18 October 2014

ಭೋಪರಾಕು ಹಾಕುವ ಬರದಲ್ಲಿ ಮೆದುಳನ್ನ ಅಡವಿಟ್ಟವರ ಪ್ರಲಾಪಗಳೂ, ನಿಜವಾದ ಆರ್ಥಿಕ ಎಡವಟ್ಟಿನ ಆಲಾಪಗಳೂ.......







( ಹಿಂದಿನ ಲೇಖನಕ್ಕೆ ರಾಘವೇಂದ್ರ, ಗೋಪಿನಾಥ್ ಹಾಗೂ ಪ್ರಕಾಶ್ ಎತ್ತಿದ್ದ ಪ್ರಶ್ನೆಗಳಿಗೆ ನನ್ನ ಗ್ರಹಿಕೆಯಲ್ಲಿ ಬರೆದ ಮಾರುತ್ತರ.)

ಮೊದಲಿಗೆ ವಿರಾಮದಲ್ಲಿ ಉತ್ತರಿಸುತ್ತಿರೋದರಿಂದ ಆಗಿರುವ ತಡಕ್ಕಾಗಿ ಕ್ಷಮೆ ಕೇಳುತ್ತೇನೆ.

ರಾಘವೇಂದ್ರ ಪ್ರಕಾರ ಸರ್ವ ವಿಧದಿಂದಲೂ ಅಮೇರಿಕಾ ಸಂಪನ್ನ ರಾಷ್ಟ್ರ ಹಾಗೂ ಶ್ರೀಮಂತ ನೆಲ. ಆದರೆ ಅವರ ಭೋಪರಕಿನ ಆಲಾಪದ ಆಳದಲ್ಲಿ ಅಡಗಿರುವ ಮಾಹಿತಿಯ ಕೊರತೆಯನ್ನ ಕ್ಷಮಿಸೋಣ. ಅಮೇರಿಕ ಇಂದು ಅವರಂದಂತೆ ಶ್ರೀಮಂತ ನಾಡು ನಿಜ ಆದರೆ ಅದು ಕೇವಲ ಹಣ ಹಾಗೂ ತೋಳ್ಬಲದ ವಿಷಯದಲ್ಲಿ ಮಾತ್ರ. ಉಳಿದಂತೆ ಅವರೆ ಪ್ರಸ್ತಾಪಿಸಿರುವ ತಂತ್ರಜ್ಞಾನ, ಬೌದ್ಧಿಕ ಮಾಹಿತಿಯಲ್ಲಿ ಭಾರತದ ಸನಿಹಕ್ಕೂ ಅವರು ಸುಳಿಯಲಾರರು ಅನ್ನುವುದು ಅವರ ಮಾಹಿತಿಗೆ. ತಂತ್ರಜ್ಞಾನದ ಉನ್ನತ ಪರಿಕರಗಳ ಮಿತಿಮೀರಿದ ಉಪಯೋಗ ಮಾಡುತ್ತಿದ್ದಾರೆ ಅಂದಕ್ಷಣ ಅವರು ಪರಮ ಬುದ್ಧಿವಂತರು ಅಂತೇನಲ್ಲ. ಅದರೆ ಅಂತಹ ಪರಿಕರ, ಅವುಗಳಿಗೆ ರೂಪಿಸಲಾಗುವ ತಂತ್ರ ಕೌಶಲ್ಯದ ಅನ್ವೇಷಣೆಗಳ ಹಾಗೂ ನಿರ್ವಹಣೆಯಲ್ಲಿ ಏಷಿಯಾ ಮೂಲದ, ಅದರಲ್ಲಿಯೂ ಭಾರತೀಯ ಸಂಜಾತರ ಪಾತ್ರ ಹಿರಿದು. ಅದರಲ್ಲಿ ಮೂಲ ಅಮೇರಿಕನ್ನರ ಪಾತ್ರ ನಗಣ್ಯ ಅನ್ನುವಷ್ಟು ಕಿರಿದು ಅನ್ನುವ ಸಾಮಾನ್ಯ ಜ್ಞಾನ ಇದ್ದಿದ್ದರೆ ಬಹುಷಃ ಅವರು ಈ ಬಗ್ಗೆ ಪ್ರಶ್ನೆ ಎತ್ತಿ ನಗೆಪಾಟಲಿಗೆ ಈಡಾಗುತ್ತಿರಲಿಲ್ಲ. ಆ ಬಗ್ಗೆ ಅವರಿಗೆ ಸಂದೇಹಗಳಿದ್ದಲ್ಲಿ ಉದಾಹರಣೆಗೆ ಕೆಲವೆ ಕೆಲವು ಇಂಟೆಲ್, ನಾಸಾ, ಆಪಲ್ ಹಾಗೂ ಮೈಕ್ರೋಸಾಫ್ಟ್'ಗಳಂತಹ ಸಂಸ್ಥೆಗಳ ಮೆದುಳುಗಳಾಗಿ ದುಡಿಯುತ್ತಿರುವ ಒಟ್ಟಾರೆ ಸಿಬ್ಬಂದಿಗಳ ಮೂಲ ದೇಶವನ್ನ ಪತ್ತೆ ಮಾಡಿದರೆ ಸಾಕು. ಅವರ ಭ್ರಮೆಯ ಪೊರೆ ಕಳಚಬಹುದು.

ಇನ್ನು ಅವರ ಬೌದ್ಧಿಕ ಮಾಹಿತಿಗೆ ಹೋಲಿಸಿದಾಗ ಭಾರತೀಯ ಮೆದುಳಿನ ಕಾಲು ಭಾಗಕ್ಕೂ ಅಮೇರಿಕನ್ ಮೆದುಳು ಸರಿಗಟ್ಟಲಾಗದು ಎನ್ನುವುದು ಅವರ ಮಾಹಿತಿಗೆ. ಸಮಕಾಲೀನ ವಿಷಯಗಳಾದ ಎರಡೂ ನಾಡಿಗೆ ಸಂಬಂಧಿಸಿದ ಚರಿತ್ರೆ, ಕ್ರೀಡೆ, ಸಾಮಾನ್ಯ ಜ್ಞಾನ, ರಾಜಕೀಯ, ವಿಜ್ಞಾನ ಹಾಗೂ ಸಿನೆಮ ಈ ಕುರಿತು ಒಬ್ಬ ಅಮೇರಿಕನ್ ಹಾಗೂ ಒಬ್ಬ ಭಾರತೀಯನ ನಡುವೆ ಪಪೋಟಿ ಯಾರಾದರೂ ನಡೆಸಿದಲ್ಲಿ ಅಂತಿಮ ಗೆಲುವು ಭಾರತೀಯನದೆ ಆಗಿರುತ್ತದೆ. ಅನೌಪಚಾರಿಕವಾಗಿ ನಡೆದ ಅಂತಹ ಒಂದು ಪೈಪೋಟಿಯಲ್ಲಿ ಗೆದ್ದ ಭಾರತೀಯ ನಾನಾಗಿದ್ದೆ ಅನ್ನುವುದು ಅವರ ಮಾಹಿತಿಗೆ. ಭಾರತದ ಸಂಗತಿಗಳ ಕುರಿತು ಅತ್ತಲಾಗಿರಲಿ ಸ್ವತಃ ಅಮೇರಿಕನ್ ಸಂಗತಿಗಳ ಬಗ್ಗೆಯೆ ಅವರಲ್ಲಿ ಪರಿಪೂರ್ಣ ಮಾಹಿತಿಗಳಿಲ್ಲ ಅನ್ನೋದು ರಾಘವೇಂದ್ರರ ಮಾಹಿತಿಗೆ. ಅವರ ಇಂಗ್ಲೀಷ್ ಮೇಲಿನ ಹಿಡಿತ ಇಂಗ್ಲೀಷ್ ಮಾತೃಭಾಷೆಯಲ್ಲದ ನಮ್ಮಕ್ಕಿಂತ ಅತ್ತತ್ತ.

ಹೌದು, ನಾವು ಭಾರತೀಯರು ಅಮೇರಿಕನ್ನರಿಗಿಂತ ಹೋಲಿಕೆಯಲ್ಲಿ ಹೆಚ್ಚು ನ್ಯಾಯ ಪರರು. ಹೀಗಾಗಿ ವ್ಯಥಾ ನಮ್ಮ ತೋಳ್ಬಲವನ್ನ ಯಾರೊಬ್ಬರ ಮೇಲೂ ಪ್ರಯೋಗಿಸೆವು. ಇದು ಇತಿಹಾಸದಿಂದಲೂ ಹರಿದು ಬಂದ ನಮ್ಮೊಳಗಿನ ಮೂಲಗುಣ. ಇನ್ನು ನಮ್ಮಲ್ಲೆಲ್ಲಿದೆ ಹಣ? ಇರುವ ನಾಲ್ಕು ಕಾಸನ್ನ ಇದೆ ಆಳುವ ಮಂದಿ ಯುರೋಪಿನ ಬ್ಯಾಂಕುಗಳಲ್ಲಿ ಕೂಡಿ ಹಾಕಿಟ್ಟುಕೊಂಡಿದ್ದಾರಲ್ಲ! ಜಗತ್ತಿನ ಎರಡನೆ ಜನ ಸಂಖ್ಯಾ ಬಾಹುಳ್ಯ ಇರುವ ನಮ್ಮಲ್ಲಿ ಆರ್ಥಿಕ ಬಡತನ ಹೆಚ್ಚಿರೋದು ಆಶ್ಚರ್ಯ ಪಡುವಂತದ್ದೇನಲ್ಲ. ಅದು ಸಹಜ ಸಹ. ಅದೊಂದೆ ಕಾರಣಕ್ಕೆ ನಾವು ಅವರ ಅಡಿಯಾಳಿನಂತೆ ದ್ವಿ ಪಕ್ಷೀಯ ಒಪ್ಪಂದದ ಮುಖವಾಡದ ಹೆಸರಿನಲ್ಲಿ ಅವರು ಹೇರುವ ದಬ್ಬಾಳಿಕೆಯ ಶರತ್ತುಗಳಿಗೆ ಮರು ಮಾತಿಲ್ಲದೆ ಮಿಸುಕಾಡದೆ ಶರಣಾಗತಿ ಸೂಚಿಸುವ ಯಾವ ಅಗತ್ಯವೂ ಇಲ್ಲ. ಹಾಗೆ ನೋಡಿದರೆ ಅಲ್ಲಿನ ನೆಲದಲ್ಲಿ ನಮ್ಮ ಹೂಡಿಕೆಗೆ ಇದು ಸಕಾಲ. ನಮ್ಮ ಜಿಡಿಪಿ ಸದ್ಯ ಸ್ಥಿರವಾಗಿದೆ ಹಾಗೂ ದೃಢವಾಗಿದೆ.

ಅಮೇರಿಕಾದ ಟ್ರೆಜರಿ ಬಾಂಡ್'ಗಳನ್ನ ಚೀನಾ ಬಹುತೇಕ ಖರೀದಿಸಿ ಅವರ ಪ್ರತಿರೋಧಕ್ಕೆ ಕಡಿವಾಣ ಹಾಕಿರುವಂತೆ ಭಾರತಕ್ಕೂ ಮಾಡಲಿಕ್ಕೆ ಸಾಧ್ಯವಿದೆ. ವಿಶ್ವ ಬ್ಯಾಂಕಿಗೆ ಪ್ರತಿಸ್ಪರ್ಧಿಯಾಗಿ ಪರ್ಯಾಯವಾದ ಏಷ್ಯಾ ಕೇಂದ್ರೀಯ ಬ್ಯಾಂಕ್ ಸ್ಥಾಪಿಸುವ ಚೀನಾ ಪ್ರಯತ್ನಕ್ಕೆ ಸಮ್ಮತಿ ಇಲ್ಲದಿದ್ದರೂ ಏನೊಂದನ್ನೂ ಮಾಡಲಾಗದೆ ಅಸಹಾಯಕತೆಯಿಂದ ಮೈ ಪರಚಿಕೊಳ್ಳುವ ಅಮೇರಿಕೆಯನ್ನ ನಾವೂ ಹಾಗೆ ಪಳಗಿಸದೆ ಗತ್ಯಂತರವೆ ಇಲ್ಲ. ಅಂದ ಹಾಗೆ ಚೀನಾದ ಈ ಮುನ್ನೋಟದ ಮೂವತ್ತು ದಶ ಲಕ್ಷ ಕೋಟಿ ಡಾಲರ್ ಯೋಜನೆಗೆ ಚೀನಾ ಹಾಗೂ ಸಿಂಗಪುರದ ನಂತರ ಭಾರತವೆ ಅತಿ ಹೆಚ್ಚಿನ ದೇಣಿಗೆ ನೀಡುತ್ತಿರುವ ಪಾಲುದಾರ ಎನ್ನುವುದು ನಿಮ್ಮ ಗಮನಕ್ಕೆ. ಇದು ಆರ್ಥಿಕ ಬಲಾಢ್ಯತೆಯ ಹೋಲಿಕೆಯಲ್ಲಿ ನಮ್ಮ ಯೋಗ್ಯತೆ ಅನ್ನುವುದು ರಾಘವೇಂದ್ರರಿಗೆ ಅರಿವಿದ್ದಿದ್ದರೆ ಅವರು ಗಾಳಿಯಲ್ಲಿ ನಾನು ಕೈ ಬೀಸುತ್ತಿದ್ದೇನೆ ಅನ್ನುವ ಹಗುರ ಧಾಟಿಯ ಮಾತನ್ನ ಆಡುತ್ತಲೇ ಇರಲಿಲ್ಲ. ಅಂಕಿ ಅಂಶಗಳ ಬಗ್ಗೆ ಆಸಕ್ತಿ ಇದ್ದಲ್ಲಿ ಅಂತರ್ಜಾಲದಲ್ಲಿ ಅವು ಲಭ್ಯವಿವೆ. ಹುಡುಕಿ ಕೊಂಡು ಅವರು ಅದನ್ನ ಓದಿ ಅರ್ಥ ಮಾಡಿಕೊಳ್ಳಬಹುದು.

ಅಮೇರಿಕಾದಂತೆ ನಮ್ಮದೂ ಸಹ ಸ್ವಾತಂತ್ರ್ಯ ಸರ್ವಭೌಮ ದೇಶ ಅನ್ನುವುದು ರಾಘವೇಂದ್ರರ ಘನ ಗಮನಕ್ಕೆ. ಇನ್ನು ಪ್ರಜಾ ಪ್ರಭುತ್ವ ಅವರಿಗಿಂತ ಹೆಚ್ಚಿನ ಸ್ಥಿರತೆಯಲ್ಲಿ ನಮ್ಮಲ್ಲಿಯೂ ಬೇರು ಬಿಟ್ಟಿದೆ. ಮತದಾರರ ಸಂಖ್ಯೆಯ ಹೋಲಿಕೆಯಲ್ಲಿ ನಾವು ಅವರಿಗಿಂತ ಹೆಚ್ಚು ಸಬಲರು. ಒಕ್ಕೂಟ ವ್ಯವಸ್ಥೆಯಲ್ಲಿಯೂ ನಾವು ಅವರನ್ನು ಸರಿಗಟ್ಟುತ್ತಿದ್ದೇವೆ, ನಮ್ಮ ಯಾವೊಬ್ಬ ಪ್ರಧಾನಿ ಅಥವಾ ರಾಷ್ಟ್ರಾಧ್ಯಕ್ಷರು ಕಾಲಾನುಕಾಲಕ್ಕೆ ರಾಷ್ಟ್ರದ ಜನತೆಯನ್ನ ಹಾಡಹಗಲೆ ಯಾಮಾರಿಸುವ ಸುಳ್ಳು ಹೇಳಿ ಕಟ್ಟು ಕಥೆಯೊಂದರ ಆಧಾರದಲ್ಲಿ ಕಂಡ ಕಂಡ ದೇಶಗಳ ಮೇಲೆ ತೋಳೇರಿಸಿಕೊಂಡು ಹೋದ ಉದಾಹರಣೆ ನಮ್ಮಲ್ಲಿ ಭೂತಗನ್ನಡಿ ಹಾಕಿಕೊಂಡು ಹುಡುಕಿದರೂ ಒಂದೂ ಸಿಗುವುದಿಲ್ಲ. ಇದು ನಮ್ಮ ಹಾಗೂ ಅವರಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡ ಬಗೆ ಅನ್ನುವುದು ರಾಘವೇಂದ್ರ ಗಮನಕ್ಕೆ ಯಾಕೆ ಬರಲಿಲ್ಲವೋ ನಾ ಕಾಣೆ.

ಕೃಷಿ ಅನ್ವೇಷಣೆ ಹಾಗೂ ಔಷಧದ ಪ್ರಯೋಗಗಳಲ್ಲಿ ಭಾರತವನ್ನ ಬೇಕಾ ಬಿಟ್ಟಿಯಾಗಿ ಅಮೇರಿಕಾ ಕಳೆದೆರಡೂವರೆ ದಶಕಗಳಿಂದ ಬಳಸಿಕೊಳ್ಳುತ್ತಿರುವ ವಿಷಯವೇನಾದರೂ ರಾಘವೇಂದ್ರ ಗಮನಿಸಿದ್ದಾರ? ತಳಿ ಪರಿವರ್ತಿತ ಹಣ್ಣು ತರಕಾರಿಗಳ ಉತ್ಪಾದನೆಗೆ ತಡೆ ಒಡ್ಡಲಿಕ್ಕೆ ತಮ್ಮ ನೆಲದಲ್ಲಿ ಮಾತ್ರ ಬಿಗು ಕಾನೂನುಗಳನ್ನ ಹೇರಿ ನಮ್ಮ ನೆಲದ ತಳಿ ಶುದ್ಧತೆಗೆ ಇವರು ಇಟ್ಟ ಬೆಂಕಿಯ ಉರಿ ಇನ್ನೂ ಇವರ ದಪ್ಪ ಚರ್ಮಕ್ಕೆ ತಗಲಲಿಲ್ಲವ? ಬಹುಷಃ ಗ್ರಾಮೀಣ ಬದುಕಿನ ಒಳ ಹೊರಗನ್ನ ಅರಿಯದೆ ದೂರದ ದೆಲ್ಲಿಯಲ್ಲಿ ಕೂತು ಕೆಲವೆ ಕೆಲವು ಸಿರಿವಂತರ ಜೇಬು ತುಂಬಿಸುವ ಜನ ಸಾಮಾನ್ಯ ವಿರೋಧಿ ಕಾನೂನುಗಳನ್ನ ರೂಪಿಸುತ್ತಾ ಕಂಡವರ ಕಾಸಿಗೆ ಬಸಿರಾಗುವ ಖದೀಮ ರಾಜಕಾರಣಿಗಳ ಬಣ್ಣ ಬಣ್ಣದ ಮಾತುಗಳು ನಿಮಗೆಲ್ಲ ಸವಿ ರಾಗದಂತೆ ಕೇಳಿಸೀತು ಆದರೆ ಹಳ್ಳಿಯ ಬಡ ರೈತಾಪಿಗಳಿಗಲ್ಲ.

ಗ್ಯಾಟ್ ಹಾಗೂ ಡೆಂಕನ್ ಒಪ್ಪಂದಗಳಿಂದ ಈಗಾಗಲೆ ಆದ ಹಾನಿಯನ್ನ ಪರಿಗಣಿಸಿ ಹೇಳುವುದಾದರೆ ಅದರ ನೀತಿ ನಿರೂಪಣೆಯಿಂದಾದ ದೂರಗಾಮಿ ದುಶ್ಪರಿಣಾಮಗಳನ್ನೆ ವಿರೋಧಿಸಿ ಅಧಿಕಾರಕ್ಕೆ ಬಂದ ಸರಕಾರ ಇದು. ಈಗ ಲಜ್ಜೆಗೆಟ್ಟ ಇವರೂ ಸಹ ಅದನ್ನೇ ಮುಂದುವರಿಸಿ ಬಹಿರಂಗದಲ್ಲಿ ಭರವಸೆಗಳ ಟೋಪಿ ತೊಡಿಸಿ ಅಂತರಂಗದಲ್ಲಿ ನಯವಾಗಿ ನಮ್ಮ ಕತ್ತು ಕುಯ್ಯುವುದಾದರೆ ಇವರು ಪಟ್ಟಕ್ಕೇರಿ ನಮಗೆ ಬಂದ ಭಾಗ್ಯವೇನು? ಅಮೇರಿಕಾದೊಂದಿಗೆ ಆದ ಇತ್ತೀಚಿನ ದ್ವಿ ಪಕ್ಷೀಯ ಒಪ್ಪಂದಗಳಲ್ಲಿ ಈ ಹಿಂದಿನ ಉಳಿದೆಲ್ಲ ಒಪ್ಪಂದಗಳಂತೆಯೆ ನಮ್ಮ ಯಾವುದೆ ಸ್ವ ಹಿತಾಸಕ್ತಿಯನ್ನ ಕಾಪಾಡುವ, ಅವರ ಕಡೆಯಿಂದ ನಮ್ಮ ನೆಲದ ಪ್ರಾಕೃತಿಕ ಸ್ಥಿರತೆಯನ್ನ ಕುಲಗೆಡಿಸಬಹುದಾದ ಯಾವುದೇ ಸಾಧ್ಯತೆಗಳನ್ನ ಪ್ರತಿಬಂಧಿಸುವ, ಹಾಗೊಂದು ವೇಳೆ ಅವರ ಉತ್ಪಾದನೆ ಹಾಗೂ ಸಂಶೋಧನೆಗಳಿಂದ ನಮ್ಮ ನೆಲ, ಜಲ ಹಾಗೂ ಜನಕ್ಕೆ ಹಾನಿಯಾದದ್ದೇ ಆದರೆ ಅದರ ಕೂಲಂಕಷ ತನಿಖೆಯನ್ನ ನಮ್ಮ ನೆಲದ ಕಾನೂನಿನ ಪ್ರಕಾರ ನಡೆಸಲು. ಒಂದು ವೇಳೆ ಅವರ ಅಪರಾಧ ಸಾಬೀತಾದರೆ ಅಮೇರಿಕನ್ನರನ್ನ ಭಾರತೀಯ ದಂಡ ಸಂಹಿತೆಯ ಪ್ರಕಾರ ಶಿಕ್ಷಿಸಲು ಯಾವುದೇ ಅವಕಾಶಗಳು ನಮಗಿಲ್ಲವೇ ಇಲ್ಲ. ಈ ದ್ವಿ ಪಕ್ಷೀಯ ಒಪ್ಪಂದದ ಎಲ್ಲಾ ಒಪ್ಪುತಪ್ಪುಗಳು ಅಮೇರಿಕನ್ ನ್ಯಾಯಾಂಗ ವ್ಯವಸ್ಥೆಯ ವ್ಯಾಪ್ತಿಗೆ ಮಾತ್ರ ಒಳ ಪಡುತ್ತವೆ!

ನಮ್ಮ ಆರ್ಥಿಕ ಯೋಜನಾ ಸಮಿತಿ ಹಾಗೂ ವಿದೇಶ ನೀತಿ ನಿರೂಪಣಾ ಸಮಿತಿ ಸರಿಯಾದ ಸಲಹೆಗಳನ್ನ ಕೊಟ್ಟಿದ್ದರೆ ಈ ಅನರ್ಥಕಾರಿ ಒಪ್ಪಂದ ಏರ್ಪಡುತ್ತಲೇ ಇರಲಿಲ್ಲ ಅಥವಾ ಅವರು ಕೊಟ್ಟಿರಬಹುದಾದ ವಿವೇಕದ ಸಲಹೆಗಳನ್ನ ಘನ ಸರ್ವಾಧಿಕಾರಿಗಳ ಸರಕಾರ ಪರಿಗಣಿಸಿದ್ದರೆ ಬಹುಷಃ ದ್ವಿ ಪಕ್ಷೀಯ ಒಪ್ಪಂದದ ಫಲಶ್ರುತಿ ಈಗಿದ್ದಂತೆ ಖಂಡಿತಾ ಇದ್ದಿರುತ್ತಿರಲಿಲ್ಲ. ತನ್ನ ಸಂಪುಟ ಸಹುದ್ಯೋಗಿಗಳ ದೊಂಡೆಯನ್ನ ಒತ್ತಿಡುವಲ್ಲಿ ಯಶಸ್ವಿಯಾಗಿರುವ ಮಾನ್ಯ ಪ್ರಧಾನಿಗಳು ಇಲ್ಲಿಯೂ ಅದೆ ತಂತ್ರವನ್ನ ಅನುಸರಿಸಿ ಅವುಗಳೆಲ್ಲದರ ಬಾಯಿ ಮುಚ್ಚಿಸಿದ್ದಾರೆ ಅನ್ನುವುದನ್ನ ಪ್ರತ್ಯೇಕವಾಗಿ ಹೇಳಬೇಕ? ಅವರ ನೀತಿ ನಿಲುವುಗಳಿಗೆ ವಿರೋಧ ವ್ಯಕ್ತ ಪಡಿಸುವ ಯಾರೊಬ್ಬರಿಗೂ ಉಳಿಗಾಲವಿಲ್ಲ ಅನ್ನುವುದು ಎರಡು ತಿಂಗಳ ಹಿಂದೆ ವಿನಾ ಕಾರಣ ವಜಾ ಆದ ಎಂಆರ್'ಪಿಎಲ್ ನಿರ್ದೇಶಕ ಮಂಡಳಿಯ ನಾಲ್ವರು ಸದಸ್ಯರಿಗಾದ ಗತಿ, ಬಿಎಸ್'ಎನ್'ಎಲ್ ಆಡಳಿತ ಮಂಡಳಿಯ ಆರು ಸದಸ್ಯರಿಗೆ ಒದಗಿದ ಅಧಿಕಾರ ಚ್ಯುತಿಯ ಫಲಶ್ರುತಿಯ ಅರಿವಿದ್ದಿದ್ದರೆ ಬಹುಷಃ ರಾಘವೇಂದ್ರ ಕೇವಲ ವಾದಕ್ಕೊಂದು ವಾದ ಮಾಡಲು ಎಳಸುತ್ತಿರಲಿಲ್ಲವೇನೋ.

ಕಪ್ಪು ಹಣದ ಹೂಡಿಕೆದಾರರ ಪಟ್ಟಿಯ ಬಹಿರಂಗ ಮಾಡುವ ಹಾಗೂ ಆ ಹೂಡಿಕೆಯ ಕಡೆಯ ಪೈಸೆಯನ್ನೂ ಮರಳಿ ಖಜಾನೆಗೆ ತಂದು ಕೊಡುವ ಭರವಸೆಯ ಬೂಸಿ ಬಿಡುತ್ತಲೆ ಅಧಿಕಾರಕ್ಕೆ ಬಂದ ಸರಕಾರವಲ್ಲವ ಇದು? ಮೊನ್ನೆ ಇದೆ ಸರಕಾರದ ಸಚಿವೆ ಮೀನಾಕ್ಷಿ ಲೇಖಿ ಕಾಳಧನವನ್ನ ಮರಳಿ ಮಣ್ಣಿಗೆ ಕಾನೂನಾತ್ಮಕವಾಗಿಯೆ ತರದಿರಲು, ಪಟ್ಟಿ ಬಹಿರಂಗ ಪಡಿಸದಿರಲು ಸರಕಾರದ ಅಸಹಾಯಕತೆಯನ್ನ ಪ್ರಕಟಿಸಲು ಪದಗಳಿಗಾಗಿ ತಡಕಾಡುತ್ತಾ 'ಬ್ಬೆಬ್ಬೆಬ್ಬೆ' ಗುಡುತ್ತಿದ್ದರೆ, ವಕೀಲ ಹಾಗೂ ವಿದೇಶಿ ನೀತಿ ನಿರೂಪಣಾ ತಜ್ಞ ಆರ್ಯಮಾನ್ ಸುಂದರಂ ನೇರ ಸಂದರ್ಶನದಲ್ಲಿ ಅವರ ಮುಖದ ನೀರಿಳಿಸುತ್ತಿದ್ದರು. ಹಿಂದೆಲ್ಲ ಟಿವಿ ಶೋಗಳಲ್ಲಿ ಗಂಟಲು ಹರಕೊಂಡು ಈ ಬಗ್ಗೆ ಒಂದೆ ಉಸುರಿನಲ್ಲಿ ಕಿರುಚುತ್ತಿದ್ದ ಈ ಮಹಿಳಾ ಸಚಿವರಿಗೆ ಪ್ರಧಾನಿ ಹಾಕಿದ ಮೂಗುದಾರದ ಪ್ರಭಾವ ಅಲ್ಲಿ ಎದ್ದು ಕಾಣುತ್ತಿತ್ತು.

ನಾನು ಮತದಾರನಾಗಿರುವ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಸದ್ಯ ಕೇಂದ್ರದಲ್ಲಿ ಗೊಬ್ಬರದ ಮಂತ್ರಿಯಾಗಿರುವ ಘನಂದಾರಿ ನಾಯಕರೊಬ್ಬರು ತಮ್ಮ ಎದುರಾಳಿಯನ್ನ ವಿರೋಧಿಸಿ ಪ್ರಚಾರ ಮಾಡುವಾಗ, ನಿ'ರಾಧಾರ' ಕಾರ್ಡನ್ನ ಅಧಿಕಾರಕ್ಕೆ ಬಂದ ಕೂಡಲೆ ರದ್ದು ಪಡಿಸಿಯೆ ತೀರುವುದಾಗಿ ಅಬ್ಬರಿಸಿ ಬೊಬ್ಬರಿಯುತ್ತಾ ಗೆದ್ದು ಬಂದಿದ್ದರು. ಈಗ ಅದೆ ಆಧಾರವನ್ನ ಸಬ್ಸಿಡಿ ಯೋಜನೆಗಳೊಂದಿಗೆ ಥಳಕು ಹಾಕಿ ನಿಧಾನವಾಗಿ ಎಲ್ಲಾ ಸಬ್ಸಿಡಿಗಳಿಗೆ ಕೊಕ್ಕೆ ಹಾಕಿ ಸಿರಿವಂತ ಉದ್ಯಮಿಗಳ ಜೋಳಿಗೆಗೆ ಇಡಿ ದೇಶದ ಶ್ರೀಸಾಮಾನ್ಯ ಗ್ರಾಹಕರ ಹೊಟ್ಟೆ ಹಾಗೂ ಹಣೆ ಬರಹವನ್ನು ಹಾಕಲು ಕಾತರರಾಗಿರುವ ಮಾನ್ಯ ಪ್ರಧಾನಿಗಳ ಗೋಮುಖ ವ್ಯಾಘ್ರತೆಯ ಮುಂದೆ ಇವರ ಪುಂಗಿ ಬಂದ್ ಆಗಿದೆ!

ಜನಾರ್ಧನ ಪೂಜಾರಿಯವರ 'ಸಾಲಮೇಳ'ದ ಆಶಯಕ್ಕೂ 'ಜನಧನ' ಯೋಜನೆಯ ಆಶಯಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಅವರಿವರು ಹೇಳಿದ್ದಕ್ಕೆ ಹಿತ್ತಾಳೆ ಕಿವಿಯಾಗದೆ ಗೋಪಿನಾಥರು ಸ್ವಲ್ಪ ತಮ್ಮ ತಲೆಯನ್ನೂ ಸಹ ಓಡಿಸಿ ತರ್ಕಬದ್ಧವಾಗಿ ಚಿಂತಿಸಿದ್ದರೆ ದೇಶದ ಚಿನ್ನ ಅಡವಿಟ್ಟು ವಿಶ್ವಬ್ಯಾಂಕ್ ಹಾಗೂ ಯುರೋಪಿಯನ್ ಒಕ್ಕೂಟದಿಂದ ಚಂದ್ರಶೇಖರ್ ಸರಕಾರ 'ಓಡಿ' ಹೊತ್ತು ತರುವುದಕ್ಕೂ, ಸಾಲಮೇಳಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಅವರಿಗೆ ಸ್ಪಷ್ಟವಾಗುತ್ತಿತ್ತು. ಬೋಪೋರ್ಸ್ ಹಗರಣ, ಆಗ ಅಧಿಕಾರದಲ್ಲಿದ್ದ ರಾಜಕಾರಣಿಗಳ ಕಪ್ಪು ಹಣ ಮಾಡುವ ಕಡು ದಾಹ ಹಾಗೂ ನಮ್ಮ ವ್ಯವಸ್ಥೆಗೆ ಯಶಸ್ವಿಯಾಗಿ ಭ್ರಷ್ಟ ರಾಜಕಾರಣಿಗಳು ಕೊರೆದ ಸುರಂಗ ಇದಕ್ಕೆ ಕಾರಣವಾಗಿತ್ತೆ ಹೊರತು ಕೊಟ್ಟ ಸಾಲ ಪೂರ್ತಿ ಮರು ವಸೂಲಾಗದ ಕಾರಣಕ್ಕೆ ದೊಡ್ಡ ಬ್ಯಾಂಕ್'ಗಳೊಂದಿಗೆ ವಿಲೀನವಾಗಿ ಮತ್ತೆ ಚಿಗಿತುಕೊಂಡ ದಕ್ಷಿಣ ಭಾರತ ಮೂಲದ ಮೂರು ಬ್ಯಾಂಕುಗಳಿಗಾದ ಕಿಂಚಿತ್ ನಷ್ಟ ಇದಕ್ಕೆ ಕಾರಣವಲ್ಲ ಎನ್ನುವುದು ಅವರ ಮಾಹಿತಿಗೆ. ಇನ್ನು ಸಾಲಮೇಳದಿಂದ ಮಾತ್ರ ದೇಶ ಹತ್ತು ವರ್ಷ ಪ್ರಗತಿಯ ಹಾದಿಯಲ್ಲಿ ಹಿಂದೆ ಸರಿದಿತ್ತು ಅನ್ನುವುದು ಹಾಸ್ಯಾಸ್ಪದ ವಾದ. ಸಾಲ ಮೇಳದಿಂದ ಹಣಕಾಸಿನ ವಿಷಯದಲ್ಲಿ ಕೆಲವು ಕೋಟಿ ನಷ್ಟವಾಗಿದ್ದರೂ ದೇಶದ ಶ್ರೀಸಾಮಾನ್ಯ ಪ್ರಜ್ಞಾವಂತನಾದ. ಆದ ನಷ್ಟದ ಬಾಬ್ತು ಈಗೆಲ್ಲ ಛದ್ಮವೇಷ ತೊಟ್ಟ ನಾಯಕರು ಬೀದಿ ಗುಡಿಸಿದ್ದನ್ನ ಪ್ರಚಾರ ಮಾಡಲಿಕ್ಕಂತ ಆಳುವ ಸರಕಾರಗಳು ಅವರಪ್ಪನ ಮನೆಯ ಸಂಪಾದನೆಯಂತೆ ಸುರಿಯುವ ತೆರಿಗೆದಾರರ ಸುಡಿಮೆಯಿಂದ ಹುಟ್ಟಿದ ಜಾಹಿರಾ....ಥೂ ದರಕ್ಕಿಂತ ಅತ್ಯಲ್ಪ ಅನ್ನೋದು ಗೋಪಿನಾಥರ ಗಮನಕ್ಕೆ.

ಉತ್ಪಾದನಾ ಕ್ಷೇತ್ರದಲ್ಲಿ ನಾವು ಹಿಂದಿರೋದು ನಿಜ, ಆದರೆ ಅದು ಆಂತರಿಕವಾಗಲ್ಲ. ಅಮೇರಿಕಾದ ನೆಲದಲ್ಲೂ ನಮ್ಮ ಸರಕುಗಳ ಉತ್ಪಾದನೆಗೆ ವೇದಿಕೆ ಸಿದ್ಧವಾದರೆ ಅಲ್ಲಿನ ಅಗತ್ಯಗಳ ಗುಣಮಟ್ಟದ ಸರಕು ಸರಂಜಾಮುಗಳನ್ನ ಉತ್ಪಾದಿಸಿ ಅಲ್ಲಿನ ಮಾರುಕಟ್ಟೆಗಳಿಗೆ ಪೂರೈಸುವುದಕ್ಕೆ ಹೆಚ್ಚಿನ ಕಷ್ಟವೇನೂ ನಮ್ಮ ಉತ್ಪಾದಕರಿಗಾಗಲಾರದು. ಆದರೆ ನಮಗೆ ಮೊದಲು ಸಿಗ ಬೇಕಾಗೋದು ಅಲ್ಲಿನ ನೆಲದಲ್ಲಿ ಉತ್ಪಾದನೆಗಾಗಿನ ಕೊಡು ಕೊಳ್ಳುವಿಕೆಯ ಮುಕ್ತ ಅನುಮತಿ ಮಾತ್ರ.

ಪ್ರಕಾಶ್ ಕೊನೆಯದಾಗಿ ಇಲ್ಲಿ ರಾಜಕೀಯ ಮಾಡುವ ಮಂದಿಯಲ್ಲಿ ಹಿತವರನ್ನ ಹುಡುಕ ಹೊರಡುವುದೆ ಪರಮ ಮೂರ್ಖತನ. ಕೊಟ್ಟ ಮಾತಿಗೆ ತಪ್ಪುವುದರಲ್ಲಿ ಅದ್ವಿತೀಯರಾದ, ತಮ್ಮ ಆರ್ಥಿಕ ಹಾಗೂ ವಯಕ್ತಿಕ ಹಿತಾಸಕ್ತಿಗಳ ಪ್ರಶ್ನೆ ಉದ್ಭವಿಸಿದಾಗ ಪಕ್ಷಾತೀತವಾಗಿ ಒಂದಾಗಿ ಏಕರಾಗದಲ್ಲಿ ಹಾಡುವ ಈ ರಾಜಕಾರಣಿಗಳನ್ನ ಸದಾ ಎಚ್ಚರದ ಕಣ್ಣಿಂದ ಗಮನಿಸಿ ಅವರ ತಪ್ಪುಗಳನ್ನ ಹೆಕ್ಕಿ ತೋರಿಸಿ ಶ್ರೀಸಾಮಾನ್ಯರನ್ನ ಸಾವಧಾನಿಸುವ ಮಾಹಿತಿ ಯಾವುದೆ ಸಿಕ್ಕರೂ ನಮ್ಮ ನಿಮ್ಮಂತವರು ಅದನ್ನ ಆದಷ್ಟು ಹರಡಿ ಜನ ಜಾಗೃತಿ ಮೂಡಿಸಿಕೊಳ್ಳಬೇಕೆ ವಿನಃ ಕುರುಡಾಗಿ ಯಾರೋ ಮೋಡಿಯ ಮಾತನ್ನ ಆಡುವ ಮುಖವಾಡದ ರಾಜಕಾರಣಿಯ ಬಣ್ಣದ ಮಾತಿಗೆ ತನ್ಮಯರಾಗಿ ತಲೆಯಾಡಿಸುವುದಲ್ಲ. ಹೀಗಾದಾಗ ಮಾತ್ರ ಸ್ವಲ್ಪ ನಮ್ಮ ನಿಮ್ಮ ಭವಿಷ್ಯ ಸುಧಾರಿಸಿತೇನೋ.

No comments: