19 October 2013

ವಿಷಾದದ ಆಲಾಪದಲ್ಲಿ ಮೌನ ಸಂವಾದ.....


ಮಾನವೀಯ ಮೌಲ್ಯಗಳ ಬೆನ್ನು ಹತ್ತಿದ ವ್ಯಕ್ತಿಯೊಬ್ಬ ಯಾವೆಲ್ಲಾ ಸಂಕಟಗಳನ್ನ ಎದುರಿಸಬೇಕಾಗಿ ಬರುತ್ತದೋ ಅದಕ್ಕೊಂದು ಸಣ್ಣ ಆದರೆ ಜ್ವಲಂತ ನಿದರ್ಶನ ಶಾಹೀದ್ ಅಜ್ಮಿ. ೧೯೯೩ರ ಸರಣಿ ಬಾಂಬ್ ಸ್ಪೋಟೋತ್ತರ ಮುಂಬೈ ( ಆಗಿನ್ನೂ ಬೊಂಬಾಯಿ.)ಯ ಉಪನಗರದಲ್ಲಿದ್ದ ಮುಸ್ಲಿಂ ಕುಟುಂಬದ ಎಳೆಯ ಹುಡುಗನೆ ಶಾಹಿದ್. ತಾನು ಕಂಡ ಸಾವು ನೋವುಗಳಿಂದ ಪ್ರೇರಿತನಾಗಿ ಜೆಹಾದಿ ತಲೆ ತೊಳಿತಕ್ಕೆ ಒಳಪಟ್ಟು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಮುಸ್ಲಿಂ ಉಗ್ರವಾದಿಗಳ ತರಬೇತಿ ಶಿಬಿರಕ್ಕೆ ಸೇರಿಕೊಳ್ಳುತ್ತಾನೆ. ಕಾಲಕ್ರಮೇಣ ಅವನ ವ್ಯಕ್ತಿತ್ವಕ್ಕೆ ಆ ತೀವೃವಾದದ ಧಾರ್ಮಿಕ ವಿತಂಡವಾದಗಳೆಲ್ಲಾ ಆತಿರೇಕದಂತೆನೆಸಿ ಅಲ್ಲಿಂದ ಮರಳಿ ಹೊರಟು ಮನೆ ಸೇರಿಕೊಳ್ಳುತ್ತಾನೆ. ಈ ನಡುವೆ ಪೊಲೀಸ್ ಬೇಹುಗಾರರ ಕಣ್ಣಿಗೆ ಸಿಕ್ಕು ಟಾಡಾ ಕಾಯ್ದೆಯಡಿ ಜೈಲು ಪಾಲಾಗುತ್ತಾನೆ. 


ತಿಹಾರ್ ಸೆರೆಮನೆಯಲ್ಲಿ ಮತ್ತೆ ಉಗ್ರವಾದಿ ಸಹಖೈದಿ ಉಮರ್ ಶೇಖ್ ಆತನ ತಲೆ ತೊಳೆದು ಮತ್ತೆ ದೇಶದ್ರೋಹಕ್ಕೆಳೆಸಲು ಯತ್ನಿಸುವಾಗ ಇನ್ನೊಬ್ಬ ಸಹಖೈದಿ ಸಹೃದಯಿ ಕಾಶ್ಮೀರಿ ಗುಲಾಂ ನಬಿಯ ವಿವೇಕದ ಮಾತುಗಳಿಗೆ ಕಿವಿಕೊಡುವ ಶಾಹೀದ್ ಮತ್ತೆ ತನ್ನ ವಿದ್ಯಾಭ್ಯಾಸ ಮುಂದುವರೆಸಲು ಆಶಿಸುತ್ತಾನೆ. "ವ್ಯವಸ್ಥೆಯನ್ನ ತಿದ್ದಲಿಕ್ಕೆ ಅದರ ಭಾಗವಾಗಿದ್ದುಕೊಂಡೆ ಪರಿಣಾಮಕಾರಿಯಾಗಿ ಯತ್ನಿಸಬೇಕೆ ಹೊರತು, ಅದರ ವಿರುದ್ಧ ಬಂಡಯವೆದ್ದು ಅದನ್ನ ಎದುರು ಹಾಕಿಕೊಳ್ಳಬಾರದು" ಎನ್ನುವ ನಬಿಯ ಸಲಹೆ ಆತನನ್ನ ಹಾದಿ ತಪ್ಪದಂತೆ ಎಚ್ಚರಿಸುತ್ತದೆ. ಮತ್ತೆ ಜೆಹಾದಿಯಾಗುವತ್ತ ತಿರುಗಿದ್ದ ಅತನನ್ನ ನಬಿಯ ಆರ್ಥಿಕ ಹಾಗೂ ನೈತಿಕ ಸಹಾಯ ಮತ್ತು ಆಲ್ಲಿಯೆ ಸಹಖೈದಿಗಳಾಗಿರುವ ಡಾ ಸಕ್ಸೇನಾರ ಮಾರ್ಗದರ್ಶನ ಕಾನೂನಿನ ಪದವಿಧರನಾಗುವಂತೆ ಪ್ರೇರೇಪಿಸುತ್ತದೆ. ಮುಂದೆ ಆ ಪ್ರಕರಣದಿಂದ ಖುಲಾಸೆಗೊಂಡು ಹೊರ ಬಂದವ ವೃತ್ತಿ ಬದುಕಿನಲ್ಲಿ ಒಬ್ಬ ಕಿರಿಯ ವಕೀಲನಾಗಿ ವಕಾಲತ್ತಿನ ತಟವಟದ ರೇಜಿಗೆಯ ವ್ಯವಹಾರಗಳನ್ನೆಲ್ಲ ಹತ್ತಿರದಿಂದ ಕಂಡು ಕಂಗಾಲಾಗಿ ವೃತ್ತಿ ನಿಷ್ಠೆಗೆ ಬದ್ಧನಾಗುವ ನಿರ್ಧಾರಕ್ಕೆ ಬರುತ್ತಾನೆ. ಹೀಗಾಗಿ ಸ್ವತಂತ್ರ್ಯವಾಗಿ ತನ್ನ ವೃತ್ತಿಯನ್ನ ನಿರ್ವಹಿಸುವ ಸಾಹಸಕ್ಕಿಳಿಯುವುದು ಶಾಹೀದ್ ಅಜ್ಮಿಗೆ ಅನಿವಾರ್ಯವಾಗುತ್ತದೆ. ಆಗ ಎದುರಾಗುತ್ತದೆ ವಾಸ್ತವ ಬದುಕಿನ ಅಸಲು ಸವಾಲು.


ಸಿವಿಲ್ ಪ್ರಕರಣವೊಂದು ವಿಚ್ಛೇದೆತೆ ಸುಂದರಿ ಮರಿಯಂಳನ್ನ ಶಾಹೀದನ ಮನೆ ತುಂಬಿದ ಮಡದಿಯಾಗಿಸಿದರೆ, ಪೋಟಾ ಕಾಯ್ದೆಯಡಿಯೆ ಬಂಧಿತನಾದ ಅಮಾಯಕನೊಬ್ಬನ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿ ಪರ ಶಾಹೀದ್ ಸಾಧಿಸುವ ಗೆಲುವು ವೃತ್ತಿ ಬದುಕಿನಲ್ಲಿ ಆತನಿಗೆ ಖ್ಯಾತಿಯನ್ನು ಅನುಗ್ರಹಿಸುತ್ತದೆ. "ನೊಂದವರ, ಅಮಾಯಕರ, ಬಾಯಿ ಸತ್ತವರ ಪ್ರಕರಣಗಳಿಗೆ ಶಾಹೀದ್ ಅಜ್ಮಿ ಮಾತ್ರ ಏಕೈಕ ಆಶಾಕಿರಣ" ಎನ್ನುವ ಸ್ಥಿತಿಗೆ ಮುಟ್ಟಿದ  ಶಾಹೀದ್ ಮುಂದೆ ಏನಾದ? ಅವನ ಧ್ಯೇಯ ಬದ್ಧತೆ ಆತನನ್ನ ಯಾವ ಹಂತಕ್ಕೇರಿಸಿತು ಅನ್ನುವುದನ್ನ ನೋಡಲಿಕ್ಕೆ ಚಿತ್ರ ಮಂದಿರಕ್ಕೆ ಹೋಗುವುದು ಮಾತ್ರ ಖಡ್ಡಾಯ!


ಅನುರಾಗ್ ಕಶ್ಯಪ್ ಒಬ್ಬ ನಿರ್ದೇಶಕನಾಗಿ ಆಯ್ದುಕೊಳ್ಳುತ್ತಿದ್ದಷ್ಟೆ ವಿಭಿನ್ನ ಹಾಗೂ ನೈಜ ಸಂಗತಿಯನ್ನ ಒಬ್ಬ ನಿರ್ಮಾಪಕನಾಗಿಯೂ ಆರಿಸಿಕೊಂಡು ಬಂಡವಾಳ ತೊಡಗಿಸಿದ್ದಾರೆ. ಹಂಸಲ್ ಮೆಹ್ತಾ ನಿರ್ದೇಶನಕ್ಕೆ ಸಮೀರ್ ಗೌತಮ್'ಸಿಂಗ್ ಹಾಗೂ ಅಪೂರ್ವ ಅಸ್ರಾಣಿಯವರು ಹೆಣೆದ ಬಿಗಿಯಾದ ಚಿತ್ರಕಥೆಯ ಬೆಂಬಲವೂ ಸಿಕ್ಕಿದೆ. ಶಾಹೀದ್ ಪಾತ್ರದಲ್ಲಿ ರಾಜ್'ಕುಮಾರ್ ಯಾದವ್ ಅತಿ ನೈಜವಾಗಿ ನಟಿಸಿದ್ದರೆ. ಕೆ ಕೆ ಮೆನನ್, ಪ್ರಭಾಲ್ ಪಂಜಾಬಿ ಹಾಗೂ ವಿವೇಕ್ ಗಮಂಡಿಯವರ ಅಭಿನಯವೂ ಸಹಜತೆಗೆ ಹತ್ತಿರದಲ್ಲಿದೆ. ಕರಣ್ ಕುಲಕರ್ಣಿಯವರ ಹಿನ್ನೆಲೆ ಸಂಗೀತದ ಗಾಂಭೀರ್ಯ ಚಿತ್ರದ ಎರಡು ಹಾಡುಗಳಲ್ಲಿಯೂ ಸನ್ನಿವೇಶಕ್ಕೆ ಪೂರಕವಾಗಿ ಕಥೆಯನ್ನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಇವೆಲ್ಲವನ್ನೂ ಅನುಜ್ ಧವನ್ ಸೂಕ್ಷ್ಮ ದೃಷ್ಟಿಯಲ್ಲಿ ಪ್ರತಿ ಪ್ರೇಮಿನಲ್ಲೂ ಅರ್ಥಗರ್ಭಿತವಾಗಿ ತಮ್ಮ ಕ್ಯಾಮರಾ ಕಣ್ಣಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಆಪೂರ್ವ ಅಸ್ರಾಣಿ ಸಂಕಲಿಸಿದ ಚಿತ್ರ ನಿಜ ಜೀವನಕ್ಕೆ ಹಿಡಿದ ಕೈಗನ್ನಡಿಯ ಬಿಂಬದಂತೆ ಗಾಢವಾಗಿ, ಒಂದು ವಿಷಾದದ ಅಲಾಪವಾಗಿ ನೋಡುಗರೆದೆಯನ್ನ ಕನಸಿನಂತೆ ತಾಕುತ್ತದೆ. ನೋಡುವ ಮನವನ್ನ ಅರ್ದ್ರವಾಗಿಸಿ ತೇವಗೊಳಿಸುತ್ತದೆ.http://www.youtube.com/watch?v=egL3eSlEa-U

No comments: