06 October 2013

ಹಲವು ಕನಸುಗಳ ಕೆಲವೆ ನಿರೀಕ್ಷೆಗಳು......
ಕಾರಣ ನೂರಿದ್ದರೂ ಹೂರಣ ಹಲವಿದ್ದರೂ
ನಾನೆ ನನ್ನ ತುಟಿಗಳನ್ನ ಭದ್ರವಾಗಿ ಹೊಲಿದುಕೊಂಡಿರುವಾಗ.......
ನೀನು ಬೆದರಲು ಕಾರಣವಿಲ್ಲ,
ಸಾರಿ ಹೇಳದ ಮಾತುಗಳು ಮನದೊಳಗೆ ಮರಿ ಹಾಕಿ
ತನ್ನನ್ನ ತಾನೆ ವೃದ್ಧಿಸಿಕೊಳ್ಳುತ್ತಿರುವ ಹಾಗೆ....
ಹಚ್ಚದೆಯೆ ಹಬ್ಬಿ ಸುಡುತಲಿದೆ ನನ್ನೆದೆಯೊಳಗೆ ಬೇಗೆ/
ಕದಡಿದ ಕೊಳದಲ್ಲಿ ಅರಳಿದ ತಾವರೆಯ ಮೇಲೆ
ಕುಳಿತ ಬಿಂದುವೊಂದು ಈಗಲೋ ಆಗಲೋ ಜಾರಿ ಮತ್ತೆ.....
ನೀರ ಪಾಲಾಗುವುದು ಖಚಿತವಿದ್ದರೂ
ಜಾರುಜಾರುತ್ತಾ ಕೇವಲ ಒಲವನ್ನಷ್ಟೆ ಕನವರಿಸುತ್ತಿರೋದ ಕಂಡಿರ?,
ಕರಗಿದ ಒಂಟಿ ಮೋಡವೊಂದು
ಧೂಳಿನ ಮನಸೊಳಗೆ ಬಿದ್ದು ಅಂತರ್ಧನವಾಗುವ ಮುನ್ನ....
ಹನಿ ಹನಿಯಾಗಿ ಕಣ್ಣಲ್ಲಿ ಒಲವನ್ನೆ
ಪ್ರತಿಫಲಿಸುವುದನ್ನು ಅರಿತಿರ?//


ಕೇವಲ ಕನಸಲ್ಲ ತುಂಬಾ ಗಟ್ಟಿ ನಿಲುವಿತ್ತು
ಆಸೆಯ ಬಲವೂ ಇತ್ತು....
ನಿರೀಕ್ಷೆ ಪೂರ್ತಿ ಫಲಿಸದಿರೋಕೆ ಬಹುತೇಕ ನಾನಲ್ಲ ಕಾರಣ
ಮತ್ತಿನ್ನೇನೋ ಇದೆ ಅದರ ಒಳ ಹೂರಣ,
ಕನಸಿನ ಹಾದಿಯಲ್ಲಿನ ಕತ್ತಲ ಪಯಣ
ನನಸಿನ ಹಣೆಬರಹವಾಗಿರುವುದು ಅರಿವಿದ್ದರೂ ಸಹ....
ನಾನು ನಿನ್ನನ್ನ ಸೇರಲಿಕ್ಕೆ
ನಿತ್ಯ ಹೀಗೆಯೆ ಹಂಬಲಿಸುತ್ತಿದ್ದೆ/
ಪ್ರಾರ್ಥನೆಯಂತಹ ನಿನ್ನ ಪಿಸುದನಿ
ಆಲಾಪದಂತಹ ನಿನ್ನ ಗುನುಗಿನ ನೆನಪ ಹನಿ....
ನನ್ನೆದೆಯಲ್ಲಿ ಆರಿ ಇನ್ನಿಲ್ಲವಾಗುವ ತನಕ
ಇನ್ಯಾರೂ ನನ್ನ ಮೋಡಿ ಮಾಡಲಾರರು,
ಮನೆ ಮನಕ್ಕೆ ಕಾವಲಿಲ್ಲ ಬಾಗಿಲಿಲ್ಲ
ಸೂರೆ ಹೋಗುವ ಭಯವೂ ಇಲ್ಲ.....
ನನ್ನೆಲ್ಲ ನೆನಪುಗಳ ಇಡಿಗಂಟು
ನಿನ್ನೆದೆಯ ಖಜಾನೆಯಲ್ಲಿ ಭದ್ರವಾಗಿಯೇ ಇದೆಯಲ್ಲ.//


ಸಂಕಟವೆ ಸಡಗರ ನೋವೆ ಇಲ್ಲಿ ಸಂಭ್ರಮ
ಎದೆಯೊಳಗೆ ಉರಿಯುತಿರೋ ವಿರಹದ ಉರಿ......
ಇನ್ನುಳಿದವರ ಚಳಿಗೆ ಬೆಚ್ಚಗೆನಿಸಬಹುದೇನೋ
ಆದರೆ ಮನದ ಉರಿವ ಅಗ್ಗಷ್ಟಿಕೆಗೆ ಮಾತ್ರ
ಕಿಂಚಿತ್ತೂ ಕರುಣೆಯಿರೋಲ್ಲ,
ಸರಿದ ಕ್ಷಣಗಳನ್ನೆಲ್ಲ ಸುರಿದು ಹಾರವನ್ನಾಗಿಸಿಕೊಂಡು
ಎದೆಯ ಮೇಲದನ್ನ ಹರಡಿಕೊಂಡು....
ಕಳೆದು ಹೋದ ಪದಕಕ್ಕಾಗಿ ಮಾತ್ರ
ನಿತ್ಯವೂ ಕಾಯುತ್ತಲೆ ಇದ್ದೇನೆ/
ಕಾರಿರುಳಲ್ಲಿ ಕಾದಿರುವ ಕನಸುಗಳ ಕಣ್ಣುಗಳಲ್ಲಿ
ನಿದಿರೆ ಮರೆತ ಕುರುಹು ಕಡು ಕೆಂಪಾಗಿ ಕಾಣುತ್ತಿದೆ.....
ತುಸು ಮಳೆಯಲ್ಲಿ ತೋಯುತ್ತಾ
ನಸುನಗುವ ಚಿಮ್ಮಿಸುತ್ತಾ....
ನಿನ್ನನೆ ನೆನೆಯುತ್ತಾ ಕನವರಿಸುವ ಆಸೆ
ಕಣ್ಣಲ್ಲಿ ಅನುಗಾಲದಿಂದ ಆಡಗಿಕೂತಿದೆ,
ಹೆಸರನ್ನ ಬಿಟ್ಟು ಉಸಿರನ್ನೂ ಬಿಟ್ಟುಕೊಟ್ಟು
ಅನಾಮಿಕನಾಗಿ ಅದೆಷ್ಟೆ ಅಜ್ಞಾತನಾಗಿರಲು ಹವಣಿಸಿದರೂ ನಾನು....
ನಿನ್ನ ಖಾಯಂ ವಿಳಾಸವಾಗುವಲ್ಲಿಂದ
ತಪ್ಪಿಸಿಕೊಳ್ಳಲಾಗುತ್ತಲೆ ಇಲ್ಲವಲ್ಲ.//


ದಣಿವಾರಿಸಿಕೊಳ್ಳಲು ಎಲ್ಲಿಯೂ ನಿಲ್ಲದೆ
ಒಂದೇ ಸಮನೆ ಬಿಸಬಿಸ ನಡೆಯುತ್ತಿದ್ದರೂ ಸಹ....
ನನಗಿನ್ನೂ ಒಂದಿನಿತೂ ನಿನ್ನ
ಸೀಮೆಯ ಎಲ್ಲೆಯನ್ನ ದಾಟಲಾಗಿಯೇ ಇಲ್ಲ,
ಆಲ್ಪತೃಪ್ತನಾಗುವುದರಿಂದ ಆಗುವ ದೊಡ್ಡ ಉಪಕಾರವೆಂದರೆ
ಅಸೆಗಳು ಅದೆಷ್ಟೆ ಅಗಾಧವಾಗಿದ್ದರೂ....
ದಕ್ಕಿದ ಕೆಲ ನೆನಪುಗಳಲ್ಲಿಯೆ
ಕೊನೆಯವರೆಗೂ ಕಾಲ ಹಾಕಬಹುದು/
ಅಂಗಳದ ಮೂಲೆಯ ತುಳಸಿ
ಹಿತ್ತಲ ಗುಂಡಿಯ ಬಳಿಯ ರತ್ನಗಂಧಿ.....
ಏನೋ ಒಂದಾಗಿಯಾದರೂ ನಿನ್ನ ನಿಶ್ವಾಸದ ಉಸಿರು ಸುಳಿವಲ್ಲಿಯೆ
ಅದನ್ನ ನಿತ್ಯ ಅಘ್ರಾಣಿಸುತ್ತಾ ಇರುವ ಅನುಗಾಲದ ಆಸೆ ಇನ್ನೂ
ಜೀವಂತವಾಗಿದೆ ಆದೆಂದೋ ಸತ್ತ ನನ್ನೊಳಗೆ,
ಕರಗಿದ ಕನಸಿನ ಮೋಡಗಳೆಲ್ಲ
ಮನದ ಬಾನಿನಿಂದ ಕೆಳಗಿಳಿದು ಅಶ್ರುಗಳನ್ನ ಕೆಲ ಕಾಲ ಆಶ್ರಯಿಸಿ....
ಕಾಡಿಗೆಯ ಕೊನೆ ಗುರುತನ್ನೂ
ಕರಗಿಸಿಯೆ ನೆಲಕ್ಕಿಳಿಯುತ್ತವೆ.//

No comments: