"ಶ್ಯೋˌ ಞಾನ್ ಎಂದೋ ಒನ್ನು ಮರಙಿಟ್ಟು ವನ್ನಲ್ಲೋ ಎಂಡೆ ಈಶ್ವರ!ˌ ಇಪ್ಪ ವರ ನಾಯರೆˌ ಚಾಯ ಪೋಟ್ಟು ವೆಚ್ಚಟ್ಟೆ" ಅಂದವನೆ ಮರಳಿ ಕೋಣೆಗೆ ಬಂದು ಬೆನ್ನುಚೀಲದಲ್ಲಿದ್ದ ಆಲ್ಬಂ ತೆಗೆದು ಸೊಂಟದ ಪೌಚಿಗೆ ಸಿಕ್ಕಿಸಿಕೊಂಡ. ಹಿಂಬದಿಯ ಕಿಟಕಿಯನ್ನ ಮುಚ್ಚಲೂ ಸಹ ಮರೆತು ಹೋಗಿತ್ತು. ಹೊರಗೆ ದಿಟ್ಟಿಸಿದರೆ ತಾನು ಮೆಟ್ಟಿಲಿಳಿದು ಪುನಃ ಹತ್ತಿ ಬರುವ ಮಧ್ಯಂತರದ ಒಳಗಾಗಿ ಯಾರದೋ ಚತುರ ಮಧ್ಯಸ್ತಿಕೆಯಲ್ಲಿ ಏರ್ಪಟ್ಟ ಯಾವುದೋ ಸಂಧಾನ ಸೂತ್ರ ಫಲಿಸಿ ಆ ಪುಟ್ಟ ಹಕ್ಕಿಗೂ-ದುಂಬಿಗಳ ಜೋಡಿಗೂ ಮಧ್ಯ ಮಧು ಹೀರುವ ಹಕ್ಕಿಗಾಗಿ ರಾಜಿಯಾದಂತಿತ್ತು. ಇತ್ತಂಡಗಳೂ ಚಪ್ಪರದ ಒಂದೊಂದು ಕಡೆ ಪರಸ್ಪರರ ವಿರುದ್ಧ ದಿಕ್ಕುಗಳಲ್ಲಿ ತಮ್ಮ ತಮ್ಮ ಹಕ್ಕು ಸಾಧಿಸಿಕೊಂಡು ತತ್ಕಾಲಿಕ ಕದನ ವಿರಾಮ ಘೋಷಿಸಿಕೊಂಡು ಆ ಹೊತ್ತಿಗಷ್ಟು ಶಾಂತಿ ಅಲ್ಲಿ ನೆಲೆಸುವಂತೆ ವ್ಯವಸ್ಥೆ ಮಾಡಿಕೊಂಡಿದ್ದವು. ಕಿಟಕಿ ಮುಚ್ಚಿ ಪರದೆ ಎಳೆದುˌ ಹೊರಬಂದು ಮತ್ತೆ ಕೋಣೆಯ ಬಾಗಿಲಿಗೆ ಚಿಲಕವಿಟ್ಟು ಬೀಗ ಜ಼ಡಿದು ಇವ ಕೆಳಗಿಳಿದು ಬಂದ.
ಕ್ಯಾಂಟೀನಿನಲ್ಲಿ ನಾಯರನ ಚಹಾ ಇವನಿಗಾಗಿ ಕಾದಿತ್ತು. ಬಾಯಿಗದನ್ನ ಇಟ್ಟಾಗಲಷ್ಟೆ ಅವನಿಗೆ ತನ್ನ ದುರ್ಗತಿಯ ಅರಿವಾದದ್ದು. ಅವನಿಗೆ ತನ್ನ ತಪ್ಪು ತಿಳಿಯುವ ಹೊತ್ತಿಗೆ ತಡವಾಗಿ ಹೋಗಿತ್ತು. ಆಗಬಾರದ ದುರಂತ ಘಟಿಸಿಯಾಗಿತ್ತು! ಮಿಂಚಿ ಹೋಗಿರುವ ಕಾಲಕ್ಕೆ ಚಿಂತಿಸಿ ಫಲವಿಲ್ಲ ಅನ್ನುವಂತೆ ಪಾಲಿಗೆ ಬಂದಿದ್ದ ಆ "ಮಧುರ ಪಾಷಾಣ"ವನ್ನ ಹಂಗೂ ಹಿಂಗೂ ಕುಡಿದು ಮುಗಿಸದೆ ವಿಧಿಯಿರಲಿಲ್ಲ. ಯಾರಾದರೂ ಕಿಲಾಡಿ ವೈದ್ಯ ಈ "ಮಧುರಾಷ್ಟಕ" ಪ್ರಿಯ ನಾಯರನ ಕ್ಯಾಂಟೀನಿನ ಬದಿಯಲ್ಲೊಂದು ಸಣ್ಣ ಚಿಕಿತ್ಸಾಲಯ ಆರಂಭಿಸಿದರೂ ಸಾಕು. ಈ ನಾಯರ್ಸ್ ಸ್ಪೆಷಲ್ ಸ್ಟ್ರಾಂಗ್ ಚಾಯಾದ ಕೃಪೆಯಿಂದ ಆದಷ್ಟು ಬೇಗ ಮೈ ತುಂಬಾ ಓವರ್ಲೋಡ್ "ಮಧುರಂ" ತುಂಬಿಕೊಂಡು ಮಧುರಾತಿಮಧುರರಾಗುವ "ಮಧು"ರಮೇಹಿಗಳ ಕೃಪೆಯಿಂದ ರಾತ್ರೋರಾತ್ರಿ ಆ ವೈದ್ಯನ ನಸೀಬು ಖುಲಾಯಿಸಿ ಅವ ಕೋಟ್ಯಧೀಶನಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಅನ್ನಿಸಿತವನಿಗೆ. ಈ ನಾಯರನ ಸ್ಟ್ರಾಂಗ್ ಚಾಯಾಕ್ಕೂˌ ಈಗ ತಾನು ಹೊರಟಿರುವ ತಡಿಯ ಎದುರಿರುವ ಅಪಾರ ಜಲರಾಶಿಯ ಕಡಲಿಗೂ ಏನೊಂದೂ ವ್ಯತ್ಯಾಸವಿದೆ ಅಂತ ಅವನಿಗನಿಸಲೆಯಿಲ್ಲ! ಎರಡರ ನಡುವೆ ಇರುವ ಏಕಮಾತ್ರ ವ್ಯತ್ಯಾಸವೆಂದರೆˌ ಕಡಲ ನೀರಲ್ಲಿ ಅಳತೆ ಮೀರಿದ ಉಪ್ಪು ಉಪಟಳ ಕೊಟ್ಟರೆˌ ಈ ನಾಯರನ ಚಾಯಾದಲ್ಲಿ ಸಕ್ಕರೆ ಯಶಸ್ವಿಯಾಗಿ ಆ ಪಾತ್ರ ನಿರ್ವಹಿಸುತ್ತಿತ್ತು. ಒಟ್ಟಿನಲ್ಲಿ ಅವೆರಡೂ ಸಹ ಆರೋಗ್ಯಭಾಗ್ಯವನ್ನ ಬಯಸುವ ಯಾರೊಬ್ಬರೂ ಸಹ ಕುಡಿಯಲು ಅನರ್ಹವಾಗಿದ್ದವು.
ಮಧುರಂ ಸಂತ್ರಸ್ತನಾಗಿದ್ದ ಅವನ ಮನೋವ್ಯಾಪಾರವನ್ನರಿಯದ ನಾಯರ್ ತನ್ನ ಎಂದಿನ ಶೈಲಿಯ "ಸ್ಟ್ರಾಂಗ್ ಚಾಯ" ತಯಾರಿಸಿ ಕುಡಿಸಿದ್ದ. ಚಹಾ ಹೇಳುವ ಹೊತ್ತಿಗೆ ಬಂಡಿ ಸಕ್ಕರೆ ಸುರಿಯದಿರುವಂತೆ ಹೇಳಲು ಮರೆತ ಆ ಒಂದು ಸಣ್ಣ ತಪ್ಪಿಗೆ ಇಷ್ಟು ಘನಘೋರ ಶಿಕ್ಷೆಯೆ ಭಗವಂತ ಅಂತ ಇವ ಹಳಹಳಿಸುತ್ತಲೆ ತನ್ನನ್ನ ನಗುನಗುತ್ತಲೆ ಸಿಹಿಯ ಶೂಲಕ್ಕೇರಿಸಿದ್ದ ವಧಾಕಾರ ನಾಯರನ ಮುಖವನ್ನ ದೈನ್ಯತೆ ಹೊತ್ತ ಮೋರೆಯಲ್ಲಿ ದಿಟ್ಟಿಸಿದ. ಅದನ್ನ ತಪ್ಪಾಗಿ ಗ್ರಹಿಸಿದ ಕೊಳೆತ ಹಲ್ಲುಗಳ ನಾಯರ ತನ್ನ ಎಂದಿನ ಕಾಳಜಿಯಿಂದಲೆ "ಮಧುರಂ ಮದಿ ತನ್ನೆ? ಕೊರಚ್ಚಿರುನ್ನಾಲ್ ತರಟ್ಟೆ!" ಎಂದು ಮತ್ತೊಂದು ತೋಪು ಸಿಡಿಸಿದ. ಜೀವನದಲ್ಲೆ ಮೊತ್ತ ಮೊದಲಬಾರಿಗೆ ಎಲ್ಲೂ ಇಲ್ಲದ ಆ ಅಪೂರ್ವವಾದ ದಂತಪಂಕ್ತಿಗಳಿರುವ ನಾಯರನಿಂದ ಮುತ್ತು ಕೊಡಿಸಿಕೊಳ್ಳಬೇಕಾದ ಅವನ ಹೆಂಡತಿ ಹಾಗೂ ಮಕ್ಕಳ ಮೇಲೆ ಅವನಿಗೆ ಅಪಾರವಾದ ಕರುಣೆ ಉಕ್ಕಿ ಬಂತು!
ನಾಯರನ ಈ ಅನಿರೀಕ್ಷಿತ ಆಕ್ರಮಣಕ್ಕೆ ಬೆಚ್ಖಿ ಬೆದರಿದ ಅವನು ಮೊದಲೆ ಹಿಂಡಿಕೊಂಡಿದ್ದ ತನ್ನ ಮುಖವನ್ನ ಮತ್ತಷ್ಟು ಹಿಂಡಿಕೊಂಡು "ಒರುಪಾಡು ಉಂಡಲ್ಲೋˌ ಅವಶ್ಯಮಿಲ್ಲ ಮದಿ" ಅಂದು ಮಾತಿನ ಗುರಾಣಿ ಹಿಡಿದು ಆ ಅಪಾಯಕಾರಿ "ಮಧುರಂ" ಅಸ್ತ್ರದ ಮರುದಾಳಿಯ ಪ್ರಹಾರದಿಂದ ಪಾರಾಗಿ ನಿಟ್ಟುಸಿರು ಬಿಟ್ಟ. ಆ "ಸ್ಟ್ರಾಂಗ್ ಚಾಯಾ" ಕುಡಿಯುವ ಕಾಲಾಪಾನಿ ಶಿಕ್ಷೆಯ ತೀವೃತೆಯನ್ನ ನಾಯರ ಚಹಾದ ಜೊತೆಗೆ ಕೊಟ್ಟಿದ್ದ ಒಂದೊಂದು ಅಡೈ ಹಾಗೂ ಪಣಂಪೂರಿ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದವುˌ ಅವೆರಡೂ ರುಚಿಯಾಗಿದ್ದದ್ದು ಮಾತ್ರ ಸುಳ್ಳಲ್ಲ. ಆದರೆ ಎಲ್ಲಾ ಬಣ್ಣವನ್ನು ಮಸಿ ನುಂಗಿತು ಎಂಬಂತೆ ಈ "ನಾಯರ್ಸ್ ಸ್ಪೆಷಲ್ ಸ್ಟ್ರಾಂಗ್ ಚಾಯಾ" ಅದರೊಂದಿಗೆ ಸವಿಯಲು ಲಭ್ಯವಿರುತ್ತಿದ್ದ ಇನ್ನಿತರ ಖಾದ್ಯ ಪದಾರ್ಥಗಳ ರುಚಿಯನ್ನೂ ಸಹ ತನ್ನ ಕೈಲಾದಷ್ಟು ಮಟ್ಟಿಗೆ ಕೆಡಿಸಲು ಸಮರ್ಥವಾಗಿತ್ತು. ಹೀಗಾಗಿ ಅವುಗಳ ಅಸಲು ರುಚಿ ಬಹುತೇಕರ ಅರಿವಿಗೆ ಬರುತ್ತಿರಲಿಲ್ಲ!
*****
ಇವನು ಕಡಲ ತಡಿಗೆ ಇಂದು ಸಾಮಾನ್ಯವಾಗಿ ದಕ್ಷಿಣದ ಕಡೆಯಿಂದ ಹೊಕ್ಕದೆ. ಅದರ ವಿರುದ್ಧ ದಿಕ್ಕಿನಿಂದ ಪ್ರವೇಶಿಸಿದ. ಸಾಗರದಲೆಗಳ ಹೊಡೆತಕ್ಕೆ ಕಾಲು ತೋಯ್ಯಿಸಿಕೊಳ್ಳುತ್ತಾ ಸಕ್ಕರೆಯ ರಾಶಿಯಂತಹ ಮರಳಿನಲ್ಲಿ ಚೂರು ಚೂರೆ ಕುಸಿಯುವ ಪಾದಗಳನ್ನ ಹೆಜ್ಜೆ ಕಿತ್ತು ಮುಂದಡಿ ಇಡುತ್ತಾ ಸಾಗುವುದರಲ್ಲೂ ಒಂದು ಸುಖವಿತ್ತು. ದೂರದಿಂದಲೆ ತನ್ನ ನಿತ್ಯದ ಕೂರುವ ತಾವಿನಲ್ಲಿ ಅದಾಗಲೆ ಸುಭಾಶ ಬಂದು ಕಾತರದಿಂದ ಕಾಯುತ್ತಿರುವುದು ಗೋಚರಿಸಿತು. ಹುಡುಗ ಮಾಮೂಲಿಯಾಗಿ ದಕ್ಷಿಣದ ಕಡೆಯಿಂದ ಬಂದಾರೇನೋ ಎಂದು ಆ ಕಡೆಗೇನೆ ತಿರುಗಿ ಕೂತು ಇವನ ಹಾದಿಯನ್ನ ಕಾಯುತ್ತಿತ್ತು. ಅವನ ಹೊಸ ಕಪ್ಪು ಚಪ್ಪಲಿಯನ್ನ ಅಚ್ಚುಕಟ್ಟಾಗಿ ಪಕ್ಕದಲ್ಲಿಟ್ಟುಕೊಂಡಿದ್ದ.
ಸದ್ದಾಗದಂತೆ ಹೆಜ್ಜೆಯಿಟ್ಟುಕೊಂಡು ಅವನ ಹಿಂದಿಂದ ಹೋದವನೆ "ಬಕ್" ಅಂತ ಏಕಾಏಕಿ ಕಿರುಚಿ ಅವನನ್ನ ಕುಮುಟಿ ಹಾರಿ ಬೆಚ್ಚಿಬೀಳುವಂತೆ ಮಾಡಿದ. "ಅಯ್ಯಯ್ಯˌ ಇದೆಂತ ನೀವಿಲ್ಲಿಂದ ಬಂದ್ರಿಯಾ! ಶೇˌ ಹೆದರಿ ಪಡ್ಚ ನಾನು" ಅನ್ನುತ್ತಾ ಅವ "ಫೋಟೋ ತಂದ್ರಿಯಾ" ಅನ್ನುತ್ತಾ ಊರಿಂದ ಮುಂದೆ ಇಂದು ತಾನು ಬಂದಿರುವುದರ ಹಿಂದಿರುವ ನೈಜ ಕಾರಣವನ್ನ ಜಗಜಾಹೀರುಗೊಳಿಸಿದ. ನಾಳೆ "ನಾರಾಯಣಗುರು ಜಯಂತಿ"ಯಂತೆ ಹೀಗಾಗಿ ಅವನ ಶಾಲೆಗೆ ಸರಕಾರಿ ರಜವಿತ್ತು. ಅವನ ಸಮವಯಸ್ಕ ಹುಡುಗರೆಲ್ಲ ಬೆಳಗ್ಯೆ ಕ್ರಿಕೆಟ್ಟಾಡಲು ಬಾಕಿಮಾರು ಗದ್ದೆಯ ಗ್ರೌಂಡಿಗೆ ದೌಡಾಯಿಸಲಿರುವುದಾಗಿಯೂˌ ಅಲ್ಲಿ ತಾನು ಎಲ್ಲರಿಗೂ ಈ ಆಲ್ಬಂನಲ್ಲಿರುವ ಕೋಲದ ಫೊಟೋಗಳನ್ನ ತೋರಿಸಬೇಕಂತ ಇರುವುದಾಗಿಯೂ ಉತ್ಸಾಹದ ಬುಗ್ಗೆಯಾಗಿದ್ದ ಸುಭಾಶ ಹೇಳಿದ.
"ಅಯ್ಯೋˌ ಹೌದಲ! ಫೊಟೋ ತರಬೇಕಿತ್ತು ಮಾರಾಯ. ಛೇ ಮರ್ತೆ ಹೋಯ್ತಲನ. ಇರ್ಲಿ ಬಿಡ ನಾಳೆ ಸಂಜೆ ತಂದ್ರಾಗದ?" ಅನ್ನುತ್ತಾ ತಣ್ಣಗೆ ಉತ್ತರಿಸಿದ ಅವ ಬೇಕಂತಲೆ ಅವನ ಅತ್ಯುತ್ಸಾಹದ ಪುಗ್ಗೆಗೆ ಮುಳ್ಳು ಚುಚ್ಚಿದ. ಇವನ ಚೇಷ್ಟೆಯ ತಮಾಷೆ ಅರ್ಥವಾಗದೆ ಬಾಡಿದ ಮುಖ ಮಾಡಿಕೊಂಡು ಬೇಸರದ ಧ್ವನಿಯಲ್ಲಿ ಹುಡುಗ "ಹಾಂ! ಫೊಟೋ ತರ್ಲಿಲ್ಲನ? ನಾನು ನಾಳೆ ಅಲ್ಲಿಗೆ ತರ್ತಿನಂತ ದೋಸ್ತಿಗಳಿಗೆಲ್ಲಾ ಹೇಳಿಯಾಗಿದೆ. ಈಗ ಎಂತ ಮಾಡದ ಏನ? ಕಾಸರಗೋಡಿಂದ ಸ್ಟೂಡಿಯೋದವರಿಗೆ ಫೊಟೋಗಳು ಬಂದಿರಲಿಲ್ಲನ? ನೀವಲ್ಲಿಗಿವತ್ತು ಹೋಗಲಿಲ್ಲನ?" ನಿರಾಶೆ ಧ್ವನಿಸುತ್ತಾ ಅವನನ್ನ ಹುಡುಗ ಪ್ರಶ್ನಿಸಿದ.
ಇನ್ನೂ ಸುಳ್ಳು ಹೇಳಿದರೆ ಅವನು ಅತ್ತೇ ಬಿಟ್ಟಾನು ಅನ್ನಿಸಿ ಮೆಲ್ಲನೆ ಬೆಲ್ಟಿನ ನಡುವೆ ಬೀಳದಂತೆ ಹೊಟ್ಟೆಗೆ ಸಿಕ್ಕಿಸಿಕೊಂಡಿದ್ದ ಆಲ್ಬಂನ್ನು ಕೈಗೆ ಕೊಡುತ್ತಲೆ ಸಣ್ಣವನ ಮುಖ ಮೊರದಗಲವಾಯಿತು. "ಶ್ಯೇ ನೀವು ಕುಶಾಲು ಮಾಡದ ಮಾರ್ರೆ! ಎಲ್ಲಿ ನೀವು ತರಲೆ ಇಲ್ಲವ ಅಂತ ಮಂಡೆಬೆಚ್ಚ ಆಗಿತ್ತು ನನಗೆ" ಅಂತ ಹುಸಿಕೋಪ ಪ್ರಕಟಿಸುತ್ತಲೆ ಆಲ್ಬಂನ್ನ ಬಹುತೇಕ ಕೊಡುತ್ತಿದ್ದ ಇವನ ಕೈಯಿಂದ ಕಸಿದುಕೊಂಡ.
ಒಂದೊಂದಾಗಿ ಚಿತ್ರಗಳನ್ನ ತಿರುವಿ ಹಾಕುತ್ತಿದ್ದವನಿಗೆ ಅವನ ನಿದ್ರಾ ಭಂಗಿಯ ಫೊಟೋಗಳೂ ಸಹ ಅಲ್ಲಿರುವುದನ್ನ ಕಂಡು ಅಭಿಮಾನ ಭಂಗವಾದಂತಾಯಿತು. ಮುಖ ಸಿಂಡರಿಸುತ್ತಾ "ನಾನು ಹೇಳಿದ್ದೆ ಇದು ಬೇಡನಿಯ ಅಂತ" ಅಂತ ಬೇಸರಿಸಿದ.
( ಇನ್ನೂ ಇದೆ.)
https://youtu.be/0V2l1QEg444
No comments:
Post a Comment