11 August 2010

ನನಗೊಂದು ಕಥೆಬೇಕು...

ನನಗೆ ಬುದ್ದಿ ತಿಳಿದಲ್ಲಿಂದಲೂ ನಾನು ಸುತ್ತಾಟದ ಶೂರ.ಚಿಕ್ಕಂದಿನಲ್ಲಿ ಅಷ್ಟೇನೂ ವಿಶೇಷ ಪ್ರವಾಸಗಳಿಗೆ ಅವಕಾಶವಿರಲಿಲ್ಲ ಅದರಲ್ಲೂ ನಮ್ಮ ಮನೆಯ ಮಟ್ಟಿಗೆ ಪ್ರವಾಸದ ವ್ಯಾಖ್ಯೆ ಧರ್ಮಸ್ಥಳ,ಕಟೀಲು ಸುಬ್ರಮಣ್ಯ,ಉಡುಪಿ,ಮಂದಾರ್ತಿ,ಶೃಂಗೇರಿ,ಹೊರನಾಡುಗಳಿಗಷ್ಟೇ ಸೀಮಿತವಾಗಿರುತ್ತಿದ್ದವು.ಇಂತಹ ಪ್ರವಾಸಗಳು ಅಷ್ಟು ಇಷ್ಟ ಆಗದಿದ್ದರೂ ಅದನ್ನೂ ಬಿಟ್ಟರೆ ಬೇರೆ ಗತಿರ್ನಾಸ್ತಿ ಆಗಿದ್ದರಿಂದ ಅನಿವಾರ್ಯವಾಗಿ ಕರೆದರೆ ಸಾಕು ಬರಗೆಟ್ಟವನಂತೆ ಹೊರಟುಬಿಡುತ್ತಿದ್ದೆ.ಆದರೆ ಮುಂದೆ ಅಂತಹ ತಿರುಗಾಟಗಳಲ್ಲಿ ಯಾವ ಸ್ವಾರಸ್ಯವೂ ಉಳಿಯಲಿಲ್ಲ.ವಾಸ್ತವವಾಗಿ ಅಧ್ಯಯನ ಪ್ರವಾಸ ನನ್ನ ಆಸಕ್ತಿಯ ವಿಷಯ.ಯಾವುದಾದರೂ ಒಂದು ಸ್ಥಳದ ಹಿನ್ನೆಲೆ ಈ ದೃಷ್ಟಿಯಿಂದ ಪ್ರಚೋದನಕಾರಿಯಾಗಿದ್ದರೆ ನಾನು ಸುಲಭವಾಗಿ ಅದಕ್ಕೆ ಬಲಿ ಬೀಳುತ್ತೀನಿ.ಹೀಗೆ ಅನೇಕ ಸ್ಥಳಗಳನ್ನ ಸುತ್ತಿದ್ದೇನೆ.ಪ್ರಾಚೀನ ದಂತಕಥೆಗಳನ್ನ-ಐತಿಹಾಸಿಕ ಸಂಗತಿಗಳನ್ನ ತಮ್ಮೊಳಗೆ ಗಂಟು ಹಾಕಿಕೊಂಡ ಜಾಗಗಳು ಅದೆಷ್ಟೇ ಹಿಂದುಳಿದ ದರಿದ್ರ ಸ್ಥಿಯಲ್ಲಿದ್ದರೂ ನನ್ನ ಗಮನ ಸೆಳೆಯುತ್ತವೆ.ಐಶಾರಾಮ-ಸುಖಲೋಲುಪತೆ ನನ್ನ ಪ್ರವಾಸಾಸಕ್ತಿಗೆ ಚುಂಬಕವಲ್ಲ.ಹೀಗಾಗಿಯೇ ವಿದೇಶಿ ಪ್ರವಾಸದ ವಿಷಯಕ್ಕೆ ಬಂದರೆ ಅಮೆರಿಕೆ ಸೇರಿದಂತೆ ಅನೇಕ ಐರೋಪ್ಯ ದೇಶಗಳು ನನ್ನ ಆಯ್ಕೆ ಪಟ್ಟಿಯಲ್ಲಿಲ್ಲ.ಅತಿ ಸಿರಿವಂತಿಕೆಯ ಬಿಟ್ಟಿ ಪ್ರದರ್ಶನದ ಮಾದರಿಯನ್ನು ಸಿಂಗಾಪುರದಲ್ಲಿ ಕಂಡು ಹೇಸಿಗೆ ಪಟ್ಟುಕೊಂಡಿದ್ದೆ.ಅದೇ ಆಫ್ರಿಕೆಯ ದೇಶಗಳು,ಶ್ರೀಲಂಕ,ಬ್ರಜಿಲ್,ಪಾಕಿಸ್ತಾನ,ಈಜಿಪ್ತ,ನೇಪಾಳ,ಕಾಂಬೋಡಿಯ,ಬರ್ಮಾ,ಮೆಕ್ಸಿಕೋ ನನ್ನಾಯ್ಕೆಯ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿ ರಾರಾಜಿಸುತ್ತವೆ.ಅವ್ಯಕ್ತವಾಗಿ ಈ ದೇಶಗಳಲ್ಲಿ ಇರುವ ಸೆಳೆತ socalled ಸುಖಿ ಕಲ್ಪನೆಯ ರಾಷ್ಟ್ರಗಳಲ್ಲಿ ಇರದೆ ಇರುವುದಕ್ಕೆ ಯಾವುದೇ ಐತಿಹಾಸಿಕ ಕಥಾ ಹಿನ್ನೆಲೆಯ ಬಲ ಅವುಗಳಲ್ಲಿ ಇಲ್ಲದಿರೋದೆ ಕಾರಣವೇನೋ ಅನ್ನಿಸುತ್ತೆ ಕೆಲವೊಮ್ಮೆ.



ಅನುಕ್ಷಣ ಹೋರಾಟದ ಜೀವಂತ ಘಳಿಗೆಗಳು ಬದುಕಿನಲ್ಲಿ ಉಪ್ಪಿನಕಾಯಿಯ ಹಾಗಿದ್ದರೆ ವಿಷಯ ಬೇರೆ:ಆದರೆ ಮನಸ್ಸೇ ಇಲ್ಲದಿದ್ದರೂ ಬದುಕುವ ಸವಾಲಿನ ಭೀತಿಯ ಮುಂದೆ ವಾಸ್ತವಗಳ ಗೋಡೆಗೆ ಅನಿವಾರ್ಯವಾಗಿ ತಲೆಚಚ್ಚಿಕೊಳ್ಳುವುದೇ ಅಭ್ಯಾಸವಾಗುತಿರುವಾಗ ಈ ಸುಖಲೋಲುಪತೆಗಳು ಆಕರ್ಷಕ ಅನ್ನಿಸದೆ ಹೋದವೇನೋ! ಹೀಗಾಗಿ ತಮ್ಮ ಕನಿಷ್ಠ ಅಗತ್ಯಗಳಿಗಿಂತ ಹೆಚ್ಚಿನ ಐಭೋಗದ ಮೇಲೆ ಹಕ್ಕು ಸಾಧಿಸೋದು ಇನ್ನೊಬ್ಬ ಅರ್ಹನ ಅನ್ನಕ್ಕೆ ಕನ್ನ ಹಾಕಿದಂತೆ ಎನ್ನುವ ಭಾವನೆ ದಟ್ಟವಾಗಿ ನನ್ನೊಳಗೆ ಬೇರು ಬಿಟ್ಟಿದೆ.

ಯಾವುದೇ ಜಾಗ ನನ್ನ ಆಸಕ್ತಿ ಕೆರಳಿಸಲು ಅದರೊಳಗೊಂದು ಕಥೆ ಹುದುಗಿರಬೇಕು ಅನ್ನಿಸುತ್ತೆ,ಬಾಲ್ಯದಲ್ಲಿ ಬಾಲವಾಡಿ-ಶಿಶುವಿಹಾರದಲ್ಲಿ ಕೇಳಿದ್ದ ಕಥೆಗಳು,ಎದುರು ಮನೆ ಬಪಮನಿಂದ ( ಕೊಂಕಣಿಯಲ್ಲಿ ಬಪಮ ಎಂದರೆ ಅಪ್ಪನ ಅಮ್ಮ ,ಅಜ್ಜಿ) ಬಾಯಿಂದ ಕೇಳಿ ಕಲ್ಪಿಸಿಕೊಳ್ಳುತ್ತಿದ್ದ ಪಿಳಿಪ-ಪಿತರನ ಕಥೆಗಳು,ಆಗುಂಬೆ ಘಾಟಿಯ ಭಯಾನಕ ಡಕಾಯಿತರ ಕಥೆಗಳು,ನನ್ನಜ್ಜನ ಬಾಯಿಂದ ಕೇಳುತ್ತಿದ್ದ ಹಳೆ ತೀರ್ಥಹಳ್ಳಿಯ ಆಗುಹೋಗಿನ ಕಥೆಗಳು,ಅಮ್ಮನೊಟ್ಟಿಗೆ (ಅಜ್ಜಿಗೆ ನಾನು ಅಮ್ಮ ಎನ್ನುತ್ತೇನೆ) ಅವರ ತವರು ಸಾಗಿನಬೆಟ್ಟಿಗೆ ಶಾಲಾರಜೆಯಲ್ಲಿ ಹೋಗಿದ್ದಾಗ ಕೇಳಲು ಸಿಗುತ್ತಿದ್ದ ಹೇರಳ ಕಥೆಗಳು,ಅಲ್ಲಿನ ಚಾವಡಿ ದೈವಗಳ ಕೋಲ-ತಂಬಿಲಗಳ ಪ್ರತ್ಯಕ್ಷ ದರ್ಶನ,ನಾಗಮಂಡಲಗಳ ಪ್ರಾತ್ಯಕ್ಷಿಕೆ,ಸತ್ಯದೈವಗಳಾದ ಭೂತಗಳ ಹಿನ್ನೆಲೆ ವಿವರಿಸುತ್ತಿದ್ದ ಕಥೆಗಳು,ಕಲ್ಕುಡ-ಕಲ್ಲುರ್ಟಿ..ಕೋಟಿ-ಚೆನ್ನಯ...ಆಗೋಳಿ ಮಂಜಣನ ಬೆರಗು ಹುಟ್ಟಿಸುವ ಕಥೆಗಳು,ರಾಂಪಣ್ಣನ ಹಾಸ್ಯ ಕಥೆಗಳು,ಇನ್ನು ಗದ್ದೆ ಕಾಯುವವರ ಸಾಹಸದ ಕಥೆಗಳು,ಒಂಚೂರು ಅಕ್ಷರ ಓದಲು ಬಂದಾಗ ಎದುರು ಮನೆ ರಾಘಣ್ಣನವರ ಮನೆಯಿಂದ ಕಡ ತಂದು ಓದಿ ಮರಳಿಸಲು ಮನಸ್ಸಾಗದಿದ್ದ "ಚಂದಾಮಾಮ"ನ ವಿಕ್ರಮ-ಬೇತಾಳ,ಭೋಧಿಸತ್ವನ ಜಾತಕಕಥೆಗಳು,ರಾಮಾಯಣ,ಶ್ರೀಮಧ್ಭಾಗವತದ ಕಥೆಗಳು,"ಬಾಲಮಿತ್ರ"ದ ಮಂಡೂಕ ದ್ವೀಪದಲ್ಲಿ ರಾಜಕುಮಾರಿ,ಮಿನಿ ಕಾದಂಬರಿ,ಮೇಲ್ಮವತ್ತೂರಿನ ಆದಿಪರಾಶಕ್ತಿಯ ಕಥೆಗಳು,"ಬೊಂಬೆಮನೆ"ಯ ವಿಕ್ರಮಶೀಲ,ನಳ-ದಮಯಂತಿ,ಆಡುಗೂಲಜ್ಜಿ,ದುಷ್ಯಂತ-ಶಾಕುಂತಳೆಯರ ಕಥೆಗಳು ಹೀಗೆ ಬಾಲ್ಯವೆಲ್ಲ ಬಣ್ಣಿಸಲಸದಳ ಕಥೆಗಳ ಜಡಿಮಳೆಯಲ್ಲಿ ಅಕ್ಷರಶಃ ಕೊಚ್ಚಿಕೊಂಡೆ ಹೋಗಿತ್ತು.ಹೀಗಿದ್ದೂ ಈ ಕಥಾಸರಿತ್ಸಾಗರದ ದಾಹ ತೀರಿರಲಿಲ್ಲ.ಆಸೆ-ಅತಿಯಾಸೆಯ ಮಟ್ಟ ದಾಟಿ ದುರಾಸೆಯ ಆಜುಬಾಜುಗಳಲ್ಲಿ ಓಡಾಡುತ್ತಿತ್ತು.



ಅಗೋಳಿ ಮಂಜಣ ಈಗಲೂ ನನ್ನ ಆಸಕ್ತಿ ಕೆರಳಿಸುವ ಕಥಾಪುರುಷ.ಅಗೋಳಿ ಎಂದರೆ ತುಳುವಿನಲ್ಲಿ ಊಟದ ಹರಿವಾಣ ಅಥವಾ ಅಗಲವಾದ ಊಟದ ತಟ್ಟೆ ಎಂದರ್ಥ.ತುಳುನಾಡಿನಲ್ಲಿ ಅವನು ತನ್ನ ಹುಂಬ ಸಾಹಸಗಳಿಗಾಗಿ-ಬಕಾಸುರ ಭೋಜನಕ್ಕಾಗಿ ಪ್ರಸಿದ್ದ.ಪಂಜೆ ಮಂಗೇಶರಾಯರು ಮಕ್ಕಳಿಗಾಗಿ ಬರೆದಿದ್ದ ಅವನ ಕಥೆ ಸಹಿತ ಪದ್ಯ ಓದಿ ನಾನೂ ಅವನನ್ನು ತಪ್ಪಾಗಿ ಅರ್ಥೈಸಿದ್ದೆ.ಆದರೆ ಸಂಶೋಧಕಿ ಇಂದಿರಾ ಹೆಗ್ಗಡೆ ಯವರು ಬರೆದ "ಚೇಳಾರುಗುತ್ತು ಮಂಜನ್ನಯ್ಗೆರ್" ಕೃತಿ ಓದಿ ತಪ್ಪು ತಿಳುವಳಿಕೆಯನ್ನು ತಿದ್ದಿಕೊಂಡಿದ್ದೇನೆ. ( ಅಂದಹಾಗೆ ಈ ಚೇಳಾರುಗುತ್ತು ಮಂಗಳೂರಿನ ಬಳಿ ಇದೆ ಹಾಗು ಇದು ಸ್ವತಹ ಲೇಖಕಿಯ ಗಂಡನ ಮನೆ) ಅವನ ಕುರಿತು ನನ್ನ ಆಸಕ್ತಿ ಕೆರಳಿಸಿದ್ದ ಪಂಜೆಯವರ ಕವನ ಹೀಗಿತ್ತು.ಮಂಜಣ ಹೇಳ್ತಾನೆ ನೋಡಿ


"ಕಾರ್ಲದ ಬಾಕ್ಯಾರ್ ಕನ್ಜನ ಆವೋಡು,
ಕೊಡನ್ಜದಕಲ್ ಉದಾರ್ಗೆ ಆವೋಡು,
ಗುಜ್ಜೆರೆ ಕೆದು ಪೆರಾವೋಡು,
ಎನ್ನಪ್ಯೇ ದುಗ್ಗು ಬಳಸೋಡು,
ಯಾನ್ ಮಗೆ ಮಂಜಣೆ ಕುಲ್ಲುದು ಉಣೋಡು!"

(ಕಾರ್ಕಳದ ಬಾಕಿಮಾರು ಗದ್ದೆ ತಟ್ಟೆಯಾಗಬೇಕು,
ಕೊಣಾಜೆಯ ಅವಳಿ ಕೊಡುಗಲ್ಲುಗಳು ಉದಾರ್ಗೆ ಅಂದರೆ ಕಡುಬಾಗಬೇಕು,
ಗುಜ್ಜೆರೆ ಕೆರೆಯ ನೀರೆಲ್ಲ ಹಾಲಾಗಬೇಕು,
ನನ್ನಮ್ಮ ದುಗ್ಗು ಬಡಿಸಬೇಕು,
ಮಗ ನಾನು ಮಂಜಣ್ಣ ಕೂತುನ್ನಬೇಕು!)

ಮಾರಾಯ ಅಬ್ಬ! ಕಾರ್ಕಳದ ಕಾಬೆಟ್ಟಿನ ಏಲ್ನಾಡುಗುತ್ತಿನ ೧೨೦ ಎಕರೆ ಬಾಕಿಮರು ಗದ್ದೆಯಷ್ಟು ದೊಡ್ಡತಟ್ಟೆ ಇದ್ದರೇನೆ ಕೊಣಾಜೆ ಕಲ್ಲಿನಷ್ಟು ಗಾತ್ರದ ಕಡುಬು ಹಿಡಿಸಲು ಸಾಧ್ಯ,ಇನ್ನು ಅದಕ್ಕೆ ನಂಚಿಕೊಳ್ಳಲು ಗುಜ್ಜೆರೆ ಕೆರೆಯ ನೀರಿನಷ್ಟು ಹಾಲು ಬೇಕೇಬೇಕು! ಅಷ್ಟನ್ನು ಅದೊಡ್ಡ ಇಕ್ಕುಗೈಯ ಅವನಮ್ಮ ಬಡಿಸಬೇಕಂತೆ! ಇವ ಮಗ ಮಂಜಣ ಕೂತು ಉಣ್ಣಬೇಕಂತೆ!!! ನೀವೇ ಹೇಳಿ ಇಂತಹ ಉತ್ಪ್ರೇಕ್ಷಿತ ಕಥಾ ನಾಯಕ ಬಾಲ್ಯದಲ್ಲಿ ಬೆರಗು ಹುಟ್ಟಿಸಲಾರನೆ?
{ನಾಳೆಗೆ ಮುಂದುವರೆಸುವೆ}

1 comment:

Unknown said...

nimma ee lekhana tumba chennagide..Balyada tulu nadina ella nenpugalannu marli baruvante madide..hege barita iri