11 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೨.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೨.👊

ತಮ್ಮ ಮೊಮ್ಮಗಳ ಹಾಗೂ ಮತ್ತೊಬ್ಬ ಸೊಸೆಯ ಜೊತೆ ಸೇರಿಕೊಂಡು ಮೀನು ಮಾಡಿ ತಿನ್ನುವ ಅತ್ತೆ ಬಪಮನಿಗೂ ಸೀತಮ್ಮನ ಬೈಗುಳ ಭಂಡಾರದ ಸಹಸ್ರ ನಾಮಾರ್ಚನೆಯಲ್ಲೊಂದು ಪಾಲು ತಪ್ಪದೆ ಸಲ್ಲುತ್ತಿದ್ದುದು ಎಲ್ಲಾ ರಜಾಕಾಲದ ಸಂಪ್ರದಾಯ. ಅವರ ತರ್ಕದ ಪ್ರಕಾರ ಮೀನು ತಿನ್ನುವ ದುರಭ್ಯಾಸವನ್ನ ರೂಪಿಸಿಕೊಂಡಿರೋದಷ್ಟೆ ಅಲ್ಲದೆˌ ತನ್ನ ಅಡುಗೆ ಮನೆಯನ್ನೆ ಆಕ್ರಮಿಸಿಕೊಂಡು ಅಪವಿತ್ರಗೊಳಿಸುವ ಹೆಚ್ಚು ಕಡಿಮೆ ಸಮಪ್ರಾಯದ ಆ ಕುದುರೆಗಳಿಗೆ ಕಿವಿ ಹಿಂಡಿ ಬುದ್ಧಿ ಹೇಳಬೇಕಾಗಿದ್ದ ಅತ್ತೆಯೂ ಅವರ ಜೊತೆ ಶಾಮೀಲಾಗಿ ಕೇವಲ ಬಾಯಿ ರುಚಿಯ ಚಪಲದಿಂದ ಅವರಾಡಿಸಿದಂತೆ ಕುಣಿಯುವುದು ಮಾತ್ರ ಘೋರ ಅಪರಾಧವಾಗಿತ್ತು. 


ಪ್ರಾಯ ಸಂದಂತೆ ಸಹಜವಾಗಿ ಶ್ರವಣ ಶಕ್ತಿ ಕುಂದಿದ್ದರಿಂದ ಕೇಳುವ ಯಂತ್ರವನ್ನ ಧರಿಸುವ ಅಭ್ಯಾಸ ಮಾಡಿಕೊಂಡಿದ್ದ ಬಪಮ ಮಾತ್ರ ಸೀತಮ್ಮನ ಪಿರಿಪಿರಿಯ ಅಬ್ಬರ ಹೆಚ್ಚುತ್ತಿದ್ದ ಅಂತಹ ವಿಪರೀತ ಸಮಯಗಳಲ್ಲಿ ತನ್ನ ಕಿವಿಗೆ ಸಿಕ್ಕಿಸಿಕೊಂಡಿರುತ್ತಿದ್ದ ಆ ಯಂತ್ರದ ಕಿವಿಗಾಪನ್ನ ಮೆಲ್ಲಗೆ ಕಿತ್ತು ಸೆರಗೊಳಗೆ ಮರೆಮಾಡಿಟ್ಟುಕೊಂಡು ತನ್ನ ಸೊಸೆಯ ಭಯಂಕರ ಚೊರೆಯಿಂದ ಪಾರಾಗುವುದನ್ನ ರೂಢಿ ಮಾಡಿಕೊಂಡಿದ್ದರು. ಇದೊಂತರ ಇಬ್ಬರಿಗೂ ಗೆಲುವು ಗೆಲುವಿನ ಸನ್ನಿವೇಶ. ಮನೆಯಲ್ಲಾಗುತ್ತಿದ್ದ ಮೀನಡಿಗೆಯ ಅನಾಚಾರ ಕಂಡು ಕೂಡ ಏನೂ ಮಾಡಲಾಗದ ಅಸಹಾಯಕತೆಯಿಂದ ತನ್ನ ರಕ್ತದೊತ್ತಡ ಹೆಚ್ಚಿಸಿಕೊಂಡಿರುತ್ತಿದ್ದ ಸೀತಮ್ಮನಿಗೂ ಬಾಯಿ ನೋಯುವವರೆಗೂ ಮೂವರನ್ನೂ ನಿವಾಳಿಸಿ ಬೈದು ಕೊಂಚ ನೆಮ್ಮದಿಯಾಗುತ್ತಿತ್ತು. ಅದೆ ವೇಳೆ ಅವರ ಮುರಿಯ ಮಾತುಗಳ್ಯಾವುದೂ ಕೇಳದ ಹಾಗಾಗಿದ್ದಕ್ಕೆ ವಯಸ್ಸಿನ ವರದಾನವಾಗಿ ಸಿಕ್ಕಿದ್ದ ಕಿವುಡುತನಕ್ಕೆ ಋಣಿಯಾದ ಬಪಮನ ಮನಃಶಾಂತಿಯೂ ಕದಡದೆ ನೆಮ್ಮದಿ ಉಳಿಯುತ್ತಿತ್ತು.


ಹಾಗೆ ನೋಡಿದರೆ ಸೀತಮ್ಮನ ಮನಸು ಒಳ್ಳೆಯದೆ. ಆದರೆ ತನ್ನನ್ನ ಕಟ್ಟಿಕೊಂಡಿರುವ ಗಂಡನಾಗಲಿˌ ತಾನು ಹೆತ್ತ ಇಬ್ಬರು ಹೆಣ್ಣು ಮಕ್ಕಳಾಗಲಿ ತನ್ನ ಮಾತಿಗೆ ಬೆಲೆ ಕೊಡುವುದಿಲ್ಲ ಅನ್ನುವ ಅಸಮಧಾನ ಅವರಿಗಿತ್ತು. ಹೀಗಾಗಿ ಸದಾ ಸಣ್ಣಪುಟ್ಟ ವಿಷಯಗಳಿಗೂ ಎಲ್ಲರ ಮೇಲೂ ಪಿರಿಪಿರಿ ಮಾತುಗಳ ಮಳೆ ಸುರಿಸುತ್ತಾ ತನ್ನದೆ ಆದ ಮನಃ ಸಂತೈಕೆಯ ಮಾರ್ಗವನ್ನ ಕಂಡುಕೊಂಡಿದ್ದರು.


ಅವರ ಇಬ್ಬರು ಹೆಣ್ಣು ಮಕ್ಕಳು ನಿಶಾ ಹಾಗೂ ರಾಧಾ ಓದಿನಲ್ಲಿ ಅಪಾರ ಬುದ್ಧಿವಂತರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಭೌತಶಾಸ್ತ್ರದ ಪದವಿಯನ್ನ ರ್ಯಾಂಕ್ ಗಳಿಸಿ ಪೂರೈಸಿದ್ದ ಇಬ್ಬರಲ್ಲಿ ಹಿರಿಯ ಮಗಳು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲೂˌ ಎರಡನೆಯವಳು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯದಲ್ಲೂ ಪ್ರಾಧ್ಯಾಪಕರಾಗಿದ್ದಾರೆ.


ಅವರಿಗೆ ಹಿರಿಯ ಮಗಳನ್ನ ಆಗ ದಾವಣಗೆರೆಯಲ್ಲಿ ಉದ್ಯೋಗಸ್ದನಾಗಿದ್ದ ತನ್ನಣ್ಣನ ಮಗ ಮಹಾಪ್ರಾಣನಿಗೆ ಕೊಟ್ಟು ತವರಿನ ಬಾಂಧವ್ಯ ಬೆಸೆಯುವ ಬಯಕೆಯಿತ್ತು. ಬಾಲ್ಯದಲ್ಲಿ ಇದಕ್ಕೆ ಪೂರಕವಾಗಿ ವರ್ತಿಸುತ್ತಿದ್ದ ಮಗಳು ಹಾಗೂ ಸಹೋದರಳಿಯ ಬೆಳೆದು ದೊಡ್ಡವರಾದ ಮೇಲೆ ಮಾತ್ರ ಸೀತಮ್ಮನ ನಿರೀಕ್ಷೆಗೆ ವ್ಯತಿರಿಕ್ತವಾಗಿ ಈ ಸಂಬಂಧವನ್ನ ನಿರಾಕರಿಸಿದ್ದಷ್ಟೆ ಅಲ್ಲದೆˌ ಹುಡುಗ ಬೇರೆ ಮದುವೆಯೂ ಆಗಿ ಮಗಳು ಶಾಶ್ವತವಾಗಿ ಬೆಂಗಳೂರು ಸೇರಿ ಹೋದದ್ದು ಅವರ ಮನಸ್ಸಿಗೆ ಅಘಾತ ತಂದಿತ್ತು. 


ಇದಕ್ಕೆಲ್ಲಾ ತನ್ನ ನಾದಿನಿ ವಿನೀತನ ಕಿತಾಪತಿಯೆ ಕಾರಣ ಎಂದು ತೀರ್ಮಾನಿಸಿದ ಸೀತಮ್ಮ ಅನಂತರದ ದಿನಗಳಲ್ಲಿ ಅಣ್ಣ-ಅತ್ತಿಗೆ ಮನೆಗೆ ಬಂದರೆ ಆದರಿಸುವುದು ಅತ್ತಲಾಗಿರಲಿˌ ಕನಿಷ್ಠ ಮುಖ ಕೊಟ್ಟು ಮಾತಾಡುವುದನ್ನೂ ಸಹ ನಿಲ್ಲಿಸಿಬಿಟ್ಟರು. ಅವರ ಗಂಡನೂ ಸಹ ತನ್ನ ತಂಗಿ ಹಾಗೂ ಬಾವನೊಡನೆ ಇದೆ ಕಾರಣಕ್ಕೆ ಮಾತು ಬಿಟ್ಟಿದ್ದೂ ಸಹ ಅವರ ಈ ನಡೆಗೆ ಪೂರಕವಾಗಿತ್ತು ಅನ್ನೋದು ಸ್ಪಷ್ಟ. ಇಷ್ಟೆ ಅಲ್ಲದೆ ಅತ್ತೆ ಮನಸು ಮಾಡಿದ್ದರೆ ಖಂಡಿತವಾಗಿ ಈ ಮದುವೆ ನೆರವೇರುತ್ತಿತ್ತುˌ ಅವರು ಪ್ರಯತ್ನಿಸದೆ ಅದು ನಿಂತು ಹೋಯಿತು ಅನ್ನುವ ದುಸುಮುಸು ಅವರನ್ನ ಅಂತಹ ಸಂದರ್ಭಗಳಲ್ಲಿ ಬಪಮನ ಮೇಲೂ ಎಗರಾಡುವಂತೆ ಮಾಡುತ್ತಿತ್ತು. 


ಇದರಿಂದ ನೊಂದ ವಿನೀತಮ್ಮ ಮತ್ತವರ ಗಂಡ ಅಣ್ಣನ ಮನೆಗೆ ಕ್ರಮೇಣ ಬರೋದನ್ನೆ ನಿಲ್ಲಿಸಿದರು. ಹಾಗೊಮ್ಮೆ ಊರಿಗೆ ಬಂದರೂ ಸಹ ಎರಡನೆ ಅಣ್ಣನ ಮನೆಯಲ್ಲಿ ಉಳಿದುˌ ಇಲ್ಲಿಗೆ ಒಂದರ್ಧ ತಾಸಿನ ಭೇಟಿಯಿತ್ತು ಅಮ್ಮನನ್ನ ಮಾತನಾಡಿಸಿ ಹಿಂದಿರುಗುತ್ತಿದ್ದರು. ಆ ಭೇಟಿಯ ಅವಧಿಯಲ್ಲಿ ಅವರ ಮನೆಯಲ್ಲೊಂತರಾ ತುರ್ತು ಪರಿಸ್ಥಿತಿ ಘೋಷಣೆಯಾದ ವಾತಾವರಣವಿರುತ್ತಿತ್ತು. ಅವರಲ್ಲಿಂದ ಹೋದ ನಂತರ ಸೀತಮ್ಮ ಹಾಗೂ ವಿಜಯೇಂದ್ರಣ್ಣ ತುಂಬಾ ಹೊತ್ತು ಹಳೆಯದನ್ನೆಲ್ಲ ನೆನೆಸಿಕೊಂಡು ಅವರಿಬ್ಬರಿಗೂ ಬೈದು ಸುಧಾರಿಸಿಕೊಳ್ಳುತ್ತಿದ್ದರು.


ಇದನ್ನೆಲ್ಲ ಅವನು ನೋಡಿಕೊಂಡೆ ಬೆಳೆಯುತ್ತಿದ್ದ. ಮಗಳು ಅಳಿಯ ಬಂದು ಹೋದ ನಂತರ ತುಂಬಾ ಬೇಜಾರಾಗುತ್ತಿದ್ದ ಬಪಮ ತನ್ನ ಜಗಲಿಯ ಆರಾಮ ಕುರ್ಚಿಯಲ್ಲಿ ಕೂತು ವ್ಯಥೆ ತಾಳಲಾರದೆ ಆ ಹೊತ್ತಿನಲ್ಲಿ ಹಾಕುತ್ತಿದ್ದ ಕಣ್ಣೀರನ್ನ ಮೌನವಾಗಿ ಹೋಗಿ ಅವರದೆ ಸೀರೆಯ ಸೆರಗಿನಲ್ಲಿ ಒರೆಸಿ ಹಸಿರು ನರಗಳು ಉಬ್ಬಿರುತ್ತಿದ್ದ ಅವರ ಕೈ ಹಿಡಿದು ಮಾತಿಲ್ಲದೆ ಅವರೊಂದಿಗೆ ಕೂತು ಮೌನದಲ್ಲೆ ಅವರನ್ನ ಸಂತೈಸುತ್ತಿದ್ದ. ತನ್ನ ಮಗಳಿಗೆ ಇದೆ ತವರುಮನೆ. ಮೊಮ್ಮಕ್ಕಳ ಮದುವೆಯ ವಿಷಯದಲ್ಗಿರುವ ಅಸಮಧಾನದ ಪರಿಣಾಮವಾಗಿ ಮಗಳು ತವರಿಗೂ ಬರಲಾಗದಂತಾಗಿದ್ದು ಅವರನ್ನ ಕಡೆಯವರೆಗೂ ಕಂಗೆಡುವಂತೆ ಮಾಡಿತ್ತು. ಅವನ ಸಮಾಧಾನದ ನುಡಿಗಳಿಗೆ ಅವರನ್ನ ಸಹಜ ಸ್ಥಿತಿಗೆ ತರುವ ಶಕ್ತಿಯಿರಲಿಲ್ಲವಾಗಿ ಅವನು ಆ ಹೊತ್ತಿನಲ್ಲಿ ಸುಮ್ಮನೆ ಮೌನವಾಗಿ ಅವರ ಜೊತೆಗೆ ಕೂತಿರುತ್ತಿದ್ದ ಅಷ್ಟೆ.


ವಿಜಯೇಂದ್ರಣ್ಣನಾಗಲಿ ಅಥವಾ ಸೀತಮ್ಮನಾಗಲಿ ಸ್ಥಿತಪ್ರಜ್ಞರಲ್ಲ. ತಮಗೆ ವಯಕ್ತಿಕವಾಗಿ ಆದ ನಷ್ಟಕ್ಕೆ ಬೇರೆಯವರನ್ನ ಹೊಣೆಗಾರರನ್ನಾಗಿಸಿ ಪಾರಾಗುವ ಸ್ವಭಾವ ಹೊಂದಿರುವವರು. ತಮ್ಮ ಒರಟು ನಡತೆ ಬೇರೆಯವರಿಗೆ ಎಷ್ಟು ವೇದನೆ ಕೊಡಬಲ್ಲದು ಅನ್ನುವುದನ್ನ ಅರಿಯದಷ್ಟು ಕಾಡು ನಡತೆಯ ಹಳ್ಳಿಗರು. ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು ಎನ್ನುವುದನ್ನವನು ಚೆನ್ನಾಗಿ ಬಲ್ಲ.


ಪರರಿಂದ ನಮಗೆ ಅದೆಷ್ಟೆ ನಷ್ಟವಾಗಿದ್ದರೂˌ ಇನ್ನಿತರರ ನಡತೆಯಿಂದ ಅದೇನೆ ಕಷ್ಟ-ನಷ್ಟ ಎದುರಾಗಿದ್ದರೂ ಅದನ್ನ ಅಷ್ಟು ಒರಟಾಗಿ ಮಾರುತ್ತರಿಸಬೇಕಿಲ್ಲ ಅನ್ನುವ ರೂಢಿಗತ ಮನಸ್ಥಿತಿ ಅವನದ್ದು. ಸಣ್ಣಂದಿನಿಂದಲೂ ಇನ್ಯಾರಾದರೂ ಅಂಕೆ ಮೀರಿ ತನ್ನೊಂದಿಗೆ ವರ್ತಿಸಿದರೆ ಅವನದನ್ನ ತಲೆಗೆ ಹಚ್ಚಿಕೊಂಡವನಲ್ಲ. ಹಾಗಂತ ಅದವನಿಗೆ ದುಃಖವನ್ನ ಉಂಟು ಮಾಡುತ್ತಿರಲಿಲ್ಲ ಅಂತಲ್ಲ. ಅದನ್ನವನು ಆಗ ಮೌನವಾಗಿ ಅನುಭವಿಸಿದ್ದರೂ ಯಾರಿಂದ ಅಂತಹ ವೇದನೆ ಅವನಿಗಾಗಿತ್ತೋ ಅವರಿಗೆ ಅದರ ಅರಿವನ್ನ ಅವ ಮೂಡಿಸದೆ ಮೌನವಾಗುಳಿದ ಅಂತ ಇದರ ಅರ್ಥವಲ್ಲ.


ಅದನ್ನವನು ಅಂತಹ ನೀಚರ ಮುಖಕ್ಕೆ ಕನ್ನಡಿ ಹಿಡಿದಂತೆ ತಿರುಗಿಸಿ ಹೇಳಲು ಸೂಕ್ತ ಸಮಯವನ್ನ ಕಾಯುತ್ತಾನೆ ಹಾಗೂ ಮರೆಯದೆ ತಣ್ಣನೆ ಧ್ವನಿಯಲ್ಲಿ ನಡತೆಯಲ್ಲಿ ಯಾವ ಉದ್ವಿಗ್ನತೆಯನ್ನೂ ಪ್ರಕಟಿಸಿದೆ ಅವರಂದ ಮಾತುಗಳನ್ನಷ್ಟೆ ಅವರಿಗೆ ನೆನಪಿಸುತ್ತಾ "ನೀವಂದು ನನಗೆ ಇಂತ ಸಂದರ್ಭದಲ್ಲಿ ಅನಗತ್ಯವಾಗಿ ಹೀಗಂದಿದ್ದಿರಿˌ ಹಾಗನ್ನ ಬಾರದಿತ್ತು. ನಿಮ್ಮ ಆ ನೀಚ ವರ್ತನೆ ನಿಮಗೆ ಸರಿ ಅನ್ನಿಸುತ್ತಾ?ˌ ಈ ಪ್ರಶ್ನೆಗೆ ನೀವು ನನಗೇನೂ ಉತ್ತರಿಸಬೇಕಿಲ್ಲ. ಆತ್ಮ ಅನ್ನೋದೇನಾದರೂ ನಿಮಗಿರೋದೆ ನಿಜವಾದರೆ ನಿಮಗೆ ನೀವೆ ಉತ್ತರ ಕೊಟ್ಟುಕೊಳ್ಳಿ. ಬಹುಶಃ ಆತ್ಮದ ಮುಂದೆ ಸುಳ್ಳಾಡಿ ನೀವು ಆತ್ಮವಂಚಕರಾಗಲಿಕ್ಕಿಲ್ಲ." ಅನ್ನುತ್ತಿದ್ದ. 


ಅವರ ಅಂದಿನ ನಡತೆಯ ಬಗ್ಗೆ ಅವರಿಗೇನೆ ಅರಿವು ಮೂಡಿಸುವುದಷ್ಟೆ ಅವನ ಆ ಕ್ರಿಯೆಯ ಮೂಲ ಉದ್ದೇಶವಾಗಿರುತ್ತಿತ್ತು. ಹಾಗಾದರೂ ಮುಂದೆ ಬೇರೆಯಾರನ್ನಾದರೂ ಅವಮಾನಿಸುವ ಅಥವಾ ಅನ್ಯಾಯ ಮಾಡುವ ಮೊದಲು ಅವರು ಯೋಚಿಸಲಿ ಅನ್ನುವುದಷ್ಟೆ ಅವನ ಉದ್ದೇಶ.

( ಇನ್ನೂ ಇದೆ.)




https://youtu.be/z0fMNkQ8iZQ

No comments: