07 July 2013

ಮೋಡದ ದುಗುಡ ಹೊತ್ತ ಬಾನ ಮನದ ಒಳಗೆ ಮೌನ ಮರ್ಮರವಿದೆ.....
ಸಣ್ಣ ಸಣ್ಣ ಕನಸುಗಳ ಬಣ್ಣ
ಅನಿರೀಕ್ಷಿತ ದುಗುಡದ ಮೋಡಗಳ ಮುಸಲಧಾರೆಗೆ.....
ತೊಳೆದು ಹೋಗುವಾಗ ಅಸಹಾಯಕವಾಗಿ ಮನ ಕಂಪಿಸುತ್ತದೆ,
ಬಿಸಿಲ ಕೋಲಿನಲ್ಲಿ ನೆಲದೆದೆಯ ಸೋಕಿದ ಬಾನಿನೊಡೆಯನಿಗೆ
ಸಿಕ್ಕಿದ್ದು ನವಿರಾದ ಹುಸಿ ರೋಮಾಂಚನ ಮಾತ್ರ/
ಕತ್ತಲ ಕಡಲೊಳಗೆ ಬೆಳಕ ಸಾವಿರ ಮುತ್ತುಗಳಿವೆ
ಮನ ಮಾಸಿದ್ದರೂ ನಿರೀಕ್ಷೆ ಮಿನುಗಿಸುವ ಕೋಟಿ ಹೊಳೆವ ನತ್ತುಗಳಿವೆ.....
ಕವಿಯಾದ ಕರ್ಮಕ್ಕೆ ಬರೆಯುತ್ತೇನೆ
ಮೌನದ ರಾಗಕ್ಕೆ ಅನಿವಾರ್ಯ ಕಿವಿಯಾಗುತ್ತೇನೆ,
ಹಾಗೆಯೆ ಸಾಗುವ ಹಾದಿಯಲ್ಲಿ ಒಂಟಿತನ ಕಾಡುವ ಕ್ಷಣಗಳೆಲ್ಲ
ಕಣ್ಣ ಹನಿಗಳು ಸಾಂಗತ್ಯದ ಸಾಮಿಪ್ಯ ನೀಡುತ್ತವೆ.//


ಮರೆತ ಹಾದಿಯಲ್ಲಿ ಹೊರಳಿ ಹೆಜ್ಜೆಯಿಡುವಾಗ
ಹಳೆಯ ಮುಳ್ಳುಗಳು ಮತ್ತೆ ಮತ್ತೆ ಯಾತನಾಮಯವಾಗಿ ಚುಚ್ಚಿ ಕಾಡುತ್ತವೆ......
ದೂರ ತೀರದ ಕನಸಿನ ನೌಕೆಗೆ
ನಡುಗಡಲಲ್ಲೆ ತಳ ತೂತು ಬಿದ್ದ ಸಂಕಟ,
ನನಸಿನ ಆಸೆ ಕ್ಷೀಣವಾಗುತ್ತಿದ್ದರೂ ಸಹ
ಕನಸಿನ ಕೈಹುಟ್ಟು ಇನ್ನೂ ಸಕ್ರಿಯವಾಗಿರೋದಂತೂ ದಿಟ/
ಸುರಿವ ಹನಿ ಹನಿಯಲ್ಲೂ ಒಲವ ಸೋನೆ
ನನ್ನ ಪ್ರತಿ ಕನವರಿಕೆಯಲ್ಲೂ ನೀನೆ ಬರಿ ನೀನೆ....
ಮೌನ ಮನದ ಕತ್ತಲಿಗೆ ಬಿದ್ದ ಭೀಕರ ಬೆಂಕಿಗೆ
ಸಂಭ್ರಮದ ದೊಂದಿ ಬಲಿಯಾದದ್ದು,
ಒಲವ ದೀಪ ಆರುವ ಮೊದಲು ಸಿಡಿಸಿದ
ನಿರಾಕರಣೆಯ ಅನಿರೀಕ್ಷಿತ ಸೊಡರಿನಿಂದಲೆ.//


ಬಾಳ ಬಡ ಗುಡಿಸಲು ಉರಿದು
ಬೂದಿಯಾಗಿ ಇನ್ನಿಲ್ಲವಾಗಿದ್ದು.....
ಅದರೊಳಗೆ ಬೆಳಕ ನಿರೀಕ್ಷೆಯಲ್ಲಿ ಹಚ್ಚಿರಿಸಿದ್ದ
ಪ್ರೇಮದ ಮಣ್ಣ ಹಣತೆಯ ಕಿರು ಕಿಡಿಯಿಂದಲೆ,
ಆಸೆಯ ತೀರ ಸುದೂರ ಬಲು ದೂರ
ನಾವೆಯ ಹುಟ್ಟು ನೆಲ ಮುಟ್ಟದು....
ಒಡಕು ದೋಣಿಯೆಂದೂ ನಿರೀಕ್ಷೆಯ ದಡ ಸೇರಿ
ಅಲ್ಲೆಂದೂ ಸಂತಸದ ಗೂಡು ಕಟ್ಟದು/
ಹಸುರಿನ ಕನಸು ಬಿದ್ದರೂ ಸಾಕು
ಕೋಗಿಲೆಯ ಕಂಠ ತನ್ನಷ್ಟಕ್ಕೆ ತಾನೆ ಇಂಪಾಗುತ್ತದೆ....
ನಿನ್ನ ನೆನಪು ಸುಳಿದರೂ ಸಾಕು ನನ್ನ ಮೌನ ಮಾರ್ದವವಾಗಿ
ಸುಡು ಸೆಖೆಯಲ್ಲೂ ಮನ ತಂಪಾಗುತ್ತದೆ,
ಗಾಳಿಯಲ್ಲಿ ಹಾರಿಬಿಟ್ಟ ಕನಸಿನ ಹೂಮರಿಗಳಿಗೆಲ್ಲ
ರೆಕ್ಕೆ ಬಲಿತು ಸತತ ಹಾರಾಟದಿಂದ ಹೈರಾಣಾದರೂ ಸಹ....
ಅವಕ್ಕಿನ್ನೂ ನಿನ್ನ ಹೆಗಲ ರೆಂಬೆಯ ಗುರಿಯನ್ನ ಇನ್ನೂ ಮುಟ್ಟಲಾಗಿಯೆ ಇಲ್ಲ!//


ನಾದದ ಅಂತರಾಳ ಹೊಕ್ಕ ತಾಳದ ಮೈತುಂಬ
ಗಾನದ ಗಂಧ ಆವರಿಸಿ ಘಮಘಮಿಸುತ್ತಿದೆ....
ಗಾಳಿಗೂ ಎಡೆಯಿರದಷ್ಟು ಹತ್ತಿರದಲ್ಲಿ ಅಂಟಿಕೊಂಡ
ಒಲವ ಜೀವ ಅದೆಷ್ಟೆ ದೂರವಿದ್ದರೂ
ವಾಸ್ತವದಲ್ಲಿ ಇನ್ನಷ್ಟು ಹತ್ತಿರವಾಗಿರೋದು ವಿಸ್ಮಯ,
ಕರೆದು ಕರೆದು ಸಾಕಾಗಿ ಹೂತು ಹೋದ
ಕಂಠದ ಆಳದಲ್ಲಿ ಹಳೆಯ ಸ್ವರಗಳದೆ ಮಾರ್ದನಿ/
ಕುಡಿಯೊಡೆದ ಕನಸಿನ ಮೊಗ್ಗುಗಳೆಲ್ಲ
ಸಾಕಾರ ಸುಮಗಳಾಗಿ ಅರಳುವಂತಾಗಿದ್ದಾರೆ....
ಬದುಕು ಖಂಡಿತ ಕಿಲುಬು ಬಂಗಾರಕ್ಕಿಂತ ಅತ್ಯಮೂಲ್ಯವಾಗುತ್ತಿತ್ತು,
ಕರಗಿ ನೀರಾದರೂ ಸಹ
ನೆನಪುಗಳ ನಿತ್ಯ ಸಾಂಗತ್ಯ.....
ಮೌನಿ ಮನದ ಒಳಗೊಳಗೆ
ಅವ್ಯಕ್ತ ಆಹ್ಲಾದವನ್ನೆ ಹೊತ್ತು ತರುತ್ತವೆ// 

No comments: