11 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೧.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೧.👊


ಅಕ್ಷರ ಜ್ಞಾನವಿಲ್ಲದ ಬಪಮನಿಗೆ ಮನೆಯ ಯಾರಾದರೊಬ್ಬರು ಆ ಪುಸ್ತಕಗಳೆಲ್ಲವನ್ನೂ ಓದಿ ಹೇಳುವುದಿತ್ತು. ಅವರಿಗಾಗಿಯೆ ಮಾಡಿಸಿಟ್ಚಿದ್ದಂತ ಬಟ್ಟೆ ಕಟ್ಟುವ ಮರದ ಆರಾಮ ಕುರ್ಚಿಯೊಂದನ್ನು ಮನೆಯ ಜಗಲಿಯ ಹೊರ ಕಿಟಕಿಯ ದಳಿಯ ಪಕ್ಕದಲ್ಲಿ ಹಾಕಿದ್ದುˌ ಬಪಮ ಅದರಲ್ಲಿ ಮಲಗಿದ ಭಂಗಿಯಲ್ಲಿ ಕೂತು ಹೆಚ್ಚಾಗಿ ಮೊಮ್ಮಕ್ಕಳೋ ಅಥವಾ ಆಗೀಗ ಸೊಸೆಯಂದಿರೋ ಇಲ್ಲಾ ಮಕ್ಕಳೋ ದೊಡ್ಡ ಧ್ವನಿಯಲ್ಲಿ ಓದಿ ಹೇಳುತ್ತಿದ್ದ ಆ ಮಾಸಿಕ-ಸಾಪ್ತಾಹಿಕಗಳಲ್ಲಿ ಪ್ರಕಟವಾಗಿರುತ್ತಿದ್ದ ಕಥೆಗಳನ್ನ ತದೇಕ ಚಿತ್ತದಿಂದ ಆಲಿಸುತ್ತಾ ಕಥೆಯ ಪಾತ್ರಗಳ ಭಾವಾಭಿವ್ಯಕ್ತಿಯ ಸಂಭಾಷಣೆಗಳಿಂದ ನಡುನಡುವೆ ಉತ್ತೇಜಿತರಾಗಿ ಪ್ರತಿಕ್ರಿಯಿಸುತ್ತಿದ್ದುದಿತ್ತು. ಅವರು ತಲೆಗೆ ಸದಾ ಹಚ್ಚಿಕೊಳ್ಳುತ್ತಿದ್ದ ಎಣ್ಣೆಯ ಕೃಪೆಯಿಂದ ಆ ಆರಾಮ ಕುರ್ಚಿಯ ತಲೆ ಇಡುವ ಭಾಗ ಎಣ್ಣೆಯನ್ನ ಹೀರಿ ಹೀರಿ ತನ್ನ ಮೂಲ ಬಣ್ಣವನ್ನೆ ಕಳೆದುಕೊಂಡು ಒಂಥರಾ ಜಿಡ್ಡು ಜಿಡ್ಡಾದ ಕಪ್ಪಾಗಿ ಹೋಗಿತ್ತು.


ಟಿವಿ ಅನ್ನುವ ಮಾಯಾಪೆಟ್ಟಿಗೆ ಆ ಊರಿಗೆ ಬಂದ ಹೊಸತು. ಮೊದಲೆಲ್ಲ ಟಿವಿಗೆ ಮನೆಯಲ್ಲೆ ಆಂಟೆನಾ ಕಟ್ಟಿಕೊಳ್ಳುತ್ತಿದ್ದವರು ಊರವರಿಗೆ ಡಿಶ್ ಕೇಬಲ್ ಪರಿಚಯಿಸಿದ ಶ್ರೀನಿವಾಸ ಶೆಟ್ಟರ ಮೂಲಕ ತಾವೂ ಆಂಟೆನಾಕ್ಕೆ ವಿದಾಯ ಹೇಳಿ ಕೇಬಲ್ ಜಾಲದ ಸದಸ್ಯರಾಗಿದ್ದ ಆರಂಭಿಕ ಮನೆಗಳಲ್ಲಿ ವಿಜಯೇಂದ್ರ ಶಣೈರವರ ಮನೆಯೂ ಒಂದು. ಪುಟ್ಟದೊಂದು ಕಪ್ಪು-ಬಿಳುಪು ಟಿವಿಯನ್ನ ಮನೆಯ ಮಧ್ಯದ ಕೋಣೆಯಲ್ಲಿಟ್ಟ ಮೇಲೆ ಅದೆ ಕೋಣೆಯ ಮೂಲೆಯಲ್ಲಿದ್ದ ಮಂಚದ ಮೇಲೆ ಮಲುಗುವ ಅಭ್ಯಾಸವಿದ್ದ ಬಪಮನಿಗೆ ಆಗಿದ್ದ ಏಕೈಕ ದೂರದರ್ಶನದ ಮೂಲಕ ರಾಮಾಯಣˌ ಮಹಾಭಾರತ ನೋಡುವ ಅವಕಾಶವೂ ಸಿಕ್ಕಿತು. ಹಿಂದಿ ಭಾಷೆ ಬಾರದ ಅವರಿಗೆ ಕಥೆ ಹಾಗೂ ಸಂಭಾಷಣೆಯನ್ನ ಜೊತೆಯಲ್ಲಿ ಕೂತವರ್ಯಾರಾದರೂ ಅವರಿಗೆ ಕೇಳುವಷ್ಟು ಗಟ್ಟಿಯಾಗಿ ವಿವರಿಸಿ ಹೇಳುತ್ತಿದ್ದರೆ ಮಂತ್ರಮಗ್ಧರಾಗಿ ಟಿವಿಯ ಧಾರವಾಹಿ ನೈಜವಾಗಿ ನಡೆಯುತ್ತಿದೆಯೇನೊ ಅನ್ನುವಂತೆ ಅದಕ್ಕೆ ಪ್ರತಿಕ್ರಿಯಿಸುತ್ತಾ ಅವರು ತನ್ನ ದಪ್ಪ ಗಾಜಿನ ಕಪ್ಪು ಕನ್ನಡಕ ಏರಿಸಿಕೊಂಡು ಅವುಗಳನ್ನ ನೋಡುವುದಿತ್ತು.

ಕಾಲಕ್ರಮೇಣ ಒಂದಿದ್ದ ದೆಹಲಿಯ ಹಿಂದಿ ದೂರದರ್ಶನ ಎರಡಾಗಿ ಬೆಂಗಳೂರಿನ ಕನ್ನಡ ದೂರದರ್ಶನವಾಗಿ ಮರಿ ಹಾಕಿತು. ಮಧ್ಯಾಹ್ನದ ಊಟದ ನಂತರ ಬಪಮನ ಮನರಂಜನೆಯ ಸಾಲಿಗೆ "ಮನೆತನ" "ಜನನಿ" "ಸಾಧನೆ" "ಮಾಯಾಮೃಗ" ಮುಂತಾದ ದೈನಂದಿನ ಧಾರವಾಹಿಗಳು ಸೇರ್ಪಡೆಯಾದವು. ಅವರ ಏಕತಾನತೆಯನ್ನೆಲ್ಲ ಈ ಟಿವಿ ಧಾರಾವಾಹಿಗಳ ಅಸಂಖ್ಯ ಪಾತ್ರಗಳು ಕಡಿಮೆ ಮಾಡುವಲ್ಲಿ ಒಂದಷ್ಟು ಮಟ್ಟಿಗೆ ಯಶಸ್ವಿಯಾಗಿದ್ದವು.

ಸದಾ ತುಂಬಿರುತ್ತಿದ್ದ ಮನೆ ಕ್ರಮೇಣ ವಯಸ್ಸಾಗುತ್ತಾ ಬರುತ್ತಿದ್ದ ಅವರ ಹಿರಿಯ ಮಗ-ಸೊಸೆಯ ಹೊರತು ಅವರೊಬ್ಬರನ್ನೆ ಆ ಮನೆಯಲ್ಲಿರಿಸುವಂತಾಗಿಸಿದ್ದ ಕಾಲ ಅದು. ಬೆಳೆದು ನಿಂತಿದ್ದ ಮೊಮ್ಮಕ್ಕಳೆಲ್ಲಾ ಹೆಚ್ಚಿನ ವಿದ್ಯಾಭ್ಯಾಸˌ ಅನಂತರದ ಉದ್ಯೋಗ ಅಂತ ದೂರದ ನಗರಗಳಿಗೆ ವಲಸೆ ಹೋಗಿದ್ದವರು ಹಿಂದೆ ಬರಲೊಲ್ಲದೆ ಅಲ್ಲಲ್ಲೆ ನೆಲೆ ನಿಂತರು. ಮೊದಲಿನಂತೆ ಕಥೆ ಪುಸ್ತಕಗಳನ್ನ ಓದಿ ಹೇಳುವ ಪುಣ್ಯಾತ್ಮರ್ಯಾರೂ ಈಗೀಗ ಇರಲಿಲ್ಲ. ಪ್ರಾಯ ಸಂದ ಕಾರಣ ಆರೈಕೆ ಮಾಡಲಾಗದೆ ಮನೆಯ ಹಿತ್ತಲ ಕೊಟ್ಟಿಗೆಯಲ್ಲಿದ್ದ ಎಮ್ಮೆ ಹಾಗೂ ದನವನ್ನು ಸೊಸೆ ಮಾರಿದ್ದರಿಂದ ಹಟ್ಟಿ ಕೆಲಸವೂ ಇದ್ದಿರಲಿಲ್ಲ. ಅವರ ಸಮಪ್ರಾಯದ ಸುತ್ತಮುತ್ತಲ ಮನೆಗಳ ಹೆಂಗಸರು ಒಂದರೆ ಘಳಿಗೆ ಸಂಜೆ ಹೊತ್ತಿಗೆ ಅವರಲ್ಲಿಗೆ ಬಂದು ಕೂತುˌ ಹಲ್ಲಿಲ್ಲದ ಅವರು ಕುಟ್ಟಾಣಿಯಲ್ಲಿ ಹಾಕಿ ಜಜ್ಜಿದ ಎಲೆ-ಅಡಿಕೆ-ಹೊಗೆಸೊಪ್ಪು-ಸುಣ್ಣದ ಮಿಶ್ರಣವನ್ನ ಮೆದ್ದುˌ ಅವರಂತೆ ಚೂರುಪಾರು ನಸ್ಯ ಎಳೆದು ಅದೂ ಇದೂ ಊರ ಪಂಚಾಯ್ತಿ ಬಾಯಿ ತುಂಬಾ ಹರಟಿ ಹೋಗುತ್ತಿದ್ದುದು ಬಿಟ್ಟರೆ ಅವರಿಗೆ ಒಂಟಿತನ ಬಾಧಿಸ ತೊಡಗಿದ್ದ ಕಾಲ ಅದು. ಟಿವಿಯ ಈ ಧಾರವಾಹಿಗಳೂ ಇಲ್ಲದಿದ್ದಿದ್ದರೆ ಬಹುಶಃ ಅವರಿಗೆ ಹುಚ್ಚೆ ಹಿಡಿಯುವ ಸಂಭವವಿತ್ತು ಅನ್ನಿಸುತ್ತೆ.


ತಮ್ಮ ತಮ್ಮ ಶಾಲಾ-ಕಾಲೇಜು-ಕಛೇರಿಗಳಿಗೆ ರಜೆ ಸಿಕ್ಕಾಗ ಮಾತ್ರ ಅವರ ಮನೆ ಮತ್ತೆ ಮಕ್ಕಳು ಮೊಮ್ಮಕ್ಕಳಿಂದ ಗಿಜಿಗುಡುವುದು ಮಾಮೂಲಾಯಿತು. ಅವರೆಲ್ಲ ಬಂದಾಗ ಖುಷಿಯಿಂದಿರುತ್ತಿದ್ದ ಬಪಮ ಅವರೆಲ್ಲಾ ರಜೆ ಮುಗಿದು ತಮ್ಮ ತಮ್ಮ ನಿತ್ಯದ ಬಾಳ್ವೆಗೆ ಮರಳಿದ ಮೇಲೆ ಒಂಟಿತನದ ಬಾಧೆ ಅನುಭವಿಸುವುದು ಅವರ ಖಾಯಂ ಹಣೆಬರಹವೆ ಆಯಿತು. ಮಗ ಇನ್ನೂ ನಿವೃತ್ತ ಜೀವನ ಆರಂಭಿಸದೆ ಬಸ್ ಸ್ಟ್ಯಾಂಡಿನಲ್ಲಿದ್ದ ತನ್ನ ಬುಕ್ಕಿಂಗ್ ಕೌಂಟರಿಗೆ ಹೋಗಿ ಕೂತುಕೊಳ್ಳುತ್ತಿದ್ದರಂತೂ ಮನೆಯಲ್ಲಿ ಕೇವಲ ಅತ್ತೆ-ಸೊಸೆ ಇಬ್ಬರೆ ಆಗಿ ಒಟ್ಟಿನಲ್ಲಿ ಅವರಿಗೆ ಇದೊಂತರ ಮಾನಸಿಕ ಹಿಂಸೆ ಅನಿಸತೊಡಗಿತ್ತು. 


ಆಗಷ್ಟೆ ಶಾಲೆಗೆ ಹೋಗಲು ಆರಂಭಿಸಿದ್ದ ಅವನು ಬಪಮನಿಗೆ ಹತ್ತಿರವಾಗಿದ್ದ. ಅವನಿಗೂ ಓದುವ ಚಟ ಅಂಟಿದ್ದರಿಂದ ಬಪಮನಿಗೆ ಓದಿ ಹೇಳುವ ನೆಪದಲ್ಲಿ ಅವರ ಮನೆಯಲ್ಲಿ ಓದಲು ಸಿಗುವ ಎಲ್ಲಾ ದಿನ-ವಾರ-ಮಾಸ ಪತ್ರಿಕೆಗಳನ್ನ ಗೋರಿ ಗುಡ್ಡೆ ಹಾಕಿಕೊಂಡುˌ ಅವನ ಈ ಅವತಾರ ಕಂಡು ರೋಸಿ ಹೋಗಿ ಸದಾ ಪಿರಿಪಿರಿ ಮಾಡುತ್ತಿದ್ದ ಬಪಮನ ಸೊಸೆ ಸೀತಮ್ಮನ ಅಸಹನೆಯನ್ನೆಲ್ಲ ಭಂಡತನದಿಂದ ನಿರ್ಲಕ್ಷ್ಯಿಸಿ ಸಿಕ್ಕ ಅವಕಾಶವನ್ನ ಸದುಪಯೋಗ ಪಡಿಸಿಕೊಂಡು ಹೊತ್ತಲ್ಲದ ಹೊತ್ತಲ್ಲಿ ಅನುಮತಿಗೂ ಕಾಯದೆ ಅವರ ಮನೆಗೆ ನುಗ್ಗಿ ಹೋಗಿ ಓದುತ್ತಾ ಕೂರುವುದನ್ನು ಅಭ್ಯಾಸ ಮಾಡಿಕೊಂಡ. ಕರೆಯದೆ ಬರುವ ಅವನ ಉಪಸ್ಥಿತಿ ಹಾಗೆ ನೋಡಿದರೆ ಬಪಮನನ್ನು ಬಿಟ್ಟರೆ ಅಲ್ಯಾರಿಗೂ ಇಷ್ಟವೆ ಆಗುತ್ತಿರಲಿಲ್ಲ. ಆದರೆ ಅದನ್ನೆಲ್ಲ ಪರಿಗಣಿಸುವಷ್ಟು ಬುದ್ಧಿಮಟ್ಟವೂ ಇಲ್ಲದ ವಯಸ್ಸಿನಲ್ಲಿದ್ದ ಅವನು ಅಂತಹ ಕ್ಷುಲ್ಲಕ ಸಂಗತಿಗಳನ್ನೆಲ್ಲಾ ಗಮನಿಸುತ್ತಲೆ ಇರಲಿಲ್ಲˌ 

ಸಾಲದ್ದಕ್ಕೆˌ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪುಟ್ಟರಾಜಣ್ಣ ಅವರ ಮನೆಯಲ್ಲಿ ಸಂಸಾರ ಸಮೇತ ಬಹುಕಾಲ ಬಾಡಿಗೆಗಿದ್ದರು. ಅವರಲ್ಲಿಗೆ 'ಕನ್ನಡಪ್ರಭ' ತರಿಸುತ್ತಿದ್ದರು. ಅಷ್ಟಲ್ಲದೆ ಅಲ್ಲಿನ ಸರಕಾರಿ ಗ್ರಂಥಾಲಯದಿಂದ ಸದಸ್ಯತ್ವ ಪಡೆದಿದ್ದ ಪುಟ್ಟರಾಜಣ್ಣ ಹಲವು ಬಗೆಯ ಕಾದಂಬರಿ ಪುಸ್ತಕಗಳನ್ನ ತರುತ್ತಿದ್ದರು ಬೇರೆ. ಇವನ ಓದಿನ ನಶೆಗೆ ಇದೊಂತರಾ ಸಂಜೆ ತಂಪು ಹೊತ್ತಿಗೆ ಕರೆದು ಕೂರಿಸಿ 'ಶಕ್ತಿಮದ್ದ'ನ್ನು ಕುಡಿಸಿ ಕಳಿಸುವ ತಾಣದಂತಾಗಲು ಇಷ್ಟು ಸವಲತ್ತು ಧಾರಾಳವಾಗಿ ಸಾಕಿತ್ತು. ಈ ಓದಿನ ಚಟವೆ ಅವನನ್ನ ಬಪಮನಿಗೆ ಮತ್ತಷ್ಟು ಹತ್ತಿರ ಮಾಡಿತು.


ಬಪಮ ಮನೆಯಲ್ಲಿ ಸೊಸೆಯ ಮಡಿಯ ದೆಸೆಯಿಂದ ಶುದ್ಧ ಸಸ್ಯಹಾರಿಯಾದರೂˌ ಅವರ ತವರು ಮನೆಯಲ್ಲಿ ಮೀನಡಿಗೆ ಮಾಡುವ ಪದ್ಧತಿ ಇತ್ತಂತೆ. ಒತ್ತಾಯಕ್ಕೆ ಆಸೆ ಅಪಾರವಾಗಿದ್ದರೂ ಸಹ ಮೀನು ತೊರೆದು ಇರಬೇಕಾದ ಒತ್ತಡದಲ್ಲಿ ಅವರಿದ್ದರು. ಅವರ ಮೊದಲ ಮೊಮ್ಮಗಳು ಹಾಗೂ ಕಿರಿಯ ಸೊಸೆ ಊರಿಗೆ ಬಂದಾಗ ಮಾತ್ರ ಅವರಿಗೆ ಮೀನು ತಿನ್ನುವ ಅವಕಾಶ ಸಿಗುತ್ತಿತ್ತು. ತನ್ನ ಅಡುಗೆ ಮನೆಯನ್ನ ಆಕ್ರಮಿಸಿಕೊಂಡು ಅನ್ಯಾಯವಾಗಿ ಮಡಿ ಕೆಡಿಸುತ್ತಾ ಮೀನು ಹುರಿದು ತನಗೆ ಇರಿಸುಮುರುಸು ಉಂಟು ಮಾಡುವ ಮಗಳು ಮತ್ತು ಒರೆಗಿತ್ತಿಗೆ ಬೈಗುಳದ ಸುರಿಮಳೆಯನ್ನೆ ಸುರಿಸಿದರೂ ಸಹ ಅದನ್ನೆಲ್ಲ ಆದ ಅಪಮಾನವೆಂದು ಪರಿಗಣಿಸದೆˌ  ಮನೆಯೊಡತಿ ಸೀತಮ್ಮನ ವಿರೋಧಕ್ಕೆಲ್ಲಾ ಸೊಪ್ಪು ಹಾಕದೆ ವಿಜಯೇಂದ್ರ ಶಣೈ ಮಗಳು ನಿಶಾ ಮತ್ತವಳ "ಪಚ್ಚಿ" ಕಸ್ತೂರಿ ಅಲ್ಲಿರುವಷ್ಟು ದಿನವೂ ದಿನಕ್ಕೊಂದು ತರಹದ ಮೀನು ಮೀನುಪೇಟೆಯಿಂದ ಕೊಂಡು ತಂದು ಬಗೆಬಗೆಯ ಅಡುಗೆ ಮಾಡಿ ಬಪಮನನ್ನೂ ಜೊತೆಗೆ ಸೇರಿಸಿಕೊಂಡು ಪಟ್ಟಾಗಿ ಮೀನೂಟವನ್ನ ಇಷ್ಟಪಟ್ಟು ಉಣ್ಣೋದಿತ್ತುˌ ಆ ಕಾಲದ ಹೊರತು ಬಪಮನಿಗೆ ಮೀನು ತಿನ್ನುವ ಭಾಗ್ಯವಿರಲಿಲ್ಲ. 

ಒಟ್ಟಿನಲ್ಲಿ ಕುಟ್ಟಾಣಿಯ ಕವಳˌ ಸಂಜೆ ಹರಟೆ ಸಮ್ಮೆಳನಕ್ಕೆ ಬರುತ್ತಿದ್ದ ಅವರ ಒರಗಿತ್ತಿ ದೋನ ಬಪಮನ ಸಂಚಿಯ ನಸ್ಯ ಹಾಗೂ ಮೀನು ಖಾದ್ಯಗಳಷ್ಟೆ ಬಪಮನಿಗಿದ್ದ ಬಿಡಲಾಗದ ಗೀಳು.


( ಇನ್ನೂ ಇದೆ.)



https://youtu.be/21RkCOVpOZE

No comments: