06 October 2013

ಮತ್ತರಳುವ ಮೊಗ್ಗಿನ ಮುಖದಲ್ಲಿ ಬತ್ತದ ಮಂದಹಾಸವಷ್ಟೆ ಮರಳಿ ಅರಳುತ್ತಿದೆ.....






ಕಾಲದ ಕಪ್ಪು ಹಾದಿಯಲ್ಲಿ ಗೋಚರಿಸುವ
ಚೂರು ಬೆಳಕೆ ಭರವಸೆ....
ನೆನ್ನೆಯ ಇರುಳು ಕಳೆದು ನಾಳೆಯಾದರೂ ಹಗಲಾದೀತು
ಅನ್ನೋದು ಎಲ್ಲರೆದೆಯ ಕ್ಷೀಣ ಆಸೆ,
ಅಸೀಮ ಸಂಚಾರಿ ಮನಸಿಗೆ ಈಡೇರದ
ಸಾವಿರ ಕನಸುಗಳು ಬಳುವಳಿಯಾಗಿ ಬಂದಿದ್ದರೂ....
ದೊರೆತಿರುವ ಬಾಳು ಮಾತ್ರ
ಕೇವಲ ಒಂದೇ ಒಂದು/
ಖಾಲಿ ಪುಟಗಳ ಹಳೆಯ ಪುಸ್ತಕದೊಳಗಿನ
ಮಾಸದ ಪರಿಮಳ ನಾನು....
ನನ್ನ ನೆನಪುಗಳಲ್ಲಿ ದಾಖಲಾಗಿರದಿದ್ದರೂ
ಅವುಗಳ ಛಾಪು ಇದ್ದೇ ಇದೆ,
ಕನಸು ಕಾಣುವ ಕಣ್ಣಿಗೆ
ಮನಸ ಮುಟ್ಟುವ ಆಕಾಂಕ್ಷೆಯೂ ಇತ್ತು....
ಆದರೂ ಎಡವಿದ್ದೆಲ್ಲಿ ಎನ್ನುವ ಅರಿವು
ಇನ್ನೂ ಆಗುತ್ತಲೆ ಇಲ್ಲ.//



ಸರಿದ ಕಾಲದ ಚಕ್ರದ ಗುರುತುಗಳು
ಹಣೆಯ ರೇಖೆಗಳಾಗಿ ಮೂಡೋದು.....
ಕಾಕತಾಳೀಯವಂತೂ ಖಂಡಿತಾ ಅಲ್ಲ,
ಕರಗಿದ ಕ್ಷಣಗಳು ಘನವಾದ ಭಾವಗಳಾಗಿ
ಮನದ ಸರೋವರದಲ್ಲಿ ನಿರಂತರ ತೇಲುತ್ತಿರುವಾಗ,,,,,,
ನಾನಂತೂ ನಿರಾತಂಕ/
ಒಂದು ಸ್ವಪ್ನ ಸುಮ ಸಿಗದೆ ಹೋದರೆ
ಮರುಕ್ಷಣವೆ ಮತ್ತೊಂದು ಪುಷ್ಪವನ್ನರಸುವ.....
ಪಾಪಿ ದುಂಬಿ ನಾನಲ್ಲ,
ಉಪವಾಸ ಸತ್ತೇನು
ಮತ್ತೆಂದೂ ಹೂವ ಅಧರಕ್ಕೆ....
ನನ್ನವೆರಡು ತುಟಿ ಹೊಲೆಯಲಾರೆ.//


ಮುಂಜಾವಿನ ನಿರೀಕ್ಷೆಗಳೆಲ್ಲ
ಮುಸ್ಸಂಜೆಯಲ್ಲಿಯೆ ಕಳೆದುಹೋಗುವಾಗಲೂ....
ಕತ್ತಲಲ್ಲಿ ಮತ್ತೆ ಕನಸನ್ನರಳಿಸುವ ಉಮೇದು
ಸೋತು ಮುದುಡಿದ ಕಣ್ಣುಗಳಿಗಿದೆ,
ಒಂಟಿ ಎನ್ನುವುದೊಂದು ಭ್ರಮೆ
ಕಡಿವಾಣವಿಲ್ಲದ ಮಾತಿಗೆ ಇದ್ದೇ ಇದೆ....
ಮೌನದ ಅನಂತ ಕ್ಷಮೆ/
ಮನ ಕೋರುವ ಅತ್ಮೀಯ ಸ್ಪರ್ಶದ ಹಿತದಲ್ಲಿ
ಹೌದಲ್ಲ, ನೀನೆ ನೀನಾಗಿ ಅಡಗಿದ್ದೀಯ....
ಮಧುರ ಮೌನದಲ್ಲಿ ಎದೆಯಾಳಕ್ಕಿಳಿಯುವ ಆರ್ತ ಗಾನದಲ್ಲಿ
ಹೌದು, ನೀನಿದ್ದೀಯಾ,
ಒಂದೆ ಕಾಲಲ್ಲಿ ನಿಂತು ಕೊನೆಯವರೆಗೆ
ಕುತ್ತಿಗೆ ಉದ್ದ ಮಾಡಿಕೊಂಡು ಕಾಯುವುದು....
ಎಷ್ಟು ಯಾತನಾದಾಯಕ ಸುಖ ನಿನಗೂ ಗೊತ್ತಲ್ಲ?
ಮತ್ತೂ ಕಾಯಿಸಬೇಡ
ಆದಷ್ಟು ಬೇಗ ಬಂದೇ ಬಿಡು.//


ಕಾದ ಪ್ರತಿಯೊಂದು ಕನಸಿನ ಮೊಗ್ಗುಗಳಿಗೂ
ಸುಮವಾಗಿ ನಗುವ ಆವಕಾಶ ಸಿಗೋದಿಲ್ಲ....
ಆದರೂ ಗಿಡ ನಿತ್ಯ ನಿರೀಕ್ಷೆಯ
ನವ ಮೊಗ್ಗರಳಿಸದಿರೋದಿಲ್ಲ,
ಬಾಗಿ ಹೋದ ಬೆನ್ನಿನ ಮೇಲೆ ಮೂಡಿದ
ನೂರು ಭಾರಗಳ ಗುರುತುಗಳೀರೋದನ್ನ ಗುರುತಿಸಬಹುದು....
ಆದರೆ ಮಾಗಿದ ಮನಸಿನ ಮನೋವೇದನೆಯನ್ನ
ಹಾಗೆಯೆ ನಿರ್ದಿಷ್ಟವಾಗಿ ತೋರಿಸೋದಾದರೂ ಹೇಗೆ?/
ಘಾತುಕ ಸ್ವಪ್ನಗಳ ಸಹವಾಸ ಮಾಡಿಯಾದ ಮೇಲೆ
ಮನಸಿಗೆ ಆದ ಗಾಯಗಳನ್ನ ಮಾಯುತ್ತವೆಂದು......
ಕಾಯುವುದು ಮೂರ್ಖತನವೆಂಬ ಆರಿವಿದ್ದರೂ
ನಾನು ಚಿರ ಹುಂಬನಾಗಿಯೇ ಉಳಿಯಲಿದ್ದೇನೆ,
ಕಣ್ಣು ಹೊಳೆವ ಕಾರಣ ನಾಳೆಯ ಕನಸಲ್ಲವ?
ನಿರರ್ಥಕ ಈ ನೆನ್ನೆಯ ಮುನಿಸಲ್ಲವ?//

No comments: