09 July 2013

ಏಕಾಂತ ಕೋಟೆಗೆ ಕನ್ನ ಕೊರೆದ ನೆನಪುಗಳ ಜೊತೆಗೆ ಕಂಬನಿ ಝರಿಯ ನಿನಾದವಿದೆ....

ನಲಿವಿನ ನೌಕೆ ಅನಿರೀಕ್ಷಿತವಾಗಿ ನಡುಗಡಲಲ್ಲಿ
ಮುಳುಗಿದ್ದಕ್ಕೆ ಖಂಡಿತವಾಗಿಯೂ ಎಂದಿಗೂ ಬೇಸರವಿಲ್ಲ,
ಆದರೆ ನೀನೆ ಖುದ್ದು ಮುಂದೆ ನಿಂತು ಅದನ್ನ ಮುಳುಗಿಸಿದೆ....
ಅಲ್ಲದೆ ಅದು ಮುಳುಗುವ ಚಂದವನ್ನ ಮೂರನೆಯವರೊಂದಿಗೆ ನೋಡಿ ಆಸ್ವಾದಿಸಿದೆ
ಅನ್ನುವ ಸಂಕಟ ಮಾತ್ರ ಒಡಲ ಉರಿಸಿ ನಿರಂತರ ನನ್ನ ಕೊಲ್ಲುತ್ತಿದೆ,
ಅದೆಷ್ಟೆ ಶ್ರುತಿ ಮಾಡಿದರೂ ಸಂತಸದ ಸಾಲುಗಳಿಗೆ
ಬಾಳ ರಾಗ ಹೊಂದುತ್ತಿಲ್ಲ....
ಉದ್ದಕ್ಕೂ ಸಾಂಗತ್ಯ ನೀಡುತ್ತಾ ಜೊತೆಯಾಗಿರೋದು
ಕೇವಲ ಸಂಕಟದ ತಾಳ/
ಅಂತರದ ಸಂಬಂಧದಲ್ಲಿ ಗಾಢತೆ ಕನಸು
ಆಪ್ತ ಭಾವವಿಲ್ಲದಲ್ಲಿ ಮೆರೆಯೋದು
ಕೇವಲ ಮುನಿಸು....
ರಾಗದ ಅನುಗಾಲದ ಸಂಗಾತಿ ತಾಳ
ಅದರ ಸಾಂಗತ್ಯದ ಹೊರತು
ಗಾನ ಒಂದು ಯಾತನೆಯ ಯಾನ,
ಕಡಿದು ನಾನು ಕಟ್ಟಿ ಕಟ್ಟೆ ಹಾಕಿದ್ದು ಅಷ್ಟರಲ್ಲೆ ಇದೆ
ಮೂರು ದಶಕ ಸುಮ್ಮನೆ ಸವೆದೆ ಹೋದವಲ್ಲ ಅನ್ನುವ ವಾಸ್ತವ ನೆನಪಾದಾಗಲೆಲ್ಲ....
ವ್ಯಥೆ ಆವರಿಸಿ ಕಾಡಿದರೂ ನಿರ್ಲಿಪ್ತನಾಗಿ
ಅದನ್ನ ನಿರ್ಲಕ್ಷ್ಯಿಸುವುದು ಭಂಡ ಮನಕ್ಕೆ ಅಭ್ಯಾಸವಾಗಿ ಹೋಗಿದೆ.//


ಕಳ್ಳ ಕನಸು-ಮಳ್ಳ ಮನಸು
ಮೌನ ಒಳಗೆಷ್ಟಿದೆಯೋ....
ಅದರ ಮಾರ್ದವ ಅನುರಣನ
ಹೊರಗೆ ಅಷ್ಟೆ ಇದೆ,
ಉದಾಸೀನದ ಒದ್ದೆ ಕೋಳಿ ಮನಕ್ಕೆ
ಇಂದ್ಯಾಕೋ ತೀರದ ಮೈಗಳ್ಳತನ ಆವರಿಸಿದೆ....
ಜೊತೆಗಿಷ್ಟು ನಿನ್ನ ನೆನಪು!
ತೂಕಡಿಸುವವನಿಗೆ ಸರಿಯಾದ ಹಾಸಿಗೆ ಸಿಕ್ಕಿದೆ?!/
ಜೀವಂತವಿರೋದೊಂದು ಭ್ರಮೆ
ಬಾಳ್ವೆಯೊಂದು ಗುಮಾನಿ....
ನಾಳೆಗಳಲ್ಲಿ ನಿರೀಕ್ಷೆಗಳು ಮಾತ್ರ ಜೀವಂತ,
ಮನ ಮೊಗ್ಗಿನ ಅಂತರಾಳದಲ್ಲಿ
ನಿರೀಕ್ಷೆಯ ಸೌಗಂಧ ಲೇಪಿಸಲಾಗಿದೆ....
ಚಿರ ಸೂತಕದ ಮೌನ ಬಾಳಿನಲ್ಲಿ
ನೆಲೆಯಾದ ಮೇಲೆ ಸಂತಸದ ಗಾಳಿಗೆ ಅಲ್ಲೇನು ಕೆಲಸ?.//



ಸಾಗುವ ಹಾದಿ ಇನ್ನೂ ಸುದೂರ
ಮನ ಮಾತ್ರ ಬಹು ಭಾರ....
ಸಂಕಟದ ಸರಕನ್ನ ಒಲ್ಲದಿದ್ದರೂ ಹೊರಲೇಬೇಕು ನಿರ್ವಾಹವಿಲ್ಲ
ಜೊತೆಗೆ ನಿನ್ನ ಹನಿ ಕನಸುಗಳ ಚೂರುಗಳಿರಲಿ ನನಗಷ್ಟೆ ಸಾಕು,
ಕನಸಲ್ಲಿ ಒಂದಾಗಿಯೆ ಹೊಕ್ಕು
ಅದರಿಂದ ಹೊರ ಬರುವ ಹಾದಿಯನ್ನ ಮಾತ್ರ....
ಮೊದ ಮೊದಲು ಮಾತ್ರ ನಾ ಮರೆತಂತೆ ನಟಿಸಿದ್ದು ನಿಜ/
ಆತ್ಮದ ನೆರಳಿನಲ್ಲಿ ತೋಯ್ದ
ಮನಸಿನ ಮೇಲೆ ನೆನಪಿನ ಇಬ್ಬನಿ ಕವಿದಿದೆ....
ಗತಿ ಮರೆಯದ ಮನದ ಸ್ವರ
ಮೌನದೊಳಗೆ ಮತ್ತೆ ಮತ್ತೆ ಮಾರ್ದನಿಸುತ್ತಿದೆ,
ಮನದೊಳಗಿನ ಬೆಚ್ಚನೆ ಭಾವನೆಗಳು ಎಂದೆಂದೂ ಮಾರಾಟದ ಸರಕಲ್ಲ
ಆದ್ದರಿಂದಲೆ ನನ್ನೆಲ್ಲ ಭಾವದಲೆಗಳು....
ನಿನ್ನ ತೋಯಿಸಲಷ್ಟೆ ಮೀಸಲು.//


ಆತ್ಮಸಾಕ್ಷಿಯ ಅನುಸಾರ
ಅನುರಣನಗೊಳ್ಳುವ ಒಲವ ಮಾರ್ದನಿಗಳಿಗೆ.....
ಮನ ಶಾಶ್ವತ ಮಾರು ಹೋಗಿರೋದು ಸತ್ಯ,
ಕತ್ತಲ ಕಾನಲ್ಲಿ ಮಿಂಚುವ ಹುಳುವಿನ ಬಾಲದ ಬೆಳಕಿನಂತಹ
ನನ್ನೊಲವಿಗೆ ನಿನ್ನ ಬಾಳ ಬೆಳಗಲಾಗದ ಮೇಲೆ....
ಬೆಲೆಯಾದರೂ ಏನು?/
ಏರಿಳಿತದ ಬಾಳಿಗೆ ಸಂಕಟದ ಸುಂಕ ಕಟ್ಟುವ
ಅಸಹಾಯಕ ಮನ ಸೋತು ಸವೆಯುತ್ತಿದೆ....
ಖಾಲಿ ಮನದ ತುಂಬ ಆವರಿಸಿರುವ
ಮೌನದ ಅನುರಣದಲ್ಲಿ ನಿರಾಸ ಸ್ವಪ್ನಗಳೆಲ್ಲ ಲೀನ,
ಒಲವಲ್ಲಿ ಎಡವಿ ಬಿದ್ದ ಅಮಾಯಕ ಮಗು ಮನ
ಒಲಿದ ಜೀವ ಆದ ಮಾಯದ ಗಾಯವನ್ನೊಮ್ಮೆ....
ನವಿರಾಗಿ ಸವರಿದರಷ್ಟೆ ಸಾಕು
ಇನ್ನೆಲ್ಲಾ ಅದರ ಪಾಲಿಗೆ ಗೌಣ.//

No comments: