18 October 2013

"ಸಕ್ಕರೆ" ಸಿಹಿ ಸ್ವಲ್ಪ ಜಾಸ್ತಿಯಾಯ್ತು....


( ಅಂದಹಾಗೆ ಇದು ವಿಮರ್ಶೆ ಖಂಡಿತಾ ಅಲ್ಲ!.)



ನಮ್ಮ ಅಭಯಣ್ಣನ ನಿರ್ದೇಶನದ ಮೂರನೆ ಚಿತ್ರ "ಸಕ್ಕರೆ"ಯನ್ನ ನೋಡಿದೆ. ಅಭಯಣ್ಣ "ಸಕ್ಕರೆ"ಭಾಗ್ಯ ಕರುಣಿಸುವ ಜೊತೆಗೆ ಖಾರ ಭಾಗ್ಯ, ಹುಳಿ ಭಾಗ್ಯ, ಚೂರು ಕಹಿ ಭಾಗ್ಯ, ಜೊತೆಗೊಂದಿಷ್ಟು ಒಗರಿನ ಭಾಗ್ಯವನ್ನೂ "ಬಡ"ಪಾಯಿ ಪ್ರೇಕ್ಷಕರಿಗೆ ಕರುಣಿಸಬಹುದಿತ್ತೇನೋ! ಇಲ್ಲಿ ಅವೆಲ್ಲಾ ಇಲ್ಲ ಎನ್ನುವಂತಿಲ್ಲ. "...ಅಯ್ಯಾ" ಅವರ "ಭಾಗ್ಯ"ಶಾಲಿ ನಾಡಿನ ಬಿಪಿಎಲ್ ಪ್ರಜೆಗಳಿಗೆ ಕೊಡುವಂತೆ ಅವೆಲ್ಲವನ್ನೂ ರೇಷನ್ ಮಾಡಿಯೆ ಪಡಿ ನೀಡಲಾಗಿದೆ ಅನ್ನುವುದು ಮಾತ್ರ ಖೇದಕರ ಸಂಗತಿ.

ತೀರಾ ಸವಕಲಾಗಿ ಹೋದ ಅವವೆ ಪದಗಳನ್ನ ಬಳಸಿ ಕಾಡಿಸುವ ಜಯಂತ ಕಾಯ್ಕಿಣಿಯವರ ಮೊಂಡು ಲೇಖನಿ ಹಾಗೂ ತಾನು ಬರೆದದ್ದೆ(?) ಗೀತೆ ಎನ್ನುವ ಹಟಕ್ಕೆ ಬಿದ್ದಿರುವ "ಕವಿ ಪುಂಗವ" ಯೋಗರಾಜ ಭಟ್ಟರ ಮೊಂಡ ಲೇಖನಿ ಇವೆರಡೂ ಕೆಲಕಾಲ ಅಜ್ಞಾತವಾಸಕ್ಕೆ ಹೋಗಿ ಬಂದರೆ ಕನ್ನಡ ಸಿನೆಮಾದ ಹಾಡುಗಳಿಗೂ, ಅದನ್ನ ಕೇಳಲೇ ಬೇಕಾದ ಅನಿವಾರ್ಯತೆ ಇರುವ ಸಿನೆಮಾ ಪ್ರಿಯರ ಬಡ-ಎಬಡ ಕಿವಿಗಳಿಗೂ ಅರೋಗ್ಯದ ಹಿತದೃಷ್ಟಿಯಿಂದ ಅತಿ ಕ್ಷೇಮ ಎನ್ನದೆ ವಿಧಿಯೇ ಇಲ್ಲ(?). ಕಾಯ್ಕಿಣಿಯವರ ಮಾತಿನಲ್ಲಿಯೇ ಇದನ್ನ ಹೇಳುವುದಾದಾರೆ "ಅದಾಗಲೆ ಅತಿ ಪಾಕದಲ್ಲಿ ಅದ್ದಿ ತೆಗೆದ ಜಿಲೇಬಿಯನ್ನ ಮತ್ತಷ್ಟು ಪಾಕ ಸುರಿದು ಕೊಟ್ಟಂತಿದೆ" "ಸಕ್ಕರೆ"ಯ ಸುಮಧುರ ಗೀತೆಗಳು. ಅಂದಹಾಗೆ ಮಾಧುರ್ಯ ದಯಪಾಲಿಸುವ ತಮ್ಮ  ಕೆಲಸಕ್ಕೆ ನಿಷ್ಠರಾಗಿರುವ ಸಂಗೀತ ನಿರ್ದೇಶಕ ವಿ ಹರಿಕೃಷ್ಣ್ರರ ತಪ್ಪೇನೂ ಇದರಲ್ಲಿಲ್ಲ.


ಇಲ್ಲಿ ಚಿತ್ರದ ಕಥೆ ಹೇಳುವ ಪಾಪಕ್ಕೆ ನಾನಿಳಿಯಲಾರೆ! ತರ್ಕಕ್ಕೆ ನಿಲುಕದ ಅನಂತನಾಗ್ ಹಾಗೂ ವಿನಯಾಪ್ರಕಾಶರ ಬಗ್ಗೆ ಹಾಗೂ ಪ್ರಾಯ ಸಂದದ್ದಕ್ಕೆ ಪ್ರತಿ ಫ್ರೇಮಿನಲ್ಲೂ ಪುರಾವೆ ಕಾಣ ಸಿಗುವ ನಾಯಕ "ರೋಲ್ಡ್'ಗೋಲ್ಡನ್ ಸ್ಟಾರ್" ಬಗ್ಗೆ ತುಟಿ ಬಿಚ್ಚಲಾರೆ!  ಒಟ್ಟಿನಲ್ಲಿ ಕೊನೆಗೆ ಚಿತ್ರಮಂದಿರದಿಂದ ಹೊರಬಂದ ಮೇಲೆಯೂ ನೆನಪಿನಲ್ಲುಳಿಯುವುದು ಕೇವಲ ನಾಲ್ಕು ಅಂಶಗಳು. ಮೊದಲನೆಯದು ಕಲಾ ನಿರ್ದೇಶಕ ಶಶಾಂಕರ ಸುಂದರವಾದ ಸೆಟ್'ಗಳು, ಪ್ರತಿ ಫ್ರೇಂನ್ನೂ ಚಂದಗಾಣಿಸಿಕೊಟ್ಟಿರುವ ವಿಕ್ರಂ ಶ್ರೀವಾಸ್ತವರ ಕ್ಯಾಮರಾ ಕಣ್ಣು, ಇದಕ್ಕೆಲ್ಲ ತಾಳ್ಮೆಯಿಂದ ಸಹಕರಿಸಿದ ನಿರ್ಮಾಪಕರ ಔದಾರ್ಯ ಹಾಗೂ ಇದರಲ್ಲೆಲ್ಲ ಮಿಂಚಿ ರೋಮಾಂಚನಗೊಳಿಸುವ ನಾಯಕಿ ದೀಪಾರ ದಿವ್ಯ ಸನ್ನಿಧಿ!. 


ಕೊನೆಗೊಂದು ಮಾತು ತಮಾಷೆಗೆ, ಕ್ಲೈಮಾಕ್ಸಿನಲ್ಲಿ ಆನು-ರಾಜೇಶ್ ಹಾಗೂ ದೀಪಾ ಸನ್ನಿಧಿಯ ಅಪ್ಪ "ಇನ್ನೋವಾ"ದಲ್ಲಿ ಬಂದರೆ, ಅಚ್ಯುತ ಹಾಗೂ ದೀಪಾ ಪ್ರತ್ಯೇಕವಾಗಿ ಸ್ಕೂಟಿಯಲ್ಲಿ ಬರಲು ಕಾರಣವೇನು? ಏಕೆ "ಇನ್ನೋವಾ"ದಲ್ಲಿ ಸೀಟ್'ಗಳು ಖಾಲಿ ಇರಲಿಲ್ಲವಾ?! ಒಟ್ಟಿನಲ್ಲಿ ಓರೆಕೋರೆಯಿಲ್ಲದ ದಾರಿಯ ಸರಾಗ ಪಯಣ ಅಭಯಣ್ಣನ ಈ ಸಿಹಿ "ಸಕ್ಕರೆ". ಹೀಗಾಗಿಯೇ ಇರಬೇಕು ಸಾಂಕೇತಿಕವಾಗಿ ನಯವಾದ, ಔಷಧಕ್ಕೂ ಒಂದು ಗುಂಡಿಗಳು ಸಿಗದಿರುವ ರಸ್ತೆಯನ್ನ ಚಿತ್ರದುದ್ದಕ್ಕೂ ತೋರಿಸಲಾಗಿದೆ! ಅದನ್ನ ನೋಡಿದ ವಾಸ್ತವ ಪ್ರಜ್ಞೆಯಿರುವ ಅಮಾಯಕ ಕನ್ನಡಿಗರು "ನಿಜವಾಗಲೂ ಅದು ಕನ್ನಡ ನಾಡಿನ ರಸ್ತೆಗಳೇ ಹೌದಾ? ಕರುನಾಡಿನ '...ಅಯ್ಯಾ'ರವರ ರಾಮ(?)ರಾಜ್ಯದಲ್ಲಿ ನಾಡಿನ ಉದ್ದಗಲಕ್ಕೂ ರಸ್ತೆಗಳಲ್ಲಿ ಗುಂಡಿಗಳೆ ಇಲ್ಲವಾ!" ಅಂತ ಆಶ್ಚರ್ಯ ಚಕಿತರಾಗಿ ಹೌಹಾರಬಾರದಾಗಿ ನಮ್ರ ವಿನಂತಿ.  ಒಟ್ಟಿನಲ್ಲಿದೊಂದು ಕುಲು"ಕಾಟ"ವಿಲ್ಲದ ಹಗುರಾದ ಮಧುರ ಪಯಣ.

No comments: