15 October 2014

ಪುಸ್ತಕದೊಳಗೆ - ೨೦






"ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ"

ಲೇಖಕರು; ಬಿಜಿಎಲ್ ಸ್ವಾಮಿ,
ಪ್ರಕಾಶಕರು; ಕಾವ್ಯಾಲಯ  ( ಮೊದಲ ಐದು ಮುದ್ರಣ.)

ಪ್ರಕಟಣೆ; ೧೯೬೦.


ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ ( ಹೊಸ ಆವೃತ್ತಿ ಐದು ಬಾರಿ.)


ಪ್ರಕಟಣೆ; ೨೦೦೮,

ಕ್ರಯ; ರೂಪಾಯಿ ಮೂವತ್ತೈದು.


"ನಮ್ಮ ಹೊಟ್ಟೆಯ ಚರಿತ್ರೆಗೆ ಹಿನ್ನೆಲೆ....

ನೂರಕ್ಕೆ ತೊಂಬತ್ತು ಪಾಲು ಭಾರತ ಭೂಮಾತೆ ಈಯ್ದ ಕಾಯಿಪಲ್ಯೆಗಳನ್ನೂ ಗೆಡ್ಡೆ ಗೆಣಸುಗಳನ್ನೂ ಹಣ್ಣು ಹಂಪಲುಗಳನ್ನೂ ತೃಪ್ತಿ ಪಟ್ಟುಕೊಂಡಿದ್ದ ನಮ್ಮ ಹೊಟ್ಟೆಯೊಳಕ್ಕೆ ಹದಿನಾರನೆ ಶತಮಾನದಿಂದೀಚೆಗೆ ಕಡಲಾಚೆಯಿಂದ ಕಾಲಿಟ್ಟ ಸಸ್ಯಜನ್ಯ ತಿನಿಸುಗಳು ಒದಗಿ ಬಂದವು. ಅವುಗಳಿಗೆ ನಮ್ಮ ನಾಲಗೆ ಲೊಟಗೆ ಹೊಡೆಯಿತು, ಹೊಟ್ಟೆ ತಾಳ ಹಾಕಿತು. ಹೀಗೆ ಬಂದ ಐವತ್ತು ನೂರು ವರ್ಷಗಳೊಳಗಾಗಿ ಅಮದು ಸಸ್ಯಗಳ ಫಲವೇ ನಮ್ಮ ದೈನಂದಿನ ಉಣಿಸು-ತಿನಿಸುಗಳಲ್ಲಿ ಮೇಲುಗೈಯಾಯಿತು. ಭಾರತೀಯ ಮಡಲಿನಲ್ಲಿ ಬೇರು ಬಿಟ್ಟಿತು, ಬೆಳೆಯಿತು, ಸಾಗುವಳಿಗೆ ಒಗ್ಗಿತು. ಮಡಿಲ ವಿಸ್ತಾರದ ಬಹುಭಾಗವನ್ನು ಆಕ್ರಮಿಸಿಕೊಂಡಿತು. ಅದುವರೆಗೂ ನಮ್ಮ ಹೊಟ್ಟೆಪಾಡನ್ನು ನಿರ್ವಹಿಸಿಕೊಂಡು ಬಂದಿದ್ದ ಕಾಯಿ ಪಲ್ಯ ಹಣ್ಣು ಹಂಪಲು ತೆರೆಯ ಹಿಂದೆ ಸರಿದವು. 'ಸೀಮೆ' ಆಹಾರ ವಸ್ತುಗಳು ಬಹಿರಂಗಕೆ ಇಳಿದವು.

'ಕಡಲ ಪಯಣದ ದಾರಿಗಳು'

ಮಾನವನ ಚರಿತ್ರೆಯಲ್ಲೇ ಕ್ರಿಸ್ತಶಕ ೧೫೦೦ನೆ ಇಸವಿ ಬಹು ಮುಖ್ಯವಾದ ಒಂದು ಘಟ್ಟ. ನಮ್ಮ ಹೊಟ್ಟೆಯ ಚರಿತ್ರೆಯಲ್ಲೂ ಅಷ್ಟೆ. ಕೊಲಂಬಸನು ಅಮೇರಿಕಾ ಖಂಡವನ್ನು ಕಂಡು ಹಿಡಿದ ಒಂದೆರಡು ವರ್ಷಗಳಲ್ಲೇ ವಾಸ್ಕೋ-ಡಾ-ಗಾಮಾನ ಮಹಾ ಸಾಧನೆ ಸಿದ್ಧಿ ಪಡೆಯಿತು. ೧೪೯೭ನೆ ಇಸವಿ ಜುಲೈ ಎಂಟನೆ ತಾರೀಕು ಲಿಸ್ಟನಿನ ಜನ ಸಮೂಹ ಟೇಗಸ್ ದಡದಲ್ಲಿ ಗುಂಪುಗೂಡಿತ್ತು. ನಿಲುವಂಗಿ ಧರಿಸಿದ್ದ ಪ್ರೀಸ್ಟ್'ಗಳು ಜನಸಮೂಹವನ್ನು ಭೇದಿಸಿಕೊಂಡು ಸಾಲುಸಾಲಾಗಿ ಎದುರು ವರಸೆಯಲ್ಲಿ ನಿಂತರು. ಜನರ ದೃಷ್ಟಿಯೆಲ್ಲ ಬಂದರಿನ ಕಡೆಗೆ ನಾಟಿತ್ತು. ಅಲ್ಲಿ ನಾಲ್ಕು ಹಡಗುಗಳು ಭಾರತಾಭಿಮುಖವಾಗಿ ಯಾನ ಮಾಡಲು ಹವಣಾಗಿ ಲಂಗರಿನಲ್ಲಿದ್ದವು. ಪ್ರೀಸ್ಟ್'ಗಳು ಶಾಂತಿಮಂತ್ರವನ್ನು ಘೋಷಿಸಿದರು. ಜನ ಹರ್ಷೋದ್ಗಾರ ಮಾಡಿತು. ನಾವಿಕರು ಹಡಗಿನ ಪಟಗಳನ್ನು ಬಿಚ್ಚಿದರು. ವಾಸ್ಕೋ-ಡಾ-ಗಾಮನ ನೌಕಾ ಸಮೂಹ ಚಲಿಸಿತು. ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಎಂಬ ದಕ್ಷಿಣ ತುದಿಯನ್ನ ಬಳಸಿ ಹತ್ತು ತಿಂಗಳಾದ ಮೇಲೆ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಕಲ್ಲಿಕೋಟೆ (ಈಗಿನ ಕ್ಯಾಲಿಕಟ್.)ಯಲ್ಲಿ ಲಂಗರು ಬಿಟ್ಟಿತು ( ಮೇ ೨೦, ೧೪೯೮.). ಯುರೋಪಿನಿಂದ ಭಾರತಕ್ಕೆ ಸಮುದ್ರ ಮಾರ್ಗ ಸ್ಥಾಪಿತವಾಯಿತು. ಕಲ್ಲಿಕೋಟೆಯಲ್ಲಿ ಆ ವೇಳೆಗಾಗಲೆ ಅರಬ್ಬಿಯರೂ, ಮೂರ್ನಾಡಿಗರೂ ಕಡಲು ವ್ಯಾಪಾರೋದ್ಯಮವನ್ನು ನೆಲೆಯಾಗಿಸಿಕೊಂಡಿದ್ದರು. ಪೋರ್ಚುಗೀಝರ ಆಗಮನ ಅವರಿಗೆ ಹಿಡಿಸಲಿಲ್ಲ. ತಕರಾರು ಆರಂಭವಾಯಿತು. ವಾಸ್ಕೋ-ಡಾ-ಗಾಮನು ಹಿಂದಿರುಗುವಾಗ ಕಲ್ಲಿಕೋಟೆಯ ದೊರೆ ( ಜಾಮೋರಿನ್.)ಯಿಂದ ಕರಾರು ಪತ್ರವನ್ನು ಪಡೆದುಕೊಂಡ. ಅದರ ಸಾರಾಂಶ 'ನಿಮ್ಮ ನಾಡಿನ ಮಾನ್ಯ ವಾಸ್ಕೋ-ಡಾ-ಗಾಮನು ನನ್ನ ರಾಜ್ಯಕ್ಕೆ ಬಂದದ್ದು ಬಹಳ ಸಂತೋಷ. ನನ್ನ ರಾಜ್ಯದಲ್ಲಿ ದಾಲ್ಚೀನಿ, ಲವಂಗ, ಶುಂಠಿ ಮತ್ತು ಮಣಿಗಳು ಹೇರಳವಾಗಿವೆ. ನಿಮ್ಮ ಚಿನ್ನ, ಬೆಳ್ಳಿ, ಹವಳ ಮತ್ತು ಕೇಸರಿ ಬಣ್ಣದ ಬಟ್ಟೆಗಳನ್ನು ವಿನಿಮಯ ಮಾಡಿಕೊಳ್ಳಲು ಇಚ್ಛೆ ಪಡುತ್ತೇನೆ' ಈ ಸಂಧಾನದೊಡನೆ ವಾಸ್ಕೋ-ಡಾ-ಗಾಮನು ೧೪೯೯ನೆ ಇಸವಿಯ ಸೆಪ್ಟೆಂಬರಿನಲ್ಲಿ ಟೇಗಸ್ ಬಂದರಿಗೆ ವಾಪಾಸು  ಬಂದು ಸೇರಿದ.



ಇಷ್ಟು ಮಾತ್ರವೆ ಸಂಭವಿಸಿದ್ದರೆ ನಮ್ಮ ಹೊಟ್ಟೆಯ ರೀತಿನೀತಿಗಳು ಮಾರ್ಪಾಟುಗೊಳ್ಳಬೇಕಾದ ಸಂದರ್ಭವೇ ಒದಗುತ್ತಿರಲಿಲ್ಲ. ಪೋರ್ಚುಗೀಝರ ಸಮುದ್ರ ಯಾನದಲ್ಲಿ ಇನ್ನೊಂದು ಅನಿರೀಕ್ಷಿತ ಘಟನೆ ಸಂಭವಿಸಬೇಕಾಯಿತು. ಇದು ನಡೆದದ್ದು ೧೫೦೦ರಲ್ಲಿ. ವಾಸ್ಕೋ-ಡಾ-ಗಾಮನ ವಿಜಯ ಯಾತ್ರೆಯಿಂದ ಹುರುಪುಗೊಂಡ ಪೋರ್ಚುಗೀಝರು ಕ್ರಾಬೆಲ್ ಎಂಬ ಮುಖ್ಯಾಧಿಕಾರಿಯ ಮೇಲ್ವಿಚಾರಣೆಯಲ್ಲಿ ೧೫೦೦ ಯೋಧರ ಸಮೇತ ೩೮ ನಾವೆಗಳ ವ್ಯೂಹವನ್ನು ಏರ್ಪಡಿಸಿಕೊಂಡು ಭಾರತಾಭಿಮುಖವಾಗಿ ಯಾನ ಮಾಡಿದರು. ಲಿಸ್ಟನ್ನಿನಿಂದ ದಕ್ಷಿಣ ದಿಕ್ಕಿನಲ್ಲಿ ಹರಿಯುತ್ತಿದ್ದ ನೌಕಾ ವ್ಯೂಹ ಕ್ಯಾನರಿ ದ್ವೀಪಗಳನ್ನು ದಾಟಿದ ಬಳಿಕ ದಾರಿ ತಪ್ಪಿ ನೈಋತ್ಯ ದಿಕ್ಕಿನಲ್ಲಿ ಪ್ರಯಾಣವನ್ನು ಮುಂದುವರೆಸಿ ದಕ್ಷಿಣ ಅಮೇರಿಕಾದ ಬ್ರಿಝಿಲ್ ಪೂರ್ವ ತೀರವನ್ನು ತಲುಪಿತು. ಈ ಘಟನೆಯಿಂದ ಯಾನ ಮಾರ್ಗಕ್ಕೊಂದು ಸುಯೋಗ ಲಭಿಸಿತು. ಪೋರ್ಚುಗಲ್-ಭಾರತ ಸಮುದ್ರ ಮಾರ್ಗದಲ್ಲಿ ಓಯಸಿಸ್ ದೊರಕಿದಂತಾಯಿತು. ಕುಡಿಯುವ ನೀರನ್ನೂ, ಸೌದೆಯನ್ನೂ, ಆಹಾರ ಸಾಮಗ್ರಿಗಳನ್ನೂ ಶೇಖರಿಸಿಟ್ಟುಕೊಳ್ಳುವ ಕೇಂದ್ರವೊಂದು ಸ್ಥಾಪಿತವಾಯಿತು. ಹೀಗೆ ತಪ್ಪು ಹೆಜ್ಜೆಯಿಟ್ಟ ನೌಕಾವ್ಯೂಹ ಅನೇಕ ಕಷ್ಟ ನಷ್ಟಗಳಿಗೆ ಈಡಾಗಿ ಕೇವಲ ಆರು ನೌಕೆಗಳೊಡನೆ ಭಾರತ ತೀರವನ್ನು ಸೇರಿತು. ಈ ಪಯಣ ದಾರುಣಮಯವಾಗಿತ್ತಾದರೂ ಮರು ಪಯಣಗಳು ಸುಗಮವಾದವು. ಪೋರ್ಚುಗೀಝರು ದಕ್ಷಿಣ ಭಾರತದಲ್ಲಿ ವಲಸೆ ಹೂಡಲು ನಾಂದಿಯಾಯಿತು.

೧೫೦೦ರಲ್ಲಿ ಗೋವೆಯಲ್ಲಿ ಸ್ಥಾಪನೆಗೊಂಡ ಪೋರ್ಚುಗೀಝರು ಬಹು ಸ್ವಲ್ಪ ಕಾಲದಲ್ಲಿಯೇ ಆಫ್ರಿಕಾದ ತೀರ ಪ್ರದೇಶಗಳಲ್ಲಿ ಕೆಲವನ್ನೂ, ದಕ್ಷಿಣ ಭಾರತದ ಕರಾವಳಿಯ ಕೆಲವು ಪ್ರದೇಶಗಳನ್ನೂ ಸ್ವಾಧೀನ ಪಡಿಸಿಕೊಂಡರಲ್ಲದೆ, ಪೌರಾತ್ಯ ದೇಶಗಳಲ್ಲೂ ನೆಲೆ ಬಿಟ್ಟರು. ೧೫೧೧ರಲ್ಲಿ ಮಲಕಾ, ೧೫೧೨-೧೪ ರಲ್ಲಿ ಮೋಲ್ಯುಕಾ ಮತ್ತು ಸಯಾಮ್ ಪ್ರದೇಶಗಳಲ್ಲಿ ವಲಸೆ ಸ್ಥಾಪಿಸಿ ಕೆಂಪು ಸಮುದ್ರ ಹಾಗೂ ಪರ್ಷಿಯಾ ಕೊಲ್ಲಿಗಳಲ್ಲೂ ಓಡಿಯಾಡಿದರು. ೧೫೧೭ರಲ್ಲಿ ಚೈನಾ ದೇಶದ ಕಾಂಟನ್ ಪಟ್ಟಣವನ್ನು ಆಕ್ರಮಿಸಿಕೊಂಡರು. ೧೫೫೭ರಲ್ಲಿ ಮಕಾವೋವನ್ನು ಸ್ಥಾಪಿಸಿದರು. ಇಲ್ಲಿಂದ ಜಪಾನ್ ಮತ್ತು ಫಾರ್ಮೋಸಾ ದ್ವೀಪಗಳೊಡನೆ ವಾಣಿಜ್ಯ ವಿನಿಮಯಗಳನ್ನು ಏರ್ಪಡಿಸಿಕೊಂಡರು.

ಹೀಗೆ ಹವಣಗೊಂಡ ಪೋರ್ಚುಗಲ್ - ಭಾರತ ಸಮುದ್ರ ಮಾರ್ಗದ ಮೂಲಕ ಸುಮಾರು ೧೬೫ ವರ್ಷ ಕಾಲ ಅವಿಚ್ಛಿನ್ನವಾಗಿ ಹೋಗು ಬರವುಗಳು ನಡೆದವು. ಲಿಸ್ಟನ್ನಿನಿಂದ ಬ್ರಿಝಿಲಿಗೆ ಹೋಗಿ ಅಲ್ಲಿ ಆಹಾರಾದಿಗಳ ಸಂಗ್ರಹಣೆ ಮಾಡಿಕೊಂಡು ಅಲ್ಲಿಂದ ಕೇಪ್ ಆಫ್ ಗುಡ್ ಹೋಪಿನಲ್ಲಿ ತಂಗಿ ಅಲ್ಲಿಯೂ ಉಗ್ರಾಣವನ್ನು ತುಂಬಿಕೊಂಡು ಗೋವೆಯನ್ನು ಸೇರುವುದು ಪೋರ್ಚುಗೀಝರ ಸಾಧಾರಣ ಕ್ರಮವಾಯಿತು. ಗೋವೆಯಿಂದ ಪೌರಾತ್ಯ ದೇಶಗಳಿಗೆ ಸರಕು ಸಾಮಗ್ರಿಗಳನ್ನು ಕೊಂಡೊಯ್ಯುವುದು ನೆಲೆಯಾಗಿ ನಿಂತಿತು. ಹೀಗಾಗಿ ಅಲ್ಲಿಂದ ಇಲ್ಲಿಗೆ - ಇಲ್ಲಿಂದ ಅಲ್ಲಿಗೆ ವಿನಿಮಯವಾದ ಸಾಮಗ್ರಿಗಳು ಸಾಂಸ್ಕೃತಿಕ ಬಳಕೆಗಳೂ ಸುಲಭವಾಗಿ ಒಂದರೊಡನೊಂದು ಕಲೆತವು. ಯುರೋಪು ರಾಷ್ಟ್ರಗಳಿಂದ, ದಕ್ಷಿಣ ಅಮೇರಿಕೆಯಿಂದ, ಆಫ್ರಿಕಾದಿಂದ, ಚೈನಾ, ಜಪಾನ್, ಫೆಸಿಫಿಕ್ ದ್ವೀಪಗಳು ಮೊದಲಾದ ಪೂರ್ವ ರಾಷ್ಟ್ರಗಳಿಂದ ಪ್ರಯತ್ನ ಪೂರ್ವಕವಾಗಿಯೋ ಇಲ್ಲಾ ಪ್ರಾಸಂಗಿಕವಾಗಿಯೋ ಅಲ್ಲಿಯ ಸರಕುಗಳು ಭಾರತಕ್ಕೂ ಭಾರತದ ಸರಕುಗಳು ಅಲ್ಲಿಗೂ ವಿನಿಮಯವಾದವು. ಇಂತಹ ಸರಕುಗಳಲ್ಲಿ ಸಸ್ಯೋತ್ಪನ್ನಗಳೂ, ಸಸ್ಯೋತ್ಪನ್ನ ವಸ್ತುಗಳೂ ಸೇರಿವೆ.


ಅಮೇರಿಕಾದ ಇರವನ್ನೂ, ಯುರೋಪಿನಿಂದ ಭಾರತಕ್ಕೆ ಸಮುದ್ರ ಮಾರ್ಗವನ್ನೂ ಕಂಡು ಹಿಡಿದಾದ ಮೇಲೆ ಕೆಲವು ವರ್ಷಗಳಲ್ಲೇ ಇನ್ನೊಂದು ಮಹತ್ ಘಟನೆ ಸಂಭವಿಸಿತು. ೧೫೨೦ -೨೧ರಲ್ಲಿ ಮೆಗಲ್ಲನ್ ಎಂಬಾತ ಸಮುದ್ರ ಮಾರ್ಗವಾಗಿ ಭೂಮಿಯನ್ನು ಸುತ್ತುವರೆದು ಬಂದ. ಇದರಿಂದ ಕೆಲವು ಫೆಸಿಫಿಕ್ ದ್ವೀಪಗಳು ಬೆಳಕಿಗೆ ಬಂದವು. ೧೫೯೫ರಲ್ಲಿ ಸ್ಪೇಯ್ನಿಗರು ಮೆಕ್ಸಿಕೋವಿನಿಂದ ಫಿಲಿಫೈನಿನ ಚಿಬೂ ಎಂಬೆಡೆಯಲ್ಲಿ ತಮ್ಮ ವಲಸೆಯನ್ನು ಹೂಡಿದರು. ಇದಕ್ಕೆ ಐವತ್ತು ವರ್ಷಗಳ ಹಿಂದೆಯೆ ಪೋರ್ಚುಗೀಝರು ಫಿಲಿಫೈನ್ ದ್ವೀಪಾವಳಿಗೆ ದಕ್ಷಿಣದಲ್ಲಿರುವ ಮೊಲ್ಯೂಕಾದಲ್ಲಿ ವಲಸೆ ಬಿಟ್ಟಿದ್ದರು. ದಕ್ಷಿಣ ಫಿಲಿಫೈನಿನೊಂದಿಗೆ ವ್ಯಾಪಾರ ಸಂಬಂಧವನ್ನೂ ಬೆಳೆಸಿದ್ದರು. ಹೀಗಾಗಿ ದಕ್ಷಿಣ ಅಮೇರಿಕಾ ಮೆಕ್ಸಿಕೋಗಳಿಂದ ಸಸ್ಯೋತ್ಪನ್ನ ಸಾಮಗ್ರಿಗಳು ( ಅವುಗಳ ದಾತೃ ಸಸ್ಯಗಳೂ) ಫಿಲಿಫೈನಿಗೆ ಬಂದವು. ಅಲ್ಲಿಂದ ಪೋರ್ಚುಗೀಝರ ಕೈ ಸೇರಿ ಅವರ ವಲಸೆಯಿದ್ದ ಪೌರಾತ್ಯ ಪ್ರದೇಶಗಳನ್ನೂ ತಲುಪಿದವು, ಭಾರತಕ್ಕೂ ಬಂದವು. ಹೀಗೆ ನೂತನ ಖಂಡದ ಬೆಳೆಗಳು ಪ್ರಾಚೀನ ಖಂಡಕ್ಕೆ ಸಾಗಿದ ಸಂದರ್ಭವೂ ಪ್ರಾಚೀನ ಪ್ರದೇಶಗಳ ಬೆಳೆಗಳು ನೂತನ ಖಂಡಕ್ಕೆ ಆಗಮಿಸಿದ ಸಂದರ್ಭವೂ ಏರ್ಪಟ್ಟದ್ದು ಹದಿನೈದನೆಯ ಶತಮಾನದಿಂದೀಚೆಗೆ ಎಂಬುದನ್ನು ಮುಖ್ಯವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಈ ವಿನಿಮಯದಲ್ಲಿ ಪಾಲ್ಗೊಂಡವರು ಪೋರ್ಚುಗೀಝರು ಹಾಗೂ ಸ್ಪೇಯ್ನಿಗರು. ಫಿಲಿಫೈನ್ ಮತ್ತು ಪಾಲಿನೇಷಿಯಾಗಳಿಗೂ ಮಧ್ಯ ಅಮೇರಿಕಾ ಖಂಡಕ್ಕೂ ವಾಣಿಜ್ಯ ವಿನಿಮಯಗಳನ್ನು ಏರ್ಪಡಿಸಿದವರು ಸ್ಪೇಯ್ನಿಗರಾದರೆ, ಭಾರತಕ್ಕೂ ದಕ್ಷಿಣ ಅಮೇರಿಕಾಕ್ಕೂ ಸಂಬಂಧ ಕಲ್ಪಿಸಿಕೊಟ್ಟವರು ಪೋರ್ಚುಗೀಝರು.


ಸ್ಪೇಯ್ನಿಗೂ ಭಾರತಕ್ಕೂ ನೇರವಾದ ನಿಕಟವಾದ ಸಂಬಂಧ ಯಾವಾಗಲೂ ಇರಲಿಲ್ಲ. ಆದರೆ ಪೋರ್ಚುಗೀಝರಿಗೂ ಭಾರತಕ್ಕೂ (ಮುಖ್ಯವಾಗಿ ಪಶ್ಚಿಮ ಕರಾವಳಿ ಪ್ರದೇಶ.) ೧೬ನೆ ಶತಮಾನದಿಂದ ವ್ಯಾಜ್ಯದ ಮತ್ತು ವ್ಯಾಪಾರದ ನಂಟು ಗಂಟು ಬಿದ್ದಿತು. ೧೬/೧೭ನೇ ಶತಮಾನಗಳ ವೈಭವವನ್ನೂ ಮುಂದಿನ ಕಾಲದಲ್ಲಿ ಮೆರೆಯಿಸಲಿಲ್ಲವಾದರೂ ಭಾರತ ಸ್ವಾತಂತ್ರ್ಯ ಯುಗದವರೆಗೂ ಪೋರ್ಚುಗೀಝರು ಗೋವೆಯನ್ನು ಭಾರತದಲ್ಲಿ ಅಧಿಪತ್ಯ ಕೇಂದ್ರವಾಗಿಟ್ಟುಕೊಂಡು ವ್ಯಾಪಾರ ವಾಣಿಜ್ಯಗಳನ್ನು ನಿರ್ವಹಿಸುತ್ತಿದ್ದರು. ಸುಮಾರು ನಾಲ್ಕು ಶತಮಾನಗಳ ಕಾಲ ಪೋರ್ಚಗೀಝು ವ್ಯಾಪಾರ ಸಂಬಂಧ ನಮ್ಮ ಸಾಗುವಳಿ ಬೆಳೆಗಳನ್ನು ಮಾರ್ಪಡಿಸಿದ್ದಲ್ಲದೆ ನಮ್ಮ ಹೊಟ್ಟೆಯ ದಿನಚರಿಯನ್ನೂ ಮಾರ್ಪಡಿಸಿದ್ದಲ್ಲದೆ ನಮ್ಮ ಸಂಸ್ಕೃತಿಯ ಮೇಲೂ ತಕ್ಕ ಮಟ್ಟಿನ ಪ್ರಭಾವವನ್ನು ಒತ್ತಿತ್ತು.


'ಭಾರತೀಯ ಜಾಲದಲ್ಲಿ ಪೋರ್ಚುಗೀಝ್ ಎಳೆಗಳು'

ಗೋವೆ, ಕಲ್ಲಿಕೋಟೆ ಮೊದಲಾದ ಪಶ್ಚಿಮ ತೀರದ ಪ್ರದೇಶಗಳಲ್ಲಿ ನೆಲೆಸಿದ ಪೋರ್ಚುಗೀಝರು ಮೊದಮೊದಲು ಭಾರತೀಯರೊಂದಿಗೆ ಅಷ್ಟಾಗಿ ಕಲೆಯಲಿಲ್ಲ. ಕ್ರಮೇಣ ಸ್ಥಿತಿ ಬದಲಾಯಿಸಿತು. ಪೋರ್ಚಗೀಝು ಕ್ರೈಸ್ತಮತ ಸಂಸ್ಥೆಗಳು ಚರ್ಚುಗಳು ಹುಟ್ಟಿಕೊಂಡವು. ೧೫೫೫ರಲ್ಲಿ ಜೆಸುಯಿಟ್ ಪಾದ್ರಿಗಳು ಚರ್ಚಿನ ಸರ್ವಾಧಿಕಾರಿಗಳಾಗಿ ರೋಮ್ ಮಠದ ಮುಖ್ಯ ಪ್ರತಿನಿಧಿಗಳಾದರು. ಜನರಲ್ಲಿ ಕ್ರೈಸ್ತ ಮತವನ್ನು ಹರಡಿದರು. ಪೋರ್ಚುಗೀಝ್ - ಹಿಂದೂ ವಿವಾಹಗಳನ್ನು ಆಗ ಮಾಡಿಸಿದರು. ಭಾರತದಲ್ಲಿ ಪೋರ್ಚುಗೀಝ್ ರಾಯಭಾರ ನೆಲೆಗೊಳ್ಳುವುದಕ್ಕೆ ಈ ಉಪಾಯವೇ ಮುಖ್ಯವಾದ ತಳಹದಿಯಾಯಿತು.



ಗೋವೆಯ ಗವರ್ನರ್ ಆಗಿದ್ದ ಅಲ್ಬುಕರ್ಕ್'ನು ಎಳೆಯರ ವಿದ್ಯಾಭ್ಯಾಸಕ್ಕೆ ವಿಶೇಷ ಗಮನವನ್ನು ಸಲ್ಲಿಸಿದ. ಆದರೆ ಇಲ್ಲಿಯೂ ಒಂದು ಕೊಕ್ಕೆಯಿಟ್ಟ. 'ಕೊಚ್ಚಿ (ಕೊಚಿನ್.) ಯಲ್ಲಿ ಎಳೆ ಮಕ್ಕಳು ಓದುವ ಆಜ್ಞೆಗಳನ್ನು ಜಾರಿಗೆ ತಂದಿದ್ದೇನೆ. ಪೋರ್ಚುಗೀಝ್ - ಹಿಂದೂ ಮದುವೆಯಿಂದ ಹುಟ್ಟಿದ ಮಕ್ಕಳಿಗೆಲ್ಲ ಶಿಕ್ಷಣ ಕೊಡಬೇಕೆಂದು ಕಾನೂನು ಜಾರಿ ಮಾಡಿದ್ದೇನೆ'. ಅಂಟಾನಿಯೋ ಗಾರ್ಲೋ ಎಂಬುವವನು ಹುಡುಗರಿಗೆ ಕ್ರೈಸ್ತ ತತ್ವಗಳನ್ನು ಬೋಧಿಸುತ್ತಿದ್ದನಲ್ಲದೆ ಕೇವಲ ಆರು ತಿಂಗಳಲ್ಲಿ ತಮಿಳು ಓದು ಬರಹಗಳನ್ನು ಕಲಿಸುತ್ತಿದ್ದ. ಪೋರ್ಚುಗೀಝ್ ಪಾದರಿಗಳ ಉಪಯೋಗಕ್ಕಾಗಿ ತಮಿಳು ವ್ಯಾಕರಣವೊಂದನ್ನು, ಪೋರ್ತುಗೀಝ್ - ತಮಿಳು ನಿಘಂಟೊಂದನ್ನು ರಚಿಸಿದ. ಈ ಸಂಪರ್ಕಗಳಿಂದ ಪೋರ್ಚುಗೀಝ್ ಭಾಷೆಯ ನುಡಿಗಳು ತಮಿಳಿಗೆ ರೂಪಾಂತರವಾಗಿ ಬಂದವು.


ಪೋರ್ಚುಗೀಝರ ವಲಸೆ ಪಶ್ಚಿಮ ಭಾರತದಲ್ಲಿತ್ತಾದರೂ ಪೂರ್ವ ದಿಕ್ಕಿನಲ್ಲಿದ್ದ ತಮಿಳುನಾಡನ್ನು ತನ್ನ ಪ್ರಭಾವದೊಳಗೆ ಹೇಗೆ ಸೆಳೆದುಕೊಂಡಿತು ಎಂಬ ಪ್ರಶ್ನೆ ಏಳುತ್ತದೆಯಲ್ಲವೆ? ಗೋವೆ, ಕೊಚ್ಚಿಗಳಲ್ಲಿ ವಲಸೆ ಸ್ಥಿರಗೊಳಿಸಿದ ಕಾಲದಲ್ಲಿ ಸಿಲೋನಿನಲ್ಲೂ ಬಿಡದಿಗಳನ್ನು ನೆಲೆಗೊಳಿಸಿದರು ಪೋರ್ಚುಗೀಝರು. ಆಗಿನ ಸಿಂಹಳದಲ್ಲಿ ತಮಿಳರ ಸಂಖ್ಯೆ ಅಧಿಕ. ಅಲ್ಲಿಂದ ತಮ್ಮ ತಾಯ್ನಾಡಿನೊಂದಿಗೆ ನಿಕಟವಾದ ಸಂಬಂಧವನ್ನ ಇಟ್ಟುಕೊಂಡಿದ್ದರು. ಸಿಂಹಳದ ತಮಿಳಿನಲ್ಲಿ ಪೋರ್ಚಿಗೀಝ್ ಬೆರೆತುಕೊಂಡಿತು. ತಮಿಳುನಾಡಿಗೆ ಅಲ್ಲಿಂದ ಬಂದು ಸೇರಿತು.

ಗೋವೆಯನ್ನ ಆಗ ಸುತ್ತುವರೆದಿದ್ದ ಕನ್ನಡ ಪ್ರದೇಶಗಳಲ್ಲೂ ಈ ಬಗೆಯ ಸಂಭವಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲೂ, ತೀವೃತೆಯಲ್ಲೂ ನಡೆದಿರಬೇಕೆಂದು ಊಹಿಸುವುದರಲ್ಲಿ ಅನುಚಿತತೆ ಇಲ್ಲ. ಕನ್ನಡ ಭಾಷಾ ಸಂಸ್ಕೃತಿಗಳ ಬೆಳವಣಿಗೆಯಲ್ಲಿ ನಮ್ಮ ಕುತೂಹಲ ಸಾಕಷ್ಟು ಉತ್ಸಾಹದಿಂದ ಸಾಗಿಲ್ಲ. ಇದು ಕೊನರುವವರೆಗೂ ಅನ್ಯ ಭಾಷೆಗಳ, ಅನ್ಯ ಜನಾಂಗಗಳ ಒತ್ತಡವು ಕನ್ನಡತನವನ್ನು ರೂಪಿಸಿರುವ ರೂಢಿಸಿರುವ ರೀತಿನೀತಿಗಳನ್ನು ಸ್ಪಷ್ಟವಾಗಿ ತಿಳಿಯುವಂತಿಲ್ಲ.

'ಪರಂಗಿ ಪದದ ಕುರಿತು'


ಪರಂಗಿಯವರೆಂದರೆ ಇಂಗ್ಲೀಷರು ಎಂಬುದು ಇಂದಿನ ಸಾಮಾನ್ಯ ತಿಳುವಳಿಕೆ. ಚಾರಿತ್ರಿಕ ಹಿನ್ನೆಲೆಯಲ್ಲಿ ಇದರ ಬೆಳವಣಿಗೆ ಸ್ವಾರಸ್ಯವಾಗಿದೆ. ಮೊದಮೊದಲು ಪರದೇಶದಿಂದ ನಮ್ಮ ದೇಶಕ್ಕೆ ಅಧಿಕ ಸಂಖ್ಯೆಯಲ್ಲಿ ಬಂದು ನೆಲೆಸಿದ ಬಿಳಿಯ ಜನಾಂಗ ಪೋರ್ಚಗೀಝರದೆ. ಕ್ರುಸೇಡ್ ಕಾಲದಿಂದಲೂ ಫ್ರೆಂಚ್ ಜನಾಂಗಕ್ಕೆ ಫ್ರಾಂಕ್ಸ್ ಎಂಬ ಹೆಸರು ಸಂದಿತ್ತು. ಯುರೋಪಿನಲ್ಲಿ ಪಾಶ್ಚಿಮಾತ್ಯರಿಗೂ ಇದೇ ಹೆಸರು ಬಳಕೆಯಲ್ಲಿತ್ತು. ಭಾರತಕ್ಕೆ ಬಂದು ನೆಲೆಸಿದ ಪೋರ್ಚುಗೀಝರಿಗೂ ನಮ್ಮವರು ಈ ಪದದ ರೂಪಾಂತರವನ್ನೆ ಪರಂಗಿ ಎಂದು ಉಪಯೋಗಿಸಿದರು. ಪೋರ್ಚುಗೀಝ್ - ಹಿಂದೂ ವಿವಾಹಗಳ ಫಲಕ್ಕೂ ಇದೇ ಹೆಸರು ಅಂಟಿ ಕೊಂಡಿತು. ಅಂತರ್ಜಾತಿ ವಿವಾಹಗಳಿಂದ ಹುಟ್ಟಿದವರನ್ನು ಕೀಳು ಭಾವನೆಯಿಂದ ಸಂಭೋಧಿಸುವ ಪ್ರತ್ಯೇಕತೆಯನ್ನೂ ಪಡೆದುಕೊಂಡಿತು. ಕ್ರಮೇಣ ಭಾರತಕ್ಕೆ ಬಂದ ಬಿಳಿಯ ಜನಾಂಗಕ್ಕೆಲ್ಲ ಈ ಪರಿಭಾಷೆಯೆ ಅನ್ವಯವಾಯಿತು.


ಇಲ್ಲಿ ಒಂಂದು ಟೀಕೆ ಉಚಿತವಾಗಿದೆ. ಪೋರ್ಚುಗೀಝ್ - ಹಿಂದೂ ವಿವಾಹಗಳು ಎಷ್ಟೋ ಕುಲೀನ ಮನೆತನಗಳಲ್ಲಿಯೂ ನಡೆದವು. ಗಣ್ಯ ವಂಶಜರ ಪಾರಂಪರ್ಯ ಬೆಳೆಯಿತು. ಅಂತವರಿಗೆ ಪರಂಗಿ ಅಪಪ್ರಯೋಗ ಸಲ್ಲಲಿಲ್ಲ. ಸಮಾಜದ ಕೆಳ ದರ್ಜೆಯಲ್ಲಿ ಹೇಯ ನಡತೆಯಿಂದ ಜನಿತರಾದವರಿಗೆ ಈ ಪ್ರಯೋಗ ಸಂದಿತು. ಜನತೆಯ ಕೀಳು ಶ್ರೇಣಿಯಲ್ಲಿ ಈ ಬೆರಕೆಗಳಿಗೆ ಉತ್ತೇಜನ ಕೊಡುವುದು ಅಲ್ಬುಕರ್ಕನ ಯೋಜನೆಗಳಲ್ಲೊಂದಾಗಿತ್ತು. ಪರಂಗಿ ಪದಕ್ಕೆ ಆಡುಮಾತಿನ ಇನ್ನೊಂದು ದುರಾದೃಷ್ಟವೂ ಸಂಭವಿಸಿತು. ಒಂದು ಬಗೆಯ ಮೇಹ ರೋಗಕ್ಕೆ ಪೋರ್ಚುಗೀಝ್ ಭಾಷೆಯಲ್ಲಿ ಬ್ರಾಂಕೋ ಎಂಬ ಹೆಸರಿದೆ. ತಮಿಳರ ಮಾತಿನಲ್ಲಿ ಇದು ಪರಂಕಿ ಆಗಿ ಬಿಟ್ಟಿತು! ಪರಂಗಿ ರೋಗವೆಂಬ ಪದ ಹುಟ್ಟಿದ್ದು ಹೀಗೆ. ಪೋರ್ಚಗೀಝರು ಮೊದಲು ಪರಂಗಿಯವರಾದರು. ಪೋರ್ಚುಗೀಝ್ ಹಿಂದೂ ಸಂಬಂಧದಿಂದ ಹುಟ್ಟಿದವರು ಪರಂಗಿಯವರೆಂದು ದೂಷಿತರಾದರು. ಮೇಹಜಾಡ್ಯ ಪರಂಗಿ ರೋಗವಾಯಿತು. ೧೭ನೆ ಶತಮಾನದಲ್ಲಿ ಪರಂಗಿ ಎಂಬುದು ಸಾಮಾನ್ಯವಾದ ಬೈಗುಳವಾಗಿತ್ತು. ೧೬೩೯ರಲ್ಲಿ ಪಾದ್ರಿ ಮಾರ್ಚಿಂಜ್ ಎಂಬಾತ ಬರೆದಿಟ್ಟಿರುವ ಮುಕ್ತಕ ' ಕರಾವಳಿ ಪ್ರದೇಶದ ಪೋರ್ಚುಗೀಝರು ಭಾರತೀಯರ ಚಿತ್ತಕ್ಕೆ ನೋವನ್ನುಂಟು ಮಾಡಿ ತನ್ಮೂಲಕ ಅವರ ತಾತ್ಸಾರವನ್ನು ತಂದು ಕೊಂಡಿದ್ದಾರೆ'


ಆದರೆ ಪರಂಗಿ ಪದಕ್ಕೆ ಕುಹಕವಾಗಲಿ, ಹೀನಾಯವಾಗಲಿ ಸೋಕದಿದ್ದ ಸಂದರ್ಭಗಳೂ ಇದ್ದವು. ಹೊರದೇಶದಿಂದ ಅಮದಾದ ಗಿಡಮರಗಳಿಗೆ ಪರಂಗಿ ಚಕ್ಕೆ, ಪರಂಗಿ ಹಣ್ಣು, ಪರಂಗಿ ತಾಳೆ ಮೊದಲಾದ ಪದಗಳ ಉದಯವಾದದ್ದು ಇಂಥಾ ವರ್ಷಗಳಲ್ಲಿ. ಬಿಳಿಯರು ಯುದ್ಧ ಕಾಲದಲ್ಲಿ ಉಪಯೋಗಿಸುತ್ತಿದ್ದ ಕ್ಯಾನನ್ ಎಂಬ ಗುಂಡು ಶಸ್ತ್ರ ನಮಗೆ ಹೊಸತಾದರಿಂದ ಆ ಯಂತ್ರಕ್ಕೆ ಫಿರಂಗಿ ಎಂಬ ಮಾತು ಸಂದಂತೆ ಭಾಸವಾಗುತ್ತದೆ."


- ಬಿಜಿಎಲ್ ಸ್ವಾಮಿ.


ಆಡು ಭಾಷೆಯ ಸಹಜ ಕನ್ನಡದಲ್ಲಿ ವೈಜ್ಞಾನಿಕ ಬರಹಗಳು ಅತಿ ವಿರಳವಾಗಿ ಬರೆಯಲಾಗುತ್ತಿದ್ದ ದಿನಮಾನಗಳಲ್ಲಿ ಬಿಜಿಎಲ್ ಸ್ವಾಮಿಯವರು ಅದನ್ನ ಜನಪ್ರಿಯಗೊಳಿಸಿದ ಜಿ ಟಿ ನಾರಾಯಣರಾವ್, ಶಿವರಾಮ ಕಾರಂತರ ಸಾಲಿನಲ್ಲಿ ಹೆಸರಿಸಬಹುದಾದ ಲೇಖಕರಾಗಿದ್ದಾರೆ. ತಮ್ಮ ಲಘು ಹಾಸ್ಯ ಶೈಲಿಯಿಂದ ಮನರಂಜಿಸುತ್ತಲೆ ವೈಜ್ಞಾನಿಕ ಸಂಗತಿಗಳನ್ನ ನಮ್ಮೆದುರು ಬಿಡಿಸಿಡುವ ಅವರ ಲೇಖನಗಳು ಅನನ್ಯ. ಹೆಚ್ಚಾಗಿ ಜೀವ ವಿಜ್ಞಾನ, ಅದರಲ್ಲೂ ಸಸ್ಯ ಶಾಸ್ತ್ರದ ಕುರಿತೆ ಅವರು ಬರೆದು ಶ್ರೀಸಾಮಾನ್ಯ ಓದುಗರಲ್ಲೂ ವಿಜ್ಞಾನದ ಕುರಿತು ಅರಿವು ಮೂಡಿಸಿದ್ದಾರೆ.

ಕನ್ನಡ, ಇಂಗ್ಲೀಷ್ ಹಾಗೂ ತಮಿಳೂ ಹೀಗೆ ಮೂರು ಮೂರು ಭಾಷೆಗಳಲ್ಲಿ ಕೃತಿಗಳನ್ನ ರಚಿಸಿರುವ ಇವರ ಕೆಲವೆ ಕೆಲವು ಸೃಜನಶೀಲ ಕೃತಿಗಳನ್ನ ಹೊರತು ಪಡಿಸಿದರೆ ಬಹುತೇಕ ಇನ್ನುಳಿದ ಎಲ್ಲವೂ ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದವೆ ಆಗಿವೆ. ಪಾರಿಭಾಷಿಕ ಪದಗಳ ಕಬ್ಬಿಣದ ಕಡಲೆಯನ್ನ ಓದುಗರಿಗೆ ಬಲವಂತವಾಗಿ ತಿನ್ನಿಸದೆ ಸರಳವಾದ ಸಹಜ ಹಾಸ್ಯದ ಶೈಲಿಯಲ್ಲಿ ಅವರು ಬರೆದ ಕೃತಿಗಳನ್ನ ಓದುವುದೆ ಒಂದು ಸೊಗಸು. ಕನ್ನಡದ ಖ್ಯಾತ ಸಾಹಿತಿ ಡಿ ವಿ ಗುಂಡಪ್ಪ ಬಿಜಿಎಲ್ ಸ್ವಾಮಿಯವರ ಅಪ್ಪ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಮುಗಿಸಿದ ಸ್ವಾಮಿಯವರು ಸ್ನಾತಕ ಪದವಿಯನ್ನ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದರು. ಅನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲಿಕ್ಕಾಗಿ ಅಮೇರಿಕೆಗೆ ಹೋದವರು ತಮ್ಮ ಸಂಶೋಧನಾ ಪ್ರಬಂಧವನ್ನೂ ಅಲ್ಲಿಯೆ ಮಂಡಿಸಿ ಮರಳಿ ಬಂದರು.


ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನ ಆರಂಭಿಸಿದ ಅವರು ಅನಂತರ ಬರವಣಿಗೆಯಲ್ಲಿಯೂ ತಮ್ಮ ಛಾಪನ್ನ ಮೂಡಿಸಿದರು. ಅವರ 'ಕಾಲೇಜು ರಂಗ' ಕಾಲೇಜು ತರಂಗ' 'ತಮಿಳು ತಲೆಗಳ ನಡುವೆ' 'ಅಮೇರಿಕಾದಲ್ಲಿ ನಾನು' 'ಪಂಚ ಕಳಶ ಗೋಪುರ' 'ಮೈಸೂರು ಡೈರಿ' 'ಹಸಿರು ಹೊನ್ನು' ಇವೆಲ್ಲ ನನ್ನ ಮೆಚ್ಚಿನ ಕೃತಿಗಳು. ನಮ್ಮ ದೇಶದಲ್ಲದೆ ಹೊರಗಿನಿಂದ ಬಂದಿರುವಂತದ್ದಾದರೂ ಇಂದು ಅವಿಲ್ಲದೆ ನಮ್ಮ ಅಡುಗೆಯನ್ನ ಕಲ್ಪಿಸಿಕೊಳಲಿಕ್ಕೂ ಆಗದ ಹಾಗೆ ನಮ್ಮ ಮನೆಯ ಊಟದ ಮೆನುವಿನಲ್ಲಿ ಬೆರೆತು ಹೋಗಿರುವ ತರಕಾರಿಗಳ ಬಗ್ಗೆ ಅವರು ಬರೆದ ಸವಿವರವಾದ 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ'ವೂ ಅದೆ ಸಾಲಿಗೆ ಸೇರುತ್ತದೆ. ಅವರ 'ಕಾಲೇಜು ರಂಗ' ಚಲನಚಿತ್ರವಾಗಿಯೂ ಅಪಾರ ಜನಪ್ರಿಯತೆ ಗಿಟ್ಟಿಸಿದೆ.


ಹಸಿಮೆಣಸು, ಮುಸುಕಿನ ಜೋಳ, ನೆಲ ಕಡಲೆ, ಟೊಮ್ಯಾಟೋ, ಗೆಣಸು, ಆಲೂಗೆಡ್ಡೆ, ಮರಗೆಣಸು, ಗೋಡಂಬಿ, ಬೀನ್ಸ್, ಪಪ್ಪಾಯಿ, ಅನಾನಾಸು, ಸೀತಾಫಲ, ಸಪೋಟಾ, ಪೇರಳೆ ಮುಂತಾದುವುಗಳು ನಮ್ಮ ದೇಶಕ್ಕೆ ವಲಸೆ ಬಂದವು ಅಂತ ಇಂದೇನಾದರೂ ಆಣೆ ಪ್ರಮಾಣ ಮಾಡಿ ಹೇಳಿದರೂ ಸಹ ಯಾರೂ ನಂಬಲಿಕ್ಕಿಲ್ಲ. ಮಡಿವಂತರ ಮನೆಯ ಅಡುಗೆಯಲ್ಲಿ ಇನ್ನೂ ಅಸ್ಪರ್ಶ್ಯವೆ ಆಗಿದ್ದರೂ ಸಹ ಯಕಶ್ಚಿತ್ ಈರುಳ್ಳಿ ಇಂದು ಮನಸ್ಸು ಮಾಡಿದರೆ, ಏಕಾಏಕಿ ತನ್ನ ಬೆಲೆ ಏರಿಸಿಕೊಂಡು ಆಳುವ ಸರಕಾರವನ್ನೆ ಅಲುಗಾಡಿಸಿ ಅರ್ಧರಾತ್ರಿಯಲ್ಲಿಯೂ ಕೊಡೆ ಹಿಡಿದು ಮೆರೆದಾಡುವ ಪುಢಾರಿಗಳನ್ನ ಮುಲಾಜಿಲ್ಲದೆ ಸೋಲಿಸಿ 'ಮರಳಿ ಮನೆಗೆ' ಅಟ್ಟುವಷ್ಟು ಪ್ರಬಲವಾಗಿವೆ! ಒಟ್ಟಿನಲ್ಲಿ ನಮ್ಮ ಮನೆಯ ಮೇಲೆ ಹಕ್ಕು ಸಾಧಿಸಿ ನಮ್ಮ ಹೊಟ್ಟೆಯ ಸಾಧಕ ಬಾಧಕಗಳ ಹೊಣೆ ಹೊತ್ತ ತರಕಾರಿಗಳ ಜಾತಕವನ್ನ ಸ್ವಾಮಿ ಸರಳವಾಗಿ ಕುತೂಹಲ ಹುಟ್ಟಿಸುವಂತೆ ಇಲ್ಲಿ ನಮ್ಮೆದುರು ಕಟ್ಟಿಕೊಟ್ಟಿದ್ದಾರೆ. ಅವೆ ತರಕಾರಿಗಳನ್ನ ಹೊಟ್ಟೆಗೆ ಸೇರಿಸುತ್ತಾ ಅದೆ ಹೊಟ್ಟೆ ಹುಣ್ಣಾಗುವಂತೆ ಓದಲಿಕ್ಕೆ ಹೇಳಿ ಮಾಡಿಸಿದ ಪುಸ್ತಕ ಇದು ಎಂದರೆ ತಪ್ಪಿಲ್ಲ.

No comments: