31 October 2013

ಧೀಮಂತನೊಬ್ಬನ ಕರಗದ ಉಕ್ಕಿನಂತಹ ನೆನಪಿನಲ್ಲಿ.....


ದೇಶದ ಸ್ವಾತಂತ್ರೋತ್ತರ ಇತಿಹಾಸದಲ್ಲಿ ವ್ಯವಸ್ಥಿತವಾಗಿ ಮೂಲೆಗೆ ಒತ್ತಲ್ಪಟ್ಟ ಮುತ್ಸದ್ಧಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ ಇವತ್ತು. ಕೋಮುವಾದಿ ಹಾಗೂ ಜಾತ್ಯತೀತವಾದಿ ವಾದದ ವಿಕೃತ ವಿಶ್ಲೇಷಣೆ ಹದ ಮೀರಿದ ಧಾಟಿಯಲ್ಲಿ ಕಂಡಕಂಡ 'ಲಲ್ಲು ಪಂಜು' "ಪಪ್ಪು"ಗಳ ಮೂಲಮಂತ್ರವಾಗಿ ಎಗ್ಗುಸಿಗ್ಗಿಲ್ಲದೆ ಎಲುಬಿಲ್ಲದ ನಾಲಗೆಯ ಮೇಲೆ ಹರಿದಾಡುತ್ತಿರುವಾಗ ಸರ್ದಾರ್ ಪಟೇಲರ ನೆನಪಿನ ಈ ದಿನ ಅವರು ಆಕಾಶವಾಣಿಯಲ್ಲಿ ಭಾರತದ ಗೃಹಮಂತ್ರಿಯಾಗಿ ನೀಡಿದ್ದ ಈ ಭಾಷಣ ಅರ್ಥಪೂರ್ಣ.


ನವ ಸಾಕ್ಷರ ಮುಸ್ಲಿಂ ಮತೀಯವಾದಿ ಶ್ರೀಮಂತರನ್ನೆ ಒಳಗೊಂಡಿದ್ದ "ಶಿಮ್ಲಾ ಡೆಪ್ಯುಟೇಶನ್" ೧೯೦೬ರಲ್ಲಿ ಮಿಂಟೋ ಮಾರ್ಲೆ ಆಯೋಗದ ಮುಂದೆ ಸ್ವತಃ ಬ್ರಿಟಿಷ್ ಆಳರಸರ ಕುಮ್ಮಕ್ಕಿನಿಂದ ಮನವಿ ಸಲ್ಲಿಸಿ ಕಟ್ಟಿಕೊಂಡಿದ್ದ "ಮುಸ್ಲಿಂ ಲೀಗ್" ಒಂದು ಕ್ರಿಯೆಯಾಗಿದ್ದರೆ, ಈ ಕೋಮುವಾದದ ವಿರುದ್ಧ ಸೆಟೆದು ನಿಂತ ಹಿಂದೂಗಳ ಪ್ರತಿಕ್ರಿಯೆ ೧೯೨೫ರಲ್ಲಿ ಆರಂಭವಾದ "ರಾಷ್ಟ್ರೀಯ ಸ್ವಯಂ ಸೇವಕ ಸಂಘ" ಎನ್ನುವುದು ಇತಿಹಾಸದ ಕಟು ವಾಸ್ತವ. ಆದರೆ ಆರ್'ಎಸ್'ಎಸ್ ಸಂಘಟನೆಗೆ ಕೋಮುವಾದದ ಮೊಹರು ಒತ್ತುವ ನಮ್ಮ ನಡುವಿನ ಅತಿಬುದ್ಧಿವಂತರು ಮುಸ್ಲಿಂ ಲೀಗ್'ನ ಕುತಂತ್ರದಿಂದಾದ ಸ್ವತಂತ್ರ ಪೂರ್ವ ಹಾಗೂ ಸ್ವತಂತ್ರೋತ್ತರ ಭಾನಗಡಿಗಳು, ಕೆಲವೆ ಸಿರಿವಂತ ಮುಸಲ್ಮಾನರ ಅಧಿಕಾರದ ತೆವಲಿಗಾಗಿ ಹುಟ್ಟಿಕೊಂಡ ಲೀಗಿನ ಅಂತಿಮ ಫಲಶ್ರುತಿ ಪಾಕಿಸ್ತಾನದ ದೆಸೆಯಿಂದ ಭಾರತೀಯನಾಗಿಯೆ ಉಳಿದ ಉಪಖಂಡದ ಬಡ ಮುಸಲ್ಮಾನರ ಸಾಮಾಜಿಕ ಸ್ಥಿತಿ ಹದಗೆಟ್ಟದ್ದನ್ನ ಸುಖವಾಗಿ ಮರೆಯುತ್ತಾರೆ ಹಾಗೂ ದೊಡ್ಡ ದೊಂಡೆಯಿಂದ ಬೊಬ್ಬಿಟ್ಟು ಅದನ್ನ ವಿಷದಪಡಿಸಲು ಹೊರಟವರ ಧ್ವನಿಯನ್ನ ಹೂತು ಹಾಕುತ್ತಾರೆ. ಅಂತಹ ಹೊತ್ತಲ್ಲಿಯೆ ಪಟೇಲರು ಪ್ರಸ್ತುತವಾಗುವುದು.


ಸ್ವತಂತ್ರ ಭಾರತದ ವಿಭಜನೆಯ ನಂತರ ಅಳಿದುಳಿದ ಪಾಳೆಪಟ್ಟುಗಳನ್ನ ಒಗ್ಗೂಡಿಸಲಿಕ್ಕೆ ಸಾಮ-ದಾನ-ದಂಡೋಪಾಯದಿಂದ ಶ್ರಮಿಸಿದ ಧೀಮಂತ ಪಟೇಲರಿಲ್ಲದಿದ್ದರೆ ಗಾಂಧಿ ಪಳೆಯುಳಿಕೆಯನ್ನ ಹೆಸರಿನ ಮುಂದೆ ಹೊತ್ತ ನೆಹರೂವಿನ ವಂಶಪಾರಂಪರ್ಯದ ನವ ಪಾಳೆಗಾರರಾದ ಹೀನಾತಿಹೀನ ಸಂತಾನಗಳಿಗೆ ಆಳಿ-ದೋಚಿ-ನುಂಗಿ ನೊಣೆಯಲಿಕ್ಕೆ ಇಷ್ಟು ವಿಶಾಲ ದೇಶ ಖಂಡಿತಾ ಸಿಕ್ಕುತ್ತಿರಲಿಲ್ಲ! ಅತಾರ್ಕಿಕವಾಗಿ ಪಾಕಿಸ್ತಾನದ ಭಾಗವಾಗುವ ಉಮೇದನ್ನ ಪ್ರಕಟಿಸಿದ ಹೈದರಾಬಾದಿನ ನಿಜಾಮ, ಕಡೆಯ ಕ್ಷಣದಲ್ಲಿ ಮಹಮದಾಲಿ ಜಿನ್ನಾರ ಮೋಹಕ ಮಾತುಗಳಿಗೆ ಮರುಳಾಗಿ ಪಾಕಿಸ್ತಾನ ಸೇರ ಬಯಸಿದ ಬಿಕಾನೇರ್ ಹಾಗೂ ಜೋಧಪುರದ ರಾಜಪೂತ ದೊರೆಗಳು, ತನ್ನ ದೇಶ ಪಾಕಿಸ್ತಾನವೆಂದು ಬಗೆದು ಕಡೆಗೆ ಅಲ್ಲಿಗೆ ಓಡಿಹೋದ ಜುನಾಘಡದ ನವಾಬನ ಸಂಸ್ಥಾನವನ್ನ ಭಾರತದೊಳಗೆ ವಿಲೀನಗೊಳಿಸಲು ಪಟೇಲರ ಕಠಿಣ ನಿಲುವಿಲ್ಲದಿದ್ದರೆ, ಅವರ ಸೇನಾನಿ ವಿ ಪಿ ಮೆನನ್ನರ ಬೆದರಿಕೆಯ ರಾಯಭಾರವಿಲ್ಲದಿದ್ದರೆ ಖಂಡಿತ ಶೋಕಿಲಾಲ ನೆಹರುವಿನ ಕೈಯಲ್ಲಂತೂ ತಿಪ್ಪರಲಾಗ ಹಾಕಿದರೂ ಈ ಐಕ್ಯತೆಯ ವಿಲೀನ ಸಾಧ್ಯವಾಗುತ್ತಿರಲಿಲ್ಲ. ತಾನೆ ನೇರ ವ್ಯವಹರಿಸಲು ಹೋಗಿ ಕಾಶ್ಮೀರವನ್ನ ನೆಹರೂ ಎಂಬ ಸೊಕ್ಕಿನ ಮೂರ್ಖ ಇಂದು ತಂದು ನಿಲ್ಲಿಸಿದ ಸ್ಥಿತಿಯ ಉದಾಹರಣೆ ನಮ್ಮ ಕಣ್ಣ ಮುಂದೆಯೆ ಇದೆ.


ಹೌದು, ಗಾಂಧಿಜಿ ಹತ್ಯೆಯ ನಂತರ ಆರ್'ಎಸ್'ಎಸ್ ವಿರುದ್ಧ ಪಟೇಲರು ಕಠಿಣ ನಿರ್ಧಾರ ಪ್ರಕಟಿಸಿ ನಿಷೇಧ ಹೇರಿದ್ದರು. ಆದರೆ ಅದೇ ಪಟೇಲರು ಗುರೂಜಿಯವರಿಂದ "ಕೇವಲ ಸಾಂಸ್ಕೃತಿಕ ಸಂಘಟನೆಯಾಗಿ ಉಳಿಯುತ್ತೇವೆ, ರಾಜಕೀಯವಾಗಿ ಸಕ್ರಿಯರಾಗುವುದಿಲ್ಲ" ಎನ್ನುವ ಲಿಖಿತ ಭರವಸೆ ಪಡೆದು ಆ ನಿಷೇಧವನ್ನ ತೆರವುಗೊಳಿಸಿದ್ದೂ ಕೂಡ ಅಷ್ಟೆ ಸತ್ಯ. ಆದರೆ ಕೊಟ್ಟ ಮಾತಿಗೆ ಆರಂಭದಲ್ಲಿ ಬದ್ಧತೆ ತೋರಿದ ಸಂಘ ಆಮೇಲಾಮೇಲೆ ಈ ಮಾತಿಗೆ ಕಟ್ಟು ಬೀಳದೆ ಸರದಾರರಿಗೆ ಕೊಟ್ಟ ಮಾತಿಗೆ ತಪ್ಪಿ ನಡೆದು ರಾಜಕೀಯವಾಗಿಯೂ ಸಕ್ರಿಯವಾಗುತ್ತಿರುವ ವ್ಯಂಗ್ಯವೂ ಘಟಿಸುತ್ತಿದೆ. ಅದನ್ನ ಆದರ್ಶದ ಬೊಗಳೆ ಹೊಡೆಯುವ ಆರ್'ಎಸ್'ಎಸ್ ಮುಖಂಡರ ವರ್ತನೆಯಲ್ಲಿ ನಾವೆಲ್ಲಾ ಇಂದು ಕಣ್ಣಾರೆ ಕಾಣುತ್ತಿದ್ದೇವೆ. ಒಂದು ವೇಳೆ ೧೯೦೬ರ ನಂತರದ ದಿನಗಳಲ್ಲಿ ಭಾರತ ಸ್ವತಂತ್ರವಾಗಿದ್ದು ಅಗಲೂ ಸ್ವತಂತ್ರೋತ್ತರ ಕಾಲದಲ್ಲಿದ್ದಂತೆ ಪಟೇಲರಿಗೆ ಗೃಹಮಂತ್ರಿಯಾಗಿ ಅಷ್ಟೆ ಅಧಿಕಾರವಿರುತ್ತಿದ್ದರೆ ಆವರು ಇದೇ ನೀತಿಯನ್ವಯ "ಮುಸ್ಲಿಂ ಲೀಗ್"ನ ನಡುವನ್ನೂ ಕೂಡ ಮುರಿಯುತ್ತಿದ್ದುದು ನಿಸ್ಸಂಶಯ! ಹಾಗೇನಾದರೂ ಆಗಿರುತ್ತಿದ್ದರೆ ದೇಶ ವಿಭಜನೆಯೆ ಆಗುತ್ತಿರಲಿಲ್ಲ. ತಮಾಷೆಯೆಂದರೆ ಒಂದಾನೊಂದು ಕಾಲದಲ್ಲಿ ಅವರಿಂದ ನಿಷೇಧದ ಬರೆ ಎಳೆಸಿಕೊಂಡಿದ್ದ ಬಿಜೆಪಿಯ ಮಂದಿ ಇಂದು ರಾಜಕೀಯ ಲಾಭಕ್ಕಾಗಿ ಅದೇ ಕಾಂಗ್ರೆಸ್ಸಿಗ ಪಟೇಲರ ಹೆಸರನ್ನ ಸ್ವಾಭಿಮಾನದ ಸಂಕೇತ ಅನ್ನುವ ಹೆಸರಿನಲ್ಲಿ ಬಳಸಿಕೊಳ್ಳುತ್ತಿದ್ದರೆ, ಅವರನ್ನ ಮೂಲೆಗುಂಪು ಮಾಡಿದ್ದ ಅವರದ್ದೆ ಪಕ್ಷದವರು ಈಗ ಆಗಿರುವ ಪ್ರಮಾದಕ್ಕಾಗಿ "ಕೈ" ಹಿಸುಕಿಕೊಳ್ಳುತ್ತಿದ್ದಾರೆ!


ಪಟೇಲರನ್ನ ನೆಹರೂವಿಂದ ಆರಂಭಿಸಿ ಎಲ್ಲಾ ನೆಹರೂ ಕುಟುಂಬದ ಬಾಲಬುಡುಕರು "ಕೋಮುವಾದಿ" ಹಣೆಪಟ್ಟಿ ಕಟ್ಟಲಿಕ್ಕೆ ಹವಣಿಸಿದಕ್ಕೆ ಸಾಕಷ್ಟು ಪುರಾವೆಗಳಿವೆ. ಸೋಮನಾಥ ದೇವಾಲಯದ ಮರು ನಿರ್ಮಾಣವೆ ಅದಕ್ಕೆ ಉತ್ತಮ ಉದಾಹರಣೆ. ಸ್ವಾತಂತ್ರೋತ್ತರ ಭಾರತದಲ್ಲಿ ಮುಸ್ಲಿಂ ಧಾಳಿಕೋರರಿಂದ ಭಗ್ನವಾಗಿದ್ದ ಸೋಮನಾಥವನ್ನ ಪುನರುತ್ಥಾನಗೊಳಿಸಲಿಕ್ಕೆ ಸರದಾರರು ಉಧ್ಯುಕ್ತವಾದಾಗ ಮೊದಲ ಪ್ರಬಲ ಆಕ್ಷೇಪ ಬಂದದ್ದೆ ನೆಹರೂವಿನಿಂದ! ಅದರಿಂದ ಮುಸ್ಲೀಮರ ಭಾವನೆಗೆ ಧಕ್ಕೆಯಾಗಲಿಕ್ಕಿದೆ ಅನ್ನುವ ಹಾಸ್ಯಾಸ್ಪದ ವಾದ ಹೊತ್ತ ಈ ಆಕ್ಷೇಪಕ್ಕೆ ಚಿಕ್ಕಾಸಿನ ಬೆಲೆಯನ್ನೂ ಕೊಡದ ಪಟೇಲರು ತಮ್ಮ ವಿವೇಚನಾಧಿಕಾಅರ ಬಳಸಿ ಈ ಕಾರ್ಯವನ್ನ ದಾಖಲೆ ಅವಧಿಯಲ್ಲಿ ಮಾಡಿ ಮುಗಿಸಿದರು. ನೆಹರೂ ಹೇಳಿದಂತೆ ಯಾವೊಬ್ಬ ಮುಸ್ಲೀಮರ ಭಾವನೆಗೂ ಇದರಿಂದ ಧಕ್ಕೆಯಾದದ್ದು, ಅದರ ಪರಿಣಾಮವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ದೇಶದ ಯಾವ ಮೂಲೆಯಿಂದಲೂ ವರದಿಯಾದದ್ದು ನಮ್ಮ ಇತಿಹಾಸದಲ್ಲಂತೂ ದಾಖಲಾಗಿಲ್ಲ!


ಅಷ್ಟಕ್ಕೂ ದಕ್ಷಿಣ ಹಾಗೂ ಉತ್ತರ ಭಾರತದ ನಡುವೆ ಇರುವಷ್ಟು ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂತರ ಪಾಕಿಸ್ತಾನ ಹಾಗೂ ಉತ್ತರ ಭಾರತದ ನಡುವೆ ಇಲ್ಲ! ಧರ್ಮವೆ ದ್ವೇಷದ ಬುನಾದಿ ಅನ್ನುವುದು ಹಾಸ್ಯಾಸ್ಪದ. ಅದರಲ್ಲೂ ನಮ್ಮ ದೇಶದ ಸಾಂಸ್ಕೃತಿಕ ಔನತ್ಯವನ್ನ ಮತ್ತೆ ಎತ್ತಿ ಹಿಡಿದರೆ ನಮ್ಮ ನಾಡಿನ ಪ್ರಜೆಗಳೆ ಆಗಿರುವ ಮುಸಲ್ಮಾನರೇಕೆ ಕೆರಳುತ್ತಾರೆ? ಅದು ನಿಜವೆ ಆಗಿದ್ದರೆ ವೆನೆಜುವೆಲಾ ಹಾಗೂ ಕ್ಯೂಬಾದ ಮೇಲೆ ಅಮೇರಿಕಾ ಮುರಿದುಕೊಂಡು ಬೀಳುತ್ತಿರಲಿಲ್ಲ, ಇರಾನ್ ಹಾಗೂ ಇರಾಕ್ ಹುಟ್ಟಾ ವೈರಿಗಳಂತೆ ದಶಕಗಳ ಕಾಲ ಕತ್ತಿ ಕೊಡಲಿ ಹಿಡಿದು ಕಾದಾಡುತ್ತಿರಲಿಲ್ಲ, ತನ್ನ ಕುಖ್ಯಾತ ಗುಪ್ತಚರ ಸಂಸ್ಥೆಯ ಪಾಶವಿ ಕೃತ್ಯಗಳಿಂದ ಪಾಕಿಸ್ತಾನ ಅಫಘನಿಸ್ತಾನದ ವರ್ತಮಾನದ ಬಾಳನ್ನ ನರಕ ಮಾಡಿ ವಿಕೃತ ನಗೆಬೀರುತ್ತಿರಲಿಲ್ಲ ಅನ್ನುವ ಸಾಮಾನ್ಯ ಜ್ಞಾನ ನಮಗಿದ್ದಾರೆ ಸಾಕು. ಇದೆ ನೆಹರೂ ಪ್ರಣೀತ ಕಾಂಗ್ರೆಸ್ ಬಾಲಬುಡುಕರ ಹಾಗೂ ವಾಸ್ತವವಾದಿ ದೇಶ ಪ್ರೇಮಿಗಳ ನಡುವಿನ ವ್ಯತ್ಯಾಸ.


ಕಡೆಯದಾಗಿ ಇನ್ನೊಂದು ಘಟನೆ ಇಲ್ಲಿ ಪ್ರಸ್ತುತ. ಪಟೇಲರನ್ನ ಯಾವ ಮಟ್ಟಕ್ಕೆ ನೆಹರೂ ಎಂಬ ಅಲ್ಪ ದ್ವೇಷಿಸುತ್ತಿದ್ದ ಎನ್ನುವುದಕ್ಕೆ ಇಲ್ಲಿ ಪುರಾವೆ ಸಿಗುತ್ತದೆ. ತನ್ನ ತಂದೆಯ ಮರಣದ ನಂತರ ಅಂದಿನ ಲೋಕಸಭಾ ಸದಸ್ಯೆಯಾಗಿದ್ದ ಪಟೇಲರ ಮಗಳು ಮಣಿಬೆನ್ ಎಂದಿನ ರೂಢಿಯಂತೆ ಆಹಮದಾಬಾದಿನಿಂದ ಆಗಿನ್ನೂ ಚಾಲ್ತಿಯಲ್ಲಿದ್ದ ರೈಲಿನ ಮೂರನೆ ದರ್ಜೆಯಲ್ಲಿಯೆ ಪ್ರಯಾಣಿಸಿ ದೆಹಲಿ ತಲುಪಿದರು. ಎಂದಿನಂತೆ ಒಂದು ಜೋಳಿಗೆ ಮಾತ್ರ ಆಕೆಯ ಬಗಲಿನಲ್ಲಿತ್ತು ಹಾಗೂ ಅದರಲ್ಲಿ ಒಂದು ನೋಟು ಪುಸ್ತಕ ಹಾಗು ಮೂವತ್ತು ಸಾವಿರ ರೂಪಾಯಿಯ ನೋಟುಗಳು ಇದ್ದವು! ಅದು ಪಕ್ಷಕ್ಕಾಗಿ ಪಟೇಲರು ಸಂಗ್ರಹಿಸಿದ್ದ ನಿಧಿ ಹಾಗೂ ಅದರ ವಿವರ ಬರೆದಿದ್ದ ಪುಸ್ತಕ. ಅದನ್ನ ಅಂದಿನ ಪ್ರಧಾನಿ ನೆಹರೂಗೆ ದಾಟಿಸಲಿಕ್ಕೆ ಮಣಿಬೆನ್ ಸಮಯ ಕೇಳಿದರು. ಪ್ರಧಾನಿ ಗೃಹ ಕಛೇರಿಯಲ್ಲಿ ಅವರಿಗೆ ಹತ್ತು ನಿಮಿಷಗಳ ಭೇಟಿಯ ಆವಧಿಯೂ ಸಿಕ್ಕಿತು. ಆ ಕಿರು ಆವಧಿಯ ಭೇಟಿಗೆ ಸ್ವತಃ ಲೋಕಸಭಾ ಸದಸ್ಯೆ ಹಾಗೂ ಮಾಜಿ ಉಪ ಪ್ರಧಾನಿಯ ಮಗಳಾಗಿದ್ದರೂ ಮಣಿಬೆನ್'ರನ್ನ ಭಂಡ ನೆಹರೂ ಬೇಕಂತಲೆ ಎರಡು ಘಂಟೆ ಕಾಯಿಸಿದರು! ಹೇಳಿದ ಹೊತ್ತಿಗೆ ಹಾಜರಿದ್ದ ಮಣಿಬೆನ್ ಬಿಗಿದ ಮುಖ ಚೆಹರೆಯ ನೆಹರು ಕೈಗೆ ಆ ನಿಧಿ ಹಾಗೂ ವಿವರಗಳಿದ್ದ ಪುಸ್ತಕ ಒಪ್ಪಿಸಿ ತನ್ನ ಅಪ್ಪ ವಹಿಸಿದ್ದ ಕೊನೆಯ ಕಾರ್ಯಭಾರವನ್ನ ಚಾಚೂ ತಪ್ಪದೆ ನಿರ್ವಹಿಸಿ ಪಿತೃಋಣದಿಂದ ಮುಕ್ತರಾದರು.


ಕನಿಷ್ಟ ಸೌಜನ್ಯಕ್ಕೂ ಅವಿವಾಹಿತೆ ಹಾಗೂ ಒಂಟಿ ಜೀವಿಯಾಗಿದ್ದ ಆಕೆಯ ಮುಂದಿನ ಬಾಳಿನ ವ್ಯವಸ್ಥೆಯ ಕಾಳಜಿ ವ್ಯಕ್ತ ಪಡಿಸದ ನೆಹರೂ ಆಕೆಯ ಮುಂದಿನ ಬಾಳಿನ ಅಗತ್ಯಗಳ ಬಗ್ಗೆ ವಿಚಾರಿಸಿಕೊಳ್ಳಲಿಲ್ಲ! ಭೇಟಿಗೆ ಬಂದಷ್ಟೆ ಶೀಘ್ರವಾಗಿ ರೇಷನ್ನಿನಂತೆ ಕೆಲವೆ ಕೆಲವು ಔಪಚಾರಿಕ ಮಾತುಗಳನ್ನಾಡಿ ಅದೆ ಬಿಗಿದ ಮುಖ ಭಾವದೊಂದಿಗೆ ಹಣದ ಥೈಲಿ ಕಸಿದುಕೊಂಡ ನಿರ್ಲಜ್ಜ ನೆಹರು ನಿರ್ಗಮಿಸಿದರು. ಆ ಕಾಲದಲ್ಲಿ ಮೂವತ್ತು ಸಾವಿರ ರೂಪಾಯಿಗಳಿಗೆ ಇದ್ದ ಬೆಲೆಯನ್ನ ಊಹಿಸಿ ಹಾಗೂ ನೆಹರೂಗೆ ಆ ಸಂಗ್ರಹಿತ ನಿಧಿಯ ಬಗ್ಗೆ ಸುಳಿವೇ ಇರಲಿಲ್ಲ ಅನ್ನುವುದನ್ನ ಜ್ಞಾಪಿಸಿಕೊಳ್ಳಿ. ದೇಶದ ಬಗ್ಗೆ ನಿಸ್ಪೃಹ ಒಲವಿದ್ದ ಮಣಿಬೆನ್'ರ ಪ್ರಾಮಾಣಿಕತೆಗೆ ಹಾಗೂ ಅವರ ತಂದೆ ಪಟೇಲರ ಧೀಮಂತಿಕೆಗೆ ಈ ದೇಶದ ಖಜಾನೆಯನ್ನೆ ನೆಕ್ಕಿ ನೊಣೆದ ನೆಹರೂ ಹಾಗೂ ಅವರ ಉತ್ತರಾಧಿಕಾಅರಿ ಹೀನಾತಿಹೀನ ಸಂತಾನಗಳ ಹಪಾಹಪಿಯೊಂದಿಗೆ ಹೋಲಿಸಿ ನೋಡಿ. ಹೊಲಸು ಹಾಗು ಒಳ್ಳೆತನದ ಹುಲುಸು ಇವುಗಳ ನಡುವಿನ ವ್ಯತ್ಯಾಸ ಖಂಡಿತ ನಿಮ್ಮ ಅರಿವಿಗೆ ಬರುತ್ತದೆ.


ಪಟೇಲರೆ ನಿಮಗೆ ನಮ್ಮ ಕೃತಜ್ಞತೆಗಳು ಖಂಡಿತಾ ಸಲ್ಲುತ್ತವೆ. ಈ ಕೃತಜ್ಞ ದೇಶ ನಿಮ್ಮನ್ನ ಮರೆತಿಲ್ಲ ಸ್ವಾಮಿ.


http://www.youtube.com/watch?v=QLAbNqKKxY0

No comments: