23 October 2015

ವಲಿ - ೧೪







ಮದೀನಾದ ಬಾಳ್ವೆಯ ಬಡತನದ ಬೇಗೆ ವಿಸ್ತರಿದಷ್ಟು ಕಾಲವೂ ಮಹಮದನ ಮನದೊಳಗೆ ಖುರೈಷಿಗಳ ಮೇಲಿನ ಹಗೆತನದ ಜ್ವರ ಏರುತ್ತಲೆ ಹೋಯಿತು. ತಾನು ಮೇಲೆ ಬಿದ್ದು ಅವರ ಕ್ಯಾರವಾನ್'ಗಳ ಮೇಲೆ ಧಾಳಿ ಸಂಘಟಿಸಿ ಸೊತ್ತುಗಳನ್ನ ಲೂಟಿಗೈದಿದ್ದರೂ ಸಹ, ಖುರೈಷಿಗಳು ಯಾವುದೆ ಪ್ರತಿಕಾರವನ್ನ ಎಸಗದೆ ಅದನ್ನ ಮರೆತವರಂತೆ ವರ್ತಿಸುತ್ತಿದ್ದುದು ಅವನನ್ನ ರೊಚ್ಚಿಗೆಬ್ಬಿಸಿತ್ತು. ಸಾಲದ್ದಕ್ಕೆ ಅದೆ ಸಿಟ್ಟಿನಲ್ಲಿ ಅವರು ಮೆಕ್ಕಾದಲ್ಲಿಯೆ ಇನ್ನೂ ಉಳಿದಿರುವ ತನ್ನ ರಕ್ತ ಸಂಬಂಧಿಗಳ ಮೇಲೆ ಹಲ್ಲೆ ಮಾಡಬಹುದು. ಇದನ್ನೆ ನೆಪ ಮಾಡಿಕೊಂಡು ಅವರ ಮೇಲೆ ಯುದ್ಧ ಸಾರಲು ತಾನು ಪ್ರಯತ್ನಿಸಬಹುದು ಎನ್ನುವ ಅವನ ಹಂಚಿಕೆಯೂ ಸಹ ತಲೆಕೆಳಗಾಯಿತು. ಏಕೆಂದರೆ ಖುರೈಷಿಗಳು ಲೂಟಿಯ ಹಾಗೂ ಕೊಲೆಯ ಸಂಗತಿಯನ್ನ ಅಷ್ಟು ಗಂಭೀರವಾಗಿ ಪರಿಗಣಿಸಿಯೆ ಇರಲಿಲ್ಲ.

ಅದರೆ ಮದೀನಾದಲ್ಲಿ ತಂಗಿದ್ದ ಮಹಮದ್ ಮಾತ್ರ ವ್ಯಥಾ ದ್ವೇಷದ ಬೆಂಕಿಯಲ್ಲಿ ಬೇಯುತ್ತಾ ಸಾಗಿದ. ತನ್ನ ಹುಟ್ಟೂರಿನಿಂದ, ನೆಚ್ಚಿನ ತನ್ನ ಮೆಕ್ಕಾದಿಂದ ತನ್ನನ್ನ ಹೊರ ಹಾಕಿದ ಖುರೈಷಿಗಳ ವಿರುದ್ಧ ಹಗೆ ಸಾಧಿಸಲು ಸೂಕ್ತ ಕಾರಣ ಹಾಗೂ ಸಂದರ್ಭದ ತಲಾಷಿನಲ್ಲಿ ಅವನಿದ್ದ. ತನ್ನ ಎಂದಿನ ವ್ರವೃತ್ತಿಯಂತೆ ಇದಕ್ಕಾಗಿ ದೇವರ ಆದೇಶಕ್ಕಾಗಿ ಕಾದ. ದೇವರ ಆದೇಶವಿಲ್ಲದೆ ಪ್ರವಾದಿ ಎಂದು ಸಾರಿ ಕೊಂಡ ಮೇಲೆ ಅವನಿಗೆ ತಾನೆ ಸ್ವಂತವಾಗಿ ಏನನ್ನೂ ಮಾಡುವ ಅಧಿಕಾರ ಇದ್ದಿರಲಿಲ್ಲ. ಸ್ವಯಂ ಪ್ರೇರಿತನಾಗಿ ಖುರೈಷಿಗಳ ವಿರುದ್ಧ ಯುದ್ಧ ಜರುಗಿಸಿದರೆ ಎಲ್ಲರ ತಿರಸ್ಕಾರಕ್ಕೆ ಒಳಗಾಗಬೇಕಾದ ಅಪಾಯ ಎದುರಾಗುವ ಸಂಭವ ಇತ್ತು. ಅದರಂತೆ ಅವನ ಮನೋಭಿಲಾಶೆ ದೈವವಾಣಿಯಾಗಿ ಅತಿ ಶೀಘ್ರದಲ್ಲಿ ಹೊರಬಂದಿತು. ಸುರಾ ೨/೧೮೬. ೨೧೨ರ ಮೂಲಕ ಸರಾಗವಾಗಿ ದೇವರ ಅನುಮತಿ ದೊರೆತ ನಂತರ ಆತ ಯುದ್ಧ ತಯ್ಯಾರಿಯತ್ತ ಗಮನ ಹರಿಸಿದ. ಯುದ್ಧದಲ್ಲಿ ಪಾಲ್ಗೊಳ್ಳಲು ಹಿಂಜರಿಕೆ ತೋರಿದ ನವ ಮುಸಲ್ಮಾನರಿಗೆ ಸತ್ತ ನಂತರದ ಸ್ವರ್ಗದ ಬಣ್ಣನೆ ಮಾಡಿ ಒಂದೊಮ್ಮೆ ಹೋರಾಟದಲ್ಲಿ ಸತ್ತರೆ ಅದೆಲ್ಲಾ ಅಯಾಚಿತವಾಗಿ ನಿಮ್ಮ ಪಾಲಾಗುವುದು ಎನ್ನುವ ಅಮಿಷದ ಆಸೆ ಹುಟ್ಟಿಸಿದ. ಆ ಬಗ್ಗೆ ಪ್ರವಾದಿಯಾಗಿ ದೇವರ ಪರವಾಗಿ ಪ್ರಮಾಣವನ್ನೂ ಮಾಡಿದ್ದಲ್ಲದೆ ಮುಸಲ್ಮಾನರು ಯುದ್ಧಕ್ಕೆ ತಯ್ಯಾರಾಗುವ ಕರೆ ಹೊರಡಿಸಿದ. ಆ ಯುದ್ಧದ ಸಂಪೂರ್ಣ ಖರ್ಚು ವೆಚ್ಚವನ್ನೂ ಸಹ ನವ ಮುಸಲ್ಮಾನರೆ ವಹಿಸಬೇಕೆಂದು ಮಹಮದ್ ಆದೇಶಿಸಿದ. ಇದೆಲ್ಲವೂ ದೇವರಿಗಾಗಿ, ದೇವರಿಗೋಸ್ಕರ ಹಾಗೂ ದೈವ ಪ್ರೇರಣೆಯಿಂದಲೆ ಮಾಡ ಬೇಕಾದ ಪವಿತ್ರ ಕೆಲಸ ಎಂದು ಘೋಷಿಸಿ ತನಗೂ ಅದರ ಹುನ್ನಾರಕ್ಕೂ ನಡುವೆ ಯಾವುದೆ ಸಂಬಂಧ ಇಲ್ಲ ಎನ್ನುವುದನ್ನ ಸಾರಿದ. ಈ ಯುದ್ಧಾಚರಣೆಯ ಕರೆಗಳು ನಿರಾಶ್ರಿತರಾಗಿ ಮದೀನಾಕ್ಕೆ ಮಹಮದನ ಹಿಂದೆ ಸಾಗಿ ಬಂದಿದ್ದ ಮುಸಲ್ಮಾನರಿಗಷ್ಟೆ ಅಲ್ಲದೆ ಮದೀನದಲ್ಲಿ ಅವರನ್ನ ಆದರಿಸಿ ಆಶ್ರಯನೀಡಿದ್ದ ಅನ್ಸಾರಿಗಳೆಂಬ ನವ ಮುಸಲ್ಮಾನರಿಗೂ ಅನ್ವಯವಾಗುತ್ತಿದ್ದವು.


ಇತಿಹಾಸಕಾರ ಮೌಲಾನಾ ವಾಹಿದುದ್ದೀನ್ ಖಾನ್ ತನ್ನ "ಮಹಮದ್" ಎನ್ನುವ ಕೃತಿಯ ಪುಟ ಸಂಖ್ಯೆ ತೊಂಬತ್ತೇಳರಲ್ಲಿ ಹೀಗೆ ಇಸ್ಲಾಮಿನ ದಂಡಯಾತ್ರೆಗಳು ಆರಂಭವಾಯಿತು ಎನ್ನುತ್ತಾರೆ. "ಮಹಮದನ ಮುಂದಾಳತ್ವದಲ್ಲಿ ಇಸ್ಲಾಮಿನ ದಿಗ್ವಿಜಯ ಆರಂಭವಾದದ್ದು ಹೀಗೆ!" ಎಂದು ಬಣ್ಣಿಸುತ್ತಾರೆ ತಮ್ಮ "ಇಸ್ಲಾಂ ದ ಮೋಸ್ಟ್ ಮಿಸ್'ಉಂಡರ್'ಸ್ಟುಡ್ ರಿಲಿಜನ್" ಕ್ರತಿಯ ಇಪ್ಪತ್ತಮೂರನೆಯ ಪುಟದಲ್ಲಿ ಇನ್ನೊಬ್ಬ ಇತಿಹಾಸಕಾರ ಮಹಮದ್ ಖಾತುಬ್.


ಧರ್ಮದ ಸಲುವಾಗಿ, ಧರ್ಮದ ಪ್ರಚಾರಕ್ಕಾಗಿ ಹಾಗೂ ಧರ್ಮ ಸಲಹೆಗಾಗಿ ಹೋರಾಟ ಜರುಗಿಸುವುದು ನ್ಯಾಯವಾಗಿದೆ ಎಂದು ಸರಣಿ ಸುರಾಗಳ ಮೂಲಕ ಮಹಮದ್ ಬಹಿರಂಗವಾಗಿ ಯುದ್ಧದ ಸಮರ್ಥನೆಗೆ ಇಳಿದ.  ಉದಾಹರಣೆಗೆ ಸುರಾ ೨/೧೯೦,೨೧೬; ೩/೧೫-೧೮, ೨೮-೩೩ ೪/೭೪; ೨೨/೩೯,೪೧ ೮/೫೭-೬೫, ೪೭/೪,೫,೨೦,೨೧ಗಳನ್ನು ಅಲ್ ತಮೀಮಿ ನೀಡುತ್ತಾನೆ. ಮದೀನಾದಲ್ಲಿ ನಿರಾಶ್ರಿತ ಜೀವನವನ್ನ ಕಳೆಯುವ ಹೊತ್ತಿನಲ್ಲಿ ಮಹಮದ್ ಹೇಳಿದ ಸುರಾಗಳೆಲ್ಲ ಹೊಸತೆ ಆಯಾಮ ಹಾಗೂ ರೂಪಿನಿಂದ ಕೂಡಿದ್ದವು ಅನ್ನೋದು ತಮೀಮಿಯ ವಾದ. ಅವು ಮುಂದಿನ ದಿನಗಳ ಮುಸಲ್ಮಾನ ಪ್ರಪಂಚದ ಶಾಸನಗಳೆ ಆದವು. ಬಹುತೇಕ ತನಗೆ ಒದಗಿ ಬಂದ ದೈವವಾಣಿಗಳನ್ನ ಮಹಮದ್ ತನ್ನೊಳಗೆ ಇಟ್ಟುಕೊಂಡಿರುತ್ತಿದ್ದ. ಸೂಕ್ತ ಸಮಯ ಹಾಗೂ ಸಂದರ್ಭವನ್ನ ನೋಡಿಕೊಂದು ತನ್ನ ಅನುಯಾಯಿಗಳಲ್ಲಿ ಅದನ್ನ ಹರಿಬಿಡುತ್ತಿದ್ದ. ತನ್ನ ಬಾಯಿಯಿಂದ ಹೊರ ಬರುವ ಪ್ರತಿ ಪದಗಳೂ ಸಹ ದೈವವಾಣಿಯಷ್ಟೆ ಬಲಿಷ್ಠ ಎನ್ನುವ ಭ್ರಮೆಗೆ ಬಿದ್ದ ಮಹಮದ್ ಸ್ವತಃ ತಾನು ಅನಕ್ಷರಸ್ಥನಾಗಿದ್ದರಿಂದ ಅವನ್ನೆಲ್ಲ ಸಂಗ್ರಹಿಸಿ ದಾಖಲಿಸಲು ಹಲವಾರು ಲಿಪಿಕಾರರನ್ನ ನೇಮಿಸಿಕೊಂಡ.


"ಇಂತವರು ತಿಳಿದಿರಬೇಕು, ಪರಲೋಕದ ಜೀವನದ ಬದಲಿಗೆ ಇಹ ಜೀವನವನ್ನು ಮಾರಿದವರು ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕು. ಅಲ್ಲಾಹನ ಮಾರ್ಗವನ್ನ ಹಿಡಿದು ಹೋರಾಡಿದವರು ವಧಿಸಲ್ಪಡಲಿ ಅಥವಾ ವಿಜಯದ ಮಾಲೆ ಧರಿಸಲಿ ಅವರಿಗೆ ನಾವು ಖಂಡಿತವಾಗಿಯೂ ಮಹತ್ತರವಾದ ಫಲವನ್ನ ನೀಡುವೆವು"


"ಓ ನಮ್ಮ ಪ್ರಭೂ, ಆಧರ್ಮಿಗಳು ವಾಸಿಸುವ ಈ ನಾಡಿನಿಂದ ನಮ್ಮನ್ನು ಹೊರ ತೆಗೆ. ನೀನು ನಿನ್ನ ಕಡೆಯಿಂದ ನಮಗೊಬ್ಬ ಮೇಲ್ವಿಚಾರಕನನ್ನು ಮತ್ತು ಒಬ್ಬ ಸಹಾಯಕನನ್ನು ನಿಯೋಜಿಸು" ಎಂದು ಮೊರೆಯಿಡುತ್ತಿರುವ ಮರ್ದನಕ್ಕೊಳಗಾದ ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಗಾಗಿ, ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ಕಾರಣವೇನು?"


"ಸತ್ಯವಿಶ್ವಾಸ ಕೈಗೊಂಡವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ ಮತ್ತು ಸತ್ಯನಿಷೇಧವನ್ನು ಕೈಗೊಂಡವರು ತಾಗೂತ್'ನ ಬಂಡುಕೋರ ಮಾರ್ಗದಲ್ಲಿ ಹೋರಾಡುತ್ತಾರೆ. ಆದುದರಿಂದ ನೀವು ಸೈತಾನನ ಸಂಗಡಿಗರ ವಿರುದ್ಧವಾಗಿ ಹೋರಾಡಿರಿ, ಸೈತಾನನ ಕುತಂತ್ರಗಳು ವಾಸ್ತವದಲ್ಲಿ ಬಹಳ ದುರ್ಬಲವೆಂದನ್ನು ಖಾತ್ರಿಯಾಗಿ ತಿಳಿದುಕೊಳ್ಳಿರಿ."



"ನಿಮ್ಮ ಕೈಗಳನ್ನು ತಡೆ ಹಿಡಿದುಕೊಳ್ಳಿರಿ. ನಮಾಝನ್ನು ಸಂಸ್ಥಾಪಿಸಿರಿ ಮತ್ತು ಝಕಾತ್ ಕೊಡಿರಿ" ಎಂದು ಆದೇಶಿಸಲ್ಪಟ್ಟವರನ್ನು ನೀವು ಕಂಡಿರಾ? ಈಗ ಅವರಿಗೆ ಯುದ್ಧದ ಆಜ್ಞೆ ಕೊಡಲ್ಪಟ್ಟಾಗ ಅವರಲ್ಲೊಂದು ಪಂಗಡವು ಅಲ್ಲಾಹನನ್ನು ಭಯ ಪಡಬೇಕಾದ ರೀತಿಯಲ್ಲಿ ಅಥವಾ ಅದಕ್ಕಿಂತಲೂ ತುಸು ಹೆಚ್ಚೆ ಜನರನ್ನು ಭಯ ಪಡುತ್ತದೆ, 'ಪ್ರಭೂ, ನಮ್ಮ ಮೇಲೆ ನೀನೇಕೆ ಯುದ್ಧವನ್ನು ನಿರ್ಬಂಧಗೊಳಿಸಿದೆ? ನಮಗೆ ಇನ್ನೂ ಸ್ವಲ್ಪ ಕಾಲಾವಕಾಶವನ್ನೇಕೆ ಕೊಡಲಿಲ್ಲ?' ಎಂದು ಅವರು ಕೇಳುತ್ತಾರೆ. ಆಗ ಅವರೊಡನೆ ಹೇಳಿರಿ 'ಐಹಿಕ ಜೀವನದಲ್ಲಿ ಬಂಡವಾಳವು ಅತ್ಯಲ್ಪವಾಗಿದೆ ಮತ್ತು ದೇವಭಯವುಳ್ಳವನಿಗೆ ಪರಲೋಕವು ಹೆಚ್ಚು ಉಪಯುಕ್ತವಾಗಿದೆ. ಮತ್ತು ನಿಮ್ಮ ಮುಂದೆ ಕಿಂಚಿತ್ತೂ ಅಕ್ರಮ ನಡೆಯದು."



" ಇನ್ನು ಮರಣವಂತೂ ನೀವೂ ಎಂತಹ ಭದ್ರ ಕೋಟೆಯೊಳಗಿದ್ದರೂ ಸಹ ಬಂದೇ ಬರುವುದು. ಅವರಿಗೇನಾದರೂ ಲಾಭ ಉಂಟಾದರೆ 'ಅದೆ ಅಲ್ಲಹನ ಕಡೆಯಿಂದ' ಎನ್ನುತ್ತಾರೆ. ನಷ್ಟ ಉಂಟಾದರೆ 'ಓ ಪೈಗಂಬರರೆ ಅದು ನಿಮ್ಮಿಂದಾಗಿ ಉಂಟಾಗಿರುತ್ತದೆ'" ( ಸುರಾ ೪/೧೪-೭೮. ಭಾವಾನುವಾದ.)


"ನಿಶ್ಚಯವಾಗಿಯೂ ಭೂಮಿ ಮೇಲೆ ಚಲಿಸುವ ಸೃಷ್ಟಿಗಳನ್ನು ಸತ್ಯವನ್ನು ನಿರಾಕರಿಸುವವರೆ ಅಲ್ಲಾಹನ ಬಳಿ ಅತ್ಯಂತ ನಿಷ್ಕೃಷ್ಟರು. ಅವರು ಎಷ್ಟು ಮಾತ್ರಕ್ಕೂ ವಿಶ್ವಾಸವಿರಿಸುವವರಲ್ಲ"


"ಮುಖ್ಯವಾಗಿ ಅವರ ಪೈಕಿ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರು. ಅವರು ಪ್ರತಿ ಸಲವೂ ಅದನ್ನು ಮುರಿಯುತ್ತಾರೆ ಹಾಗೂ ಸ್ವಲ್ಪವೂ ಅಲ್ಲಾಹನ ಬಗ್ಗೆ ಭಯವಿರಿಸುವುದಿಲ್ಲ. ಅಂತವರು ಯುದ್ಧದಲ್ಲಿ ನಿಮಗೆ ಸೆರೆ ಸಿಕ್ಕಿದರೆ ಮುಂದೆ ಅದೆ ನೀತಿಯನ್ನನುಸರಿಸುವ ಇತರರಿಗೆ ಒಂದು ಪಾಠವಾಗುವ ರೀತಿಯಲ್ಲಿ ತಕ್ಕ ಶಿಕ್ಷೆ ಕೊಡಿರಿ!"


"ನಿಮಗೆಂದಾದರೂ ಯಾವುದಾದರೊಂದು ಜನಾಂಗದಿಂದ ವಂಚನೆಯ ಅಶಂಕೆಯಿದ್ದರೆ ಅದರ ಕರಾರನ್ನು ಅವರ ಮುಂದೆ ಎಸೆದು ಬಿಡಿರಿ. ನಿಶ್ಚಯವಾಗಿಯೂ ಅಲ್ಲಾಹನು ವಂಚಕರನ್ನು ಒಪ್ಪುವುದಿಲ್ಲ ಹಾಗೂ ಮೆಚ್ಚುವುದಿಲ್ಲ"


"ಸತ್ಯನಿಷೇಧಿಗಳ್ಳು ತಾವು ಗೆದ್ದೆವೆಂಬ ಅಪಗ್ರಹಿಕೆಯಲ್ಲಿರುವುದು ಬೇಡ. ಖಂಡಿತವಾಗಿಯೂ ಅವರು ನಿಮ್ಮನ್ನು ಸೋಲಿಸಲಾರರು"



"ನೀವು ನಿಮ್ಮಿಂದ ಸಾಧ್ಯವಾದಷ್ಟು ಹೆಚ್ಚು ಶಕ್ತಿಯನ್ನು ಹಾಗೂ ಸಾಕಿ ಸಿದ್ಧಗೊಳಿಸಿದ ಕುದುರೆಗಳನ್ನು ಅವರೊಡನೆ ಹೋರಾಟ ನಡೆಸಲಿಕ್ಕಾಗಿ ಅಣಿಗೊಳಿಸಿಕೊಳ್ಳಿರಿ. ಅದರ ಮೂಲಕ ಅಲ್ಲಾಹನ ಶತ್ರು, ನಿಮ್ಮ ಶತ್ರು ಮತ್ತು ನಿಮಗೆ ಅರಿವಿಲ್ಲದ ಹಾಗೂ ಅಲ್ಲಾಹನಿಗೆ ಅರಿವಿರುವ ಇತರ ಶತ್ರುಗಳನ್ನು ಭೀತಿಗೊಳಿಸಲಿಕ್ಕಾಗಿ ಅಲ್ಲಾಹನ ಮಾರ್ಗದಲ್ಲಿ ನೀವು ಏನೆಲ್ಲಾ ಖರ್ಚು ಮಾಡುವಿರೋ ಅದರ ಸರ್ವ ಸಂಪೂರ್ಣ ಪ್ರತಿಫಲವನ್ನು ನಿಮಗೆ ಮರಳಿಸಲಾಗುವುದು. ಮತ್ತು ನಿಮ್ಮೊಂದಿಗೆ ಎಷ್ಟು ಮಾತ್ರಕ್ಕೂ ಅನ್ಯಾಯ ಮಾಡಲಾಗದು"


" ಓ ಪೈಗಂಬರರೆ, ಶತ್ರುವು ಶಾಂತಿ ಸಂಧಾನಗಳ ಕಡೆಗೆ ವಾಲಿದರೆ ನೀವೂ ಅದಕ್ಕೆ ಸಿದ್ಧರಾಗಿರಿ ಮತ್ತು ಅಲ್ಲಾಹನ ಮೇಲೆ ಭರವಸೆಯನ್ನಿರಿಸಿರಿ. ನಿಶ್ಚಯವಾಗಿಯೂ ಅವನೆ ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ"



"ಅವರು ವಂಚಿಸಬೇಕೆಂದೆಣೆಸಿದರೆ ನಿಮಗೆ ಅಲ್ಲಾಹ ಸಾಕು. ತನ್ನ ಸಹಾಯ ಹಸ್ತದಿಂದಲೂ, ಸತ್ಯವಿಶ್ವಾಸಿಗಳ ಮೂಲಕವೂ ನಿಮಗೆ ಅವನು ಸಹಕರಿಸಿದವನು, ಸತ್ಯ ವಿಶ್ವಾಸಿಗಳ ಹೃದಯಗಳನ್ನು ಪರಸ್ಪರ ಜೋಡಿಸಿದವನು ಅವನೆ ತಾನೆ?. ನೀವು ಭೂಮಿಯಲ್ಲಿರುವ ಸಕಲ ಸಂಪತ್ತನ್ನು ಖರ್ಚು ಮಾಡಿದರೂ ಅವರ ಹೃದಯಗಳನ್ನು ಜೋಡಿಸಲಾಗುತ್ತಿರಲಿಲ್ಲ. ಇವರ ಹೃದಯಗಳನ್ನು ಜೋಡಿಸಿದ ಆ ಅಲ್ಲಾಹನು ನಿಶ್ಚಯವಾಗಿಯೂ ಧೀಮಂತನೂ, ಪರಮ ಪ್ರತಾಪಿಯೂ ಆಗಿರುತ್ತಾನೆ"


"ಓ ಪೈಗಂಬರರೆ, ಸತ್ಯವಿಶ್ವಾಸಿಗಳನ್ನು ಯುದ್ಧಕ್ಕಾಗಿ ಪ್ರೇರೇಪಿಸಿರಿ. ನಿಮ್ಮಲ್ಲಿ ಇಪ್ಪತ್ತು ಮಂದಿ ಸಹನಶೀಲರಿದ್ದರೆ ಅವರು ಇನ್ನೂರು ಮಂದಿಯ ವಿರುದ್ಧ ಜಯಗಳಿಸುವರು. ಅಂತಹ ನೂರು ಮಂದಿ ಇದ್ದರೆ ಸಾವಿರ ಮಂದಿ ಸತ್ಯ ನಿಷೇಧಿಗಳನ್ನು ಮೀರಿಸಬಲ್ಲರು. ಏಕೆಂದರೆ ಸತ್ಯನಿಷೇಧಿಗಳು ತಿಳಿಗೇಡಿಗಳು"


"ಆಗ ಅಲ್ಲಾಹನು ನಿಮ್ಮ ಭಾರವನ್ನು ಇನ್ನಷ್ಟು ಹಗುರಗೊಳಿಸಿದನು ಹಾಗೂ ನಿಮ್ಮಲ್ಲಿ ಇನ್ನೂ ದೌರ್ಬಲ್ಯವಿರುವುದು ಎಂದು ಅವನಿಗೆ ತಿಳಿಯಿತು. ಆದುದರಿಂದ ನಿಮ್ಮಲ್ಲಿ ನೂರು ಮಂದಿ ಸಹನಶೀಲರಿದ್ದರೆ ಅವರು ಇನ್ನೂರರ ಮೇಲೂ, ಸಾವಿರ ಮಂದಿ ಇದ್ದರೆ ಅವರು ಎರಡು ಸಾವಿರದ ಮೇಲೂ ಅಲ್ಲಾಹನ ಆಜ್ಞೆಯಿಂದ ವಿಜಯಗಳಿಸುವರು" ( ಸುರಾ ೮/ ೫೫-೬೬. ಭಾವಾನುವಾದ.)


"ತಮ್ಮ ಶಪಥಗಳನ್ನು ಮುರಿಯುತ್ತಲೆ ಇದ್ದು ಸಂದೇಶವಾಹಕರನ್ನು ದೇಶದಿಂದ ಹೊರ ಹಾಕಬೇಕೆಂದು ನಿರ್ಧರಿಸಿದ ಮತ್ತು ಅತಿರೇಕವನ್ನಾರಂಭಿಸಿದವರೊಡನೆ ನೀವು ಯುದ್ಧ ಮಾಡುವುದಿಲ್ಲವೆ? ನೀವು ಅವರಿಗೆ ಹೆದರುತ್ತೀರಾ? ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಮ್ಮ ಭಯಕ್ಕೆ ಅಲ್ಲಾಹನೆ ಹೆಚ್ಚು ಅರ್ಹನು ಇನ್ಯಾರೋ ಅಲ್ಲ"



ಅವರೊಡನೆ ಯ್ತುದ್ಧ ಮಾಡಿರಿ. ಅಲ್ಲಹನು ನಿಮ್ಮ ಕೈಗಳಿಂದ ಅವರಿಗೆ ಶಿಕ್ಷೆ ಕೊಡಿಸುವನು. ಅವರನ್ನು ಅವಮಾನಗೊಳಿಸುವನು. ಅವರ ವಿರುದ್ಧ ನಿಮಗೆ ಸಹಾಯ ಮಾಡುವನು. ಅನೇಕ ಸತ್ಯವಿಶ್ವಾಸಿಗಳ ಹೃದಯವನ್ನು ತಣಿಸುವನು"


"ಅವರ ಹೃದಯಗಳ ಬೇಗುದಿಯನ್ನು ಹೋಗಲಾಡಿಸುವನು ಮತ್ತು ತನಗಿಷ್ಟವಿಲ್ಲದವರಿಗೆ ಪಶ್ಚಾತಾಪದ ಅನುಗ್ರಹವನ್ನು ನೀಡುವನು ಅಲ್ಲಾಹ ಸಕಲವನ್ನು ಬಲ್ಲವನೂ ಧೀಮಂತನೂ ಆಗಿರುತ್ತಾನೆ"



"ಓ ಸತ್ಯವಿಶ್ವಾಸಿಗಳೆ, ಬಹುದೇವವಿಶ್ವಾಸಿಗಳು ಅಶುದ್ಧರಾಗಿರುತ್ತಾರೆ. ಆದುದರಿಂದ ಈ ವರ್ಷದ ಬಳಿಕ ಅವರು ಮಸ್ಝಿದ್ ಉಲ್ ಹರಾಮ್'ನ ಬಳಿ ಸುಳಿಯಬಾರದು! ನಿಮಗೆ ದಾರಿದ್ರ್ಯದ ಭಯವಿದ್ದರೆ ಅಲ್ಲಾಹನು ಇಚ್ಛಿಸಿದರೆ ನಿಮ್ಮನ್ನು ತನ್ನ ಅನುಗ್ರಹದಿಂದ ಸಂಪನ್ನಗೊಳಿಸಲೂಬಹುದು. ಅಲ್ಲಾಹ ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುತ್ತಾನೆ."



"ಅಲ್ಲಾಹ ಹಾಗೂ ಅಂತಿಮ ದಿನದ ಮೇಲೆ ವಿಶ್ವಾಸವಿರಿಸದ, ಅಲ್ಲಾಹ ಹಾಗೂ ಅವನ ರಸೂಲರು ನಿಷಿದ್ಧವೆಂದು ಸಾರಿರುವುದನ್ನು ನಿಷೇಧಿಸದ ಮತ್ತು ಸತ್ಯಧರ್ಮವನ್ನು ತಮ್ಮ ಧರ್ಮವನ್ನಾಗಿ ಗ್ರಂಥದವರು ತಮ್ಮ ಕೈಯಿಂದಲೇ ಜಝಿಯಾ ಎಂಬ ರಕ್ಷಣಾ ಕರ ಕೊಟ್ಟು ಅಧೀನರಾಗುವವರೆಗೂ ಅವರೊಡನೆ ಹೋರಾಡಿರಿ" ( ಸುರಾ ೯/೧೩, ಸುರಾ ೨೨/೩೯; ಸುರಾ ೯/೨೮-೩೩ ಖುರ್ಹಾನ್ ಭಾವಾನುವಾದ.)



ಇದು ವಾಸ್ತವದ ಚಿತ್ರಣ. ತನ್ನ ಮನೋಭಿಲಾಷೆ ಹಾಗೂ ತನ್ನ ಆಂತಿರಿಕ ಅವಮಾನ ಹಾಗೂ ದ್ವೇಷದ ಸೇಡು ತೀರಿಕೆಗಾಗಿ ಮಹಮದ್ ಅಲ್ಲಾಹನ ಹೆಸರಿನಲ್ಲಿ ಮೇಲೆ ಉದಹರಿಸಿದ ದೈವವಾಣಿಗಳ ಮೂಲಕ ನವ ಮತಾಂತರಿತ ಮುಸಲ್ಮಾನರನ್ನು ಖುರೈಷಿಗಳ ವಿರುದ್ಧ ಎತ್ತಿಕಟ್ಟಿದ. ಹೀಗೆ ಹೋರಾಟದ ಕುಮ್ಮಕ್ಕಾಗಿ ಕೊಟ್ಟ ಯುದ್ಧದ ಕರೆಯಿಂದ ಅವೆಲ್ಲ ನೇರ ದೈವಿಕ ಆಜ್ಞೆಗಳೆ ಹೊರತು ಮಹಮದನ ಪ್ರಾಪಂಚಿಕ ಆಸೆಗಳ ಪಾತ್ರ ಅವುಗಳಲ್ಲಿ ಏನೇನೂ ಇಲ್ಲ ಎಂದು ನಂಬಿದ ಅವರೆಲ್ಲ ಮಾನಸಿಕವಾಗಿ ಉತ್ತೇಜಿತರಾದರು.



( ಇನ್ನೂ ಇದೆ.)

No comments: