17 October 2014

ಪುಸ್ತಕದೊಳಗೆ - ೨೧








"ತುಳುವರ ಮೂಲತಾನ, ಆದಿ ಅಲಡೆ"

( ಪರಂಪರೆ ಮತ್ತು ಪರಿವರ್ತನೆ.)

ಲೇಖಕರು; ಡಾ ಇಂದಿರಾ ಹೆಗ್ಗಡೆ,

ಪ್ರಕಾಶಕರು; ನವಕರ್ನಾಟಕ  ( ಮೊದಲ ಮುದ್ರಣ.)

ಪ್ರಕಟಣೆ; ೨೦೧೨.


ಕ್ರಯ; ರೂಪಾಯಿ ಮುನ್ನೂರು.




"ಆದಿ ಮೂಲತಾನ ‘ಆದಿ ಆಲಡೆ’


‘ಆದಿಶೇಷ, ಆದಿನಾಥ, ಆದಿನಾರಾಯಣ, ಆದಿ ದೇವ, ಆದಿ ದೈವ, ಆದಿ ಪುರುಷ, ಆದಿ ಬುದ್ಧ' - ಮುಂತಾದ ‘ಆದಿ’ಗಳ ಕಲ್ಪನೆಗಳನ್ನು ನಾವು ಜೈನ, ಬೌದ್ಧ, ವೈದಿಕ ಪುರಾಣಗಳಲ್ಲಿ ನೋಡುತ್ತೇವೆ. “ಆದಿ ದೈವ ರೆಕ್ಕೆಸಿರಿ, ಆದಿ ಆಲಡೆ, ಆದಿ ಮೂಲತಾನ, ಮೂಲದ ಮೈಸಂದಾಯ’ ಮುಂತಾದ ‘ಆದಿ’ ನಂಬಿಕೆಗಳು ತುಳುವರ ಜನಪದ ಸಂಸ್ಕೃತಿಯ ಭಾಗವಾಗಿದೆ.

“ವಿಶ್ವವು ಮೊದಲು ನೀರಿನಿಂದ ತುಂಬಿತ್ತು. ಸುಮಾರು 2300 ಬಿಲಿಯ ವರ್ಷಗಳ ಹಿಂದೆ ನೀರಿನಲ್ಲಿ ಜೀವ ವಿಕಾಸ ಆಯಿತು. ಜಲಜಂತುಗಳು, ಪಾಚಿ ಮುಂತಾದುವು ನೀರಿನಲ್ಲಿ ಸೃಷ್ಟಿಯಾಯಿತು. ಇಲ್ಲಿ ವಿಕಾಸವಾದ ಜೀವರೂಪವು 1000 ಬಿಲಿಯನ್ ವರ್ಷಗಳ ಕಾಲ ಉಳಿಯಿತು” ಎಂಬುದು ಜೀವಶಾಸ್ತ್ರಜ್ಞರ ಶೋಧ. ವಿಕಾಸಕ್ರಿಯೆಯಲ್ಲಿ ಜೀವಸೃಷ್ಟಿಯು ಹಲವಾರು ಹಂತಗಳನ್ನು ದಾಟಿ ಪೆತಕಾಸ್ > ಚಿಂಪಾಂಜಿ > ಎಂತ್ರಾಪಿಕ್ - ಹೀಗೆ ಮಾನವನ ಹುಟ್ಟು ಆಯಿತು. ಮುಂದೆ ಬೆಳೆದುದು ಮಾನವ ರೂಪ. ಆಗಲೂ ಮಾನವ ಹೋಮೋಜೀನಿಯಸ್ ಆಗಿ ಇದ್ದ. ‘40,000 ವರ್ಷಗಳ ಹಿಂದೆ ಮಾನವನ ವಿಕಾಸ ಆಯಿತು’ ಎನ್ನುತ್ತದೆ ಮಾನವಶಾಸ್ತ್ರ.

ಕರ್ನಾಟಕದ ಕರಾವಳಿ ಭಾಗವಾಗಿರುವ ತುಳುನಾಡಿನಲ್ಲಿ ಅನೇಕ ಆದಿಮಾನವ ನೆಲೆಗಳಿವೆ ಎಂಬುದನ್ನು ಪುರಾತತ್ವಕಾರರು ಪತ್ತೆ ಹಚ್ಚಿದ್ದಾರೆ. ಆದಿಮಾನವರು ತಮ್ಮ ಅಲೆಮಾರಿ ಜೀವನವನ್ನು ಅಂತ್ಯಗೊಳಿಸಿ ಸಾಮಾಜಿಕ ವಿಕಾಸದ ನಾಲ್ಕನೆಯ ಹಂತದ ಉತ್ತರಾರ್ಧವನ್ನು ಪ್ರವೇಶಿಸಿದಾಗ ಮಾತ್ರ ಒಂದು ಸ್ಥಳದಲ್ಲಿ ನೆಲೆಯೂರಿ ವಾಸಿಸುವುದು ಸಾಧ್ಯವಾಯಿತು. ಈ ಸಾಮಾಜಿಕ ವಿಕಾಸದ ನಾಲ್ಕನೆ ಹಂತದ ಉತ್ತರಾರ್ಧಕ್ಕೆ ‘ಭೂ ಸಾಗುವಳಿ’ ಹಂತವೆಂದು ಕರೆಯುತ್ತಾರೆ. ಈ ಹಂತದಲ್ಲಿ ಗ್ರಾಮಗಳು ಉಗಮಗೊಂಡವು. ಭೂಸಾಗುವಳಿ ಹಂತವು ಮಾನವನ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟವಾಗಿದ್ದು ಮಾನವ ಸಂಸ್ಕೃತಿಯ ದಿಕ್ಕನ್ನೇ ಬದಲಾಯಿಸಿತು ಎನ್ನಬಹುದು - ಸಮಾಜಶಾಸ್ತ್ರಜ್ಞರ ಈ ವಿಶ್ಲೇಷಣೆ ತುಳುನಾಡಿನ ಮೂಲತಾನಗಳ ಅಧ್ಯಯನದಲ್ಲಿ ಮಹತ್ವ ಪಡೆಯುತ್ತದೆ.


‘...ತುಳುನಾಡಿನಲ್ಲಿ ಭೂ ಪ್ರಕೃತಿಯೇ ಮಾನವ ಪ್ರಕೃತಿಯನ್ನು - ಸಂಸ್ಕೃತಿ ಇತಿಹಾಸ ಗಳನ್ನು ನಿರ್ಧರಿಸಿದೆ. ತಾನೊಡ್ಡಿರುವ ದುರ್ಗಮವಾದ ಮೇರೆಗಳ ಮೂಲಕ ಜನರನ್ನು ‘ಸ್ಥಾನ ಬದ್ಧತೆ'ಯಲ್ಲಿರಿಸಿ, ಅತ್ಯಂತ ಪ್ರಾಚೀನ ಸಂಪ್ರದಾಯ ವೈಶಿಷ್ಟ್ಯಗಳನ್ನೂ ಭಾಷಾ ಲಕ್ಷಣಗಳನ್ನೂ ಕಾಯ್ದಿರಿಸಿಕೊಳ್ಳಲು ಸಹಾಯಕವಾಗಿದೆ ... ಮಾನವಶಾಸ್ತ್ರದ ಹಲವಾರು ಸಿದ್ಧಾಂತಗಳು ಸ್ಥಳ ನಾಮಗಳ ಬೆಳವಣಿಗೆ ಅಥವಾ ಚರಿತ್ರೆಯಿಂದ ದೃಢೀಕರಿಸಲ್ಪಟ್ಟಿವೆ. ಉದಾಹರಣೆಗೆ ಮಾನವನು ಮೂಲತಃ ಅಲೆಮಾರಿಯಾಗಿದ್ದು, ಕ್ರಮೇಣ ತಾತ್ಪೂರ್ತಿಕ ನೆಲೆಯನ್ನು ಕಂಡುಕೊಂಡದ್ದು, ನಂತರ ವ್ಯವಸಾಯದ ಕಲೆಯನ್ನು ಕಲಿತುಕೊಂಡು, ಪ್ರಕೃತಿಯನ್ನು ತನ್ನ ಉದ್ದೇಶಕ್ಕೆ ಸ್ವಾರ್ಥಕ್ಕೆ ತಕ್ಕಂತೆ ಬಳಸಿಕೊಂಡದ್ದು, ಜೀವನಾವಶ್ಯಕ ವಸ್ತುಗಳ ಪೂರೈಕೆಯಾದ ಮೇಲೆ, ತನ್ನ ವಿರಾಮಕಾಲದಲ್ಲಿ ದೇವರು-ಧರ್ಮ-ಮಾನವ ಸಂಬಂಧ ಮುಂತಾದ ಅಮೂರ್ತ ಹಾಗೂ ತಾತ್ವಿಕ ವಿಷಯಗಳ ಮೇಲೆ ವಿಚಾರ ಮಾಡಹತ್ತಿದ್ದು; ಈಚೆಗೆ ಆ ಮೂಲಕ ಸಂಸ್ಕøತಿ-ನಾಗರಿಕತೆ-ವಿಜ್ಞಾನದ ಬೆಳವಣಿಗೆಗೆ ಹಾದಿ ಮಾಡಿಕೊಟ್ಟಿದ್ದು - ಇವೇ ಮುಂತಾದ ಕೆಲವು ಘಟನೆಗಳನ್ನು ನಾವು ಸ್ಥಳನಾಮ ವರ್ಗೀಕರಣದಲ್ಲಿ ಗುರುತಿಸಬಲ್ಲೆವು’.


ಕೋಟಿ ಚೆನ್ನಯರ ಸಂಧಿಯಲ್ಲ್ಲಿ ಮಾನವನ ವಿಕಾಸದ ಕಲ್ಪನೆ ಹೀಗಿದೆ:

``ಪ್ರಳಯ ಆದ ಮೇಲೆ ಕತ್ತಿನವರೆಗೆ ನೀರಿಗೆ ಇಳಿದ ‘ಸೂರ್ಯನರಯನ’ ದೇವರು ‘ಸುತ್ಯ’ ಇಟ್ಟು ದೇವರು ದೈವಗಳನ್ನು ನಿರ್ಮಿಸುತ್ತಾರೆ. ತನ್ನ ಎಡದಿಕ್ಕಿನಲ್ಲಿ ಬೆರ್ಮೆರ್ ಬಲದಿಕ್ಕಿನಲ್ಲಿ ಅಣ್ಣ ತಂಗಿ ಕೇಂಜವ ಹಕ್ಕಿಗಳನ್ನು ನಿರ್ಮಿಸುತ್ತಾರೆ. ಪರಿಚಾರಕ ವರ್ಗದೊಂದಿಗೆ ‘ಬೆರ್ಮೆ’ರ ಜನನವಾಗುತ್ತದೆ. ಹೀಗೆ ಸಂತಸದಲ್ಲಿ ಇರುವಾಗ ಇದುವರೆಗೆ ಕಾಯದ ಬಿಸಿಲು ಕಾದು ಕುಂಕುಮ ಪನಿಮಳೆ ಬಂದು ಪ್ರಳಯವಾಗುತ್ತದೆ. ಆಗ ‘ಸೂರ್ಯ ನರಯನ’ ದೇವರು ಪುನರಪಿ ಸೃಷ್ಟಿಕಾರ್ಯಕ್ಕೆ ತೊಡಗುತ್ತಾರೆ. ತನ್ನ ಎಡದಲ್ಲಿ, ಬೆರ್ಮೆರ ಬಲದಲ್ಲಿ ಅಣ್ಣ ತಂಗಿ ಜೊತೆ ಕೇಂಜವ ಹಕ್ಕಿಗಳನ್ನು ನಿರ್ಮಿಸುತ್ತಾರೆ. ಹಕ್ಕಿಗಳಿಗೆ ಕೂರಲು ಮೇಯಲು ತನ್ನ ಅಂಗಳದಲ್ಲಿ ಜಾಗ ನೀಡುತ್ತಾರೆ. ಅಣ್ಣ ತಂಗಿ ಹಕ್ಕಿಗಳು ನರಯನ (ಸೂರ್ಯ) ದೇವರ ಅನುಮತಿ ಪಡೆದು ಗಂಡ ಹೆಂಡಿರಾಗಿ ಎರಡು ಮೊಟ್ಟೆಗಳನ್ನು ಇಡುತ್ತವೆ. ಹೇಳಿದ ಹರಕೆಯಂತೆ ಒಂದು ಮೊಟ್ಟೆಯನ್ನು ನರಯನ ದೇವರಿಗೆ ಅರ್ಪಿಸುತ್ತಾರೆ. ನರಯನ ದೇವರು ಜಳಕಕ್ಕೆ ಹೊರಟವರು ಮೊಟ್ಟೆಯನ್ನು ತನ್ನ ತಲೆದಿಂಬಿನಡಿ ಇಡುತ್ತಾರೆ. ಆ ಮೊಟ್ಟೆಗೆ “ಅಣಿನಾಗೆ, ಮಣಿನಾಗೆ” ದೃಷ್ಟಿ ಹಾಕುತ್ತಾರೆ. ಪಾತಾಳದಲ್ಲಿ ‘ಕೊಡಿ’ (ಬಾಲ) ಊರಿ ಆಕಾಶಕ್ಕೆ ಹೆಡೆ ತೂಗುತ್ತಾ ಮೊಟ್ಟೆಗೆ ‘ಕೊಕ್ಕು’ ಹಾಕುವಾಗ ಊರಿದ ಬಾಲ ಸರಿದು ಮೊಟ್ಟೆಗೆ ಬಾಯಿಯ ಹಲ್ಲು ತಾಗಿ ಮೊಟ್ಟೆ ಒಡೆದು ‘ಬೀನ’ ಹಾರುತ್ತದೆ. ಆಕಾಶ ಗಡಿಗೆ, ಪಾತಾಳ ಗಡಿಗೆ ಬೀಳುತ್ತದೆ. ಜಂಬೂರಿ ಕುಮಾರನ (ಜಂಬೂ ದ್ವೀಪ?) ಮಡಿಲಿಗೆ ವಜ್ರ ಮಾಣಿಕ್ಯದ ‘ಮುತ್ತು ಪರೆಲ್’ ಆಗಿ ಬೀಳುತ್ತದೆ. ಆತ ಅದನ್ನು ಬಲದ ಕಿವಿಗೆ ಇಡುತ್ತಾನೆ. ಸವಾರಿಯಿಂದ ಬಂದು ಸೂರ್ಯನರಯನ ದೇವರು ಮೊಟ್ಟೆ ಎಲ್ಲಿ ಎಂದು ನೋಡುವಾಗ ‘ಜಂಬೂರಿ ಕುಮಾರನ’ ಕಿವಿಯ ನೀಲಿಯ ಹೊಳಪು ಆಕಾಶ-ಪಾತಾಳಕ್ಕೂ ಮಿಂಚುತ್ತದೆ. ಸೂರ್ಯ ನರಯಣ ನೋಡುವಾಗ ಅಲ್ಲಿಂದ ಮೊಟ್ಟೆ ಮಣ್ಣಮುದ್ದೆಯಾಗಿ ಆಕಾಶ ಗಡಿಯಿಂದ ಪಾತಾಳ ಗಡಿಗೆ ತೆಂಗಿನಕಾಯಿಯಷ್ಟು ದಪ್ಪ ಮಣ್ಣಿನ ಮುದ್ದೆ ಆಗಿ ಏಕ ಸಮುದ್ರಕ್ಕೆ ಬೀಳುತ್ತದೆ. ‘ಸಪ್ತಗಿರಿ ಚಂದವನ್ನು ಮೀರಿತು. ತೆಂಕಲಲ್ಲಿ ‘ಸೇಬಿನಾಡಾ’(?) ನದಿಯಾಯಿತು. ಬಡಗಲಲ್ಲಿ ‘ಬಡರುಸು’ ಬಯಲು ನಿರ್ಮಿಸಿದರು. ಮೂಡಲಲ್ಲಿ ಗಟ್ಟ ಪಡುವಲಲ್ಲಿ ಸಮುದ್ರ ಮಧ್ಯೆ ಮಣ್ಣಿನ ‘ಕುದುರು’ ಬೆಳೆಯಿತು. ಕುದುರಿನಲ್ಲಿ ನಾಗರು, ಬೆರ್ಮೆರು, ಹುಲ್ಲು ಪೆÇದೆ, ಒಬ್ಬ ವಿಶ್ವಕರ್ಮನನ್ನು ಹಾಗೂ ‘ಬಾಲೆ ಬ್ರಹ್ಮಚಾರಿ’ಯನ್ನೂ ನಿರ್ಮಿಸಿದರು. ವಿಶ್ವಕರ್ಮನಿಗೆ ಬೇಕಾದ ಸಲಕರಣೆ ಕೊಟ್ಟು ದೇವರ ದೇವಸ್ಥಾನ, ಬೆರ್ಮೆರ ಯಮಗುಂಡ ಕಟ್ಟಲು ಹೇಳುತ್ತಾರೆ. ಬಲ್ಲಿದನಿಗೆ ಮಹಡಿ ಮನೆ ಬಡವನಿಗೆ ಕೋಲು ಮನೆ, ಭೂತಗಳಿಗೆ ಗುಡಿಮಾಡ ಕಟ್ಟುವೆವು ಎನ್ನುತ್ತಾರೆ ವಿಶ್ವಕರ್ಮರು. ಅವರು ಕಟ್ಟಿದ ‘ಕಂಚಿ ಕಡಗಿನ’ ಅರಮನೆಯಲ್ಲಿ ಲೋಕಬಾರಿ ಅರಸು, ಅವರ ಮಗ ಏಕಸಾಲರು ಹುಟ್ಟುತ್ತಾರೆ. ಮಣ್ಣ ಪಕಲೋರಿ ಅರಮನೆಯಲ್ಲಿ ಗಿಂಡೆ ಗಿಳಿ ದೆಯ್ಯಾರು ಹುಟ್ಟುತ್ತಾರೆ.’


ಪಂಜುರ್ಲಿ ಪಾಡ್ದನದಲ್ಲಿ ಸೃಷ್ಟಿಯ ಉಗಮದ ಕಲ್ಪನೆ ಇದೆ. ಪಾಡ್ದನದ ಪ್ರಕಾರ ದೇವರ ಸೃಷ್ಟಿಯಲ್ಲಿ ಅಣ್ಣ-ತಂಗಿ ಪಂಜುರ್ಲಿ ಜನಿಸುತ್ತಾರೆ. ಅವರನ್ನು ಗಟ್ಟ ಇಳಿಯಲು ಸುಬ್ರಾಯ ಬಿಡುವುದಿಲ್ಲ. (ತುಳುನಾಡು ನಾಗಲೋಕ ಎಂಬ ನಂಬಿಕೆ ಇದೆ.) ಪಂಜುರ್ಲಿ ಜೋಡಿ ಹೊಸ ನೆಲೆಯ ಅನ್ವೇಷಕರು ಎಂಬ ಸೂಚನೆ ಇದು. ಇಳಿದ ಜೋಡಿಗಳು ದೇವರ ಸಲಹೆಯಂತೆ ಅಣ್ಣ-ತಂಗಿ ಪಂಜುರ್ಲಿ ಗಂಡ-ಹೆಂಡಿರಾಗಿ ಸೃಷ್ಟಿಕಾರ್ಯದಲ್ಲಿ ತೊಡಗುತ್ತವೆ. ಪಾಡ್ದನದ ಆರಂಭ ಹೀಗಿದೆ:

“ಓ ಹಿರಿಯ ದೇವನ (ಲೆಕ್ಕದ) ದೇವಪುರದೊಳಗೆ |
ಆಳಿಕೊಂಡು ಮೆರೆಯುತ್ತಾ ಇದ್ದಾರೆ |
ದೇವ ಕನ್ಯಾ ಕುಮಾರ |
ಆ ಕಾಲದಲ್ಲಿ ಕೇಳಬೇಕು |
ಮೂಡಲು ಮುಟ್ಟುವ ಮುಗಿಲೆಡೆಯಲ್ಲಿ ಉದಯವಾದರು|
ಬೆಳಕಿಗೆ ಸೂರ್ಯ ದೇವರು |
ಪಡುವಣ ರತ್ನಬಾನಲ್ಲಿ ಓಲಗವಾಗುತ್ತಾರೆ ಓ ಚಂದ್ರ ನಾರಾಯಿನ ದೇವರೋ |
ಉದಯಕ್ಕೆ ಸೂರ್ಯ ಕಂತಿಗೆ ಚಂದ್ರ |
ತೆಂಕಿಗೆ ಸೆಲಿಯೇಂದ್ರ |
ಬಡಗಿಗೆ ಬಾಲ್ಯನ ಕುಮಾರ |
ನಾಲ್‍ಂದ ಲೋಕೊಡು (ನಾಲ್ಕು ದಿಕ್ಕು?) ನಾಲ್ಕು ಗುಂಡದೇವರು |
ಮೂರು ಲೋಕದಲ್ಲಿ ಮೂರು ತಾನ ಭೂತಗಳು |
ಕಲ್ಲಿನಲ್ಲಿ ನಾಗ ಪುಂಚದಲ್ಲಿ ಸರ್ಪ |
ಸಾವಿರ ಕಲ್ಲಿನ ಅಸುರರು |
ದೇವರ ಕಲ್ಲಿನ ಬೆರ್ಮರು |
ಉದ್ಭವವಾದ ಕಾಲದಲ್ಲಿ |
ಪಾತಾಳದೆಡೆಯಲ್ಲಿ ಉದ್ಭವವಾದರು |
ಪಂಚ ಕೋಟಿ ನಾಗ ಪರುಶುರಾಮ |
ಮುನಿಕಾರರು ಮುನಿತನದ ಈಶ್ವರ |
ಮೇಲಕ್ಕೆ ಮೊಗವೆತ್ತಿದರೆ ಬಾನಿನಲ್ಲಿ |
‘ಜಂಬಿ’ ಎನ್ನುವ ತಾರೆ ಉದಿಸಲಿಲ್ಲ | ಕೆಳಗೆ ನೋಡೋಣವೆಂದರೆ ಭೂಮಿಯಲ್ಲಿ ಹುಲ್ಲು ಹುಟ್ಟಿ ಬಂದಿಲ್ಲ | ಆಗಂದರು ಬಾನು ಹಿಡಿಯಬೇಕು ಭೂಮಿ ತಿರುಗಿಸಬೇಕು|
ಭೂಮಿ ಹಿಡಿಯಬೇಕು ಬಾನು ತಿರುಗಿಸಬೇಕು |
ಬಲಗೈ ತಟ್ಟಿದರು ಸ್ವಾಮಿ ಬಾನು ನೇರ್ಪುಗೊಳಿಸಿದರು|
ಎಡಗೈ ತಟ್ಟಿದರು ಸ್ವಾಮಿ ಭೂಮಿ ನೇರ್ಪುಗೊಳಿಸಿದರು |
ಬಾನು ಮುಮ್ಮಡಿ ಭೂಮಿ ಇಮ್ಮಡಿ |
ಬಾನಿಗೆ ಮೂರು ಬಾರಿ ಭೂಮಿ ಸುತ್ತಿತು |
ಜಂಬಿ ತಾರಗೆ ಉದಿಸಿತು |
ಬಾನಿನಲ್ಲಿ ಮೇಲಾಗಿ ಹುಟ್ಟಿಕೊಂಡಿತು ತಾಲವ ಎಂಬ ಸಿಡಿಲು |
ಕುಂಕುಮ ಹನಿಧಾರೆ ಮಳೆ ಬಂತು |
ಭೂಮಿಯಲ್ಲಿ ಮೊಳೆತು ಹುಟ್ಟಿಕೊಂಡಿತು ಗರಿಕೆ ಹುಲ್ಲು ಚೊಚ್ಚಲ ಗಿಡ |
ಬೆಳೆಯಲ್ಲಿ ಮೇಲಾಗಿ ಹುಟ್ಟಿಕೊಂಡಿತು|
ಅತಿಕಾರೆ ಎಂಬ ಸತ್ಯದ ಬೆಳೆ |
ಬಾಳೆಯಲ್ಲಿ ಶ್ರೇಷ್ಠ ಬಾಳೆ |
‘ಆದಾಳೆ ಬೋದಾಳ’ ಗಿಡ ಬಾಳೆ |
ನಟ್ಟಿಕಾಯಿಯಲಿ ಮೇಲಾಗಿ ಹುಟ್ಟಿಕೊಂಡಿತು |
ರಾಜಗಿರಿ ಕೆಂಪು ಹರಿವೆ |
ಗೋವಿನಲ್ಲಿ ಮೇಲಾಗಿ ಹುಟ್ಟಿಕೊಂಡಿತು ಕಾಶಿಗೆ ಹೋದ ಕಪಿಲೆ ದನ |
ನಾಣ್ಯದಲ್ಲಿ ಮೇಲಾಗಿ ಹುಟ್ಟಿಕೊಂಡಿತು |
ಇಕ್ಕೇರಿ ಚಕ್ರ ನಾಣ್ಯ |
ನಾಣ್ಯದಲ್ಲಿ ಮೇಲಾಗಿ ಹುಟ್ಟಿಕೊಂಡಿತು |
ಕುರ್ಜತ್ ನಾಣ್ಯ ಬಂಗಾರ”



ಮೇಲಿನ ವಸ್ತುಗಳ ಬಗ್ಗೆ ಜನಪದರಲ್ಲಿ ಚರ್ಚಿಸಿದಾಗ ಅವರಿಂದ ಬಂದ ವಿವರಣೆ ಹೀಗಿದೆ: ‘ಅತಿಕಾರೆ’ ಭತ್ತದ ಒಂದು ಜಾತಿ. ದೆಯ್ಯೊಲೆ ನಲಿಕೆಯಲ್ಲಿ ಇದು ಅಗತ್ಯ ಬೇಕು. ಕಂಬುಲ ಗದ್ದೆಯಲ್ಲಿ ಅತಿಕಾರೆ ಬಿತ್ತುವುದು ಪದ್ಧತಿ. ಅದರ ಅನ್ನ ಆರೋಗ್ಯಕ್ಕೆ ಒಳ್ಳೆಯದು. ಅದು ಸತ್ಯದ ಬೆಳೆ. ಬೂದು ಬಾಳೆ ತಿನ್ನಲೂ ಸರಿ, ಪಲ್ಯಕ್ಕೂ ಸರಿ. ಇದು ಹೊಟ್ಟೆಯ ಕಾಯಿಲೆಗೆ ರಾಮಬಾಣ. ಇದನ್ನು ರಾಗಿಯೊಂದಿಗೆ ಬೆರೆಸಿ ‘ಮನ್ನಿ’ ಮಾಡಿ ಮಕ್ಕಳಿಗೆ ತಿನ್ನಲು ಕೊಟ್ಟರೆ ಹೊಟ್ಟೆಯ ಕಾಯಿಲೆ ಗುಣವಾಗುತ್ತದೆ. ತುಳುಜನರ ಸಾವಿನಲ್ಲೂ ಬೂದುಬಾಳೆಯ ಕಾಯಿಯ ಮತ್ತು ಬಾಳೆದಿಂಡಿನ ಪಲ್ಯ ಅಗತ್ಯ ಬೇಕು. ಹೆಣ ಮೀಯಿಸಿದ ಮೇಲೆ ಇದರ ಎಲೆಯ ಮೇಲೆ ಮಲಗಿಸಬೇಕು. ಬೂದಾಳೆ ಬಾಳೆಯ ಎಲ್ಲ ಭಾಗಗಳೂ ವಿಶೇಷವಾಗಿ ಪುರುಷರ ಮೂತ್ರ ಸಂಬಂಧಿ ಕಾಯಿಲೆಗಳನ್ನು ಗುಣ ಪಡಿಸುತ್ತವೆ. ರಾಜಗಿರಿ ಕೆಂಪು ಹರಿವೆ ಔಷಧೀಯ ಗುಣ ಇರುವ ಸೊಪ್ಪು. ಮೊಳಕೆ ಹಾಕಿದ 20 ದಿನಗಳಲ್ಲಿ ಈ ಸೊಪ್ಪನ್ನು ಅಡುಗೆಗೆ ಉಪಯೋಗಿಸಬಹುದು. ಹೀಗೆ ದೇವರ ಸೃಷ್ಟಿಯೊಂದಿಗೆ ಜನರ ಆರೋಗ್ಯ ಮತ್ತು ರುಚಿಯ ದೃಷ್ಟಿಯಿಂದ ಶ್ರೇಷ್ಠ ಜೀವನಾವಶ್ಯಕ ಬೆಳೆಗಳು ಹುಟ್ಟುತ್ತವೆ.


ಸೃಷ್ಟಿ ಆದ ಮೇಲೆ ಗಟ್ಟದ ಮೇಲೆ ಈಜಾ ನಗರದಲ್ಲಿ ಕರ್ಮಿನ ಶಾಲೆಯಲ್ಲಿ ಬೆತ್ತದ ಮಲೆಯಲ್ಲಿ ಬೇಲೂರ ಪದವಿನಲ್ಲಿ ಅಣಿಕಲ್ಲಿನ ಡೆಂಬಿಯಲ್ಲಿ, ನೀರ ಹರಿವಿನಲ್ಲಿ, ನೆಕ್ಕರೆಯ ಪೆದೆಯಲ್ಲಿ, ಸರೊಲಿನ ಸಂಪಿನಲ್ಲಿ ಪಂಜುರ್ಲಿ(ಹಂದಿ) ಜೋಡಿ ಮರಿಗಳು ಅಣ್ಣ-ತಂಗಿಯರಾಗಿ ಹುಟ್ಟಿ ಮುಂದೆ ಗಂಡ-ಹೆಂಡತಿಯರಾಗುತ್ತವೆ. ಈ ಜೋಡಿಗಳನ್ನು ಗಟ್ಟದ ಕೆಳಗೆ ಇಳಿಯಲು ಸುಬ್ರಾಯದೇವರು ಬಿಡುವುದಿಲ್ಲ. ಈ ಜೋಡಿಗಳು ಹುಟ್ಟುವುದು ನೀರಿನಲ್ಲಿ. ಪ್ರಾಣಿಜೀವ ಹುಟ್ಟಿ ವಿಕಾಸವಾಗುವ ಹಂತವನ್ನು ಇದು ಸಂಕೇತಿಸುತ್ತದೆ.
ಗಟ್ಟದ ಮೇಲೆ ನಿಂತು ಪರಶುರಾಮ ಕಡಲಿಗೆ ಪರಶು ಎಸೆದು ತುಳುನಾಡನ್ನು ಹಾಗೂ ಕರಾವಳಿಯ ಕೆಲವು ಭಾಗಗಳನ್ನು ಸೃಷ್ಟಿಸಿದ ಎಂಬುದು ವೈದಿಕ ಮೂಲದ ಪೌರಾಣಿಕ ಕಥೆ. ಮೇಲಿನ ಪಾಡ್ದನಗಳ ಕಥೆಗೆ ವೈದಿಕ ಹೊಳಹು ನೀಡಿ ಪರಶುರಾಮ ಕತೆ ಕಲ್ಪಿತವಾಗಿದ್ದಿರಬಹುದಾದ ಸೂಚನೆ ಇಲ್ಲಿದೆ.


ಈಶ್ವರನು ಸಾಕುವ ಹಂದಿ ಮರಿಗಳು ಪಂಜುರ್ಲಿ ಭೂತ ಆಗುವ ಪಾಡ್ದನಗಳಿವೆ. 'ಈ ಪಾಡ್ದನದಲ್ಲಿ ಈಶ್ವರನು ಒಬ್ಬ ದೇವರಿಗಿಂತ ಹೆಚ್ಚಾಗಿ ಒಬ್ಬ ಬೇಸಾಯಗಾರನ ರೀತಿಯಲ್ಲಿ ಚಿತ್ರಿತವಾಗಿದ್ದಾನೆ. ಈಶ್ವರನನ್ನು ಬೇಸಾಯಗಾರನನ್ನಾಗಿ ಚಿತ್ರಿಸಿದ ಸಂದರ್ಭಗಳು ತುಳು ಜನಪದ ಸಾಹಿತ್ಯದಲ್ಲಿ ಸಾಕಷ್ಟು ಇವೆ.'


ಕೊರಗರು ಇಲ್ಲಿಯ ಮೂಲನಿವಾಸಿಗಳು ಎಂದು ಅನೇಕ ವಿದ್ವಾಂಸರು ಬರೆಯುತ್ತಾರೆ. ಕೊರಗರು ಮಾತ್ರ ಮೂಲನಿವಾಸಿಗಳು ಎಂಬ ವಾದವನ್ನು ಒಪ್ಪಲಾಗುವುದಿಲ್ಲ. ಅವರೂ ಇಲ್ಲಿಯ ಅನೇಕ ಬುಡಗಟ್ಟುಗಳಂತೆ ಆದಿಜನಾಂಗವಾಗಿರಬಹುದು. ಕೊರಗರು ಇಂದಿಗೂ ಹೆಚ್ಚಿನ (ಉಡುಗೆಯ ಹೊರತಾಗಿ) ಬದಲಾವಣೆಗಳಿಗೆ ಒಳಗಾಗಿಲ್ಲ. ನಾವಡರು ಸಂಗ್ರಹಿಸಿದ ಕೊರಗರ ಒಂದು ಪಾಡ್ದನದಲ್ಲಿ ಸೃಷ್ಟಿಯ ವಿವರಣೆ ಇದೆ:

ಯುಗ ಮಗಚಿ ಭೂಮಿಯಲ್ಲಿ ನೀರು ಆವರಿಸಿದ ಕಾಲದಲ್ಲಿ ಮನುಷ್ಯ ಕುಲವೇ ನಾಶವಾಗುತ್ತದೆ. ದೈವ ದೇವರಿಗೆ ನೀರು ನೈವೇದ್ಯ ಇಲ್ಲವಾಗುತ್ತದೆ. ಆಗ ಹೊನ್ನ ಮದ್ದಲೆಯಲ್ಲಿ ತೇಲಿ ಬಂದ ಕೊರಗರ ಬತ್ತಲೆ ಅಣ್ಣ ತಂಗಿಯರನ್ನು ಕಂಡು ‘ನೀವ್ಯಾರು’ ಎಂದು ಕೇಳುತ್ತಾರೆ ಮೇಲಿನ ಲೋಕದ ನಾರಾಯಣ ಸ್ವಾಮಿ. “ನಾವು ಅಣ್ಣ ತಂಗಿ” ಎಂದ ಅವರ ರೂಪ ಪರಿವರ್ತನೆ ಮಾಡಿ ಗಂಡ ಹೆಂಡತಿಯರನ್ನಾಗಿ ಮಾಡುತ್ತಾರೆ. “ಭೂಮಿಯಲ್ಲಿ ನರಲೋಕವೇ ಇಲ್ಲವಾಗಿದೆ. ನೀವಿನ್ನು ಕೆಳಗಿನ ಏಳು ಲೋಕಕ್ಕೆ ಹೋಗಿ ನರಮನುಷ್ಯರ ನೂರೊಂದು ಕುಲವನ್ನು ಹಡೆದು ಹಾಕಬೇಕು. ನಿಮ್ಮಿಂದ ಅಲ್ಲಿ ಮತ್ತೆ ಸಂತಾನ ಆಗಬೇಕು ಎನ್ನುತ್ತಾರೆ.

ನಾರಾಯಣ ಸ್ವಾಮಿಯ ಅಪ್ಪಣೆಯಂತೆ ಕೊರಗ ಕೊರಗರು ನೂರೊಂದು ಕುಲವನ್ನು ಪಡೆದರು.

“......ಮನುಷ್ಯ ಸೃಷ್ಟಿ ಏನೋ ಆಯಿತು. ಆದರೇನು? ಹುಟ್ಟಿದ ನರರಿಗೆ ಅನ್ನ ಆಹಾರವಿಲ್ಲ. ಹುಟ್ಟ್ ಚಿತ್ತೇರಿಗೆ ನೀರು ನೈವೇದ್ಯ ಇಲ್ಲವಾಗಿದೆ. ಅದಕ್ಕಾಗಿ ಸ್ವರ್ಗದಲ್ಲಿರುವ ‘ನೆಲು ಸಂಕ್ರ ಗಂಡ’ನನ್ನು ತರುವಂತೆ ಹರಿಕಾರ ನಿಂಗನಿಗೆ ಕಳುಹಿಸುತ್ತಾರೆ. ಹರಿಕಾರ ನಿಂಗ ದೇವೇಂದ್ರನ ಬಳಿಗೆ ಹೋಗಿ ನೆಲು ಸಂಕ್ರ ಗಂಡನನ್ನು ಕೊಡುವಂತೆ ಭಿನ್ನವಿಸಿದ. ಆಗ ದೇವೇಂದ್ರ ಸ್ವಾಮಿ ನೆಲು ಸಂಕ್ರ ಗಂಡನನ್ನು ಕರೆಸಿದರು...... ಭೂಮಿಗೆ ‘ನೆಲು, ಸಂಕ್ರಗಂಡ’ವನ್ನು, ‘ಹೊನು ಬಸವಯ್ಯ’ನನ್ನು ‘ಮಾದಾರ ಚೆನ್ನ’ನನ್ನು ಕಳುಹಿಸುತ್ತಾರೆ. ಮುಂದೆ ನಾರಾಯಣಸ್ವಾಮಿ ಭೂಮಿಯ ಸೌಳನ್ನೆಲ್ಲ ಸೆಳೆದು ಮಾಡಿದರು. ಗದ್ದೆ ಬಯಲು ಹೊಳೆ ಹಳ್ಳ ಎಲ್ಲ ಮಾಡಿದರು. ಹೊನ್ನು ಬಸವಯ್ಯನನ್ನು ಕಟ್ಟಿ ಮಾದಾರ ಚೆನ್ನ ಬಯಲನ್ನೆಲ್ಲ ಹೂಡಿ ಹದ ಮಾಡಿದನು. ನೆಲು ಸಂಕ್ರಗಂಡವÀನ್ನು ಬಿತ್ತಿದರು. ಬಿತ್ತಿದ ಬೆಳೆ ಹುಟ್ಟಿದ ನರರಿಗೆ ಅನ್ನ ಆಹಾರವಾಯಿತು. ಹುಟ್ಟ್ ಚಿತ್ತೇರಿಗೆ ನೈವೇದ್ಯ ಆಯಿತು. ದೈವ ದೇವರಿಗೆ ಸಂತೋಷವಾಯಿತು. ನರ ಮನುಷ್ಯರಿಗೆ ಸಂತೋಷವಾಯಿತು.’


ಈ ಹಾಡಿನಲ್ಲಿ ಮಾನವನ ಹುಟ್ಟು ಹಾಗೂ ಆತ ಕೃಷಿಗೆ ತೊಡಗಿದ ಬಗ್ಗೆ ಸೂಚನೆ ಇದೆ. ಸಂಸ್ಕøತಿಯ ಮೊದಲರೂಪವೇ ಕೃಷಿ. ಸಂಸ್ಕೃತಿ - ಬೇಸಾಯ. ‘ನೆಲು’ (ಭತ್ತ) ಮತ್ತು ‘ಸಂಕ್ರಗಂಡ’ (ಜೋಳ) ಮಾನವರ ಆಹಾರ. ಜನಪದ ನಂಬಿಕೆಯಂತೆ ಬಸವ ಮಳೆಯನ್ನು ಸಂಕೇತಿಸುತ್ತಾನೆ.

ಪಾಡ್ದನಗಳ ಪ್ರಕಾರ ಸೂರ್ಯ ಮತ್ತು ನಾಗಬಿರ್ಮೆರೊಂದಿಗೆ ವಿಶ್ವ ಸೃಷ್ಟಿ ಆಗಿದೆ. ಸೂರ್ಯ ಮತ್ತು ನೀರು ಅಂದರೆ ನಾಗ ಬಿರ್ಮೆ. ಸೂರ್ಯ ಮತ್ತು ನಾಗ ಬಿರ್ಮೆರ್ ಒಟ್ಟಿಗೆ ನೀರಿನಲ್ಲಿ ಹುಟ್ಟುವ ವಿವರಗಳುಳ್ಳ ಪಾಡ್ದನಗಳು ಮುಂದಿನ ಪುಟಗಳಲ್ಲಿ ಬರಲಿವೆ. ನಾಗ ರೂಪಿಣಿ ರೆಕ್ಕೆಸಿರಿ ದೈವ “ನೀರಿನಲ್ಲಿ ನೆಗಳೆ’ ಆಗಿ ಹುಟ್ಟಿದವಳು. ಸಿರಿಗಳು ನೀರಿನಲ್ಲಿ ಕನ್ಯೆಯರಾಗಿ ಉದಿಸಿದವರು. (ನೀರ್‍ಡ್ ಕನ್ಯೆಲು ಉದ್ಯ ಬೆಂದೆರ್) ‘ನೀರು ಸರ್ಪರೂಪ’ ಎನ್ನುವ ಶಂಬಾರವರು ಈ ಬಗ್ಗೆ ವಿವರವಾಗಿ ಚರ್ಚಿಸುತ್ತಾರೆ.
ಪಾಡ್ದನದಲ್ಲಿ ಪಾತ್ರಗಳು ಸೂರ್ಯನನ್ನು ದೇವರೆನ್ನುತ್ತವೆ, ‘ನರಯನ’ ಎನ್ನುತ್ತವೆ. ಕೆಲವೊಂದು ಕಡೆ ಬೆರ್ಮರನ್ನು ‘ನರಯನ’ ಎನ್ನುತ್ತವೆ, ದೇವರು ಎನ್ನುತ್ತವೆ. ನೊಂದಾಗ ದೂರು ಕೊಡುವುದು ಸೂರ್ಯನಿಗೆ; ಬೆರ್ಮೆರಿಗೆ. ಬೇಡುವುದು ಸೂರ್ಯನನ್ನು ಮತ್ತು ಬೆರ್ಮೆರನ್ನು. ಸತ್ಯ ಪರೀಕ್ಷೆಗೆ ಕರೆಯುವುದು ಬೆರ್ಮರನ್ನು. ಸಿರಿಯು ಅಯೋನಿಜೆಯಾಗಿ ಉಲ್ಲಾಯ ಬೆರ್ಮೆರ ಸನ್ನಿಧಿಯಲ್ಲಿ ಉದ್ಭವ ಆದವಳು. ಅಬ್ಬಗ ದಾರಗರು ಸತ್ತು ದುಂಬಿಯಾಗಿ ಹಾರಿ ಹೋಗುವುದು ಸೂರ್ಯದೇವರ ಬಳಿಗೆ. ಬೆರ್ಮರ್ ಹಾಗೂ ಸೂರ್ಯನಾರಾಯಣ ‘ನರಯನ’ ಎಂಬ ಹೆಸರನ್ನೂ ಹೊಂದಿರುತ್ತಾರೆ. ಕೆಲವೊಂದು ಮೂಲತಾನಗಳಲ್ಲಿ ಸೂರ್ಯನ ಆರಾಧನೆ ಅವಜ್ಞೆಗೆ ಒಳಗಾಗಿದ್ದರೂ ಇನ್ನೂ ಉಳಿದು ಬಂದಿದೆ.


“ಈಜಿಪ್ಟನಲ್ಲಿ ಸರ್ಪವು ಸೂರ್ಯನನ್ನು ಪ್ರತಿನಿಧಿಸುತ್ತಿತ್ತು. ಅಲ್ಲಿ ‘ರಾ’ ಎಂಬ ಹೆಸರಿನಿಂದ ಸೂರ್ಯನನ್ನು ಆರಾಧಿಸುತ್ತಿದ್ದರು. ಈಜಿಪ್ಟನ ‘ಸೋಲಾರ್ ಸರ್‍ಪೆಂಟ್’ ಹೆಡೆಯು ಕಿರಣಗಳನ್ನು ಬೀರುತ್ತವೆ. ಪಶ್ಚಿಮ ಬ್ರಿಟನ್ನಿನಲ್ಲಿ ಕ್ರೈಸ್ತಪೂರ್ವ ಸಂಪ್ರದಾಯದಲ್ಲಿ ಇಂತಹ ನಂಬಿಕೆ ಇತ್ತು. ತುಳುನಾಡಿನ ಜನಪದ ಸಂಸ್ಕೃತಿಯಲ್ಲಿ ಅಂದಿನ ಈಜಿಪ್ಟ್ ಸಂಸ್ಕೃತಿಯ ಸಾಮ್ಯತೆಗಳನ್ನು ಕಾಣಬಹುದು. ನಾರಾಯಣ ಮತ್ತು ಬೆರ್ಮರ ಕಲ್ಪನೆಯಲ್ಲಿ ಸೂರ್ಯ ಮತ್ತು ಬೆರ್ಮರ (ಸರ್ಪ) ಏಕತ್ವವನ್ನು ಕಾಣಬಹುದು. ತುಳುನಾಡಿನ ಭತ್ತದ ಕೃಷಿ ನಾಗಬೆರ್ಮರ ಅಧೀನ. ಅನೇಕ ಗದ್ದೆಗಳು ಅದರಲ್ಲೂ ವಿಶೇಷವಾಗಿ ಬಾಕಿಮಾರುಗಳ ಸಾಗುವಳಿಗೆ ಮೊದಲು ನಾಗಬೆರ್ಮರ ಮತ್ತು ಸಂಬಂಧಪಟ್ಟ ದೈವಗಳ ಉಪಾಸನೆ ಆಗಬೇಕು. ಆ ರೀತಿ ಆಗದಿದ್ದರೆ ಅನಾಹುತ ಆಗುತ್ತದೆ ಎಂಬುದು ನಂಬಿಕೆ. ಪಳ್ಳಿ ದಿಡಂಬೆಟ್ಟುನಲ್ಲಿ ಕೆಲವು ತೊಂದರೆಗಳಿಂದಾಗಿ `ಗದ್ದೆ ಕೋರಿದ ಮೇಲೆ ಉಪಾಸನೆ ಮಾಡುತ್ತೇವೆ’ ಎಂದು ಕೈಮುಗಿದು ಗದ್ದೆ ಕೋರಲು ಆರಂಭಿಸಿದುದನ್ನು ಅರ್ಧಕ್ಕೆ ನಿಲ್ಲಿಸುವ ಸಂದರ್ಭ ನನ್ನ ತಂದೆ ರಾಜು ಸೆಟ್ಟಿಯವರಿಗೆ ಒದಗಿ ಬಂದಿತ್ತು. ಮುಂದೆ ಉಪಾಸನೆ ಮುಗಿಸಿ ಗದ್ದೆ ‘ಕೋರಿ’ದರಂತೆ.


ಕಂಬುಲ ಆದ ಮೇಲೆ ಕಂಬುಲ ಗದ್ದೆಯಲ್ಲಿ ಕುರುಂಟು ಎಳೆಯುವ ಕೆಲಸ ಇರುತ್ತದೆ. ಈ ಕೆಲಸವನ್ನು ನಾಗ ಬೆರ್ಮೆರ್ (ಸಂಕಪಾಲೆ ಸರ್ಪ) ಮಾಡುತ್ತದೆ ಎಂಬ ನಂಬಿಕೆ ಇದೆ. ಬಂಟ್ವಾಳದ ‘ಅನಂತಾಡಿ’ ಎನ್ನುವುದು ಅನಂತನ ಅಡಿ ಅರ್ಥಾತ್ /ಸರ್ಪನ ಕ್ಷೇತ್ರ ಎಂಬ ಅರ್ಥದಿಂದ ಬಂದ ಪದ. ‘ಅನಂತನಾಥ ಹಾಗೂ ಯಕ್ಷಿಣಿ ಹಾವಿನ ಪರ್ಯಾಯ ನಾಮಗಳು.’ “ಸೃಷ್ಟಿಯು ಪ್ರಾರಂಭವಾದುದು ಆದಿಮಾತೆಯಿಂದ ಅಥವಾ ಆದಿಶೇಷನಿಂದ.” ಈ ಮಾತಿಗೆ ಈಜಿಪ್ಟ್ ಗ್ರೀಕ್ ಮೂಲದ ಪವಾಡ ಕಥೆಗಳ ಹಾಗೂ ಇತರ ಮೂಲಗಳ ದೃಷ್ಟಾಂತ ನೀಡಿ ಶಂಬಾರವರು ಪ್ರತಿಪಾದಿಸುತ್ತಾರೆ. ಅನಂತಾಡಿ ಕೂಡಾ ಮೂಲತಾನದ ಕ್ಷೇತ್ರ. ಇಲ್ಲಿ ಸ್ಥಳೀಯ ಉಪಾಸನಾ ಪದ್ಧತಿಯ ಉಲ್ಲಾಲ್ತಿಯು ಮುಖ್ಯ ದೇವತೆ. ಉಲ್ಲಾಲ್ತಿಯ ಕಂಬುಲ ಮುಗಿದು ‘ಬಿತ್ತನೆ ಮಾಡಿ ಕೆನೆಗಟ್ಟಿದ ಕಂಬುಲ ಗದ್ದೆಯ ಒಡಲಲ್ಲಿ ‘ಸಂಕಪಾಲೆ’ ಸರ್ಪ ಸಂಕಮಲೆ ಬೆಟ್ಟದಿಂದ (ಅನಂತನ ಬೆಟ್ಟ) ಇಳಿದು ಸರಿದು ಹೋಗುತ್ತಿತ್ತು. ಅದು ಸರಿದು ಹೋದ ದಾರಿಯಲ್ಲಿ ಭತ್ತದ ಬೀಜ ಮೊಳಕೆ ಒಡೆಯಲು ತೊಡಕಾಗುವ ನೀರು, ಇಳಿಯುತ್ತಿತ್ತು’ ಎಂದು ತಾವೇ ನೋಡಿದಂತೆ ಹೇಳುತ್ತಾರೆ. ಈ ರೀತಿಯ ಕಥೆಯನ್ನು ಇನ್ನೂ ಕೆಲವು ಕಂಬುಲ ಗದ್ದೆಗಳ ಬಗ್ಗೆ ಆಯಾ ಊರವರು ಹೇಳುತ್ತಾರೆ.


ಕೇರಳದ ತಿರುವಾಂಕೂರು ಅನಂತಪದ್ಮನಾಭ ದೇವಾಲಯದ ಒಳಭಾಗದಲ್ಲಿ, ಹಳೆಯ ಅರಮನೆಯ ಬಳಿ ಹಸಿರು ಸಿರಿಯ ನಾಗ ಬನ ಇದೆ. ಇದು ತಿರುವಾಂಕೂರು ರಾಜ ಕುಟುಂಬದ (ಮಾತೃವಂಶೀಯ) ಮೂಲತಾನದ ಕ್ಷೇತ್ರ, ನಾಗ ಉಪಾಸನೆಯ ಕ್ಷೇತ್ರ. ಈ ನಾಗ ಕಾವು/ಬನದ ಒಳಗೆ ಮಾತೃವಂಶೀಯ ಅರಸು ಕುಟುಂಬಕ್ಕೆ ಮಾತ್ರ ಪ್ರವೇಶ. ಅರಸು ಕುಟುಂಬದವರು ದಿನಾ ಬೆಳಗ್ಗೆ ಇಲ್ಲಿ ಮೂಲಸ್ಥಾನದ ಅನಂತನ (ನಾಗನ) ಉಪಾಸನೆ ಮುಗಿಸಿದ ಮೇಲೆ ದೇವಸ್ಥಾನದ ಒಳಗೆ ಪ್ರವೇಶಿಸಿ ಅನಂತ ಪದ್ಮನಾಭನ ಪೂಜೆ ನಡೆಸುವ ಪದ್ಧತಿ ಮುಂದುವರಿದಿದೆ. ಮೂಲತಃ ಅನಂತನ ಕ್ಷೇತ್ರವಾಗಿದ್ದ ಅನಂತನ ಮೇಲೆ ‘ಪದ್ಮನಾಭ’ ಪವಡಿಸಿದ್ದು ಅನಂತರದ ಬೆಳವಣಿಗೆ. ಸ್ಥಳೀಯ ಭಕ್ತರು ಮಾತ್ರ ಈಗಲೂ ‘ಅಮ್ಮಾ, ದೇವಿ, ನಾರಯಣೀ, ಭಗವತಿ’ ಎಂದು ‘ಅನಂತ ಪದ್ಮನಾಭ’ನ ಮುಂದೆ ನಿಂತು ಕೈಮುಗಿಯುವುದನ್ನು ಈಗಲೂ ಕಾಣಬಹುದು.


ನಾಗ ಕೃಷಿಯ ಪ್ರೇಷಕ ದೈವವಾಗಿ ಚೀನಾ ಮತ್ತು ಈಜಿಪ್ಟ್ ನಾಗರಿಕತೆಯಲ್ಲಿ ಕೂಡಾ ಇದೆ.
ಯಾವುದೇ ನಂಬಿಕೆಯು ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ವಿಶ್ವದ ಎಲ್ಲೆಡೆ ಸರಿಸುಮಾರು ಸಮಾನ ನಂಬಿಕೆಗಳು ಇದ್ದುದನ್ನು, ಇರುವುದನ್ನು ಇಂದಿನ ಅಧ್ಯಯನಗಳು ತೆರೆದಿಡುತ್ತವೆ. ಹೆಡೆ ಅರಳಿಸಿ, ಮುಚ್ಚುವ ಸರ್ಪವೆ ಸೃಷ್ಟಿಯ ವಿಸ್ಮಯ! ಇಂತಹ ಅಲೌಕಿಕ ಶಕ್ತಿಯನ್ನು ಕಂಡು ದೇವರೆಂದು ಬಗೆದು ಆತನಿಗೆ ಮಾನವ ಶರಣಾದುದರಲ್ಲಿ ಆಶ್ಚರ್ಯವಿಲ್ಲ.

“ಅತಿಮಾನುಷರೂಪ ಆಕಾರವುಳ್ಳವಾಗಿ ಕಂಡಾಗ ಈ ನಾಗಗಳನ್ನು ದೇವತಾಸ್ವರೂಪದಲ್ಲಿ ಕಂಡು ಪೂಜಿಸುವ ಭಾವವು ಉಕ್ಕೇರಿ ಬರುವುದು ಸಹಜವಾಗಿದೆ. ಕಾಡಿನಲ್ಲಿ ವಾಸವಾಗಿ ಇರಬೇಕಾದ ಆ ಪುರಾತನ ಯುಗದಲ್ಲಿ ಸುತ್ತಮುತ್ತಲು ನಾಗಗಳೇ ಕಂಡಾಗ ಕನಸು ಸಹ ನಾಗರವೆ ಕಾಣಬಲ್ಲವು. ನೀರಿನೊಡನೆ ಸಂಬಂಧÀವಾದ ಈ ಪ್ರಾಣಿಗಳ ಮೂಲಕ ಭೋರ್ಗರೆಯುತ್ತಾ ಹೊರಟ ನದಿಗಳೂ ಹಾವಿನಂತೆ ಎನಿಸಿದ್ದು ಕಾಣುತ್ತದೆ. ಹಾವಿನಂತೆ ಕಾಣುವ ಕೋಲ್ಮಿಂಚುಗಳೊಡನೆ ಬರುವ ಸೋನೆಮಳೆಗೆ ನಾಗಗಳೇ ಕಾರಣವೆಂಬ ನಂಬುಗೆಯುಂಟಾಗಿರುವುದು ಅಸ್ವಾಭಾವಿಕ ವೇನಲ್ಲ. ರಭಸದಿಂದ ಹೊರಟ ಚಕ್ರಾಕಾರದ ಸುಂಟರಗಾಳಿ, ಕಾಡಿನಲ್ಲಿ ಗಾಳಿಯೊಡನೆ ಹಬ್ಬುತ್ತ ಹೊರಟ ಕಾಳ್ಗಿಚ್ಚು, ಬೆಂಕಿ ಇದೂ ಸರ್ಪವೇ. ಮಾನವರ ದೇಹದಲ್ಲಿ ‘ಆಹಾರವನ್ನು ಸುಟ್ಟು ಬಿಡುವ ಕ್ಷುಧ್ರಾಗ್ನಿ’ಯನ್ನು ಸರ್ಪ, ಕಾಲಸರ್ಪ, ಘಟಸರ್ಪ ಎಂದು ಕಂಡವರೂ ಉಂಟು. ‘ಕ್ಷುದಮಿತ್ ವಧಂ’. ಹಸಿವನ್ನು-ಜಠರಾಗ್ನಿಯನ್ನು-ವೈಶ್ವಾನರನ್ನು ಮೃತ್ಯುರೂಪದಲ್ಲಿ ಕಾಣುವಲ್ಲಿ ಇದನ್ನು ಸರ್ಪವೆಂದೇ ಭಾವಿಸಲಾಗಿರುವುದಾಗಿ ಬಗೆಯಲು ಅವಕಾಶವಿದೆ. ಅಗ್ನಿಯು (ನಾಗನು) ಸೃಜನಕ್ಕೆ ಕಾರಣವಿರುವಂತೆ ಅದು ಮೃತ್ಯು ದೇವತೆಯೆಂದೂ ಬಗೆಯಲಾಗಿದೆ. ‘ನಾಗವು’ ಮೃತ್ಯುದೇವತೆ ಎಂದರೆ ನೈಸರ್ಗಿಕ ಮೃತ್ಯುವಲ್ಲ ಮತ್ತೆ ! ಅಪಮೃತ್ಯು, ಆಕಸ್ಮಿಕ ಮೃತ್ಯುರೂಪ; ಆಪತ್ಕಾರೀ ವಿಪತ್ತುಗಳ ಸಾಕ್ಷಾತ್ ಪ್ರತಿಮೆ ಹಾವುಗಳು! ಈ ಕಾರಣದಿಂದಲೇ ಅವುಗಳ ಬಗ್ಗೆ ಎಂದೆಂದೂ ಭಯ!”


ಚೈನಾ, ಜಪಾನ್, ಕಾಂಬೋಡಿಯಾ - ಮುಂತಾದ ದೇಶದ ನಂಬಿಕೆಗಳಲ್ಲೂ ಸೃಷ್ಟಿಯ ಆದಿಯಲ್ಲಿ ನೀರು ಮಾತ್ರ ಇತ್ತು. ಕಾಂಬೋಡಿಯಾ ರಾಜಕುಮಾರ ವಾಸಯೋಗ್ಯ ಭೂಮಿಯನ್ನು ಅರಸುತ್ತಾ ತನ್ನ ಸಹಚರರೊಂದಿಗೆ ಹೋಗುತ್ತಿದ್ದಾಗ ಸೇವಕಿಯರ ಮಧ್ಯೆ ಇದ್ದ ಸ್ಪುರದ್ರೂಪಿ ಕನ್ಯೆಯನ್ನು ಕಂಡು ಮೋಹಗೊಳ್ಳುತ್ತಾನೆ. ಈ ಕನ್ಯೆ ನಾಗರಾಜ ಶೇಷನ ಮಗಳು ವಾಸುಕಿ. ಆಕೆಯೂ ರಾಜಕುಮಾರನನ್ನು ಮದುವೆಯಾಗಲು ಇಚ್ಚಿಸುತ್ತಾಳೆ. ಭೂಮಿ ಮತ್ತು ನೀರಿನ ಒಡೆಯನಾಗಿದ್ದ ಶೇಷ ಈ ಮದುವೆಗೆ ಅನುಮತಿ ಇತ್ತು, ನದಿಯ ನೀರನ್ನು ಕುಡಿದು ಅವರ ವ್ಯವಸಾಯಕ್ಕಾಗಿ ಭೂಮಿಯನ್ನು ತೆರವುಗೊಳಿಸುತ್ತಾನೆ. ಭೂಮಿಯಿಂದ ನೀರನ್ನು ಸರ್ಪ ಹೀರಿದ ಬಗ್ಗೆ ಜಪಾನಿ ಕಥೆಯಿದೆ.


ಮೂಲತಾನಗಳ ನಾಗಬಿರ್ಮೆರ್ ಭೂತಗಳ ಅಧಿದೇವತೆ ಆಗಿದ್ದರೂ ಭೂತಗಳ ಪ್ರಸರಣ ಪಾಡ್ದನಗಳಲ್ಲಿ ದೈವಗಳು, ಬೂ/ಭೂತಗಳು ಘಟ್ಟದಿಂದ ಇಳಿದು ಬರುತ್ತವೆ. ಅವುಗಳನ್ನು ತಡೆಯುವುದು ಸರ್ಪ ಅಂದರೆ ಸುಬ್ರಹ್ಮಣ್ಯ. ಭೂತಗಳು ಘಟ್ಟ ಇಳಿದು ಬರುವುದು ವಾಸ್ತವಕ್ಕೆ ಹೆಚ್ಚು ಹತ್ತಿರವಾಗುತ್ತದೆ. ಘಟ್ಟದ ಕೆಳಭಾಗದಲ್ಲಿ ಹಾವುಗಳು ಹೆಚ್ಚಾಗಿ ಇದ್ದುದನ್ನು ಇದು ಸೂಚಿಸುತ್ತದೆ. ಮಾನವ ವಾಸಕ್ಕಾಗಿ ಘಟ್ಟ ಇಳಿದು ಕಾಡು ಕಡಿಯಲು ಆರಂಭಿಸಿದಾಗ ಹಾವುಗಳು ಮಾನವರನ್ನು ಕಚ್ಚಿರಬೇಕು. ಅದೇ ಸುಬ್ರಹ್ಮಣ್ಯನ ಪ್ರತಿಭಟನೆ. ಹೀಗೆ ಸೃಷ್ಟಿಯ ಕಲ್ಪನೆಯ ವಿಕಾಸವನ್ನು ಜನಪದ ಹಾಡುಗಳು, ತುಳು ಪಾಡ್ದನಗಳು ನಮ್ಮ ಮುಂದೆ ತೆರೆದಿಡುತ್ತವೆ. ಈ ಸೃಷ್ಟಿ ಬೆರ್ಮೆರ ಸೃಷ್ಟಿ ಎಂಬುದಾಗಿ ಪಾಡ್ದನಗಳೂ ಹೇಳುತ್ತವೆ.


ವೈದಿಕದಲ್ಲಿ ಸೃಷ್ಟಿಯ ಕಲ್ಪನೆ ಹೀಗಿದೆ:

ಸೃಷ್ಟೇಷು ಪ್ರಲಯಾದೂಧ್ರ್ವಂ ನಾಸೀತ್ಕಿಂಚಿದ್ದಿ ಜೋಕ್ತಮಾಃ
ಬ್ರಹ್ಮ ಸಂಜ್ಞ ಮಭೂದೇಕಂ ಜ್ಯೋತಿರ್ವೈಸರ್ವಕಾರಕಮ್
(ಮಹಾಪದ್ಮ ಪುರಾಣ ಅ.2-3)

“ಪ್ರಳಯವುಂಟಾದ ಮೇಲೆ ಸ್ಪಷ್ಟವಾದ ವಸ್ತುಗಳಲ್ಲಿ ಯಾವುದೂ ಇರಲಿಲ್ಲ. ಸರ್ವಕ್ಕೂ ಕಾರಣವಾದ ಜ್ಯೋತಿಸ್ವರೂಪವಾದ ಬ್ರಹ್ಮಸ್ವರೂಪವು ಮಾತ್ರ ಇತ್ತು. ಮರುಸೃಷ್ಟಿಯಲ್ಲಿ ಬ್ರಹ್ಮನು ತನ್ನಲ್ಲಿ ಇರುವ ವಿಕಾರಗಳನ್ನೆಲ್ಲ ತಿಳಿದು ಸೃಷ್ಟಿಗೆ ಪ್ರಾರಂಭ ಮಾಡಿದನು.” ಇಲ್ಲಿ ಪಂಚಭೂತಗಳಿಂದ ಆದ ಮೊಟ್ಟೆಯಿಂದ ವಿಷ್ಣು ಹುಟ್ಟುತ್ತಾನೆ.


“ನಾಸ ದಾಸಿನ್ನೋ ಸದಾಸೀತ್ತದಾನೀನಂ ನಾಸಿ ದ್ರಜೋ
ನೋ ಯೋಮಾ ಪಠೋಯತ್
ಕಿಮಾರೀವಃ ಕುಹಕಸ್ಯ ರರ್ಮನ್ನಂಭಃ ಕಿಮಾಸಿದಂ
ಗಹನಂ ಗಭೀರಮ್ (ಋಗ್ವೇದ, ಅ.8.ಆ.7.ವ.17,ಮ.1)


(ಆಗ ಅಸತ್ ಇರಲಿಲ್ಲ ಸತ್ ಕೂಡಾ ಇರಲಿಲ್ಲ, ರಜವೂ ಇರಲಿಲ್ಲ, ಆಕಾಶವೂ ಇರಲಿಲ್ಲ. ಏನೂ ಇರಲಿಲ್ಲ. ಆ ವರ್ಷಕಾಲದಲ್ಲಿ ಎಲ್ಲವನ್ನೂ ಆವರಿಸುವಂತಹ ಜಲಕಣಗಳಿದ್ದುವೋ ಏನೊ?)


ಜನಪದರ ನಂಬಿಕೆಯ “ನೀರು ಮತ್ತು ಸರ್ಪ” - ಇವುಗಳ ಪ್ರಭಾವವು ವೈದಿಕ ಸಾಹಿತ್ಯದ ಮೇಲಾಗಿರುವುದನ್ನು ಇಲ್ಲಿ ಕಾಣಬಹುದು. ತುಳು ಜನಪದ ಧರ್ಮದಲ್ಲಿ ಜೀವವಿಕಾಸದ ಪ್ರಕ್ರಿಯೆ ಸೂರ್ಯನಿಂದ ನೀರಿನಲ್ಲಿ ಆರಂಭವಾಗುತ್ತದೆ. ನಾಗಬಿರ್ಮೆರ್ ಉಭಯಲಿಂಗಿ. ಇದು ಕಲ್ಪನೆ ಆಗಿದ್ದರೂ ವಾಸ್ತವಕ್ಕೆ ಹೆಚ್ಚು ಹತ್ತಿರವಾಗುತ್ತದೆ ಎಂಬ ಅಂಶವನ್ನು ಮುಂದಿನ ಅಧ್ಯಾಯದ ‘ಬಿ/ಬೆರ್ಮೆರ ಉದಿಪನೆ’ಯಲ್ಲಿ ಗಮನಿಸಲಿರುವಿರಿ.


ಮೂಲತಾನ ಆದಿ ಆಲಡೆಯ ಪರಿಕಲ್ಪನೆ

‘ಮೂಲತಃ ಅಲೆಮಾರಿಯಾಗಿದ್ದ ಮಾನವ ಜೀವನಾವಶ್ಯಕ ವಸ್ತುಗಳನ್ನೂ ಅವುಗಳಲ್ಲೂ ಮುಖ್ಯವಾಗಿ ನೀರನ್ನು, ನೀರಿನ ಮೂಲವನ್ನು, ಆಶ್ರಯವನ್ನು ಹುಡುಕುತ್ತ, ನೀರು ಕಂಡಲ್ಲಿ ನೆಲೆನಿಂತು ಆ ನೀರಿನ ಗಾತ್ರ ಸ್ವರೂಪಗಳನ್ನು ಮತ್ತು ಆ ಪÀರಿಸರದ ಭೂಸನ್ನಿವೇಶವನ್ನು ದೃಷ್ಟಿಯಲ್ಲಿರಿಸಿಕೊಂಡು ಒಂದು ಅಂಕಿತ (ನಾಮ)ವನ್ನು ಆ ಸ್ಥಳಕ್ಕಿತ್ತು ಗುರುತಿಸಿದ.’ ಇಲ್ಲೂ ತುಳುವರ ಮೂಲತಾನಗಳು ಹೆಚ್ಚಾಗಿ ಭತ್ತದ ಗದ್ದೆಯ ಬಳಿ ಇವೆ.


“ಬೆಳುವಾಯಿ ಸಮೀಪದ ದರೆಗುಡ್ಡೆ ಮತ್ತು ಬೈಲೂರು ಸಮೀಪದ ಕಣಂಜಾರು ಬೆಟ್ಟ ಪ್ರದೇಶಗಳಲ್ಲಿ ಹೆಬ್ಬಂಡೆ ವಾಸ್ತವ್ಯದ ಕುರುಹುಗಳಿವೆ. ಇಲ್ಲಿ ಬೃಹತ್ ಶಿಲಾಯುಗಕ್ಕೂ ಹಿಂದಿನ ಕಾಲದ ಮಾನವ ವಾಸವಾಗಿದ್ದಿರಬಹುದು. ಸಾವಿರಾರು ವರುಷಗಳ ಘನಘೋರ ವರ್ಷಧಾರೆಯಿಂದ ಇಲ್ಲಿಯ ಕುರುಹುಗಳು ಹಾಳಾಗಿವೆ” ದರೆಗುಡ್ಡೆ, ಕಣಂಜಾರು ಎರಡು ಕ್ಷೇತ್ರಗಳು ಪ್ರಸಿದ್ಧ ಆಲಡೆ ಮೂಲತಾನ. ಕದ್ರಿಯ ಬೆಟ್ಟದ ಮೇಲೂ ಪಾಂಡವರ ಗುಹೆಗಳೆಂಬ ‘ಮುರಕಲ್ಲ' ಗುಹೆಗಳಿವೆ. ಕದ್ರಿಯೂ ಅನೇಕ ತುಳು ಕುಟುಂಬಗಳ ಮೂಲಸ್ಥಾನ.


ಆದಿ ಆಲಡೆ ಮೂಲತಾನ ಎಂಬ ಪದವೆ ತುಳುವರ ಆದಿಮ ಜೀವನ ಆರಂಭವಾದ ನೆಲೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಬೆರ್ಮೆರೆ ತಾನ ಬೆಟ್ಟದ ಮೇಲಿದ್ದರೂ ಸುತ್ತ ನೀರಿನ ಆಸರೆ ಇರುತ್ತದೆ. ನೀರಿನ ಆಸರೆ ಇರದ ಜಾಗದಲ್ಲಿ ಪುರಾತನ ನಾಗಬೆರ್ಮೆರ ಕ್ಷೇತ್ರ ಇಲ್ಲ. ಹಾವು ಹರಿದಾಡುತ್ತಿರುವ ಇಲ್ಲಿಯ ಭೂಮಿ ಫಲವತ್ತಾದ ಭತ್ತದ ಖಣಜಗಳು. ಹಿಂದೆ ಇಲ್ಲಿ ಸುಗ್ಗಿಯ ಬೆಳೆಯವರೆಗೆ ಭೂಮಿಯ ಮೇಲ್ಭಾಗದಲ್ಲಿ ನೀರು ಇತ್ತು ಎನ್ನುತ್ತಾರೆ. ಆ ಕಾಲದಲ್ಲಿ ಸುಗ್ಗಿಯ ಬೆಳೆ ಮಾತ್ರ ತೆಗೆಯುತ್ತಿದ್ದರು. ಅನಂತಾಡಿ ಭಾಗದಲ್ಲಿ ಎಲ್ಲಿ ಬಾವಿ, ಕೆರೆ ತೋಡಿದರೂ ಮರದ ಕಾಂಡಗಳು ಸಿಗುತ್ತವೆ ಎನ್ನುತ್ತಾರೆ ಇಲ್ಲಿಯ ಕೃಷಿಕರು. ಕಾಸರಗೋಡಿನ ಕುಳೂರು ಬೈಲಿನಲ್ಲೂ ಈಗಲೂ ಸುಗ್ಗಿ ಮತ್ತು ಕೊಳಕೆ ಬೆಳೆÉ ಮಾತ್ರ ತೆಗೆಯುತ್ತಾರೆ. ಎಣೆಲ್ ಕಾಲಕ್ಕೆ ಬೈಲು ನೀರು ತುಂಬಿ ಸಾಗರದಂತೆ ಕಾಣುತ್ತದೆ.


ಧರ್ಮಸ್ಥಳದಲ್ಲಿ (ಕುಡುಮ) ದೈವಗಳ ಉಗಮದ ಬಗ್ಗೆ ಕಥೆ ಇದೆ:

ಇಲ್ಲಿ ದೇವಸ್ಥಾನದ ಹತ್ತಿರದಲ್ಲಿ ಪೂರ್ವಕ್ಕೆ ಆಲಡ್ಕ ಬನ ಇದೆ. ಈಗಲೂ ಬನ ಮೂಲ ಸ್ವರೂಪದಲ್ಲಿ ಇದೆ. ಸ್ಥಳೀಯರ ಪ್ರಕಾರ ಧರ್ಮದೈವಗಳು ಮೊದಲು ಬಂದುದು ಆಲಡ್ಕ ಬನಕ್ಕೆ. ಬನದ ಬಳಿ ಇದ್ದ ವ್ಯಕ್ತಿಯಲ್ಲಿ ‘ಅಸರ್’ (ಬಾಯಾರಿಕೆ) ಕೇಳಿದಾಗ ಆತ ಎಳನೀರು ತರಲು ಹೋಗುತ್ತಾನೆ. ಎಳನೀರು ಹಿಡಿದು ಮರಳಿ ಬರುವಷ್ಟರಲ್ಲಿ ನಾಲ್ಕು ಧರ್ಮದೈವಗಳು ಭೂಮಿಯಿಂದ ಒಂದು ಹಾರೆ ಮಣ್ಣು ತೆಗೆಯುತ್ತಾರೆ. ನೀರು ಚಿಮ್ಮುತ್ತದೆ. ಧರ್ಮ ದೇವತೆಗಳು ನೀರು ಕುಡಿಯುತ್ತಾರೆ. ಮುಂದೆ ಎಳನೀರು ತಂದವನನ್ನು ‘ಆಜ್ರಿ ಬಂಟ’ ಎಂದು ಕರೆಯುತ್ತವೆ. ಈತನ ಮನೆಯ ಚಾವಡಿಯಲ್ಲಿ ತಾವು ನೆಲೆಯಾಗುವುದಾಗಿ ಹೇಳುತ್ತವೆ. ಕೆಲ ಕಾಲಾನಂತರ ಜೈನ ಬೀಡಿಗೆ ಹೋಗಿ ಅಲ್ಲಿ ನೆಲೆಯಾಗುತ್ತವೆ” - ಈ ಕಥೆಯು ಆದಿಮ ಮಾನವ ಒಂದೆಡೆ ನೆಲೆಯಾಗಲು ನೀರಿನಾಶ್ರಯ ಹುಡುಕಿ ಹೋಗುವುದು - ನಾಲ್ಕು ಧರ್ಮದೈವಗಳು ವಾಸದ ನೆಲೆ ಅರಸಿ ಬರುವುದು, ಇಲ್ಲಿಯ ಭೂಮಿಯಿಂದ ನೀರು ಚಿಮ್ಮಿಸುವುದು, ಇಲ್ಲಿಯೇ ನೆಲೆಯಾಗುವುದು, ಮುಂದೆ ಬೆಳೆದ ಜೈನ ಧರ್ಮ- ಹೀಗೆ ಮಾನವ ಒಂದೆಡೆ ನೆಲೆಯಾಗುವ ಹಾಗೂ ವಿಕಾಸದ ಹಂತಗಳನ್ನು ಸೂಚಿಸುತ್ತದೆ. ಇಂತಹ ಅನೇಕ ಕಥೆಗಳು ತುಳುನಾಡಿನಲ್ಲಿ ಇವೆ.


ಅಬ್ರಾಹ್ಮಣ ವರ್ಗದವರಲ್ಲಿ ಅತ್ಯಂತ ಮೇಲ್ವರ್ಗದವರೆಂದು ಗುರುತಿಸಿರುವ ಬಂಟರು/ ಜೈನರು ಹಾಗೂ ಅತ್ಯಂತ ಕೆಳವರ್ಗದವರೆಂದು ಗುರುತಿಸಿರುವ ಕೊರಗರವರೆಗೆ - ಮಾತೃಮೂಲ ಸಂಪ್ರದಾಯದ ಎಲ್ಲರಿಗೂ ‘ಆದಿ ಆಲಡೆ ಮೂಲತಾನ’ ಎಂಬುದು ಇದೆ. ಮೂಲತಾನ ಎಂಬುದು ‘ನಮ್ಮ ಹಿರಿಯರು ಬಾಳಿ ಬದುಕಿದ ಸ್ಥಳ ಇರಬೇಕು. ಮೂಲತಾನ ಎಂದರೆ ಅದೇ ಅರ್ಥ ಅಲ್ಲವೇ? ಆದಿಯಲ್ಲಿ ನಮ್ಮ ಹಿರಿಯರು ಇಲ್ಲಿ ನೆಲೆಸಿದ್ದಿರಬೇಕು’ ಎಂದು ವಿಶ್ವಾಸದಿಂದ ನಮ್ಮನ್ನೇ ಕೇಳುತ್ತಾರೆ. ‘ಆಲಡೆ’ ಅಂದರೆ ಏನು ಎಂದು ಕೇಳಿದರೆ ಆದಿ ಮೂಲತಾನ ಎನ್ನುತ್ತಾರೆ. ಆಲಡೆ ಇದ್ದು ಮತ್ತೊಂದು ಮೂಲತಾನವೂ ಇರುವವರು ಇದ್ದಾರೆ. ಆದರೆ ಆಲಡೆ ಇಲ್ಲದೆ ಮೂಲತಾನ ಇದ್ದವರು ಕಂಡುಬಂದಿಲ್ಲ.


ಮಾತೃಮೂಲ ವಂಶದವರು ಮೂಲದ ಮನೆ ಬಿಟ್ಟು, ಮೂಲದ ದೇವರನ್ನು ಬಿಟ್ಟು ಎಲ್ಲಿಗೇ ಹೋದರೂ ಅವರು ತಮ್ಮ ಮೂಲವನ್ನು, ಮೂಲತಾನದ ಆಲಡೆಯನ್ನು ಮರೆಯುವಂತಿಲ್ಲ. ಒಂದು ವೇಳೆ ಒಂದು ತಲೆಮಾರು ನಿರ್ಲಕ್ಷಿದರೂ ಮತ್ತೊಂದು ತಲೆಮಾರಿಗಾದರೂ ಅದರ ದೋಷ ತಟ್ಟುತ್ತದೆ ಎಂಬುದು ನಂಬಿಕೆ.


ಸಿರಿ ಪಾಡ್ದನದಲ್ಲಿ ಕುಲ ಬೆರ್ಮೆರ್ ಅವಜ್ಞೆಗೆ ಒಳಗಾದ ಮೂಲತಾನದ ಬಗ್ಗೆ ತನ್ನ ಸಂತಾನ ‘ಬೆರ್ಮಮಾಲವ’ನನ್ನು ಎಚ್ಚರಿಸಲು ಬ್ರಾಹ್ಮಣ ‘ಒರು’ವಾಗಿ ಬಂದು ಕೇಳುತ್ತಾರೆ:

ಬಿರ್ಮೆರ್: “ನಿನ್ನ ಆದಿ ಎಲ್ಲಿಯಪ್ಪಾ ಆಲಡೆ ಎಲ್ಲಿಯಪ್ಪಾ,
ನಿನಗೆ ದೇವರು ಯಾರು, ಬೆರ್ಮರು ಯಾರು ಎಂದು ಹೇಳು...”
ಬೆರ್ಮಮಾಲವ : “ನಾರಾಯಿಣ, ಬೆರಮಣಾ ಕೇಳಿದಿರಾ
ನನಗೆ ದೇವರು ಯಾರು ಬೆರ್ಮರು ಯಾರು,
ಬೆರ್ಮೆರ್ ಯಾರು ಎಂದು ಗೊತ್ತಿಲ್ಲ
ಆದಿ ಎಲ್ಲಿ ಆಲಡೆ ಎಲ್ಲಿ ಒಂದೂ ಗೊತ್ತಿಲ್ಲ.
ಬೆರ್ಮೆರ್ ಯಾರು ಎಂದು ನಾನು ತಿಳಿದಿಲ್ಲ
ಬೆರ್ಮೆರ್ : ನಿನಗೆ ಗೊತ್ತಿರದಿದ್ದರೆ ಯಾರಾದರೂ ಹೇಳಿದ್ದು ಕೇಳಿಲ್ಲವೆ? ನಿನ್ನ ಕಿವಿಯಲ್ಲೂ ಕೇಳಿಲ್ಲವೆ?
ಬೆರ್ಮಮಾಲವ : ಓ ಬೆರಮ್ಮಣ್ಣ್ಣಾ ದೇವೆರ್ ಯಾರು ಬೆರ್ಮೆರ್
ಯಾರೆಂದು ಇಂದು ನನಗಾದರೂ ಗೊತ್ತಾಗದೆ ಹೋಯಿತು.
ಬೆರ್ಮೆರ್ : ಇಂದು ನಿನಗೆ ಗೊತ್ತಿಲ್ಲವಾದರೆ ಹೋಗಲಿ,
ನಿನ್ನ ಆದಿ ಆಲಡೆಗೆ, ದೇವರ ಬೆರ್ಮೆರ,
  ಸಾವಿರಾರು ಭೂತಗಳ, ನೂರಾರು ಗಂಡ ಗಣಗಳ
ಬಡಗು ಲೋಕನಾಡು, ಅವಜ್ಞೆಗೆ ಒಳಗಾಗಿ ತುಂಬೆ ನೆಕ್ಕಿ ಮೂಡಿದೆ.''
ಹೀಗೆ ಬಿರ್ಮೆರ್ ಮಾನವ ರೂಪದಲ್ಲಿ ಬಿರ್ಮಾಳುವನ ಮನೆಗೆ ಬಂದು “ಮೂಲತಾನ ಆದಿ ಆಲಡೆ’ಯನ್ನು ಮರೆತ ಬಗ್ಗೆ ನೆನಪಿಸುತ್ತಾರೆ.



ಆದಿ ಆಲಡೆ ತುಳುವರ ಆದಿ ಮೂಲತಾನ
‘ಆದಿಶೇಷ, ಆದಿನಾಥ, ಆದಿನಾರಾಯಣ ಇತ್ಯಾದಿ ಸಂಕೇತಗಳೊಳಗಿನ ಆದಿ ಎಂಬ ಮಾತು ಈ ನಾಗವು ಸೃಜನಶಕ್ತಿಯ ಪ್ರತೀಕವಾಗಿರುವುದು ಗಮನಕ್ಕೆ ಬರುತ್ತದೆ.’ ತುಳುವರೂ ‘ಆದಿ ಆಲಡೆ’ ಎಂಬ ಪವಿತ್ರ ಕ್ಷೇತ್ರ ನಾಗಪರಿವಾರಗಳ ವಾಸ ಕ್ಷೇತ್ರ. ಇದು ತುಳುವರ ‘ಆದಿ ಮೂಲಸ್ಥಾನ’ ಎಂಬುದು ನಂಬಿಕೆ.


‘ನಾಗನಡೆ ಪೋಯೆರ್ ಮೂಲ ಕೇಂಡೆರ್, ಕುಮಾರನೆಡೆ ಪೋಯೆರ್ ಆಲಡೆ ಕೇಂಡೆರ್’ (ನಾಗನಲ್ಲಿಗೆ ಹೋದರು ಮೂಲ ಕೇಳಿದರು, ಕುಮಾರನಲ್ಲಿಗೆ ಹೋದರು ಆಲಡೆ ಕೇಳಿದರು). ಇದು ಕುಮಾರ ಪಾತ್ರಿ ಹೇಳುವ ನುಡಿಗಟ್ಟು. ಈ ಪ್ರಕಾರ ಮೂಲತಾನ ನಾಗನಿಗೆ ಸಂಬಂಧಿಸಿದ್ದು. ಆಲಡೆ ಕುಮಾರನಿಗೆ ಸಂಬಂಧಿಸಿದ್ದು, ಸಿರಿ-ಕುಮಾರರು ಬೆರ್ಮೆರ್ ಪರಿವಾರಗಳ ಸಂತಾನ. ಆಲಡೆ ಎಂದರೆ ಸಿರಿ ಕುಮಾರರು ಇರಲೇಬೇಕೆಂದಿಲ್ಲ. ಪಂಚದೈವಗಳು ಇರುವ ಜಾಗ ಆದಿ ಆಲಡೆ ಮೂಲತಾನ. ಸಿರಿ ಆಲಡೆಗಳು ಮಾತ್ರ ಆಲಡೆ ಎನ್ನುವುದು ಎಂಬ ನಂಬಿಕೆ ಬರುವಂತೆ ಸಿರಿ ಆಲಡೆಗಳು ಪ್ರಸಿದ್ಧಿ ಪಡೆದಿವೆ. ಆದರೆ ವಾಸ್ತವವಾಗಿ ಸಿರಿ ಆಲಡೆಯು ಆದಿ ಮೂಲತಾನವೇ. ಅಲ್ಲೂ ನಾಗನೇ ಪ್ರಧಾನ. ಆದರೆ ಇಂತಹ ಜಾಗದಲ್ಲಿ ವೈದಿಕರ ಪ್ರವೇಶ ಆದಾಗ ಆಚರಣೆಗಳಲ್ಲಿ ಪರಿವರ್ತನೆ ಆಗಿವೆ. ಭೂತ ಶಕ್ತಿ ನಾಗಬಿರ್ಮೆರ (ಉಲ್ಲಾಯ) ಗುಂಡವು ಬ್ರಹ್ಮಲಿಂಗೇಶ್ವರ ಅಥವಾ ದುರ್ಗೆ ಎನ್ನುವ ಹೆಸರಲ್ಲಿ ಆಗಮ ಸಂಪ್ರದಾಯಕ್ಕೆ ಪರಿವರ್ತನೆಯಾಗುತ್ತಿದೆ. ಆಗ ‘ನಾಗ’ ಕ್ಷೇತ್ರದ ಹೊರಗೆ ಬನದಲ್ಲಿ ಮಾತ್ರ ಉಳಿಯುತ್ತಾನೆ.
“ತುಳುವರಲ್ಲಿ ಕುಟುಂಬದ ಆದಿಮೂಲವನ್ನು ಆಲಡೆಯೆನ್ನುತ್ತಾರೆ. ಪ್ರತಿ ಕುಟುಂಬಕ್ಕೂ ಮುಖ್ಯವಾಗಿರುವ ಮೂಲಸ್ಥಾನದಲ್ಲಿ ಐದು ದೈವಗಳ ಒಂದು ಸಂಕೀರ್ಣ ಆರಾಧನೆಯನ್ನು ಕಾಣಬಹುದು. ಬೆರ್ಮೆರ್/ಬ್ರಹ್ಮ, ಲೆಕ್ಕಸಿರಿ/ರಕ್ತೇಶ್ವರಿ, ಮಯಿಸಂದಾಯ/ ಕ್ಷೇತ್ರಪಾಲ, ನಂದಿಗೋಣ/ನಂದಿ ಮತ್ತು ನಾಗ. ಆಲಡೆಯ ಈ ದೈವಗಳಿಗೆಲ್ಲ ಬೆರ್ಮೆರ್ ಅಧಿದೇವತೆ. ಹಾಗಾಗಿ ಆಲಡೆಯನ್ನು ಬ್ರಹ್ಮಸ್ಥಾನ/ಮೂಲಸ್ಥಾನ/ಬ್ರಹ್ಮ ಆಲಡೆಯೆನ್ನುವುದು.’


ಮೂಲತಾನ ಆದಿ ಆಲಡೆ ಎನ್ನುವುದು ತುಳುವರ ಕುಟುಂಬದ ಅಥವಾ ಬುಡಕಟ್ಟಿನ ಮೂಲ ಮಾನವರು ನೆಲೆನಿಂತು ವ್ಯವಸಾಯ ಆರಂಭಿಸಿದ ಆದಿ ಸ್ಥಳ ಎನ್ನುವುದಕ್ಕೆ ಆಧಾರ ಸಿಗುತ್ತದೆ. ಅವರ ಕೃಷಿ ಕ್ಷೇತ್ರದ ಪರಿಧಿಯಲ್ಲಿ ಇರುವ ಕಾಡಿನಲ್ಲಿ ‘ನಾಗಬೆರ್ಮೆರ್’ ದೈವವಾಗಿ ಆರಾಧನೆ ಪಡೆದಿರುವನೆಂಬುದಕ್ಕೆ ಈಗ ಇರುವ ಕುರುಹುಗಳು ಸಾಕಾಗುತ್ತವೆ. ಹೀಗೆ ಬೇರೆ ಬೇರೆ ಗುಂಪುಗಳಾಗಿ ನೆಲೆಯಾದ ಪ್ರದೇಶದಲ್ಲಿ “ಆದಿ ಆಲಡೆ ಮೂಲತಾನ” ಗಳಿವೆ. ಇವು ದೈವಗಳು ನೆಲೆಯಾದ ಪವಿತ್ರ ಕ್ಷೇತ್ರವಾಗಿದೆ. ಉಪಾಸನಾ ಆಚರಣೆಗಳ ಕೇಂದ್ರಸ್ಥಳವಾಗಿವೆ. “ಮೂಲಸ್ಥಾನದ ಕಲ್ಪನೆಯಲ್ಲಿ ಭಿನ್ನತೆಯಿದ್ದರೂ ಮೂಲಸ್ಥಾನವು ಒಂದು ಕುಟುಂಬವು ಆದಿಯಲ್ಲಿ ನೆಲೆಸಿದ ನೆಲೆ ಎಂಬುದು ಖಚಿತ. ಒಟ್ಟಿನಲ್ಲಿ ಅದು ಒಂದು ಕುಟುಂಬದ ರಾಜಕೀಯ ಧಾರ್ಮಿಕ ಕೇಂದ್ರಸ್ಥಾನ ಎನ್ನಬಹುದು. ಒಂದು ಕುಟುಂಬವು ಯಾವುದೋ ಅಲೌಕಿಕ ಕಾರಣಗಳಿಂದಾಗಿ ಕ್ಲೇಶಕ್ಕೊಳಪಟ್ಟಾಗ ಅವರ ಸದಸ್ಯರು ಮೂಲಸ್ಥಾನಕ್ಕೆ ತೆರಳಿ, ತಾವು ಬದುಕಿನಲ್ಲಿ ಏನು ತಪ್ಪು ಮಾಡಿದ್ದೇವೆ ಎಂದು ಬೆರ್ಮ ಆಳುವರು ಸಿರಿಪಾಡ್ದನದಲ್ಲಿ ಕೇಳಿದಂತೆ ಕೇಳುತ್ತಾರೆ.”14. ಕ್ಲಾಸ್ ಅವರು “ಅರಮನೆಯ ವಿವರದಲ್ಲಿ ಬಳಸುವ ಪದಗಳನ್ನೇ ಈ ಆಲಡೆಯ ವಿಷಯದಲ್ಲಿ ಬಳಸಲಾಗಿದೆ. ಈ ಗುಡಿಗಳು ಜನ ದೂರವಾದ ಬಂಜರುಭೂಮಿಗಳಲ್ಲಿ ಕಾಡಿನ ಸಮೀಪ ಇರುವುದು ಗಮನಾರ್ಹ ಸಂಗತಿ. ಇದು ಸಾಮಾನ್ಯವಾಗಿ ಪವಿತ್ರಸ್ಥಾನವಾಗಿರುವ ಮೂಲಸ್ಥಾನ” ಎಂದೂ ಬರೆಯುತ್ತಾರೆ. ನಾಗಬೆರ್ಮೆರನ್ನು ಅಥವಾ ಬರೇ ನಾಗನನ್ನು ಕಾಡು ಇಲ್ಲದೆ ನಂಬುವ ಪದ್ಧತಿ ತುಳುನಾಡಿನಲ್ಲಿ ಇಲ್ಲ. ‘ನಾಗಬನ’ ‘ದೇವೆರೆ ಗುಡ್ಡೆ’ ಎಂಬುದು ರೂಢಿ ಪದ. ‘ನಾಗಕಟ್ಟೆ’, ‘ನಾಗದೇವಸ್ಥಾನ-ದೈವಸ್ಥಾನ’ ಎನ್ನುವ ರೂಢಿ ಇಲ್ಲ.


ಕೋಟಿ ಚೆನ್ನಯರ ಪಾಡ್ದನದಲ್ಲಿ ನಲ್ವತ್ತೆಂಟು ಆದಿಮೂಲಸ್ಥಾನಗಳು ನಿರೂಪಿತ ವಾಗಿವೆ. ಸಿರಿ ಪಾಡ್ದನದಲ್ಲಿ ಮತ್ತು ಉಡುಪಿಯ ಉತ್ತರ ಭಾಗದ ಚಿಕ್ಕು ಕಥೆಯಲ್ಲಿ 66 ಮೂಲತಾನಗಳ ಹೆಸರು ಬರುತ್ತವೆ. ನಮ್ಮ ಮಾಹಿತಿ ಸಂಗ್ರಹ ಕಾಲಕ್ಕೆ ಅನೇಕ ಮೂಲತಾನಗಳು ಕಾಣುತ್ತಿವೆ. 20ನೆಯ ಶತಮಾನದ ಕೊನೆಯ ದಶಕಗಳಲ್ಲಿ ಆದಿ ಮೂಲತಾನದಿಂದ ಮಣ್ಣು ತಂದು ಹೊಸದಾಗಿ ಮಾಡಿದ ಮೂಲತಾನಗಳು ಇವೆ. ಈ ವಿವರಗಳು ಮುಂದೆ ಬರಲಿವೆ. “ಕೋಟಿ ಚೆನ್ನಯರು ಬದುಕಿನಲ್ಲಿ ಮಾಡಿದ ಪಾಪಕ್ಕೆ ಬಡಗು ಗಂಗೆಯಲ್ಲಿ ಸ್ನಾನ ಮಾಡಿ ಬರಬೇಕು ಎಂದು ಕೋಟಿ ಚೆನ್ನಯರ ಕುಲ ಬೆರ್ಮೆರ್ ‘ಕೆಮ್ಲಾಜೆ ಬೆರ್ಮೆರ್’ ಮಾಯದ ಕೋಟಿ ಚೆನ್ನಯರಿಗೆ ಆದೇಶಿಸುತ್ತಾರೆ. ಆಗ ಇವರು ನಲ್ವತ್ತೆಂಟು ಆದಿಮೂಲ ಸ್ಥಾನಗಳನ್ನು ಸಂದರ್ಶಿಸುತ್ತಾರೆ. ಅದರಂತೆ “ಗುತ್ತು-ಬಲ್ಲಾಳರಿಗೆ ಕೈಮಾಡ-ಪೂಮಾಡ, ನೆಲೆಯುಪ್ಪರಿಗೆ ಪೂಕಾರೆ, ಮೆರ್ವ ಮಾಡಿಸಿ . . . ನಲ್ವತ್ತೆಂಟು ಆದಿಮೂಲ ಆಲಡೆಗಳನ್ನು ನೋಡಿ ಬಂದರು . . .”


ಆರಂಭದಲ್ಲಿ ಕರಾವಳಿಯ ನಲ್ವತ್ತೆಂಟು ಅಥವಾ ಅರವತ್ತಾರು ಕಡೆ ಮಾನವ ಶಾಶ್ವತವಾಗಿ ನೆಲೆಯನ್ನು ಕಲ್ಪಿಸಿರಬೇಕು.
ತುಳುನಾಡ ಸಿರಿಯ ಮಗಳು ಸೊನ್ನೆ ಪುಷ್ಪವತಿಯಾಗಿ, ಫಲವತಿಯಾಗಬೇಕೆಂದು ಸೊನ್ನೆಯ ಅಜ್ಜಯ್ಯ ಮಂಜು ಪೆರ್ಗಡೆ ಹೀಗೆ ಹರಕೆ ಹೇಳುತ್ತಾರೆ. “ನಾನು ಸತ್ಯವನ್ನು ನಂಬಿರುವುದು ನಿಜವಾದರೆ ನಮ್ಮ ಸೊನ್ನೆ ಮೈನೆರೆಯಬೇಕು, ಗರ್ಭವತಿಯಾಗಿ ಮಕ್ಕಳನ್ನು ಹೆರಬೇಕು. ಸೊನ್ನೆ ಹೆತ್ತ ಕೂಡಲೇ ಮುಜಲೊಟ್ಟು ಬೆರ್ಮರಿಗೆ ಗುಂಡ ಕಟ್ಟಿಸುತ್ತೇನೆ. ನಿಮ್ಮ ‘ಸ್ಥಾನಮೂಲ’ ಉದ್ಧಾರ ಮಾಡಿಸುತ್ತೇನೆ... ಮೂಲದ ಮೈಸಂದಾಯ, ನಂದಿಗೋನಗೆ ಆಲಡೆ ಕಟ್ಟಿಸಿ ಹುರುಳಿ ಕಾಯಿ ಹರಕೆ ಕೊಡುತ್ತೇನೆ”


ಕಾಡ್ದೆರ್ಲು/ನಂದಿಗೋನ ಪಾಡ್ದನದಲ್ಲಿ ನಂದಿಗೋನನಿಗೆ ಆದಿಗೆ ಹೋಗಲು ಅಬ್ಬಗ ದಾರಗರು ಸೂಚಿಸುತ್ತಾರೆ. “ಆದಿಗೆ (ಆದಿಮೂಲಕ್ಕೆ) ಹೋಗು ಮಾಯ ಆಗು, ನಂದಿಗೋನ ರೂಪದಲ್ಲಿ ನರಪುರಿಗಳಲ್ಲಿ ನ್ಯಾಯ ನೆಲೆಸುವಂತೆ ಮಾಡು.” (‘ಅಕುಲು ಶಾಪ ವರ ಒಂಜ ಕೊರ್ತೆರ್ ಯೇ ಆದಿಗ್ ಪೋಯೆಲ ಮಾಯನೆ ಆಲ ಆದಿಡ್ ಈ ನಂದಿಗೋನೆಲಾ ಆದ್ ನರ ಪುರಿಕ್‍ಲೆಡ್ ನ್ಯಾಯ ಪನ್‍ಲಾ’ (ಹೇಳಿದವರು ಎಂಕಮ ಹೆಂಗ್ಸು ಕೊಲ್ಲೂರು ಮುಲ್ಕಿ, ಪ್ರಾಯ 65)


ಕೊರಗ ತನಿಯ ಪಾಡ್ದನದಲ್ಲಿ ಅನಾಥ ಬಾಲಕನನ್ನು ಮನೆಗೆ ತಾಯಿ ಕರೆಯುವಾಗ ಮಗಳು ಮಂಜಕ್ಕೆ ಕೇಳುತ್ತಾಳೆ: “ಆತನ ಮೂಲ ಯಾವುದು ಬಳಿ ಯಾವುದು ತಿಳಿದು ಸೇರಿಸಿಕೊಳ್ಳಿ” ಎಂದು. ‘ಆಯನ ಬರಿ ಬಾಂದ್ರ ಕೇನೊಡು ಆಯೆನೆ ಮೂಲ ಕೇನೊಡು’ ಆಗ ಬೈರಕ್ಕ ಬೈದೆದಿ ಕೇಳುತ್ತಾರೆ: ನೀನು ಯಾವ ಮೂಲದವ ಯಾವ ಬಳಿಯವ” ಎಂದು. (ಈ ದಾವಿನ ಬರಿನಾಯೆ ಮಗಾ ದಾವಿನ ಮೂಲದಾಯೆ) ಅದಕ್ಕೆ ಕೊರಗ ತನಿಯನ ಉತ್ತರ: “ನನಗೆ ಸಾಲ ಎಂದರೆ ಅಬ್ಬೆ, ಕದ್ರಿ ಕಾಂತಣ ದೇವರ, ಮೂಲ ಎನ್ಸೂರ, ಬಳಿ ಸೋಮನತ್ತ” (“ಎಂಕ್ ಸಾಲ ಪನ್ನಾಗ ಅಪ್ಪೆರೆ, ಕದ್ರ ಕಾಂತಣ ದೇವೆರ್ನ, ಮೂಲ ಎನ್ಸೂರ ಮೂಲೊ, ಬರಿ ಪನ್ನಾಗ ‘ಸೋಮನತ್ತ ಬರಿತಾಯೆ’”) (ಅನಂತಾಡಿಯ ವಿಶ್ವನಾಥ (ನಲ್ಕೆ) ಹೇಳಿದ ಕೊರಗ ಪಾಡ್ದನದಲ್ಲಿ ಮೂಲ ‘ಬಾಗೆಟ್ಟು ಬನ್ನಾಲೆ’ ಎನ್ನುತ್ತಾನೆ.)


ಸಿರಿ ಪಾಡ್ದನದಲ್ಲಿ ಸಿರಿ ದೇಶಾಂತರ ಹೋಗುವಾಗ ‘ಮೂಲದ ಮಯಿಸಂದಾಯಗ್ ಕದ್ಕೆ ದಿಂಜಾವೊಂದು ಉಪ್ಪುಲೆ’ (ಮೂಲದ ನಂದಿಗೋನನಿಗೆ ಗರಿಕೆ ಹುಲ್ಲು ಹಾಕುತ್ತಾ ಇರಿ) ಎಂದು ಮುಂಡಾಲ ವರ್ಗದವರಿಗೆ ಸಾಪ(ವರ) ನೀಡುತ್ತಾಳೆ.
“ಈ ಮೂಲಸ್ಥಾನದಲ್ಲಿ ಬೆರ್ಮರು ಆಲಡೆಯೊಂದಿಗೆ ಪ್ರದೇಶದ ರಕ್ಷಕ ದೈವ, ಕ್ಷೇತ್ರಪಾಲ, ಫಲ ಶಕ್ತಿಯ ದೈವ ನಾಗ, ಕುಲಲಾಂಛನ ದೈವಗಳಾದ ನಂದಿಗೋಣ, ಪಂಜುರ್ಲಿ ಹಾಗೂ ಹೆಣ್ಣುದೈವಗಳಾದ ರಕ್ತೇಶ್ವರಿ, (ತು.ಲೆಕ್ಕಿಸಿರಿ) ಚಿಕ್ಕು, ಅಬ್ಬೆ ಅಥವಾ ಅಬ್ಬಗ-ದಾರಗ ಹಾಗೂ ಇನ್ನಿತರ ಕ್ಷುದ್ರದೈವಗಳ ಗುಡಿಗÀಳಿರುತ್ತವೆ. ಸಾಮಾನ್ಯವಾಗಿ ಸಿರಿ ದೈವಾವೇಶದÀ ಮತಾಚರಣೆಯು ಇಲ್ಲಿಯೇ ನಡೆಯುತ್ತದೆ. ವಾರ್ಷಿಕ ಹಬ್ಬ ಜಾತ್ರೆಗಳ ಸಂದರ್ಭಗಳಲ್ಲಿ ತಮ್ಮನ್ನು ಪ್ರತಿನಿಧಿಸಲು ಮನೆಯಿಂದ ಒಬ್ಬನನ್ನಾದರೂ ಮೂಲತಾನಕ್ಕೆ ಕಳುಹಿಸಿಕೊಡುತ್ತಾರೆ. ಹಾಗೆ ಹೋಗÀದಿದ್ದಲ್ಲಿ ಕುಟುಂಬದ ಭೂತಗಳು ಹಾಗೂ ಅವುಗಳ ಅಂಕೆಯೊಳಗಿರುವ ಕುಟುಂಬದ ಪೂರ್ವಜರ ಪ್ರೇತಾತ್ಮಗಳು (ಸೈತಿನಕುಲು) ಸಂತಾನ ಹೀನತೆ, ಕುಟುಂಬ ಕಲಹಗಳನ್ನು ತಂದು ಹಾಕಿ ಮನುಷ್ಯರನ್ನು ಗೋಳು ಹೊಯ್ಯಿಸಿ ಸೇಡು ತೀರಿಸಿಕೊಳ್ಳುತ್ತವೆ ಎಂಬ ನಂಬಿಕೆಯಿದೆ. ``ಮೂಲಸ್ಥಾನದ ಕಲ್ಪನೆಯಲ್ಲಿ ಭಿನ್ನತೆ ಯಿದ್ದರೂ ಮೂಲಸ್ಥಾನವು ಒಂದು ಕುಟುಂಬವು ಆದಿಯಲ್ಲಿ ನೆಲೆಸಿದ ನೆಲೆ ಎಂಬುದು ಖಚಿತ. ಒಟ್ಟಿನಲ್ಲಿ ಅದು ಒಂದು ಕುಟುಂಬದ ರಾಜಕೀಯ ಧಾರ್ಮಿಕ ಕೇಂದ್ರಸ್ಥಾನ ಎನ್ನಬಹುದು. ಒಂದು ಕುಟುಂಬವು ಯಾವುದೋ ಅಲೌಕಿಕ ಕಾರಣಗಳಿಂದಾಗಿ ಕ್ಲೇಶಕ್ಕೊಳಪಟ್ಟಾಗ ಅವರ ಸದಸ್ಯರು ಮೂಲಸ್ಥಾನಕ್ಕೆ ತೆರಳಿ, ತಾವು ಬದುಕಿನಲ್ಲಿ ಏನು ತಪ್ಪು ಮಾಡಿದ್ದೇವೆ ಎಂದು ಬೆರ್ಮ ಆಳ್ವÀರು ಸಿರಿಪಾಡ್ದನದಲ್ಲಿ ಕೇಳಿದಂತೆ ಕೇಳುತ್ತಾರೆ.”19 ಹೀಗೆ ಮೂಲತಾನ ಆದಿ ಆಲದೆ ತುಳು ಜನಪದ ಧರ್ಮದ ದೈವ ಸಂಕೀರ್ಣವಾಗಿದೆ.


ಹುಟ್ಟಿನ ಚಿತ್ತಾರಿ/ಚಿತ್ತೇರಿ ಪರಿಕಲ್ಪನೆ


ತುಳುವರು “ಮೂಲತಾನ” ಎಂದು ಕರೆಯುವ ಜನಪದ ಪರಂಪರೆಯ ಆರಾಧನಾ ಕೇಂದ್ರವನ್ನು ಕುಂದಾಪುರದ ಜನರು “ಹುಟ್ಟಿನ ಚಿತ್ತಾರಿ/ಚಿತ್ತೇರಿ”ಎಂದು ಕರೆಯುತ್ತಾರೆ. ಬಂಟ್ವಾಳ ತಾಲೂಕಿನ ಅನಂತಾಡಿಯಲ್ಲಿ ಮೂಲತಾನದಲ್ಲಿ ಇರುವ ಉಲ್ಲಾಲ್ತಿ ದೈವ ಸಂಕೀರ್ಣವನ್ನು ‘ಚಿತ್ತರಿಗೆ' ಎನ್ನುತ್ತಾರೆ. ‘ಚಿತ್ತಾರಿ’ ಹಾಡು ಎನ್ನುವುದು ನಾಗಮಂಡಲದಲ್ಲಿ ನಾಗÀನಿಗೆ ಹಾಡುವ ಸ್ತುತಿ ಹಾಡು. “ಸಂಸ್ಕøತದಲ್ಲಿ ಚಿತೆ ಎಂದರೆ ಹೆಣವನ್ನು ಸುಟ್ಟು ಬೂದಿಯನ್ನು ರಾಶಿ ಮಾಡುವುದು ಎಂದು ಅರ್ಥ. ಅದಕ್ಕೆ ಸಂಬಂಧಿಸಿದ್ದು ಚೈತ್ಯ. ಸತ್ತವರ ಚೇತನಗಳು ಮನೆ ಮಾಡಿಕೊಂಡಿರುವುದು ಎನ್ನುವುದು ಪ್ರಾಚೀನ ಕಲ್ಪನೆ.”

ತುಳುವರ ಮೂಲತಾನವೂ ‘ಹುಟ್ಟು ಸಾವಿನ’ ಕ್ಷೇತ್ರ. ಇಲ್ಲಿ ಫಲವಂತಿಕೆಯ ಉಪಾಸನೆಯೂ ನಡೆಯುತ್ತಿದೆ. ಅಲ್ಲಿರುವ ಚೈತ್ಯದ ಉಪಾಸನೆಯೂ ನಡೆಯುತ್ತಿದೆ. ತುಳು ಭಾಷೆಯಲ್ಲಿ ಚೈತ್ಯವನ್ನು ‘ಮುಡಿಂಜ’ ಎನ್ನುತ್ತಾರೆ. ಚಿತ್ರಬೈಲು, ಚಿತ್ತರಿಗೆ (ಅನಂತಾಡಿ ಉಲ್ಲಾಲ್ತಿಯ ಮೂಲಕ್ಷೇತ್ರ) ಚೈತ್ಯ ಮೂಲದಿಂದ ಬಂದ ಹೆಸರುಗಳು.


“ಸಿರಿ ಹಾಗೂ ಬೆರ್ಮರ ಆರಾಧನೆಯ ಪ್ರಮುಖ ಕೇಂದ್ರಗಳಲ್ಲಿ ಹಿರಿಯಡ್ಕ ಒಂದು. ಆದರೆ ಪಾಡ್ದನದ ಯಾವ ಭಾಗದಲ್ಲೂ ಈ ಹೆಸರು ಉಲ್ಲೇಖವಿಲ್ಲದಿರುವುದು ಕುತೂಹಲದಾಯಕ ಅಂಶ. ಆದರೆ ಇಲ್ಲಿ ಬೆರ್ಮರ (ಬ್ರಹ್ಮ) ಆರಾಧನೆ ನಡೆಯುತ್ತಿದೆ. ಪ್ರತಿ ಸೋಮವಾರ ನಡೆವ ದರ್ಶನದಲ್ಲಿ ಪಾತ್ರಿ ಮೈದುಂಬಿ ದೈವವಾಣಿಯನ್ನು ನುಡಿಯುವುದು ಇದೆ. ಇಲ್ಲಿನ ಬೆರ್ಮರ ಗುಡಿ ಅತ್ಯಂತ ಪ್ರಾಚೀನ ಗುಡಿಗಳಲ್ಲಿ ಒಂದು ಎನ್ನಲಾಗಿದೆ. ಪೆರಿಯಡ್ಕ ಪದದ ಪೆರಿಯ ಎಂಬ ಪದವು ಹಳೆಯ ಪ್ರಾಚೀನ (ಹಿರಿದು) ಅಡಕ (ಎಂದರೆ ಹೂಳಿಡುವ ಪ್ರದೇಶ). ಅಪಾಯಕಾರಿ ಮಲಿನ ಪ್ರದೇಶ, ಅರಣ್ಯ ಪ್ರದೇಶ ವನ್ಯಭೂಮಿ ಎಂದರ್ಥ. 18ನೆಯ ಶತಮಾನದ ಹಿಂದೆ ಈ ದೇವಾಲಯಕ್ಕೆ ಹೊಂದಿಕೊಂಡಂತೆ ಯಾವುದೇ ಪೇಟೆ ಪಟ್ಟಣ ಇರಲಿಲ್ಲ. ಬ್ರಾಹ್ಮಣನೊಬ್ಬನ ಮನೆ ಹಾಗೂ ಅಂಗಡಿ ಮಾತ್ರ ಅಲ್ಲಿ ಇತ್ತು ಎನ್ನಲಾಗಿದೆ.''

ಬುಖನಾನ್ ಪ್ರಕಾರ ‘ಒಂದು ಅಂಗಡಿ ಮಾತ್ರ ಇತ್ತು ಮತ್ತು ಒಂದು ದೊಡ್ಡ ಶಕ್ತಿ ದೇವಸ್ಥಾನ ಇತ್ತು. ಅಲ್ಲಿ ಒಬ್ಬನೇ ಬ್ರಾಹ್ಮಣ ಅರ್ಚಕನಾಗಿ ಕೆಲಸ ಮಾಡುತ್ತಿದ್ದ, ಹೀಗಾಗಿ ಅಲ್ಲಿ ರಕ್ತಾಹಾರ ಇರಲಿಲ್ಲ’. ಆದರೆ ಹಿರಿಯಡ್ಕ ಆಲಡೆಯ ಬಾಗಿಲ ಪ್ರವೇಶದ್ವಾರದ ಬಳಿ ‘ಪಟ್ಣಶೆಟ್ಟಿ’ ಮನೆ ಇದೆ. ‘ಪಟ್ಣಶೆಟ್ಟಿ’ ವ್ಯಾಪಾರಿಗಳ ಮೇಲ್ವಿಚಾರಕ. ಹೀಗಾಗಿ ಇಲ್ಲಿ ಪಟ್ಟಣ ಇದ್ದಿರಬೇಕು. ‘ಪಟ್ಣ’ ಇದ್ದಲ್ಲಿ ಮಾತ್ರ ‘ಪಟ್ಣಶೆಟ್ಟಿ’ ಮನೆ ಇರುತ್ತದೆ ಎನ್ನುವುದು ಐತಿಹಾಸಿಕ ಸತ್ಯ.


ಆಲಡೆ ಪದದ ವ್ಯುತ್ಪತ್ತಿ


ತುಳು ನಿಘಂಟು: ಆಲ=ಸ್ಥಳನಾಮ ಘಟಕ; ಆಲ=ಆಲಡೆ, ಬ್ರಹ್ಮಸ್ಥಾನ; ಆಲಂದ= ಆಲಡೆ, ಬ್ರಹ್ಮಸ್ಥಾನ, ಆಲ=ಪಂಚದೈವಗಳು ನೆಲೆಗೊಂಡಿರುವ ಸ್ಥಳ. ಬ್ರಹ್ಮ, ನಾಗ, ರಕ್ತೇಶ್ವರಿ, ನಂದಿಗೋಣ, ಮೊದಲಾದ ದೈವಗಳ ಗುಡಿಗಳ ಸಂಕೀರ್ಣ. ತುಳು ನಿಘಂಟು ಆಲಡೆಯ ಪ್ರಸ್ತುತ ಧಾರ್ಮಿಕ ಸ್ವರೂಪವನ್ನು ವಿವರಿಸುತ್ತದೆ.

ಕನ್ನಡ ನಿಘಂಟು: ಆಲ ಆಂದರೆ ಹಾಲು ಮರಗಳಲ್ಲಿ ಒಂದು. ನಿಗ್ರೋಧ ವಟವೃಕ್ಷ ಇತ್ಯಾದಿ. ಆಲ: ವಿಷಪ್ರಾಣಿಗಳು ಬಿಡುವ ದ್ರವ. ಆಲದ+ಎಡೆ=ವಿಷದ ಹಾವುಗಳ ಎಡೆ, ವಿಷ ಪ್ರಾಣಿಗಳ ಕ್ಷೇತ್ರ.

ಆಲಡೆಯ ನೀರ್‍ಗುಂಡಿಗಳು
ಆದಿ ಆಲಡೆಗಳ ಕ್ಷೇತ್ರಗಳಲ್ಲಿ ಆಲದ ಗುಂಡಿ, ಆಲಗುಂಡಿ, ಆಲದ ಮಜಲು, ಬೆರ್ಮೆರೆ ಕಂಡ, ಬೆರ್ಮೆರೆ ಕೆರೆ, ಬೆರ್ಮೆರೆ ಕೆದು, ಬೆರ್ಮೆರೆ ಗುಂಡಿ, ಬೆರ್ಮೆರೆ ಮಡು. ಸಿರಿ ಗುಂಡಿ, ಸಿರಿ ಕೆರೆ, ಉಮೆ ಗುಂಡಿ, ಕುದ್ರೆ ಗುಂಡಿ, ಉರ್ಮಿಕಟ್ಟ - ಹೀಗೆ ನೀರಿನ ಮೂಲಗಳು ಇವೆ. ಇಂತಹ ಗುಂಡಿಗಳು ಬೆರ್ಮರ ಕ್ಷೇತ್ರದ ಬಳಿಯ ನದಿಯಲ್ಲಿ, ತೊರೆಯಲ್ಲಿ ಕೂಡಾ ಇರುತ್ತವೆ. ಸಿರಿ ತನ್ನ ಮಗು ಸೊನ್ನೆಗೆ ಜನ್ಮ ನೀಡುವುದು ‘ಸನ್ನೆ ಗುರಿ’ಯಲ್ಲಿ. ಇದು ನೀರು ಹರಿದು ಹೋಗುವ ಇಳಿಜಾರದ ಗುಡ್ಡದ ಮೇಲೆ ಇಂದಿಗೂ ಇರುವ ಕೆಸರು ತುಂಬಿದ ಸಣ್ಣ ಕೆರೆ. ಕಾಡಿನÀ ಮಧ್ಯೆ ಇದ್ದ, ಈಗಲೂ ಹೆಚ್ಚಿನ ಕಡೆ ಕಾಡಿನಲ್ಲಿ ಇರುವ ಬೆರ್ಮೆರ ಆಲಡೆ ಕ್ಷೇತ್ರಗಳಲ್ಲಿ ಬೇಸಗೆಯಲ್ಲೂ ಅಂತರ್ಜಲ ಅಧಿಕ. ಈ ಆಲಡೆ ಬನಗಳ ಕಾಲ ನಿರ್ಣಯ ಮಾಡಲು ಇಲ್ಲಿ ಉತ್ಖನನ ಮಾಡಬೇಕಷ್ಟೆ. 2011ರಲ್ಲಿ ಕಾರ್ಕಳ ತಾಲೂಕಿನ ನಿಟ್ಟೆ ಸಮೀಪದ ಕಲ್ಯ ನಾಗಬ್ರಹ್ಮಸ್ಥಾನದಲ್ಲಿ 12-13ನೇ ಶತಮಾನಕ್ಕೆ ಸೇರಿದ ಕೆಲವು ಶಿಲ್ಪಗಳು ಪತ್ತೆಯಾಗಿವೆ ಎಂದ ವರದಿಯಾಗಿದೆ. ಬೇಸಗೆಯ ತಿಂಗಳುಗಳಲ್ಲಿ ನಡೆಯುವ ಬೆರ್ಮೆರೆ ಕ್ಷೇತ್ರದ ವಾರ್ಷಿಕ ಆಚರಣೆಯ ದಿನ ಬನದ ಒಳಗೆ ಕೆಲವೇ ಅಡಿಗಳಷ್ಟು ಅಗೆದರೆ ಅಡುಗೆಗೆ ಯೋಗ್ಯವಾದ ನೀರು ದೊರಕುತ್ತದೆ. ಅದೇ ನೀರನ್ನು ಬೇಸಿಗೆಯಲ್ಲಿ ನಡೆಯುವ ವಾರ್ಷಿಕ ಸಾರ್ವಜನಿಕ ಅನ್ನ ಸಮಾರಾಧನೆಯ ಅಡುಗೆಗೆ ಉಪಯೋಗಿಸುತ್ತಾರೆ. ಬೇರೆ ನೀರು ಉಪಯೋಗಿಸಬಾರದು ಎಂಬ ನಂಬಿಕೆ ಇದೆ.


ತುಳುನಾಡಿನಲ್ಲಿ ‘ನಾಗ ಬೀದಿ’ ಎಂದು ಕೆಲವು ಸ್ಥಳಗಳನ್ನು ಗುರುತಿಸುತ್ತಾರೆ. ನಾಗ ಬೀದಿಗಳಲ್ಲಿ ಎರಡು ವಿಧ. ಒಂದು ‘ಸ್ಥಿರ ಬೀದಿ’, ಇನ್ನೊಂದು ‘ಚರ ಬೀದಿ’. ಸಾಮಾನ್ಯವಾಗಿ ನಾಗ ಬೀದಿಗಳಲ್ಲಿ ನಾಗ ಸಂಚಾರ ಇರುತ್ತದೆ. ಹೀಗಾಗಿ ಅಲ್ಲಿ ಮನೆ ಕಟ್ಟಬಾರದು ಎಂಬ ನಿಷೇಧ ಇದೆ. ‘ಸ್ಥಿರ ಬೀದಿ’ಯ ಅರ್ಥ ಆ ಭೂಮಿಯಡಿಯಲ್ಲಿ ನೀರಿನ ನಿಕ್ಷೇಪ ಇದೆ ಎಂದು. ಚರ ಬೀದಿಯಲ್ಲಿ ಆ ಭೂಮಿಯಡಿಯಲ್ಲಿ ಅಂಕು ಡೊಂಕಾಗಿ ನೀರು ಹರಿಯುತ್ತದೆ. ನಾಗನೇ ನೀರು ಆಗಿ ನೀರೆ ನಾಗನಾಗಿ ಕಾಶ್ಮೀರ ಸಂಸ್ಕøತಿಯಲ್ಲಿ ಕಾಣಬರುತ್ತದೆ.  ಹೀಗಾಗಿ ನಾಗಭೂಮಿಯಾದ ಇಲ್ಲಿ, ನೀಲನಾಗ, ಶೇಷನಾಗ, ಶೂಕ್ರನಾಗ, ಅನಂತನಾಗ-ಇತ್ಯಾದಿ ಸ್ಥಳನಾಮಗಳು ಇವೆ. ‘ನೀಲ’ ಎನ್ನುವುದು ನದಿಯ ಹೆಸರು. ಅನಿಲ್ ಭಟ್ ಅವರ ಪ್ರಕಾರ ಇದು ಜೀಲಮ್ ನದಿಯ ಮೂಲ ಹೆಸರು. ಕಾಶ್ಮೀರಿ ಭಾಷೆಯಲ್ಲಿ ನಾಗ ಅಂದರೆ ನೀರಿನ ಸೆಲೆ. ಅನಂತ್ ನಾಗ ಎಂದರೆ ಜಲಮೂಲ ಅನಂತವಾಗಿರುವ ಸ್ಥಳ. ‘ನಾಗಿನಿ’ ಸರೋವರ ಕಡು ಆಳವಾಗಿ ಇರುವ ಕಾರಣ ಅದು ನೀಲಿಯಾಗಿದೆ. ‘ಸಲಕ್ ನಾಗ’, ‘ಮಲಿಕ್ ನಾಗ’, ‘ನಾಗ್ ಬಾಲ್’ - ಇತ್ಯಾದಿ (ಪವಿತ್ರ) ಸರೋವರಗಳು ನಾಗನ ಹೆಸರಿನಲ್ಲಿವೆ. ಏಳು ಶಿಖರಗಳ ಪರ್ವತದ ಹೆಸರೂ ‘ಶೇಷನಾಗ.’ ಅದರ ಬುಡದಲ್ಲಿಯೇ ಶೇಷನಾಗ ಸರೋವರ ಇದೆ. ಇಲ್ಲಿಗೆ ನೀರು ಸಮುದ್ರ ಮಟ್ಟದಿಂದ 3658 ಮೀಟರ್ ಮೇಲಿನಿಂದ ಹರಿದು ಬರುತ್ತದೆ. ಹೀಗೆ ನಾಗಭೂಮಿ ಎಂದು ಪುರಾಣದಲ್ಲಿ ಮಾತ್ರವಲ್ಲ ಇತಿಹಾಸ ಪೂರ್ವದಿಂದಲೂ ಹೆಸರು ಪಡೆದ ಕಾಶ್ಮೀರವು, ಶಂಬಾರವರ ಶೋಧದಂತೆ ‘ನೀರೇ ನಾಗ’ ಆಗಿ ನೀರಿನ ಝರಿಗಳ ಭೂಮಿಯಾಗಿ, ನಾಗ ಭೂಮಿಯೆನಿಸಿದೆ. ನಾಗನು ಇಲ್ಲಿಯ ನಾಗಾಬುಡಗಟ್ಟು ಜನಾಂಗಗಳ ಉಪಾಸನಾ ದೇವತೆ. ಇದು ನಾಗಬುಡಗಟ್ಟು ಜನಾಂಗದ ಭೂಮಿಯಾಗಿತ್ತು. ಕ್ರಿ. ಪೂರ್ವ 250ರ ಸುಮಾರಿಗೆ ನಾಗ ಬುಡಗಟ್ಟು ಜನಾಂಗದ ‘ಅರವಾಲೊ’ ಎನ್ನುವ ಕಾಶ್ಮೀರದ ಅರಸನನ್ನು ಅಶೋಕ ಬೌದ್ಧ ಮತಕ್ಕೆ ಮತಾಂತರಿಸುತ್ತಾನೆ. ಇಲ್ಲಿ ನಾಗÀನ ಸಾಂಕೇತಿಕ ಚಿಹ್ನೆಯು ನೇಗಿಲು.


ಆದಿ ಆಲಡೆಯ ಮೂಲ ಪರಿಸರ

ಆದಿ ಆಲಡೆಯ ಮೂಲ ಪರಿಸರ ದಟ್ಟವಾದ ಕಾಡು. ಅನೇಕ ಕಡೆ ಇಳಿಜಾರದ ಕಾಡು, ಆಲಡೆಯ ಕ್ಷೇತ್ರದ ಬಳಿ ನದಿ/ತೊರೆ ಹರಿದರೂ, ಸಾಮಾನ್ಯವಾಗಿ ಈ ಕ್ಷೇತ್ರ ಸಮತಟ್ಟಾಗಿರುತ್ತದೆ. (ತುಳು: ಪಡಿಲ್) ಹೆಬ್ರಿ ಬೀಡಿನ ಬಲ್ಲೆಯ ಆಲಡೆ ಮೂಲತಾನವನ್ನು ಸೀತಾನದಿ ಸವರಿಕೊಂಡು ಹೋಗುತ್ತಿದೆ. ನಾಗಶಿಲ್ಪಗಳನ್ನು ನೀರು ಸವರಿಕೊಂಡು ಹೋದರೆ ಶಿಲ್ಪಗಳು ಕಿತ್ತು ಹೋಗಬಹುದು ಎಂದು ಕೆಲವು ವರ್ಷಗಳ ಹಿಂದೆ ಸ್ವಲ್ಪ ಈಚೆ ಮುರಕಲ್ಲಿನ ಎತ್ತರದ ಕಟ್ಟೆ ಕಟ್ಟಿ, ನಾಗಶಿಲ್ಪಗಳನ್ನು ಮರು ಪ್ರತಿಷ್ಠಾಪಿಸಿದ್ದಾರೆ. ಸಾಮಾನ್ಯವಾಗಿ ನದಿ ಹೊಳೆಗಳ ದಡಗಳಲ್ಲಿ ಇರುವ ಕಾಡಿನಲ್ಲಿ ಆಲಡೆ ಇರುತ್ತದೆ. ಓಣಿಯಾಯಿ ಗುತ್ತು ಆಲಡೆ, ಚಿತ್ರಬೈಲು ಆಲಡೆ, ಅರಸಮ್ಮನ ಕಾನು, ಕಂಡೇವು ಆಲಡೆ (ಕಾಡು), ಕಟ್ಲಬೀಡು ಆಲಡೆ - ಇವೆಲ್ಲ ಕಾಡೇ ಆಗಿ ಇವೆ.


‘ತುಳುನಾಡಿನ ಜಲವಾಚಕಗಳಲ್ಲಿ ಅಧಿಕ ಸಂಖ್ಯೆಯಲ್ಲಿ ತಲೆದೋರುವ ಜಲವಾಚಕಗಳೆಂದರೆ: ಆಲ್, ಬೆ(ಬೊ)ಳ್ ಮುಂತಾದುವು. ಇವೆಲ್ಲ ನೀರಿನ ಅಧಿಕ್ಯವನ್ನು ಜಲಾನಯನ ಪ್ರದೇಶವನ್ನೂ ಸೂಚಿಸುವ ಅಪ್ಪಟ ದೇಶೀಯ ಪದಗಳು; ಅಷ್ಟೇ ಪ್ರಾಚೀನ ವಾದವು ಕೂಡಾ.... ‘ಆಲ್’ ಎಂಬುದು ಕನ್ನಡದಲ್ಲಿ ಪ್ರಯೋಗದಲ್ಲಿ ಇಲ್ಲವಾದರೂ ಉಳಿದ ಸಹೋದರ ಭಾಷೆಗಳನ್ನು ನೋಡಿದರೆ, ಅಥವಾ ದ್ರವ ವಾಚಕವಾದ ಸಾಧಿತ ಪದಗಳಿಂದ ಇದು ಜಲಾರ್ಥಕವಾಗಿರುವುದನ್ನು ಕಂಡುಕೊಳ್ಳಬಹುದು.”


ರಘುಪತಿ ಭಟ್ಟರು ಕೆಲವು ಉದಾಹರಣೆಗಳನ್ನು ವಿವರಿಸಿ “ಪ್ರಾಯಶಃ ಇದೇ ‘ಆಲ್’-ಸಂಬಂಧಿಸಿದ ಪದಗಳಾಗಿರಬೇಕು - ಆಲುಪ, ಆಳ್ವ, ಅನೂಪ (ಸಂ.`ಜಲಭರಿತವಾದ ಭೂಮಿ’) ಆಳುಪ ಮುಂತಾದ ರೂಪಗಳು” ಎನ್ನುತ್ತಾರೆ. “ಆಲಂಪುರ ಹಳೆಯ ಹೈದರಾಬಾದ್ ಸಂಸ್ಥಾನದ ರಾಯಚೂರು ಜಿಲ್ಲೆಯ ನಂದಿಕೋಟಕೂರು ತಾಲೂಕಿನಲ್ಲಿದ್ದ ಊರು. ಇಲ್ಲಿ ನವಬ್ರಹ್ಮೇಶ್ವರ ಮಂದಿರ ಸಮೂಹವೇ ಇಲ್ಲಿಯ ಪ್ರಮುಖ ಮಂದಿರ... ಇಲ್ಲಿಯ ಮಧ್ಯಭಾಗದಲ್ಲಿರುವ ಬಾಲಬ್ರಹ್ಮೇಶ್ವರನ ಮಂದಿರವು ಪ್ರಮುಖವಾಗಿದೆ. ಉಳಿದ ಅಷ್ಟ ಶಿವಮಂದಿರಗಳೆಂದರೆ ‘ಕುಮಾರ ಬ್ರಹ್ಮ, ಅರ್ಕ ಬ್ರಹ್ಮ, ವೀರ ಬ್ರಹ್ಮ, ವಿಶ್ವ ಬ್ರಹ್ಮ, ತಾರಕ ಬ್ರಹ್ಮ, ಗರುಡ ಬ್ರಹ್ಮ, ಸ್ವರ್ಗ ಬ್ರಹ್ಮ, ಮತ್ತು ಪದ್ಮ ಬ್ರಹ್ಮ.’ ಬಾಲ ಬ್ರಹ್ಮೇಶ್ವರನನ್ನು ಬರಿಯ ಬ್ರಹ್ಮೇಶ್ವರ ಎಂದೂ ಕರೆಯಲಾಗುತ್ತದೆ. ಈ ಶಿವ ಮಂದಿರದಿಂದಾಗಿ ಆಲಂಪುರಕ್ಕೆ ಬ್ರಹ್ಮೇಶ್ವರ ಕ್ಷೇತ್ರ ಅಥವಾ ನವಬ್ರಹ್ಮೇಶ್ವರ ಕ್ಷೇತ್ರ ಎಂಬ ಮತ್ತೊಂದು ಅಭಿದಾನವೂ ಪ್ರಾಪ್ತವಾಗಿದೆ.”26


ತುಳುವರ ಮಹತ್ವದ ಧಾರ್ಮಿಕ ಮತ್ತು ಸಾಂಸ್ಕøತಿಕ ಘಟಕವಾಗಿರುವ ಆಲಡೆಯೂ ಬ್ರಹ್ಮಕ್ಷೇತ್ರ. ಈ ಬ್ರಹ್ಮನೆನ್ನುವುದು ವೇದಗಳ ಬ್ರಹ್ಮನ್‍ಗೆ ಪ್ರೇರಣೆ ಆಗಿರಬೇಕು ಎನ್ನುವುದು ನನ್ನ ಊಹೆ. ಕ್ಷೇತ್ರದ ಬಳಿ ಸಮೀಪ ‘ಬೀಡು’ ಎನ್ನುವ ಆಲಡೆ ಮನೆಗಳಿವೆ. ಇಲ್ಲಿ ಪಟ್ಟಾಭಿಷೇಕ ಆಗುವ ಪದ್ಧತಿ ಇದೆ. ಈ ಪಟ್ಟಾಭಿಷೇಕದಲ್ಲಿ ಅಜಲಿನ ಎಲ್ಲಾ ಜಾತಿಗಳು ಹಾಜರಿರುತ್ತಾರೆ. ಹೀಗೆ ಈ ಕ್ಷೇತ್ರ ಆಳುವ ಎಡೆಯೂ ಆಗಿದೆ. ಮಾನವ ಶಾಸ್ತಜ್ಞರ ಪ್ರಕಾರ ಬುಡಗಟ್ಟು ಒಂದು ರಾಜಕೀಯ ಘಟಕವೂ ಆಗಿದೆ. ಬೀಡು ಎಂಬುದು ಆಲಡೆಯ ರಾಜಕೀಯ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಗಳನ್ನು ನಿರ್ದೇಶಿಸುವ ನಾಯಕನ ಮನೆ. ಆಲಡೆ ಮನೆಯ ಆಳುವ ವ್ಯಕ್ತಿಯ ಪಟ್ಟಾಭಿಷೇಕದಲ್ಲಿ ಪಡೆಯುವ ಹೆಸರು ಅರ್ಥಾತ್ ಪಟ್ಟದ ಆಳುವ ನಾಮ ಪರಂಪರೆಯಿಂದ ಬದಲಾಗದೆ ಮುಂದುವರಿದಿದೆ ಎಂಬ ಗ್ರಹಿಕೆ ಇದೆ. ಈ ಹೆಸರನ್ನು ‘ಆ/ಅಲಯದ ಪುದರ್’ ಎನ್ನುತ್ತಾರೆ. ನೀರು ಇರುವ ಎಡೆಯನ್ನು ಜನರು ವಾಸದ ಎಡೆಯನ್ನಾಗಿ ಆರಿಸಿದ, ಯಾವುದೇ ಬುಡಗಟ್ಟುಗಳ ಆಳ್ವಿಕೆಯಲ್ಲೂ ಆಳುವ ನಾಯಕ ಇರುತ್ತಾನೆ.


ಮುಂದೆ ಬದಲಾದ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಬೀಡುಗಳ ರಾಜಕೀಯ ಅಧಿಕಾರ ಕಳೆದುಹೋಗಿದ್ದರೂ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಧಿಕಾರಕ್ಕೆ ಚ್ಯುತಿ ಬಂದಿಲ್ಲ. ಇಲ್ಲಿ ಇಂದಿಗೂ ಕೆಲವು ಆಲಡೆಗಳಲ್ಲಿ ನಡೆಯುವ ಸಾಂಪ್ರದಾಯಿಕ ಆರಾಧನೆ, ‘ಅಂಕ’, ‘ಅಂಬೊಡಿ’ ಆಚರಣೆ ಮೇಲಿನ ಮಾತಿಗೆ ಆಧಾರವಾಗುತ್ತದೆ. (ಈ ವಿವರಗಳು ಮುಂದೆ ಬರಲಿವೆ.) ಅನಂತಾಡಿ ನಾಗಬೆರ್ಮರ ಬನದ ಬಳಿ ಇರುವ ನಾಲ್ಕು ಕಂಬುಲ ಗದ್ದೆಗಳಲ್ಲಿ ಒಂದನ್ನು ‘ದಂಡೆತ್ತಿ ಮಾರ್’ (ದಂಡ್+ಎತ್ತಿ+ಮಾರ್= ದಂಡು ಬಂದು ಸೇರಿದ ಗದ್ದೆ) ಎಂದು ಕರೆಯುತ್ತಾರೆ. ಇಂತಹ ಶಕ್ತ್ಯಾಲಯಗಳ ವಾರ್ಷಿಕ ಆರಾಧನೆಯ ಮರುದಿನ-ಕೊನೆಯ ಆಚರಣೆಯಾಗಿ-ಕೋಳಿ ಅಂಕ ನಡೆಯಬೇಕೆಂಬ ವಿಧಿ ಇದೆ. ಕೋಳಿಯ ರಕ್ತ ಆ ಕ್ಷೇತ್ರಕ್ಕೆ ಬೀಳಬೇಕು ಎಂಬುದು ನಂಬಿಕೆ. ಈ ರಕ್ತಾಹಾರ ಶಕ್ತಿ ದೈವಗಳ ಪ್ರೀತ್ಯರ್ಥ ಎನ್ನಲಾಗುತ್ತಿದ್ದರೂ ಮೂಲತಃ ಈ ಪ್ರದೇಶ ಅಂಕದ ಪ್ರದೇಶ ಎಂಬುದನ್ನು ಈ ಆಚರಣೆ ಸೂಚಿಸುತ್ತದೆ. ಇದಕ್ಕೆ ಬೆಳ್ತಂಗಡಿಯ ನಿಡಿಗಲ್ಲಿನ ಶಾಸನವು ಈ ಮಾತನ್ನು ಸಾಕ್ಷೀಕರಿಸುತ್ತದೆ.


ಹೀಗೆ ಆದಿಮಾನವ ಮೂಲತಃ ವ್ಯವಸಾಯ ಯೋಗ್ಯ ಕ್ಷೇತ್ರವನ್ನು ಆರಿಸಿ ನೆಲೆ ನಿಲ್ಲುವಾಗ ಸಹಜವಾಗಿ ತನ್ನ ಬುಡಗಟ್ಟಿನೊಂದಿಗೆ ನೆಲೆ ನಿಲ್ಲುತ್ತಾನೆ. ಮೂಲತಾನ ಆದಿ ಆಲಡೆಗಳ ಬಳಿ ವ್ಯವಸಾಯಯೋಗ್ಯ ಪ್ರದೇಶವಿದೆ. ಹೆಚ್ಚಿನ ಕಡೆ ಬನದ ಸುತ್ತ ಭತ್ತ ಬೆಳೆಯುತ್ತಿದೆ. ಹೀಗಾಗಿ ಮಾನವ ಮೊದಲು ನೆಲೆ ನಿಂತ ಪ್ರದೇಶ ಎರಡೂ ಅರ್ಥದಲ್ಲೂ-ಆಳುವ ಎಡೆ ಮತ್ತು ವಿಷದ ಹಾವುಗಳ ನೆಲೆ - ಆಲಡೆ ಎಂದು ಗುರುತಿಸಿಕೊಂಡಿರಬಹುದು. ‘ಆದಿ ಆಲಡೆ’ ‘ಆದಿ ದೈವ ರೆಕ್ಕೆಸಿರಿ’ ‘ಮೂಲದ ಮಯಿಸಂದಾಯೆ’ (ನಂದಿಗೋನ) ‘ಮೂಲದ ನಾಗೆ’ ‘ಮೂಲದ ಕುಮಾರೆ’ ಎಂಬ ಮೂಲ ಹೆಸರುಗಳು ಈಗಲೂ ಉಳಿದು ಬಂದಿವೆÉ. ಆಲಡೆ ಮೂಲತಾನದಲ್ಲಿ ನೆಲೆಯಾದ ಗುಂಪುಗಳಿಗೆ ಒಬ್ಬೊಬ್ಬ ನಾಯಕ ಇದ್ದೇ ಇರುತ್ತಾನೆ. ಆತನೇ ಆಳುವವ. ಆತ ಆಳುವ ಜಾಗವೇ ಆಲಡೆ ಆಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆಲಡೆಯಲ್ಲಿ ಇರುವ ಶಕ್ತಿಯೇ ನಾಗಬೆರ್ಮೆರ್ ಮತ್ತು ಪರಿವಾರ ಶಕ್ತಿಗಳು. ತುಳುನಾಡಿನ ಎಲ್ಲಾ ದೈವಗಳು ಆಲಡೆ ಮೂಲತಾನದ ನಾಗಬೆರ್ಮೆರ ಪರಿವಾರ ಶಕ್ತಿಗಳು ಅಥವಾ ಭೂತಗಳು. ಮೂಲತಾನ ನೀರಿನ ಮೂಲದ ಪ್ರದೇಶ. ಆದುದರಿಂದ ಸಹಜವಾಗಿ ಇಲ್ಲಿ ಹಾವುಗಳು ಇರುತ್ತವೆ. ಈ ಹಾವುಗಳಿಗೆÉ ಕೈಮುಗಿದು ಅದನ್ನೇ ನಂಬಿ ಆರಾಧಿಸಲು ಆತ ಪ್ರಾರಂಭಿಸಿದ. ಅವನ ಸಂತಾನದವರಿಗೆ ‘ನಮ್ಮ ಮೂಲತಾನ’ ಎನ್ನುವ ನಂಬಿಕೆ ಉಳಿದು ಈ ಪ್ರದೇಶಕ್ಕೆ ಮಹತ್ವ ಬಂತು. “ ಪಾತಾಲೊದ ‘ಪನಿನಾಗೆರ್’ ಭೂಮಿ ತುಂಬೊಂದು (ಹೊತ್ತುಕೊಂಡು) ಉಲ್ಲೆರ್ (ಇದ್ದಾರೆ)” ಎನ್ನುತ್ತದೆ ರೂಢಿ ಮಾತು. ಮುಂದಿನ ಪುಟಗಳಲ್ಲಿ ನಾಗನಿಗೂ ಕೃಷಿಗೂ ಇರುವ ನಂಟನ್ನು ಇಲ್ಲಿಯ ಆಚರಣೆಗಳು ಸಂಕೇತಿಸುವುದನ್ನು ಕಾಣಬಹುದು.


ತುಳುನಾಡಿನಲ್ಲಿ ಪುರಾತನ ಪಟ್ಟದ ಹೆಸರನ್ನು ‘ಆ/ಅಲಯದ ಪುದರ್’ ಎಂದು ತುಳು ಸಂಪ್ರದಾಯದಲ್ಲಿ ಹೇಳುತ್ತಾರೆ. ಪಟ್ಟ ಆಗುವವನಿಗೆ ಹುಟ್ಟುವಾಗ ಇಟ್ಟ ಹೆಸರಿನ ಬದಲಿಗೆ ‘ಆ/ಅಲಯದ ಪುದರ್’ ಹಾಕುವುದು ಪಟ್ಟಾಭಿಷೇಕದ ಒಂದು ವಿಧಿ. ಈ ರೀತಿ ಹೊಸ ಅಧಿಕಾರ ಹಿಡಿಯುವವನಿಗೆ ಆ ಮನೆಯ ಹಳೆಯ ಹೆಸರು ನೀಡುವ ವಿಧಿಯನ್ನು ‘ಪರಪು ಲೆಪ್ಪುನು’ ಎನ್ನುತ್ತಾರೆ.


‘ಬೆರ್ಮೆರ ಗುಂಡ ಗದ್ದುಗೆಯ ಬಳಿ, ಬಲಿ ನೇಮ ಪಡೆಯುವ ದೈವಗಳು ನಾವು’ ಎನ್ನುವ ನುಡಿಗಟ್ಟಿನ ಪ್ರಕಾರ ‘ಗದ್ದುಗೆ’ ಸಿಂಹಾಸನವೂ ಆಗುತ್ತದೆ, ಸಮಾಧಿಯೂ ಆಗುತ್ತದೆ. ಆಚರಣೆಯಲ್ಲೂ ಈ ತತ್ವ ಮುಂದುವರೆಯುತ್ತಿದೆ. ಹಾವು ಹುಟ್ಟು-ಸಾವುಗಳ ನಿಯಂತ್ರಕ ಎಂಬ ಸಾರ್ವತ್ರಿಕ ನಂಬಿಕೆ ಇದೆ. ಕ್ರೈಸ್ತಧರ್ಮಪೂರ್ವದಲ್ಲಿ ಇಡಿಯ ವಿಶ್ವದಲ್ಲಿ ಈ ನಂಬಿಕೆ ಇತ್ತು.


‘......ಸ್ಥಳನಾಮ ಮೂಲವನ್ನು ಕಂಡು ಹುಡುಕುವುದರೊಂದಿಗೆ, ಅಲ್ಲಿ ಮೊತ್ತ ಮೊದಲು ನೆಲೆಸಿದ್ದಿರಬಹುದಾದ ನಿವಾಸಿಗಳ ಮೂಲವನ್ನೂ ಅವರ ಸಾಂಸ್ಕøತಿಕ ನೆಲೆಗಟ್ಟನ್ನೂ ಪ್ರಕೃತಿ ಹಾಗೂ ಅವರ ನಡುವಣ ಸಂಬಂಧವು ಹೇಗೆ ಅವರಿಂದ ನಮಗೆ ಅನೂಚಾನವಾಗಿ ಹರಿದು ಬಂದಿರುವ ಸಂಸ್ಕøತಿಯನ್ನು ರೂಪಿಸಿದೆ ಎಂಬುದನ್ನು ಪತ್ತೆ ಹಚ್ಚಬಹುದು. ಶೋಧಕನಿಗೆ ಸ್ಥಳನಾಮಗಳು ಕೇವಲ ನಾಮಗಳಾಗದೆ ಸಾಂಸ್ಕøತಿಕ ಘಟಕಗಳಾಗುತ್ತವೆ; ಸಂಸ್ಕøತಿಯ ವಾಹಕಗಳಾಗಿ ಕಾಣಿಸುತ್ತವೆ.'


ಆದಿಕಾಲದಿಂದ ತುಳುವರ ಹಿರಿಯರು ನಂಬಿರುವಂತಹ ಆಲಡೆಯ ಬಗ್ಗೆ ಭಯ ಮಿಶ್ರಿತ ಭಕ್ತಿ ಎಲ್ಲ ತುಳುವರಲ್ಲಿ ಇದೆ. ಒಂದೊಂದು ತುಳುವ (ಕುಲ) ಬಳಿಯವರಿಗೆ ಒಂದೊಂದು ಆಲಡೆ ಇದೆ. ಒಂದಕ್ಕಿಂತ ಹೆಚ್ಚು ಕುಲದವರಿಗೆ ಒಂದೇ ಆಲಡೆ ಇರುವುದನ್ನೂ ಕಾಣಬಹುದು. ಆದರೆ ಎಲ್ಲಾ ಆಲಡೆಗಳಲ್ಲಿ ನಾಗ-ಬಿರ್ಮೆರ್ ಮತ್ತು ಪರಿವಾರ ದೈವಗಳು ಇರುತ್ತವೆ. ಈ ವಿವರಗಳು ಮುಂದೆ ಬರಲಿವೆ. ಆಲಡೆಗಳಲ್ಲಿ ಸಿರಿ ಇದ್ದರೆ ‘ಸಿರಿ ಆಲಡೆ’ ಎನ್ನುತ್ತಾರೆ. ತುಳುನಾಡ ಸಿರಿಯ ಕಥಾನಕದ ವ್ಯಾಪ್ತಿಗೆ ಒಳಪಡದ ಹಾವಿನ ರೂಪದಲ್ಲಿ ‘ಕಡ್ಯ’ (ಘಟ) ಸಿರಿಗಳ ಮೂಲ ಬಿಂಬಗಳು ಇವೆ. ಇವು ಕೂಡಾ ಇತ್ತೀಚಿನ ವರ್ಷಗಳಲ್ಲಿ `ಜೋಡಿ ಸಿರಿಗಳು’ ಆಗಿ ಪರಿವರ್ತನೆಯಾಗುತ್ತಿವೆ.


ಕುಟುಂಬದಿಂದ ಯಾವುದೇ ಕಾರಣದಿಂದ ಬಹಿಷ್ಕಾರಕ್ಕೆ ಒಳಗಾದವರು, ಅಥವಾ ಆಧುನಿಕತೆಯ ಪ್ರಭಾವದಿಂದ ಆಲಡೆ ಮೂಲತಾನದ ಬಗ್ಗೆ ನಿರಾಸಕ್ತಿ ಇರುವವರು, ವೈಚಾರಿಕ ಮನೋಭಾವದವರು, ತಮ್ಮ ಮುಂದಿನ ಸಂತತಿಯವರಿಗೆ ಆಲಡೆ ಮೂಲತಾನ ತಿಳಿಸುವುದಿಲ್ಲ. ಆ ಸಂತತಿಯವರು ಕೆಲವು ತಲೆಮಾರಿನ ನಂತÀರ ಮೂಲ ಹುಡುಕಲು ಹರಸಾಹಸ ಪಡುತ್ತಾರೆ. ಇಂತವರು ‘ಅಷ್ಟಮಂಗಳ ಪ್ರಶ್ನೆ’ಯ ಮೂಲಕ ಮೂಲ ಶೋಧಿಸುತ್ತಿರುವುದನ್ನು ತುಳುನಾಡಿನಲ್ಲಿ ಈಗಲೂ ಕಾಣಬಹುದು. ಮೂಲ ಹುಡುಕುವ ಕೆಲಸವನ್ನು ಸ್ಥಾನಿಕ ಬ್ರಾಹ್ಮಣರೂ ಮಾಡುತ್ತಾರೆ.


ಮೂಲತಾನಗಳ ಚಲನೆ

ಮೂಲತಾನಗಳ ಬೇರು ಕಡಿದುಕೊಂಡವರು ಮತ್ತೆ ಹುಡುಕಿ ತೆಗೆಯುವುದರಲ್ಲಿ ಯಶಸ್ವಿಯಾಗುವುದು ಸುಲಭವಲ್ಲ. ವಂಶದ/ಬಳಿಯ ಬೇರು ಹಿಡಿದು ಮೂಲ ಶೋಧಿಸಲು ಅವಕಾಶ ಇದ್ದರೂ ಒಂದು ಬಳಿಯವರಿಗೆ ಎರಡು ಮೂಲತಾನಗಳು ಮಂಗಳೂರು ತಾಲೂಕಿನಲ್ಲಿಯೇ ಇವೆ. ಇವು ಎರಡೂ ಸಿರಿ ಆಲಡೆಗಳು ಆಗಿರುವುದು ಇನ್ನೂ ಅಚ್ಚರಿಯ ಸಂಗತಿ. ಹಾಗೆಯೇ ಬೇರೆ ಬೇರೆ ಬರಿ/ಬಳಿಗೆ ಸೇರಿದವರು ಒಂದೇ ಆಲಡೆ ಮೂಲತಾನವನ್ನು ತಮ್ಮ ‘ಮೂಲತಾನ’ ಎಂದು ಪರಿಗಣಿಸುತ್ತಾರೆ.
ಪುರಾತನ ಪದ್ಧತಿಯಂತೆ ಆಲಡೆ ಮೂಲತಾನ ಬದಲಾಗುವುದಿಲ್ಲ. ಮೂಲತಾನ ಗಳಿಂದ ಕಾರಣಾಂತರದಿಂದ ಬೇರೆಯಾದ ಕುಟುಂಬಗಳು ತಾವು ನೆಲೆನಿಂತ ಜಾಗದಲ್ಲಿ ನಾಗಬನವನ್ನು ನಿರ್ಮಿಸುವ ಪದ್ಧತಿ ಇಲ್ಲ. ಅದರಲ್ಲೂ ನಾಗಬ್ರಹ್ಮಸ್ಥಾನ ನಿರ್ಮಿಸುವ ಆಲೋಚನೆಯೇ ತಪ್ಪು. ಆದರೂ 21ನೆಯ ಶತಮಾನದಲ್ಲಿ ಒಂದೆರಡು ಕಡೆ ಬ್ರಹ್ಮಸ್ಥಾನಗಳು ನಿರ್ಮಾಣವಾಗಿವೆ. ಆದರೆ ಅದು ವಿವಾದಗಳಿಂದಾಗಿ ಆದುದು. ಆದರೂ ಇಲ್ಲಿಯೂ ಗೊಂದಲಕ್ಕೆ ಆ ಕುಟುಂಬದವರು ಒಳಗಾಗಿದ್ದಾರೆ.


ಆದಿ ಆಲಡೆ ಮತ್ತು ಮೂಲತಾನ ಬೇರೆ ಬೇರೆ ಎಂಬ ಅಭಿಪ್ರಾಯ ಕೂಡಾ ಕೆಲವರಲ್ಲಿ ಇದೆ. ಆದಿ ಆಲಡೆ ನಾಗಬಿರ್ಮೆರಿಗೆ. ಮೂಲತಾನ ನಾಗನಿಗೆ ಎಂಬ ವಿವರಣೆಯೂ ಅವರಲ್ಲಿದೆ. “ನಾಗನೆಡೆ ಪೋಯೆ ಮೂಲ ಕೇಂಡೆ, ಕುಮಾರನೆಡೆ ಪೋಯೆ ಆಲಡೆ ಕೇಂಡೆ” (ನಾಗನೆಡೆ ಹೋದ ಮೂಲ ಕೇಳಿದ, ಕುಮಾರನೆಡೆ ಹೋದ ಆಲಡೆ ಕೇಳಿದ) ಎಂಬ ಕುಮಾರನ ನುಡಿಯ ಪ್ರಭಾವ ಬೀರಿರಬೇಕು. ವಾಸ್ತವವಾಗಿ ಆದಿ ಆಲಡೆ ಮತ್ತು ಮೂಲತಾನದಲ್ಲಿ ವ್ಯತ್ಯಾಸ ಏನೂ ಇರಬಾರದು. ಅರ್ಥದ ದೃಷ್ಟಿಯಿಂದಲೂ ಎರಡೂ ಒಂದೇ. ಆದರೂ ಕೆಲವರಿಗೆ ಮೂಲತಾನ ಬೇರೆ ಆಲಡೆ ಬೇರೆ. ಬಿರ್ಮೆರ್ ಇದ್ದಲ್ಲಿ ಆದಿ ಆಲಡೆ ಎಂದೂ, ಬಿರ್ಮೆರ್ ಇಲ್ಲದೆ ಬರೇ ನಾಗಶಿಲ್ಪಗಳು ಇದ್ದಲ್ಲಿ ಮೂಲತಾನ ಎಂದೂ ‘ಮೂಲದ’ ಬನ ಎಂದೂ ನನಗೆ ಕೆಲವು ವಕ್ತøಗಳು ಹೇಳಿದರು.


ನಾನು 2006ರ ನಾಗರಪಂಚಮಿಯಂದು ಹಳೆಯಂಗಡಿ ಪರಿಸರದಲ್ಲಿ ಇರುವ ಬಂಗರ ಮೂಲತಾನ, ಸುವರ್ಣ ಮೂಲತಾನ, ಕದಿಕೆ ತಿಗಳಾಯ ಬ್ರಹ್ಮಸ್ಥಾನ, ಕದಿಕೆ ಸಾಲಿಯನ ಮೂಲಸ್ಥಾನ, ಪುತ್ರನ್ ಮೂಲಸ್ಥಾನ - ಈ ಎಲ್ಲಾ ಮೂಲತಾನಗಳಿಗೆ ಭೇಟಿ ನೀಡಿ ಜನರಲ್ಲಿ ಚರ್ಚಿಸಿದ್ದೇನೆ. ಈ ಮೂಲಸ್ಥಾನಗಳಲ್ಲಿ ಕದಿಕೆ ತಿಗಲಾಯ ಮತ್ತು ಬಂಗರ ಮೂಲತಾನ ಮೀನುಗಾರರದು. ಪುತ್ರನ್ ಮೀನುಗಾರರ, ಬಿಲ್ಲವರ ಮತ್ತು ಸಪಲಿಗರ ಮೂಲತಾನ ಒಂದೇ. ಇವರು ಮಾತ್ರವಲ್ಲದೆ ಶೆಟ್ಟಿಗಾರರೂ (ದೇವಾಂಗ), ಇಲ್ಲಿ ನಾಗನಿಗೆ ತನು ಎರೆಯುತ್ತಾರೆ.


ಮೂಲತಾನ ಮತ್ತು ಆದಿ ಆಲಡೆ ಎನ್ನುವುದು ಬೇರೆ ಬೇರೆ ಎಂಬ ಗೊಂದಲ ಕೆಲವರಲ್ಲಿ ಉಂಟಾಗಲು ಕಾರಣ ಇದೆ. ಆಲಡೆ ಮೂಲತಾನದ ಪರಂಪರೆಯ ಮನೆಯಿಂದ ವಲಸೆ ಹೋಗಿ ನೆಲೆಸಿದವರಿಗೆ ‘ಆಲಡೆ ಮೂಲತಾನ’ ಪರಂಪರೆಯ ಮನೆಯ ಬಳಿ ಇರುವುದೇ ಆಗಿರುತ್ತದೆ. ಆದರೆ ಹೊಸನೆಲೆಯ ನಾಗಬನ ‘ಜಾಗದ (ಸ್ಥಳದ)ಬನ’ ಆಗಿರುತ್ತದೆ. ಆಗ ಜಾಗದ ಬನಕ್ಕೂ ಉಪಾಸನೆ ಮಾಡಬೇಕಾಗುತ್ತದೆ. ಮತ್ತೆ ಕ್ರಮೇಣ ಅಲ್ಲಿಂದ ವಲಸೆ ಹೋಗುವ ಶಾಖೆ ಈ ಮನೆಯನ್ನು ‘ಮೂಲತಾನ’ ಎಂದು ಅದಕ್ಕಿಂತ ಪೂರ್ವದ ಪರಂಪರೆಯ ಆಲಡೆ ಮೂಲತಾನವನ್ನು ‘ಆಲಡೆ ಮನೆ’ಯೆಂದೂ ಕರೆಯುವುದನ್ನು ಕಾಣಬಹುದು.


ಅಪರೂಪಕ್ಕೆ ತಮ್ಮ ಮೂಲತಾನದ ಆದಿ ಆಲಡೆಯ ಆಡಳಿತ ವರ್ಗದವರಲ್ಲಿ ಭಿನ್ನಾಭಿಪ್ರಾಯ ಬಂದಾಗ ಮೂಲ ಆಲಡೆಯ ಮಣ್ಣನ್ನು ತೆಗೆದುಕೊಂಡು ಹೋಗಿ ತಾವು ನೆಲೆಸಿದಲ್ಲಿ ನಾಗಬನ ನಿರ್ಮಿಸಿ ನಾಗನನ್ನು ಪೂಜಿಸುವ ಉದಾಹರಣೆ ಇದೆ. ಅವರ ಪ್ರಕಾರ ಈ ಹೊಸ ತಾನವೂ ‘ಮೂಲತಾನ’. ಆದರೆ ಅವರು ಮೂಲತಃ ಎಲ್ಲಿಂದ ಮಣ್ಣು ತಂದಿದ್ದೇವೆ ಅದು ‘ಆದಿ ಆಲಡೆ ಮೂಲತಾನ’.
ಮೂಲಬನದ ಪ್ರತಿಕೃತಿ ನಿರ್ಮಿಸಿದವರಲ್ಲಿ ನನ್ನ ಗಮನಕ್ಕೆ ಬಂದವರು ಹೆಚ್ಚಾಗಿ ಮೊಗವೀರರು. ಹಳೆಯಂಗಡಿಯ ಕದಿಕೆಯಲ್ಲಿ ಇರುವ ಮೊಗವೀರ ಜಾತಿಯ ಸಾಲಿಯಾನ ಬಳಿಯವರ ಮೂಲತಾನ, ಕದಿಕೆಯಲ್ಲಿರುವ ತಿಗಲಾಯ ಮೂಲತಾನ. ಇವು ಉತ್ತರ ಭಾಗದಿಂದ ಇಲ್ಲಿಗೆ ಬಂದ ಮೂಲ ತಾನಗಳು. ಪ್ರಾರಂಭದಲ್ಲಿ ಇಲ್ಲಿ ನಾಗಶಿಲ್ಪ ಮಾತ್ರ ಇತ್ತು ಎನ್ನುತ್ತಾರೆ. ಮುಂದೆ ಕೆಲವು ದೈವಗಳು ಸೇರ್ಪಡೆಯಾದುವು. ಮತ್ತೆ ಆದ ಅಷ್ಟಮಂಗಳ ಪ್ರಶ್ನೆಯಲ್ಲಿ ಬಿರ್ಮೆರ್ ಗುಂಡವೂ ಬಂತು. ಸಾಲಿಯಾನ ಮೂಲತಾನದಲ್ಲಿ ಇದುವರೆಗೆÉ ಬಿರ್ಮೆರ ಗುಂಡ ಆಗಿಲ್ಲ. ಆದರೆ ಲೆಕ್ಕೆಸಿರಿ ಸೇರಿ ಇತರ ದೈವಗಳಿವೆ. ಪುತ್ರನ್ ಮೂಲತಾನದ (ಬ್ರಹ್ಮಸ್ಥಾನ) ಜಾಗ ಬ್ರಾಹ್ಮಣ ಪುರೋಹಿತರ ಆಸ್ತಿ. ಪುರೋಹಿತರೊಂದಿಗೆ ಆದ ಭಿನ್ನಾಭಿಪ್ರಾಯದಿಂದಾಗಿ ಕೆಲವರು ಇಲ್ಲಿಯ ಮಣ್ಣು ಕೊಂಡು ಹೋಗಿ ಬೇರೆ ಮೂಲತಾನ ಮಾಡಿದರು. ಆದರೆ ಅದು ಯಶಸ್ಸು ಆಗಲಿಲ್ಲ. ಪುತ್ರನ್ ಕುಟುಂಬದ ಇತರ ಸದಸ್ಯರು ಬ್ರಾಹ್ಮಣರ ಒಡೆತನದ ಮೂಲತಾನಗಳಿಗೆ ಹೋಗಿ ಹರಕೆ ಸಲ್ಲಿಸುತ್ತಿದ್ದಾರೆ.


ಅಷ್ಟಮಂಗಳ ಪ್ರಶ್ನೆ ಇಡುವುದು ತುಳುನಾಡಿನ ಪದ್ಧತಿ. (ಬ್ರಹ್ಮಸ್ಥಾನ ಕಟ್ಟಬೇಕೆಂಬ ಆಶಯ ಇರುವವರು ಅಷ್ಟಮಂಗಳ ಪ್ರಶ್ನೆ ಇಡುತ್ತಾರೆ. ಯಾವುದೇ ಮನೆಯ ಸುಪರ್ದಿಯಲ್ಲಿ ಇರುವ ನಾಗಬನ ಬ್ರಹ್ಮಸ್ಥಾನವಾದರೆ ಕುಟುಂಬದ ಪ್ರತಿಷ್ಠೆಯು ಹೆಚ್ಚುತ್ತದೆ.) ಪ್ರಶ್ನೆಯಲ್ಲಿ ಬ್ರಹ್ಮಸ್ಥಾನ ಕಟ್ಟಲು ಸಲಹೆ ಸಿಗುತ್ತದೆ. ಕೆಲವು ಬ್ರಹ್ಮಸ್ಥಾನಗಳು ಅರ್ಚಕ ಹಾಗೂ ಆಡಳಿತವರ್ಗಕ್ಕೆ ಆದಾಯ ತರುವ ಮೂಲವೂ ಆಗುತ್ತದೆ. ಸಾಂಸ್ಕøತಿಕವಾಗಿ ಹಿಂದುಳಿದ ವರ್ಗಗಳು ಮೇಲ್ವರ್ಗಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ತೋರಿಸಲು ನಾಗ ಬ್ರಹ್ಮಸ್ಥಾನಗಳು ನೆರವಾಗುತ್ತವೆ. ಹೀಗಾಗಿ, ‘ನಾಗ ಬನÀಗಳು’ ‘ನಾಗ ಬ್ರಹ್ಮಸ್ಥಾನ’ಗಳಾಗುತ್ತಿವೆ.


ಬಂಟ್ವಾಳ ತಾಲೂಕಿನ ಕುಂದರನ್ನ ವಂಶದ ಅನಂತಾಡಿ ನೇಲ್ಯವು ಮುಂದಿನ ಸಂತತಿಯ ಕಾಲದಲ್ಲಿ ವ್ಯಾಜ್ಯಕ್ಕೆ ಬಿತ್ತು. ನೇಲ್ಯ ತೊರೆದು ಅನಂತಾಡಿ ಬಾಳಿಕೆಗೆ ಬಂದ ಹಿರಿ ಪಾಲಿನವರು ಅನಂತಾಡಿಯಿಂದ ಬರುವಾಗ ತಮ್ಮ ಕುಲದೈವ ನಾಗಬಿರ್ಮೆರನ್ನು ಸಂಕೇತಿಸುತ್ತಿದ್ದ ಮಣ್ಣಿನ ಮೂರು ‘ಮುರ್ಲಿ’ (ಸಿರಿ ಕುಂಭ)ಯನ್ನು ಬರ್ಕೆಗೆ ತಂದು ಅದಕ್ಕೆ ಬೇರೆಯೇ ಗುಡಿ ಕಟ್ಟಿ ಗುಡಿಯೊಳಗೆ ‘ಮುರ್ಲಿ’ಯನ್ನು ಪ್ರತಿಷ್ಠಾಪಿಸಿ ಆರಾಧಿಸಿ ಕೊಂಡು ಬಂದಿದ್ದಾರೆ. ಕಾಲಕ್ರಮೇಣ ಮುರುಳಿ ಇದ್ದ ಮುಳಿಹುಲ್ಲಿನ ಗುಡಿಗೆ ತೆಂಗಿನಮರ ಉರುಳಿ, ಗುಡಿ ಬಿದ್ದು ಹೋಯಿತು. ‘ಮುರ್ಲಿ’ ಒಡೆಯಿತು. ಗುಡಿಯನ್ನು ಪುನಃರಚಿಸುವಾಗ ಹೆಂಚಿನ ಮಾಡು ಮಾಡಿದ್ದಾರೆ. ಮಣ್ಣಿನ ‘ಮುರ್ಲಿ’ಯ ಬದಲಿಗೆ ‘ಕಂಚು’ನಲ್ಲಿ ಮುರ್ಲಿ ರಚಿಸಿದ್ದಾರೆ. ಕಂಚಿನ ಮುರ್ಲಿಯಲ್ಲಿ ಸ್ತ್ರೀಯ ಉಬ್ಬು ಶಿಲ್ಪ ಇದೆ. ಈ ಮುರ್ಲಿ ಸಿರಿಗಳನ್ನು ಈ ಭಾಗದಲ್ಲಿ ತುಳುಭಾಷೆಯಲ್ಲಿ ‘ಮೂರ್ಲು ದೈವ’ ಎಂದು ಕರೆಯುತ್ತಾರೆ.


ಈ ಸಿರಿ ಕುಂಭಗಳನ್ನು ಮೂರ್ಲು/ಮುರುಳಿ/ಮುರಿ/ಕಡ್ಯ/ಕಂದೆಲ್/ಕುಂಭ/ಕಲಶ ಎಂದೆಲ್ಲ ಕರೆಯುತ್ತಾರೆ. ಮಣ್ಣಿನ ‘ಕಡ್ಯ’ಕ್ಕೆ ಬಳೆಯಂತೆ ಕಾಲಿರುತ್ತದೆ. ಉದ್ದ ಕತ್ತು ಇದೆ. ಅದರ ಮೇಲೆ ನಾಗನ ಉಬ್ಬು ಶಿಲ್ಪ ಇದೆ. ತುಳುನಾಡಿನ ಜನರು ಈ ರೀತಿ ಮಣ್ಣಿನ ಸಿರಿಗಿಂಡೆಯಲ್ಲಿ ನಾಗನ ಉಬ್ಬು ಶಿಲ್ಪ ಮಾಡಿ ಪೂಜಿಸುತ್ತಿದ್ದುದು ಹೆಚ್ಚಾಗಿ ಕಾಣಬರುತ್ತದೆ.


ಮೂರ್ಲು ದೈವಗಳಿಗೆ ಅನಂತಾಡಿ ಬಾಳಿಕೆಯ ಕುಂದರನ್ನ ವಂಶದ ಹಿರಿಯ ಪುರುಷ ಅರ್ಚನೆ ಕೈಂಕರ್ಯಗಳನ್ನು ನಡೆಸುತ್ತಾರೆ. ಇವರು ನೇಲ್ಯದಲ್ಲಿ ವಾಸಿಸುತ್ತಿದ್ದಾಗ ಒಂದು ತಲೆಮಾರಿನ ಅರ್ಚಕರಿಂದ ಏನೋ ಲೋಪವಾಗಿ ಮೂರು ಮೂರ್ಲು ದೈವಗಳು ಒಂದೊಂದಾಗಿ ಎದ್ದು ಹೋದುವಂತೆ. ಹಾಗೆ ಹೋದ ಮೂರು ದೈವಗಳೇ ಅನಂತಾಡಿ ಚಿತ್ತರಿಗೆಯಲ್ಲಿ ಈಗ ಇರುವ ದೈವಗಳು (ಶಿಲ್ಪಗಳು) ಎಂಬುದು ನಂಬಿಕೆ. ನೇಲ್ಯದ ಯಜಮಾನರು ತಮ್ಮ ಹಿರಿಯರಿಂದಾದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಸಿದಾಗ ಮೂರು ಮೂರ್ಲು ದೈವಗಳು ನೇಲ್ಯಕ್ಕೆ ಮರಳಿ ಬರಲು ಸಮ್ಮತಿಸಿದವಂತೆ.

ಈ ನಾಗಬ್ರಹ್ಮ ಮೂಲತಾನ ಮೂಲತಃ ‘ಮನ್ಸ’ ಎಂಬ ಪರಿಶಿಷ್ಟ ಜಾತಿಗೆ ಸೇರಿದ್ದು ಎಂದು ನಂಬಲಾಗಿದೆ. ಜೊತೆಗೆ ಕುಂದರನ್ನ ವಂಶದ ಅನಂತಾಡಿ ಮೂಲಕುಟುಂಬದ ಆದಿ ಮೂಲತಾನ ಆಲಡೆಯೂ ಇದೇ ಆಗಿದೆ. ನಾಗಬನಗಳ ಪರಿವರ್ತನೆ ಮೂಲತಾನಗಳು ನೆಲೆಯಾಗಿ ಪರಿವರ್ತನೆಗೊಳ್ಳುತ್ತಿರುವ ಈ ದಶಕದಲ್ಲಿ ಹಳೆಯ ಮೂಲತಾನಗಳ ಶಿಲ್ಪಗಳು ಸ್ಥಳಾಂತರಗೊಳ್ಳುತ್ತವೆ. ಹೀಗೆ ಸ್ಥಳಾಂತರಗೊಂಡಲ್ಲಿ ಗುಡಿಗಳು ಆಧುನಿಕ ಸ್ವರೂಪ ಪಡೆಯುತ್ತಿವೆ. ಕೆಲವು ಆಲಡೆಗಳ ಸ್ಥಳಗಳು ಮಾರಾಟವಾಗಿವೆ. ಸಿರಿ ಆಲಡೆಗಳ ಬ್ರಹ್ಮಸ್ಥಾನಗಳ ಆಡಳಿತ ಇರುವುದು ಬಂಟರು ಮತ್ತು ಜೈನರ ಮನೆಗಳಲ್ಲಿ. ಜೈನರು ಮತ್ತೆ ಬಂಟರಾದುದರಿಂದ, ಅಥವಾ ಬಂಟರ ಒಂದು ಶಾಖೆ ಮಾತ್ರ ಜೈನರಾದುದರಿಂದ ನಿಸ್ಸಂತತಿಯಾದ ಕೆಲವು ಜೈನರು ತಮ್ಮ ಆಡಳಿತಕ್ಕೆ ಒಳಪಟ್ಟ ಆರಾಧನಾ ಸ್ಥಳಗಳನ್ನು ಆಸ್ತಿಯೊಂದಿಗೆ ಮಾರಾಟ ಮಾಡಿದ್ದು ಹೆಚ್ಚಾಗಿ ಬಂಟರಿಗೆ. ಹಾಗೆ ಖರೀದಿಸಿದ ಜಾಗದಲ್ಲಿ ಇದ್ದ ಬಿರ್ಮೆರ್ ತಾನಗಳನ್ನು ಖರೀದಿಸಿದವರು ಆಲಡೆಯನ್ನು ಪರಂಪರೆಯಲ್ಲಿ ಇದ್ದಂತೆ ನಡೆಸಿಕೊಂಡು ಹೋಗುತ್ತಾರೆ. ಆದರೆ ಅದು ಅವರ ಮೂಲತಾನ ಆಗುವುದಿಲ್ಲ. ಅವರ ‘ಮೂಲ ತಾನ’ ತಲೆ ತಲೆಮಾರುಗಳಿಂದ ಬಂದಿರುವುದೇ ಆಗಿರುತ್ತದೆ.


ಉದಾಹರಣೆಗೆ ಕಾರ್ಕಳ ಕೊಟ್ರೊಟ್ಟು ಮನೆಯ ಒಂದು ಶಾಖೆ ಚಿತ್ರಬೈಲಿನಲ್ಲಿ ಜೈನರಿಂದ ಭೂಮಿ ಖರೀದಿಸಿದಾಗ ಕಾಡಿನಲ್ಲಿ ಇದ್ದ ಬಿರ್ಮೆರ್ ತಾನವನ್ನು ಆಧುನಿಕ ಬ್ರಹ್ಮಸ್ಥಾನವನ್ನಾಗಿಸಿದರು. ಅವರ ಮೂಲತಾನ ಕೊಟ್ರೊಟ್ಟು. ಈಗಲೂ ಇವರು ಸಂತಾನ ಅಭಿವೃದ್ಧಿ ಮತ್ತು ಇತರ ಕಾರ್ಯಗಳಿಗೆ ತಮ್ಮ ಮೂಲ ಬಿರ್ಮೆರ್ ತಾನಕ್ಕೆ ಹೋಗುತ್ತಾರೆ. ನಡ್ವಾಲ್ ಲೋಕನಾಥೇಶ್ವರ ಸಿರಿ ಆಲಡೆಯಲ್ಲಿ ಸಿರಿ ದರ್ಶನಕ್ಕೆ ನಿಲ್ಲುವವರು ಕೂಡಾ ಹೆಚ್ಚಿನವರು ತಮ್ಮ ಆಲಡೆ ಮೂಲ ತಾನ ಕವತಾರು, ಪಾಂಗಾಳ ಎನ್ನುತ್ತಾರೆ.
ಪಾಂಗಾಳ ಸಿರಿ ಆಲಡೆಯ ಕ್ಷೇತ್ರದ ಆಸ್ತಿ ಗೌಡ ಸಾರಸ್ವತ ಬ್ರಾಹ್ಮಣರಿಗೆ ಸೇರಿದಾಗ ಅದರ ಮೂಲತಾನದ ಬಂಟರು ಕೋರ್ಟಿನಲ್ಲಿ ವ್ಯಾಜ್ಯ ನಡೆಸಿದರು. ಆಲಡೆಯ ಜಾಗ ಗೌಡ ಸಾರಸ್ವತರಿಗೆ ಸೇರಿದುದರಿಂದ ಕೋರ್ಟು ಬಂಟರ ಮನೆತನದವರಿಗೆ ಆಲಡೆಯ ‘ಪೂಜಾ ಭಂಡಾರ’ವನ್ನು ಆದಿ ಆಲಡೆಯಿಂದ ಪಡೆದು ಹೊಸ ಆದಿ ಆಲಡೆ ನಿರ್ಮಿಸಲು ಆದೇಶಿಸಿತು. ಆದರೂ ಗೌಡ ಸಾರಸ್ವತರ ಆಡಳಿತದಲ್ಲಿಯ ಆಲಡೆ ತಾನದಲ್ಲಿ ದೂರದ ಊರಿನ ಕೆಲವರು ಉಪಾಸನೆಯನ್ನು ಮುಂದುವರಿಸಿದ್ದಾರೆ. ಈಗ ಪಾಂಗಾಳದಲ್ಲಿ ಎರಡು ಆಲಡೆಗಳಿವೆ.


ಆಲಡೆ ಭೂಮಿ ಯಾರ ಹೆಸರಲ್ಲಿ ಇದೆ ಎಂಬುದನ್ನು ಪರಂಪರೆ, ನಂಬಿಕೆ, ಗಮನಿಸುವುದಿಲ್ಲ. ಉದಾಹರಣೆಗೆ ಉಡುಪಿ ತಾಲೂಕಿನ ಮುಗೆರ್ಲು ಎಂಬ ಪರಿಶಿಷ್ಟ ವರ್ಗ ಆರಾಧಿಸುವ ಮೂಲತಾನ ‘ಮೂಲ್ದೊಟ್ಟು’ ‘ನಾಗ ಬೆರ್ಮರೆ’ ಕಾಡು ಬ್ರಾಹ್ಮಣರ ಆಸ್ತಿ. ಆಲಡೆ ಮೂಲತಾನ ಮುಗೆರ್ಲು ಜನಾಂಗದ್ದು. ಆಲಡೆ ಮನೆ ಬಂಟರದ್ದು. ಮುಲ್ಕಿ ಬಳಿಯ ಕವತಾರು ಮೂಲ ಬ್ರಹ್ಮಸ್ಥಾನದ ಕಾಡು ನಾಯಕ ಜನಾಂಗದ ಆಸ್ತಿ. ಆದರೆ ಹಲವು ಜಾತಿಗಳ ವಂಶದವರಿಗೆ ಇದು ಆದಿ ಮೂಲತಾನ. ಕಾರ್ಕಳ ತಾಲೂಕಿನ ಮುನಿಯಾಲದ ಮೂಲ ಬ್ರಹ್ಮಸ್ಥಾನ ರಕ್ಷಿತ ಅರಣ್ಯ ಪ್ರದೇಶ. ಹೀಗೆ ಅನೇಕ ಸ್ಥಳಗಳಿವೆ. ಅದರಲ್ಲೂ ಪರಿಶಿಷ್ಟರ ಮೂಲತಾನಗಳ ಭೂಮಿಯ ಒಡೆಯರು ಹೆಚ್ಚಾಗಿ ಬಂಟರು ಮತ್ತು ಜೈನರು. ಮೂಲ ಆಲಡೆ ಮೂಲತಾನÀದಿಂದ ಮಣ್ಣು ತಂದು ಹೊಸ ನೆಲೆಯಲ್ಲಿ ಮೂಲ ತಾನ ಅಥವಾ ಬ್ರಹ್ಮಸ್ಥಾನ ಸ್ಥಾಪಿಸಿದರೂ ಇಲ್ಲಿಯ ಅನೇಕ ಕುಟುಂಬಗಳು ಆದಿ ಮೂಲದ ಆಲಡೆಗೆ ಹರಕೆ ಹಾಕುವುದನ್ನು ತಪ್ಪಿಸುವುದಿಲ್ಲ.


ಮೂಲತಾನದ ಬಗ್ಗೆ ಎದುರಾಗುವ ಗೊಂದಲವನ್ನು ಅರ್ಥಮಾಡಿಕೊಳ್ಳಲು ಉದಾಹರಣೆಯಾಗಿ ನನ್ನ ಮನೆ ಎಳತ್ತೂರು ಗುತ್ತನ್ನು ತೆಗೆದುಕೊಳ್ಳೋಣ. ಎಳತ್ತೂರು ಗುತ್ತು ಸಾಲಿಯನ್ನ ಬಳಿಯ/ಕುಟುಂಬದವರ ಮನೆ. ಎಳತ್ತೂರು ಗುತ್ತಿನ ಆದಿ ಆಲಡೆ ಮೂಲತಾನ ಕಬತಾರ್. ಗುತ್ತಿನಲ್ಲಿ ಎರಡು ನಾಗಬನಗಳಿವೆ. ಒಂದು ಆದಿ ಬನ. ಎರಡನೆಯದು ಹರಕೆಯ ಬನ. ಆದಿ ಬನ ನಿರಂತರ ನೀರು ಹರಿಯುವ ತೋಡಿನ ಬಳಿ ಇದೆ. ಹರಕೆಯ ಬನ ಮನೆಯ ಹಿಂಭಾಗದಲ್ಲಿ ಇದೆ. ಸುಮಾರು 2000 ಇಸವಿಯವರೆಗೆ ಇಲ್ಲಿ ನಾಗರಪಂಚಮಿ ಗಮನ ಸೆಳೆಯುವ ಆಚರಣೆ ಆಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಎಳತ್ತೂರು ಗುತ್ತಿನ ನಾಗಬನ ‘ಮೂಲತಾನ’ ಎಂದು ಸುಮಾರು ಕುಟುಂಬ ಸದಸ್ಯರು ದೂರದಿಂದ ನಾಗರಪಂಚಮಿಗೆ ತನು ಎರೆಯಲು ಬರುತ್ತಿದ್ದಾರೆ. ದೂರದಿಂದ ಬರುವ ಜನರಿಗೆ ಅನುಕೂಲವಾಗಲೆಂದು ಸುಮಾರು 200 ಮಂದಿಗೆ ಊಟದ ವ್ಯವಸ್ಥೆ ಇಲ್ಲಿ ಆಗುತ್ತ್ತದೆ. ನಾವು ಗುತ್ತಿನಲ್ಲಿ ಬೇರು ಉಳಿಸಿಕೊಂಡವರು ಇಲ್ಲಿಯ ಆದಿ ಬನವನ್ನು ಮೂಲತಾನ ಎಂದು ಹೇಳುವುದಿಲ್ಲ. ಇಲ್ಲಿ ಆಲಡೆ ಮೂಲತಾನದಲ್ಲಿ ಇರಬೇಕಾದ ಪಂಚದೈವಗಳಾಗಲೀ, ಆಚರಣೆಗಳಾಗಲೀ ಇಲ್ಲ. ಇದೂ ಆದಿಯ ‘ಜಾಗದ ಬನ’ ಇರಬೇಕು. ಈಗ ಇಲ್ಲಿ ಇರುವ ಕುಟುಂಬ ಕೂಡಾ ಇಲ್ಲಿಗೆ ಬೇರೆ ಕಡೆಯಿಂದ ಬಂದವರು ಎಂಬ ಹೇಳಿಕೆ ಇದೆ. ಹೀಗೆ ಒಂದು ಮನೆಯಿಂದ ದೂರ ಹೋದವರಿಗೆ ಹಳೆ ಮನೆಯ ಬನ ಮೂಲತಾನ ಬನವಾಗಬಹುದು.


ಕಂಡಿಗೆ ಬೀಡು, ದೇಂದೊಟ್ಟು ಆಲಡೆಯಂತಹ ಪ್ರಸಿದ್ಧ ಆಲಡೆಗಳಲ್ಲಿ ಸಿರಿ ದರ್ಶನಕ್ಕೆ ನಿಂತ ಕೆಲವು ಮಹಿಳೆಯರು ಆಲಡೆ ಜಾತ್ರೆಯ ಮರುದಿನ ಆ ಪ್ರದೇಶದ ನಾಗಬನದಲ್ಲಿ ತನು ಎರೆಯದೆ ಬೇರೆ ಪ್ರದೇಶದ ತಮ್ಮ ಮೂಲ ನಾಗಬನಗಳಿಗೆ ಹೋಗಿ ತನು ಎರೆಯುವುದು ಇದೆ. ಅನೇಕ ಮೂಲತಾನ ಆದಿ ಆಲಡೆಯ ಬ್ರಹ್ಮಸ್ಥಾನಗಳಿಗೆ ಟಿಪ್ಪು ಸರಕಾರದಿಂದ ಮತ್ತು ಬ್ರಿಟಿಷ್ ಸರಕಾರದಿಂದ ‘ತಸ್ತೀಕು’ ಬರುತ್ತಿತ್ತು. ಕೆಲವರು ಈಗಲೂ ತಸ್ತೀಕು ಪಡೆಯುತ್ತಿದ್ದಾರೆ. ತಸ್ತೀಕು ಈ ಬನಗಳ ಐತಿಹಾಸಿಕತೆಯನ್ನು ತಿಳಿಯಲು ಸಾಧ್ಯವಾಗುತ್ತದೆ.


ಆಲದ ಬೆರ್ಮೆರ್


ಆಲಡೆಯಲ್ಲಿ ಇರುವ ಬೆರ್ಮರ್ ಆಲದ ಬೆರ್ಮೆರ್. ಸಾಂತೂರಿನ ಮೂಲತಾನ ಆಲಡೆಯನ್ನು ‘ಆಲದ ಬೆರ್ಮೆರ್’ ಎಂದು ಕರೆಯುವುದು ವಾಡಿಕೆ. “ಕ್ರಿ.ಶ.1403ರ ಶಾಸನವು ‘ಬ್ರಹ್ಮರಾಲ’ ಎಂದು ಉಲ್ಲೇಖಿಸುತ್ತದೆ.30 ಶಾಸನಗಳಲ್ಲಿ ಬೆರ್ಮೆ ಅಥವಾ ಬೆರ್ಮೆರ್ ಪದ ಬಳಕೆಯಾಗಿಲ್ಲ. ಬ್ರಹ್ಮ ಎಂದು ಬಳಕೆಯಾಗಿದೆ. ಬೆರ್ಮೆರೆ ಎನ್ನುವುದು ದ್ರಾವಿಡ ಪದ. ಸಂಸ್ಕøತದ ‘ಬ್ರಹ್ಮ’ ಪದದ ಅಪಭ್ರಂಶ ಅಲ್ಲ. ‘ಬೆ/ಬಿರ್ಮೆರೆ ಆಲ’ ಶಿಷ್ಟಭಾಷೆಯಲ್ಲಿ ಬ್ರಹ್ಮರಾಲ ಆಗಿದೆ. ಸಾಂತೂರು ಪರಾಡಿ ಆಲದ ಬಿರ್ಮೆರ ತಾನದಲ್ಲಿ 12 ವರ್ಷಕ್ಕೊಮ್ಮೆ ಸುತ್ತಲಿನ ಗ್ರಾಮಾಡಳಿತದ ಮನೆಗಳಿಂದ ಚಾವಡಿದೈವಗಳ ಭಂಡಾರ ಬಂದು ನೇಮ-ಕೋಲಗಳ ಆಚರಣೆ ನಡೆಯುವ ಕ್ಷೇತ್ರವೇ ‘ಆಲದ ಬಿರ್ಮೆರೆ ತಾನ’.31 ಇಲ್ಲಿ ‘ಆಲ ಮಜಲು’ ಗದ್ದೆ ಇದೆ. ‘ಆಲದ ಗುಂಡಿ’ ಇದೆ.
ಆದಿ ಆಲಡೆಯ ದೈವ ಸಂಕೀರ್ಣವನ್ನು ತುಳುವರ ಕುಲದೈವಗಳ ಸಂಕೀರ್ಣ. ಅವುಗಳಲ್ಲಿ ಪ್ರಧಾನವಾದುದು ನಾಗಬೆರ್ಮೆರ್. ಕಾಲಾಂತರದಲ್ಲಿ ನಾಗ ಬೇರೆ, ಬೆರ್ಮೆರ್ ಬೇರೆ ಎಂಬಂತೆ ರೂಢಿ ಬೆಳೆಯಿತು. ಈಗಲೂ ಪರಿಶಿಷ್ಟ ವರ್ಗದವರು ಆರಾಧಿಸುವ ಸ್ಥಳಗಳಲ್ಲಿ ಬೆರ್ಮೆರ್ ಎಂಬುದು ನಾಗನೇ ವಿನಃ ಬೇರೆ ದೈವವಲ್ಲ. 1001 ಹೆಡೆ ಇರುವ ಸಂಕಪಾಲ ಆತ. ಆತನ ವರ್ಣನೆ ಮುಂದೆ ಬರಲಿದೆ. ನಾಗ ಬನಗಳ ಪೌರೋಹಿತ್ಯವನ್ನು ಬ್ರಾಹ್ಮಣರು ವಹಿಸಿಕೊಂಡ ಪರಿಣಾಮವಾಗಿ ‘ನಾಗ’ ವೈದಿಕ ದೇವರ ಸಾಲಿಗೆ ಸೇರಿದ. ನಾಗನಿಂದ ಬೇರೆಯಾಗಿ ‘ಬೆರ್ಮೆರ್’ ಭೂತ ಆದ. ಇದಕ್ಕೆ ಕಾರಣ ಸ್ಪಷ್ಟವಾಗಿದೆ. ತುಳು ಪಾಡ್ದನಗಳು ಬಿರ್ಮೆರೆ ದೈವಕ್ಕೆ ರೌದ್ರತೆಯನ್ನು ಕಲ್ಪಿಸಿವೆ. ಜನಪದರ ನಾಗಾರಾಧನೆಯನ್ನು ವೈದಿಕ, ಬೌದ್ಧ, ಜೈನ ಧರ್ಮಗಳು ತಮ್ಮ ಧರ್ಮದೊಳಗೆ ಸ್ವೀಕರಿಸಿದ ಪರಿಣಾಮವಾಗಿ ಭಾರತದ ಎಲ್ಲೆಡೆ ಸಂಸ್ಕøತ ಮಂತ್ರಗಳ ಮೂಲಕ ಆಗಮ ಸಂಪ್ರದಾಯದಲ್ಲಿ ನಾಗನನ್ನು ಆರಾಧಿಸುವ ಪದ್ಧತಿ ಆರಂಭವಾಗಿತ್ತು. ತುಳುನಾಡಿಗೆ ಬ್ರಾಹ್ಮಣ ಅರ್ಚಕರು ಬಂದಾಗ ಸ್ಥಳೀಯ ಸಂಪ್ರದಾಯದ ನಾಗಬೆರ್ಮರ ಕೋಲಗಳು ಹಾಗೂ ಆಚರಣೆಗಳು ಅವರಿಂದ ತುಚ್ಛೀಕರಣಕ್ಕೆ ಒಳಗಾಗಿರಬೇಕು. ಆದರೂ ನಾಗಬೆರ್ಮರ ಬಗ್ಗೆ ಜನರಿಗೆ ಇದ್ದ ನಂಬಿಕೆಯನ್ನು ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬೆರ್ಮರನ್ನು ನಾಗನಿಂದ ಪ್ರತ್ಯೇಕಿಸಿ ಅದನ್ನು ‘ಭೂತ ಶಕ್ತಿ’ ಎಂದು ವ್ಯಾಖ್ಯಾನಿಸಿರುವ ಸಾಧ್ಯತೆ ಹೆಚ್ಚು.


ಶಾಸನಗಳಲ್ಲಿ ಮೂಲತಾನ


ತುಳುವರ ಕುಲದೈವ ಆದ ಬಿರ್ಮೆರ ಮೂಲತಾನಗಳ ಬಗ್ಗೆ ಶಾಸನಗಳಲ್ಲಿ ಉಲ್ಲೇಖಗಳು ಬಹಳ ಕಡಿಮೆ ಇದೆ. ಆಳುಪ ರಾಣಿ ಬಲ್ಲಮಹಾದೇವಿಯ ಕ್ರಿ.ಶ.1255ರ ಶಾಸನದಲ್ಲಿ ‘.... ಮೂಲಸ್ಥಾನ ಮಾರ್ಕಂಡೇಶ್ವರ ದೇವರ ಕಲ್ಲು . . . ’ ಎಂಬ ಉಲ್ಲೇಖ ಇದೆ.


ಕದ್ರಿಯ ಶಾಸನ “ಮಂಗಳೂರು ರಾಜ್ಯಕ್ಕೆ ಆದಿಸ್ಥಾನವಾದ ಕದಿರೆಯ ಸ್ಥಾನಿಕರು” ಎನ್ನುತ್ತದೆ. ಕದ್ರಿಯಲ್ಲಿ ಪಂಚದೈವಗಳ ನೆಲೆ ಇದೆ, ಪೂಕರೆ ಕಂಬುಲ ಇದೆ.  ಹೀಗೆ ನೀರಿನ ನೀರಿನ ಝರಿಗಳ ಕ್ಷೇತ್ರಗಳೇ ನಾಗಕ್ಷೇತ್ರವಾಗಿ, ನಾಗಬಿರ್ಮೆರ ಕ್ಷೇತ್ರವಾಗಿ ಉಪಾಸನೆಗೊಳ್ಳುತ್ತಿರುವ ತುಳುವರ ಮೂಲತಾನ ಆದಿ ಆಲಡೆಯ ಕುಲ ಬೆರ್ಮೆರ್ ಮತ್ತು ಪರಿವಾರ ದೈವಗಳ ಪರಿಕಲ್ಪನೆ, ಪರಂಪರೆ ಮತ್ತು ಪರಿವರ್ತನೆಯ ಆಯಾಮಗಳನ್ನು ಮುಂದಿನ ಅಧ್ಯಾಯಗಳಲ್ಲಿ ನೋಡೋಣ.


- ಡಾ ಇಂದಿರಾ ಹೆಗ್ಗಡೆ.


ಕನ್ನಡದ ಸಂಶೋಧನಾ ಕಕ್ಷೇತ್ರದಲ್ಲಿ ನ ಒಂದು ಪ್ರಮುಖ ಹೆಸರು ಡಾ ಇಂದಿರಾ ಹೆಗ್ಗಡೆಯವರದ್ದು. ತುಳುನಾಡಿನ ಕುರಿತು ಅವರ ಮೂಲಾನ್ವೇಷಣೆ ಹಾಗೂ ಮಾಹಿತಿ ಸಂಗ್ರಹ ಅಗಾಧವಾದದ್ದು. ಸೃಜನಶೀಲ ಹಾಗೂ ಸಂಶೋಧನಾ ಎರಡೂ ಕ್ಷೇತ್ರದ ಬರವಣಿಗೆಯಲ್ಲಿ ಕೈ ಆಡಿಸಿರುವ ಅವರದ್ದು ಮೂಲತಃ ಅನ್ವೇಷಕ ಮನಸ್ಸು. ಅದು ಅವರನ್ನ ವೈವಾಹಿಕ ಜೀವನಕ್ಕೆ ಅಡಿಯಿಟ್ಟ ಬಹಳಷ್ಟು ವರ್ಷಗಳ ನಂತರ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆಯುವತ್ತ ಮುನ್ನಡೆಸಿ ಇದೀಗ ಸಂಶೋಧನೆಗಾಗಿ ಡಿ'ಲಿಟ್ ಪಡೆವವರೆಗೆ ತಂದು ಮುಟ್ಟಿಸಿದೆ. ಅವರ ಈವರೆಗಿನ ಅನೇಕ ಸಂಶೋಧನಾ ಪ್ರಬಂಧಗಳಂತೆಯೆ "ತುಳುವರ ಮೂಲತಾನ, ಆದಿ ಅಲಡೆ" ಕೂಡ ಅಪೂರ್ವವಾದ ಮಾಹಿತಿಗಳ ಕಣಜವಾಗಿದ್ದು, ಅದರ ಸಂಗ್ರಹಕ್ಕಾಗಿ ಅವರು ನಡೆಸಿದ ಕ್ಷೇತ್ರ ಕಾರ್ಯ ಓದುಗರಲ್ಲಿ ಬೆರಗು ಹುಟ್ಟಿಸುತ್ತದೆ.

ತುಳುನಾಡು ಅಂದರೆ ಉತ್ತರದ ಕಾಸರಕೋಡದಿಂದ ದಕ್ಷಿಣದ ಕಾಸರಗೋಡಿನ ತುದಿಯ ತನಕ ವ್ಯಾಪಿಸಿರುವ ಕರ್ನಾಟಕದ ಕರಾವಳಿ ಭಾಗದ ಭೂಭಾಗ. ಅಲ್ಲಿನ ಸಾಂಸ್ಕೃತಿಕ ಬದುಕು ಹಾಗೂ ಆಚರಣೆ ಕರ್ನಾಟಕದ ಮುಖ ಭೂಭಾಗದಿಂದ ವಿಭಿನ್ನವಾಗಿದ್ದರೆ ನೆರೆಯ ಕೇರಳಕ್ಕೆ ಅತ್ಯಂತ ನಿಕಟ. ಋಷಿ ಮೂಲದ ಗೋತ್ರಗಳನ್ನ ಹೊಂದಿರುವ ಬ್ರಾಹ್ಮಣರನ್ನು ಹೊರತು ಪಡಿಸಿ ಅಲ್ಲಿನ ಉಳಿದೆಲ್ಲ ಬಹುಸಂಖ್ಯಾತ ಶೂದ್ರ ವರ್ಗ ಪ್ರಕೃತಿ ಮೂಲದ ನೆಲ್ಲ, ಜಲ, ಸಸ್ಯಗಳನ್ನ ತಮ್ಮ ಗೋತ್ರಗಳನ್ನಾಗಿ ಗುರುತಿಸಿಕೊಳ್ಳುತ್ತಾರೆ. ಪ್ರತಿ ಗೋತ್ರವೂ ತನ್ನದೆ ಆದ ಪ್ರಾಕೃತಿಕ ವೈಶಿಷ್ಟ್ಯವನ್ನು ಹೊಂದಿದ್ದು ಮಾತೃ ಮೂಲದ ಆಅಚರಣೆಗಳಿಗೆ ಪ್ರಾಮುಖ್ಯತೆ ಕೊಡುವಂತಿರುತ್ತವೆ. ಪ್ರತಿ ಗೋತ್ರ ಅಥವಾ ಬಳಿಗೂ ತಮ್ಮದೆ ಆದ ಒಂದು ಆದಿನೆಲೆ ಅಥವಾ ಮೂಲಸ್ಥಾನ ಅಂತ ಇರುತ್ತದೆ. ಅಲ್ಲಿನ ನಾಗಬರ್ಮೆರ್ ( ವೈದಿಕರ ಚತುರ್ಮುಖ ಬ್ರಹ್ಮ ಅಲ್ಲ.) ಅವರ ಕುಲದೇವರಾಗಿರುತ್ತಾರೆ. ಪ್ರತಿಯೊಬ್ಬ ತುಳುವನಿಗೂ ಹೀಗೊಂದು ಆದಿ ನೆಲೆ ಹಾಗೂ ಕುಲದೈವ ಇದ್ದೇ ಇರುತ್ತದೆ. ಅದರ ಬಗ್ಗೆ ಆಸಕ್ತಿಕರವಾಗಿ ಈ ಪುಸ್ತಕದಲ್ಲಿ ಮಾಹಿತಿಯನ್ನ ನೀಡಲಾಗಿದೆ.

ಮೋಹಿನಿಯ ಸೇಡು, ಪುರುಷರೇ ನಿಮಗೆ ನೂರು ನಮನಗಳು, ಬದಿ ಇವು ಅವರ ಸೃಜನಶೀಲ ಸಾಹಿತ್ಯದ ಕಥಾ ಸಂಗ್ರಹಗಳು. ಅಮಾಯಕಿ, ಒಡಲುರಿ, ಮಂಥನ ಇವು ಅವರ ಲೇಖನಿಯಿಂದ ಮೂಡಿ ಬಂದ ಕಾದಂಬರಿಗಳು. ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ತುಳುವೆರೆ ಅಟಿಲ ಅರಗಣೆ (ತುಳು), ಚೇಳಾರು ಗುತ್ತು ಮಂಜನ್ನಾಯ್ಗೆರ್ - ಸಾಂಸ್ಕøತಿಕ ಶೋಧ, ತುಳುವರ ಮೂಲತಾನ ಆದಿ ಆಲಡೆ : ಪರಂಪರೆ ಮತ್ತು ಪರಿವರ್ತನೆ ಇವು ಅವರ ಸಂಶೋಧನಾ ಪ್ರಬಂಧಗಳು ಇದರಲ್ಲಿ ಕೊನೆಯ ಕೃತಿ ಅವರ ಡಿ'ಲಿಟ್ ಸಂಶೋಧನಾ ಪ್ರಬಂಧವೂ ಹೌದು.

ಸದ್ಯ ಅವರ ಬರವಣಿಗೆ ಪ್ರವಾಸ ಕಥನ, ಸಿರಿಬಾರಿ ಲೋಕದಲ್ಲಿ ಸಿರಿಗಳು, ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ (ಇಂಗ್ಲಿಷ್ ಆವೃತ್ತಿ), ಜಾನಪದ : ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಸಂಧಿ ಪಾಡ್ದನಗಳ ರಚನೆಯತ್ತ ಸಾಗಿದೆ. ಇದಷ್ಟೇ ಅಲ್ಲದೆ 'ಕಾವ್ಯಗಳ ಪುಟದಿಂದ ನೀನೆದ್ದು ನಿಲ್ಲು' ಎನ್ನುವ ಕವನ ಸಂಕಲನವನ್ನೂ ಅವರು ಹೊರತಂದಿದ್ದಾರೆ. ಒಟ್ಟಿನಲ್ಲಿ ಕನ್ನಡದ ಬರಹ ಪ್ರಪಂಚಕ್ಕೆ ಡಾ ಇಂದಿರಾ ಹೆಗ್ಗಡೆಯವರು ಸಲ್ಲಿಸಿರುವ ಸೇವೆ ಅನನ್ಯ. ಅದಕ್ಕಾಗಿ ಅವರಿಗೆ ಕೇರಳ ಸಾಹಿತ್ಯ ಪ್ರಶಸ್ತಿಯ ಸಹಿತ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನ ಹುಡುಕಿಕೊಂಡು ಬಂದಿವೆ. ಸದ್ಯ ಸುರತ್ಕಲ್ಲಿನಲ್ಲಿ ಪತಿ ನಿವೃತ್ತ ಸೈನಿಕ ಸೀತಾರಾಮ ಹೆಗ್ಗಡೆಯವರೊಂದಿಗೆ ಅವರ ಬಾಳ್ವೆಯ ಯಾನ ಸಾಗುತ್ತಿದೆ. ಇತಿಹಾಸದತ್ತ ಕುತೂಹಲದ ಕಣ್ಣು ಬೀರುವ ಆಸಕ್ತರಿಗೆ "ತುಳುವರ ಮೂಲತಾನ, ಆದಿ ಅಲಡೆ" ಇದೊಂದು ಒಳ್ಳೆಯ ಒಳಗಿಂಡಿ.

No comments: