ಮೋಡದ ಮೋಸದ ಅರಿವಿರುವ ನೆಲದ ಮನಸಲ್ಲೂ
ಕನಸೊಂದು ನನಸಾಗಲಿ ಎನ್ನುವ
ಬಹುತೇಕ ಅಸಾಧ್ಯ ಸ್ವಪ್ನವೊಂದರ ಈಡೇರಿಕೆಯ ಅತಿಯಾಸೆ ಇದೆ.....
ಸೋಮಾರಿ ಬೆಳಗಿನಲ್ಲೊಂದು ಆಕಳಿಕೆ ಮರುಕಳಿಸಿ
ಮತ್ತೊಂದು ಚಿಕ್ಕ ನಿದಿರೆಯನ್ನು ಖಾತ್ರಿಪಡಿಸಿ ಹೋದ ಮೇಲೆ
ಮತ್ತೆ ಮನಸ ಕನಸು ತುಂಬಿ ಕಾಡಿತ್ತು.....
ವಾಸ್ತವ ಅರಿವಿಗೆ ನಾ ಮರಳೋದನ್ನೆ
ಅನಿವಾರ್ಯವಾಗಿ ಮತ್ತಷ್ಟು ಅದು ಕಾಯುವಂತಾಗಿತ್ತು./
ಭಾವದ ಹೊಳೆ ಉಕ್ಕಿ ಬಂದು
ಕಣ್ಣ ಅಂಚನ್ನ ತುಸು ತೋಯಿಸಿತ್ತು....
ಕಿಂಚಿತ್ತೂ ದಯೆ ತೋರದೆ ಕಲ್ಲೆದೆಗೆ ಅಪ್ಪಳಿಸಿ
ಮತ್ತೆ ಹುಟ್ಟ ಹೊರಟ ಮೃದು ಕಂಪನಗಳನ್ನ
ಭ್ರೂಣದಲ್ಲೆ ಮೌನವಾಗಿ ಸಾಯಿಸಿತ್ತು,
ಮರೆತು ಹಾಡಿದ ಮಧುರ ರಾಗವೊಂದು
ಮರುಕಳಿಸಿ ಕಾಡಿದ ಹೊತ್ತು
ಮನೆ ಮನದ ತುಂಬ ಕಡು ಕತ್ತಲಾವರಿಸಿತ್ತು.....
ಗೂಡಿನ ಹಂಗಿಲ್ಲದೆ ಸಿಕ್ಕ ಸಿಕ್ಕಲ್ಲೆಲ್ಲ ತಂಗುವೆ
ಹಸಿವಿಗೆ ಸಿಗುವ ಮಣ್ಣನ್ನಾದರೂ ಅನುಗಾಲ ನುಂಗುವೆ
ಆದರೆ ನಿಷ್ಠ ಮನೋಭಾವದಲ್ಲಂತೂ ರಾಜಿ
ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸಾಧ್ಯವೆ ಇಲ್ಲ.//
ಹೊಸೆದ ಸರಾಸರಿ ಸಾಲುಗಳೆಲ್ಲ
ಕೇವಲ ನನ್ನದೊಬ್ಬನದ್ದಲ್ಲ
ನಾ ಹೊಸೆದ ಸಾಲುಗಳಿಗೆ ಅನೇಕರ
ಅನುಗಾಲದ ತಲ್ಲಣಗಳೂ ಸಾಲ ಕೊಟ್ಟಿವೆಯಲ್ಲಾ?.......
ಮಾತಲೆ ನಾವಿಬ್ಬರೂ ಕಟ್ಟಿದ್ದ ಕನಸಿನ ಮನೆಯ
ಕೈಯ್ಯಾರೆ ತಾನೆ ಮುರಿದು
ಮೌನದ ಝೋಪಡಿಗೆ ನನ್ನ ನೂಕಿದ ನೀನೆಂದೆಂದಿಗೂ
ಸಂತಸ ಸೌಧದಲ್ಲಿಯೇ ಬಾಳುತ್ತಿರು,
ಸಮಯ ದಾಟಿದ ಮೇಲೆ
ಪ್ರವಾಹ ಹೆಚ್ಚಿದ ಮೇಲೆ....
ಬಾಳು ಹೊಳೆ ಎರಡನ್ನೂ
ಕಾಯೋದು ಬರಿ ವ್ಯರ್ಥ./
ಮಳೆಯ ನಿರೀಕ್ಷೆ ಹುಟ್ಟಿಸುವ ಮೋಡಗಳು
ಮತ್ತೆ ನೆಲವ ತಣಿಸದಿದ್ದರೆ ಅವಕ್ಕೆ ಎಂದೆಂದಿಗೂ ಕ್ಷಮೆಯಿಲ್ಲ.....
ಪೂರ್ತಿ ಗಾಳಿ ಹೋದ ಗಾಲಿಯೇ ಆಗಿದ್ದರೂ
ಕೊಂಚ ದೂರವಾದರೂ ನಂಬಿದ ಗಾಡಿಯನ್ನ,
ಮುಂದೆಳೆದೇ ತೀರುತ್ತದೆ
ವಿಫಲ ಪ್ರೇಮಿಯ ಪಾಡೂ ಕೊಂಚ ಹಾಗೇನೆ.//
ಕನಸ ಬೀದಿಯುದ್ದ ಕವಿದ ಸಂಜೆ ಕತ್ತಲು
ಇರುಳಗುರುಡ ನಾನಾದರೂ ನನ್ನ ಹೆಜ್ಜೆ ತಪ್ಪಲೇ ಇಲ್ಲವಲ್ಲ
ನಿನ್ನ ಅಮಲು ಸದಾ ನನ್ನ ಮುತ್ತಲು......
ಬದುಕು ನಿತ್ಯ ಅನಿರೀಕ್ಷಿತಗಳ ಹೊಸ ಹಾಡು
ರಾಗ ತಪ್ಪಿದರೆ ಅದರಲ್ಲಿ ಲಯಬದ್ಧವಾಗಿ ತಪ್ಪದೆ
ಮಿಡಿಯುತ್ತಲೇ ಇರುವ ತಾಳದ ತಪ್ಪೇನು?,
ಕರೆದು ಕಾದು ಸಾಕಾಗಿ ಮೌನವಾಗಿ
ಬಂದ ಹಾದಿಯನ್ನೆ ದಿಟ್ಟಿಸುತ್ತಾ
ನಿನ್ನ ಬರುವನ್ನೆ ಕಾದ ಕೃಷ್ಣ ನಾನು....
ಆಗಾಗ ಬೇಕಿದ್ದರೆ ರಾಧೆಯಾಗಿಯೂ ಕಾಣಿಸಿಯೇನು./
ತೀರಿಸಿಲಾಗದ ಮತ್ತೆ ಮರಳಿ ಮುಟ್ಟಿಸಲಾಗದ
ಕೆಲವೆ ಕೆಲವು ಋಣಗಳಲ್ಲಿ....
ನಿನ್ನ ಆ ದಿನಗಳ ನಿರ್ಮಲ ಒಲವಿನ ಋಣವೂ ಒಂದು,
ಅಪರೂಪಕ್ಕೆ ಆವರಿಸಿದ್ದ ಸ್ವಪ್ನ ಸಹಿತ ನಿದ್ರೆಯಲ್ಲಿ
ಕೊಂಚ ನಾನಿದ್ದೆ ಹಾಗೂ ಜೊತೆಗೆ ನೀನಿದ್ದೆ.....
ಮೌನದ ಮಂಜು ಕರಗಿ
ಮಾತಿನ ಧಾರೆಗಳಾಗಿ ಹರಿದು ಹೋಗುವ ಹೊತ್ತಿಗೆ
ನೆನಪಿನ ಮೋಡಗಳು ಬಾನಿನ ಮೇಘಗಳೊಂದಿಗೆ ಹನಿಯುವ ಮತ್ತಿಗೆ
ಮನ ಅನುಗಾಲ ಶರಣು.//
ಹಳೆಯ ಊರಿನಲ್ಲಿ
ಅವೆ ಸವೆದ ಹಾದಿಗಳಲ್ಲಿ ಇರುಳ ಕತ್ತಲಿನಲ್ಲಿ.....
ಅನಾಥನಂತೆ ಒಬ್ಬನೆ ಮತ್ತೆ ಹೆಜ್ಜೆ ಹಾಕುವಾಗ
ಮನಸದೇಕೋ ಭಾರ ಭಾರ,
ಮನಸು ಮೃದುವಾದಷ್ಟೂ ನೋವಿನ ಬಿಂಬ ಆಳದಲ್ಲಿ ಮೂಡುತ್ತದೆ
ಬಾಳ ಪುಟ ಬಿಳಿಯಾಗಿದ್ದಷ್ಟೂ
ಬೀಳುವ ಸಂಕಟದ ಕಲೆ ಕೊನೆಯವರೆಗೂ ಕಾಡುತ್ತದೆ./
ದಾರಿಯುದ್ದ ಬಿಕ್ಕುತ್ತಾ ಬಂದ
ಹಾದಿ ಗುರುತಿನ ಸಿಹಿ ತುಂಡುಗಳನ್ನೆಲ್ಲ.....
ವಿಧಿ ಎಂಬ ಇರುವೆ ಕಬಳಿಸಿ
ಸುಗಮ ಬಾಳು ಬೋಳಾಗಿಹೋಯಿತು,
ಸರಿವ ಕಾಲದ ಜೀತ ಮಾಡಿತ್ತಾ
ಕೂಲಿಯ ಪ್ರತಿಫಲಕ್ಕಾಗಿ ಕಾಯುವಾಗ
ಸಿಕ್ಕಷ್ಟಕ್ಕೆ ಸುಖ ಪಡಬೇಕಿರೋದು ಅನಿವಾರ್ಯ ಕರ್ಮ.//
1 comment:
ತಾಣದಲ್ಲಿ ಪ್ರಕಟಿಸುವ ಸುದ್ದಿ ಎಲ್ಲರಿಗೂ ತಿಳಿಯಲಿ.
..
..
..
..
http://spn3187.blogspot.in/
Post a Comment