09 July 2013

ತೀಡುವ ಗಾಳಿಯ ಕಚಗುಳಿಗೆ ಮನಸೋತ ಹೂಗಳು ನಾಚಿ ಕೆಂಪಾಗಿವೆ....

ಇರುಳಿನ ನಿಶ್ಚಿಂತ ನಿದಿರೆಯಿಲ್ಲ
ಹಗಲಿನ ಹೆಗಲ ಆಸರೆಯಿಲ್ಲ....
ಮನ ಕಾಲಾತೀತ
ಮೌನ ಮಾತ್ರ ಅತ್ಯಾಪ್ತ,
ಹನಿಹನಿ ಕೂಡಿಸಿ ಕುಸಿದು ಕೂತಿದ್ದೇನೆ
ಬಹುಶಃ ಹಾದಿ ತಪ್ಪಿಯಾದರೂ ನೀ ಮರಳಿ ಇಲ್ಲಿ ಬಂದರೆ....
ನಾನಿಲ್ಲದಿದ್ದರೂ ತಣ್ಣಗೆ ದಣಿವಾರಿಸಿಕೊಳ್ಳಲಿಕ್ಕೆ
ನನ್ನ ಕಣ್ಣೀರ ಕೊಳವಾದರೂ ಇಲ್ಲಿರುತ್ತೆ/
ಮೇಲ್ನೋಟಕ್ಕೆ ಸರಿ ಕಂಡದ್ದು ನೈತಿಕವಾಗಿಯೂ ತಪ್ಪಾಗಿ ಕಾಣುತ್ತಿಲ್ಲ
ಆದರೆ ಲೌಕಿಕ ಬಾಳಲ್ಲಿ ನೇರ ನಡೆಗೆ ತೂತು ಕಾಸಿನ ಕಿಮ್ಮತ್ತಿಲ್ಲ....
ಸಂತಸದ ಹಾದಿ ಬಲು ಕಿರಿದು
ಸಂಕಟದ ಹೆದ್ದಾರಿ ಯಾವಾಗಲೂ ಹಿರಿದು,
ಬಾಳಲ್ಲಿ ನೋವಿನ ಘಂಟೆ ನಾದ ಅಸಹನೀಯವಾದಂತೆಲ್ಲ
ನಾಳೆಯ ಕನಸು ಬರಿ ಬರಿದು.//


ಮೊದಲು ಮಂಜೂರಾಗಿದ್ದ ನಿನ್ನ ಒಲವ ಪರವಾನಗಿ
ಮತ್ತೆ ನವೀಕರಣವಾಗಲಿಲ್ಲ....
ನನ್ನ ಕಣ್ನಲ್ಲಿಯೆ ನನ್ನ ಧೀಮಂತಿಕೆ
ಕುಸಿಯದಂತೆ ತಡೆಯಲು ನನ್ನಿಂದಾಗಲೆಯಿಲ್ಲ,
ಸಾವಿನ ಕದ ಮತ್ತೆ ಮೌನವಾಗಿ ತಟ್ಟಲಾ?
ಹೇಳು....
ಇನ್ನೊಮ್ಮೆ ನಿನ್ನ ಒಲವಾಗಿಯೆ ನಾ ಹುಟ್ಟಲಾ?/
ಕೇವಲ ಕಸಿವಿಸಿಯಲ್ಲ
ನೋವಿದೆ....
ಸಂಕಟದ ಸೆಲೆಯಿದೆ,
ಪೊಳ್ಳು ಮಾತಿಗಿಂತ ಮೌನವನ್ನಷ್ಟೆ
ಅಪ್ಪಿಕೊಳ್ಳುವ ತೀರ್ಮಾನಕ್ಕೆ ಅದಕ್ಕೆ ನಾನು ಕಟ್ಟುಬಿದ್ದೆ.//


ಒಳ್ಳೆತನದ ಮನಸಿಗೆ ನಾಟುವ
ನೋವಿನಂಬು ಭಾವದೆಲೆಯನ್ನ ಛಿದ್ರಗೊಳಿಸಿದ ಮೇಲೆ....
ನೊಂದ ಮನದಿಂದ ಹೊರ ಚಲ್ಲುವ
ಕಂಬನಿ ನೆಲಮುಟ್ಟಿದರೆ,
ನೋಯಿಸಿದ ಕುಹಕಿಗಳ ಬಾಳು
ಶಾಪಕ್ಕೆ ತುತ್ತಾಗದೆ ಇದ್ದೀತ?/
ಗೊಂದಲ ನನಗೆ ನೆನ್ನಿನಿರುಳು ಸುರಿದದ್ದು ಜಡಿಮಳೆಯೋ?
ಇಲ್ಲಾ....
ನಿನ್ನ ನೆನಪಲ್ಲಿ ನನ್ನ ಕಣ್ಣುಗಳಲ್ಲಿ
ತೊಟ್ಟಿಕ್ಕುತ್ತಿದ್ದ ಹನಿಗಳ ಛಾಯೆಯೊ?,
ಸರಳ ಲೆಕ್ಖಗಳೆಲ್ಲ ಕ್ಲಿಷ್ಟ ಕಬ್ಬಿಣದ ಕಡಲೆಗಳಾಗುವ ಹೊತ್ತಲ್ಲಿ
ತಪ್ಪು ನನ್ನದೆ ಇರಬಹುದ? ಎನ್ನುವ ಪ್ರಶ್ನೆ....
ಸುಮ್ಮನಾದರೂ ಮನದಲ್ಲಿ ಏಳುತ್ತವೆ.//


ಸಮಯದ ಗಡಿ ಮೀರಿ
ಎಲ್ಲಾ ಸಂಯಮದ ಮಕರಂದ ಹೀರಿ....
ನಿರೀಕ್ಷೆಯ ದುಂಬಿ ಮರಳಿ ಮತ್ತರಳೋ
ಪರವಶ ಸುಮಕ್ಕೆ ಕಾಯುವಂತಿದ್ದರೆ ಅದೆ ಅಸಲು ಪ್ರೀತಿ,
ಗಾಳಿಗೆ ಓಲಾಡಿ ನಾದ ಹೊಮ್ಮಿಸುವ
ಘಂಟೆಯ ಸ್ವಚ್ಛಂದತೆ ಬೆರುಗು ಹುಟ್ಟಿಸುತ್ತದೆ....
ಜೊತೆಗೊಂಚೂರು ಮತ್ಸರವನ್ನೂ ಸಹ/
ತುಮುಲ ಮನದೊಳಗೆ ಅದೇನೆ ಇದ್ದರೂ
ಸಂತಸದ ಸೋಗು ಹಾಕಿಕೊಳ್ಳುವುದರಲ್ಲಿ ನಿಸ್ಸೀಮನಾಗಿ ಹೋಗಿದ್ದೇನೆ....
ತನ್ಮಯನಾಗಿ ಎದೆಯ ಪ್ರತಿಯೊಂದು ಮಿಡಿತಗಳಿಗೂ ಕಿವಿಯಾಗಿ ಕುಳಿತಿದ್ದೇನೆ
ಒಂದಾದರೂ ನಿನ್ನ ನೆನಯದೆ ಧವಢವಿಸಿದ್ದರೆ ಕೇಳು!,
ಆದರೂ ನೀನೆ ನನ್ನ ಕೊನೆಗಾಣದ ಪಯಣದ....
ಅಂತಿಮ ನಿಲ್ದಾಣ
ನಿನ್ನ ಸೇರಿ ಇಲ್ಲವಾಗುವುದಷ್ಟೆ....
ನನ್ನೊಳಗಿನ ಅತಿಕ್ಷೀಣ ಪಣ.//

No comments: