ಎರ್ರಿಕ್ ಒಂದು ತಾಸಿಗೆ ಹಿಂದೆ ಗುರುವನದ ಹಾದಿ ಹುಡುಕುತ್ತಾ ಹೊರಟಿದ್ದವ ದಾರಿ ತಪ್ಪಿ ಇಲ್ಲಿಗೆ ಬಂದಿದ್ದ. ಇಲ್ಲಿ ನಿತ್ಯದ ನಿರ್ವಾಹಕರು ರಜೆಯಲ್ಲಿದ್ದರುˌ ಅವರ ಬದಲಿಗೆ ಕಛೇರಿಯಲ್ಲಿ ಇಂದಿದ್ದ ಮಲಯಾಳಿಯೊಬ್ಬನಿಗೆ ಸುಟ್ಟು ತಿನ್ನಲು ಸಹ ನಾಲ್ಕು ಪದ ಇಂಗ್ಲೀಷು ಬರುತ್ತಿರಲಿಲ್ಲ. ಇಬ್ಬರಿಗೂ ಪರಸ್ಪರ ಇನ್ನೊಬ್ಬರ ಭಾಷೆ ಬರುತ್ತಿರಲಿಲ್ಲ. ಅವನದೇನಂದನೋ? ಇವನದೇನನ್ನ ಅರ್ಥ ಮಾಡಿಕೊಂಡನೋ! ಆ ದೇವ್ರಿಗೆ ಗೊತ್ತು. ಒಟ್ಟಿನಲ್ಲಿ ಇಬ್ಬರೂ ಸುಮಾರು ಅರ್ಧ ತಾಸು ಇಬ್ಬರಿಗೂ ಅರ್ಥವಾಗದ ಭಾಷೆಯಲ್ಲಿ ಪರಸ್ಪರ ಮಾತಾಡಿಕೊಂಡು "ರೂಂ ಇಲ್ಲ" ಅನ್ನುವ ನಿಷ್ಕರ್ಷೆಗೆ ಬಂದಿದ್ದರು!
ವಿಷಯ ಅರಿಯಲು ಇವನು ಲೆಡ್ಜರ್ ಪಡೆದು ತೆಗೆದು ನೋಡಿದರೆ ಅಂದು ಕಾಯ್ದಿರಿಸದಿದ್ದ ಎರಡು ಕೋಣೆಗಳು ಲಭ್ಯವಿದ್ದುದು ಕಂಡುಬಂತು. ಕಛೇರಿ ನಿರ್ವಹಣೆಗೆ ಕೂತಿದ್ದ ಉಣ್ಣಿ ಏಟ್ಟನನ್ನ "ಪುಳ್ಳಿ ತಾಮಿಸ್ಯಿಕ್ಕಿನ್ನ ಪೆಟ್ಟಲ್ಲೋ ಚೇಟ್ಟಾ? ಒಳಞ್ಞಿಕಿಡಕ್ಕುನ್ನ ಮುರಿ ಉಂಡಲ್ಲೋ?" ಅಂದ. "ಅದೇˌ ಪಕ್ಷೆ ಞಾನ್ ವೆರುದೆ ಕೈಕಾರ್ಯಂ ಚೇಯ್ದಿಟ್ಟುನ್ನದˌ ಪರಿಶೋಧಕನ್ಮಾರ್ ಅನುಮತಿ ಇಲ್ಲಾತೆ ಞಾ ಮುರಿ ತರಾಂ ಪೆಟ್ಟಿಲ್ಲ" ಅಂದ ಉಣ್ಣಿ. "ಶರಿ ಪಿನ್ನೆ ಞಾನ್ ಕೇಟ್ಟು ನೋಕ್ಕಟ್ಟೆ? ಆ ದೇಹತ್ತಿಂಡೆ ನಂಬರ್ ತನ್ನಾಲ್ ಮದಿ" ಅಂದನಿವ. ಉಣ್ಣಿ ಕೊಟ್ಟ ಕೈಫೋನಿನ ಸಂಖ್ಯೆಯಲ್ಲಿ ಸಿಕ್ಕ ಮ್ಯಾನೇಜರ್ ಗೋಪಾಲನ್ ಕುಟ್ಟಿಗೆ ಎರ್ರಿಕ್ಕನ ಪರಿಸ್ಥಿತಿ ವಿವರಿಸಿ ಸಹಾಯ ಬೇಡಿದ. ಅವರು ಸಹಾನುಭೂತಿ ವ್ಯಕ್ತಪಡಿಸಿ ಸಂಜೆ ನಾಲ್ಕರ ನಂತರ ತಾವಲ್ಲಿಗೆ ಬರುವುದಾಗಿಯೂ ಅವನ ಮೂಲ ಪಾಸ್ಪೋರ್ಟ್ ಹಾಗೂ ವೀಸಾದ ಪ್ರತಿಯೊಂದನ್ನ ತಯಾರು ಇಟ್ಟುಕೊಂಡಿರುಬೇಕೆಂದು ಅವನಿಗೆ ತಿಳಿಸಬೇಕೆಂದು ಹೇಳಿದರು.
ಆದರೆ ಕೇವಲ ಮೂರು ದಿನಗಳ ಮಟ್ಟಿಗೆ ಮಾತ್ರ ಕೋಣೆ ಕೊಡುವುದಾಗಿಯೂˌ ಲಭ್ಯವಿರುವ ಕೋಣೆಯಲ್ಲಿ ಮಂಚವಿದ್ದರೂ ಹಾಸಿಗೆಯಿಲ್ಲ ಚಾಪೆ - ದಿಂಬು ಮಾತ್ರ ಕೊಡಲಾಗುವುದು ಎಂದರು. ಅಯ್ಯೋ ಅದೆಲ್ಲಾ ಒಂದು ಸಮಸ್ಯೆಯಾಗಲಾರದು ಅವನಿಗೆˌ ಕುರುಡುಗಣ್ಣಿಗಿಂತ ಮಳ್ಳೆಗಣ್ಣು ಲೇಸು ಅಂದುಕೊಂಡು "ಆಗಬಹುದು" ಅಂದನಿವ. ಊಟ ಮುಗಿಸಿ ಬಂದ ಎರ್ರಿಕ್ಕನಿಗೆ ವಸತಿ ವ್ಯವಸ್ಥೆಯಾಗಿರುವ ವಿಷಯವನ್ನ ತಿಳಿಸಿˌ ಶೌಚಾಲಯದ ಸೌಲಭ್ಯವಿರುವ ಅದರಲ್ಲಿ ಹಾಸಿಗೆಯಿರುವುದಿಲ್ಲ ಎಂದು ಹೇಳಿದ. ಇಲ್ಲಿಂದ ಮುಂದೆ ಆನಂದಾಶ್ರಮದಲ್ಲಿ ವಸತಿ ಸವಲತ್ತಿಗೆ ಪ್ರಯತ್ನಿಸಿ ಪಡೆಯುವ ಬಗೆಯನ್ನ ಹೇಳಿದ.
ಅವನು ಇದೆ ನಿತ್ಯಾನಂದಾಶ್ರಮದಲ್ಲಿ ಮೊದಲ ದಿನ ಬಂದಿದ್ದಾಗ ಎರ್ರಿಕ್ಕನ ಹಾಗೆಯೆ ಆಸ್ಟ್ರೇಲಿಯಾದಿಂದ ಅಲ್ಲಿಗೆ ಬಂದಿದ್ದ ಅವನದ್ದೆ ಪ್ರಾಯದ ಬಿಳಿಯ ವಿಲ್ ಬ್ಯಾಗ್ಮರನ್ನು ಕಂಡಿದ್ದ. ವಿಲ್ ಕೂಡ ಇಪ್ಪತ್ತೆರಡು ವರ್ಷ ಪ್ರಾಯದ ತರುಣ. ಭಾರತೀಯತೆˌ ಹಿಂದೂ ಸಂಸ್ಕೃತಿಗೆ ಮಾರು ಹೋಗಿ ಪ್ರತಿ ವರ್ಷ ಆರಾರು ತಿಂಗಳನ್ನ ಭಾರತದಲ್ಲಿ ಕಳೆದ ಮೂರು ವರ್ಷಗಳಿಂದ ವಾಸಿಸುವ ರೂಢಿ ಇಟ್ಟುಕೊಂಡಿದ್ದ. ವಿಲ್ನದ್ದು ಎರ್ರಿಕ್ಕನಿಗಿಂತ ಭಿನ್ನವಾದ ಕಥೆ.
ಓದಿನಲ್ಲಿ ಅಷ್ಟೇನೂ ಜಾಣನಲ್ಲದ ವಿಲ್ ಐರಿಶ್ ಕ್ಯಾಥೋಲಿಕ್ ಮೂಲದ ಆಸ್ಟ್ರೇಲಿಯನ್. ಅವನ ಆರು ತಲೆಮಾರಿನ ಹಿಂದಿನ ಕೋಲಜ್ಜ ಐರಿಶ್ ಅಜ್ಜಿ ಸ್ಕಾಟಿಶ್ ಮಹಿಳೆ. ಅವರಿಬ್ಬರನ್ನೂ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಗುರಿಪಡಿಸಿ ಗ್ಲಾಸ್ಗೋದಿಂದ ಕಲ್ಲಿದ್ದಲ ಗಣಿಗಳಲ್ಲಿ ದುಡಿಯುವ ಸಶ್ರಮ ಶಿಕ್ಷೆ ವಿಧಿಸಿ ಬ್ರಿಟಿಷ್ ಸರಕಾರ ತನ್ನ ವಸಾಹಾತಾಗಿದ್ದ ದೂರದ ಆಸ್ಟ್ರೇಲಿಯಾಕ್ಕೆ ಗಡಿಪಾರು ಮಾಡಿತ್ತಂತೆ! ಅಲ್ಲಿ ಉಳಿದು ಬೆಳೆದು ಅಲ್ಲಿನವರೆ ಆಗಿ ಹೋಗಿರುವ ಬಿಳಿಯರ ಕುಟುಂಬ ವಿಲ್ನದ್ದು.
ಅವನಪ್ಪ ಮೆಲ್ಬರ್ನ್ ಬಳಿಯ ಉಪನಗರವೊಂದರಲ್ಲಿ ರೆಸ್ಟೋರೆಂಟೊಂದನ್ನ ನಡೆಸುತ್ತಿದ್ದರಂತೆ. ತಾಯಿ ಗೃಹಿಣಿಯಾಗಿ ಇವನನ್ನೂ ಸೇರಿ ಇನ್ನೂ ಇಬ್ಬರು ಗಂಡು ಮಕ್ಕಳನ್ನ ಸಾಕಿ ಬೆಳೆಸಿದ್ದರು. ಮಕ್ಕಳಲ್ಲಿ ಇವನೆ ಹಿರಿಯ. ತೀರಾ ಶಾಲಾ ಕಲಿಕೆಯಲ್ಲಿ ನಪಾಸಾಗುವಷ್ಟು ಮಡ್ಡನಲ್ಲದಿದ್ದರೂ ದಡ್ಡನಾಗಿದ್ದ ವಿಲ್ ಕನಿಷ್ಠ ಅಂಕಗಳನ್ನ ಪರೀಕ್ಷೆಗಳಲ್ಲಿ ಗಳಿಸುತ್ತಾ ಹೇಗೋ ಹೈಸ್ಕೂಲಿನವರೆಗೂ ಬಂದವನುˌ ಮುಂದೆ ಓದಲಾರೆ ಅಂತ ಶಾಲೆ ಬಿಟ್ಟನಂತೆ. ಕೆಲಕಾಲ ತಂದೆಯ ರೆಸ್ಟೋರೆಂಟಿನಲ್ಲೆ ಸಂಬಳಕ್ಕೆ ದುಡಿದ. ಆದರೆ ಆ ಮಧ್ಯೆ ರಾಜಕೀಯದ ಅಭಿರುಚಿ ಬೆಳೆಸಿಕೊಂಡ ಇವನಪ್ಪ ಸ್ಥಳಿಯ ಪುರಸಭೆಯ ಕೌನ್ಸಿಲ್ಲಿನ ಚುನಾವಣೆಗೂ ಸ್ಪರ್ಧಿಸಿ ಗೆದ್ದು ಒಂದು ಅವಧಿಗೆ ಅಲ್ಲಿನ ಮೇಯರ್ ಆಗಿಯೂ ಆಯ್ಕೆಯಾದರಂತೆ. ಆದರೆ ಮೇಯುವ ಮನಸ್ಥಿತಿಯಿಲ್ಲದ ಆ ಮನುಷ್ಯ ಸರಕಾರಿ ಮಟ್ಟದಲ್ಲಿನ ಲಂಚಾವತಾರಕ್ಕೆ ಬೇಸತ್ತು ತನ್ನ ಅಧಿಕಾರವಧಿ ಇನ್ನೂ ಅರ್ಧದಷ್ಟು ಬಾಕಿಯಿರುವಾಗಲೆ ರಾಜಿನಾಮೆ ಒಗೆದು ರಾಜಕೀಯದಿಂದಲೂ ನಿವೃತ್ತರಾದರಂತೆ.
ಆದರೆ ರಾಜಕೀಯ ಹಾಗೂ ಕೋವಿಡ್ ದೆಸೆಯಿಂದ ವ್ಯಾಪಾರ ಕುಸಿದು ಅವರ ಆಹಾರೋದ್ಯಮವೂ ಮುಚ್ಚಿ ಹೋಯಿತಂತೆ. ಹೀಗಾಗಿ ವಿಲ್ ಈಗ ದೂರದ ಪಟ್ಟಣ ಸಿಡ್ನಿಗೆ ಹೋಗಿ ಅಲ್ಲಿ ಯಾರದ್ದೋ ಹೊಟೆಲೊಂದರಲ್ಲಿ ಸರ್ವರನಾಗಿ ಆರು ತಿಂಗಳು ದುಡಿದು ಆ ದುಡಿಮೆಯ ಗಳಿಕೆಯಲ್ಲಿ ಅಲ್ಲಿ ಸುಡು ಬೇಸಿಗೆಯಿರುವ ಇನ್ನಾರು ತಿಂಗಳು ಭಾರತಕ್ಕೆ ಬಂದು ಇಲ್ಲಿ ಮಂದಿರ-ಮಠ ಸುತ್ತಿಕೊಂಡು ಗಡ್ಡ ಬಿಟ್ಟುಕೊಂಡುˌ ಧರ್ಮ ಜಿಜ್ಞಾಸೆ ಮಾಡಿಕೊಂಡು ಇದ್ದಾನೆ. ಅವನಿಗೂ ಅಂತರ್ಜಾಲವೆ ಭಾರತೀಯತೆಯನ್ನ ಪರಿಚಯಿಸಿದ್ದು. ಆರಂಭದಲ್ಲಿ ಕೆಲಕಾಲ ಬೌದ್ಧ ಮಠಗಳನ್ನ ಎಡತಾಕಿದವ ಅದಕ್ಕಿಂತ ಹಿಂದೂಧರ್ಮವೆ ಬಟರ್ ಅನ್ನಿಸಿ ಈಗ ಅದರ ಹಿಂದೆ ಬಿದ್ದಿದ್ದ.
ಕೈಯಲ್ಲಿರುವ ಕಾಸೆಲ್ಲಾ ಖರ್ಚಾಗುವ ತನಕ ಭಾರತದಲ್ಲಿರುವ ಇವ ಮರಳಿ ಕಲ್ಕತ್ತಾಗೆ ಹೋಗಿˌ ಅಲ್ಲಿಂದ ಹೊರಳಿ ಮೆಲ್ಬರ್ನಿನ ಹಾದಿ ಹಿಡಿದುˌ ಅಲ್ಲಿ ಮತ್ತಾರು ತಿಂಗಳು ಸರ್ವರನ ಪಾತ್ರ ವಹಿಸಿ ಮತ್ತಿಲ್ಲಿಗೆ ಹಿಂದಿರುಗಿ ಬರುವ ಪರಿಪಾಠವನ್ನ ಇಟ್ಟುಕೊಂಡಿದ್ದ. ಭಾರತಕ್ಕೆ ಇದವನ ಮೂರನೆ ಭೇಟಿ. ಅವನಿಗೆ ಆಶ್ಚರ್ಯ ಹುಟ್ಟಿಸುವಂತೆ ಎರ್ರಿಕ್ಕನಿಗಾಗಲಿ ಅಥವಾ ವಿಲ್ಗಾಗಲಿ ಗೆಳತಿಯರು ಇರಲಿಲ್ಲ. ಪ್ರೀತಿ - ಪ್ರೇಮ - ಪ್ರಣಯದಲ್ಲಿ ಮಗ್ನರಾಗಿರಬೇಕಿದ್ದ ತುಂಬು ಪ್ರಾಯದಲ್ಲಿ ಅವರಿಬ್ಬರೂ ತವರು ನಾಡನ್ನ ಹಿಂದೆ ಬಿಟ್ಟುˌ ಅರಿಯದೊಂದು ನೆಲಕ್ಕೆ ಅಧ್ಯಾತ್ಮದ ದಾರಿ ಹುಡುಕಿಕೊಂಡು ಬಂದಿದ್ದರು.
ಸದ್ಯ ಅಲ್ಲೆ ತಂಗಿದ್ದ ವಿಲ್ನಿಗೆ ಈ ಅಮೇರಿಕನ್ ಸಾಧು ಎರ್ರಿಕನನ್ನು ಕರೆದು ಪರಿಚಯಿಸಿದನವನು. ವಿಲ್ ಆನಂದಾಶ್ರಮದಲ್ಲೂ ಮರುದಿನದಿಂದ ತಂಗುವವನಿದ್ದು ಅಲ್ಲಿ ಅವನಿಗೆ ಮೂರು ವಾರ ತಂಗಲು ಅನುವು ಮಾಡಿ ಕೊಟ್ಟಿದ್ದರು. ಅದೆ ಬಗೆಯಲ್ಲಿ ಅವನಂತೆಯೆ ಇವನೂ ಪ್ರಯತ್ನಿಸಿ ಮೂರು ವಾರಗಳ ಅವಕಾಶ ಪಡೆಯಲಿ ಅನ್ನುವ ಆಶಯ ಅದರ ಹಿಂದಿತ್ತು. ಉಳಿದಂತೆ ಅವನಿಗೆ ಮೆನೇಜರರಿಗೆ ಸಲ್ಲಿಸಬೇಕಾದ ಸ್ವ ಪರಿಚಯದ ದಾಖಲೆಗಳ ವಿಚಾರ ತಿಳಿಸಿˌ ನಾಳೆ ಸಂಜೆಯ ಪೂಜೆಗೆ ಬಂದಾಗ ಕಾಣುವ ಅಂದು ಕೈ ಬೀಸಿ ತನ್ನ ಬಿಡಾರದ ದಿಕ್ಕಿನತ್ತ ಅವನು ಹೊರಟ.
ಆ ಹೊತ್ತಿಗೆ ಸರಿಯಾಗಿ ಎರ್ರಿಕ್ಕನಿಗೆ ಊಟ ಬಡಿಸಿಯಾಗಿ ಪೇಟೆಗೆ ಅದೇನನ್ನೊ ತರಲು ಹೊರಡುತ್ತಿದ್ದ ಗಣಪತಿ ಸ್ವಾಮಿ ಅವನ ಜೊತೆಯಾದರು. ಹೇಗೂ ಇಷ್ಟು ದೂರ ಬಂದದ್ದಾಗಿದೆ. ಬಿಸಿಲಾದರೇನು? ಹೋದವ ತಣ್ಣಗೊಂದು ಸ್ನಾನ ಮಾಡಿದರೆ ಸೆಖೆ ಕಳೆದೀತುˌ ಹಾಗೆಯೆ ಮಾಡಲುದ್ದೇಶಿಸಿದ್ದ ಒಂದು ವ್ಯಾಪಾರ ಮುಗಿಸಿ ಬಿಡುವ ಅಂದುಕೊಂಡು ಅವರಿಗೆ "ಇಲ್ಲೇನಾದರೂ ಒಳ್ಳೆಯ ಒಣಮೀನು ಸಿಗ್ತದ? ನಾನು ಬೆಂಗಳೂರಿಗೆ ಒಯ್ಯಬೇಕು" ಅಂದ. ಅವರು ಮಾರುತ್ತರಿಸತ್ತಾ "ಪೇಟೆಯಲ್ಲಿ ಕೊಗ್ಗ ಕಾಮತರ ಅಂಗಡಿ ಹತ್ತಿರವೆ ಪರಿಚಯದ ಮಾಧವನ್ ಕುರುಪ್ ಮೀನಂಗಡಿ ಇದೆ. ಬನ್ನಿ ಹೋಗಣ ಅಲ್ಲಿ ಸಿಗ್ತದೆ" ಅಂದರು.
ಅದೂ ಇದು ಹರಟೆ ಹೊಡೆಯುತ್ತಾ ಇಬ್ಬರೂ ಪೇಟೆಯತ್ತ ಹೊರಟರು. ಗಣಪತಿ ಸ್ವಾಮಿಗಳಿಗೆ ಚೂರು ಆರೋಗ್ಯದಲ್ಲಿ ಏರುಪೇರಾಗಿತ್ತು. ಅವನ ಸಲಹೆ ಕೇಳಿದರುˌ ಇವನು ಸೂಕ್ತ ಮದ್ದನ್ನ ಬರೆದುಕೊಟ್ಟ.
( ಇನ್ನೂ ಇದೆ.)
https://youtu.be/S3tuxAxK178
No comments:
Post a Comment