29 October 2015

ವಲಿ - ೧೮







ಕ್ರಿಸ್ತಶಕ ೬೨೪ರ ಮೇ ತಿಂಗಳಿನಲ್ಲಿ ಮಹಮದ್ ಕೆಲವು ಸಣ್ಣಪುಟ್ಟ ಕಾದಾಟಗಳಲ್ಲಿ ಭಾಗವಹಿಸಿದ. ಆದರೆ ಅದರಲ್ಲಿ ಯಾವುವೂ ಸಫಲವಾಗದೆ ಲಾಭದ ಚಿಕ್ಕಾಸು ಸಹ ಹುಟ್ಟಲಿಲ್ಲ. ಖರಝ್'ರಟ್ ಅಲ್ ಖುದರ್'ನ ಬಯಲಿನಲ್ಲಿ ಅರೇಬಿಯಾದ ಪ್ರಬಲ ಘಟಾಫನ್ ಬುಡಕಟ್ಟಿನ ಯೋಧರು ಜಮಾಯಿಸಿರುವ ಸಂಗತಿ ತಿಳಿದು ತನ್ನ ಯುದ್ಧಾಸಕ್ತ ಪಡೆಯನ್ನು ಕರೆದುಕೊಂಡು ಕಾಲು ಕೆರೆದುಕೊಂಡು ಜಗಳ ತೆಗೆಯಲು ಅಲ್ಲಿಗೂ ಮಹಮದ್ ಧಾವಿಸಿದ. ಆದರವರು ಅಲ್ಲಿರಲಿಲ್ಲ. ಅವರು ಮೇಯಲು ಬಿಟ್ಟಿದ್ದ ಐನೂರು ಒಂಟೆಗಳು ಹಾಗೂ ಅವನ್ನ ಕಾಯುತ್ತಿದ್ದ ತರುಗಾಹಿ ಹುಡುಗರನ್ನಷ್ಟೆ ಹೊತ್ತು ಮದೀನಾಕ್ಕೆ ಹಿಂದಿರುಗಬೇಕಾಯಿತು.


ಅದಾಗಿ ಒಂದು ತಿಂಗಳ ನಂತರ ಮುಸಲ್ಮಾನ ಪಡೆ ಸುಲೈಮ್ ಹಾಗೂ ಬಹ್ರಾನ್ ಬುಡಕಟ್ಟಿನವರ ಮೇಲೆ ಧಾಳಿ ಸಂಘಟಿಸಿತು. ಆದರೆ ಯುದ್ಧ ಮಾಡುವಷ್ಟು ಆರ್ಥಿಕ ಚೈತನ್ಯವಿಲ್ಲದ ಆ ಎರಡೂ ಅಲೆಮಾರಿ ಬುಡಕಟ್ಟಿನವರು ಅದರ ಸೂಚನೆಯನ್ನು ಮೊದಲೆ ಅರಿತಿದ್ದು ಬೆಟ್ಟ ಗುಡ್ಡಗಳಲ್ಲಿ ತಲೆ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡರು. ಮೆಕ್ಕಾದ ಖುರೈಷಿಗಳಿಗೆ ಮಾತ್ರ ಆಗಾಗ ಕಿವಿಮುಟ್ಟುತ್ತಿದ್ದ ಮಹಮದನ ಇಂತಹ ಆಕ್ರಮಣದ ಸುದ್ದಿಗಳು ಮುಂದೊಮ್ಮೆ ತಮ್ಮ ಮೇಲೆ ಎರಗಬಹುದಾದ ಬೃಹತ್ ವಿಪತ್ತಿನ ರಂಗ ತಾಲೀಮಿನಂತೆ ಭಾಸವಾಗಿ ಅವರಲ್ಲಿ ಆತಂಕ ಮೂಡತೊಡಗಿತು.


ಅಲ್ಲದೆ ಅರೇಬಿಯಾದ ಪಶ್ಚಿಮ ತೀರಕ್ಕೆ ಸಾಗಬೇಕಾಗಿದ್ದ, ಅಲ್ಲಿಂದ ಹೊರದೇಶಗಳ ಗಡಿ ದಾಟಿ ಅಲ್ಲಿಗೆ ರಫ್ತಾಗಬೇಕಿದ್ದ ಅವರ ಕ್ಯಾರವಾನುಗಳಿಗೆಲ್ಲಾ ಹೆದ್ದಾರಿಯ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಮಹಮದನ ಪಡೆಯ ದೆಸೆಯಿಂದ ಕಂಟಕ ಒದಗಿ ಬಂದಿತ್ತು. ಮದೀನಾಕ್ಕೆ ಸಮೀಪದಲ್ಲಿಯೆ ಸುಳಿದು ಹೋಗ ಬೇಕಾದ ಕ್ಯಾರವಾನುಗಳ ಸುರಕ್ಷತೆ ಹಾಗೂ ತಮ್ಮ ವ್ಯಾಪಾರಿ ಹಿತಾಸಕ್ತಿಗಳ ಕುರಿತು ಅವರೆಲ್ಲಾ ಚಿಂತಿತರಾದರು. ಈ ಸಂಕಟದಿಂದ ಪಾರಾಗಲು ಪೂರ್ವದಿಕ್ಕಿನಿಂದ ಇರಾಖ್ ಮಾರ್ಗವಾಗಿ ಸಾಗಲು ಸಾಧ್ಯವಿದ್ದಿತ್ತಾದರೂ ಮಾರ್ಗ ಮಧ್ಯೆ ವಿಪರೀತ ನೀರಿನ ಕೊರತೆ ಇದ್ದು ಅದು ಕಾರ್ಯ ಸಾಧುವಾಗಿರಲಿಲ್ಲ. ಆದರೂ ಅನಿವಾರ್ಯವಾಗಿ ಅದೆ ದಾರಿಯಲ್ಲಿ ಸಾಗಲು ಅವರು ನಿರ್ಧರಿಸಿ ಅದಕ್ಕಾಗಿ ಜೊತೆಯಲ್ಲಿ ನೀರಿನ ಚರ್ಮದ ಚೀಲಗಳನ್ನ ಹೊತ್ತ ಪ್ರತ್ಯೇಕ ಒಂಟೆಗಳನ್ನ ಕೊಂಡೊಯ್ಯಲು ನಿರ್ಧರಿಸಿದರು. ದಾರಿಯ ಪರಿಚಯ ಅಷ್ಟಾಗಿ ಇಲ್ಲದ್ದರಿಂದ ಆ ದಾರಿಯಾಗಿ ಹೋಗಿ ಬಂದು ದಾರಿಯ ಬಗ್ಗೆ ಅರಿತಿದ್ದ ಒಬ್ಬ ಅರಬ್ಬಿ ಮಾರ್ಗದರ್ಶಿಯನ್ನವರು ಹೊಸತಾಗಿ ನೇಮಿಸಿಕೊಂಡರು.

ಖುರೈಷಿಗಳ ಈ ಉಪಾಯ ಗೂಢಚರರ ಮೂಲಕ ಮಹಮದನ ಕಿವಿ ಮುಟ್ಟಲು ಹೆಚ್ಚು ಸಮಯ ತಗುಲಲಿಲ್ಲ. ಕೂಡಲೆ ಆತ ಕಾರ್ಯಪ್ರವರ್ತನಾದ. ಅವರು ಚಾಪೆ ಕೆಳಗೆ ನುಸುಳಿದರೆ ತಾನು ರಂಗೋಲಿ ಕೆಳಗೆಯೆ ನುಸುಳಲು ಆತ ನಿರ್ಧರಿಸಿದ. ತನ್ನ ನೆಚ್ಚಿನ ಬಂಟ ಝೈದ್'ನನ್ನು ಈ ಕ್ಯಾರವಾನ್ ಮೇಲೆ ಧಾಳಿ ಎಸಗಲು ನೇಮಿಸಿ ಪಡೆಯೊಂದನ್ನು ಅವನೊಂದಿಗೆ ಪೂರ್ವದ ದಾರಿಯತ್ತ ಕಳಿಸಿದ. ನೂರು ಯೋಧರನ್ನ ಹೊಂದಿದ್ದ ಝೈದ್'ನ ಈ ಪಡೆ ಕ್ಯಾರವಾನ್ ಸಾಗುವ ಹಾದಿಯಲ್ಲಿ ಹೊಂಚು ಹಾಕಿ ಕಾದಿದ್ದು ನಿಖರವಾದ ಧಾಳಿ ಸಂಘಟಿಸಿ ಯಶಸ್ವಿಯಾಗಿ ಕೊಳ್ಳೆ ಹೊಡೆದು ಲೂಟಿ ಮಾಡಿದ ಸ್ವತ್ತುಗಳೊಂದಿಗೆ ಕ್ಯಾರವನ್ನನ್ನೆ ಮದೀನದತ್ತ ತಿರುಗಿಸಿತು. ಖುರೈಷಿಗಳು ಓಡಿ ತಪ್ಪಿಸಿಕೊಂಡರಾದರೂ ಅವರ ಸ್ವತ್ತುಗಳೆಲ್ಲಾ ಮುಸಲ್ಮಾನರ ಪಾಲಾಗಿದ್ದವು. ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಸ್ತ್ರಗಳು, ಉಣ್ಣೆ ವಸ್ತುಗಳೊಂದಿಗೆ ಇನ್ನೂ ಅನೇಕ ಬೆಲೆ ಬಾಳುವ ಸ್ವತ್ತುಗಳನ್ನ ವಶಪಡಿಸಿಕೊಳ್ಳಲಾಗಿತ್ತು. ವಾಡಿಕೆಯಂತೆ ಅದರಲ್ಲಿ ಐದನೆ ಒಂದು ಭಾಗವನ್ನ ದೇವರ ಹಾಗೂ ದೇವರ ಪ್ರವಾದಿಯ ಪಾಲಿನ ಹೆಸರಿನಲ್ಲಿ ಮೀಸಲಿರಿಸಿ ಉಳಿದದ್ದನ್ನ ಆ ನೂರು ಮಂದಿಯೂ ಸರಿಸಮವಾಗಿ ಹಂಚಿಕೊಂಡರು. ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತನ್ನ "ಲೈಫ್ ಆಫ್ ಮಹಮದ್" ಕೃತಿಯಲ್ಲಿ ಹೇಳುವ ಪ್ರಕಾರ ಅದು ಅತ್ಯಂತ ಹೆಚ್ಚು ಸಿರಿಯನ್ನ ಕೊಳ್ಳೆ ಹೊಡೆಯಲಾಗಿದ್ದ ಮೊತ್ತ ಮೊದಲ ಪ್ರಕರಣವಾಗಿತ್ತು.



ಮುಂದೆ ಸದ್ಯದ ಭವಿಷ್ಯದಲ್ಲಿ ಮಹಮದ್ ಯಾವುದೆ ದೊಡ್ಡ ಧಾಳಿಗಳನ್ನ ಸಂಘಟಿಸುವತ್ತ ಆಸಕ್ತಿ ತೋರಿಸಲಿಲ್ಲ. ಮುಸಲ್ಮಾನರ ಈ ಧಾಳಿಯ ದೆಸೆಯಿಂದ ಅವರೆಲ್ಲರ ಬಾಳ್ವೆಯಲ್ಲಿ ಚೂರು ಗೆಲುವು ಕಂಡಿತ್ತು. ಆರ್ಥಿಕವಾಗಿ ಅವರ ಬದುಕು ಸುಧಾರಣೆಯ ಹಾದಿಗೆ ಬಂದಿತ್ತು. ಹೀಗಾಗಿ ಅಂತಹ ಲೂಟಿಗೆ ಸದ್ಯೋಭವಿಷ್ಯದಲ್ಲಿ ಇಳಿಯುವ ಅಗತ್ಯ ಅವನಿಗೆ ಕಂಡು ಬರಲಿಲ್ಲ. ಆದರೆ ಈ ಹೊತ್ತಿನಲ್ಲಿ ಮಹಮದ್ ಒಂದು ಭೀಭತ್ಸವಾದ ಹಾಗೂ ಕರುಣಾಜನಕವಾದ ಕ್ರೌರ್ಯಪೂರಿತ ಕೃತ್ಯವನ್ನು ನಡೆಸಿದ. ಕಾಅಬ್ ಇಬ್ನ ಅಶ್ರಫ್ ಎನ್ನುವ ಬೆನ್ ಅನ್ ನದೀರ್ ಯಹೂದಿ ಬುಡಕಟ್ಟಿಗೆ ಸೇರಿದ್ದ ಯುವಕನೊಬ್ಬನ ದುಸ್ಥಿತಿಯ ಕಥೆಯನ್ನ ಇತಿಹಾಸಕಾರ ಅಲ್ ಮುಬಾರಖಿ ಇಲ್ಲಿ ಉಲ್ಲೇಖಿಸುತ್ತಾನೆ. ಆತ ಒಬ್ಬ ಉತ್ತಮ ಕವಿಯಾಗಿದ್ದ ನವ ಮತಾಂತರಿತ ಮುಸಲ್ಮಾನನಾಗಿದ್ದರೂ ಅವನಿಗೆ ಮಹಮದನ ಬಗ್ಗೆ ಅಂತಹ ಸದಾಭಿಪ್ರಾಯವೇನೂ ಇದ್ದಿರಲಿಲ್ಲ. ಮೊದಲು ಮಹಮದನ ನಿಷ್ಠಾವಂತನೆ ಆಗಿದ್ದರೂ ಸಹ ಯಾವಾಗ ಜುರೇಸಲಂನಿಂದ ಮೆಕ್ಕಾದ ಕಡೆಗೆ ಪ್ರಾರ್ಥನೆಯ ದಿಕ್ಕನ್ನ ಬದಲಿಸಲು ಮಹಮದ್ ಆಜ್ಞೆ ನೀಡಿದ್ದನೋ, ಅಂದಿನಿಂದ ಅವನ ಮನಸ್ಸು ಮುರಿದುಹೋಗಿತ್ತು. ಈ ಕರ್ಮಕ್ಕೆ ನಾನ್ಯಾಕೆ ಜಾತಿ ಕೆಡೆಸಿಕೊಂಡು ಕುಲದಿಂದ ಹೊರಗೆ ಹಾಕಿಸಿ ಕೊಳ್ಳಬೇಕಾಗಿತ್ತು? ಎಂದಾತ ಪರಿತಪಿಸಿದ. ಮತಾಂತರವಾದದ್ದಕ್ಕೆ ವ್ಯಥೆಪಟ್ಟ ಆತ ತನ್ನೆಲ್ಲಾ ಸಂಕಟಗಳನ್ನು ಕವನಗಳ ಮೂಲಕ ವ್ಯಕ್ತ ಪಡಿಸಿ ಅವುಗಳನ್ನ ತನ್ನ ಸುಶ್ರಾವ್ಯ ಕಂಠದಲ್ಲಿ ಹಾಡ ತೊಡಗಿದ.



ತಾನು ಮಹಮದನ ಕಣ್ಣು ತಪ್ಪಿಸಿ ಮೆಕ್ಕಾಗೆ ತೆರಳಿ ಅಲ್ಲಿ ಖುರೈಷಿಗಳನ್ನ ಮಹಮದನ ಮೇಲೆ ಯುದ್ಧಕ್ಕಾಗಿ ಪ್ರಚೋದಿಸುವಂತೆ ಹಾಡಿದ. ಗೋಳಿಟ್ಟು ರೋಧಿಸಿದ. ಒಟ್ಟಿನಲ್ಲಿ ಅವರನ್ನು ಮಹಮದನ ವಿರುದ್ಧ ಪ್ರತಿಕಾರ ತೆಗೆದುಕೊಳ್ಳಲು ಉದ್ರೇಕಿಸುವಂತೆ ಹಾಡಿಯೇ ಹಾಡಿದ. ಅಲ್ಲಿಂದ ಮರಳಿ ಧೈರ್ಯವಾಗಿಯೆ ಮದೀನಾಕ್ಕೂ ಬಂದ. ತನ್ನ ಕವಿತ್ವದ ಎಲ್ಲೆಯನ್ನ ಇನ್ನಷ್ಟು ವಿಸ್ತರಿಸಿ ಮುಸಲ್ಮಾನ ಮಹಿಳೆಯರ ದೇಹ ಸೌದರ್ಯವನ್ನೂ ಬಗೆಬಗೆಯಲ್ಲಿ ಬಣ್ಣಿಸಿ ಕವನ ರಚಿಸಿದ. ನವ ಧರ್ಮಾಚರಣೆಯನ್ನ ಬೇಕಂತಲೆ ಕೈ ಬಿಟ್ಟ. ಒಟ್ಟಿನಲ್ಲಿ ಫಕೀರನಂತೆ ತನ್ನ ನೀತಿ ನಿಯಮಗಳಿಗೆ ಬದ್ಧನಾಗಿ ಬಾಳಲು ಆರಂಭಿಸಿದ ಆತ ಮಹಮದನ ಪಾಲಿಗೆ ಮಾತ್ರ ದೊಡ್ಡ ತಲೆ ನೋವಾಗಿ ಬಿಟ್ಟ.



ಇದರಿಂದ ರೊಚ್ಚಿಗೆದ್ದ ಮಹಮದ್ ಇವನನ್ನು ಹೀಗೆ ಮುಂದುವರೆಯಲು ಬಿಡದೆ ಮೊಳಕೆಯಲ್ಲಿಯೆ ಚಿವುಟಿ ಹಾಕಲು ನಿರ್ಧರಿಸಿದ. ಹೀಗೆಯೆ ಬಿಟ್ಟರೆ ತನಗೂ ತನ್ನ ನೂತನ ಧರ್ಮಕ್ಕೂ ಕಂಟಕ ಕಾದಿದೆ ಅಂತನಿಸಿತವನಿಗೆ. ಹೀಗಾಗಿ ಅವನ ಮನೋಭಿಲಾಷೆಯಂತೆ ಒಬ್ಬ ಹಂತಕನನ್ನು ಈ ಕವಿಯನ್ನು ಕೊಲ್ಲಲು ನೇಮಕ ಮಾಡಲಾಯಿತು. ಕಾಕತಾಳೀಯವೆಂಬಂತೆ ಮುಸ್ಲಾಮನೆಂಬುವವನ ಮಗನಾಗಿದ್ದ ಆತನ ಹೆಸರೂ ಸಹ ಮಹಮದನೆಂದೆ ಇತ್ತು! ಆತ ತನ್ನ ನಾಲ್ಕು ಅನುಚರರನ್ನ ಕಟ್ಟಿಕೊಂಡು ಕವಿ ಕಾಅಬನ ಮನೆಯತ್ತ ಹೊರಟ. ವಿಚಿತ್ರ ಗಮನಿಸಿ ಕೊಲ್ಲ ಹೊರಟವನ ಹಾಗೂ ಕೊಲ್ಲ ಕಳಿಸಿದವನ ಹೆಸರು "ಮಹಮದ್" ಹಾಗೂ ಅವರು ಕೊಲ್ಲಲು ಹೊರಟ ವ್ಯಕ್ತಿಯ ಹೆಸರು "ಕಾಅಬ್"!. ಇದು ಮುಂದೊಂದು ದಿನ ನಡೆಯುವ ಐತಿಹಾಸಿಕ ಕಾಬಾ ಸ್ವಾಧೀನದ ಪ್ರಾತ್ಯಕ್ಷಿಕೆಯಂತೆಯೆ ಅನ್ನಿಸುತ್ತದೆ.


ಮೊದಲು ಕಾಅಬ್'ನ ಮಲ ಸಹೋದರ ನೈಲಾನನ್ನವರು ಸರಿಯಾಗಿ 'ವಿಚಾರಿಸಿ'ಕೊಂಡರು. ಅವನನ್ನ ಮುಂದೆ ಬಿಟ್ಟು ಅವನ ಮೂಲಕವೆ ಕಾಅಬ್'ನನ್ನು ಮನೆಯಿಂದ ಹೊರಗೆ ಕರೆಸಿ ತಕ್ಕ ಶಾಸ್ತಿ ಮಾಡುವುದು ಅವರ ಉಪಾಯವಾಗಿತ್ತು. ಅದರಂತೆಯೆ ಸುಸೂತ್ರವಾಗಿ ಉಪಾಯವನ್ನ ಜಾರಿಗೆ ತಂದು ಕಾಅಬ್'ನ ತಲೆಯನ್ನ ಕಡಿದು ಮಹಮದನ ಸನ್ನಿಧಿಗೆ ಅದನ್ನ ಒಪ್ಪಿಸಿ ವಿನೀತರಾಗಿ ನಿಂತರು. ಕಾಅಬ್ ಸಂಪಾದಿಸಿದ್ದ ಆಸ್ತಿಯೆಲ್ಲಾ ಈ ಕೃತ್ಯದ ಮೂಲಕ ನೈಲಾನ ಪಾಲಾಗಿತ್ತು. ಆದರೆ ಈ ಬಗೆಯಲ್ಲಿ ಬೆನ್ನಿಗೆ ಚೂರಿ ಹಾಕಿ ಕಾಅಬ್ ಸಂಪಾದನೆಯನ್ನೆಲ್ಲಾ ಈ ನೈಲಾ ದೋಚಿದ್ದು ಕಾಅಬ್'ನ ಸ್ವಂತ ಸಹೋದರ ಮುಹೈಸಾನಿಗೆ ಸರಿ ಎನ್ನಿಸಲಿಲ್ಲ. ಅದರ ಕುರಿತು ಆಕ್ಷೇಪವನ್ನಾತ ಮಾಡಿದಾಗ ನೈಲಾ "ಮಹಮದನೇನಾದರೂ ಕಾಅಬನ ಬದಲು ನಿನ್ನನ್ನು ಕೊಲ್ಲಲು ತಿಳಿಸಿದ್ದರೂ ಸಹ ನಾನು ಹಿಂಜರಿಯದೆ ಅದನ್ನೆ ಮಾಡುತ್ತಿದ್ದೆ!" ಎಂದಾಗ ಅವನಿಗೆ ದಿಗ್ಭ್ರಮೆಯಾಯಿತು. ಪರಮ ಪುಕ್ಕಲನಾಗಿದ್ದ ಆತ 'ನಿನ್ನ ಹೊಸ ಧರ್ಮದ ಕಥೆ ಇಲ್ಲಿಗೆ ಬಂದು ನಿಂತಿದೆಯ? ಹಾಗಿದ್ದರೆ ಇದೊಂದು ಅದ್ಭುತ ಧರ್ಮವೆ ಸರಿ!" ಅಂದವನೆ ಶರತ್ತಿಲ್ಲದೆ ಮಹಮದನ ಮುಂದೆ ಸಾಗಿ ತಾನೂ ಇಸ್ಲಾಂ ಸ್ವೀಕರಿಸಿದ ಎನ್ನುತ್ತಾರೆ ತಮ್ಮ "ದ ಲೈಫ್ ಆಫ್ ಮಹಮದ್' ಕೃತಿಯ ಇನ್ನೂರಾ ನಲವತ್ತೊಂಬತ್ತನೆಯ ಪುಟದಲ್ಲಿ ಸರ್ ವಿಲಿಯಂ ಮ್ಯೂರ್.


ಯಹೂದಿಗಳು ಕಾಲ ಕ್ರಮೇಣ ಮಹಮದನ ಆಕ್ರಮಣಕಾರಿ ಮನೋಭಾವ ಹಾಗೂ ನಡೆ-ನುಡಿಗಳಿಂದ ಜೀವ ಭಯ ಸಾರುವ ಅನೇಕ ಸಂದರ್ಭಗಳನ್ನು ಎದುರಿಸಬೇಕಾಯಿತು. ಪದೆ ಪದೆ ಮುಸಲ್ಮಾನರಿಂದ ತಮ್ಮ ಬುಡಕಟ್ಟುಗಳ ಮೇಲಾಗುತ್ತಿದ್ದ ಹಿಂಸಾಚಾರಗಳಿಂದ ಅವರೆಲ್ಲಾ ತಲ್ಲಣಿಸಿದರು. ಹೀಗಾಗಿ ಇರುಳಿನ ವೇಳೆ ತಮ್ಮ ಮನೆ ಮಠಗಳಿಂದ ಹೊರ ಬರಲೆ ಅವರೆಲ್ಲಾ ಹೆದರುವಂತಾಯಿತು. ಅಸ್ಮಾ ಹಾಗೂ ಕಾಅಬ್'ನಿಗಾದ ಗತಿ ತಮಗೂ ಬಂದರೂ ಬರ ಬಹುದು ಎನ್ನುವ ಭಯದ ವಾತಾವರಣ ಅವರ ವಸತಿಯನ್ನ ಆಕ್ರಮಿಸಿತು. ಹೀಗಾಗಿ ಇದಕ್ಕೊಂದು ತಡೆ ಒಡ್ದಲು ನಿರ್ಧರಿಸಿದ ಅವರೆಲ್ಲ ನಿಯೋಗ ಒಂದನ್ನು ಕಟ್ಟಿಕೊಂಡು ಮಹಮದನನ್ನು ಭೇಟಿಯಾಗಿ "ಹಿಂದೆ ಮಾಡಿಕೊಂಡಿದ್ದ ಶಾಂತಿ ಒಪ್ಪಂದವನ್ನು ಮುರಿದ್ದಾದರೂ ಏಕೆ? ತಮ್ಮವರಲ್ಲೊಬ್ಬನಾಗಿದ್ದ ಕಾಅಬ್'ನನ್ನು ವ್ಯಥಾ ಹತ್ಯೆ ಮಾಡಬೇಕಿತ್ತೆ?" ಎಂದು ಪ್ರಶ್ನಿಸಿದರು. ಅದಕ್ಕೆ ಮಹಮದ್ "ನನ್ನ ಮೇಲೆ ಕೆಟ್ಟ ಕೆಟ್ಟದಾಗಿ ಇಲ್ಲ ಸಲ್ಲದ್ದನೆಲ್ಲಾ ಕವನವಾಗಿ ರಚಿಸಿ ಹಾಡಿದ್ದಕ್ಕೆ ಕಾಆಬ್'ನನ್ನು ಕೊಲ್ಲಬೇಕಾಯಿತು. ಇನ್ಯಾರಾದರೂ ಅಂತಹ ಧ್ರಾಷ್ಟ್ಯಕ್ಕೆ ಇಳಿದರೆ ಅವರಿಗೂ ಮುಲಾಜಿಲ್ಲದೆ ಅದೆಶಿಕ್ಷೆ ವಿಧಿಸುವುವೆ" ಎಂದು ಉತ್ತರಿಸಿದ. ಅದೆ ಹೊತ್ತಿನಲ್ಲಿ ಕೆಲವು ಶರತ್ತುಗಳೊಡನೆ ಅವರೆಲ್ಲರೊಂದಿಗೆ ಹೊಸ ಶಾಂತಿ ಒಪ್ಪಂದವನ್ನೇನ್ನೋ ಆತ ಏರ್ಪಡಿಸಿಕೊಂಡ ಆದರೆ ಇದರಿಂದ ಯಾಹೂದಿ ಬುಡಕಟ್ಟುಗಳಲ್ಲಿ ನೆಲೆಸಿದ್ದ ಅಭದ್ರತೆ ಹಾಗೂ ಆತಂಕದ ವಾತಾವರಣ ಕರಗಲಿಲ್ಲ.


ಕ್ರಿಸ್ತಶಕ ೬೨೪ರ ನವೆಂಬರ್ ತಿಂಗಳಿನಲ್ಲಿ ಮಹಮದ್ ಮೂರನೆ ಬಾರಿ ಲಗ್ನವಾದ, ಓಮರ್'ನ ಮಗಳು ಹಫ್ಸಾ ಆತನ ನೂತನ ಮಡದಿಯಾಗಿ ಮನೆ ತುಂಬಿದಳು. ವಾಸ್ತವವಾಗಿ ಇಪ್ಪತ್ತು ವರ್ಷ ಪ್ರಾಯದ ಅವಳಿಗೂ ಇದು ಎರಡನೆ ವಿವಾಹವಾಗಿತ್ತು. ಅದೂವರೆಗೂ ಆಕೆ ಖೋನಿಸ್ ಎಂಬಾತನ ವಿಧವೆಯಾಗಿದ್ದಳು. ಖಾಯಿಲೆಯಿಂದ ನರಳಿದ್ದ ಖೋನಿಸ್ ಏಳು ತಿಂಗಳ ಹಿಂದೆ ತೀರಿ ಹೋಗಿದ್ದ. ಈ ಮದುವೆಯ ಕಾರಣ ಅಬು ಬಕರನಂತೆ ಓಮರ್ ಕೂಡಾ ಮಹಮದನ ಆಪ್ತ ವಲಯಕ್ಕೆ ಸೇರಿ ಹೋದ. ಅದಾದ ನಂತರ ಮೊದಲ ಪತ್ನಿ ಖತೀಜಾಳಿಂದ ತಾನು ಪಡೆದಿದ್ದ ಹದಿನೆಂಟು ವರ್ಷದ ಮಗಳು ಫಾತಿಮಾಳನ್ನು ತನ್ನ ದೊಡ್ಡಪ್ಪ ಅಬು ತಾಲೀಬನ ಮಗ ಅಲಿಗೆ ಕೊಟ್ಟು ಮಹಮದ್ ವಿವಾಹ ನಡೆಸಿದ. ಇತಿಹಾಸಕಾರ ಮ್ಯೂರ್ ಬಣ್ಣಿಸುವಂತೆ ಅಲಿ ಒಬ್ಬ "ಸರಳ ಸಾಧು ಹಾಗು ಆಕಾಂಕ್ಷೆಗಳಿಲ್ಲದ" ವ್ಯಕ್ತಿಯಾಗಿದ್ದ. ಮುಂದಿನ ಎರಡು ವರ್ಷಗಳಲ್ಲಿ ಆಕೆ ಎರಡು ಗಂಡು ಮಕ್ಕಳನ್ನು ಹೆತ್ತು ಮಹಮದನ ವಂಶವನ್ನು ಬೆಳೆಸಿದಳು. ಇಸ್ಲಾಮಿನ ಚರಿತ್ರಾರ್ಹ ವ್ಯಕ್ತಿಗಳಾದ 'ಹಸನ್' ಹಾಗೂ 'ಹುಸೈನ್' ಈ ಅಲಿ ಹಾಗೂ ಫಾತಿಮಾ ದಂಪತಿಗಳ ಸುಪುತ್ರರು. ಇವರದ್ದೆ ಸೈಯದ್ ವಂಶವಾಗಿ ಮುಂದೆ ಖ್ಯಾತವಾಯಿತು. ಇವರ ಅನುಯಾಯಿಗಳನ್ನೆ ಇಂದು ಶಿಯಾ ಪಂಥೀಯರು ಎಂದು ಗುರುತಿಸಲಾಗುತ್ತದೆ.


ಕ್ರಿಸ್ತಶಕ ೬೨೫ರಲ್ಲಿ ಮದೀನಾಕ್ಕೆ ವಲಸೆ ಬಂದು ಮಹಮದ್ ಮೂರು ವರ್ಷಗಳನ್ನ ಕಳೆದಾಗಿತ್ತು. ಈಗ ಆತನ ಮೇಲೆ ಖುರೈಷಿ ಪಡೆಗಳ ಪ್ರತಿಕಾರದ ಕಣ್ಣು ಮತ್ತೊಮ್ಮೆ ಬಿತ್ತು. ತಮ್ಮೊಳಗೆ ಯುದ್ಧ ನಿಷ್ಕರ್ಷಿಸಿ ಸ್ಥಳಿಯ ಬೆಂದ್'ನಿ ಬುಡಕಟ್ಟಿನವರೊಂದಿಗೂ ಯುದ್ಧ ಸಂಧಿ ಮಾಡಿಕೊಂಡ ಅವರು ಮೂರು ಸಾವಿರ ಯೋಧರ ಭರ್ಜರಿ ಪಡೆಯನ್ನೆ ಕಟ್ಟಿ ಒಂದು ದೊಡ್ಡ ಕದನದ ಸಿದ್ಧತೆಯಲ್ಲಿಯೆ ಗಂಭೀರವಾಗಿ ತೊಡಗಿದರು. ಹೀಗೆ ಸಿದ್ಧವಾಗಿ ಹೊರಟ ಖುರೈಷಿಗಳ ಪಡೆಯಲ್ಲಿ ಕೇವಲ ಪುರುಷರಷ್ಟೆ ಇಲ್ಲದೆ ಮುಖಂಡ ಅಬು ಸಫ್ಯಾನನ ಇಬ್ಬರು ಹೆಂಡಿರೂ ಸಹ ಹೊರಟಿದ್ದರು. ಹಿಂದ್ ತನ್ನ ತಂದೆಯನ್ನ ಬದರಿನಲ್ಲಿ ಕೊಂದ ಹಂಝಾನ ಹುಟ್ಟಡಗಿಸಲು ಕಾತರಳಾಗಿದ್ದು ಅದಕ್ಕಾಗಿ ಪ್ರತ್ಯೇಕವಾಗಿ ಒಬ್ಬ ಯೋಧನನ್ನು ನೇಮಿಸಿಕೊಂಡಿದ್ದಳು.



ಇವಳಿಂದ ಸ್ಪೂರ್ತಿ ಪಡೆದ ಇನ್ನೂ ಕೆಲವು ಖುರೈಷಿ ಹೆಂಗಸರು ಅವಳ ಮೇಲ್ಪಂಕ್ತಿಯನ್ನು ಅನುಸರಿಸಿ ಪಡೆಯನ್ನ ಹಿಂಬಾಲಿಸಿದರು. ನಗಾರಿ ಬಾರಿಸಿ, ವೀರ ಗೀತೆ ಹಾಡಿ, ಆಶ್ವಾಸನಾ ಪೂರಿತ ವಿಜಯದ ರಣ ಕಹಳೆಯನ್ನ ಮೊಳಗಿಸುತ್ತಾ ಅವರೆಲ್ಲಾ ಯೋಧರನ್ನ ಹುರಿದುಂಬಿಸಿದರು. ಮುಂದೆ ಕದನದಲ್ಲಿ ಗಾಯಗೊಂಡವರ ದೈಹಿಕ ಉಪಚಾರಗಳನ್ನೂ ಈ ಎಲ್ಲಾ ಮಹಿಳಾ ಮಣಿಗಳು ಯುದ್ಧಭೂಮಿಯಲ್ಲಿ ಮಾಡಿದರು. ಬಟ್ಟೆ ಬರೆ ಹೊಲೆದರು. ಅಡುಗೆ ಮಾಡಿ ಬಡಿಸಿದರು. ಗಾಯಾಳುಗಳನ್ನು ಶುಶ್ರೂಷೆ ಮಾಡಿದರು. ಕೆಳ ಬಿದ್ದ ಖುರೈಷಿ ಧ್ವಜವನ್ನ ಎತ್ತಿ ಕಟ್ಟಿದರು. ಹಿಮ್ಮೆಟ್ಟಿ ಹಿಂದೋಡುತ್ತಿದ್ದ ಸೈನಿಕರನ್ನ ಹುರಿದುಂಬಿಸಿ ಮತ್ತೆ ರಣಾಂಗಣಕ್ಕೆ ಅಟ್ಟಿದರು.



ಪಶ್ಚಿಮದ ಸಮುದ್ರ ತೀರದ ಹೆದ್ದಾರಿ ಬಳಸಿ ಸಾಗಿದ ಮೆಕ್ಕಾದ ಈ ಖುರೈಷಿಗಳ ಬೃಹತ್ ಸೈನ್ಯ ಮದೀನಾ ಹೊರ ವಲಯ ಓಹೋದ್ ಎಂಬ ವಿಶಾಲವಾದ ಬಯಲಿನಲ್ಲಿ ಬೀಡು ಬಿಟ್ಟಿತ್ತು. ಅದಕ್ಕಾಗಿ ಅವರು ಹತ್ತು ದಿನಗಳ ಪ್ರಯಾಣ ಮಾಡಿ ದಣಿದಿದ್ದರು. ಬೆಟ್ಟ ಗುಡ್ಡಗಳಿಂದ ಮದೀನಾದ ದಿಕ್ಕಿನತ್ತ ಆಕ್ರಮಣ ಎಸಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಇತ್ತ ಪಶ್ಚಿಮಕ್ಕೆ ಸಿರಿಯಾ ದೇಶಕ್ಕೆ ಸಾಗುವ ಹೆದ್ದಾರಿಯಿದ್ದು ಅಲ್ಲಿಗೂ ಯುದ್ಧವನ್ನ ವಿಸ್ತರಿಸಿದಲ್ಲಿ ಜನನಿಬಿಡವಾಗಿದ್ದ ಆ ಪ್ರದೇಶ ಆತಂಕಕಾರಿಯಾಗಿ ಬದಲಾಗುವ ಸಾಧ್ಯತೆ ಇತ್ತು. ಹೀಗಾಗಿ ಹೇಗಾದರೂ ಸರಿ ಮಹಮದನ ಸೈನ್ಯವನ್ನೆ ಉಪಾಯದಿಂದ ಇಲ್ಲಿಗೆ ಎಳೆದು ತಂದು ಹೋರಾಡಿದಲ್ಲಿ ವಿಜಯ ನಮಗೆ ಕಟ್ಟಿಟ್ಟ ಬುತ್ತಿ ಎಂದು ಅವರೆಲ್ಲಾ ಎಣಿಕೆ ಹಾಕಿದರು.


ಇತ್ತ ಇವರ ಲಗ್ಗೆಯ ಸುದ್ದಿ ಅರಿತ ಮಹಮದ್ ತನ್ನ ಹಿತೈಷಿಗಳೊಂದಿಗೆ ಯುದ್ಧದ ಸಾಧ್ಯಾಸಾಧ್ಯತೆಗಳನ್ನ ಸಮಾಲೋಚಿಸಿದ. ಅವರೆಲ್ಲರ ಅಭಿಪ್ರಾಯ ಒಮ್ಮತದಿಂದ ಕೂಡಿತ್ತು. ನಾವು ನಗರದೊಳಗಡೆಯೆ ಇದ್ದು ಕಾದಾಡುವುದು ಕ್ಷೇಮ. ಒಂದುವೇಳೆ ಖುರೈಷಿಗಳೇನಾದರೂ ಇಲ್ಲಿಗೆ ದಾಳಿ ಇಟ್ಟರೆ ಸುಲಭವಾಗಿ ಅವರನ್ನ ಮಣಿಸಬಹುದು ಎಂದರು ಅವರೆಲ್ಲಾ. ರಕ್ಷಣೆಯ ದೃಷ್ಟಿಯಿಂದ ಇದು ನಿಜವೂ ಆಗಿತ್ತು. ಅಲ್ಲದೆ ಅಸಂಖ್ಯವಾಗಿರುವಂತೆ ಕಾಣಿಸುವ ಅವರ ಬೆನ್ನಟ್ಟಿ ಹೋದಲ್ಲಿ ನಷ್ಟ ನಮಗೆ ಹೊರತು ಅವರಿಗಲ್ಲ ಎನ್ನುವ ಹಿತನುಡಿಯನ್ನೂ ಕೆಲವರು ಹೇಳಿದರು. ಆದರೆ ಅವರ ಈ ನಿಲುವು ಕೆಲವು ಯುವಕರಿಗೆ ಸರಿಬರಲಿಲ್ಲ. ಹಾಗೊಂದು ವೇಳೆ ಶತ್ರುವನ್ನ ನಾವೆ ಹೇಡಿಗಳಂತೆ ಕಾದು ಕುಳಿತುಕೊಂಡರೆ ಇಡಿ ಅರೇಬಿಯಾವೆ ತಮ್ಮನ್ನ ಹೀಯ್ಯಾಳಿಸಿಕೊಂಡು ಗಹಗಹಿಸುತ್ತದೆ ಎಂದವರು ಮಹಮದನಿಗೆ ಎಚ್ಚರಿಸಿದರು. ಜೊತೆಗೆ ಇದರಿಂದ ವೈರಿಗಳ ಹುಮ್ಮಸ್ಸು ಗರಿಗೆದರಿ ತಮ್ಮ ಮೇಲೆ ಇನ್ನೂ ಹೆಚ್ಚಿನ ಶೌರ್ಯದಿಂದ ಎರಗಿ ಆಕ್ರಮಿಸಿ ಅಪರಿಮಿತ ಹಿಂಸೆಗೆ ಗುರಿ ಮಾಡಬಹುದು ಎಂದವರು ಅಭಿಪ್ರಾಯ ಪಟ್ಟರು. ಅವರ ಅಭಿಪ್ರಾಯವನ್ನು ಮನ್ನಿಸಿದ ಮಹಮದ್ ಸ್ವತಃ ತಾನೆ ಶಸ್ತ್ರಾಸ್ತ್ರ ಹಿಡಿದು ಪಡೆಯನ್ನ ಹುರಿದುಂಬಿಸುತ್ತಾ ಓಹೋದ್'ನ ಹಾದಿ ಹಿಡಿದ.




ಬದಲಾದ ತನ್ನ ನಿಲುವಿನ ಅನುಸಾರ ಆತ ಅಬ್ದುಲ್ಲಾನ ಯಹೂದಿ ಪಡೆಯ ಸಹಕಾರವನ್ನು ನಿರಾಕರಿಸಿದ. ಯಾರು ತನ್ನ ಮತ ಸ್ವೀಕರಿಸಲಿಲ್ಲವೋ, ನನ್ನ ಮತಭಾಂಧವರಾಗಿಲ್ಲವೋ ಅಂತವರ ಸಹಾಯದಿಂದ ಅವಿಶ್ವಾಸಿಗಳ ಮೇಲೆ ಹೋರಾಡುವುದು ಬೇಕಾಗಿಲ್ಲ ಎಂದಾತ ಸ್ಪಷ್ಟವಾಗಿ ತಿಳಿಸಿದ. ಇತ್ತ ಯುದ್ಧರಂಗದಲ್ಲಿ ಮುಸಲ್ಮಾನರ ಹಾಗೂ ಖುರೈಷಿಗಳ ಪಡೆಗಳು ಬೀಡು ಬಿಟ್ಟ ಸ್ಥಳದ ಮಧ್ಯೆ ಇದ್ದ ಒಂದು ಬೆಟ್ಟ ಅವೆರಡನ್ನೂ ನೈಸರ್ಗಿಕವಾಗಿ ಬೇರ್ಪಡಿಸಿದ್ದವು. ಮಾರನೆ ದಿನ ಖುರೈಷಿ ಪಡೆ ಬೆಟ್ಟಗುಡ್ದಗಳಿಂದ ಆವರಿಸಿದ್ದ ನಡುವಿನ ಕಣಿವೆಗಳಲ್ಲಿ ಸಾಗಿತು. ಓಹೋದ್ ಹಾಗೂ ಮದೀನಾದ ನಡುವಿನ ಅಂತರ ಕೇವಲ ಮೂರು ಮೈಲಿಯದ್ದಾಗಿತ್ತು. ಅದು ಇಳಿಜಾರಾಗಿದ್ದ ಒಂದು ಬೆಟ್ಟ ಆವೃತ್ತ ಪ್ರದೇಶವಾಗಿತ್ತು. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ಆದರೆ ಇನ್ನಿತರ ಕಾಲದಲ್ಲಿ ಕೇವಲ ಕಲ್ಲು ತುಂಬಿ ಬರಡಾಗಿರುವ ಒಂದು ನದಿ ಪಾತ್ರದಲ್ಲಿ ಮಹಮದನ ಪಡೆ ಬೀಡು ಬಿಟ್ಟದ್ದನ್ನವರು ಕಂಡರು.



( ಇನ್ನೂ ಇದೆ.)

No comments: