13 August 2010

".....ಕಪಿತ್ತ ಜಂಬೋ ಫಲಸಾರ ಭಕ್ಷಿತಂ"

ಮೂರು ಸಂಜೆ ಅಂತನ್ನುವ ಆ ಹೊತ್ತಿನಲ್ಲಿ ದೇವರ ಮನೆಯಲ್ಲಿ ಶೃಂಗೇರಿ ಶಾರದೆ,ಕಟೀಲು ದುರ್ಗಾಪರಮೇಶ್ವರಿ,ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸಹಿತ ಅಷ್ಟೂ ದೇವರುಗಳು,ಕೊಲ್ಲೂರು ಮೂಕಾಂಬಿಕೆ,ಹೊರನಾಡ ಅನ್ನಪೂರ್ಣೆ,ಉಡುಪಿ ಕೃಷ್ಣ,ಕಾಶಿ ವಿಶ್ವನಾಥನ ಕಟ್ಟು ಹಾಕಿಸಿದ ಪಟಗಳ ಜೊತೆಗೆ ಬೀಡಿ-ಸೋಪು-ಬ್ಲೇಡ್-ಪೇಯಿಂಟ್ಗಳ ಪ್ರಚಾರ ಕ್ಯಾಲೆಂಡರ್ಗಳಲ್ಲಿ ಕಾರಣವೆ ಇಲ್ಲದೆ ಸೆರೆಸಿಕ್ಕವರಂತೆ ಮುದ್ರಿತರಾಗಿ,ಈಗ ನನ್ನಜ್ಜನ ಒತ್ತಡಕ್ಕೆ ಅನಿವಾರ್ಯವಾಗಿ ಮಣಿದು (ಬೇರೆದಾರಿಯಾದರೂ ಅವರೆಲ್ಲರಿಗೆ ಏನಿತ್ತು ಪಾಪ!) ಕಪ್ಪು ಅಂಚಿನ ಫ್ರೇಮ್ ಸೇರಿ ಸದ್ಯಕ್ಕೆ ಈ ಕ್ಷುಲ್ಲಕ ಜಗತ್ತಿನ ಗೋಳುಗಳಿಂದ ಸೇಫಾಗಿದ್ದ ಖಾದರ್ಸಾಬರ ಮೂರುಮಾರ್ಕ್ "ಬೀಡಿ" ಲಕ್ಷ್ಮಿ (ಜೂಲಿ ಲಕ್ಷ್ಮಿ ತರಹ),ಭಾರತ್ ಬೀಡಿ ಸರಸ್ವತಿ,ಸಂತೂರ್ ಸೋಪಿನ ಶಿವಪಾರ್ವತಿ,ಮಹಾಲಸ ಜುವೆಲ್ಲರ್ಸ್ ಗಣಪತಿ,ಏಷ್ಯನ್ ಪೇಯಿಂಟ್ ಸುಬ್ರಮಣ್ಯ,ಲಿಂಗೇಶ್ವರ ಕಟ್ಟಿಂಗ್ ಶಾಪ್,ಸವಳಂಗ ರಸ್ತೆ,ಶಿವಮೊಗ್ಗ ಇವರ ಅಕ್ಕಮಹಾದೇವಿ.,ಮಹಾವೀರ ಕ್ಲಾತ್ ಸೆಂಟರ್ನ ಗೊಮ್ಮಟೇಶ್ವರ ಹೀಗೆ ಆ ಉದ್ಯಮಗಳಿಗೆ ಚೂರೂ ಸಂಬಂಧಿಸದ ಮೂರೂ ಮುಕ್ಕಾಲು ದೇವತೆಗಳ (ಕೆಲವು ದೇವಾನುದೇವತೆಗಳ ಅಸಹಜ ಗಾತ್ರದ ಚಿತ್ರಗಳು ಫ್ರೇಮ್ ಗಾತ್ರಕ್ಕೆ ಅನುಗುಣವಾಗಿ ದೇಹದ "ಕೆಳಗಿನ" ಅವಯವಗಳನ್ನು ಕಳೆದು ಕೊಂಡು ಅಂಗವಿಕಲರಾಗಿರುತ್ತಿದ್ದುದೂ ಉಂಟು!) ಸಾಲಿಗೆ ದೀಪ ಹಚ್ಚಿ,ಅದರಲ್ಲೊಂದು ಹಣತೆ ದೀಪವನ್ನಿರಿಸಿ ಕಡೆಗೆ ಮನೆ ಮುಂದಿನ ತುಳಸಿ ಕಟ್ಟೆಗೆ ಕೊಂಡೊಯ್ದು ಇಟ್ಟು ಕೈ ಮುಗಿಯ ಬೇಕಿತ್ತು.


ಇಷ್ಟಾದ ಮೇಲೆ ಯಾವ ರಾಗದ ಖಚಿತ ಹಂಗೂ ಇಲ್ಲದ ನಮ್ಮದೇ ಧಾಟಿಯಲ್ಲಿ ನಾಲ್ಕಾರು ಭಜನೆಗಳನ್ನೂ ಮನೆಯ ಮಕ್ಕಳೆಲ್ಲ ಸಾಮೂಹಿಕವಾಗಿ ಅರಚುತ್ತಿದ್ದೆವು.ಈ ಅಪಶ್ರುತಿಯ ಪ್ರಲಾಪವನ್ನು ಕೇಳಿ ಕೇಳಿ ದೇವರುಗಳಿಗೆಲ್ಲ ಸುಸ್ತಾಗಿಯೋ...ಇಲ್ಲ...ತಾಳ ಕುಟ್ಟುತ್ತಾ ಕೂಗಿ ಕೂಗಿ ಕಡೆಗೆ ನಮಗೆ ಸುಸ್ತಾಗಿಯೋ ಅಂತೂ ಮಂಗಳಕ್ಕೆ ಬಂದು ಮುಟ್ಟುತ್ತಿದ್ದೆವು.ಈ ಮಂಗಳದೊಂದಿಗೆ ಮಂಗಳಾರತಿ ಮುಗಿದರೂ ಬಾಯಿಪಾಠ ಮಾಡಿಕೊಂಡಿರುತ್ತಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಸಂಸ್ಕೃತ ಶ್ಲೋಕಗಳನ್ನು ಕೇಳಿದವರಿಗೆ ಶೋಕ ಒತ್ತರಿಸಿಕೊಂಡು ಬರುವಂತೆ ಅಪಭ್ರಂಶದಲ್ಲಿ ದೇವರನ್ನೇ ಹೆದರಿಸುವಂತೆ ಘರ್ಜಿಸದ ಹೊರತು ನಮ್ಮ ಪ್ರಾಥನೆಯ ಕಲಾಪ ಮುಗಿಯುತ್ತಿರಲ್ಲಿಲ್ಲ.ನಮ್ಮ ಈ ಎಲ್ಲ ಕಿರುಕುಳಗಳನ್ನು ಸಹಿಸಲು ಆ ಎಲ್ಲ ದೇವಗಣಗಳಿಗೆ ಆಗುತ್ತಿತ್ತಲ್ಲ ಎಂದು ಇಂದಿಗೂ ಸೋಜಿಗ ಪಡುತ್ತೇನೆ.ಇಷ್ಟಾಗಿ ಇಲ್ಲಿ ಭಜನೆ ಮುಗಿಸಿ ಎದುರು ಮನೆ ಬಪಮನ ಗಣಪತಿ ಕಡ್ಲೆಗಾಗಿ ಅವರ ಮನೆಯತ್ತ ಓದುತ್ತಿದ್ದೆ.ಅವರ ಮನೆ ಗಣಪತಿಯ ನೈವೇದ್ಯವಾಗಿ ಅವರು ನೆನೆಸಿದುತ್ತಿದ್ದ ಹಸಿ ಕಡಲೆಯ ಪಾಲಿಗಾಗಿ ಇನ್ನೂ ಅನೇಕ ಪ್ರತಿ ಸ್ಪರ್ಧಿಗಳು ಸುಟ್ಟ ಮುತ್ತಲ ಮನೆಗಳಿಂದ ದೊವ್ದಾಯಿಸುವ ಅಪಾಯ ಕಟ್ಟಿಟ್ಟ ಬುತ್ತಿ ಯಾಗಿರುತ್ತಿದ್ದರಿಂದ ಹೀಗೊಂದು ಅಕಾಲದ ರನ್ನಿಗ್ ರೇಸ್ ನನ್ನ ಬಾಲ್ಯದುದ್ದಕ್ಕೋ ಇದ್ದ ತುರ್ತು ಅಗತ್ಯಗಳಲ್ಲಿ ಒಂದಾಗಿತ್ತು.


ಬಪಮ ಕಡ್ಲೆ ಕೊಡುವಾಗ ಅವರ ಸೊಸೆ ಗೀತಮ್ಮ ತುಳಸಿಕಟ್ಟೆಗೆ ಸುತ್ತು ಹಾಕುತ್ತ ಮೂಗಿನಲ್ಲೇ ದೇವರ ನಾಮ ಹಾಡಿಕೊಳ್ಳುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ( ನೆನ್ನೆ ಅವರ ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಳ್ಳಲು ತೀರ್ಥಹಳ್ಳಿಗೆ ಹೋಗಿದ್ದೆ!) ಅವರ ಮೂಗುರಾಗಕ್ಕೆ ನಮ್ಮದೂ ಶ್ರುತಿ ಅನಪೇಕ್ಷಿತವಾಗಿ"....ಕಪಿತ್ತ ಜಂಬೋ ಫಲಸಾರ ಭಕ್ಷಿತಂ" ಎಂದು ಸೇರುತ್ತಿತ್ತು.ಸರಿ ಸುಮಾರು ಹೀಗೆಯೇ ಇರುತ್ತಿದ್ದ ನನ್ನ ಬಹುಪಾಲು ಸಂಜೆಗಳು ಈಗ ಕೈಜಾರಿ ಹೋಗಿ ಯಾವುದೋ ಕಾದಿಟ್ಟ ನಿಧಿ ಕಳೆದು ಕೊಂಡ ಅರ್ಜೆಂಟ್ ನಿರ್ಗತಿಕನ ಫೋಸ್ ಕೊಟ್ಟುಕೊಳ್ಳುತ್ತಾ ನನ್ನನ್ನು ನಾನೇ ಸಂತೈಸಿಕೊಳ್ಳುತ್ತಿರುತ್ತೇನೆ.ಇವತ್ತಿಗೂ ಮುಕ್ತಿಯಿಲ್ಲದೆ ಅವವೇ ಫ್ರೇಮ್ ಗಳಲ್ಲಿ ಸಿಲುಕಿ ಒರಲೆಗಳಿಂದ ಕಚ್ಚಿಸಿಕೊಂಡು ಒದ್ದಾಡುತ್ತಿರುವ ದೇವಾನು ದೇವತೆಗಳಿಗೂ ಇಂತಹದ್ದೊಂದು ಶೂನ್ಯ ಕಾಡುತ್ತಿರಬಹುದು ಎಂಬ ಗುಮಾನಿ ನನಗಿದೆ.ಇಷ್ಟೆಲ್ಲಾ ಆಗಿ ಮುಗಿಯುವಾಗ ಶಾಲೆಯ ಚೀಲ-ಅದರೊಳಗೆ ಬಿಲದೊಳಗಣ ಇಲಿಯಂತೆ ಹುದುಗಿರುತ್ತಿದ್ದ ಮನೆಕೆಲಸದ ಪುಸ್ತಕಗಳನ್ನು ಇಷ್ಟವಿಲ್ಲದಿದ್ದರೂ ಹೊರಗೆ ತೆಗೆಯಲೇ ಬೇಕಾಗಿದ್ದ ದಿನದ ಅತಿ ಕೆಟ್ಟ ಘಳಿಗೆಗಳು ಬಂದೆ ಬಿಟ್ಟಿರುತ್ತಿದ್ದವು. ಇಷ್ಟವಿಲ್ಲದಿದ್ದರೂನು ಈ ಪ್ರಾರಬ್ಧ ಕರ್ಮದಿಂದ ಪಾರಾಗಲು ಬೇರೆ ದಾರಿ ಇರುತ್ತಿರಲಿಲ್ಲವಾಗಿ ಅನಿವಾರ್ಯವಾಗಿ ಹೋಂ ವರ್ಕ್ ಮಾಡಲು ಸನ್ನದ್ಧನಾಗುತ್ತಿದ್ದೆ.ವಾಸ್ತವವಾಗಿ ನಾನು ಓದಿನಲ್ಲಿ ಸಾಕಷ್ಟು ಜಾಣನಾಗಿದ್ದೆ.ಕಾಪಿ ಬರೆಯುವುದೂ ಸೇರಿದಂತೆ ಶಾಲೆಯಲ್ಲಿ ಕೊಡುತ್ತಿದ್ದ-ನನ್ನ ಪಾಲಿಗೆ ತೀರಾ ಚಿಲ್ಲರೆ ಅನ್ನಿಸುತ್ತಿದ್ದ ಮನೆಕೆಲಸಗಳಿಗೆ ಇನ್ನೂ ಕಡೆಯ ಘಂಟೆ ಹೊಡೆಯುವ ಮೊದಲು ಅಲ್ಲೇ ಮೋಕ್ಷ ಕಲ್ಪಿಸಿರುತ್ತಿದ್ದೆ.ಆದರೀಗ ಇಲ್ಲದ ಮನೆಗೆಲಸವನ್ನು ಈ ಟ್ಯೂಬ್ ಲೈಟ್ ಅಡಿ ಕೂತು ಮಾಡೋದಾದರೂ ಎಲ್ಲಿಂದ? ಹೀಗಾಗಿ ಓದುವ ನಾಟಕ ನಿರಂತರವಾಗಿ ಮಾಡುತ್ತಿದ್ದೆ.ನಡುವೆ ನಿದ್ದೆಯ ಸೆಳೆತ ವಿಪರೀತವಾದಾಗ ತಲೆಯನ್ನು ಹಿಡಿತ ಮೀರಿ ತೂಗದಂತೆ ನಿಗಾವಹಿಸುವ ಕೆಲಸಕ್ಕೆ ಯಾರ ಅಪ್ಪಣೆ ಇಲ್ಲದಿದ್ದರೂ ಸದಾ ಸಿದ್ದ ವಾಗಿರುತ್ತಿದ್ದ ನನ್ನ ಕಡೆಯ ಚಿಕ್ಕಮ್ಮ ಟಪ್ ಎಂದು ಜೋರಾಗಿ ತಲೆಯ ಮೇಲೊಂದು ಏಟು ಹಾಕುತ್ತಿದ್ದಳು.ಅವಳು ತನ್ನ ಹೋಮ್ವರ್ಕ್ ಮಾಡಲು ಕೂತಿದಾಳೋ ಇಲ್ಲ ನನಗೆ ತಲೆ ಮೊಟಕಲೋ ಎಂಬ ಸಂಶಯ ನನಗಿವತ್ತಿಗೂ ಇದೆ.ಈ ಪ್ರಹಸನ ಕಷ್ಟದಲ್ಲಿ ಮುಗಿಯುವಾಗ ಕಡೆಗೂ ಊಟದ ಸಮಯ ಆಗಿರುತ್ತಿತ್ತು.ಮತ್ತೆ ಅಗೋಳಿ ಮಂಜಣನ ಸಾಕ್ಷಾತ್ಕಾರವಾಗುವ ಹೊತ್ತದು.ಊಟಕ್ಕೆ ಕಳ್ಳತನ ಮಾಡುತ್ತಿದ್ದ ನನಗೆ "ಬೇಗ ಉಂಡವರು ಗಿಳಿಯಂತೆ; ನಿಧಾನವಾಗಿ ಉಣ್ಣುವವರು ಕಾಗೆಯಂತೆ!!" ( ಗಿಳಿಯಾಗಿ ಬರುವ ಭಾಗ್ಯವೇನು? ಕಾಗೆಯಾದರೆ ನಷ್ಟವೇನು ಎಂಬ ಪ್ರಶ್ನೆಗೆ ಇನ್ನೂ ಅರ್ಥ ಹುಡುಕುತ್ತಿದ್ದೇನೆ!) ಎನ್ನುವ ಪುಸಲಾವಣೆ ಮಾವ ಹಾಗು ಚಿಕ್ಕಮ್ಮಂದಿರದು.ಗಿಳಿಯಾಗಲು ನನ್ನ ಅಳತೆ ಮೀರುತ್ತಿರುವ ಸಂಪೂರ್ಣ ಅರಿವಿದ್ದರೂ ಒತ್ತಾಯದಲ್ಲಿ ತುರುಕಿಕೊಂಡು ಕಾದರೆ ಗಿಳಿಯಾಗುವ ಮೊದಲೇ ಅಗೋಳಿ ಮಂಜಣನೆಂಬ ಬಿರುದು ಉಚಿತವಾಗಿ ಸಿಕ್ಕಿರುತ್ತಿತ್ತು! ನನ್ನ ಊಟ ಮಾಡುವುದರಲ್ಲಿದ್ದ ನಿರಾಸಕ್ತಿಗೆ ಅವರು ಅರಿಯುತ್ತಿದ್ದ ಇಂತಹ ಭೀಕರ ಮದ್ದುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೊ? ತಿಳಿಯದೆ ಗಲಿಬಿಲಿಯಾಗುತ್ತಿತ್ತು. ಅಸಹಾಯಕತೆಯೆ ಮಡುಗಟ್ಟಿರುತ್ತಿದ್ದ ಜಲಪಾತ ಇನ್ನೇನು ನನ್ನ ಬೋಳೆ ಕಣ್ಣುಗಳಿಂದ ಉದುರೋಕೆ ಸರ್ವ ಸನ್ನದ್ಧವಾಗಿರುತ್ತಿದ್ದವು.ಆದರೆ ಊಟದ ಬಗ್ಗೆ ನನಗಿದ್ದ ನಿರಾಸಕ್ತಿಯ ಅಸಲು ಕಾರಣ ಅವರ್ಯಾರಿಗೂ ಗೊತ್ತಿರಲೇ ಇಲ್ಲ!.
{ನಾಳೆಗೆ ಮುಂದುವರಿಸುವೆ}

No comments: