28 July 2013

ಕನಸಿಗೆ ನೂರು ಕವಲುಗಳಿವೆ....

ಹಿತ ಮೀರಿದ ಮೌನ
ಹಿಡಿತ ತಪ್ಪಿದ ಬಾಳಗಾನ....
ಸುಮಧುರವಾಗಿ ಉಳಿದಿಲ್ಲ
ಸಂಕಟದ ಸೂತಕ ಇನ್ನೂ ಕಳೆದಿಲ್ಲ,
ಇಂದಿನ ಅನುಭವ ನಾಳಿನ ನೆನಪು
ಅದರ ತೋರುಹಾದಿಯ ಬೆಳಕಿದ್ದರೇನೆ
ಬರಲಿರುವ ಬಾಳೆಲ್ಲ ಹೊಳಪು/
ಬಯಸಿದ್ದು ಕೈಗೆಟುಕಲಿಲ್ಲ
ಕೈಗೆಟುಕುವುದು ಮನಸಿಗೆ ಸಮ್ಮತವಿಲ್ಲ....
ನೆನಪಾದರೂ ಇವೆಯಲ್ಲ ಅಲ್ಪತೃಪ್ತನಿಗೆ
ಇದೇ ಸಾಕಷ್ಟಾಯಿತು,
ಚಲಿಸುವ ಕ್ಷಣಗಳ ಚಕ್ರದ ಮೇಲೆ
ಘಳಿಗೆಗಳ ಬಂಡಿ ಉರುಳಿ....
ಬೆಳಕು ಬಿರಿದಾಗ ನಿಶಾಪುಷ್ಪ
ಹಾಗೆಯೆ ಬಾಡಿ ಇನ್ನಿಲ್ಲವಾಯ್ತು.//


ಸಂಜೆಯ ಸಲುಗೆಗೆ ಇರುಳಲ್ಲಿ
ಬಾನಿತ್ತ ಮುತ್ತು ಬೆಳದಿಂಗಳು....
ಮುಂಜಾವಿನಲ್ಲಿ ನೆಲದ ಒಡಲಿಗೆ
ಮುತ್ತಿಡುತಾವೆ ನವಿರು ಕಿರಣದ ಕಣ್ಗಳು,
ಗಾಢ ಭಾವ ಅವ್ಯಕ್ತ
ಮಾತು ಪೇಲವ ಮೌನ ಮಾತ್ರ....
ಸರ್ವ ಜಂಜಡಗಳಿಂದ ಚಿರ ಮುಕ್ತ/
ಕಾಲ ಸವೆಯುತಿದೆ ಗಾಯ ಮಾಯುತ್ತಿಲ್ಲ
ನೀನಿತ್ತಿದ್ದ ಒಲವ ಸಾಲ ಇನ್ನೂ ಬಾಕಿಯುಳಿದೆ....
ಬಡ್ಡಿಯ ಹೊರತು ಬಡವ ನನ್ನಿಂದ
ಇನ್ನೇನನ್ನೂ ಕಟ್ಟಲಾಗುತ್ತಲೆ ಇಲ್ಲ,
ಹಣೆ ಬರಹ ನಿಸ್ಸಂಶಯವಾಗಿ ನನ್ನದೆ ಆಗಿತ್ತು
ಆದರೆ ಅದರ ಕೈ ಬರಹ ಮಾತ್ರ....
ಅನುಗಾಲ ನಿನ್ನದಾಗಿತ್ತು
ಕೇವಲ ನಿನ್ನದೆ ಆಗಿತ್ತು.//


ನಿನ್ನೊಂದಿಗಿನ ನನ್ನೊಲವನ್ನ
ಇನ್ಯಾರೊಂದಿಗೂ ನಾ ಹಂಚಿಕೊಂಡಿಲ್ಲ....
ಎಂದಿಗೂ ಹಂಚಿಕೊಳ್ಳುವುದೂ ಇಲ್ಲ,
ಕತ್ತಲ ಕಣ್ಗಳಲ್ಲಿ ಬೆಳದಿಂಗಳ ಹೊಳಪು
ಬೆಳಕು ಚೆಲ್ಲಿದ ಹಗಲಿನಲ್ಲಲ್ಲ....
ಕಡುಗತ್ತಲ ಇರುಳಿನಲ್ಲೆ ಕನಸಿಗೆ
ಹರಡೋದು ಆಕ್ಷಾಂಶೆಯ ಅಚ್ಚ ಬಿಳುಪು/
ಗಾನದ ಅಲೆಗಳ ಮೇಲೆ ತೇಲುವ
ಮನ ನೌಕೆಗೆ ದಿಕ್ಕಿಲ್ಲ ದೆಸೆಯಿಲ್ಲ....
ತೀರ ಮುಟ್ಟುವ ಹುಮ್ಮಸಿದ್ದರೂ
ದೂರ ದೂರದವರೆಗೆ ದಡವೂ ಕಾಣುತ್ತಿಲ್ಲ,
ಸಡಿಲ ಮಾತುಗಳಿಗಿಂತ
ಬಿಗಿ ಮೌನವೆ ಲೇಸು....
ನೋವು ಹನಿ ತೂಕ ಹೆಚ್ಚಿದ್ದರೂ
ನಿರರ್ಥಕ ನಲಿವಿಗಿಂತ ಆ ತಣ್ಣನೆ ಕ್ರೌರ್ಯವೆ ಕೊಂಚ ಸೊಗಸು.//


ಸಾಗದು ಸರಿಯಾದ ಪಥದಲ್ಲಿ ಮೋಡವೆಂದೂ
ಗಾಳಿಯ ಸಾಂಗತ್ಯದ ಹೊರತು....
ಸಾಗರದ ಗರ್ಭದಿಂದ ಹೊರಟ ನೀರ ಯವ್ವನದ ಪಯಣ
ಮತ್ತೆ ಮುಪ್ಪಾಗಿ ಕಡಲ ಒಡಲನ್ನೆ ಸೇರುವ ಮಧ್ಯೆ....
ಕಾಣುವ ನೆಲವೆಲ್ಲ ಅದರ ಪಾಲಿಗೆ ಹೊಚ್ಚ ಹೊಸದು,
ಸಹಜತೆಯ ನಿಖರ ಭಾವದಲ್ಲಿ
ನಿರಂತರ ಒಲವಿರೋದು ಖಂಡಿತ....
ಕೃತಕ ತೋರಿಕೆಯಲ್ಲೂ ಪ್ರಾಮಾಣಿಕ ಪ್ರೀತಿಯನ್ನರಸೋನು ಮಾತ್ರ
ನನ್ನಂತಹ ವಿರಾಗಿ ಮೋಹಾಂಧ ಪಂಡಿತ/
ಮೋಸದ ಮೋಡವ ನೆಲವೆಂದೂ
ಅಂಧ ಪ್ರೀತಿಯಲ್ಲಿ ನಂಬಬೇಕಿಲ್ಲ....
ಇಂದೇಕೋ ನಂಬಿಸಿ ವಂಚಿಸಿದ ಅದು ಹನಿಯಾಗಿ
ಒಲವ ಧರೆಯೆದೆಯ ಮೇಲೆ ಸುರಿಯಲೆ ಇಲ್ಲ,
ಇರುಳ ನೂಲಿನೆಳೆಯಲ್ಲಿ ಕಟ್ಟಿದ
ಕನಸಿನ ಹೂವುಗಳೆಲ್ಲ ಚದುರಿ ಬೇರೆಯಾಗಿದ್ದರೂ....
ವಾಸ್ತವದ ಕಠೋರತೆ ಅದೇಕೋ
ಜಡ್ಡುಗಟ್ಟಿದ ಮನಸಿಗೆ ಸಮ್ಮತವಾಗುತ್ತಲೆ ಇಲ್ಲ.//

No comments: