಕೆ ತುಸುವಾದರೂ ಸರಿ೮ ಸೇರಿಸಿಕೊಳ್ಳಲೇಬೇಕು ಸಂತಸದ ಹನಿ ಜೇನು/
ಹೋಗಲೇ ಬೇಕು ಪ್ರತಿಯೊಬ್ಬರೂ
ಈ ಜಗವ ಶಾಶ್ವತವಾಗಿ ಒಂದು ದಿನ ತೊರೆದು
ಇದರಲ್ಲಿ ರಿಯಾಯತಿ ಯಾರಿಗಾದರೂ ಇದೆಯೇನು?,
ಇಂದು ಅವನು ನಾಳೆ ನೀನು
ಹಿಂದೆಯೆ ಒಂದಿನ ನಾನು//
ಅಂಗೈ ರೇಖೆಗಳ ನೋಡಿ ಒಬ್ಬರ ಅದೃಷ್ಟ ಅಳಿಯಲಾಗುವುದಿಲ್ಲ
ಕೈಯಿಲ್ಲದ ಹೆಳವರಿಗೂ ಒಳ್ಳೆಯ ಕಾಲ ಒಂದಿದ್ದೇ ಇರುತ್ತದೆ,
ಹಣೆಬರಹವ ನಂಬಿ ಎಂದೂ ವಿಧಿ ಮಣೆ ಹಾಕುವುದಿಲ್ಲ.....
ನೊಂದು ತಲೆಯ ಮೇಲೆ ಕೈಯಿಟ್ಟು ಕೂತವನಿಗೂ
ಸಂತಸದ ಕಾಲವೊಂದನ್ನ ತಪ್ಪದೆ ಹೊತ್ತು ತರುತ್ತದೆ/
ಕೆಲವು ಯೋಜನೆಗಳು ಮನದೊಳಗೆ ಖಚಿತವಿದ್ದರೆ ಸಾಕು
ಸೋತು ಸುಮ್ಮನೆ ಕೂರದೆ ಸಾಧನೆಯ
ಕಿರು ಹಾದಿಯೆಡೆ ಕೆಲವು ಹೆಜ್ಜೆ ಹಾಕಲೇಬೇಕು,
ಅದೃಷ್ಟ ಆಗ ತಗ್ಗಿಬಗ್ಗಿ
ನಮ್ಮ ವಿಳಾಸವನ್ನ ಮರೆಯದೆ ಹುಡುಕಿಕೊಂಡೆ ಬರುತ್ತದೆ//
4 comments:
nice one. Keep writing
Bharat
http://www.byadgi-chillies.com
ಮೊದಲು ಭರತೇಶರಿಗೆ ಒಂದು ಸಲಾಮು, ಇಂತಹ ಒಳ್ಳೆಯ ಬ್ಲಾಗು ಪರಿಚಯಿಸಿದವರು ಅವರೇ!
ತಮ್ಮ ಕವನದ ಕಟ್ಟುವಿಕೆಯಲ್ಲೇ ಒಂದು ಸಶಕ್ತ ಒಳ ಹೂರಣವಿದೆ. ಬದುಕನ್ನು ನೀವು ನೋಡುವ ರೀತಿಯ ಕಿರು ನೋಟವೂ ಇದೆ.
’ಅಂಗೈ ರೇಖೆಗಳ ನೋಡಿ ಒಬ್ಬರ ಅದೃಷ್ಟ ಅಳಿಯಲಾಗುವುದಿಲ್ಲ
ಕೈಯಿಲ್ಲದ ಹೆಳವರಿಗೂ ಒಳ್ಳೆಯ ಕಾಲ ಒಂದಿದ್ದೇ ಇರುತ್ತದೆ’
ಹಲವರಿಗೆ ಸ್ಪೂರ್ತಿಯಾಗಬಲ್ಲ ಸಾಲುಗಳಿವು.
ನಿಮ್ಮ ಬ್ಲಾಗನ್ನು ಅಕ್ಕರೆಯಿಂದ ಇಲ್ಲಿ ಹಂಚಿಕೊಂಡಿದ್ದೇನೆ.
https://www.facebook.com/groups/191375717613653?view=permalink&id=435285689889320
ಧನ್ಯವಾದಗಳು
Post a Comment