29 July 2010

ನೆನಪು...

ಸ್ವಾತಂತ್ರದ ಸವಿ ಸಿಕ್ಕು ಆರು ದಶಕಗಳು ಕಳೆದಿವೆ,ಅನೇಕ ಪ್ರಗತಿಯ ಮಜಲುಗಳನ್ನು ನಮ್ಮ ಈ ದೇಶ ದಾಟಿದೆ.ಈ ಎಲ್ಲ ಆರ್ಥಿಕ ಬೆಳವಣಿಗೆಗಳ ಸ್ಪೂರ್ತಿಯ ಬೆನ್ನು ಹತ್ತಿ ಹೊರಟರೆ ಆ ಹುಡುಕಾಟ ಟಾಟಾ-ಬಿರ್ಲಾ ಗಳ ಕುಟುಂಬಗಳತ್ತ ಸಾಗಿ ಕೊನೆಮುಟ್ಟುತ್ತದೆ.ಈಗೆಲ್ಲ ನವ ಕುಬೇರರ ಸಂತತಿ ಸಾವಿರವಾಗುತ್ತಿರುವ-ಜನಪ್ರಿಯತೆಗಾಗಿ ಪೈಪೋಟಿಗೆ ಬಿದ್ದಂತೆ ಟೀವಿ ಮಾಧ್ಯಮಗಳೂ ದಿನಕ್ಕೊಬ್ಬ ಕುಬೇರನನ್ನು ಸೃಷ್ಟಿಸುವ ಚಟಕ್ಕೆ ಬಿದ್ದಿರುವಾಗಲೂ ಈ ಎರಡು ಕುಟುಂಬಗಳ ಘನತೆ ಮೊದಲೆಷ್ಟಿತ್ತೂ ಈಗಲೂ ಅಷ್ಟೇ ಇದೆ.ಆದರೆ ದೇಶದ ಶ್ರೆಯೋಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಮಹಾತ್ಮ ಗಾಂಧೀಜಿಯಿಂದ ಹಿಡಿದು-ಇಂದಿರಾಗಾಂಧಿಯವರೆಗೂ ರಾಜಕಾರಣದ ಬಿಳಿಯಾನೆಗಳಿಗೆ ಕಾಲಕಾಲಕೆ ಬೇಕಾದಷ್ಟು ತೌಡು ಹಾಕುತ್ತ ತಮ್ಮ ಉದ್ಯಮಗಳ ಹಿತಾಸಕ್ತಿಯನ್ನು ಹಿಂಬಾಗಿಲಿನ ಮೂಲಕ ಈಡೇರಿಸಿಕೊಂಡ ಬಿರ್ಲಾಗಳ ಮುಂದೆ ಟಾಟಾ ಕುಂಟುಂಬದ ಕೊಡುಗೆ ಒಂದು ಕೈ ಹೆಚ್ಚು.ಟಾಟಾ ಉದ್ಯಮದ ಚುಕ್ಕಾಣಿ ಹಿಡಿದವರು ಕಾಲದಿಂದ ಕಾಲಕ್ಕೆ ಈ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿ ಪ್ರಪಂಚದ ಆರ್ಥಿಕ ಭೂಪಟದಲ್ಲಿ ನಮಗೂ ಒಂದು ಹಕ್ಕಿನ ಸ್ಥಾನ ಗಿಟ್ಟಿಸಿಕೊಟ್ಟಿದ್ದಾರೆ.ಇಲ್ಲಿ ಕಾಣುವುದು ಅವರ ದೂರದೃಷ್ಟಿಯ ಚಿಂತನೆ,ವಯಕ್ತಿಕ ಹಿತಾಸಕ್ತಿಯ ಹೀನ ಹಿಕಮತ್ತಲ್ಲ.ಆದರೆ ಸದಾ ಅಧಿಕಾರ ರೂಢರ ಹೆಗಲ ಮೇಲೆ "ಕೈ" ಹಾಕಿಕೊಂಡೆ ಇರುವ ಬಿರ್ಲಾಗಳ 'ಸೇವೆ' ಈ ಕೋನದಿಂದ ನೋಡಿದಾಗ ಪ್ರಶ್ನಾರ್ಹ.ಇಂಡಿಯನ್ ಏರ್ಲೈನ್ಸ್,ಬೆಂಗಳೂರಿನ ಐಐಎಸ್ಸಿ ,ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್ ಫಾರ್ ಕ್ಯಾನ್ಸರ್-ಪ್ರಯೋಗ ಹಾಗು ಉಪಶಮನ ಕೇಂದ್ರ,ಕೇಂದ್ರೀಯ ಪ್ರದರ್ಶನ ಕಲೆಗಳ ಸಂಸ್ಥೆ,ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆ,ದೇಶದಾದ್ಯಂತ ಹರಡಿರುವ ಹಿಂದುಸ್ತಾನ್ ಏರೋನಾಟಿಕಲ್ ಸಂಸ್ಥೆ-ನ್ಯಾಷನಲ್ ಏರೋನಾಟಿಕಲ್ ಸಂಸ್ಥೆ ( ಬೆಂಗಳೂರಲ್ಲಿ ಪ್ರಧಾನ ಕಛೇರಿಯಿದೆ) ಇವೆಲ್ಲ ದೇಶಕ್ಕೆ ಟಾಟ ಸಮೂಹದಿಂದ ಸಂದ ಬೃಹತ್ ಕೊಡುಗೆಗಳು.ಕೇವಲ ಕಲ್ಲಿನ ದೇವಸ್ಥಾನಗಳನ್ನಷ್ಟೇ ಕಟ್ಟಿ ಸಾಂಸ್ಕೃತಿಕ ಕೊಡುಗೆ ನೀಡುತ್ತಿರುವ ( ಒಂದು ಹಂತದವರೆಗೆ ಇದು ಒಳ್ಳೆಯದೇ...ಆದರೆ ಅತಿಯಾದರೆ ವಿಷ ಕೂಡ ಹೌದು ಅನ್ನೋದನ್ನ ನೆನಪಿಡಬೇಕು ) ಬಿರ್ಲಾಗಳು ಅಸಲಿಗೆ ದೇಶಕಟ್ಟುವ ಕಾರ್ಯದಲ್ಲಿ ತೊಡಗಿದ್ಧಾರೆಯೇ? ಅದೇನೆ ಇರಲಿ ಜೆಮ್ಶೆಡ್ ಜೀ ಟಾಟಾರಿಂದ ಮೊದಲ್ಗೊಂಡು ಇಂದಿನ ರತನ್ ಟಾಟಾವರೆಗೂ ಹೋಲಿಸಿ ನೋಡಿದಾಗ ಅಪ್ರಾಸಂಗಿಕವಾಗಿ ಈ ಹೋಲಿಕೆ ಮಾಡಿದೆ ಅಷ್ಟೇ.

ಅಂದ ಹಾಗೆ ಇವತ್ತು ಟಾಟಾ ಉದ್ಯಮಜಗತ್ತನ್ನ ಈ ಪರಿ ಬೆಳೆಸಿದ ಜಮ್ಷೆಡ್ ಜಿ ರತನ್ ಜಿ ದಾದಾಭಾಯಿ ಟಾಟಾರವರ ಜನ್ಮದಿನ.ಫ್ರೆಂಚ್ ತಾಯಿ-ಹಾಗು ಭಾರತೀಯ ಪಾರ್ಸಿ ತಂದೆಗೆ ೧೯೦೪ ರಲ್ಲಿ ಇದೆದಿನ ಹುಟ್ಟಿದ್ದ ಅವರು ಬದುಕಿದ್ದರೆ ಭರ್ತಿ ೧೦೬ ವರ್ಷ ವಯಸ್ಸಗಿರುತ್ತಿತ್ತು.ಭಾರತ ಕಂಡ ಮೊದಲ ವಾಣಿಜ್ಯ ಪೈಲೆಟ್.ತಮ್ಮ ಸಂಸ್ಥೆಯ ಸಂಸ್ಥಾಪಕರ ಕನಸನ್ನ ದೇಶದ ಬೆಳವಣಿಗೆಯೊಂದಿಗೆ ಮಿಳಿತಗೊಳಿಸಿದ ನಿಜವಾದ ಅರ್ಥದ ಸಾಧಕ ಇವರು.ಭಾರತರತ್ನಕ್ಕೆ ಘನತೆ ತಂದುಕೊಟ್ಟ ಭಾರತೀಯ. ಏಕಕಾಲದಲ್ಲಿ ಭಾರತ ಸರಕಾರದ ಉನ್ನತ ನಾಗರೀಕ ಗೌರವದೊಂದಿಗೆ ಫ್ರೆಂಚ್ ಸರಕಾರ ಕೊಡ ಮಾಡುವ ಅತ್ಯುನ್ನತ ನಾಗರೀಕ ಪ್ರಶಸ್ತಿ "ಲಿಜೆನ್ದ ಡೇ ಹಾನೂರ್"ಗೂ ಪಾತ್ರರಾಗಿದ್ದರು.ತಮ್ಮ ೮೯ನೆ ವಯಸ್ಸಿನಲ್ಲಿ ೧೯೯೩ರ ನವೆಂಬರ್ ೨೩ ರಂದು ಇಹಲೋಕ ತ್ಯಜಿಸಿದರು.


ಹಡಬಿಟ್ಟಿ ದುಡ್ಡಿನಲ್ಲಿ ದುಂಡಗಾಗುವ ದರಿದ್ರ ರಾಜಕಾರಣಿಗಳ ಹುಟ್ಟು ಹಬ್ಬವನ್ನ ರಾಷ್ಟ್ರೀಯ ಪರ್ವದ ರೀತಿ ಆಚರಿಸುವ ಈ ಪರಿ ಬೌದ್ದಿಕವಾಗಿ ಬರಗೆಟ್ಟವರ ನಮ್ಮ ದೇಶದಲ್ಲಿ ನಿಜವಾದ ಅರ್ಥದಲ್ಲಿ ಭಾರತದ ಅಮೂಲ್ಯ ರತ್ನಗಳಾದ ಜೆ ಆರ್ ಡಿ,ಸ್ಯಾಮ್ ಪಿತ್ರೋದ,ವಿನೋಬಾ ಭಾವೆ,ಮಣಿ ಬೆಹನ್,ವರ್ಗೀಸ್ ಕುರಿಯನ್,ಬಾಬಾ ಅಮ್ಟೆ,ಅಣ್ಣಾ ಹಜಾರೆ ಇಂತವರ ನೆನಪಾದರೂ ನಮಗೆ ಆಗುತ್ತದೆಯೇ? ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯುವ ನವ ಕುಬೇರರು ಎದಿವಿದಲ್ಲೆಲ್ಲ ಸಿಗುವ ಈ ಸುಭಿಕ್ಷ ಕಾಲದಲ್ಲಿ ಪಾಪ ,ದೇಶ ಕಟ್ಟಿದ ಇಂತವರ ನೆನೆಯದಷ್ಟು ಕ್ರತಘ್ನ ರಾದೇವೆ ನಾವೆಲ್ಲಾ? ಒಂದು ನೆನಪಿಡಿ ಹಣ ಯಾರೂ ಸಂಪಾದಿಸ ಬಹುದು...ಆದರೆ ಅದರ ಸದ್ವಿನಿಯೋಗವನ್ನ ನಿಸ್ವಾರ್ಥವಾಗಿ ಮಾಡುವವರು ವಿರಳ.ಅಂಥವರನ್ನ ಕನಿಷ್ಠ ಅವರ ಹುಟ್ಟಿದ ದಿನವಾದರೂ ನೆನೆಯೋಣ.

No comments: