21 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೧.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೧.👊

ತುಂಬಾ ಹೊತ್ತು ಅತ್ತಿತ್ತ ಹೊರಳಾಡುತ್ತಿದ್ದರೂ ಸಹ ನಿದ್ರೆ ಮತ್ತವನ ಕಣ್ಣುಗಳ ಹತ್ತಿರ ಸುಳಿಯಲಿಲ್ಲ. ವ್ಯಥಾ ಪ್ರಯತ್ನ ನಡೆಸುತ್ತಾ ಮತ್ತೊಂದಷ್ಟು ಹೊತ್ತು ಅವನು ಹಾಸಿಗೆಯಲ್ಲೆ ಸೆಣೆಸಿದ. ಒಂಥರಾ ವ್ಯಥೆಯ ಕಂಪನಗಳು ಅವನ ಕೈ ಕಾಲುಗಳ ನರಗಳಲ್ಲಿ ಏಳಲಾರಂಭಿಸಿತು. ಇದವನ ಹಳೆಯ ವೈಕಲ್ಯಗಳಲ್ಲೊಂದು. ಯಾವುದಾದರೂ ಸ್ಥಳದಲ್ಲಿ ಕೊಂಚ ಸಮಯವಾದರೂ ಇದ್ದು ಅಲ್ಲಿನ ಪರಿಸರದೊಂದಿಗೆ ಅನುಬಂಧದ ಎಳೆ ಬೆಸೆದ ನಂತರ ಆ ಜಾಗವನ್ನು ಬಿಟ್ಟು ಹೊರಡಬೇಕಾದ ಹೊತ್ತೆದುರಾಗುವ ಕ್ಷಣ ಹತ್ತಿರವಾಗುತ್ತಿದ್ದಂತೆ ಇಂತಹ ಕೌತುಕದ ಚೋದಕರಸ ಅವನ ನಾಡಿಗಳಲ್ಲಿ ಹರಿವ ನೆತ್ತರ ಸೇರಿ ಮಿಡಿಯಲಾರಂಭಿಸುತ್ತದೆ. ಹಾಗೆ ತನಗೆ ಮಾತ್ರ ಆಗೋದ? ಅಥವಾ ಎಲ್ಲಾ ನರಮನುಷ್ಯರಿಗೂ ಇದು ಸಾಮಾನ್ಯವ? ಅನ್ನುವ ಗೊಂದಲ ಅವನೊಳಗೆ ಅನುಗಾಲದೊಂದಿಗೂ ಇದೆ.

ಅವನಿಗೆ ನೆನಪಿರುವಂತೆ ಸಣ್ಣ ಪ್ರಾಯದಲ್ಲಿ ಬೇಸಿಗೆ ಹಾಗೂ ದಸರಾ ರಜೆಗೆ ಅವ ಅಮ್ಮ ಅಂತಲೆ ಸಂಬೋಧಿಸುತ್ತಿದ್ದ ಅಜ್ಜಿಯ ಊರಿಗೆ ಅವರ ಜೊತೆ ಹೋಗಿ ಪುನಃ ರಜೆ ಮುಗಿದು ಮನೆಗೆ ಹಿಂದಿರುಗುವ ದಿನ ಹತ್ತಿರವಾಗುತ್ತಿದ್ದಂತೆ ಇಂತಹ ಅನುಭವವಾಗುತ್ತಿತ್ತು ಅನ್ನೋದು ಅವನ ನೆನಪಿನಲ್ಲಿದೆ. ತೀರ ಹೊರಡುವ ದಿನದ ಹಿಂದಿನ ರಾತ್ರಿಯಂತೂ ಇದರ ಪ್ರಭಾವ ಹೆಚ್ಚಿ ಥೇಟ್ ಹೀಗೆಯೆ ರಾತ್ರಿ ಎಚ್ಚರವಾಗಿ ಮತ್ತೆ ನಿದ್ರೆ ಬರದೆ ಪರದಾಡುತ್ತಿದ್ದ. ಮನೆಯಲ್ಲೆಲ್ಲರೂ ಮಲಗಿ ಗೊರಕೆ ಹೊಡೆಯುತ್ತಿದ್ದ ಹೊತ್ತಿಗೆ ಚಾಪೆಯಲ್ಲಿ ಹೊರಳಾಡಿ ನಿದ್ರೆ ಹತ್ತದೆ ಮತ್ತೆದ್ದು ಕೂತೆ ಬೆಳಕು ಹರಿಸುತ್ತಿದ್ದ. ಅಮ್ಮನೋ ಚಿಕ್ಕಮ್ಮನೋ ಚುಮುಚುಮು ಮುಂಜಾನೆ ಎಲ್ಲರಿಗಿಂತಲೂ ಮೊದಲೆದ್ದು ಮನೆ ಕೆಲಸಕ್ಕೆ ತೊಡಗಿದಾಗ ಬಿಡುಗಡೆ ಸಿಕ್ಕಂತೆ ಅನ್ನಿಸಿ ಅವರ ಬೆನ್ನು ಹಿಡಿದೆದ್ದು ಹೋಗುತ್ತಿದ್ದ.

ಹತ್ತರ ಪ್ರಾಯದಲ್ಲಿ ಕಾರ್ಕಳದ ಹಾಸ್ಟೆಲ್ ವಾಸ ಆರಂಭವಾದ ನಂತರವಂತೂ ಇದು ಅತಿಯಾಯಿತು. ಸಾಮಾನ್ಯವಾಗಿ ಮಾರ್ಚ್ ತಿಂಗಳ ಇಪ್ಪತ್ತೈದರ ಹೊತ್ತಿಗೆಲ್ಲ ಪರಿಕ್ಷೆಗಳು ಮುಗಿದು ಎಲ್ಲರೂ ಅವರವರ ಮನೆಗಳಿಗೆ ಹಿಂದಿರುಗಿ ಅವನ ಹಾಗೂ ಸಿಬ್ಬಂದಿಗಳ ಹೊರತು ಇಡಿ ವಿದ್ಯಾರ್ಥಿ ನಿಲಯ ಖಾಲಿ ಹೊಡೆಯುತ್ತಿದ್ದ ಕಾಲ ಅದು. ನಿಯಮಗಳ ಪ್ರಕಾರ ಆ ವರ್ಷದ ಫಲಿತಾಂಶ ಬರುವ ಎಪ್ರಿಲ್ ಹತ್ತರ ತನಕ ಅದನ್ನ ಮುಚ್ಚುವಂತಿರಲಿಲ್ಲವಾಗಿ ಅವನನ್ನ ಮನೆಗೆ ಕರೆದಿಟ್ಟುಕೊಳ್ಳಲು ಇಷ್ಟವಿಲ್ಲದ "ಓದಿಸಲು ಕರೆದುಕೊಂಡು ಹೋಗಿದ್ದ" ಚಿಕ್ಕಪ್ಪ-ಚಿಕ್ಕಮ್ಮ ಅಲ್ಲಿಯವರೆಗೂ ಅಲ್ಲೆ ಇಟ್ಟುಕೊಳ್ಳುವಂತೆ ತಾಕೀತು ಮಾಡಿರುತ್ತಿದ್ದರಿಂದ ಅನಿವಾರ್ಯವಾಗಿ ಮತ್ತೆರಡು ವಾರ ಅಲ್ಲಿರಲೆ ಬೇಕಿದ್ದ ಪರಿಸ್ಥಿತಿಯಲ್ಲಿ ಅವನಿರುತ್ತಿದ್ದ. ಮನಸು ಮಾಡಿದ್ದರೆ ಮನೆಗೆ ಕರೆಸಿಕೊಳ್ಳದಿದ್ದರೂ ಊರಿಗಾದರೂ ಕಳಿಸಿ ಅವನ ಕ್ಲೇಶವನ್ನವರು ಕಡಿಮೆ ಮಾಡಬಹುದಿತ್ತು. ಆದರೆ ಶಿಕ್ಷಕರಾಗಿದ್ದ ಅವರಿಬ್ಬರಿಗೂ ತಮ್ಮ ಮುಂಬಡ್ತಿಯ ಇಲಾಖಾ ಪರಿಕ್ಷೆಗಳು ಶಾಲಾ ರಜಾ ಸಮಯದಲ್ಲೆ ಇರುತ್ತಿದ್ದರಿಂದ ಅವನ ಅವಶ್ಯಕತೆ ರಜೆಯಲ್ಲಿರುತ್ತಿದ್ದು ರಜಾವಧಿಯ ಅರ್ಧ ಅಲ್ಲಿ ಹೋಗಿ ಮನೆ ಕಾಯುವ ಕೆಲಸ ಮಾಡಬೇಕಿತ್ತು. ಅದು ಮುಗಿದ ನಂತರವೆ ಕೆಲದಿನಗಳ ಮಟ್ಟಿಗೆ ಮಾತ್ರ ಊರಿಗೆ ಹೋಗಿ ಬರಲು ಅನುಮತಿ ಸಿಗುತ್ತಿತ್ತು. ಹಾಗೆ ನೋಡಿದರೆ ಪರಿಕ್ಷೆ ಆರಂಭವಾಗುವಾಗಲೆ ಮನೆಗೆ ಹೋಗುವ ದಿನಗಳ ಲೆಕ್ಖವನ್ನ ನೋಟುಬುಕ್ಕಿನ ಕೊನೆಯ ಪುಟದಲ್ಲಿ ಬರೆದಿಟ್ಟು ದಿನಕ್ಕೊಂದು ಸಂಖ್ಯೆಯ ಮೇಲೆ ಪೆನ್ಸಿಲ್ಲಿನ ಗೆರೆ ಎಳೆದು ಆ ಸಂಭ್ರಮದ ದಿನ ಹತ್ತಿರವಾಗುತ್ತಿದ್ದ ಪುಳಕವನ್ನ ಅನುಭವಿಸುತ್ತಿದ್ದ. ಆದರೆ ಅವನ ಅತಿರೇಕದ ಅಂತಃರ್ದ್ವಂದ್ವದ ಪರಿಣಾಮ ಊರ ಹಾದಿ ಹಿಡಿಯುವ ಖುಷಿಯ ಕ್ಷಣಕ್ಕೆ ಇನ್ನೇನು ಒಂದೋ ಎರಡೋ ದಿನ ಮಾತ್ರ ಬಾಕಿ ಇರುವಾಗ ಈ ಕೌತುಕದ ಕಂಪನ ಇದ್ದಕ್ಕಿದ್ದಂತೆ ನರನಾಡಿಗಳಲ್ಲಿ ಎದ್ದು ನಟ್ಟನಡು ಇರುಳಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾಗಿ ಮತ್ತೆ ಮಲಗಲಾರದೆ ಪರಿತಪಿಸುತ್ತಿದ್ದ. ಭೂತಬಂಗಲೆಯಂತ ಅಷ್ಟು ದೊಡ್ಡ ವಿದ್ಯಾರ್ಥಿ ನಿಲಯದಲ್ಲಿ ಅವನೊಬ್ಬನೆ! ಅವನಿರುತ್ತಿದ್ದ ಕರ್ಮಕ್ಕೆ ತಾವೂ ಇರಲೆಬೇಕಾದ ಕಟ್ಟುಪಾಡಿಗೆ ಕಟ್ಟುಬಿದ್ದಿದ್ದ ಸಿಬ್ಬಂದಿ ತಮ್ಮ ತಮ್ಮ ಕೋಣೆಯಲ್ಲಿ ಮಾರ್ಚ್ ಎಪ್ರಿಲ್ಲಿನ ಸೆಖೆಗೆ ಪಂಖ ಹಾಕಿಕೊಂಡು ಮಲಗಿ ಗೊರಕೆ ಹೊಡೆಯುತ್ತಿದ್ದರು. ಇನ್ನು ನಿದ್ರೆ ಮಾಡಲಾರೆ ಅಂತನಿಸಿದ ಮೇಲೆ ಮೇಲೆದ್ದು ಮೆಲ್ಲನೆ ಬಾಗಿಲು ತೆಗೆದು ವರಾಂಡದ ಮೆಟ್ಟಿಲ ಮೇಲೆ ಮಂಡಿಗಳ ಮೇಲೆ ಮುಖ ಒರಗಿಸಿ ಕೂತು ಸುಮ್ಮನೆ ಬಾನ ಮಿನುಗುತಾರೆಗಳನ್ನೋ ಇಲ್ಲಾˌ ಆ ಹೊತ್ತಿನಲ್ಲಿ ಹೊಳೆಯುವ ಶುಕ್ರಗ್ರಹವನ್ನೋ ಕಾಣುತ್ತಾ ಸರಿಯಾಗಿ ಬೆಳಗಾಗುವವರೆಗೂ ಕೂತಿರುತ್ತಿದ್ದ.

ಮಂಗಳೂರಿನ ಆಶ್ರಮ ಸೇರಿದ ನಂತರವೂ ಇದು ಕಡಿಮೆಯಾಗಲಿಲ್ಲ. ಅಲ್ಲಿ ಮನೆಗೆ ಹೋಗಲು ಬಿಡುತ್ತಿದ್ದುದೆ ಕಡಿಮೆ. ಮಕ್ಕಳನ್ನ ಎರಡೆರಡು ತಂಡ ಮಾಡಿ ಒಂದು ತಿಂಗಳ ದಸರಾ ರಜೆಗೆ ಒಂದೊಂದು ತಂಡವನ್ನ ಎರಡೆರಡು ವಾರ ಮನೆಗೆ ಕಳಿಸಿದರೆˌ ಅದೆ ಎರಡು ತಿಂಗಳ ಬೇಸಿಗೆ ರಜೆಯಲ್ಲಿ ಕೇವಲ ಒಂದೊಂದು ತಿಂಗಳಷ್ಟೆ ಮನೆ ಮುಖ ನೋಡಬಹುದಿತ್ತು. ಈ ಸಲ ಮೊದಲ ತಿಂಗಳು ರಜೆ ಅನುಭವಿಸುವ ತಂಡಕ್ಕೆ ಮರುವರ್ಷ ಎರಡನೆ ತಿಂಗಳು ರಜಾಭಾಗ್ಯ ಲಭ್ಯವಾಗುತ್ತಿತ್ತು. ಅವಾಗಲೂ ತಿಂಗಳ ಹಿಂದೆಯೆ ಉಳಿದ ದಿನಗಳ ಲೆಕ್ಖ ಬರೆದಿಡೋದು - ದಿನಕ್ಕೊಂದರ ಮೇಲೆ ಗೆರೆ ಎಳೆಯೋದು ಎಲ್ಲಾ ಮಾಮೂಲೆ. ಆದರೆ ಹೋಗುವ ದಿನದ ಹಿಂದಿನೆರಡು ಮೂರು ದಿನ ಅರಿಯದ ಕಾರಣಕ್ಕೆ ವಿಪರೀತ ತಳಮಳವಾಗಿ ರಾತ್ರಿಯ ನಿದ್ರೆ ಹಾರಿ ಹೋಗುತ್ತಿತ್ತು.

ಅದಲ್ಲಿಂದ ಹೋಗುವ ಬಿಡುಗಡೆಯ ಖುಷಿಗೋ ಇಲ್ಲಾ ಇದನ್ನೆಲ್ಲಾ ಬಿಟ್ಟು ನಡೆಯಬೇಕಲ್ಲ! ಅನ್ನುವ "ಸ್ಟಾಕ್ ಹೋಂ ಸಿಂಡ್ರೋಮ್" ಲಕ್ಷಣವೋ ಅನ್ನುವ ಅನುಗಾಲದ ಗೊಂದಲ ಅವನಿಗೆ ಇದ್ದೆ ಇದೆ. ಈಗಲೂ ಸಹ ಪ್ರಯಾಣಿಸುವಾಗ ನಿಗದಿತ ಗುರಿ ಹತ್ತಿರವಾದಂತೆಲ್ಲ ಅವನಿಗೆ ಅದೆ ಬಗೆಯ ದೈಹಿಕ ತಳಮಳ ಏಳೋದಿದೆ. ದೂರದೂರಿನಲ್ಲಿ ಬಹುಕಾಲವಿದ್ಧು ಮನೆಗೆ ಮರಳುವ ಹಂತದಲ್ಲೂ ಹಾಗೆ ಆಗಿರೋದಿದೆ. ಅದೇನು ಹಿತಾನುಭಾವವೋ? ಹೆದರಿಕೆಯ ಸೂಚನೆಯೋ! ಒಂದೂ ಅರ್ಥವಾಗದಂತಿದ್ದಾನವನು. ಒಟ್ಟಿನಲ್ಲಿ ಅದೊಂದು ಗೊಂದಲದ ಹುತ್ತವಾಗಿ ಅವನನ್ನ ಆವರಿಸಿಯೆ ಉಳಿದಿದೆ. ಇಂದು ನಡುರಾತ್ರಿ ನಿದ್ರೆ ಜಾರಿದವ ಅದೆ ಮನಸ್ಥಿತಿಯಲ್ಲಿದ್ದ.

*****

ಅಂಧೇರಾ ಪಾಗಲ್ ಹೈಂ
ಕಿತನಾ ಘನೇರಾ ಹೈಂ
ಚುಪತಾ ಹೈಂ ಢಸತಾ ಹೈಂ
ಫಿರ್ ಭೀ ವಹಂ ಮೇರಾ ಹೈಂ.

ಉಸ ಕೀ ಹೀ ಗೋಧೀ ಮೈ
ಸರ್ ರಖ್ ಕೇ ಸೋನಾ ಹೈಂ.
ಉಸ ಕೀ ಹೀ ಬಾಹೋಂ ಮೈ
ಚುಪ್ ಕೇ ಸೇ ರೋನಾ ಹೈಂ.
ಆಂಖೋ ಸೇ ಕಾಜಲ್ ಬನ್
ಬೆಹೆತಾ ಅಂಧೇರಾ ಆಜ್.

ಕೈಫೋನಿನಲ್ಲಿ ಶಂತನು ಮೊಯಿತ್ರನ ಹಾಡುಗಳನ್ನ ಹಾಕಿಕೊಂಡ. ಬಾಕಿ ಉಳಿದ ಹೊತ್ತನ್ನ ಕಳೆಯಲು ಅದೆ ಸೂಕ್ತ ಅನಿಸಿತವನಿಗೆ. ಸ್ವಾನಂದ ಕಿರ್ಕಿರೆ ಅವರೆ ಬರೆದ ಸಾಲುಗಳನ್ನ ಚಿತ್ರಕ್ಕನ ಯುಗಳದಲ್ಲಿ ಗುನುಗುಡುತ್ತಿದ್ದರು.

ನಿಶಾಚರನಂತೆ ನಟ್ಟಿರುಳಿನಲ್ಲೆದ್ದು ಬಾಗಿಲು ತೆಗೆದು ಹೊರಗಿನ ಬಾಲ್ಕನಿಯಲ್ಲಿ ಕುರ್ಚಿ ಹಾಕಿಕೊಂಡು ಕೂತ. ಊರು ನಿಶ್ಯಬ್ಧವಾಗಿತ್ತು. ಬಹುತೇಕ ನಿದ್ರೆಯ ತೆಕ್ಕೆಯಲ್ಲಿ ಊರ ಮಂದಿ ಹುದುಗಿದ್ದರು. ಮೆಲುವಾಗಿ ಬೀಸುತ್ತಿದ್ದ ತಂಗಾಳಿ ತನ್ನೊಂದಿಗೆ ಧೂಳಿನ ಕಣಗಳ ಜೊತೆಜೊತೆಗೆ ಹತ್ತಿರದ ಹೆದ್ದಾರಿಯಲ್ಲಿ ಸಾಗುವ ಭಾರಿ ವಾಹನಗಳದ್ದೋˌ ತುಸು ದೂರದ ರೈಲು ನಿಲ್ದಾಣದಲ್ಲಿ ಗಡಗಡಿಸುತ್ತಾ ಓಡುವ ಅನಾಮಿಕ ಊರಿನ ರೈಲು ಬಂಡಿಗಳದ್ದೋ ಸದ್ದನ್ನೂ ಹೊತ್ತು ತರುತ್ತಿತ್ತು. ಬೆಳ್ಳಿಚುಕ್ಕಿ ಮೂಡಣದಲ್ಲಿ ಢಾಳವಾಗಿ ಹೊಳೆಯುತ್ತಾ ಮಿನುಗುತ್ತಿತ್ತು. ವಾಸ್ತವದಲ್ಲಿ ಅದು ಶುಕ್ರ ಗ್ರಹ. ಗ್ರಹವೊಂದನ್ನ ಅದ್ಯಾಕೆ ನಮ್ಮ ಹಿರಿಯರು ಚುಕ್ಕಿಯೆಂದು ಕರೆದರೋ! ಅವರಿಗೂ ಅದು ಅಷ್ಟು ಗಾಢವಾಗಿ ಇರುಳ ಆಗಸದಲ್ಲಿ ಹೊಳೆಯುವುದನ್ನು ಕಾಣುವಾಗ ತನಗೀಗ ಆಗುವಂತೆ ತಳಮಳದ ಅನುಭವವಾಗುತ್ತಿತ್ತೇನೋ ಅಂದುಕೊಂಡು ನಸು ನಕ್ಕ.

( ಇನ್ನೂ ಇದೆ.)

https://youtu.be/Cq5PR-9mUN4


No comments: