18 October 2014

ನೀರ ಮೇಲೆ ಅವಳ ಹೆಜ್ಜೆ....





( ಭಾಗ - ೩.)

ಶಿವಮೊಗ್ಗದಲ್ಲವತ್ತು ವಿಪರೀತ ಸೆಕೆ. ಜನವರಿ ತಿಂಗಳ ಕೊನೆಯ ವಾರ ಆರಂಭವಾಗಲಿಕ್ಕೆ ಇನ್ನೊಂದು ಇರುಳು ಮಾತ್ರ ಬಾಕಿ ಉಳಿದಿತ್ತು. ರಾತ್ರಿ ಅದೆಷ್ಟು ಚಳಿ ಕೊರೆಯುತ್ತದೋ ಅದನ್ನ ಮೀರಿಸುವಂತೆ ಹಗಲಲ್ಲಿ ಸೂರ್ಯ ಕ್ರೂರವಾಗಿ ಸುಡುತ್ತಿದ್ದ. ಕಳೆದ ಶತಮಾನದ ಕಟ್ಟ ಕಡೆಯ ವರ್ಷ ಆರಂಭವಾಗಿ ಕೇವಲ ಇಪ್ಪತ್ತಮೂರು ದಿನ ಮಾತ್ರ ಕಳೆದಿತ್ತು. ಇವನಿಗೆ ಹೊಸ ಅವಕಾಶದ ಬಾಗಿಲನ್ನ ತಟ್ಟುವ ಗಟ್ಟಿ ನಿರ್ಧಾರ ತೆಗೆದು ಕೊಳ್ಳಲಿಕ್ಕೆ ಒದಗಿ ಬಂದದ್ದು ಅವೆ ಇಪ್ಪತ್ತಮೂರು ದಿನಗಳಲ್ಲಿ ಮನದೊಳಗೆ ಎದ್ದು ಕಾಡಿಸಿದ ಅವನದೆ ಆಂತರಿಕ ತುಮುಲಗಳು. ಊರು ಬಿಟ್ಟು ತೊಲಗುವುದು ಅಂತ ಆತ ಕಷ್ಟದಲ್ಲಿ ನಿರ್ಧರಿಸಿದ್ದ ಆದರೆ ಎಲ್ಲಿಗೆ? ಅನ್ನುವುದು ಮಾತ್ರ ಅವನಿಗೆ ಇನ್ನೂ ಸ್ಪಷ್ಟವಿರಲಿಲ್ಲ. ಚಿಕ್ಕಂದಿನಲ್ಲಿ ಊರು ಬಿಟ್ಟು ಸರ್ಕಸ್ಸಿನವರ ಜೊತೆ ಓಡಿ ಹೋದವರ, ಮನೆ ಬಿಟ್ಟು ಜಾತ್ರೆಗೆ ಬಂದು ಟೆಂಟು ಹಾಕಿರುತ್ತಿದ್ದ ನಾಟಕದ ಕಂಪನಿಯವರ ಜೊತೆ ಪರಾರಿಯಾಗಿದ್ದವರ, ಹೆತ್ತವರ ಮೇಲೆ ಮುನಿಸಿಕೊಂಡು ಕಲ್ಲು ಲಾರಿ ಹತ್ತಿ ಮಹಾನಗರಕ್ಕೆ ಹೋಗಿ ಅಲ್ಲಿ ಹೋಟೆಲಿನ ಲೋಟ ತೊಳೆದು ಓದಿ ಮುಂದೆ ಬಂದು ಈಗ ಊರಿಗೆ ಮರಳಿ ಮೆರೆಯುತ್ತಿರುವವರ ರಂಗು ರಂಗಿನ ಕಥೆಗಳನ್ನ ಹಿರಿಯರ ಬಾಯಿಯಲ್ಲಿ ಕೇಳಿ ಅವ ಬಾಯಿ ಬಾಯಿ ಬಿಟ್ಟಿದ್ದ.

ಈ ಮಾತುಗಳನ್ನೆಲ್ಲ ಆಲಿಸುತ್ತಿದ್ದಾಗ ಅವನೆದೆಯಲ್ಲಿ ರೂಪುಗೊಳ್ಳುತ್ತಿದ್ದ ತರ್ಕದ ಪ್ರಕಾರ ಮಹಾನಗರಗಳಲ್ಲಿ ಸುಖ ಸಮೃದ್ಧಿ ತುಂಬಿ ತುಳುಕುತ್ತಿದೆ. ಇಲ್ಲಿನವರ್ಯಾರಾದರೂ ಹೀಗೆ ಹೇಳದೆ ಕೇಳದೆ ಓಡಿ ಬಂದು ತಮ್ಮ ಊರನ್ನ ಉದ್ಧಾರ ಮಾಡಲಿ(?) ಅಂತಾನೆ ಅಲ್ಲಿನವರು ಹಾರ ತುರಾಯಿ ಹಿಡಿದು ಹಾಗೆ ಅಲ್ಲಿ ಬಂದು ಇಳಿಯುವ ಪುಣ್ಯಾತ್ಮರನ್ನ ಸದಾ ಕಾದುಕೊಂಡೆ ಇರುತ್ತಾರೆ! ಆದರೆ ಬುದ್ದಿ ಸ್ವಲ್ಪ ಸ್ವಲ್ಪವೆ ಬಲಿಯುತ್ತಾ ಹೋದ ಹಾಗೆ ಈ ತರ್ಕಕ್ಕೆ ಅಷ್ಟೇನೂ ಬುಡ ಭದ್ರವಿಲ್ಲ ಎನ್ನುವುದು ನಿಧಾನವಾಗಿ ಆತನ ಅರಿವಿಗೆ ಬರತೊಡಗಿತು.

ಅವನಿದ್ದ ಊರಿಗೆ, ಊರಿನ ಮಂದಿಗೆ ಅದೇಕೋ ಬೆಂಗಳೂರಿಗಿಂತ ಬೊಂಬಾಯಿಯ ಸೆಳೆತವೆ ಹೆಚ್ಚು. ವಯಸ್ಸಿಗೆ ಬಂದು ಮೀಸೆ ಚಿಗುರಿದ ಕುದಿ ರಕ್ತದ ಅವನೂರಿನ ತರುಣರು ಮಾತೆತ್ತಿದರೆ ಸಾಕು ಬೊಂಬಾಯಿಗೆ ಓಡಿ ಹೋಗುತ್ತಿದ್ದರು! ಅವರು ವಾಸ್ತವದಲ್ಲಿ ಅದ್ಯಾವುದೋ ಗೂಡ್ಸ್ ಲಾರಿಯಲ್ಲಿ ಡ್ರೈವರಣ್ಣಂದಿರನ್ನ ಕಾಡಿ ಬೇಡಿ ಪರದಾಡಿಕೊಂಡು ಬರಿಗಾಲಿನಲ್ಲಿಯೇ ಅಲ್ಲಿಗೆ ಹೋಗಿ ಸೇರಿ ಹೈರಾಣಾಗಿರುತ್ತಿದ್ದರೂ ಸಹ, ಅದ್ಯಾಕೋ ಊರಿನ ಜನ ಮಾತ್ರ ಮುಲಾಜಿಲ್ಲದೆ ಅಂತವರನ್ನ 'ಓಡಿ' ಹೋದವರು ಅಂತಲೆ ಕರೆಯುತ್ತಿದ್ದದ್ದು ಏಕೆ? ಅಂತ ಅವನಿಗೆ ಕೊನೆಗೂ ಅರ್ಥವಾಗಲೆ ಇಲ್ಲ!



ಹೀಗೆ ಊರು ಬಿಟ್ಟು ಓಡಿ ಹೋದ ಹೈದರು ಅಲ್ಲಿ ಅದೇನನ್ನು ಮಾಡುತ್ತಿದ್ದರೋ, ಅದ್ಯಾವ ಗಣಿಯನ್ನ ಆಳಕ್ಕೆ ಅಗೆದು ಸಿರಿಯನ್ನ ಮೇಲೆ ಹೊತ್ತು ತರುತ್ತಿದ್ದರೋ ಏನೋ? ವರ್ಷಕ್ಕೊ ಎರಡು ವರ್ಷಕ್ಕೋ ಒಂದು ಸಾರಿ ಜಗಮಗಿಸುವ ಅಂಗಿ ಹಾಕಿ ಕೊಂಡು, ಮೈ ತುಂಬ ಸೆಂಟು ಸುರಿದು ಕೊಂಡು, ಮೂಗಿನ ಮೇಲೊಂದು ಕೂಲಿಂಗ್ ಗ್ಲಾಸ್ ಏರಿಸಿಕೊಂಡು, ಕೈಗೊಂದು ಬಂಗಾರದ ಬಣ್ಣದ ವಾಚು ಕಟ್ಟಿಕೊಂಡು ಅದೂವರೆಗೆ ನಿರರ್ಗಳವಾಗಿ ಮಾತನಾಡುತ್ತಿದ್ದ ತಮ್ಮ ಮಾತೃಭಾಷೆಯನ್ನ ಸರಾಗವಾಗಿ ಮಾತನಾಡಲಿಕ್ಕೂ ಪರದಾಡುತ್ತಾ(?), ಸಾಲದ್ದಕ್ಕೆ ಈಗ ಮಧ್ಯೆ ಮಧ್ಯೆ ಧಾರಾಳ ಹಿಂದಿ ಪದಗಳನ್ನ ಅದರೊಂದಿಗೆ ಬೆರೆಸಿ ಎದುರು ಸಿಕ್ಕವರನ್ನ ವಿಚಾರಿಸಿಕೊಳ್ಳುತ್ತಾ ಎಲ್ಲರನ್ನೂ ದಂಗು ಬಡಿಸುತ್ತಿದ್ದರು.


ಹೀಗೆ ಕಂಡವರ ಹೊಟ್ಟೆಯನ್ನ ಉರಿಸುವಂತೆ ಎರಡು ಮೂರು ವಾರ ಅಂಗೈ ಅಗಲದ ಊರಿನಲ್ಲಿ ಮೆರೆದಾಡಿ, ಮುರಿದು ಬೀಳುವಷ್ಟು ಮುದಿಯಾಗಿರುತ್ತಿದ್ದ ತಮ್ಮ ಮನೆಯನ್ನ ಚೂರು ಪಾರು ರಿಪೇರಿ ಮಾಡಿಸಿ, ಅದಕ್ಕಿಷ್ಟು ಸುಣ್ಣ ಬಣ್ಣ ಹೊಡೆಸಿ ಹೆತ್ತವರ ಕೈಗೆ ಒಂದಷ್ಟು ನೋಟಿನ ಪುಡಿಕೆ ತುರುಕಿ ಮತ್ತೆ ಬೊಂಬಾಯಿಗೆ ಪರಾರಿ ಆಗುತ್ತಿದ್ದವರು ಮತ್ತೆ ತಮ್ಮ ಡ್ಯಾಗರ್ ಕಟ್ ಮೀಸೆಯ ಅಲಂಕಾರದ ಮುಖಾರವಿಂದವನ್ನ ತೋರಿಸುತ್ತಾ ಭುಜ ಹಾರಿಸುತ್ತಾ ಮಾತನಾಡುವ ತಮ್ಮ 'ಬೊಂಬಾಯಿ ಸ್ಟೈಲ್'ನಿಂದ ಇಲ್ಲಿನ ಹೆಣ್ಣು ಹೆತ್ತವರ ಕಣ್ಮಣಿಗಳಾಗುವಷ್ಟರಲ್ಲಿ ಇನ್ನೆರಡು ವರ್ಷ ನೋಡು ನೋಡುತ್ತಲೆ ಜಾರಿ ಹೋಗಿರುತ್ತಿತ್ತು!


ಅದರೆ ಅವರ ಯಶಸ್ಸಿನ ಏಣಿ ಇವ ಆಗೆಲ್ಲಾ ಅಂದು ಕೊಂಡಷ್ಟು ನೇರವಾಗೇನೂ ಇರುತ್ತಿರಲಿಲ್ಲ ಅನ್ನುವುದು ಸ್ವತಃ ಇವನ ಅರಿವಿಗೆ ಬರುವುದಕ್ಕೆ ಹೆಚ್ಚು ಕಾಲವೇನೂ ಬೇಕಾಗಿರಲಿಲ್ಲ. ಹಾಗೆ ಹೋಗಿ ಅಲ್ಲಿ ಕಾಸು ಮಾಡುವ ಕಸುಬನ್ನ ಹುಡುಕಿಕೊಳ್ಳುತ್ತಿದ್ದ ಕೆಲವರು ಬಾಳಿನಲ್ಲಿ ಮುಂಬಡ್ತಿ ಎನ್ನುವಂತೆ ಬೊಂಬಾಯಿಯಿಂದ ಏಕಾಏಕಿ ದುಬಾಯಿಗೆ ಹಾರುತ್ತಿದ್ದರು. ಅವರ ಈ ಉನ್ನತಿಯ ವಿಷಯ ಅಲ್ಲಿಂದ ವಿದೇಶಿ ಮೊಹರು ಹೊತ್ತ ದೊಡ್ಡ ಲಕೋಟೆಯೊಂದರಲ್ಲಿ ಅಡಗಿರುತ್ತಿದ್ದ ಅವರ ಕೈ ಬರಹದ ಕಾಗದ ಓದಿ ತಿಳಿದುಕೊಂಡ ಅವನ ಊರು ಮನೆಯವರು ಆಶ್ಚರ್ಯ ಚಕಿತರಾಗಿ, ಅವನ ಮನೆಯವರ ಮೇಲೆ ಅದೇನೆ ಹೊಟ್ಟೆಕಿಚ್ಚು ಹುಟ್ಟಿ ಅಸೂಯೆ ಮೂಗಿನ ಮಟ್ಟಕ್ಕೆ ಬಂದು ಮುಳುಗಿಸುತ್ತಿದ್ದರೂ ಸಹ ಅದನ್ನೊಂದನ್ನೂ ಹೊರಗೆ ಮಾತ್ರ ಕಿಂಚಿತ್ತೂ ತೋರಿಸಿಕೊಳ್ಳದೆ ದೇಶಾವರಿ ನಗೆ ನಗುತ್ತಾ ಅವರ ಭಾಗ್ಯವನ್ನ ಕೇಳುವವರಿಗೆ ಬೇಸರ ಬರುವಷ್ಟು ಕೊಂಡಾಡುತ್ತಿದ್ದರು!


ಆದರೆ ಎಲ್ಲರ ಕಥೆಯೂ ಹೀಗೆನೆ ಸುಖಾಂತ್ಯವಾಗುತ್ತದೆ ಅನ್ನುವ ಯಾವ ಭರವಸೆಯೂ ಇರಲಿಲ್ಲ. ಬೊಂಬಾಯಿ ಮಾರ್ಗವಾಗಿ ದುಬಾಯಿ ಸೇರಿದ ಅನೇಕರು ಐದಾರು ವರ್ಷ ಅಲ್ಲಿಯೆ ಗಾಣದೆತ್ತಿನಂತೆ ದುಡಿದು, ತಕ್ಕಮಟ್ಟಿಗೆ ದುಡ್ಡು ದುಗ್ಗಾಣಿ ಮಾಡಿಕೊಂಡು ಅಲ್ಲಿಂದ ಮರಳಿ ಬಂದವರೆ ಒಂದು ಮಜಭೂತಾದ ಮನೆ ಕಟ್ಟಿಸಿ '....ನಿಲಯ' '....ಮಂಜಿಲ್' ಇಲ್ಲವೆ '....ವಿಲ್ಲಾ' ಎನ್ನುವ ಊರಿನ ಗಮಾರರಿಗೆ ಚೂರೂ ಅರ್ಥವಾಗದ ಚಿತ್ರ ವಿಚಿತ್ರ ಹೆಸರನ್ನ ಅವುಗಳಿಗೆ ಇಟ್ಟು, ಬರಿ ನಡುಗೆಯಲ್ಲಿ ಕ್ರಮಿಸಿದರೂ ಹತ್ತು ನಿಮಿಷದಲ್ಲಿ ಅಳೆದು ಮುಗಿಸಬಹುದಾದ ತಮ್ಮ ಕುಗ್ರಾಮದಲ್ಲೂ ಆ ಕಟ್ಟಿಸಿ ಮೆರೆಸುವ ಮನೆಯ ಮುಂದೆ ನಿಲ್ಲಿಸಿ ಡೌಲು ಹೊಡೆಯಲು ತಮ್ಮದೆ ಆದ ಒಂದು ಪುಟ್ಟ ಸೆಕೆಂಡ್ ಹ್ಯಾಂಡ್ ಕಾರನ್ನ ಖರೀದಿಸಿಟ್ಟು, ಊರೊಳಗೆ ಅದೂ ಇದೂ ವ್ಯವಹಾರಗಳಲ್ಲಿ ಅಲ್ಲಿಂದ ಗಳಿಸಿ ತಂದದ್ದನ್ನ ಸುರಿದು ಮಿಕ್ಕುಳಿದ ಬಾಳಿನ ನಾಳೆಗಳನ್ನ ತಕ್ಕ ಮಟ್ಟಿಗಾದರೂ ಸುಖ ಸಮೃದ್ಧಿಯಲ್ಲಿಯೆ ಕಳೆಯುತ್ತಿದ್ದರು.


ಆದರೆ ಇನ್ನೂ ಕೆಲವರು ಅವರಷ್ಟು ಪಡೆದು ಬಂದಿರುತ್ತಿರಲಿಲ್ಲ. ಬೊಂಬಾಯಿಯಲ್ಲಿ ದುಡಿದು ದಣಿದು ನಾಲ್ಕು ಕಾಸನ್ನ ಉಳಿಸಿ ಕೂಡಿಟ್ಟು ಕೊಳ್ಳಲಾಗದಂತೆ ಅಗ್ಗದ ಚಿಲ್ಲರೆ ಶೋಕಿಗಳಿಗೆ ಬಿದ್ದು ಹಾಳಾಗಿರುತ್ತಿದ್ದ ಇವರು. ಮತ್ತೆ ಹೋದ ಹಾಗೆಯೆ ಮರಳಿ ಮಣ್ಣಿಗೆ ಬರಿಗೈಯಾಗಿಯೆ ಬಂದು ಸೇರುತ್ತಿದ್ದರು. ಹೋಗುವಾಗ ಓಡಿ ಹೋಗಿದ್ದವರು ಮರಳಿ ಬರುವಾಗ ಮಾತ್ರ ಅಸಹಾಯಕರಂತೆ ಕಾಲೆಳೆದುಕೊಂಡು ನಡೆದು ಕೊಂಡೆ ಬಂದಿರುತ್ತಿದ್ದರು!.

ಇಂತವರಲ್ಲೂ ಎರಡು ವಿಧದ ಮಂದಿ ಇರುವುದನ್ನ ಅವನು ಬಾಲ್ಯದುದ್ದ ಕಂಡಿದ್ದ. ಮೊದಲನೆ ವರ್ಗದವರು ಅಲ್ಲಿಗೆ ತಮ್ಮ ಪ್ರಯತ್ನವನ್ನ ಕೊನೆಗೂ ಬಿಟ್ಟು ಕೈ ಚೆಲ್ಲಿ ಬರುವಾಗ ಕೊಂಡು ತಂದಿದ್ದ ಪುಡಿಗಾಸು ಕರಗುವವರೆಗೆ ಸಿಗರೇಟನ್ನೆ ಸೇದುತ್ತಾ, ವಿಲಾಯತಿ ಮದ್ಯವನ್ನೆ ಗುಟುಕರಿಸುತ್ತಾ ಊರಿನ ಕಿಂಚಿತ್ ಕೆಲಸಕ್ಕೂ ಮೈ ಬಗ್ಗದೆ ಸೋಮಾರಿಗಳಾಗಿ ಓಡಾಡಿ ಕೊಂಡಿರುತ್ತಿದ್ದವರಾಗಿರುತ್ತಿದ್ದರು. ಅವರ ಪಾಲಿಗೆ ಬೊಂಬಾಯಿಯಲ್ಲಿದ್ದ ತಾವು ಚಿಲ್ಲರೆ ಪಲ್ಲರೆ ಕೆಲಸಗಳನ್ನ ಮಾಡುವುದೆಂದರೆ ಪರಮ ಅವಮಾನ.


ಆದರೆ ಕೊನೆ ಕೊನೆಗೆ ತೂತು ಕಿಸೆಯಲ್ಲಿದ್ದ ಕೊನೆಯ ದಮ್ಮಡಿಯೂ ಖಾಲಿಯಾಗಿ. ಕೈ ಬರಿದಾದ ನಂತರ ಅಂತವರನ್ನ ಅಡ್ಡ ಲುಂಗಿ ಉಟ್ಟು ಮೂರು ಮಾರ್ಕಿನ ಮೋಟು ಬೀಡಿಯನ್ನೆ ಬರಗೆಟ್ಟವರಂತೆ ಅಡಿಗಡಿಗೆ ಸೇಯುತ್ತಾ, ಕತ್ತಲಾದರೆ ಸಾಕು ಸಿಕ್ಕ ಕಂಟ್ರಿ ಸಾರಾಯಿ ಪಾಕೇಟಿನಲ್ಲಿಯೆ ಸುಖ ಕಾಣುತ್ತಾ, ಬಸ್'ಸ್ಟ್ಯಾಂಡಿನಲ್ಲಿ ಪೋಲಿ ತಿರುಗುತ್ತಾ, ತಮ್ಮ ಬೊಂಬಾಯಿ ಬಡಾಯಿ ಹೊಡೆಯುತ್ತಾ ಕಾಲ ಹಾಕುತ್ತಿದ್ದದ್ದನ್ನ ಕಾಣಬಹುದಾಗಿತ್ತು. ಊರಿನಲ್ಲಿ ಮೈ ಬಗ್ಗಿಸಿ ದುಡಿಯದೆ ಕೂಳಿಗೆ ಮಾತ್ರ ದಂಡವಾದ ಅಂತವರ ಬಗ್ಗೆ ಯಾರೊಬ್ಬರಿಗೂ ಒಂಚೂರೂ ಆಸಕ್ತಿ ಇರುತ್ತಿರಲಿಲ್ಲ. ಬೆನ್ನ ಹಿಂದಿನಿಂದ ಅವರನ್ನ ಗೇಲಿ ಮಾಡುತ್ತಾ, ಅವರ ಬೊಂಬಾಯಿ ಬಡಾಯಿಯನ್ನ ಲೇವಡಿ ಮಾಡಿ ಕಿರಿಯರಿಗೆ 'ಯಾರಂತೆ ಆಗ ಬಾರದು' ಅನ್ನುವುದಕ್ಕೆ ಓಡಾಡುವ ಉದಾಹರಣೆಗಳಾದ ಅವರನ್ನೆ ತೋರುತ್ತಾ ಇಡಿ ಊರು ಅದು ಹೇಗೋ ಅಂತವರನ್ನ ಸಹಿಸಿಕೊಂಡಿರುತ್ತಿತ್ತು.


ಅದರೆ ಎರಡನೆ ವರ್ಗದವರದ್ದು ಸ್ವಲ್ಪ ವಿಚಿತ್ರ ಕೇಸು. ಬೊಂಬಾಯಿಯಲ್ಲಿ ಒಮ್ಮೆ ಫೇಲಾಗಿದ್ದರೇನು ಮಹಾ? ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಪ್ಲಿಮೆಂಟರಿ ಕಟ್ಟುವ 'ಮರಳಿ ಯತ್ನವ ಮಾಡು' ತರಹದ ಛಲ ಹೊತ್ತ ತ್ರಿವಿಕ್ರಮನ ಗೋತ್ರದವರಿವರು. ಅಲ್ಲಿ ದುಡಿದು ಕಳೆದ ಹಣದ ದುಪ್ಪಟ್ಟನ್ನ ಮುಂದೆ ಬೆಂಗಳೂರಿನಲ್ಲಿ ಸಂಪಾದಿಸಿ ತೋರಿಸುತ್ತೇವೆ ಎಂದು ಮನೆಯವರ ಮುಂದೆ ಬೂಸಿ ಹೊಡೆದು ಶತಾಯಗತಾಯ ಅವರನ್ನ ನಂಬಿಸಿ. ಅಮ್ಮ-ಅಕ್ಕ-ತಂಗಿ-ಹೆಂಡಿರ ಮೈಮೇಲೆ ಕಷ್ಟದಲ್ಲಿ ಉಳಿದಿದ್ದ ಚೂರು ಪಾರು ಚಿನ್ನವನ್ನ ಮಾರವಾಡಿಯ ತಿಜೋರಿಯಲ್ಲಿ ಬಡ್ಡಿ ಚಕ್ರಬಡ್ದಿಗಳ ಸುಳಿಗೆ ಸಿಕ್ಕು ಮುಂದೆಂದೂ ಅವು ತಿರುಗಿ ಬಾರದಂತೆ ಅಡ ಇರಿಸಿ, ಅದರಲ್ಲಿ ಎತ್ತಿದ ಎಂದೆಂದಿಗೂ ಹಿಂದಿರುಗಿಸಲಾಗದ ಸಾಲವನ್ನ ಬಂಡವಾಳವಾಗಿರಿಸಿಕೊಂಡು ಮತ್ತೆ ಬೆಂಗಳೂರಿನಲ್ಲಿಯೋ, ಇಲ್ಲವೆ ಇನ್ನೊಂದು ಊರಿನಲ್ಲಿಯೋ ಪುನಃ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದವರು. ಇಂತವರು ಮುಂದೆ ಅಲ್ಲಿಯೂ ಬರ್ಕತ್ತಾಗದೆ ಸರಿಯಾಗಿ ಕೈ ಸುಟ್ಟುಕೊಂಡು ಬೇರೆ ಇನ್ನೇನೂ ದಿಕ್ಕು ತೋಚದೆ ಮತ್ತೆ ಮನೆಯವನ್ನೆ ದೋಚುವ ದೂರಾಲೋಚನೆಯಿಂದ ಮರಳಿ ಊರಿಗೆ ವಕ್ಕರಿಸಿ ಮೇಲಿನ ವರ್ಗದ ತಮ್ಮ ಹಳೆಯರ ಗೆಳೆಯರ ಕೂಟವನ್ನ ಸೇರಿಕೊಳ್ಳುತ್ತಿದ್ದರು.


ಇವನ ದುರಾದೃಷ್ಟಕ್ಕೆ ಇವನ ಅಪ್ಪ ಈ ಕಡೆಯ ಸಾಲಿನ ವ್ಯಕ್ತಿಗಳಲ್ಲೊಬ್ಬನಾಗಿದ್ದ. ನೆಟ್ಟಗೆ ಬೇಸಾಯ ಮಾಡಿಕೊಂಡಿದ್ದರೆ, ಯೋಜಿಸಿ ಬೆಳೆಯನ್ನ ಬಿತ್ತುತ್ತಿದ್ದರೆ ಮನೆಯಲ್ಲಿಯೆ ಸುಖ ಸಮೃದ್ಧಿ ಕಾಣಬಹುದಾದಷ್ಟು ಜಮೀನು ಪಿತ್ರಾರ್ಜಿತವಾಗಿ ತನಗೆ ಬಂದಿದ್ದರೂ ಸಹ ಅದನ್ನೆ ಭೂ ಬ್ಯಾಂಕಿಗೆ ಅಡ ಹಾಕಿ. ಬಂದ ಹಣದಲ್ಲಿ ಬೊಂಬಾಯಿಗೆ ಹೋಗಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಭೂಪನಾತ. ಪಡೆದ ಬ್ಯಾಂಕಿನ ಸಾಲ ಮರಳಿಸುವ ನಿಯತ್ತು ಚೂರೂ ಇಲ್ಲದ ಕಾರಣಕ್ಕೆ ಮೇಲಿಂದ ಮೇಲೆ ನೋಟೀಸು ಕೊಟ್ಟು ಹೈರಾಣಾದ ಬ್ಯಾಂಕು ಈಗ ಒತ್ತೆ ಇಟ್ಟ ಕೃಷಿ ಭೂಮಿಯ ಜಪ್ತಿನ ವಿನಃ ಇನ್ಯಾವುದೆ ಮರು ವಸೂಲಾತಿಗೆ ಅನ್ಯ ಮಾರ್ಗವಿಲ್ಲ ಅನ್ನುವ ದೈನೇಸಿ ಸ್ಥಿತಿಗೆ ಬಂದು ಮುಟ್ಟಿತ್ತು. ಇದೀಗ ಬೊಂಬಾಯಿಯಲ್ಲಿ ಪಾಪರ್ ಆಗಿ ಬೆಂಗಳೂರಿನ ಹಾದಿ ಹಿಡಿದು ಅಲ್ಲೂ ಬರಿಗೈ ಆಗಿ ತನ್ನ ಕಟ್ಟಿಕೊಂಡವಳನ್ನ ಹಾಗೂ ಮಗನನ್ನ ಬಿಟ್ಟು ಹೋಗಿದ್ದ ಹೆಂಡತಿಯ ತವರು ಮನೆಯಲ್ಲಿಯೆ ಬಂಡು ನಾಚಿಕೆ ಬಿಟ್ಟು ಝಾಂಡಾ ಊರಿ ಅಲ್ಲಿಯೆ ಶಾಶ್ವತವಾಗಿ ಭಂಡತನದಿಂದ ನೆಲೆಸಿದ್ದನಾತ.


ಆದರೆ ಇವನ ಯವ್ವನ ಚಿಗುರುವ ಕಾಲಕ್ಕೆ ಊರವರ ಮನಸ್ಥಿತಿಯಲ್ಲಿ ತುಸು ಬದಲಾವಣೆಯಾಗಿತ್ತು. ಬೊಂಬಾಯಿಯ ತಳುಕಿಗಿಂತ ಬೆಂಗಳೂರಿನ ಬಳುಕು ಹೆಚ್ಚು ಆಪ್ತ ಅಂತಂದುಕೊಳ್ಳುವ ಹೊಸ ಪೀಳಿಗೆ ಕಣ್ಣುಬಿಟ್ಟಿತ್ತು ಹಾಗೂ ಇವನೂ ಅಂತವರಲ್ಲೊಬ್ಬನಾಗಿದ್ದ. ಹಾಗಂತ ಈ ಎಲ್ಲಾ ಕಿರಿಕಿರಿಯನ್ನ ಇನ್ನು ಸಹಿಸಲಾರೆ ಅನ್ನುವ ಹಂತದಲ್ಲಿ ಊರು ಬಿಡುವ ನಿರ್ಧಾರಕ್ಕೆ ಬಂದಿದ್ದ ಅವ ಏನೂ ಅಸಲಲ್ಲ. ಐವತ್ತು ರೂಪಾಯಿ ಕಿಸೆಯಲ್ಲಿದ್ದುದ್ದರಿಂದ ಊರು ಬಿಟ್ಟವ ಬೆಂಗಳೂರಿನ ದಿಕ್ಕಿಗೆ ಹೊರಟಿದ್ದ. ಒಂದುವೇಳೆ ಐವತ್ತರ ಜಾಗದಲ್ಲಿ ನೂರಿದ್ದಿದ್ದರೆ ಬಹುಷಃ ಬೊಂಬಾಯಿಯ ದಾರಿ ಹಿಡಿಯುತ್ತಿದ್ದ ಸಾಧ್ಯತೆಗಳೂ ಇಲ್ಲದಿರಲಿಲ್ಲ!.


ಅದರೆ ನಾಳಿನ ಭವ್ಯ ಭವಿಷ್ಯ, ಮುಂದುವರೆಸಬೇಕಾದ ಓದು, ಗಳಿಸಿಯೇ ತೀರಬೇಕಾದ ವ್ಯಕ್ತಿತ್ವದ ಹೊಸ ಛಾಪು ಹಾಗೂ ಇವೆಲ್ಲವನ್ನೂ ಮೀರಿದ ಇನ್ನೊಂದು ಆಕರ್ಷಣೆ ಅವನನ್ನ ಬೆಂಗಳೂರಿನತ್ತ ಸೂಜಿಗಲ್ಲಿನಂತೆ ಸೆಳೆದಿತ್ತು. ಹೌದು, ಇವನ ಚಿತ್ತ ದೋಚಿದ್ದವಳು ಅಲ್ಲಿದ್ದಳು. ಇವನ ಪ್ರಕಾರ ಇವನ ಬರುವಿಕೆಗಂತಲೆ ಅಶೋಕವನದ ಸೀತೆಯಂತೆ ಕಾದಿದ್ದಳು!

( ಮುಂದಿದೆ.)

No comments: