26 October 2013

ದಿಟ್ಟ ಧ್ವನಿಯ "ಜಟ್ಟ"ನ ವಾಸ್ತವವಾದ....






ಕನ್ನಡದ "ಚಾಕೂ ಚೂರಿ ಜಾಕಿಚಾನ್" ಚಿತ್ರ ಸಂಸ್ಕೃತಿಯನ್ನ ಚೆನ್ನಾಗಿ ಬಲ್ಲವರಿಗೆ, ಗಾಂಧಿನಗರದ ಸು"ಸಂಸ್ಕೃತ" "ಮಾತೃ"ಭಾಷೆಯ ಚಿತ್ರರತ್ನಗಳನ್ನ ಪ್ರತಿ ಶುಕ್ರವಾರ ನೋಡಿ ನೋಡಿ ಜಡ್ಡುಗಟ್ಟಿ ಹೋದವರಿಗೆ, "ನಾಲ್ಕು ಫೈಟು-ಮೂರು ರೇಪು-ಎರಡು ಐಟಂ ಸಾಂಗ್ ಐತೆ ಸಾ....." ಅಂತ ಹೊಸ ಫಾರ್ಮುಲಾ ಒಂದನ್ನ ಅಗಷ್ಟೆ ಕಂಡುಹಿಡಿದ ಮರಿ ವಿಜ್ಞಾನಿಯಂತೆ ಪ್ರತಿಯೊಂದು ಚಿತ್ರದ ಮುಹೂರ್ತದಲ್ಲೂ ಕಿಸಬಾಯಿದಾಸರ ಗೆಟಪ್ಪಿನಲ್ಲಿ ಆ ಚಿತ್ರದ ನಿರ್ದೇಶಕರು ಹಾಡಿದ್ದನ್ನೇ ಹಾಡುವುದನ್ನ ಕೇಳಿಸಿಕೊಂಡು 'ಎನ್ನ ಕಿವುಡನ ಮಾಡಯ್ಯ ತಂದೆ' ಎಂದು ಕಾಣದ ದೇವರಲ್ಲಿ ದೀನವಾಗಿ ಮೊರೆಯಿಡುವವರಿಗೆ, ಇತ್ತೀಚಿನ ರಿಮೇಕ್-ರಿಮಿಕ್ಸ್ ಶೈಲಿಯ ಹೊರಗಿನ ಹಳಸಿದ ಅನ್ನಕ್ಕೆ ಬಿಢೆಯಿಲ್ಲದೆ ಬಹಿರಂಗವಾಗಿಯೆ ಕನ್ನಡದ ಕರಿ ಬೇವಿನ ಒಗ್ಗರಣೆ ಕೊಟ್ಟ ವಿ"ಚಿತ್ರಾನ್ನ"ದಂತಹ "ಹೊಚ್ಚ ಹೊಸಾ ಕನ್ನಡ ಸಿನೆಮಾ ಸ್ಕೋಪ್" ನೋಡಿ ಹಣೆಹಣೆ ಚಚ್ಚಿಕೊಂಡು 'ತಮಗೆ ಈ ಹಾಳು ಹಣೆಯಿರುವುದೆ ತಪ್ಪಾಯಿತಲ್ಲ!' ಎಂದು ವ್ಯರ್ಥವಾಗಿ ಹಳಹಳಿಸಿ "ಲೈಫು ಇಷ್ಟೇನೆ!" ಎನ್ನುವ ಅರ್ಜೆಂಟ್ ಅಧ್ಯಾತ್ಮ ಜೀವಿಯಾಗಿ ಬಾಳಿನಲ್ಲಿ ಭರವಸೆಯನ್ನೆ ಕಳೆದುಕೊಂಡವರಿಗೆ ಬೆಚ್ಚಿ ಬೀಳಿಸುವಂತೆ ಯಾವುದೆ ಅಬ್ಬರವಿಲ್ಲದೆ ತಣ್ಣಗೆ ತೆರೆಕಂಡಿರುವ ಹೊಚ್ಚ ಹೊಸ ಅಚ್ಚರಿಯೆ ಗಿರಿರಾಜ್ ಬಿ ಎಂ ನಿರ್ದೇಶನದ ಕನ್ನಡ ಚಿತ್ರ "ಜಟ್ಟ"

ಕರ್ನಾಟಕದ ಮಲೆನಾಡಿನ ಮೂಲೆಯಲ್ಲಿರಬಹುದಾದ ಮಾದಿ ತಾಯಿಯ "ಸೀತಾ ಕಾಡು" ಎಂಬ ಕಲ್ಪಿತ ಪ್ರದೇಶದಲ್ಲಿ ಸಾಗುವ ಕಥೆಯೆ "ಜಟ್ಟ". ಸೀತಾ ಕಾಡಿನಲ್ಲಿ ಅರಣ್ಯ ಇಲಾಖೆಯ ಸಂರಕ್ಷಿತ ವನ ಸಂಪತ್ತಿದೆ, ಈ ಕಾಯ್ದಿರಿಸಿದ ಕಾಡನ್ನ ಕಾಯುವ ಅದೇ ಅರಣ್ಯ ಇಲಾಖೆಯ ದಿನಗೂಲಿ ವನ ಕಾವಲುಗಾರ ಅರ್ಥಾತ್ ಗಾರ್ಡ್ ಈ ಜಟ್ಟ. ಅವನ ಜೀವನ ಕಾಡಿನ ಇತರ ಜೀವಿಗಳಿಗಿಂತ ತೀರ ಭಿನ್ನವೇನಲ್ಲ. ಅಲ್ಲಿನ ದುರ್ಗಮ ಕಾಡಿನ ಇಂಚಿಂಚೂ ಜಟ್ಟನ ಪಾಲಿಗೆ ಸಲೀಸು. ಕಾಡಿನ 'ತಾಯಿಮರ'ದ ಬಗ್ಗೆ ವಿಶೇಷ ಅಸ್ಥೆ ವಹಿಸುವ ಜಟ್ಟನಿಗೆ ಅಂತಹದೆ ತಾಯಿಮರವೊಂದರ ಆಡಿಗೆ ಇರುವ, ಆ ಕಾಡಿನ ಮಕ್ಕಳನ್ನೆಲ್ಲ ಕಾಯುವ ತಾಯಿ ಎಂದೆ ಪ್ರತೀತಿಯಿರುವ ಮಾದಿತಾಯಿಯ ಮಹಿಮೆಯ ಬಗ್ಗೆ ವಿಪರೀತ ಭಯ ಭಕ್ತಿ. ಆಕೆಯ ಶಕ್ತಿಯ ಕಾರಣವೊಂದೆ ತಾನು ತನ್ನಂತವರ ಬದುಕಿಗಿರುವ ಭರವಸೆ ಹಾಗೂ ಭದ್ರತೆ ಎನ್ನುವ ಜಟ್ಟನ ಗಾಢ ನಂಬಿಕೆಗೆ ಇನ್ನಷ್ಟು ನೀರೆರೆಯುವುದು ಸ್ಥಳಿಯ ಹಿಂದುತ್ವವಾದಿ ಪುಢಾರಿಯ ನಯಗೊಳಿಸಿದ ಭಾರತೀಯತೆ ಹಾಗೂ ಪರಕೀಯತೆಯ ವಿತಂಡವಾದದ ಉತ್ಪ್ರೇಕ್ಷಿತ ಬೋಧನೆಗಳು. 

ಇದಕ್ಕೆ ಪೂರಕವಾಗಿ ಕಾಡಿನೊಳಗೆ ಮೋಜಿನ ಚಾರಣ ಮಾಡಲು ಬರುವ ಬೆಂಗಳೂರಿನ ಹುಡುಗ ರಾಜೇಶನ ಮೋಹದ ಮಾತುಗಳಿಗೆ ಮರುಳಾದ ಆತನ ಹೆಂಡತಿ ಗವ್ವೆನುವ ಕಾಡಿನ ಏಕಾತಾನತೆಗೆ ಬೇಸತ್ತು ಎರಡು ವರ್ಷಗಳ ಹಿಂದೆ ಅತನ ಹಿಂದೆ ಓಡಿ ಹೋಗಿರುತ್ತಾಳೆ. ಇತ್ತ ಪುಢಾರಿಯ ಬೋಢನೆ ತನ್ನ ಹಣೆಬರೆಹವೆ ಖೊಟ್ಟಿ ಎಂದು ನಂಬಿದ್ದ ಜಟ್ಟನ ಒಳಗೆ ಅಡಗಿರುವ ಗಂಡಸ್ತನವನ್ನ ಜಾಗೃತಗೊಳಿಸುತ್ತದೆ, ಹೆಂಡತಿಯಿಂದ ತನಗಾದ ಅನ್ಯಾಯದ ವಿರುದ್ದ ಪುಢಾರಿಯ ಪ್ರಚೋದಕ ಮಾತುಗಳು, ಅವರಿಂದ ಜಟ್ಟನಿಗೆ ಸಿಗುವ ದುರ್ಭೋಧನೆ ಅವನ ಪುರುಷಾಹಂಕಾರವನ್ನ ಬಡಿದೆಬ್ಬಿಸುತ್ತದೆ. ಆದೇ ಕಾಲಕ್ಕೆ ಜಟ್ಟನ ಬಗ್ಗೆ ಕಾಳಜಿಯಿರುವ ಅವನ ಕಾಡಿನ ರೇಂಜರರ ವೈವಾಹಿಕ ಬಾಳಿನಲ್ಲಿ ಆಗುವ ಏರುಪೇರು ಇವೆಲ್ಲಾ ಸೇರಿ ಅವನಲ್ಲಿ ತನಗೆ ಅರಿವಿಲ್ಲದೆ ಒಂದು ದ್ವೇಷದ ಕಿಚ್ಚು ಹುಟ್ಟುತ್ತದೆ. ಆದರೆ ಅದಕ್ಕೆ ಬಲಿಯಾಗುವವಳು ಮಾತ್ರ ಸಮೀಪದ ಊರಿಗೆ ಪುರೋಗಾಮಿತನದ ವಿರುದ್ಧ ನಡೆಯುವ ವಿಚಾರ ಸಂಕೀರಣದಲ್ಲಿ ಭಾಗವಹಿಸಲಿಕ್ಕೆ ಬರುವ ಸ್ತ್ರೀವಾದಿ ತರುಣಿ. 

ಕುಡಿತದ ಅಮಲಿನಲ್ಲಿ ಅಫಘಾತಕ್ಕೀಡಾಗುವ ಅವಳ ಕಾರಿನಿಂದ ಮನೆಗೆ ಮರಳುವ ಹಾದಿಯಲ್ಲಿದ್ದ ದ್ವೇಷ ತಪ್ತ ಜಟ್ಟನ ಕೈಗವಳು ಸಿಕ್ಕಿಬೀಳುತ್ತಾಲೆ. ಆಗ ಅವಳಿರುವ ಪರಿಸ್ಥಿತಿ ಹಾಗೂ ಅವಳ ಅಸ್ತವ್ಯಸ್ತ ತುಂಡುಡುಗೆ ಜಟ್ಟನ ಸಂಸ್ಕೃತಿಯ ಜಿಜ್ಞಾಸೆಯ ಕಿಚ್ಚಿಗೆ ತುಪ್ಪ ಸುರಿಯುತ್ತದೆ. ಅವಳ ಮೂಲಕ ನೈತಿಕವಾಗಿ ಹಾದಿ ತಪ್ಪಿದ ಸಮಸ್ತ ಸ್ತ್ರೀ ಕುಲಕ್ಕೇ ಬುದ್ಧಿ ಕಲಿಸುವ ನಿರ್ಧಾರಕ್ಕೆ ಬರುವ ಜಟ್ಟ ಅರೆಪ್ರಜ್ಞಾವಸ್ಥೆಯಲ್ಲಿರುವ ಆಕೆಯನ್ನ ತನ್ನ ಬಿಡಾರಕ್ಕೆ ಹೊತ್ತೊಯ್ಯುತ್ತಾನೆ. ಪುಢಾರಿಯ ಬೋಧನೆಯ ಅನುಸಾರ ಅಲ್ಲಿ ಕಾಡು ಪ್ರಾಣಿಯನ್ನ ಪಳಗಿಸುವಾಗ ಮಾಡುವಂತೆ ಆಕೆಯನ್ನ ಸರಪಳಿಯಲ್ಲಿ ಬಂಧಿಸಿಟ್ಟು ಹಿಂಸೆಯ ಹಾದಿಯಲ್ಲಿಯೆ ಪಳಗಿಸುವ ವ್ಯರ್ಥ ಪ್ರಯತ್ನಕ್ಕಿಳಿಯುತ್ತಾನೆ ನವ ಸಂಸ್ಕೃತಿಯ ಸೈನಿಕ ಜಟ್ಟ.

ಅದರಲ್ಲಿ ಆತನಿಗೆ ಸಾಫಲ್ಯ ಸಿಕ್ಕಿತಾ? ಆವ ಅಂದುಕೊಂಡ ಹಾಗೆ ಅಕೆಯನ್ನ ಪಳಗಿಸಿ ಸಮಸ್ತ(?) ಸ್ತ್ರೀ ಕುಲದ ಕುಲಟ ಸ್ವಭಾವದ ಮೇಲೆ ಹಿಡಿತ ಸಾಧಿಸಿದನ? ಪ್ರಾತಿನಿಧಿಕವಾಗಿಯಾದರೂ ಅವಳನ್ನ ಭಾರತೀಯ ಸಂಸ್ಕೃತಿಯ ತಗ್ಗಿ ಬಗ್ಗಿ ನಡೆಯುವ ವಿಧೇಯ ಹೆಣ್ಣಾಗಿ ಪರಿವರ್ತಿಸಲು ಆವನಿಗೆ ಸಾಧ್ಯವಾಯಿತ? ಎನ್ನುವ ಕುತೂಹಲಗಳನ್ನೆಲ್ಲಾ ಆಸಕ್ತರು ಚಿತ್ರಮಂದಿರಕ್ಕೆ ಹೋಗಿಯೇ ತಣಿಸಿಕೊಳ್ಳುವುದು ಸೂಕ್ತ ಎನ್ನುವುದು ನನ್ನ ಅನಿಸಿಕೆ. ಅವರು ಕೊಡುವ ಕಾಸಿನ ಕೊನೆಯ ಪೈಸಕ್ಕೂ ಮೋಸವಾಗದಂತೆ ಗಿರಿರಾಜ್ "ಜಟ್ಟ"ವನ್ನ ಒಂದು ಗಾಢ ವಿಷಾದದ ಅನುಭವವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪರಿಕಲ್ಪನೆಯ ಮೂಸೆಯಲ್ಲಿ ಜಟ್ಟನಾಗಿ ಕಿಶೋರ್, ಜಟ್ಟನ ಓಡಿಹೋದ ಹೆಂಡತಿಯಾಗಿ ಪಾವನಿ, ಜಟ್ಟನ ಖೆಡ್ಡಾದಲ್ಲಿ ಬೀಳುವ ಹೆಣ್ಣಾಗಿ ಸುಕೃತಾ ವಾಗ್ಳೆ, ಜಟ್ಟನ ತಲೆ ತೊಳೆಯುವ ಪುರೋಗಾಮಿ ಸಂಘಟನೆಯ ನೇತಾರರಾಗಿ ಬಿ ಸುರೇಶಣ್ಣ, ಮಾದಿತಾಯಿಯ ಪೂಜಾರಿಯಾಗಿ ಆರಾಧ್ಯ, ಮಾದಿತಾಯಿಯಷ್ಟೆ ಜಟ್ಟನ ಭಕ್ತಿಗೆ ಪಾತ್ರವಾದ ರೇಂಜರ್ ಪಾತ್ರದಲ್ಲಿ ಪ್ರೇಮ್ ಕುಮಾರ್ ಹಾಗೂ ಅವರ ಇನ್ನೊಬ್ಬ ಗಾರ್ಡ್ ಆಗಿ ರಂಗಪ್ರತಿಭೆ ಕಿರಣ್ ಪರಕಾಯ ಪ್ರವೇಶ ಮಾಡಿದವರಂತೆ ನಟಿಸಿದ್ದಾರೆ.

ಒಬ್ಬ ಕಾಡು ಜೀವಿಯಂತೆಯೆ ಬಾಳುವ ಜಟ್ಟನ ಭಾವ ಭಂಗಿ, ಕರೆದಾಗ ನೆಟ್ಟಗೆ ಓಡಿ ಬರುವ ಶೈಲಿ, ಹೆಚ್ಚು ಭಾವ ವಿಕಾರ ಪ್ರಜ್ಞೆಯಿಲ್ಲದ ಮುಖಭಾವದಲ್ಲಿ ಕಿಶೋರ್ ತಮ್ಮ ಸಾಮರ್ಥ್ಯವನ್ನೆಲ್ಲ ಒರೆಗೆ ಹಚ್ಚಿದಂತೆ ನಟಿಸಿದ್ದಾರೆ. ಈಗಾಗಲೆ "ಹುಲಿ"ಯಂತಹ ಅಪ್ಪಟ ವ್ಯಾಪಾರಿ ಚಿತ್ರದಲ್ಲಿಯೂ ವಿಭಿನ್ನವಾಗಿ ಅಭಿನಯಿಸಿ ತೋರಿಸಿದ್ದ ಕಿಶೋರ್ ಇಲ್ಲಿಯೂ ಮಾನವ ರೂಪದ ಮೃಗವಾಗಿ, ಕಾಡಿನ ಮಾಹಿತಿ ಕೋಶದಂತಹ ವಿಸ್ಮಯವಾಗಿ ಸಹಜತೆಗೆ ಹತ್ತಿರವಾಗಿ ನಟಿಸಿದ್ದಾರೆ. ಅವರ ಅಭಿನಯಕ್ಕೆ ಪೈಪೋಟಿ ಹೆಚ್ಚು ಸಿಕ್ಕಿರುವುದು ಹಾಗೆ ನೋಡಿದರೆ ಜಟ್ಟನ ಹೆಂಡತಿ ಪಾತ್ರದಲ್ಲಿ ನಟಿಸಿರುವ ಪಾವನಿ ಹಾಗೂ ಪುರೋಗಾಮಿ ಸಂಘಟನೆಯ ನಾಯಕ ಬಿ ಸುರೇಶಣ್ಣರಿಂದ. ಓಡಿ ಹೋದವಳು ಮತ್ತೆ ಮರಳಿ ಕಾಡಿಗೆ ಗಂಡನ ಆಸರೆಯನ್ನೆ ಅರಸಿಕೊಂಡು ಬರುವ ಅವಕಾಶವಾದಿ ಹೆಂಡತಿಯಾಗಿ ಪಾವನಿ ಪಾತ್ರವರಿತು ನಟಿಸಿದ್ದಾರೆ. ಅವರ ಸ್ತ್ರೀ ಸಹಜ ಆಕ್ರೋಶಗಳು, ಅವರ ಮುಖದಲ್ಲಿ ಮೂಡುವ ಅವಮಾನದ ಪ್ರತಿಫಲನ ಕಾಡಿನ ಒಂಟಿ ಜೀವಿಯೊಂದರ ಮನೋಭೂಮಿಕೆಯನ್ನ ಪ್ರತಿಫಲಿಸುತ್ತದೆ. ಕಡೆಗೆ ಮರಳಿ ಜಟ್ಟ ತನ್ನನ್ನ ತ್ಯಜಿಸುವಾಗಲೂ ಆಕೆಯ ಮುಖದಲ್ಲಿ ಗೊಂದಲದೊಡನೆ ಮೂಡುವ ಅಪನಂಬಿಕೆಯ ಭಾವದಲ್ಲಿ ಅವರ ಅಭಿನಯ ಸಹಜತೆಯ ಇನ್ನೊಂದು ಮುಖದಂತೆ ಕಾಣುತ್ತದೆ.

ಇನ್ನು ಭಾಷಣ ಶೂರ ಮೂಲಭೂತವಾದಿ ಸಂಘಟನೆಯ ಮುಖಂಡನಾಗಿ ಬಿ ಸುರೇಶಣ್ಣ ನಟಿಸಿದ್ದಾರೋ ಇಲ್ಲಾ ಆ ಪಾತ್ರವನ್ನ ತಾನೆ ತಾನಾಗಿ ಜೀವಿಸಿದ್ದಾರೋ ಹೇಳುವುದು ಸ್ವಲ್ಪ ಕಷ್ಟ. ದಕ್ಷಿಣ ಕನ್ನಡ ಜಿಲ್ಲೆಯ ಪುರೋಗಾಮಿ ಸಂಘಟನೆಯೊಂದರ ಉಗ್ರ ನಿಲುವಿನ ನೇತಾರನ "ಪ್ರಭೆ"ಯಿರುವ ಪಾತ್ರವದು. ಅದರ ನಿರ್ವಹಣೆಯ ಕುರಿತು ಸುರೇಶಣ್ಣನ ಮಾತಿನಲ್ಲಿಯೇ ಹೇಳುವುದಾದರೆ " ಕ್ಯಾರಿಕೇಚರ್ ಅಭಿನಯ ಕಷ್ಟದ್ದು. ಯಾರಂತೆಯೋ ಕಾಣಬೇಕು, ಆದರೆ ಆ ವ್ಯಕ್ತಿಯ ಹೋಲಿಕೆ ಇರಬಾರದು. ಇದು ನಟನೆಗೆ ಸವಾಲು." ಈ ಸವಾಲನ್ನ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರ ಅಭಿನಯದ ಮೊದಲಿನ ಒಂದೆರಡು ದೃಶ್ಯದಲ್ಲಿ ಈ ಪಾತ್ರ ಪೋಷಣೆ ಪೇಲವವಾಯಿತಲ್ಲ ಅಂತನ್ನಿಸಿದರೂ ಅನಂತರದ ದೃಶ್ಯಗಳಲ್ಲಿ ಹೀಗೆ ಅಂಡರ್ ಪ್ಲೇ ಮಾಡಿರುವ ಹಕೀಕತ್ತು ಏನೆಂಬುದು ಅರಿವಾಗುತ್ತದೆ. ಕಡೆಯದಾಗಿ ಒಬ್ಬ ಆಶಾಡಭೂತಿಯಾಗಿ ಪೋಜು ಕೊಡುವಾಗಲೂ ಅವರು ಬೇರೆ ಆ ಪಾತ್ರವೇ ಬೇರೆ ಅಂತ ಎಲ್ಲಿಯೂ ಅನ್ನಿಸದಷ್ಟು ಅವರು ಆ ಪಾತ್ರದಲ್ಲಿ ಹುದುಗಿಹೋಗಿದ್ದಾರೆ. ಇವರಷ್ಟೆ ನಿರಾಳತೆಯ ಅಭಿನಯ ಕರ್ತವ್ಯ ನಿಷ್ಠ-ಪ್ರಾಮಾಣಿಕ ರೇಂಜರ್ ಪಾತ್ರದಲ್ಲಿ ನಟಿಸಿರುವ ಪ್ರೇಮ್ ಕುಮಾರದ್ದು. ಮಲಯಾಳಿ ಮಾತೃಭಾಷೆಯ ತಮಿಳು ಕಿರುತೆರೆಯ ಜನಪ್ರಿಯ ನಟ ಇವರು. ಆದರೆ ಕನ್ನಡಕ್ಕೆ ತಾನೇನೂ ಹೊಸಬನಲ್ಲ ಅನ್ನುವಷ್ಟು ಸಹಜತೆ ಅವರ ದೇಹಭಾಷೆಯಲ್ಲಿ ವ್ಯಕ್ತವಾಗುತ್ತದೆ. ಅವರಿಗೆ ಕಂಠ ದಾನ ಮಾಡಿರುವ ನಿರ್ದೇಶಕ ಗಿರಿಧರ್ ಅವರ ಪಾತ್ರವನ್ನ ಇನ್ನಷ್ಟು ಆಪ್ತವಾಗಿಸುತ್ತಾರೆ. ಅಂತಹ ಸಹಜ ನಟರ ಅಗತ್ಯ ಕನ್ನಡ ಚಿತ್ರರಂಗಕ್ಕೆ ಇದ್ದೇ ಇದೆ. ಇವರೊಂದಿಗೆ ಮತ್ತೊಬ್ಬ ಗಾರ್ಡ್ ಆಗಿ ನಟಿಸಿರುವ ಕಿರಣ್ ಮೂಲತಃ ರಂಗಭೂಮಿಯವರು. ಅವರ ಸಮಯಾವಧಾನದ ಕೀಟಲೆಯ ಮಾತುಗಳು ಮುದ ಕೊಡುತ್ತವೆ. ಅದರಲ್ಲಿಯೂ ಅರಣ್ಯದೊಳಗೆ ಅತಿಕ್ರಮ ಪ್ರವೇಶದ ಹಿನ್ನೆಲೆಯಲ್ಲಿ ಮರಗಳ್ಳರಿಂದ ಮೊಬೈಲ್ ಫೋನ್ ವಶ ಪಡಿಸಿಕೊಳ್ಳುವ ಅವರು "ಇವ್ರೆ. ಇದರಲ್ಲಿ ವಿಧಾನಸೌಧದಲ್ಲಿ ನೋಡೋವಂತ(?) ವೀಡಿಯೋಗಳೇನಾದರೂ ಇದಾವೇನ್ರಿ!" ಅನ್ನೋದು ಕೇವಲ ಒಂದು ಸ್ಯಾಂಪಲ್ ಅಷ್ಟೆ. 

ಸುಕೃತಾ ವಾಗ್ಳೆ ಮೊಂಡು ಹಿಡಿಯುವ ದಿಟ್ಟ ಹುಡುಗಿಯಾಗಿ ಇಷ್ಟವಾದರೂ ಅವರ ಅಭಿನಯ ಅಷ್ಟೇನೂ ಪರಿಪೂರ್ಣವಾಗಿಲ್ಲ. ಬರಿ ಮೈಯಲ್ಲಿ ಅಭಿನಯಿಸುವ ಚಿತ್ರ ಕಥೆಯ ಬೇಡಿಕೆಯ ಅನುಸಾರ ಮೈ ಚಳಿ ಬಿಟ್ಟು ಆಕೆ ನಟಿಸಿ ಸೈ ಎನಿಸಿ ಕೊಂಡಿದ್ದಾರೆ. ಆದರೆ ಕಾಮಾತುರತೆಯಿಂದ ಕನಸಿನಲ್ಲಿ ನುಲಿಯುತ್ತಾ ಬೆಚ್ಚಗಾಗುವುದರಲ್ಲಿ ಆಕೆ ತೋರುವ ಪರಿಪೂರ್ಣತೆ; ತನಗೆ ಊಟ ಮಾಡಿಸಬೇಕಾದಾಗ ಜಟ್ಟನನ್ನ ಸೀರೆಯಲ್ಲಿ ಶಿಖಂಡಿಯಂತೆ ಕಾಣುವ ವಿಕೃತ ಹಂಬಲ ತಣಿದ ಬಳಿಕ ಬೀರುವ ವ್ಯಂಗ್ಯದ ನಗುವಲ್ಲಿ ಕೃತಕವಾಗಿ ಕಂಡು ಅದು ಅವರ ಅಭಿನಯ ಪ್ರತಿಭೆಯ ಮಿತಿಯಾಗಿ ಎದ್ದು ಕಾಣುತ್ತದೆ. ಧ್ವನಿಯ ಏರಿಳಿತದಷ್ಟೆ ಮುಖ್ಯವಾದ ಕಣ್ಣ ಭಾಷೆ ಹಾಗೂ ಮುಖದಲ್ಲಿ ವಿವಿಧ ಭಾವಗಳ ರಸವನ್ನ ಪರಿಣಾಮಕಾರಿಯಾಗಿ ಆ ಪಾತ್ರದ ಅಗತ್ಯಕ್ಕೆ ತಕ್ಕಂತೆ ಹೊರಹಾಕಲು ಸುಕೃತ ಸೋತಿದ್ದಾರೆ. ಚಿತ್ರದ ಕೊನೆಯ ಎರಡು ದೃಶ್ಯಗಳಲ್ಲಿ ಅವರಿಗೆ ಅಂಡರ್ ಪ್ಲೇ ಮಾಡಲು ಧಾರಾಳ ಅವಕಾಶವಿದ್ದರೂ ಅವರು ಕಾನ್ವೆಂಟ್ ಕುವರಿಯಂತೆ ಸಂಭಾಷಣೆಯ ಗಿಳಿ ಪಾಠ ಒಪ್ಪಿಸುವುದಕ್ಕಷ್ಟೆ ತಮ್ಮನ್ನ ತಾವು ಸೀಮಿತಗಳಿಸಿಕೊಂಡಿದ್ದಾರೆ. ಅದಕ್ಕೆ ಹೋಲಿಸಿದರೆ ರಾಜೇಶ್ ಪಾತ್ರಧಾರಿಯ ಅಭಿನಯ ಹಾಗೂ ಸ್ವತಃ ನಿರ್ದೇಶಕ ಗಿರಿರಾಜ್ ನಿರ್ವಹಿಸಿದ ಸಂಶೋಧಕನ ಕಿರು ಪಾತ್ರದ ಅಭಿನಯ ಸಹಜವಾಗಿದೆ!

ವಾಣಿಜ್ಯಿಕ ಕಾರಣಗಳಿಂದ ವಿಚಾರವಾದದ ನಿಲುವಿದ್ದರೂ ಅದನ್ನ ಖಚಿತವಾಗಿ ಕಥೆಯಾಗಿ ಕಟ್ಟಿಕೊಡಲಾಗದ ಅಸಹಾಯಕರೆ ಹೆಚ್ಚಿರುವ ಸಿನೆಮಾ ಪ್ರಪಂಚದಲ್ಲಿ ನಿರ್ದೇಶಕ ಗಿರಿರಾಜ್ ತೆಗೆದುಕೊಂಡ ದಿಟ್ಟ ನಿರ್ಧಾರವೆ ಈ "ಜಟ್ಟ". ದಕ್ಷಿಣ ಕನ್ನಡದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಅಂತರ್ಗಾಮಿಯಾಗಿ ಹರಿಯುತ್ತಿರುವ ಕೋಮು ವೈಷಮ್ಯವನ್ನ, ಅದರ ಸಾಧ್ಯಾ ಸಾಧ್ಯತೆಗಳನ್ನ ಹೆಚ್ಚು ಕಡಿಮೆ ಗಿರಿರಾಜ್ ಸರಿಯಾಗಿ ಊಹಿಸಿದ್ದಾರೆ. ಆದರೆ ಇವರು ಹೇಳಿದಷ್ಟೆ ಅಲ್ಲದೆ ಇದಕ್ಕೆ ಇನ್ನೂ ಅನೇಕ ಸಾಮಾಜಿಕ ಹಾಗೂ ಆರ್ಥಿಕ ಆಯಾಮಗಳಿವೆ ಅನ್ನುವುದನ್ನ ಮರೆಯಲಿಕ್ಕಾಗದು. ಸರಳವಾಗಿ ಹೇಳಬೇಕೆಂದರೆ ಅವರ ಗ್ರಹಿಕೆಗೂ ಮಿತಿಗಳಿವೆ. ಕಳೆದ ವರ್ಷ ನಡೆದ ನೈತಿಕ ಪೊಲೀಸ್ ಗಿರಿಯ "ಮಾರ್ನಿಂಗ್ ಮಿಸ್ಟ್" ಧಾಳಿಯ ಪ್ರತಿಬಿಂಬವನ್ನ, ಅಂತಹ ಧಾಳಿಗಳಲ್ಲಿ ಬಳಕೆಯಾಗುವ ಅಮಾಯಕ ಮಾನವ ಅಸ್ತ್ರಗಳ ಹಲವಾರು ಕಾರಣಗಳ ಸುಪ್ತ ಆಕ್ರೋಶವನ್ನ ಜಟ್ಟನ ಮೂಲಕ ಹೊರಗೆಡವಲು ಅವರು ಪ್ರಯತ್ನಿಸಿದ್ದಾರೆ.

ಇನ್ನು ತನ್ನ ವಿಷಯ ವಸ್ತುವಿನ ಪ್ರತಿಪಾದನೆಯಲ್ಲಿ ಗಿರಿರಾಜ್ ವಹಿಸಿದ ಸಂಯಮ ಪ್ರಶಂಸಾರ್ಹ. ಸಮಾಜದ ವಿರುದ್ಧ ಬಂಡೆದ್ದ ಅನೇಕರು ಕಾಲಾನುಕ್ರಮದಲ್ಲಿ ಆದೆ ತಥಾಕಥಿತ ಮುಖ್ಯವಾಹಿನಿಯ ಆರಾಧನೆಯ ಭಾಗವಾಗಿ ಹೋಗಿರುವುದು ನಿಚ್ಚಳ ವಾಸ್ತವ. ಇಂತಹ ಕಟು ವಾಸ್ತವದ ಹೇಳಬೇಕಾದ ವಿಷಯವನ್ನ ನಿರ್ಭೀತವಾಗಿ ಆದರೆ ವಿವಾದಕ್ಕೆಡೆ ಮಾಡಿಕೊಡದಂತೆ ಸಭ್ಯತೆಯ ಮಿತಿಯೊಳಗೆಯೆ ಹೇಳಲು ಅವರು ಮಾಡಿರುವ ಪ್ರಯತ್ನವನ್ನ ಇತ್ತೀಚೆಗೆ ವಿವಾದ ಹುಟ್ಟಿಸಿದ ಕಾದಂಬರಿ "ಢುಂಢಿ"ಯಲ್ಲಿ ಅದರ ಲೇಖಕ ಅನಗತ್ಯವಾಗಿ ಬಳಸಿದ ಪದಗಳು ಹಾಗೂ ಅವಹೇಳನಕಾರಿ ಭಾಷಾ ಪ್ರಯೋಗದೊಂದಿಗೆ ಹೋಲಿಸಬಹುದು. ಒಂದು ಕಹಿ ಸತ್ಯವನ್ನ ಮನವರಿಕೆ ಮಾಡಿಸುವ ಭರದಲ್ಲಿ ನಾವು ಇನ್ನೊಬ್ಬರ ಸ್ಥಾಪಿತ ನಂಬಿಕೆಯನ್ನ ಒಂದೆ ಏಟಿಗೆ ಕಡಿದು ಎಸೆದು ಅವರನ್ನ ಘಾಸಿಗೊಳಿಸಬೇಕೆಂದೇನಿಲ್ಲ. ಜಟ್ಟ ಆ ವಿಷಯದಲ್ಲಿ ಗೆದ್ದಿದೆ. 

ಒಟ್ಟಿನಲ್ಲಿ "ಜಟ್ಟ" ಒಂದು ಸಾಂಘಿಕ ಪ್ರಯತ್ನದ ಉತ್ತಮ ಫಲಶ್ರುತಿ. ಆಶ್ಲೆ ಅಭಿಲಾಷರ ಹಿನ್ನೆಲೆ ಸಂಗೀತ ಈ ಅನುಭವವನ್ನ ಇನ್ನಷ್ಟು ಆಪ್ತವಾಗಿಸಿದರೆ ಸಂಕಲನಕಾರ ಪ್ರಕಾಶರ ಕತ್ತರಿ ಅನಗತ್ಯ ರೆಕ್ಕೆಪುಕ್ಕಗಳನ್ನ ಕತ್ತರಿಸಿ ಗಿರಿರಾಜರ ನಿರೀಕ್ಷೆಯಂತೆ ಚಿತ್ರವನ್ನ ಅರ್ಥಪೂರ್ಣವನ್ನಾಗಿಸುವಲ್ಲಿ ಸಫಲವಾಗಿದೆ. ಇಂತಹ ಒಳ್ಳೆಯ ಚಿತ್ರವನ್ನ ಪ್ರೇಕ್ಷಕರು ಮೆಚ್ಚುತ್ತಿರುವಾಗಲೆ ಚಿತ್ರಮಂದಿರದಿಂದ ಒಕ್ಕಲೆಬ್ಬಿಸುವ ಗಾಂಧಿನಗರದ ಪಟ್ಟಭದ್ರ ಗೋಡ್ಸೆಗಳ ಹೀನ ಆಂತರಿಕ ರಾಜಕೀಯ ನಾಚಿಕೆಗೇಡಿನದು. ತಮ್ಮ ತಮ್ಮ ಹೀನ ಸಂತಾನಗಳ ಅಭಿನಯ ಕೋರತನದ ಚಿತ್ರರತ್ನಗಳನ್ನ ನೊಣ ಹೊಡೆಯುವವರೂ ಗತಿಯಿಲ್ಲದಿದ್ದರೂ ಗೋಡೌನಿನಂತಹ ಚಿತ್ರಮಂದಿರಗಳಲ್ಲಿ ಹಡಬೆ ಕಾಸು ಖರ್ಚುಮಾಡಿ ಓಡಿಸಿ ನೂರು ದಿನದ ಕಿರೀಟವನ್ನ ತಲೆಗೇರಿಸಿಕೊಳ್ಳುವ ಈ ತಲೆತಿರುಕರಿಗೆ "ಸಪ್ನಾ"ದಂತಹ ಸಣ್ಣ ಚಿತ್ರಮಂದಿರದಲ್ಲಿದ್ದರೂ ಪ್ರೇಕ್ಷಕರನ್ನ ಸೆಳೆಯುತ್ತಿರುವ "ಜಟ್ಟ"ದಂತಹ ಸತ್ವಪೂರ್ಣ ಚಿತ್ರದ ಕುರಿತು ವಿಕೃತ ಮತ್ಸರ. ಇವೆಲ್ಲ ಅಡೆತಡೆಗಳನ್ನ ಮೀರಿಯೂ ಗಿರಿರಾಜರ ಚಿತ್ರ ನೂರು ದಿನ ಪೂರೈಸುವುದರಲ್ಲಿ ಸಂಶಯವಿಲ್ಲ ಅನ್ನಿಸುತ್ತದೆ. ಹೊಸ ಹಾಗೂ ಉತ್ತಮ ಪ್ರಯತ್ನಗಳನ್ನ ನಡುನೀರಿನಲ್ಲಿ ಕೈಬಿಡುವಷ್ಟು ದಡ್ಡತನ ಕನ್ನಡಿಗ ಪ್ರೇಕ್ಷಕರಿಗೂ ಇದ್ದಂತಿಲ್ಲ.

No comments: