19 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೯.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೯.👊


ಅಂದಿನಿಂದ ಎಲ್ಲರ ಎದುರಿಗಿದ್ದೆ ವೇಷ ಮರೆಸಿಕೊಳ್ಳದೆಯೂ ಸಹ ಇದ್ದೂ ಇಲ್ಲದಂತಿರುವ ಅವನ ಅಜ್ಞಾತವಾಸ ಆರಂಭವಾಯಿತು. ಅವಸರವಸರವಾಗಿ ಕೆಲಸ ಮುಗಿಸಿ ಬಂದವ ಖಾಕಿ ಅಂಗಿ ಚಡ್ಡಿ ಕುಚ್ಚಿನ ಟೊಪ್ಪಿ ಏರಿಸಿ ಅಂದಿನ ಎನ್ ಸಿ ಸಿ ತರಗತಿಗೆ ಓಡಿದ. ಸುಸ್ತಾಗಿದ್ದರೂ ಅದನ್ನಂತೂ ತಪ್ಪಿಸಿಕೊಳ್ಳುವಂತೆಯೆ ಇರಲಿಲ್ಲ. ಕೆಲಸ ಮುಗಿಸಿ ಸದಾ ತಡವಾಗಿಯೆ ಹೋಗುವ ಅವನನ್ನ ರೈಫಲ್ ಹೊತ್ತು ಮೈದಾನಕ್ಕೆ ಮೂರು ಸುತ್ತು ಓಡುವ ಶಿಕ್ಷೆ ವಿಧಿಸುತ್ತಿದ್ದುದು ಮಾಮೂಲು. 


ಇವತ್ತಂತೂ ಇನ್ನೂ ತಡವಾಗಿ ಹೋಗಿದ್ದ ಕಾರಣ ಅವನ ಕಳೆದ ರಾತ್ರಿಯ ನಾಯಿಪಾಡಿನ ಅವಸ್ಥೆ ಅರಿಯದ ಎನ್ ಸಿ ಸಿ ಕ್ಯಾಪ್ಟನ್ ರಾಮಪ್ಪ ಮೊಯ್ಲಿ ಮಾಸ್ಟ್ರು ಅವತ್ತವನನ್ನ ಮೂರರ ಬದಲು ಐದು ಸಾಲು ಸುತ್ತಿಸಿದರು. ಓಡದೆ ವಿಧಿಯಿರಲಿಲ್ಲ. ಓಡಿ ಆಡಿ ವ್ಯಾಯಾಮ ಮಾಡಿ ಅವರ ಆಜ್ಞೆಗಳನ್ನ ಚಾಚೂ ತಪ್ಪದೆ ಪಾಲಿಸಿದರೆ ಕಡೆಗೆ ಸೇನೆಯ ಕಡೆಯಿಂದ ಕೆಡೆಟ್ಟುಗಳಿಗೆ ಕೊಡಲಾಗುತ್ತಿದ್ದ ಉಚಿತ ತಿಂಡಿಯ ಕೂಪನ್ನುಗಳ ಆಸೆ ಹಲ್ಲು ಕಚ್ಚಿಕೊಂಡು ಹೇಳಿದ್ದಷ್ಟನ್ನ ಮಾಡುವಂತೆ ಅವನನ್ನ ಪುಸಲಾಯಿಸುತ್ತಿತ್ತು. ಅದನ್ನೂ ತಪ್ಪಿಸಿಕೊಂಡರೆ ಅಂದಿನ ಬೆಳಗಿನ ತಿಂಡಿಗೆ ಸೊನ್ನೆಯಾಗುವ ಸಂಭವವಿತ್ತು. ರಾತ್ರಿ ಹೊಡೆಸಿಕೊಂಡ ಮೈ ಕೈ ನೋವಿನ್ನೂ ಇಳಿದಿರಲಿಲ್ಲ. ನಜ್ಜುಗುಜ್ಜಾಗಿದ್ದ ಮೈ - ಜರ್ಜರಿತ ಮನಸು ಎರಡನ್ನೂ ಹೊತ್ತು ಅನ್ಯಮಸ್ಕತೆಯಿಂದಲೆ ಅಧ್ಯಾಪಕರ ಕಣ್ಣು ತಪ್ಪಿಸಿ ಅಷ್ಟಿಷ್ಟು ಕುಗುರುತ್ತಾ ಕೂತು ಹೇಗೋ ಆ ದಿನ ಕಳೆದ. 


ಸಂಜೆ ಮೂಡುತ್ತಲೆ ಅಧೀರನಾಗ ತೊಡಗಿದ. ನಿಜವಾದ ಸವಾಲು ಇನ್ನೇನು ಎದುರಾಗಲಿತ್ತು. ಹೌದುˌ ಇನ್ನು ಮುಂದೆ ರಾತ್ರಿ ಮಲಗುವುದೆಲ್ಲಿ? ಅನ್ನುವ ಪ್ರಶ್ನೆಗೆ ಅವನಲ್ಲಿಯೆ ಉತ್ತರವಿರಲಿಲ್ಲ. ಶಾಲೆ ಮುಗಿದ ಮೇಲೆ ಬೇಕರಿ ಲೈನಿನ ಕೆಲಸ ಮುಗಿಸಿ ಅಲ್ಲಿ ಇಲ್ಲಿ ಸುತ್ತಿ ಮನೆಯ ಹತ್ತಿರದ ಗುಡ್ಡದ ಮೇಲಿನ ಕಲ್ಲುಬೆಂಚಿನ ಮೇಲೆ ಬಂದು ಒಬ್ಬಂಟಿಯಾಗಿ ಕೂತ. ಅವನ ದುಸ್ಥಿತಿಗೆ ಅವನಿಗೆ ಮರುಕ ಹುಟ್ಟಿತು. ಆಡುವಂತಿರದ ಅನುಭವಿಸದಿರಲಾರದ ಅಯೋಮಯದ ಪರಿಸ್ಥಿತಿ. ಅಜ್ಜಿಗೆ ಅಂಟಿಕೊಂಡು ಬೆಳೆದಿದ್ದವ ಅವರಲ್ಲೆ ಅಮ್ಮನನ್ನು ಕಾಣುತ್ತಿದ್ಧ. ಊರಲ್ಲಿ ಸಿಕ್ಕ ಆಸ್ತಿಯ ಕಾರಣ ಅವರೂ ಅಲ್ಲಿಗೆ ಹೋಗಿ ನೆಲೆಸಿದ ಮೇಲೆ ಅವನನ್ಯಾರೂ ವಿಚಾರಿಸುವವರೆ ಗತಿಯಿರಲಿಲ್ಲ. ದಂಡಿಸಲು ಮಾತ್ರ ಸದಾ ಮುಂದಿರುತ್ತಿದ್ದ ಕೈಗಳಲ್ಲಿ ಯಾವುವಕ್ಕೂ ಕನಿಷ್ಠ ಒಂದೆ ಒಂದು ಸಲ ಅವನನ್ನ ಮಮತೆಯಿಂದ ಕಂಡು ಅವನ ಮಗು ಮನಸನ್ನೂ ಅರ್ಥ ಮಾಡಿಕೊಂಡು ತಬ್ಬಿ ಸಂತೈಸಲು ಆಸಕ್ತಿಯಿರಲಿಲ್ಲ. ಅವನ ಹೆತ್ತವರಿಗೆ ಲಾಲನೆ ಪಾಲನೆ ಮಾಡಲು ಅವನಿಗಿಂತ ಹತ್ತು ವರ್ಷ ನಂತರ ಹುಟ್ಟಿದ್ದ ಮತ್ತೊಂದು ಮಗುವಿತ್ತು. ಅವನದೊಂತರ ಎಲ್ಲರೂ ಇದ್ದೂ ಅನಾಥನಾಗಿರುವ ಪರಿಸ್ಥಿತಿ. ಅವನ ಅಜ್ಜ ಆ ಊರಿಗೆ ಬಂದು ನೆಲೆಸಿದ ಮೇಲೆ ಸ್ವಾಭಿಮಾನದಿಂದ ದುಡಿದು ಅವರೆ ಸ್ವಯಾರ್ಜಿತವಾಗಿ ಗಳಿಸಿದ ಘನತೆ ಗೌರವ ಅವನ ಒಂದೆ ಒಂದು ತಪ್ಪು ನಡೆಯಿಂದ ಮುಕ್ಕಾಗುವ ಸಂಭವವಿತ್ತು. ಪುಣ್ಯಕ್ಕೆ ಪ್ರಾಯ ಚಿಕ್ಕದಾಗಿದ್ದರೂ ಕೂಡ ಅವನಿಗದರ ಅರಿವಿತ್ತು. 

ಮುಂದಿನ ದಿನಮಾನಗಳಲ್ಲಿ ಅಂತಹದ್ದೆ ಪರಿಸ್ಥಿತಿಯಲ್ಲಿ ಬಾಳಬೇಕಿದ್ದವನಿಗೆ ಹೊಸತಾಗಿ ದಿನಚರಿ ರೂಪಿಸಿಕೊಳ್ಳದೆ ವಿಧಿಯಿರಲಿಲ್ಲ. ಊಟದ ಹೆಸರಿನಲ್ಲಿ ಸಿಕ್ಕಿದ್ದನ್ನ ಹೊಟ್ಟೆಗಷ್ಟು ಹಾಕಿಕೊಂಡು ಬಂದಿದ್ದ. ನೆನ್ನೆ ರಾತ್ರಿಯಷ್ಟೆ ಮೈಮುರಿಯ ತಿಂದಿದ್ದ ಪೆಟ್ಟಿನ ನೋವಿನ್ನೂ ಆರಿರಲಿಲ್ಲ. ಅಂತಹ ವಿಪರೀತ ಪರಿಸ್ಥಿತಿಯಲ್ಲಿ ಓದುವ ಮನಸಾಗಲಿ ಅನುಕೂಲವಾಗಲಿ ಇರಲಿಲ್ಲ. ಸಾಲದ್ದಕ್ಕೆ ದಣಿದಿದ್ದ ದೇಹವನ್ನ ನಿದ್ರೆ ಬೇರೆ ಸೆಳೆಯುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅಪ್ಪ ಕೆಲಸ ಮುಗಿಸಿ ಮನೆಗೆ ಬರುವ ಮೊದಲು ಎಲ್ಲಾದರೂ ಮಲಗುವ ಅಂದುಕೊಂಡು ಸದ್ದಾಗದಂತೆ ಹಿತ್ತಲ ಬಾಗಿಲಿಂದ ಕತ್ತಲಲ್ಲಿ ಮೆಲ್ಲ ತನ್ನ ಸರಂಜಾಮುಗಳನ್ನಿಟ್ಟಿದ್ದ ಒತ್ತಿನ ಮನೆಯ ಕಟ್ಟಿಗೆ ಕೊಟ್ಟಿಗೆಯಿಂದ ತನ್ನ ಚಾಪೆ ಸುರುಳಿ ಹೊತ್ತು ಮನೆಯಿಂದ ಚೂರು ಮೇಲಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟೆ ತಲುಪಿದ. ಎತ್ತರವಾಗಿದ್ದ ಸ್ಥಳದಲ್ಲಿದ್ದ ಶಾಲೆಯ ಸುತ್ತ ಬೆಳೆದಿದ್ದ ಯುಪಟೋರಿಯಂ ಜಿಗ್ಗಿನ ಮರೆಯಲ್ಲಿ ಅವನಲ್ಲಿರುವುದು ಯಾರಿಗೂ ಗೋಚರಿಸುವ ಸಾಧ್ಯತೆಯಿರಲಿಲ್ಲ. 


ನಿಜವಾದ ಸವಾಲಿದ್ದದ್ದು ನಿತ್ಯ ಅಲ್ಲಿ ಠಿಕಾಣಿ ಹೂಡುತ್ತಿದ್ದ ಬೀದಿನಾಯಿಗಳ ಜೊತೆ ಸೆಣೆಸಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳುವುದರಲ್ಲಿ ಮಾತ್ರ. ಆರಂಭದಲ್ಲಿ ತಮ್ಮ ಸಾಮ್ರಾಜ್ಯದ ಎಲ್ಲೆಯಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದ ಅವನ ಮೇಲೆ ಗುರುಗುಟ್ಟಿ ತಮ್ಮ ತಮ್ಮ ಆಕ್ಷೇಪ ವ್ಯಕ್ತ ಪಡಿಸಿದರೂ ಕೂಡ ನಿತ್ಯ ಕಾಣುತ್ತಿದ್ದ ಅವನ ಮುಖ ಅವುಗಳನ್ನ ಹೆಚ್ಚು ಕೆಂಗೆಡಿಸಲಿಲ್ಲ. ಕಟ್ಟೆಯ ಮೂಲೆಯೊಂದರಲ್ಲಿ ಚಾಪೆ ಹಾಸಿಕೊಂಡು ಮಂದರಿ ಹೊದ್ದು ದಿಂಬಿಗೆ ತಲೆಕೊಟ್ಟಿದ್ದೊಂದೆ ಗೊತ್ತುˌ ಅಂದಿಡಿ ಅಲ್ಲಿಲ್ಲಿ ಅಲೆದು ಬೆವರಿದ್ದ ಮೈ ಮೀಯದೆ ಹುಟ್ಟಿಸುತ್ತಿದ್ದ ರೇಜಿಗೆಯೂ ನಗಣ್ಯವಾಗಿ ನಿದ್ರೆಯ ಜೊಂಪು ಅಟ್ಟಿಸಿಕೊಂಡು ಬಂತು. ಆಗಿದ್ದ ದಣಿವಿಗೆ ಆರಾಮದ ಅವಶ್ಯಕತೆಯಿದ್ದ ಅವನ ದೇಹ ಮನಸ್ಸು ಮಲಗಿ ಸುಧಾರಿಸಿಕೊಳ್ಳತೊಡಗಿತು.


*****

"ಬಾಂವರೀ ಸೀ ಇಸ್ ಜಹಾನ್ ಮೈ
ಬಾಂವರಾ ಏಕ್ ಸಾಥ್ ಹೋˌ
ಇಸ್ ಸಯಾನೀ ಭೀಡ್ ಮೈ
ಬಸ್ ಹಾಥೋಂ ಮೈ ತೇರಾ ಹಾಥ್ ಹೋ./
ಬಾಂವರೀ ಸೀ ಧುನ್ ಹೋ ಕೋಈ
ಬಾಂವರಾ ಏಕ್ ರಾಗ್ ಹೋˌ
ಬಾಂವರೀ ಸೀ ಪೈರ್ ಚಾಹೇಂ
ಬಾಂವರೀ ತರಾನೋಂ ಕೀ
ಬಾಂವರೀ ಸೀ ಬೋಲ್ ಪೇ ಧಿರಕನಾ//"


ಬದುಕೀಗ ಸಂಪೂರ್ಣ ಬದಲಾದ ಕಾಲಘಟ್ಟದಲ್ಲಿತ್ತು. ಇಂದು ಅವನದ್ದೆ ಆದ ಒಂದು ವ್ಯಕ್ತಿತ್ವ ರೂಪಿಸಿಕೊಂಡಿದ್ದ. ತಪ್ಪು ಆಯ್ಕೆಗಳ ಆಗರವಾಗಿದ್ದರೂ ಬದುಕಿಗೀಗ ಒಂದು ಲಯವಿತ್ತು. ಬೆರಳೆಣಿಕೆಯಷ್ಟರವರಾದರೇನು? ಅವನ ಬಗ್ಗೆ ಯೋಚಿಸುವ ಕೆಲವೆ ಕೆಲವರಾದರೂ ಇದ್ದರು. ಬದುಕಿನ ಸೌಂದರ್ಯವೇನು? ಅನ್ನುವ ಸುಖಾನುಭವವನ್ನ ಬಾಳಿನಲ್ಲಿ ಬಂದು ಕಿರು ಅವಧಿಯವರೆಗಾದರೂ ಮರೆಯಲಾಗದ ಜೊತೆ ಕೊಟ್ಟು ತಿಳಿಸಿ ಹೋದ ಮೂವರಿದ್ದರು. ಸುಂದರವೆಂದು ಬೆನ್ನು ತಟ್ಟಿ ಹೇಳಿಕೊಳ್ಳುವಷ್ಟಿಲ್ಲದಿದ್ದರೂನು ಕುರೂಪದ ಕುರುಹೇನೂ ಬದುಕಿನಲ್ಲಿರಲಿಲ್ಲ. ಒಂಟಿತನದ ಶಾಪದ ಹೊರತು.

ಕೋಣೆಗೆ ಮರಳಿದವನಿಗೆ ಮತ್ತೊಂದು ಸಲ ಬೆಚ್ಚನೆ ನೀರಿನಲ್ಲಿ ನೆಂದು ಮೀಯುವ ಸುಖ ಬೇಕೆನಿಸಿತು. ಅಂದಿಗವನದ್ದು ಮೂರನೆ ಸ್ನಾನ ಅದು. ಮಿಂದು ಮೈ ಮನ ಹಗುರಾಗಿಸಿಕೊಂಡವನಿಗೆ ನಾಯರನ ಕ್ಯಾಂಟೀನಿನ ಮೀನು ಸಾರು ಆಮ್ಲೇಟು ಉಪ್ಪಡು ಪಪ್ಪಡ ತೊವ್ವೆಯ ಬಿಸಿಬಿಸಿ ಊಟ ಸ್ವರ್ಗದ ಬಾಗಿಲನ್ನ ತೆರೆದಂತಿತ್ತು. ಉಂಡು ಇನ್ನೊಂದು ದಿನ ಮಾತ್ರ ತಾನಲ್ಲಿ ಇರುವುದಾಗಿಯೂˌ ಮಂಗಳವಾರ ಅಲ್ಲಿಂದ ಹೊರಡುವುದಿದೆಯೆಂದೂ ನಾಯರನಿಗೆ ಮುಂದಾಗಿ ತಿಳಿಸಿದ.

"ಶೇ ಅದಾಣೋ! ಎವಿಡೆಯ? ತರವಾಡುಲೇತ್ತಿಯೋ ಇಲ್ಲಂಗಿಲ್ ನಾಟ್ಟಿಲ್ ವಳಿಯಾಣೋ ಪೋವುನ್ನದು?" ಅಂದ ನಾಯರ. "ಇಲ್ಲಿಯಾˌ ಕನ್ಯಾಕುಮಾರಿ ಪೋಕ್ಕುನ್ನ ಪದ್ಧತಿಯಾ. ಟಿಕೇಟು ಬುಕ್ ಚೇಯ್ದು. ಚೌವಾಳ್ಚಯಿಲೆ ವೈಕುನ್ನೋರಂ ಬಂಡಿಯಾ. ಅದುಕ್ಕೊಂಡು ಮುನ್ಬು ಪರಙಿಟ್ಟುಳ್ಳು. ಒರುಪಕ್ಷ ಅವಿಡೆಲೇತ್ತಿ ನಾಟ್ಟಿಲಾಕ್ಕಿ ಮರುಙುಕ್ಕಾನ್ ಞಾನ್ ಕುರುತ್ತುನ್ನದ. ಒನ್ನುಂ ಅಂತಿಮಮಾಯಿಟ್ಟಿಲ್ಲ ನಾಯರೆ." ಅಂದನವ. ಅವನ ಅಲೆಮಾರಿ ಯಾತ್ರೆಯ ಸುಳಿವಿಲ್ಲದ ನಾಯರನಿಗಿದ್ಯಾಕೋ ಇದು ತಿಕ್ಕಲು ಅನ್ನಿಸಿರಬೇಕುˌ ಮಾರುತ್ತರವಾಗಿ ತನ್ನ ಹುಳುಕು ಹಲ್ಲುಗಳನ್ನ ಹುಳ್ಳಗೆ ಕಿರಿಯುತ್ತಾ "ಶರಿಯ ಪಿನ್ನೆˌ ಅಙನೆ ಆಯಕಟ್ಟೆ." ಅಂದ ನಾಯರ.

ಕೋಣೆಗೆ ಮರಳಿ ಕೈ ಫೋನಿನ ಹಾಡುಗಳ ಸಂಗ್ರಹ ಹಾಕಿದ ಸ್ವಾನಂದ ಕಿರ್ಕರೆಯ ಧ್ವನಿಯಲ್ಲಿ ಅವರದ್ದೆ ಬರವಣಿಗೆಯ ಹಾಡು ಹಿತವಾಗಿ ಮೊಳಗುತ್ತಿತ್ತು. ಈ ಶಂತನು ಮೊಯಿತ್ರ ಮೂಡಿಸುವ ನಾದ ತರಂಗಗಳಲ್ಲೂ ಒಂಥರಾ ಮದನ ಮೋಹನ ಸಾಬರ ಸ್ವರ ಸಂಚಾರದ ಮೋಹಕತೆಯ ಛಾಯೆಯಿದೆ ಅನ್ನಿಸಿತು.

( ಇನ್ನೂ ಇದೆ.)



https://youtu.be/rkV2j4Q37aI

No comments: