24 October 2015

ವಲಿ - ೧೫







ಕ್ಯಾರವಾನ್ ಲೂಟಿಯನ್ನೆ ಮೂಲಮಂತ್ರ ಮಾಡಿಕೊಂಡ ಮಹಮದನ ದಂಡಯಾತ್ರೆಗಳು ಕ್ರಮೇಣ ಹೆಚ್ಚಿದವು. ಇಂತಹ ಚುರುಕಿನ ಕೊಳ್ಳೆ ಸಂಗ್ರಹದ ಸಂದರ್ಭದಲ್ಲಿಯೆ ಮೆಕ್ಕಾದ ಖುರೈಷಿ ಮುಖಂಡ ಅಬು ಸಫ್ಯಾನನ ಭರ್ಜರಿ ಕ್ಯಾರವಾನ್ ಒಂದು ದೂರದ ಸಿರಿಯಾದವರೆಗೆ ಸಾಗಿ ಲಾಭದಾಯಕವಾದ ವ್ಯಾಪಾರ ಮಾಡಿಕೊಂಡು, ಬೆಲೆಬಾಳುವ ಸ್ವತ್ತುಗಳೊಡನೆ ಮೆಕ್ಕಾಕ್ಕೆ ಮರಳಿ ಬರುತ್ತಿರುವ ಸಂಗತಿ ತನ್ನ ಗೂಡಚರರಿಂದ ಮಹಮದನಿಗೆ ತಿಳಿಯಿತು. ಕ್ಷಣವೂ ತಡ ಮಾಡದೆ ಆತ ಕಾರ್ಯಪ್ರವರ್ತನಾದ. ಕೂಡಲೆ ಸಿರಿಯಾದಿಂದ ಮೆಕ್ಕಾ ನಡುವಿನ ಹೆದ್ದಾರಿಯ ಎಲ್ಲಾ ಇನ್ನಿತರ ಬುಡಕಟ್ಟಿನ ಮುಖಂಡರೊಂದಿಗೆ ಸಂಧಿ ಮಾಡಿಕೊಂಡ. ಅದರ ಪ್ರಕಾರ ಅವರು ಈ ಇಬ್ಬರ ನಡುವಿನ ಹೋರಾಟದಲ್ಲಿ ತಟಸ್ಥರಾಗಿ ಉಳಿಯುವ ನಿರ್ಧಾರ ತಳೆಯಬೇಕಿತ್ತು. ಈ ನಡುವೆ ಈ ಸಂಧಿ, ಕುತಂತ್ರ ಹಾಗೂ ಆಕ್ರಮಣದ ಸುದ್ದಿ ತನ್ನ ಗೂಢಚರರ ಮೂಲಕ ಅಬು ಸಫ್ಯಾನನಿಗೂ ತಿಳಿಯಿತು. ಆತ ತಕ್ಷಣ ಮೆಕ್ಕಾದ ತನ್ನ ಬಂಧುಗಳಿಗೆ ಸುದ್ದಿ ರವಾನಿಸಿ ತನ್ನ ಹಾಗೂ ಕ್ಯಾರವಾನಿನ ರಕ್ಷಣೆಗೆ ಒಂದು ಸೈನಿಕ ಪಡೆಯನ್ನ ರವಾನಿಸುವಂತೆ ಕೋರಿಕೆ ಸಲ್ಲಿಸಿದ.


ಇತ್ತ ಮಹಮದ ತನ್ನ ಅನುಯಾಯಿಗಳ ಸಭೆ ಕರೆದು. ತನಗೆ ಅಬು ಸಫ್ಯಾನನ ಕ್ಯಾರವಾನ್ ಕೊಳ್ಳೆ ಹೊಡೆಯಲು ದೈವಾನುಮತಿ ಸಿಕ್ಕಿದೆ ಎಂದು ಸಾರಿದ. ಅವನ ಉತ್ತೇಜನದ ಹುರಿದುಂಬಿಸುವ ಮಾತುಗಳು ಅವರೆಲ್ಲರ ರಣೋತ್ಸಾಹವನ್ನು ಹೆಚ್ಚಿಸಿದವು. ಅರಬ್ಬರ ರಕ್ತದಲ್ಲಿಯೆ ಕೊಳ್ಳೆ ಹೊಡೆಯುವ ಹಾಗೂ ಹೋರಾಡುವ ಗುಣವಿದ್ದು ಅದು ಸಹಜವಾಗಿ ಮದೀನದ ವಾಸಿಗಳಿಗೂ ಇದ್ದೇ ಇತ್ತು. ಅವರೆಲ್ಲಾ ತಮ್ಮ ಬುಡಕಟ್ಟಿನ ರೀತಿ ರಿವಾಜಿನಂತೆ ಹೋರಾಟಕ್ಕೆ ಜಾತಕ ಪಕ್ಷಿಗಳಂತೆ ಕಾಯ ತೊಡಗಿದರು. ಹೀಗಾಗಿ ಆತನ ಪಡೆಯಲ್ಲಿ ನವ ಮುಸಲ್ಮಾನರಾಗದಿದ್ದವರೂ ಸಹ ಸೇರಲು ಅತೀವ ಆಸೆ ಪಟ್ಟರು. ಆದರೆ ಮಹಮದ್ ಹುಷಾರಾಗಿ ಕೇವಲ ತನ್ನ ಕುಲ ಬಾಂಧವರಿಗಷ್ಟೆ ತನ್ನ ಪಡೆಯಲ್ಲಿ ಜಾಗ ನೀಡಿದ. ತನ್ನ ನೂತನ ಮತಾಅವಲಂಭಿಗಳಿಗೆ ಮಾತ್ರ ಈ ದೈವವಾಣಿ ಅನ್ವಯಿಸುತ್ತದೆ ಎಂದು ಘೋಷಿಸಿದ. ಆ ದೈವವಾಣಿ ೮/೧-೭೩ರ ಮೂಲಕ ಮಹಮದನಿಗೆ ಅಲ್ಲಾಹನ ಲೂಟಿಯ ಆಜ್ಞೆಯಾಗಿ ಸಿಕ್ಕಿತು.


ಕ್ರಿಸ್ತಶಕ ೬೩೨ರ ಜನವರಿ ೮ ರಂದು ಮಹಮದನ ಪಡೆ ಮದೀನಾದಿಂದ ಯುದ್ಧ ರಂಗಕ್ಕೆ ಹೊರಟಿತು. ಇತಿಹಾಸಕಾರ ವಿಲಿಯಂ ಮ್ಯೂರನ ಪ್ರಕಾರ ಆದರಲ್ಲಿ ಮುನ್ನೂರ ಐದು ಮಂದಿ ಯೋಧರಿದ್ದರು. ಎರಡು ದಿನಗಳ ನಿರಂತರ ನಡುಗೆಯ ನಂತರ ಬದರ್ ಎನ್ನುವ ಸ್ಥಳದಲ್ಲಿ ಈ ಪಡೆ ತಂಗಿತು. ಇತ್ತ ಅಬು ಸಫ್ಯಾನನೂ ಅದೆ ಹಾದಿಯಾಗಿ ಬದರ್ ಮೂಲಕ ಬರುವಾಗ ಅವನಿಗೆ ಮಹಮದನ ಪಡೆ ತನ್ನ ಕ್ಯಾರವಾನನ್ನೆ ನಿರೀಕ್ಷಿಸುತ್ತಾ ಠಿಕಾಣಿ ಹೂಡಿರುವ ವಿಷಯ ತಿಳಿಯಿತು. ಅವನು ಚಾಣಾಕ್ಷತೆಯಿಂದ ಹೆದ್ದಾರಿ ಮಾರ್ಗವಾಗಿ ಸಾಗದೆ ಬದರ್ ಸುತ್ತುವರೆದು ಇನ್ನೊಂದು ಅಡ್ಡ ದಾರಿಯ ಮೂಲಕ ಮೆಕ್ಕಾದತ್ತ ಚಲಿಸಿದ. ಈ ನಡುವೆ ಆತನ ಬೇಹುಗಾರ ಮೊದಲೆ ಮೆಕ್ಕಾ ಮುಟ್ಟಿ ಮಹಮದನ ಆಕ್ರಮಣದ ಸುದ್ದಿಯನ್ನ ಅಲ್ಲಿನವರಿಗೆ ಅರುಹಿದ್ದರಿಂದ ಅಲ್ಲಿನವರು ಯುದ್ಧ ಸನ್ನದ್ಧರಾಗಿ ನಿಂತರು.



ತಾವು ರಕ್ತ ಬಸಿದು ಬೆವರಾಗಿ ಹರಿಸಿ ಕಷ್ಟದಲ್ಲಿ ಸಂಪಾದಿಸಿ ತಂದ ಸೊತ್ತನ್ನ ಹೀಗೆ ಕ್ಷಣಾರ್ಧದಲ್ಲಿ ಹದ್ದಿನಂತೆ ಮೇಲೆರಗಿ ಬಂದು ಕಿಂಚಿತ್ತೂ ದ್ರವ್ಯ ಸಾಮಗ್ರಿಗಳನ್ನ ಬಿಡದೆ ಮಹಮದ್ ಲೂಟಿ ಮಾಡಿಕೊಂಡು ಹೋಗುವುದು ಅವರ ಪಾಲಿಗೆ ಸಹಿಸಲಿಕ್ಕೆ ಅಸಾಧ್ಯವಾಗಿತ್ತು. ಹೀಗಾಗಿ ಈ ಸಾರಿ ನಿರ್ಣಾಯಕವಾಗಿ ಅವನ ಉಪಟಳಕ್ಕೊಂದು ಅಂತ್ಯ ಕಾಣಿಸಲು ಅವರೆಲ್ಲಾ ನಿರ್ಧರಿಸಿದರು. ಊರಿನ ಪ್ರತಿಯೊಬ್ಬ ಖುರೈಷಿ ಯುವಕನೂ ಶಸ್ತ್ರ ಸನ್ನದ್ಧನಾಗಿ ಹೊರಟ. ಯಾರು ವಯೋವೃದ್ಧರಾಗಿ ಅಸಹಾಯಕರಾಗಿದ್ದರೋ ಅವರು ತಮ್ಮ ಪರವಾಗಿ ಇನ್ನೊಬ್ಬರನ್ನ ನೇಮಿಸಿದರು. ಹೀಗೆ ಮೆಕ್ಕಾದಲ್ಲೆ ಉಳಿದರೂ ಸಹ ತನ್ನ ಪರವಾಗಿ ಯೋಧನನ್ನ ನೇಮಿಸಿ ಕಳಿಸಿದ್ದವರಲ್ಲಿ ಮಹಮದನ ದೊಡ್ಡಪ್ಪ ಅಬು ಲೆಹಾಬ್ ಸಹಿತ ಸೇರಿದ್ದ.



ಆದರೆ ತಾವು ಇನ್ನೂ ಹೊರಡುವ ಮೊದಲೆ ಆಬು ಸಫ್ಯಾನ ಅಡ್ಡ ದಾರಿಯ ಮೂಲಕ ಮೆಕ್ಕಾದತ್ತ ಚಲಿಸುತ್ತಿರುವ ಇನ್ನೊಂದು ಸುದ್ದಿ ಅವರಿಗೆ ಬಂದು ಮುಟ್ಟಿತು. ಹೀಗಾಗಿ ತಾವು ವ್ಯಥಾ ಮಹಮದನ ಮುಂದೆ ಹೋಗಿ ಕಾಳಗ ಜರುಗಿಸಬೇಕೆ? ಅಥವಾ ಅರ್ಧ ದಾರಿಯಿಂದ ಹಿಂದುರುಗಿ ಹೋಗೋಣವೆ? ಎನ್ನುವ ಜಿಜ್ಞಾಸೆಯಲ್ಲವರು ತೊಡಗಿದರು. ಅವರಲ್ಲಿ ಹಿರಿಯರು ಮಹಮದ್ ಹಾಗೂ ಅವನ ಜೊತೆಯಲ್ಲಿರುವ ಎಲ್ಲರೂ ತಮ್ಮ ಖುರೈಷಿ ಬುಡಕಟ್ಟಿನವರೆ ತಾನೆ? ನಾವೇ ನಮ್ಮವರನ್ನ ಅದೇಕೆ ಹಿಂಸಿಸಿ ಸಂತೋಷ ಪಡೋದು! ಎನ್ನುವ ವಾದ ಹೂಡಿದರು. ಆದರೆ ಬಿಸಿರಕ್ತದ ಯುವಕರಿಗೆ ಈ ವಿತಂಡವಾದ ಸಮ್ಮತವಾಗಿರಲಿಲ್ಲ. ಕಾರಣವಿಲ್ಲದೆ ಕಾಲು ಕೆರೆದುಕೊಂಡು ಬರುವುದನ್ನೆ ಪ್ರವೃತ್ತಿ ಮಾಡಿಕೊಂಡಿರುವ ಮಹಮದನ ಹುಟ್ಟಡಗಿಸಬೇಕೆಂದು ಅವರೆಲ್ಲಾ ವಾದಿಸಿದರು. ಅವನು ಹೀಗೆಲ್ಲ ಸಿರಿವಂತಿಕೆಯನ್ನ ಅಕ್ರಮವಾಗಿ ಗಳಿಸಿ ಬಲವಂತನಾಗುವ ಮುನ್ನವೆ ಮಟ್ಟ ಹಾಕುವುದೆ ಸರಿ ಎನ್ನುವ ನಿರ್ಧಾರಕ್ಕೆ ಬರಲಾಯಿತು. ಹೀಗಾಗಿ ಪಡೆ ಯುದ್ಧಾಗಂಣಕ್ಕೆ ಮುನ್ನಡೆಯಿತು. ಇತ್ತ ಅಬು ಸಫ್ಯಾನ್ ಸುರಕ್ಷಿತವಾಗಿ ಮೆಕ್ಕಾ ಮುಟ್ಟಿ ಆಗಿತ್ತು!



ಮಹಮದ್ ಬದರ್ ಬಂದ ದಿನದಲ್ಲಿಯೆ ಆತನಿಗೆ ತನ್ನ ಗುರಿ ತಪ್ಪಿರುವುದು ಅರಿವಿಗೆ ಬಂತು. ಸಾಲದ್ದಕ್ಕೆ ಖುರೈಷಿಗಳ ಪಡೆಯನ್ನ ಎದುರಿಸುವ ಅನಿವಾರ್ಯತೆ ಬೇರೆ ಸೃಷ್ಟಿಯಾಗಿತ್ತು. ಈ ಆಪತ್ತಿನ ಕ್ಷಣದಲ್ಲಿಯೂ ಆತ ಧೃತಿ ಗೆಡಲಿಲ್ಲ. ತನ್ನ ಹಿತೈಷಿಗಳೂ ಹಾಗೂ ಅತ್ಯಾಪ್ತರೂ ಆಗಿದ್ದ ಅಬು ಬಕರ್ ಹಾಗೂ ಉಮರ್'ನೊಡನೆ ಖಾಸಗಿಯಾಗಿ ಚರ್ಚಿಸಿದನಾತ. ಯುದ್ಧ ಬೇಕೆ? ಬೇಡವೆ? ಅನ್ನುವ ಅವನ ಅಂತರಂಗದ ಪ್ರಶ್ನೆಗೆ ಅವರಿಬ್ಬರೂ ಸಮ್ಮತಿ ಸೂಚಕವಾಗಿಯೆ ತಲೆ ಆಡಿಸಿದರು. ಖುರೈಷಿಗಳಿಂದ ಧರ್ಮಾಂತರವಾದ ಕಾರಣಕ್ಕೆ ತಮಗಾದ ಅವಮಾನ ಹಾಗೂ ಗಡಿಪಾರಿನ ಕುರಿತು ಅವರೊಳಗೂ ದ್ವೇಷಾಸೂಯೆ ಹೊಗೆಯಾಡುತ್ತಿದ್ದು ಸೂಕ್ತ ಪ್ರತಿಕಾರ ಜರುಗಿಸುವ ಆಸೆ ಅವರಿಗೂ ಸಹ ಇತ್ತು.


ಹೀಗಾಗಿ ಮಹಮದ್ ಯುದ್ಧದತ್ತ ಚಿತ್ತ ನೆಟ್ಟ. ಅದನ್ನ ದೇವರ ಹೆಸರಿನಲ್ಲಿ ಅಧಿಕೃತಗೊಳಿಸಲು ಉತ್ತೇಜನದ ನುಡಿಗಳೊಂದಿಗೆ ಯುದ್ಧವನ್ನ ತನ್ನ ಪಡೆಯ ಮುಂದೆ ಸಾರಿದ. 'ದೇವರ ದಯದಿಂದ ಮುನ್ನುಗ್ಗಿರಿ. ದೇವರು ಎರಡರಲ್ಲಿ ಒಂದನ್ನು ನಿಮಗೆ ನೀಡಲು ಆಶ್ವಾಸನೆ ನೀಡಿರುತ್ತಾನೆ. ಆತ ಸೈನ್ಯ ಅಥವಾ ಕ್ಯಾರವಾನನ್ನು ನನ್ನ ಕೈಗೆ ನೀಡುವನು!. ಓ ದೇವರೆ! ರಣರಂಗದಲ್ಲಿ ಹರಡಿರುವ ಹೆಣಗಳ ದೃಶ್ಯವನ್ನು ನಾನು ನೋಡುತ್ತಿರುವ ಹಾಗೆ ಕಾಣುತ್ತಿದೆ!' ಎಂದು ಉತ್ಸಾಹ ಹೆಚ್ಚಿಸುವ ನುಡಿಗಳನ್ನೆ ಆತ ನುಡಿದ. ಮಹಮದ್ ತನ್ನ ಶತ್ರು ಸೈನ್ಯದ ಸಂಖ್ಯಾಬಲ, ಅವರ ಶಸ್ತ್ರ ಶಕ್ತಿಯ ಮಾಹಿತಿ ಹಾಗೂ ಇನ್ನಿತರ ಸರಂಜಾಮಿನ ವಿವರಗಳನ್ನ ಬೇಹುಗಾರರಿಂದ ಕೇಳಿ ಅರಿತ. ತನ್ನ ಸೈನ್ಯದ ಸುರಕ್ಷಿತ ಠಿಕಾಣಿಗೆ ಸೂಕ್ತ ಸ್ಥಳವನ್ನ ಅರಸಲು ಅಲಿಯನ್ನ ಕಳುಹಿಸಿದ.


ಇತಿಹಾಸಕಾರ ರೊನಾಲ್ಡ್ ಬ್ರಾಡ್'ಹಾರ್ಸ್ಟ್ ತನ್ನ ಕೃತಿ 'ದ ಟ್ರಾವೆಲ್ಸ್ ಆಫ್ ಇಬ್ನ್'ನಲ್ಲಿ ಹೇಳುವಂತೆ ಬದರ್ ಒಂದು ಬಯಲು ಪ್ರದೇಶವಾಗಿತ್ತು. ಸುತ್ತಲೂ ಬೆಟ್ಟಗುಡ್ಡಗಳು ಆವರಿಸಿದ್ದವು. ಪುಟ್ಟ ನೀರಿನ ಝರಿಯೊಂದು ಪೂರ್ವ ದಿಕ್ಕಿನ ಕಡೆಯಿಂದ ಇಳಿದು ಬಯಲಿನತ್ತ ಹರಿದು ಸಾಗುತ್ತಿತ್ತು. ಸಾಗುವ ಹಾದಿಯಲ್ಲಿ ಅದು ಅನೇಕ ನೀರಿನ ಬುಗ್ಗೆ ಹಾಗೂ ಹೊಂಡಗಳನ್ನ ಅಲ್ಲಲ್ಲಿ ಉಂಟು ಮಾಡುತ್ತಲಿತ್ತು. ಮೊದಲಿಗೆ ಮಹಮದ್ ಅಂತಹ ಒಂದು ನೀರಿನ ಬುಗ್ಗೆಯ ಬಳಿಯೆ ತನ್ನ ಸೈನ್ಯದೊಂದಿಗೆ ಬೀಡು ಬಿಟ್ಟಿದ್ದ. ಆದರೆ ಆ ಪ್ರದೇಶದ ಸಂಪೂರ್ಣ ಪರಿಚಯವಿದ್ದ ಮಹಮದನ ಅನುಚರ ಅಲ್ ಹೊಬಾಬ್ ಈ ಝರಿಯ ಮುಖವನ್ನು ಹಿಡಿದು ಬೆಟ್ಟದಾಚೆ ಹೊರಟರೆ ಅಲ್ಲಿ ಸಮೃದ್ಧವಾದ ನೀರಿನ ಆಸರೆ ಇದೆಯೆಂದೂ, ಅಲ್ಲಿಗೆ ಹೋದರೆ ಸೈನ್ಯದ ಸಕಲ ಅಗತ್ಯಗಳಿಗೂ ಅಗತ್ಯವಾದಷ್ಟು ನೀರು ಸಿಕ್ಕಬಹುದೆಂದು ಮಾಹಿತಿ ನೀಡಿದ. ಅವನ ಅ ಸಲಹೆಯಂತೆ ಮುಂದೆ ಸಾಗಲು ಸಮ್ಮತಿಸಿದ ಮಹಮದ್. ಈ ಕೆಳಗಿನ ಬುಗ್ಗೆಗಳು ಹಾಗೂ ನೀರಿನ ಹೊಂಡಗಳು ಖುರೈಷಿಗಳ ಉಪಯೋಗಕ್ಕೆ ಸಿಗದಿರಲಿ ಎನ್ನುವ ಉದ್ದೇಶದಿಂದ ಅವುಗಳನ್ನೆಲ್ಲಾ ಮರಳು ತುಂಬಿಸಿ ಮುಚ್ಚಿಸಿದ. ಅನಂತರ ಸೈನ್ಯ ಮುಂದೆ ಎತ್ತರಕ್ಕೆ ಪ್ರಯಾಣ ಬೆಳಸಿತು.



ಅಲ್ಲಿ ಬಂಟ ತಿಳಿಸಿದ ಹಾಗೆ ಅಪಾರ ನೀರಿನ ಖಜಾನೆಯಿದ್ದ ಝರಿಯ ಮೂಲ ಸಿಕ್ಕಿತು. ಸಂಪ್ರೀತನಾದ ಮಹಮದ್ ಅಲ್ಲಿಯೆ ಠಿಕಾಣಿ ಹೂಡಿದ. ಅವನಿಗೋಸ್ಕರ ಖರ್ಜೂರದ ಗರಿಗಳಿಂದ ಅನುಯಾಯಿಗಳು ತತ್ಕಾಲಿಕವಾದ ಗುಡಿಸಲೊಂದನ್ನ ನಿರ್ಮಿಸಿದರು. ರಾತ್ರಿಯಾಗುತ್ತಿದ್ದಂತೆ ಬಲವಾದ ಕಾವಲನ್ನೂ ಸಹ ಒದಗಿಸಿದರು. ಎರಡು ದಿನಗಳ ನಿರಂತರ ನಡುಗೆಯ ಆಯಾಸ ಬೇರೆ ಆಗಿತ್ತು, ಆ ರಾತ್ರಿ ಬಾನು ಕಪ್ಪಾಗಿ ಒಳ್ಳೆಯ ಮಳೆ ಸುರಿಯಿತು ಈ ತಂಪಿನ ನಡುವೆಯೂ ದೇಹಾಯಾಸದ ದೆಸೆಯಿಂದ ಅವರೆಲ್ಲ ಗಾಢವಾಗಿ ಮಲಗಿ ನಿದ್ರಿಸಿ ವಿಶ್ರಾಂತಿ ತೆಗೆದುಕೊಂಡರು.


ಇತ್ತ ಮೊದಲಿನ ಜಿಜ್ಞಾಸೆಯ ಮೇಲೆ ಯುದ್ಧ ಬೇಕೋ? ಬೇಡವೋ? ಎನ್ನುವ ಒಡಕು ನಾದ ಖುರೈಷಿಗಳ ಪಡೆಯಲ್ಲಿಯೂ ಸಹ ಆ ಒಡಕನ್ನ ವಿಸ್ತರಿಸಿತ್ತು. ಹಿರಿಯರು ಕೆಲವರು ಎಷ್ಟಾದರೂ ಆತ ನಮ್ಮ ಬುಡಕಟ್ಟಿನವನೆ, ವ್ಯಥಾ ರಕ್ತಪಾತವೇಕೆ? ನಾವು ಮರಳಿ ಮೆಕ್ಕಾ ಸೇರಿಕೊಳ್ಳೋಣ ಎನ್ನುವ ವಾದವನ್ನ ಹೂಡಿದರು. ಅವರ ಈ ವಾದಕ್ಕೆ ಸಮ್ಮತಿ ಸೂಚಿಸಿದವ ತರುಣ ಓಮೈರ್ ಮಾತ್ರ. ಅಪ್ರತಿಮ ಬಿಲ್ಲುಗಾರನಾಗಿದ್ದ ಆತ ಮಾರುವೇಷದಲ್ಲಿ ಮಹಮದನ ಠಿಕಾಣಿಯನ್ನ ಒಂದು ಸುತ್ತು ಹಾಕಿ ಬಂದಿದ್ದ! ಅವರ ಯುದ್ಧ ಪಿಪಾಸುತನ ಹಾಗೂ ಕೆಚ್ಚೆದೆಯಿಂದ ಕಾದಾಡುವ ರಣೋತ್ಸಾಹದ ನುಡಿಗಳು ಅವನನ್ನ ಆತಂಕಿತನಾಗಿಸಿದ್ದವು. ಕೊನೆ ಉಸಿರಿರುವ ತನಕ ಹೋರಾಡುವ ಮಹಮದನ ಪಡೆಯ ಕೆಚ್ಚೆದೆಯ ನಿರ್ಧಾರವನ್ನು ಕಂಡು ಬೆಚ್ಚಿಬಿದ್ದಿದ್ದನಾತ. ಅದನ್ನ ಇದ್ದ ಹಾಗೆಯೆ ಇಲ್ಲಿ ಬಂದು ಆತ ಅರುಹಿದ. ಅವನ ಮಾತುಗಳನ್ನ ಕೇಳುತ್ತಲೆ ಅನೇಕ ಖುರೈಷಿಗಳ ಜಂಘಾಬಲವೆ ಉಡುಗಿತು. ವ್ಯಾಪಾರಿಗಳಾಗಿದ್ದ ಅವರಿಗೆ ಕಾದಾಟ ಅಷ್ಟು ಆಸಕ್ತಿಯ ವಿಚಾರ ಆಗಿರಲಿಲ್ಲ. ಆದರೆ ಹಿಂದೊಮ್ಮೆ ಒತ್ತೆಯಾಳುಗಳಾಗಿ ಸೆರೆ ಸಿಕ್ಕು ಪವಿತ್ರ ದಿನಗಳಲ್ಲಿ ಮಹಮದನ ಅನುಚರರಿಂದ ದೈಹಿಕ ಹಿಂಸೆಯನ್ನ ಅನುಭವಿಸಿದ್ದ ಅಬು ಝಹಾಲ್ ಹಾಗೂ ಅಮೀರ್ ಇಬ್ನ ಅಲ್ ಹದ್ರಾಮಿ ಮಾತ್ರ ಈ ಹೇಡಿತನದ ಮಾತುಗಳಿಂದ ಕೆರಳಿ ನಿಂತರು. ಇವರೆಲ್ಲರ ಹೇಡಿತನವನ್ನ ಮನಸೋ ಇಚ್ಛೆ ಜರಿದರು. ಆಗ ಮರಳಿ ಜಾಗ್ರತವಾಯಿತು ಮತ್ತೆ ಖುರೈಷಿಗಳ ಪೌರುಷ. ಯುದ್ಧ ಮಾಡುವ ಅಂತಿಮ ನಿರ್ಧಾರ ತೆಳೆಯಲಾಯಿತು. ಬದರ್'ನತ್ತ ಸೈನ್ಯವನ್ನ ಖುರೈಷಿಗಳು ಮುನ್ನಡೆಸಿದರು.


ಮಹಮದ್ ವಾಸ್ತವದಲ್ಲಿ ಸಣ್ಣ ಸೈನಿಕ ಪಡೆಯೊಂದಿಗೆ ಅಂದಾಜಿಲ್ಲದೆ ಖುರೈಷಿಗಳ ದೊಡ್ದದಾಗಿರಬಹುದಾದ ಸಾಧ್ಯತೆ ಇರುವ ಸೈನ್ಯವನ್ನ ಎದುರಿಸಲು ಬಂದಿದ್ದ. ಆತ ತಂಗಲು ಆಯ್ಕೆ ಮಾಡಿಕೊಂಡಿದ್ದ ಸ್ಥಳ ಅತ್ಯುತ್ತಮವಾಗಿತ್ತು. ಆದರೆ ಸಂಖ್ಯಾ ಬಲದ ಆಧಾರದ ಮೇಲೆ ಪರಿಗಣಿಸಿದಾಗ ಆಯಕಟ್ಟಿನ ಸ್ಥಳದಲ್ಲಿ ಬೀಡು ಬಿಟ್ಟಿದ್ದರೂ ಸಹ ಖುರೈಷಿಗಳ ಅಪಾರ ಪ್ರಮಾಣದ ಸೈನ್ಯವನ್ನು ವಾಸ್ತವವಾಗಿ ಎದುರಿಸುವುದು ಕಠಿಣ ಎನ್ನುವ ಅರಿವು ಅವನಿಗಿತ್ತು. ಹೀಗಾಗಿ ತನ್ನ ಕದನ ಕಲಿಗಳ ಮನೋಸ್ಥೈರ್ಯ ಹೆಚ್ಚಿಸಲು ಅವನು ದೈವವಾಣಿಯ ಮೊರೆ ಹೋದ. " ಓ ದೇವನೆ! ಈ ನಿನ್ನ ಸಣ್ಣ ಪಡೆ ಒಂದುವೇಳೆ ನಾಶವಾದರೆ ಮತ್ತೆ ವಿಗ್ರಹಾರಾಧನೆ ಗೆಲ್ಲುತ್ತದೆ. ನಿನ್ನ ಪವಿತ್ರ ಆರಾಧನೆ ಈ ಲೋಕದಿಂದ ಕಣ್ಮರೆಯಾಗುತ್ತದೆ" ಎಂದು ಕಳಕಳಿಯಿಂದ ಆತ ಪ್ರಾರ್ಥಿಸಿದ.


ಆತನ ಆರ್ತ ಮೊರೆಗೆ ಅತನ ಬಾಯಿಯಿಂದಲೆ ದೇವರು ಉತ್ತರವನ್ನೂ ಸಹ ಕೊಟ್ಟರು! ತನ್ನ ಸಂಪೂರ್ಣ ಬೆಂಬಲ ಹಾಗೂ ಭರವಸೆಗಳನ್ನ ಅಲ್ಲಾಹ ಮಹಮದನ ಮೂಲಕ ಮಹಮದನಿಗೇನೆ ಮುಟ್ಟಿಸಿದ!! ಅದು ಸುರಾ ೮/೧೨ ಹಾಗೂ ೮/೯ರಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಸುರಾ ೫೪/೪೫, ೨೨/೧೯, ೮/೪೮ ಹಾಗೂ ೮/೪೯ರಲ್ಲಿ ಅದನ್ನ ಗಮನಿಸಬಹುದು. ಹೀಗಾಗಿ ಖುರೈಷಿ ಸೈನ್ಯವೆ ಮುಂದಾಗಿ ಯುದ್ಧಾಹ್ವಾನ ನೀಡಲಿ, ಅಲ್ಲಿಯವರೆಗೆ ನಾವು ಕಾದುಕೊಂಡಿರೋಣ ಎಂದು ಮುಸಲ್ಮಾನರೆಲ್ಲ ನಿರ್ಧರಿಸಿ ಕಾದು ಕುಳಿತರು.



ಈ ಎರಡೂ ಪಡೆಯ ಮುಖಾಮುಖಿಯ ಕಾದಾಟ ಇನ್ನೇನು ಕೆಲವೆ ಕ್ಷಣಗಳಲ್ಲಿ ಆರಂಭವಾಗುವ ಸಮಯ ಒದಗಿ ಬಂದಾಗ ಖುರೈಷಿಗಳ ಪಡೆಯಿಂದ ಮಿತಿಮೀರಿದ ಉತ್ಸಾಹದಲ್ಲಿ ಕೆಲವು ಶೂರರು ಮಹಮದನ ಪಡೆಗಳತ್ತ ರಣೋತ್ಸಾಹದಿಂದ ನುಗ್ಗಿ ಬಂದರು. ಹಾಗೆ ಮಹಮದನ ಪಾಳಯಕ್ಕೆ ನುಗ್ಗಿದವರಲ್ಲಿ ಅಲ್ ಅಸಾದ್ ಸಹ ಒಬ್ಬನಾಗಿದ್ದ. ಆ ಝರಿಯ ಮೂಲದ ನೀರನ್ನ ಕುಡಿದೆ ಬರುತ್ತೇನೆ ಎನ್ನುವ ಬಡಾಯಿ ಕೊಚ್ಚಿಕೊಳ್ಳುತ್ತಾ ಆತ ಮುನ್ನುಗಿದ. ಆದರೆ ಅಲ್ಲಿ ಅಡಗಿ ಕುಳಿತುಕೊಂಡಿದ್ದ ಹಂಝಾ ಅವನ ಕಾಲನ್ನ ಕತ್ತರಿಸಿ ಬೀಳಿಸಿದ. ಆದರೂ ಪಟ್ಟು ಬಿಡದ ಆತ ತೆವಳಿಕೊಂಡೆ ಹೋಗಿ ನೀರು ಕುಡಿದು ತನ್ನ ಮಾತನ್ನ ಸಾರ್ಥಕಗೊಳಿಸಿಕೊಂಡ. ಇದನ್ನ ಕಂಡು ಕೆರಳಿದ ಹಂಝಾ ಅವನ ರುಂಡವನ್ನ ಚಂಡಾಡಿ ತನ್ನ ಆಕ್ರೋಶವನ್ನ ಹೊರಹಾಕಿದ.


ಅರಬ್ಬರ ಯುದ್ಧನೀತಿಯಂತೆ ಒಬ್ಬೊಬ್ಬರು ಒಬ್ಬೊಬ್ಬ ಯೋಧರನ್ನ ಆಯ್ದುಕೊಂಡು ಅವರೊಂದಿಗೆ ಮಾತ್ರ ಕಾದಾಡಬಹುದಿತ್ತು. ಆ ವಯಕ್ತಿಕ ಕಾಳಗದ ಪರಿಪಾಠ ಇಲ್ಲಿಯೂ ಸಹ ಮುಂದುವರೆಯಿತು. ಖುರೈಷಿ ಪಡೆಯಿಂದ ಶೈಬಾ, ಓತ್ಬಾ ಹಾಗೂ ಒತ್ಬಾನ ಮಗ ಅಲ್ ವಲೀದ್ ಮುನ್ನುಗಿದರು. ಹಂಝಾ, ಒಬೈದ್ ಹಾಗೂ ಅಲಿ ಅವರನ್ನ ಕತ್ತರಿಸಿ ಹಾಕಿದರು. ದೇಹದಿಂದ ಬೇರ್ಪಟ್ಟ ಅವರ ತಲೆಗಳು ಭೀಕರವಾಗಿ ಚಲ್ಲಾಡಿಕೊಂಡು ಬಿದ್ದವು. ಖುರೈಷಿಗಳಿಗೆ ಇದು ನಡುಕ ಹುಟ್ಟಿಸಿತು. ತಮ್ಮ ಯೋಧರ ಸಾವು ಕಂಡ ಅವರು ಅಧೀರರಾದರೆ ,ಇತ್ತ ಖುರೈಷಿಗಳ ಸಾವಿನಿಂದ ಹೆಚ್ಚಿನ ಸ್ತೈರ್ಯ ಹಾಗೂ ಉತ್ಸಾಹ ದೊರೆತ ಮಹಮದನ ಯೋಧರು ಇನ್ನಷ್ಟು ವೀರಾವೇಶದಿಂದ ಕಾದಾಡಿದರು. ಅವರನ್ನೆಲ್ಲ ಹುರಿದುಂಬಿಸುತ್ತಾ ಹಿನ್ನೆಲೆಯಲ್ಲಿಯೆ ಇದ್ದ ಮಹಮದ್ ರಣಾಂಗಣದ ತುಂಬಾ ಓಡಾಡಿದ. ಕಡೆಗೆ ವಿಜಯ ಮಾಲೆ ಮುಸಲ್ಮಾನರ ಕೊರಳಿಗೆ ಬಿತ್ತು.



( ಇನ್ನೂ ಇದೆ.) 

No comments: