18 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೮.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೮.👊


ಆದ ಹಿಂಸೆಯ ನೋವಿನಿಂದ ನೊಂದು ಸುಧಾರಿಸಿಕೊಳ್ಳೋದನ್ನ ಕಂಡರೂ ಅಲ್ಲಿಗೂ ಬಿಡದೆ ಅಟ್ಟಿಸಿಕೊಂಡು ಬೆನ್ನುಬಿದ್ದ ಅಪ್ಪ ಅನ್ನುವ ರಾಕ್ಷಸ ಕೈಗೆ ಸಿಕ್ಕ ಇಟ್ಟಿಗೆ ಚೂರು-ಕಲ್ಲು ಹೀಗೆ ಸಿಕ್ಕಿದ್ದನ್ನ ಅವನತ್ತ ತೂರಿ ಅಲ್ಲಿಂದಲೂ ಅವನನ್ನ ಓಡಿಸಿದರು. ಅಪ್ಪಿತಪ್ಪಿ ಪುನಃ ಕೈಗವನು ಸಿಕ್ಕಿದ್ದಿದ್ದರೆ ಬಹುಶಃ ಹಾಕಿ ತುಳಿದು ಇನ್ನಿಲ್ಲವಾಗಿಸಿ ಬಿಡುತ್ತಿದ್ದರೋ ಏನೋ! ಅವನ ಹಿಡಿತ ಕೈತಪ್ಪಿದ ಸಿಟ್ಟನ್ನು ಪೂರ್ತಿಯಾಗಿ ಅವನ ಕೋಣೆಯ ಮೇಲೆ ತೀರಿಸಿಕೊಂಡಾಗಲೆ ತಣಿದಿರಬಹುದು ಅವರ ಸಿಟ್ಟು. ರೇಡಿಯೋˌ ವಾಕಮೆನ್ˌ ಕ್ಯಾಸೆಟ್ಟುಗಳುˌ ಜಂಕ್ಸನ್ ಬಾಕ್ಸ್ˌ ಅಡಾಪ್ಟರ್ˌ ಸ್ಪೀಕರ್ ಹೀಗೆ ಅವನ ಪಾಲಿನ ಅವನದ್ದೆ ಸಂಪಾದನೆಯ ಎಲ್ಲಾ ಅಮೂಲ್ಯ ಸ್ವತ್ತುಗಳನ್ನೂ ಬಲವಾಗಿ ಬೀಸಿ ನೆಲಕ್ಕಪ್ಪಳಿಸಿ ಆಗಷ್ಟೆ ಅರಳಲಾರಂಭಿಸಿದ್ದ ಅವನ ಯುವ ಮನಸ್ಸನ್ನೂ ಸೇರಿಸಿ ಅವನ್ನೆಲ್ಲಾ ಛಪ್ಪನ್ನರವತ್ತಾರು ಚೂರಾಗಿಸಿದರು. ಅಲ್ಲಿಗೆ ಅವನ ಆ ಕೋಣೆಯ ಋಣ ಅವತ್ತಿಗೆ ಮುಗಿಯಿತು.

ಆ ರಾತ್ರಿಯಿಡಿ ಸೀತಮ್ಮನ ಮನೆಯ ಓಣಿಯ ಕಲ್ಲುಹಾಸಿನ ಮೇಲೆ ತನ್ನ ಅಸಹಾಯತೆಯಿಂದ ಉಕ್ಕಿದ ದುಃಖಕ್ಕೆ ಬಿಕ್ಕಳಿಸುತ್ತಾ ಚಳಿಗೆ ಮುದುಡುತ್ತಾ ಕೂತಿದ್ದವ ನೋವು ಸುಸ್ತು ಹುಟ್ಟಿಸಿದ ನಿದ್ರೆಗೆ ಅನಿವಾರ್ಯವಾಗಿ ಜಾರಿದಾಗ ಬಹುಶಃ ಬೆಳಗಾಗಿತ್ತು ಅನ್ನಿಸುತ್ತೆ. ಅಂಗಳ ತೊಳೆಯಲು ಬಂದ ಪುಟ್ಟರಾಜಣ್ಣನ ಹೆಂಡತಿ ಪಾರ್ವತಮ್ಮನ ಕಣ್ಣಿಗೆ ಇವನು ಬಿದ್ದ. ಬೀದಿಯ ಉಳಿದೆಲ್ಲರಂತೆ ಇವರ ಮನೆಯಲ್ಲಾಗುತ್ತಿದ್ದ ರಾತ್ರಿಯ ಕಾಳಗವನ್ನ ಕತ್ತಲ ಮೌನದಲ್ಲಿ ಸ್ಪಷ್ಟವಾಗಿ ಅವರೂ ಕೇಳಿಸಿಕೊಂಡಿದ್ದಾರು. ಅವನಪ್ಪನ ಕುಡಿತದ ನಂತರದ ಮೃಗಾವತಾರವನ್ನ ಸ್ಪಷ್ಟವಾಗಿ ಅರಿತಿದ್ದ ಯಾರೊಬ್ಬರೂ ಅಂತಹ ಸಂದರ್ಭದಲ್ಲಿ ಜಗಳವಾಡುತ್ತಿದ್ದರೆ ಬಿಡಿಸಲು ಬರುವ ಧೈರ್ಯ ಮಾಡುತ್ತಿರಲಿಲ್ಲ. ಹಾಗೊಮ್ಮೆ ದೌರ್ಜನ್ಯ ತಡೆಯಲು ರಣಾಂಗಣಕ್ಕೆ ಧುಮುಕುವವರೂ ಅವರ ದುರ್ನಡೆತೆಗೆ ಬಲಿಪಶುವಾಗುವ ಅಪಾಯವಿದ್ದುದರಿಂದ ನೆರೆಕರೆಯ ಯಾರೂ ಹೀಗೆ ಬೇಡದ ಉಸಾಬರಿಗೆ ಇಳಿಯುವ ಸಾಹಸ ಮಾಡುತ್ತಿರಲಿಲ್ಲ. 


ಇವನ ಕರುಣಾಜನಕ ಪರಿಸ್ಥಿತಿ ಕಂಡು ಮರುಕದಿಂದ ಮುದುಡಿ ಮಲಗಿದ್ದ ಅವನ ತಲೆ ಸವರಿದರು. ಅಪ್ಪನೆ ಬಂದು ಮುಟ್ಟಿದರೇನೋ ಎಂಬಂತೆ ಕುಮಟಿ ಬಿದ್ದು ಎಚ್ಚರಾದ. ಎದುರಿಗೆ ಪಾರ್ವತಮ್ಮನ ಮುಖ ಕಂಡು ದೈನ್ಯದಿಂದ ದುಃಖದ ಕೋಡಿ ಹರಿದು ಎದ್ದು ಕೂತು ಮೊಣಕಾಲ ನಡುವೆ ತಲೆ ತಗ್ಗಿಸಿಕೊಂಡು ಶಬ್ದ ಬಾರದಂತೆ ಮುಸುಮುಸು ಅತ್ತ. "ತುಂಬಾ ನೋವಾಗುತ್ತಿದೆಯೇನ?" ಅನ್ನುತ್ತಾ ಕರುಣಾಪೂರಿತ ದೃಷ್ಟಿ ಹರಿಸುತ್ತಾ ಅವರು ಅವನ ತಲೆ ಸವರಿದರು. ಅವನೇನನ್ನೂ ಮಾರುತ್ತರಿಸದಿದ್ದರೂ ಸಹ ಹಾಕಿಕೊಂಡಿದ್ದ ಬಿಳಿ ಬಣ್ಣದ ಅಂಗಿಯ ಮೇಲಿನ ರಕ್ತದ ಕಲೆ ಅವರಿಗೆ ಆಗಿರಬಹುದಾಗಿದ್ದ ಹಲ್ಲೆಯ ಆಳವನ್ನು ಸ್ಪಷ್ಟ ಪಡಿಸಿದವು. ಮರು ಮಾತನಾಡದೆ ಮನೆಗೆ ಹೋದ ಅವರು ಸ್ವಲ್ಪ ಹೊತ್ತಿನ ನಂತರ ಕೂತಲ್ಲೆ ರೋಧಿಸುತ್ತಿದ್ದ ಅವನಿಗೆ ಒಂದು ಲೋಟ ಕಾಫಿ ತಂದು ಕೊಟ್ಟರು. ಹಿಂದೆಯೆ ಅವರ ಮಗಳು ಉಮಕ್ಕ ನೋವಿಗೆ ಸವರಿಕೊಳ್ಳಲು ಮುಲಾಮು ತಂದುಕೊಟ್ಟು ಇವನ ಪರಿಸ್ಥಿತಿ ಕಂಡು ಲೊಚಗುಟ್ಟಿ ಹೋದಳು. ದಿನ ಬೆಳಗಾದರೆ ಸಾಕು ಪತ್ರಿಕೆ ಹಾಗೂ ಹಾಲು ಹಾಕುವ ಕೆಲಸ ಮಾಡುತ್ತಿದ್ದರಿಂದ ಹೀಗೆ ಕಂಡವರ ಓಣಿಯಲ್ಲಿ ಕೂತು ಸೀತೆ ಶೋಕ ಮಾಡಲು ಅವನಿಗೆ ಬಿಡುವಿರಲಿಲ್ಲ. ಮೆಲ್ಲನೆ ಎದ್ದು ಕಳ್ಳ ಹೆಜ್ಜೆ ಹಾಕುತ್ತಾ ಮನೆಯ ಹಿತ್ತಲಿಗೆ ಹೋಗಿ ಮುರಿದು ಬಿದ್ದಿದ್ದ ತನ್ನ ಕೊಟ್ಟಿಗೆ ಕೋಣೆಯನ್ನ ಕಂಡು ಮರುಗುತ್ತಾ ಪುಸ್ತಕˌ ಬಟ್ಟೆಗಳ ಜೊತೆ ಚಾಪೆ ಸುರುಳಿಯನ್ನ ಮಾತ್ರ ಎತ್ತಿಕೊಂಡು ಅವನ್ನೆಲ್ಲಾ ಪಕ್ಕದ ಮನೆಯ ಕಟ್ಟಿಗೆ ಕೊಟ್ಟಿಗೆಯಲ್ಲಿಟ್ಟ. ಅಪ್ಪನ ಗೊರಕೆ ಸ್ಪಷ್ಟವಾಗಿ ಹಿತ್ತಲ ತನಕ ಕೇಳುತ್ತಿತ್ತು. ನೀರಿನ ತೊಟ್ಟಿಯ ಬಳಿ ಮುಖ ಮೈ ಉಜ್ಜಿ ತೊಳೆದುಕೊಂಡ ಚಡ್ಡಿ ಅಂಗಿ ಬದಲಿಸಿ ಅವಸರವಸರವಾಗಿ ಕೆಲಸಕ್ಕೆ ಹೊರಟ. ಆಗಲೆ ಬೆಳಕಾಗುತ್ತಿತ್ತು. ತಡವಾಗಿ ಹೋಗುವಂತಿರಲಿಲ್ಲˌ

*****

ಅವನಿದ್ದ ಮಧ್ಯಮ ವರ್ಗದ ಸಮಾಜದಲ್ಲಿ ಮಕ್ಕಳನ್ನ ಹೆತ್ತವರು ತಪ್ಪೆಸಗಿದಾಗ ತಿದ್ದಲು ದಂಡಿಸೋದೇನೂ ಅಪೂರ್ವ ಸಂಗತಿಯಾಗಿರಲಿಲ್ಲ. ಕಾಲಕಾಲಕ್ಕೆ ತಮ್ಮ ತಮ್ಮ ಮಕ್ಕಳನ್ನ ಹೊಡಿದು ಬಡಿದು ಶಿಕ್ಷಿಸಿ ಅವರ ಅಪರಾಧದ ಅರಿವನ್ನವರಿಗೆ ಮೂಡಿಸಿ ಪ್ರತಿಯೊಬ್ಬರೂ ಸರಿದಾರಿಗೆ ತಂದಿದ್ದವರೆ. ಆದರೆ ಹಾಗಂತ ಯಾರೂ ಈ ಪರಿ ಅಮಾನುಷ ಹಲ್ಲೆಯನ್ನೆಸಗುತ್ತಿರಲಿಲ್ಲ. ಅದಾಗಿ ಸ್ವಲ್ಪ ಕಾಲದ ನಂತರ ಲೋಕದ ಅರಿವು ಅವನ ಮಡ್ಡ ಮಂಡೆಗೂ ಏರಲು ಶುರುವಾದ ಅನಂತರದ ದಿನಗಳಲ್ಲಿ ಬೆಳೆಬೆಳೆಯುತ್ತಾ ಕಾರಣಾಂತರದಿಂದ ಮನೆಯಲ್ಲಿ ಸಿಕ್ಕ ಮಮತೆ ಪ್ರೀತಿ ಹಾಗೂ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ಸಮಾಜಘಾತಕ ಕೃತ್ಯಗಳನ್ನˌ ಅದೂ ಕೆಲವೊಮ್ಮೆ ಕೇವಲ "ಥ್ರಿಲ್" ಪಡೆಯುವ ಕೌತುಕದಿಂದ ಎಸಗಿದ ಎಂತೆಂತಾ ಪರಮ ಪಾತಕಿಗಳಾಗಿ ಬದಲಾಗುತ್ತಿದ್ದ ತಮ್ಮ ಮಕ್ಕಳನ್ನೂ ಸಮರ್ಥಿಸಿಕೊಂಡು ಅಂತವರ ಕಿಡಿಗೇಡಿತನವನ್ನೂ ಮನ್ನಿಸಿ ಅವರ ರಕ್ಷಣೆಗಾಗಿ ಧಾವಿಸುತ್ತಿದ್ದ ಹೆತ್ತವರನ್ನ ಕಂಡಾಗ ಅವನಿಗೆ ಅಯೋಮಯವೆನಿಸುತ್ತಿತ್ತು.


ಗುಣ-ನಡತೆಯಲ್ಲಿ ಹಾಗೇನೂ ಇದ್ದಿರದ ತನಗೆ ಸತ್ಯ ಹೇಳುತ್ತಿದ್ದ ಕಾರಣಕ್ಕೆ ಮಾತ್ರ ಚಿತ್ರಹಿಂಸೆ ಕೊಡುತ್ತಿದ್ದ ಹೆತ್ತವರು ಹಾಗೊಮ್ಮೆ ತಾನೇನಾದರೂ ಇಂತಹ ಭೀಕರ ಪಾತಕಿಯಾಗಿ ಬದಲಾಗಿದ್ದರೆ ಬಿಡಿಸುವುದು ಅತ್ಲಾಗಿರಲಿ ಅವರೆ ಬಂದು ಪ್ರಜ್ಞೆ ತಪ್ಪುವವರೆಗೂ ತದುಕಿ ಕಡೆಗೆ ನೇಣಿಗೇರಿಸಿಯೆ ಹೋಗುತ್ತಿದ್ದರೇನೋ ಅನ್ನಿಸುತ್ತಿತ್ತು. ಅವನ ಅನುಭವದ ಪ್ರಪಂಚ ಹೊರಗಿನ ಲೋಕಾರೂಢಿಯ ಜಗತ್ತಿನಿಂದ ಭಿನ್ನವಾದುದರಿಂದ ಅವನಿಗೆ ಹೀಗನಿಸಿರುತ್ತಿದ್ದುದು ಸಹಜ. ಇದನ್ನ ಉಳಿದವರಿಗೆ ಅಷ್ಟೆ ತೀವೃವಾಗಿ ಅರ್ಥ ಮಾಡಿಸಲು ಅವನು ಅಸಮರ್ಥನಾಗಿದ್ದ.


ಅಂತಹ ಶೋಚನೀಯ ಪರಿಸ್ಥಿತಿಯಲ್ಲಿ ಆಗಾಗ ಅನ್ನ ಹಾಕಿ ಸಲುಹಿದ ಬಪಮˌ ಅವರ ಮನೆಯ ಇಕ್ಕೆಲಗಳಲ್ಲಿ ಬಾಡಿಗೆಗಿದ್ದ ಪುಟ್ಟರಾಜಣ್ಣನ ಮಗಳು ಉಮಕ್ಕ ಹಾಗೂ ಶ್ರೀನಿವಾಸರ ಹೆಂಡತಿ ಅಲ್ಪನಾ ಸಹೃದಯತೆ ತೋರದಿದ್ದಿದ್ದರೆ ಯಾರಿಗೂ ಬೇಡದೆ ಹೋಗಿ ಅವನ ಮಾನಸಿಕ ಪರಿಸ್ಥಿತಿ ಪೂರ್ತಿ ಹದಗೆಡುವ ಸಂಭವವಿತ್ತು. ಹತ್ತನೆ ತರಗತಿಯ ಅವನ ವಾರ್ಷಿಕ ಪರಿಕ್ಷೆಗೆ ಹತ್ತಿರ ಹತ್ತಿರ ಎರಡು ತಿಂಗಳ ಅವಧಿ ಮಾತ್ರ ಬಾಕಿಯಿತ್ತು. ಈ ತನ್ನ ಪರಿಪಾಟಲಿಗೆ ತಾನೆ ಸದಾ ಕಾಲ ಮರುಗುತ್ತಾ ಇರಲೂ ಸಹ ಸಾಧ್ಯವಿರಲಿಲ್ಲ. ಏನಾದರೂ ಸರಿ ತಾನು ಓದಲೆ ಬೇಕುˌ ಮುಂದೆ ತನ್ನನ್ನ ಕಾಯುವ ಏಕೈಕ ಆಸರೆ ಈಗ ತಾನು ಕಲಿಯಲಿರುವ ವಿದ್ಯೆ ಮಾತ್ರ ಅನ್ನುವ ಸಂಪೂರ್ಣ ಅರಿವು ಅವನಿಗಿತ್ತು. 


ಸದ್ಯ ಬೆಳಗಾದರೆದ್ದು ಮನೆಮನೆಗೆ ಸ್ಥಳಿಯ ಮತ್ತು ರಾಜ್ಯ ಮಟ್ಟದ ಒಂದೆರಡು ಪತ್ರಿಕೆಗಳನ್ನ ಜೊತೆಗೆ ಹಾಲನ್ನ ಹಾಕುವುದರಿಂದ ಚೂರುಪಾರು ಸಂಪಾದನೆಯಂತೂ ಆಗುತ್ತಿತ್ತು. ಜೊತೆಗೆ ಬುಕ್ಲಾಪುರದ ರಾಮಸ್ವಾಮಿ ಭಟ್ಟರ ತೈನಾತಿಯಾಗಿ ಮದುವೆ-ಮುಂಜಿ-ನಾಮಕರಣ-ವೈದಿಕ-ವೈಕುಂಠ ಸಮಾರಾಧನೆ ಹೀಗೆ ಅವರು ಕರೆದಲ್ಲಿಗೆ ಅಡುಗೆ ಸಹಾಯಕನಾಗಿ ಹೋಗುತ್ತಿದ್ದ. ಅಲ್ಲಿ ಹೋದಾಗಲೆಲ್ಲ ಐವತ್ತು ರೂಪಾಯಿ ಹಣದೊಟ್ಟಿಗೆ ಹೊಟ್ಟೆ ತುಂಬುವಷ್ಟು ಊಟ ದಕ್ಕುತ್ತಿತ್ತು. 


ಪ್ರತಿ ಶನಿವಾರ ಹೋರಂದೂರಿಗೂ ಆದಿತ್ಯವಾರ ಇಂಡಗದ್ದೆಗೂ ಹತ್ತು ಹದಿನೈದು ಮೈಲಿ ಸೈಕಲ್ ತುಳಿದು ರಾಜಾ ಬೇಕರಿಯ ತಿನಿಸುಗಳನ್ನ ದಾರಿಯುದ್ದ ಸಿಗುತ್ತಿದ್ದ ಅಂಗಡಿಗಳಿಗೆ ಮಾರಿ ಒಂದಷ್ಟು ಗಳಿಸುತ್ತಿದ್ದ. ಅವೆಲ್ಲ ಸಂಪಾದನೆ ಸೇರಿದರೂ ಸಹ ಊಟಕ್ಕೆ ಸಾಲುತ್ತಿರಲಿಲ್ಲ. ದರಿದ್ರದ್ದು ಬೆಳೆಯುವ ಪ್ರಾಯದಲ್ಲಿ ಹಸಿವು ಬೇರೆ ಜಾಸ್ತಿ. ಆದರೂ ಅನಿವಾರ್ಯವಾಗಿ ಕಾಲ ಹಾಕಲೆಬೇಕಿತ್ತು. ಅದರ ಮಧ್ಯ ಪರಿಕ್ಷೆಗೂ ಓದಿಕೊಳ್ಳಬೇಕಿತ್ತು. ಬದುಕು ಅಂದುಕೊಂಡಷ್ಟು ಸುಲಭವಾಗಿರಲ್ಲ ಅನ್ನೋ ಜೀವನ ಪಾಠವನ್ನವನು ಕಲಿಯುತ್ತಾ ತನ್ನನ್ನ ತಾನು ಎದುರಾದ ಪರಿಸ್ಥಿತಿಗೆ ಹೊಂದಿಸಿಕೊಳ್ಳಲೆಬೇಕಿತ್ತು.

( ಇನ್ನೂ ಇದೆ.)



https://youtu.be/A-o_l78NnQc

No comments: